ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ವಿರುದ್ಧ ದೇಶವ್ಯಾಪಿ ಹೋರಾಟಗಳು ಭುಗಿಲೆದ್ದಿವೆ. ವಿವಾದಿತ ಕಾಯ್ದೆಯನ್ನು ವಿರೋಧಿಸಿ ಎಡಪಕ್ಷಗಳು ರಾಷ್ಟ್ರವ್ಯಾಪಿ ‘ಪಾರ್ಲಿಮೆಂಟ್ ಮಾರ್ಚ್’ ಹೋರಾಟದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡಿ.18ರಿಂದ 21ರವರೆಗೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆ ಮೂಲಕ ಇಡೀ ರಾಜ್ಯದಲ್ಲಿ ಕಾಯ್ದೆಯ ವಿರುದ್ಧ ಯಾವುದೇ ಬಗೆಯ ಪ್ರತಿಭಟನೆ- ಹೋರಾಟಗಳು ನಡೆಯದಂತೆ ಹತ್ತಿಕ್ಕುವ ಕ್ರಮ ಕೈಗೊಳ್ಳಲಾಗಿದೆ.
ಇದು, ಮೇಲ್ನೋಟಕ್ಕೆ ಸದ್ಯದ ಸ್ಥಿತಿ. ಆದರೆ, ಕಾಯ್ದೆಯ ವಿಷಯದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಲವು ಒಳಸುಳಿಗಳು, ಹಲವು ಸುದ್ದಿಯಾಚೆಯ ಸಂಗತಿಗಳು ಸದ್ದುಮಾಡುತ್ತಿವೆ. ಪ್ರಮುಖವಾಗಿ ಕೇರಳ, ಪಶ್ಚಿಮಬಂಗಾಳ, ಪಂಜಾಬ್, ದೆಹಲಿ, ಮಧ್ಯಪ್ರದೇಶ, ರಾಜಸ್ತಾನ, ಒಡಿಶಾ, ಬಿಹಾರ ಮತ್ತು ಛತ್ತೀಸಗಢ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳು ಸಾರಾಸಗಟಾಗಿ ಕಾಯ್ದೆಯನ್ನು ತಳ್ಳಿಹಾಕಿದ ಬಳಿಕ ಮತ್ತು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಮತ್ತೆ ಕೆಲವು ರಾಜ್ಯಗಳು ಕೂಡ ಕಾಯ್ದೆ ಜಾರಿಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಹೋದ ಹಿನ್ನೆಲೆಯಲ್ಲಿ ಬಿಜೆಪಿಗೆ ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ತನ್ನ ಕಟ್ಟರ್ ಹಿಂದುತ್ವವಾದಿ ಸರ್ಕಾರಗಳನ್ನು ಹೊರತುಪಡಿಸಿ ಇಡೀ ದೇಶಕ್ಕೆ ಒಪ್ಪಿಗೆಯಾಗುವಂತೆ ಬಿಂಬಿಸಲು ಒಂದು ಪ್ರಯೋಗಶಾಲೆ ಬೇಕಿತ್ತು. ಅದಕ್ಕಾಗಿ ಈಗ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ, ಪ್ರಮುಖವಾಗಿ ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಕಾಯ್ದೆಯ ವಿರುದ್ಧದ ನಾಗರಿಕ ದನಿಯನ್ನು ಬಗ್ಗುಬಡಿಯಲು ಇನ್ನಿಲ್ಲದ ಸಾಹಸ ಮಾಡುತ್ತಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮತ್ತು ಅಸ್ಸಾಂ ಬಳಿಕ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಅನುಷ್ಠಾನದ ಪ್ರಯೋಗಶಾಲೆಯಾಗಿ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಬಿಜೆಪಿಯ ಆ ತಂತ್ರಗಾರಿಕೆಯ ಭಾಗವಾಗಿಯೇ ಸಿಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಯಾವುದೇ ವಿರೋಧ ಬಂದರೂ ಅದನ್ನು ಲೆಕ್ಕಿಸದೆ ಕಾಯ್ದೆ ಜಾರಿಮಾಡುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಅವರ ಆ ಹೇಳಿಕೆಯ ಬೆನ್ನಲ್ಲೇ ಸಿ ಟಿ ರವಿ, ರೇಣುಕಾಚಾರ್ಯ ಸೇರಿದಂತೆ ಬಿಎಸ್ ವೈ ಸಂಪುಟ ಸಹೋದ್ಯೋಗಿಗಳು ಮತ್ತು ಆಪ್ತ ನಾಯಕರು ಕಾಯ್ದೆಯನ್ನು ವಿರೋಧಿಸಿದ ಪ್ರತಿಪಕ್ಷ ನಾಯಕರ ವಿರುದ್ಧ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ. ಕಾಂಗ್ರೆಸ್ ನಾಯಕ ಯು ಟಿ ಖಾದರ್ ವಿರುದ್ಧವಂತೂ ಸಿ ಟಿ ರವಿ ಮತ್ತು ರೇಣುಕಾಚಾರ್ಯ, ಬೆದರಿಕೆಯ ವರಸೆಯಲ್ಲೇ ಟೀಕೆ ಮಾಡಿದ್ದಾರೆ. ಅಲ್ಲದೆ, ಕಾಯ್ದೆ ಜಾರಿಯಿಂದ ನಾಗರಿಕ ಹಕ್ಕು ಕಿತ್ತುಕೊಂಡಂತಾಗುತ್ತದೆ ಎಂಬ ಖಾದರ್ ಹೇಳಿಕೆಗೆ ಪ್ರತಿಯಾಗಿ, ‘ಭಾರತವನ್ನು ಪಾಕಿಸ್ತಾನ ಮಾಡುವ ಮನಸ್ಥಿತಿ ಕೆಲವರಿಗೆ ಇರಬಹುದು. ಅದರಲ್ಲಿ ಖಾದರ್ ಕೂಡ ಒಬ್ಬರು. ಹಾಗೆ ಯೋಚನೆ ಮಾಡುವವರನ್ನು ಪಾಕಿಸ್ತಾನಕ್ಕೆ ಕಳಿಸಲಾಗುವುದು. ನಿರಾಶ್ರಿತರಿಗೆ ಮಾತ್ರ ಪೌರತ್ವ ನೀಡಲಾಗುವುದು. ನುಸುಳುಕೋರರು, ಆಕ್ರಮಣಕಾರರಿಗೆ ಪೌರತ್ವ ನೀಡಬೇಕು ಎಂಬುದು ಕಾಂಗ್ರೆಸ್ ಒತ್ತಾಯ’ ಎಂದಿರುವುದಾಗಿ ವರದಿಯಾಗಿದೆ.
ಒಬ್ಬ ಸಚಿವರಾಗಿ, ಸರ್ಕಾರದ ಭಾಗವಾದ ಸಿ ಟಿ ರವಿ ಅವರ ಈ ಮಾತುಗಳು ಬಿಜೆಪಿ ಸರ್ಕಾರದ ಮಾತುಗಳೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಲ್ಲದೆ, ಹೀಗೆ ವಿವಾದಿತ ಒಂದು ಕಾಯ್ದೆಯ ವಿರುದ್ಧದ ಜನಾಕ್ರೋಶ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯವನ್ನು, ‘ನಿಮ್ಮನ್ನು ಪಾಕಿಸ್ತಾನಕ್ಕೆ ಕಳಿಸುತ್ತೇವೆ’ ಎಂದು ಬಗ್ಗುಬಡಿಯುವ, ಬೆದರಿಸುವ ವರಸೆ ಕೇವಲ ಸಚಿವರು, ಶಾಸಕರ ಮಟ್ಟಕ್ಕೇ ಸೀಮಿತವಾಗಿಲ್ಲ.
ಸ್ವತಃ ಬೆಂಗಳೂರು ಪೊಲೀಸ್ ಆಯುಕ್ತರೇ ಅಧಿಕೃತವಾಗಿ ಜನರಿಗೆ ಎಚ್ಚರಿಕೆ ನೀಡಿದ್ಧಾರೆ ಕೂಡ! ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ಬೆಂಗಳೂರಿನಲ್ಲಿ ಅವಕಾಶವಿಲ್ಲ, ಅವರು ಬೇಕಾದರೆ ಉತ್ತರಭಾರತಕ್ಕೆ ಹೋಗಲಿ ಎಂದಿದ್ದಾರೆ. ಅಷ್ಟೇ ಅಲ್ಲ; ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರೆ ಜೈಲಿಗೆ ಹಾಕುವುದಾಗಿಯೂ ಅವರು ಎಚ್ಚರಿಕೆ ನೀಡಿದ್ಧಾರೆ. ಸಚಿವ ಸಿ ಟಿ ರವಿ ಅವರ ‘ಅಂಥವರನ್ನು ಪಾಕಿಸ್ತಾನಕ್ಕೆ ಹೋಗಲಿ’ ಎಂಬುದನ್ನೇ ಬಹುತೇಕ ಧ್ವನಿಸುವ ಕಮೀಷನರ್ ಸಾಹೇಬರ ಈ ಮಾತಿನ ಬೆನ್ನಲ್ಲೇ, ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದಾದ್ಯಂತ ಗುರುವಾರ ರಾತ್ರಿಯಿಂದ ಮೂರು ದಿನಗಳ ಕಾಲ(ಡಿ18-21) ನಿಷೇಧಾಜ್ಞೆ ಜಾರಿಯಾಗಿದೆ!
ಯಾರು ಏನೇ ಹೇಳಲಿ, ಎಷ್ಟೇ ವಿರೋಧ ಮಾಡಲಿ ನಾವು ಕಾಯ್ದೆಯನ್ನು ಜಾರಿ ಮಾಡಿಯೇ ಸಿದ್ದ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಮತ್ತು ಪ್ರಧಾನಿ ಮೋದಿಯವರ ಕಾಯ್ದೆಯ ಪರ ವಕಾಲತ್ತುಗಳ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮತ್ತು ಅವರ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ನಾಯಕರ ಹೇಳಿಕೆಗಳು ರಾಜಕೀಯವಾಗಿ ತಮ್ಮ ಪಕ್ಷದ ನಿಲುವಿಗೆ ಬದ್ಧ ನಡೆನುಡಿ ಎಂದುಕೊಳ್ಳಬಹುದು. ಆದರೆ, ಒಬ್ಬ ಅಧಿಕಾರಿಯಾಗಿ, ಜನರಿಗೆ ಪ್ರತಿಭಟನೆಯ ಹಕ್ಕನ್ನು, ಸಮಾನತೆಯ ಹಕ್ಕನ್ನು ನೀಡಿದ ಸಂವಿಧಾನವನ್ನು ರಕ್ಷಿಸಬೇಕಾದ, ಅದರ ಘನತೆಯನ್ನು ಎತ್ತಿಹಿಡಿಯಬೇಕಾದ ಒಬ್ಬ ಪೊಲೀಸ್ ಅಧಿಕಾರಿಯ ಈ ಪರಿಯ ವರಸೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಅದರಲ್ಲೂ ಒಂದು ಕಾಯ್ದೆಯನ್ನು ವಿರೋಧಿಸಿದರೆ ಜನರನ್ನು ಜೈಲಿಗೆ ಹಾಕುತ್ತೇವೆ ಎಂದು ಅಧಿಕಾರಿ ನೇರವಾಗಿ ಜನರಿಗೆ ಬೆದರಿಕೆ ಹಾಕುವುದು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವೇ? ಎಂಬ ಪ್ರಶ್ನೆ ಕೂಡ ಎದ್ದಿದೆ.
ಕಾಯ್ದೆಯ ಸಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದರೂ ಅದಿನ್ನೂ ಪ್ರಾಯೋಗಿಕವಾಗಿ ಜಾರಿಗೆ ಬಂದಿಲ್ಲ ಎಂಬ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಗೆ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿದೆ. ಅದರ ಬೆನ್ನಲ್ಲೇ ನಿಷೇಧಾಜ್ಞೆಯ ಮೂಲಕ ಪ್ರತಿಪಕ್ಷಗಳು ಮತ್ತು ಜನರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಮತ್ತು ಅಧಿಕಾರಶಾಹಿ ಕೂಡ ಜನರನ್ನು ಬೆದರಿಸುವ ಕಾರ್ಯ ಆರಂಭಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜನ ವಿರೋಧವನ್ನು, ಪ್ರತಿರೋಧವನ್ನು ವಿಚಾರ ಮತ್ತು ಚರ್ಚೆಯ ಮೂಲಕ ಎದುರಿಸುವ ಬದಲಾಗಿ ಸರ್ಕಾರ ಬಲಪ್ರಯೋಗದ ಮೂಲಕ, ಕಾನೂನಿನ ಅಸ್ತ್ರ ಝಳಪಿಸುವ ಮೂಲಕ ಬಾಯಿ ಮುಚ್ಚಿಸುವ ವರಸೆ ಪ್ರದರ್ಶಿಸುತ್ತಿದೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ವರಸೆಯಲ್ಲ. ಇದು ಪಕ್ಕಾ ಸರ್ವಾಧಿಕಾರಿ ವರಸೆ ಎಂಬುದು ಕಾಯ್ದೆಯ ವಿರುದ್ಧ ಇರುವವರ ಆರೋಪ. ಶಾಸಕಾಂಗ, ಕಾರ್ಯಾಂಗ ಮತ್ತು ಮಾಧ್ಯಮಗಳನ್ನು ಬಳಸಿಕೊಂಡು, ಸಂಸತ್ತನ್ನೂ ಬಳಸಿಕೊಂಡು ಸಂವಿಧಾನವನ್ನು, ಸಂವಿಧಾನ ಜನರಿಗೆ ನೀಡಿರುವ ಹಕ್ಕುಗಳನ್ನು ಬುಡಮೇಲು ಮಾಡಲಾಗುತ್ತಿದೆ. ತನ್ನ ವಿರುದ್ಧ ವ್ಯಾಪಕವಾಗುತ್ತಿರುವ ಜನಾಕ್ರೋಶವನ್ನು ಕಾನೂನು- ಕಾಯ್ದೆಯ ಅಸ್ತ್ರ ಬಳಸಿ ಹತ್ತಿಕ್ಕುತ್ತಿದೆ. ತನ್ನ ನೀತಿ- ನಿಲುವುಗಳನ್ನು ಜನರ ಮುಂದೆ ಸಮರ್ಥಿಸಿಕೊಳ್ಳಲಾಗದ ದುರ್ಬಲ ಸರ್ಕಾರ ಮತ್ತು ನಾಯಕತ್ವ ಮಾತ್ರ ಇಂತಹ ವರಸೆ ಪ್ರದರ್ಶಿಸುತ್ತವೆ ಎಂಬ ಆರೋಪಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರಾಜಕೀಯ ಪಕ್ಷಗಳ ವಿಶ್ವಾಸ ಗಳಿಸುವಲ್ಲಿ ಸೋತ, ತನ್ನ ಮೂಗಿನ ನೇರಕ್ಕೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತಿದ್ದುಪಡಿ ಮಾಡಿರುವ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಹತಾಶ ವರಸೆಗಳ ಮೊರೆಹೋಗಿದ್ದು, ಕೇವಲ ನಿಷೇಧಾಜ್ಞೆಯಷ್ಟೇ ಅಲ್ಲ, ಈಶಾನ್ಯ ರಾಜ್ಯಗಳಲ್ಲಿ ಜಾರಿಯಾಗದಂತೆ ಯಾವುದೇ ಕ್ಷಣದಲ್ಲಿ ದೇಶಾದ್ಯಂತ ಇಂಟರ್ ನೆಟ್, ರೇಡಿಯೋ, ಸುದ್ದಿಪ್ರಸಾರದಂತಹ ಸಂವಹನ ಮಾಧ್ಯಮಗಳನ್ನು ಸ್ಥಗಿತಗೊಳಿಸಬಹುದು. ಆ ಹಿನ್ನೆಲೆಯಲ್ಲಿ ನೋಡಿದರೆ, ಅಸ್ಸಾಂನಲ್ಲಿ ಎನ್ ಆರ್ ಸಿ ಜಾರಿ ಮಾಡಿದ ಮಾದರಿಯಲ್ಲೇ ಕೇಂದ್ರ ಸರ್ಕಾರ ಈ ಕಾಯ್ದೆಯ ವಿಷಯದಲ್ಲಿಯೂ ಮುಂದುವರಿಯುತ್ತಿದೆ. ಒಂದು ರೀತಿಯಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ರೀತಿಯಲ್ಲೇ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಆಣತಿಯಂತೆಯೇ ಎಲ್ಲವೂ(ಅಧಿಕಾರಶಾಹಿ, ಪೊಲೀಸ್ ಮತ್ತು ಬಹುತೇಕ ಮುಖ್ಯವಾಹಿನಿ ಮಾಧ್ಯಮ) ನಡೆದುಕೊಳ್ಳುತ್ತಿದ್ದು, ಜನರ ದನಿಯಾಗುವ, ಜನರ ಹಕ್ಕಿನ ಹೋರಾಟದ ಪರ ಇವೆ. ಹಾಗಾಗಿ ಸರ್ಕಾರ ಜನರ ದನಿಯನ್ನು ಮೀರಿ ತನ್ನ ಅಜೆಂಡಾವನ್ನು ಜನರ ಮೇಲೆ ಹೇರಲು ಯಾವ ಹಿಂಜರಿಕೆ ಇಲ್ಲದೆ ಮುನ್ನುಗ್ಗುತ್ತಿದೆ. ಅದರ ಭಾಗವಾಗಿಯೇ ಗೃಹ ಸಚಿವ ಅಮಿತ್ ಶಾ ‘ನೀವು ವಿರೋಧ ಮಾಡಿದರೆ ಮಾಡಿಕೊಳ್ಳಿ. ನಾವು ಇದನ್ನು ಜಾರಿ ಮಾಡುತ್ತೇವೆ’ ಎಂಬಂತಹ ಉದ್ಧಟ ಮಾತು ಆಡಿದ್ದಾರೆ. ಅವರ ಆ ಮಾತೇ ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇರುವ ಬಗೆಗಿನ ಈವರೆಗಿನ ಅನುಮಾನಗಳನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಎಂಬುದು ಕೂಡ ಹಲವರ ಆತಂಕ.
ಆದರೆ, ಈ ಎಲ್ಲಾ ಪ್ರಯೋಗಗಳಿಗೆ ಈಡಾಗುತ್ತಿರುವ ಮೊದಲ ರಾಜ್ಯವಾಗಿ ಕರ್ನಾಟಕವೇ ಕಾಣುತ್ತಿದೆ ಎಂಬುದು ಸದ್ಯಕ್ಕೆ ಮಹಾ ಸಹಿಷ್ಣುಗಳು, ಸಭ್ಯರೂ ಎನಿಸಿರುವ ಕನ್ನಡಿಗರ ಪಾಲಿನ ದುರಂತವೇ ಸರಿ!