ಪೌರತ್ವ ತಿದ್ದುಪಡಿ ಮಸೂದೆಯ(ಕ್ಯಾಬ್) ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಭಾರೀ ಆಕ್ರೋಶ ಭುಗಿಲೆದ್ದಿದೆ. ಮತ್ತೊಂದು ಕಡೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆ ಪಡೆದಿರುವ ಮಸೂದೆ, ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಿದೆ. ಈ ನಡುವೆ, ಮಸೂದೆ ವಿರೋಧಿ ಹೋರಾಟ ಜನ ಸಂಗ್ರಾಮವಾಗಿ ಬದಲಾಗಿದ್ದು, ಅಲ್ಲಿನ ನಾಗರಿಕರು ಒಟ್ಟಾಗಿ ಬೀದಿಗಿಳಿದು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ. ಪ್ರಮುಖವಾಗಿ ಅಸ್ಸಾಂ, ತ್ರಿಪುರಾ, ಮಣಿಪುರಗಳಲ್ಲಿ ಪ್ರತಿಭಟನೆ ಹಿಂಸಾ ಸ್ವರೂಪಕ್ಕೆ ತಿರುಗಿದೆ. ಆದರೆ, ಕೇಂದ್ರ ಸರ್ಕಾರ, ತನ್ನ ಹೊಸ ಮಸೂದೆಯ ಕುರಿತ ಆ ಜನರ ಆತಂಕ ದೂರ ಮಾಡುವ ಬದಲಾಗಿ, ಜಮ್ಮು-ಕಾಶ್ಮೀರದ ಮಾದರಿಯಲ್ಲೇ ಅಲ್ಲಿಯೂ ಇಂಟರ್ ನೆಟ್ ಸೌಲಭ್ಯ ಕಡಿತ, ಕರ್ಫ್ಯೂ ಹೇರಿಕೆ, ಪೊಲೀಸ್ ಬಲ ಪ್ರಯೋಗ, ಸೇನಾ ನಿಯೋಜನೆಯಂತಹ ದಮನ ನೀತಿಯ ಮೂಲಕ ಜನಾಭಿಪ್ರಾಯವನ್ನು ಹತ್ತಿಕ್ಕುವ ದುಃಸ್ಸಾಹಸಕ್ಕೆ ಕೈ ಹಾಕಿದೆ.
ಈಶಾನ್ಯ ರಾಜ್ಯಗಳಷ್ಟೇ ಅಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಕೂಡ ದೇಶದ ಸಹಬಾಳ್ವೆ ಮತ್ತು ಸಾಮಾಜಿಕ ಶಾಂತಿ ಕದಡುವ ಮತ್ತು ಅಂತಿಮವಾಗಿ ದೇಶವನ್ನು ಒಡೆದುಹಾಕುವ ಅಪಾಯಕಾರಿ ಪರಿಣಾಮದ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದೊಡ್ಡ ಪ್ರಮಾಣದ ಆಕ್ರೋಶ ಭುಗಿಲೆದ್ದಿದೆ. ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ಘಾನಿಸ್ತಾನದ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಹಿಂದೂ, ಜೈನ, ಬೌದ್ಧ, ಪಾರ್ಸಿ, ಸಿಖ್, ಕ್ರೈಸ್ತ ಧರ್ಮೀಯರು ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ ವಲಸೆ ಬಂದು, ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆ, ಅವರಿಗೆ ಯಾವುದೇ ದಾಖಲೆ ಹೊರತಾಗಿಯೂ ಪೌರತ್ವ ನೀಡುವ ಉದ್ದೇಶದ ಈ ಮಸೂದೆ, ದೇಶದ ಸಂವಿಧಾನದ ಮೂಲ ಆಶಯವಾದ ಸಮಾನತೆ ಮತ್ತು ಧರ್ಮನಿರಪೇಕ್ಷತೆಗೆ ವಿರುದ್ಧವಾಗಿದೆ. ಜೊತೆಗೆ, ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಜಾರಿಗೆ ಬರುತ್ತಿರುವ ಈ ಮಸೂದೆಯು, ಸಹಜವಾಗೇ ಆ ಮೂರು ದೇಶಗಳಿಂದ ಅಕ್ರಮವಾಗಿ ನುಸುಳುಕೋರರಾಗಿ ಬಂದ ಮುಸ್ಲಿಮೇತರರಿಗೆ ನಾಗರಿಕತ್ವ ನೀಡಲಿದೆ. ಆ ಮೂಲಕ ತಮ್ಮ ಧಾರ್ಮಿಕ ಅಸ್ಮಿತೆ ಮತ್ತು ಸೀಮಿತ ಬದುಕುವ ಅವಕಾಶದ ಮೇಲೆ ಹೊರಗಿನವರ ಆಕ್ರಮಣಕ್ಕೆ ದಾರಿಮಾಡಿಕೊಡಲಿದೆ ಎಂಬುದು ಈಶಾನ್ಯ ರಾಜ್ಯಗಳ ಬುಡಕಟ್ಟು ಜನರ ಆಕ್ರೋಶದ ಹಿಂದಿನ ಆತಂಕ.
ಇನ್ನು ದೇಶದ ಇತರ ಕಡೆಗಳಲ್ಲಿ ಮುಸ್ಲಿಮರು ಮತ್ತು ದೇಶದ ಧರ್ಮನಿರಪೇಕ್ಷ ಮತ್ತು ಸಮಾನತೆಯ ಆಶಯದ ಸಂವಿಧಾನ ಹಾಗೂ ದೇಶದ ಹಲವು ಧರ್ಮ, ಹಲವು ಮತ-ಪಂಥಗಳ ವೈವಿಧ್ಯತೆಯಲ್ಲಿ ನಂಬಿಕೆ ಇಟ್ಟ ಎಲ್ಲರ ಆತಂಕಕ್ಕೆ ಕಾರಣ ಬಹಳ ಗಂಭೀರವಾಗಿರುವ ‘ಹಿಂದುತ್ವದ ಅಜೆಂಡಾ’. ಭಾರತವನ್ನು ‘ಹಿಂದೂರಾಷ್ಟ್ರ’ ಮಾಡಬೇಕು ಎಂಬ ಸಾವರ್ಕರ್ ಆದಿಯಾಗಿ ಹಿಂದುತ್ವ ಪ್ರತಿಪಾದಕರ ಆಶಯದಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ. ಅದರ ಒಂದು ರಾಷ್ಟ್ರ, ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ‘ಏಕತ್ವ’ದ ಸಿದ್ಧಾಂತದ ಅನುಷ್ಠಾನದ ಭಾಗವಾಗಿ ಸಂವಿಧಾನವನ್ನೇ ಬಡಮೇಲು ಮಾಡುವ ಈ ತಿದ್ದುಪಡಿ ಮಾಡಲಾಗಿದೆ. ಇಸ್ಲಾಂ ಧರ್ಮವನ್ನು ಮಾತ್ರ ಹೊರಗಿಟ್ಟು, ಧರ್ಮದ ಮಾನದಂಡದ ಮೇಲೆ ಮೂರು ದೇಶಗಳ ನಾಗರಿಕರಿಗೆ ಭಾರತದ ಪೌರತ್ವ ನೀಡುವುದು ಮೂಲಭೂತವಾಗಿ ದೇಶದ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವ ಆರ್ ಎಸ್ ಎಸ್ ಅಜೆಂಡಾದ ಭಾಗ ಎಂಬುದು ದೇಶದ ಜಾತ್ಯತೀತ ವ್ಯವಸ್ಥೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರ ಆತಂಕ.
ಅದರಲ್ಲೂ ಮುಖ್ಯವಾಗಿ ಎನ್ ಆರ್ ಸಿ ಜಾರಿಗೆ ಮುನ್ನ ಈ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೊಳಿಸಲಾಗುತ್ತದೆ. ಆಗ ಈ ಪ್ರಸ್ತಾಪಿತ ಮೂರು ದೇಶಗಳಷ್ಟೇ ಅಲ್ಲದೆ, ಜಗತ್ತಿನ ಯಾವುದೇ ದೇಶಗಳಿಂದ ದೇಶಕ್ಕೆ ವಲಸೆ ಬಂದಿರುವ ಮುಸ್ಲಿಮರಿಗೆ ದೇಶದ ಪೌರತ್ವ ಸಿಗುವುದಿಲ್ಲ ಮತ್ತು ಪರಿಣಾಮವಾಗಿ ಅವರನ್ನು ದೇಶದಿಂದ ಹೊರಹಾಕಲಾಗುತ್ತದೆ. ಜೊತೆಗೆ, ದೇಶದ ಮುಸ್ಲಿಮರು ಕೂಡ ತಾವು ದೇಶದ ಮೂಲ ನಿವಾಸಿಗಳು ಎಂಬುದನ್ನು ದೃಢೀಕರಿಸಲು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅಂತಹ ಅಧಿಕೃತ ದಾಖಲೆಗಳನ್ನು ಸಲ್ಲಿಸಲಾಗದೇ ಇದ್ದಲ್ಲಿ, ಅಂಥವರನ್ನು ಕೂಡ ಅಕ್ರಮ ನಿವಾಸಿಗಳೆಂದೇ ಪರಿಗಣಿಸಲಾಗುತ್ತದೆ! ಇಡೀ ಮಸೂದೆಯ ಅಂತಿಮ ಉದ್ದೇಶ ಕೂಡ ಮುಸ್ಲಿಮರನ್ನು ತಮ್ಮ ಪೌರತ್ವ ಸಾಬೀತುಮಾಡುವ ಅಗ್ನಿಪರೀಕ್ಷೆಗೆ ತಳ್ಳುವುದೇ ಆಗಿದೆ ಎಂಬುದು ಮಸೂದೆಯನ್ನು ವಿರೋಧಿಸುತ್ತಿರುವವರ ಆತಂಕ.
ಆ ಹಿನ್ನೆಲೆಯಲ್ಲಿಯೇ ದೇಶದ ಮೂಲೆಮೂಲೆಯಲ್ಲೂ ಈಗ ವಿವಾದಿತ ಮಸೂದೆಯ ಚರ್ಚೆ ಮತ್ತು ಅದರ ವಿರುದ್ಧದ ಪ್ರತಿರೋಧ ಕಾವೇರಿದೆ. ದೇಶದ ಹಲವು ಪ್ರಜ್ಞಾವಂತ ಅಧಿಕಾರಿಗಳು, ನಿವೃತ್ತರು, ಕಲಾವಿದರು, ಸಾಹಿತಿಗಳು, ಚಿತ್ರ ನಟರು, ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕು ಪ್ರತಿಪಾದಕರು ಮಸೂದೆಯ ವಿರುದ್ಧ ದನಿ ಎತ್ತಿದ್ದಾರೆ. ಹಲವರು ಮಸೂದೆಯನ್ನು ವಿರೋಧಿಸಿ ತಮ್ಮ ಸರ್ಕಾರಿ ಹುದ್ದೆಗಳನ್ನೂ ತ್ಯಜಿಸುತ್ತಿದ್ದಾರೆ. ಬಿಜೆಪಿಯ ಹಿಂದುತ್ವವಾದಿ ಮಸೂದೆಯ ವಿರುದ್ಧ ದೇಶದ ಧರ್ಮನಿರಪೇಕ್ಷ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರರ ಆಶಯಗಳನ್ನು ಪ್ರಧಾನವಾಗಿ ಮುಂಚೂಣಿಗೆ ತಂದು, ಹಿಂದುತ್ವದ ಅಜೆಂಡಾಕ್ಕೆ ಮುಖಾಮುಖಿಯಾಗಿಸುವ ಪ್ರಯತ್ನಗಳೂ ನಡೆಯುತ್ತಿವೆ.
ಜಾತ್ಯತೀತ ಭಾರತದ ಪರ ದಶಕಗಳಿಂದ ದುಡಿಯುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಮತ್ತು ದಮನಿತರ ದನಿಯಾಗಿರುವ ಹರ್ಷ ಮಂದರ್, ಇತ್ತೀಚೆಗೆ ತಾನೆ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಪ್ರತಿಭಟಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಣ್ಣನ್ ಗೋಪಿನಾಥನ್ ಹಾಗೂ ಶಶಿಕಾಂತ್ ಸೆಂಥಿಲ್ ಕೂಡ ಮಸೂದೆಯ ವಿರುದ್ಧ ಜನಜಾಗೃತಿಯಲ್ಲಿ ತೊಡಗಿದ್ದಾರೆ.
ಹರ್ಷ ಮಂದರ್ ಅವರಂತೂ, ಕಾಯ್ದೆಯಾಗಿ ಈ ಮಸೂದೆ ಜಾರಿಯಾದಲ್ಲಿ ತಾವು ಎನ್ ಆರ್ ಸಿ ನೋಂದಣಿ ವೇಳೆ, ‘ಮುಸ್ಲಿಂ ಎಂದೇ ನೋಂದಾಯಿಸುತ್ತೇನೆ ಮತ್ತು ನನ್ನ ನಾಗರಿಕತ್ವ ಸಾಬೀತುಮಾಡುವ ಯಾವುದೇ ದಾಖಲೆಗಳನ್ನು ಸಲ್ಲಿಸುವುದಿಲ್ಲ. ದಾಖಲೆರಹಿತ ಮುಸ್ಲಿಮರಿಗೆ ಯಾವ ಶಿಕ್ಷೆ ನೀಡುತ್ತಾರೋ ಅದೇ ಶಿಕ್ಷೆಯನ್ನು ನಾನೂ ಅನುಭವಿಸುತ್ತೇನೆ’ ಎನ್ನುವ ಮೂಲಕ ಹೊಸ ಅಭಿಯಾನವನ್ನೇ ಆರಂಭಿಸಿದ್ದಾರೆ. ಜೊತೆಗೆ, ಪೌರತ್ವ ತಿದ್ದುಪಡಿ ಮಸೂದೆಯ ವಿಷಯದಲ್ಲಿ ಸುಮ್ಮನಿರುವ ಅಥವಾ ಮೌನ ವಹಿಸುವ ಆಯ್ಕೆ ದೇಶದ ಜನರ ಮುಂದಿಲ್ಲ. ನಾಝಿ ಜರ್ಮನಿಯಲ್ಲಿ ಕೂಡ ಇಂತಹದ್ದೇ ಕಾನೂನು ಜಾರಿಮಾಡುವ ಮೂಲಕ ಅಲ್ಲಿನ ನಾಝಿಯೇತರ ಯಹೂದಿ ಮತ್ತು ಇತರ ಧರ್ಮೀಯರನ್ನು ಪ್ರತ್ಯೇಕಿಸಲಾಗಿತ್ತು. ಆಗ ಅಲ್ಲಿನ ಬಹುಸಂಖ್ಯಾತರು ಮೌನ ವಹಿಸಿದ್ದರಿಂದ, ಯಹೂದಿಯರನ್ನು ಯಾತನಾ ಶಿಬಿರಗಳಲ್ಲಿ ಕೂಡಿಹಾಕಿ ಬರ್ಬರವಾಗಿ ಸಾಮೂಹಿಕ ಹತ್ಯೆ ಮಾಡಲಾಯಿತು. ಭಾರತದಲ್ಲಿಯೂ ಈಗ ಮುಸ್ಲಿಮರನ್ನು ಪ್ರತ್ಯೇಕಿಸುವ ಉದ್ದೇಶದಿಂದಲೇ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ದೇಶದ ಸಮಗ್ರತೆ ಮತ್ತು ಐಕ್ಯತೆಯ ಬಗ್ಗೆ, ದೇಶದ ಭವಿಷ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಈ ಕಾಯ್ದೆಯ ವಿರುದ್ಧ ಸಿಡಿದೇಳಲೇಬೇಕಾಗಿದೆ. ಇಲ್ಲದೇ ಹೋದರೆ, ನಮ್ಮ ದೇಶ ನಾವಂದುಕೊಂಡಂತೆ ಇರಲಾರದು. ಹಾಗಾಗಿ ನಾಗರಿಕ ಅಸಹಕಾರ ಚಳವಳಿ ಮೂಲಕ ಜನ ಸಿಡಿದೇಳಬೇಕು ಎಂದು ಕರೆ ನೀಡಿದ್ದಾರೆ.
ದೇಶವನ್ನೇ ಇಬ್ಭಾಗ ಮಾಡುವಂತಹ ಅಪಾಯಕಾರಿಯಾದ ಈ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಂದ ತಳಮಟ್ಟದಲ್ಲಿ ಜನ ಹೋರಾಟ ನಿರೀಕ್ಷಿಸಲಾಗದು. ಏಕೆಂದರೆ, ತಮ್ಮ ರಾಜಕೀಯ ವಿರೋಧಿಗಳನ್ನು ಐಟಿ, ಇಡಿ, ಸಿಬಿಐ ಮತ್ತಿತರ ಅಸ್ತ್ರಗಳನ್ನು ಪ್ರಯೋಗಿಸಿ ಬಗ್ಗುಬಡಿಯುವ ಸುಲಭ ದಾರಿ ಕಂಡುಕೊಂಡಿರುವ ಬಿಜೆಪಿ ಸರ್ಕಾರದ, ಆ ತಂತ್ರಗಾರಿಕೆಯ ಭಯ ರಾಜಕೀಯ ಪಕ್ಷಗಳಿಗೆ ಇದೆ. ಆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗಾಗಿ ಮುಸ್ಲಿಮರು ಸೇರಿದಂತೆ ದೇಶದ ಪ್ರಜ್ಞಾವಂತರು ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಆರಂಭಿಸಬೇಕಿದೆ. ಯಾವುದೇ ಧರ್ಮಕ್ಕೆ ಸೇರಿದ್ದರೂ, ತಾವು ಎನ್ ಆರ್ ಸಿ ನೋಂದಣಿ ಮಾಡಿಸುವುದಿಲ್ಲ. ಅದಕ್ಕಾಗಿ ನೀವು ವಿಧಿಸುವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಪಟ್ಟು ಹಿಡಿಯಬೇಕಿದೆ ಎಂಬುದು ಹರ್ಷ ಮಂದರ್ ಕರೆ.
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಹರ್ಷ ಮಂದರ್ ಅವರ ಕ್ಯಾಬ್ ವಿರೋಧಿ ಆಂದೋಲನ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದ್ದು, #IndiaRejectsCAB, #VoteAgainstCAB, #SaveConstitutionSaveIndia, #WeOpposeCAB, ಘೋಷಣೆಗಳು ಟ್ರೆಂಡ್ ಆಗಿವೆ. ದೇಶದ ಮೂಲೆಮೂಲೆಯಲ್ಲಿ ‘ಕ್ಯಾಬ್’ ವಿರೋಧಿ ಪ್ರತಿಭಟನೆ, ಸಭೆ- ವಿಚಾರಸಂಕಿರಣಗಳು ಕೂಡ ವ್ಯಾಪಕವಾಗಿವೆ. ಒಟ್ಟಾರೆ, ಕೋಮುವಾದಿ ಶಕ್ತಿಗಳಿಂದ ದೇಶಕ್ಕೆ ಒದಗಿರುವ ಅಪಾಯದಿಂದ ನೈಜ ಭಾರತವನ್ನು ಪಾರು ಮಾಡುವ ಪ್ರಯತ್ನಗಳಿಗೆ ಈ ಕ್ಯಾಬ್ ಮಸೂದೆ ಹೊಸ ಬಲ ತಂದಿದೆ ಎಂಬ ಸ್ಥಿತಿ ಇದೆ. ಆದರೆ, ಈ ಹೋರಾಟ ತಳಮಟ್ಟದಲ್ಲಿ ಎಷ್ಟರಮಟ್ಟಿಗೆ ವಾಸ್ತವವಾಗಿ ಪರಿಣಾಮಕಾರಿ ಪ್ರತಿರೋಧವಾಗಿ ಹೊರಹೊಮ್ಮಲಿದೆ ಎಂಬುದನ್ನು ಕಾದುನೋಡಬೇಕಿದೆ.