ಡಿಸೆಂಬರ್ 19, 1927, ಇಂದಿಗೆ 92 ವರ್ಷಗಳ ಹಿಂದಿನ ಆ ದಿನ ಈ ದೇಶದ ಇಬ್ಬರು ಮಹಾನ್ ಯೋಧರಿಗೆ ಅಂದಿನ ‘ದೇಶದ್ರೋಹಿ’ ಪಟ್ಟ ಕಟ್ಟಿ ನೇಣಿಗೆ ಏರಿಸಿದ ದಿನ. ತಮ್ಮ ಯೌವನದ ಸುಗಂಧವನ್ನು ಭಾರತದ ಸ್ವಾತಂತ್ರ್ಯಕ್ಕೆ ಲೇಪಿಸಿದ್ದ ಆ ವೀರ ಯುವಕರು ನಗುನಗುತ್ತಲೇ ನೇಣಿನ ಹಗ್ಗಕ್ಕೆ ಮುತ್ತಿಟ್ಟು ‘ಸ್ವತಂತ್ರ ಭಾರತ’ರ ಕನಸು ಕಂಗಳಿಂದಲೇ ಕೊನೆಯುಸಿರೆಳೆದ ದಿನ.
ಒಂದೇ ದಿನ ನೇಣುಗಂಬಕ್ಕೆ ಏರಿಸಲ್ಪಟ್ಟು ಹುತಾತ್ಮರಾದ ಆ ಇಬ್ಬರು ಕ್ರಾಂತಿಕಾರಿ ಮಿತ್ರರೇ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ಲಾಖಾನ್.
ರಾಮ್ ಪ್ರಸಾದ್ ಬಿಸ್ಮಿಲ್
ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಜೂನ್ 11, 1897ರಲ್ಲಿ ಜನಿಸಿದ್ದ ರಾಮ್ಪ್ರಸಾದ್ ಬಿಸ್ಮಿಲ್ ಬಾಲ್ಯದಿಂದಲೇ ಅಪ್ಪಟ ದೈವಭಕ್ತ. ಬಿಸ್ಮಿಲ್ಲನ ದೈವಭಕ್ತಿಯನ್ನು ಮೆಚ್ಚಿಕೊಂಡು ಮುನ್ಶಿ ಇಂದ್ರಜೀತ್ ಎಂಬುವವರು ಆತನಿಗೆ ಸಂಧ್ಯಾವಂದನೆ ಹೇಳಿಕೊಟ್ಟು ಆರ್ಯಸಮಾಜದ ತತ್ವಗಳನ್ನು ಬೋಧಿಸಿದ್ದರು. ‘ಸ್ವಾಮಿ ದಯಾನಂದರು ಬರೆದಿದ್ದ ಸತ್ಯಾರ್ಥ ಪ್ರಕಾಶ’ ಎಂಬ ಕೃತಿಯನ್ನು ನೀಡಿ ರಾಮ ನೀನು ಇದನ್ನು ಓದು ಎಂದು ಹೇಳಿ ಕೊಟ್ಟಿದ್ದರು. ಆ ಕೃತಿಯನ್ನು ಓದಿ ಸಾಕಷ್ಟು ಪ್ರಭಾವಿತನಾದ ರಾಮಪ್ರಸಾದ್ ಬ್ರಹ್ಮಚರ್ಯೆ ಸ್ವೀಕರಿಸಿ ಕಠಿಣವಾಗಿ ಆಚರಿಸತೊಡಗಿದ್ದ. ರಾತ್ರಿಯ ಊಟವನ್ನು ತ್ಯಜಿಸಿ ಉಪ್ಪು, ಹುಳಿಗಳಿಲ್ಲದೇ ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಂಡ. ಆಧ್ಯಾತ್ಮಿಕ ಬಲದ ಜೊತೆಯಲ್ಲಿ ವ್ಯಾಯಾಮಗಳ ಮೂಲಕ ದೇಹವನ್ನು ಉಕ್ಕಿನಂತೆ ಗಟ್ಟಿಗಳಿಸಿಕೊಂಡಿದ್ದ. ಇದೇ ಸಂದರ್ಭದಲ್ಲಿ ಮತ್ತೊಬ್ಬ ದೇಶಪ್ರೇಮಿ ವಿದ್ವಾಂಸ ಸ್ವಾಮಿ ಸೋಮದೇವ ಎಂಬುವವರ ಸಂಪರ್ಕ ಲಭಿಸಿ ರಾಜಕೀಯದ ಕುರಿತು ಅನೇಕ ಸಂಗತಿಗಳನ್ನು ಅರಿತುಕೊಳ್ಳತೊಡಗಿದ. ಅವರ ಮಾರ್ಗದರ್ಶನದಲ್ಲಿ ರಾಮಪ್ರಸಾದ್ಗೆ ರಾಜಕೀಯ ಮತ್ತು ಧಾರ್ಮಿಕ ವಿಚಾರಗಳಲ್ಲಿ ಮತ್ತಷ್ಟು ಸ್ಪಷ್ಟತೆ ಸಿಗುತ್ತಾ ಹೋಯಿತು. ಹೀಗಿರುವಾಗಲೇ ಬ್ರಿಟಿಷ್ ಪ್ರಭುತ್ವ 1916ರಲ್ಲಿ ಭಾಯಿ ಪರಮಾನಂದಜಿ ಎಂಬುವವರಿಗೆ ಮರಣ ದಂಡನೆ ವಿಧಿಸಿತು ಪರಮಾನಂದಜಿ ಅವರು ಬರೆದಿದ್ದ ಪುಸ್ತಕಗಳನ್ನು ಓದಿ ಅವರ ವಿಚಾರಗಳನ್ನು ತಿಳಿದುಕೊಂಡಿದ್ದ ರಾಮಪ್ರಸಾದ್ ಬಿಸ್ಮಿಲ್ ಗೆ ಈ ಸುದ್ದಿ ಕೇಳಿ ಎಲ್ಲಿಲ್ಲದ ಆಕ್ರೋಶ ಬಂದಿತು. ಸೋಮದೇವ್ ಅವರ ಬಳಿ ಹೋದ ಬಿಸ್ಮಿಲ್ ತಾನು ಬ್ರಿಟಿಷ್ ಪ್ರಭುತ್ವದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ. ಸೋಮದೇವರು, “ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸುಲಭ ಆದರೆ ಅದರಂತೆ ನಡೆಯುವುದು ಅಷ್ಟು ಸುಲಭವೆಂದು ತಿಳಿಯಬೇಡ ರಾಮ” ಎಂದು ಕಿವಿಮಾತು ಹೇಳಿದರು. ಅವರ ಪಾದಗಳಿಗೆ ನಮಸ್ಕರಿಸಿದ ರಾಮ್ ಪ್ರಸಾದ್ ಬಿಸ್ಮಿಲ್, “ಸ್ವಾಮೀಜಿ, ನಿಮ್ಮ ಕೃಪಾಶೀರ್ವಾದವಿದ್ದರೆ ಸಾಕು ನಾನು ನಮ್ಮ ಪ್ರತಿಜ್ಞೆಯನ್ನು ನೆರವೇರಿಸುತ್ತೇನೆ” ಎಂದು ಹೇಳಿದಾಗ ಅವನ ಮಾತಿನಲ್ಲಿ ದೃಢನಿರ್ಧಾರವಿತ್ತು.
1922ರಲ್ಲಿ ಮಹಾತ್ಮಾ ಗಾಂಧೀಜಿಯವರು ಚೌರಿಚೌರಾದಲ್ಲಿ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 22 ಪೊಲೀಸರು ನಿಧನರಾದ ಘಟನೆಯ ನೆಪದಲ್ಲಿ ತಾವು ಘೋಷಿಸಿದ್ದ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು. ಇದರಿಂದ ಗಾಂಧೀಜಿಯವರ ಮೇಲೆ ಭ್ರಮನಿರಸನಗೊಂಡ ಕ್ರಾಂತಿಕಾರಿಗಳು ಅಖಿಲ ಭಾರತ ಮಟ್ಟದಲ್ಲಿ “ಹಿಂದೂಸ್ತಾನ್ ರಿಪಬ್ಲಿಕನ್ ಅಸೋಶಿಯೇಶನ್” ಎಂಬ ಪಕ್ಷವನ್ನು ಸ್ಥಾಪಿಸಿಕೊಂಡರು. ಇದನ್ನೇ ಮುಂದೆ ಭಗತ್ ಸಿಂಗ್ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಶಿಯೇಶನ್ (HSRA) ಎಂದು ಮರು ನಾಮಕರಣ ಮಾಡಿದನು. “ಬಿಳಿಯರಿಂದ ಕರಿಯರಿಗೆ ಅಧಿಕಾರ ಹಸ್ತಾಂತರ ನಮ್ಮ ಉದ್ದೇಶವಲ್ಲ, ಭಾರತದಲ್ಲಿ ಸಮಾಜವಾದ ಸ್ಥಾಪನೆ ನಮ್ಮ ಉದ್ದೇಶ” ಎಂದು HSRA ಘೋಷಿಸಿಕೊಂಡಿತ್ತು. ರಾಮ್ ಪ್ರಸಾದ್ ಬಿಸ್ಮಿಲ್ ಇದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು. ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿ ರಾಜ್ಯಾಧಿಕಾರವನ್ನು ವಶಪಡಿಸಿಕೊಳ್ಳುವುದು ಇವರೆಲ್ಲರ ಧ್ಯೇಯವಾಗಿತ್ತು. ನೂರಾರು ಜನರ ಯುವಕರು ತಮ್ಮ ಓದು, ಉದ್ಯೋಗ, ಮನೆ, ಕುಟುಂಬಗಳನ್ನು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಡಿಕೊಂಡರು. ಇದೇ ಸಂದರ್ಭದಲ್ಲಿ ಸಶ್ತ್ರಾಸ್ತ್ರ, ಕಾರ್ಯಕರ್ತರ ಊಟ ವಸತಿಗಳಿಗಾಗಿ ಅಪಾರ ಹಣದ ಅವಶ್ಯಕತ ಎದುರಾದ ಕಾರಣ 1925ರ ಅಗಸ್ಟ್ ತಿಂಗಳಿನಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ನೇತೃತ್ವದಲ್ಲಿ ಒಂದು ತಂಡ ಕಾಕೋರಿ ಎಂಬಲ್ಲಿ ರೈಲೊಂದನ್ನು ತಡೆದು ಅದರಲ್ಲಿ ಬ್ರಿಟಿಷರು ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡು ಪರಾರಿಯಾದರು. ಇದರ ಸಂಪೂರ್ಣ ಯೋಜನೆ ರಾಮ್ ಪ್ರಸಾದ್ ಬಿಸ್ಮಿಲ್ ದ್ದಾಗಿತ್ತು. ಆದರೆ ತಂಡದಲ್ಲಿದ್ದವರೇ ಕೆಲವರು ಪೊಲೀಸರಿಗೆ ಸುಳಿವು ನೀಡಿದ ಪರಿಣಾಮವಾಗಿ ಪೊಲೀಸರು ಕ್ರಾಂತಿಕಾರಿಗಳ ವಸತಿ ತಾಣಗಳ ಮೇಲೆ ಹಠಾತ್ ದಾಳಿ ನಡೆಸಿದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಪಾಖ್ ಉಲ್ಲಾಖಾನ್ ಸೇರಿದಂತೆ ಹಲವರನ್ನು ದಸ್ತಗಿರಿ ಮಾಡಿ ಜೈಲಿಗೆ ತಳ್ಳಿದರು. ಈ ಸಂದರ್ಭದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಗೆ ಪೊಲೀಸರಿಂದ ಕ್ರಾಂತಿಕಾರಿಗಳ ಕುರಿತು ಮಾಹಿತಿ ಪಡೆಯಲು ಚಿತ್ರಹಿಂಸೆ ನೀಡಿದರು, ಆಮಿಷಗಳನ್ನು ಒಡ್ಡಿದರು. ಮಾಹಿತಿ ನೀಡಿದರೆ ನಿನ್ನನ್ನು ಬಿಟ್ಟು ಬಿಡುವುದರ ಜೊತೆಯಲ್ಲಿ ಇಂಗ್ಲೆಂಡಿನಲ್ಲಿ ಸುಖವಾಗಿ ಬದುಕುವ ಅವಕಾಶ ಮಾಡಿಕೊಡುತ್ತೇವೆ ಎಂದು ನಾನಾ ಬಗೆಯಲ್ಲಿ ಆಮಿಷ ತೋರಿಸಿದರಲ್ಲದೆ ಬಾಯಿ ಬಿಡದೇ ಹೋದರೆ ನಿನ್ನನ್ನು ನೇಣಿಗೇರಿಸುತ್ತೇವೆ ಎಂದೂ ಬೆದರಿಸಿದರು. ಆದರೆ ಇದ್ಯಾವುದಕ್ಕೂ ರಾಮ್ ಪ್ರಸಾದ್ ಬಿಸ್ಮಿಲ್ ಸೊಪ್ಪು ಹಾಕಲಿಲ್ಲ.
ಕೊನೆಗೆ ಕಾಕೋರಿ ರೈಲು ದರೋಡೆ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯವು ರಾಮ್ ಪ್ರಸಾದ್ ಬಿಸ್ಮಿಲ್, ರಾಜೇಂದ್ರನಾಥ್ ಲಾಹಿತಿ, ರೋಶನ್ ಸಿಂಗ್ ಮತ್ತು ಅಶ್ಪಾಖ್ ಉಲ್ಲಾಖಾನ್ ರಿಗೆ ಮರಣದಂಡನೆ ವಿಧಿಸಿದರೆ ಇತರ ಹತ್ತು ಜನರಿಗೆ 12 ವರ್ಷಗಳ ಕಾಲ ಕಠಿಣ ಸಜೆ ವಿಧಿಸಿತು.
ತನ್ನನ್ನು ಗಲ್ಲುಗಂಬಕ್ಕೇರಿಸುವ ಒಂದು ದಿನ ಮೊದಲು ಅಂದರೆ 1927ರ ಡಿಸೆಂಬರ್ 18ರಂದು ರಾಮ್ ಪ್ರಸಾದ್ ಬಿಸ್ಮಿಲ್ ಅವರ ತಾಯಿ ಮರುದಿನ ಸಾಯಲಿದ್ದ ತನ್ನ ಮಗನನ್ನು ಕೊನೆಯ ಬಾರಿಗೆ ನೋಡಲು ಬಂದರು. ಅಮ್ಮನ ಮುಖವನ್ನು ನೋಡುತ್ತಿದ್ದಂತೆ ರಾಮನ ಕಣ್ಣು ತುಂಬಿಕೊಂಡು ಒಂದೆರಡು ಹನಿ ಬುಳಬುಳನೆ ಉದುರಿದವು. ಇದನ್ನು ನೋಡಿದ ಆತನ ತಾಯಿ, “ಛೀ ಇದೆಂತಹ ವರ್ತನೆ ನಿನ್ನದು. ಹೀಗೆ ಕಣ್ಣೀರಿಡುವುದಾದರೆ ನೀನು ಇಷ್ಟು ದಿನ ಹೋರಾಡಿದ್ದಾದರೂ ಯಾಕಾಗಿ? ನನ್ನ ಮಗ ಸಾವಿನ ಕ್ಷಣದಲ್ಲಿಯೂ ನಗುನಗುತ್ತಾ ಇರುತ್ತಾನೆ ಎಂದುಕೊಂಡಿದ್ದೆ. ಈ ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ನನ್ನ ಮಗ ಧೀರನಂತೆ ನೇಣಿಗೆ ಕೊರಳೊಡ್ಡಬೇಕು ಎಂದು ನಾನು ಬಯಸಿದ್ದೇನೆ. ಆದರೆ ನೀನು ಹೀಗೆ ಕಣ್ಣೀರು ಸುರಿಸುತ್ತಿದ್ದೀಯಲ್ಲಾ?” ಎನ್ನಬೇಕೇ ಆ ಮಾಹಾತಾಯಿ? “ಅಮ್ಮಾ..” ಎಂದು ಆಕೆಯನ್ನು ತಡೆದ ರಾಮ್ ಪ್ರಸಾದ್ ಬಿಸ್ಮಿಲ್, “ನೀನು ನನ್ನ ಹೆತ್ತ ತಾಯಿ. ನಿನಗೆ ನನ್ನ ಕಣ್ಣೀರು ಅರ್ಥವಾಗಲಿಲ್ಲವೇ? ಸಾವಿಗೆ ಹೆದರಿ ನಿನ್ನ ಮಗ ಅಳುತ್ತಿದ್ದಾನೆ ಎಂದುಕೊಳ್ಳಬೇಡಮ್ಮ. ಬೆಂಕಿಗೆ ಹತ್ತಿರ ಹಿಡಿದಾಗ ಬೆಣ್ಣೆ ಕರಗುವಂತೆ ನಿನ್ನನ್ನು ನೋಡಿದ ಕೂಡಲೇ ನನ್ನ ಕಣ್ಣುಗಳು ವದ್ದೆಯಾದವು. ಮಿಕ್ಕಂತೆ ನನಗೆ ಮರಣದಂಡನೆಯಾಗಿರುವುದರ ಬಗ್ಗೆ ಯಾವುದೇ ಬೇಸರ ಇಲ್ಲಮ್ಮ. ನನ್ನ ಕಣ್ಣಿನಿಂದ ಹರಿದ ಹನಿಗಳು ನಿನಗೆ ತೋರಿದ ಗೌರವ ಮಾತ್ರ. ನಾಳೆ ನಿನ್ನ ಮಗ ಯಾವ ಅಂಜಿಕೆ ಅಳುಕಿಲ್ಲದೇ, ಧೈರ್ಯದಿಂದ ನಗುನಗುತ್ತಾ, ಹೆಮ್ಮೆಯಿಂದ ನೇಣುಗಂಬಕ್ಕೇರುವ ಸುದ್ದಿಯನ್ನು ನೀನು ಕೇಳುತ್ತೀಯ, ನನಗೆ ನೀನು ಆಶೀರ್ವಾದ ಮಾಡಮ್ಮ” ಎಂದ ರಾಮ್ ಪ್ರಸಾದ್ ಬಿಸ್ಮಿಲ್.
ಅಶ್ಫಾಖ್ ಉಲ್ಲಾಖಾನ್
ಡಿಸೆಂಬರ್ 19, 1927ರ ನಸುಕಿನಲ್ಲಿ ಉತ್ತರ ಪ್ರದೇಶದ ಫೈಜಾಬಾದಿನ ಸೆರೆಮನೆಯಲ್ಲಿದ್ದ ಅಶ್ಪಾಕ್ ಉಲ್ಲಾಖಾನ್ ಸ್ನಾನ ಮುಗಿಸಿಕೊಂಡು ನಮಾಜ್ ಮಾಡಿ ಕೆಲ ಕ್ಷಣಗಳ ನಂತರ ಕೈಗೆ ಖುರಾನ್ ಎತ್ತಿಕೊಂಡು ಓದಲಾರಂಭಿಸಿದ. ಆ ಹೊತ್ತಿಗೆ ಜೈಲಿನ ಅಧಿಕಾರಿಗಳು ಅವನಿದ್ದ ಕೋಣೆಗೆ ದೌಡಾಯಿಸಿ “ಸಮಯವಾಯಿತು” ಎಂದರು. ಹೀಗೆ ಹೇಳಿದವರಿಗೆ ಕೈಕುಲಿಕಿದ ಅಶ್ಫಾಖ್ ತನ್ನನ್ನು ನೇಣು ಗಂಬಕ್ಕೆ ಏರಿಸುವ ಕಡೆಗೆ ನಡೆಯತೊಡಗಿದ. ಆತನ ಭುಜದ ಮೇಲೆ ಚೀಲವೊಂದನ್ನು ನೇತು ಹಾಕಿಕೊಂಡಿದ್ದ. ಅದರಲ್ಲಿ ಪವಿತ್ರ ಕುರಾನ್ ಗ್ರಂಥವಿತ್ತು. ಅದರಲ್ಲಿನ ಕೆಲವು ಸಾಲುಗಳನ್ನು ಬಾಯಿಪಾಠ ಮಾಡಿಕೊಂಡು ಹೇಳುತ್ತಿದ್ದ. ಅಂದು ಅಶ್ಫಾಖ್ ಶೇವಿಂಗ್ ಮಾಡಿಕೊಂಡಿರಲಿಲ್ಲ. ಆದರೆ ಬಹಳ ಸುಂದರವಾಗಿ ಕಾಣುತ್ತಿದ್ದ. ಅಶ್ಫಾಖ್ ಉಲ್ಲಾಖಾನ್ನ ಮುಖದಲ್ಲಿದ್ದ ಕಳೆಯನ್ನು ಮತ್ತು ಹುಮ್ಮಸ್ಸು ನೋಡಿದ ಜೈಲು ಸಿಬ್ಬಂದಿಗಳು ಮತ್ತು ಬ್ರಿಟಿಷ್ ಅಧಿಕಾರಿಗಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು.
ನೇಣಿನ ಕುಣಿಕೆಯ ಕೆಳಕ್ಕೆ ನಿಂತು ಅಶ್ಫಾಖ್ ಪದ್ಯವೊಂದನ್ನು ಹೇಳಿದ:
ಶಾಹಿದೋಂ ಕಿ ಮಜಾರೋಂ ಪರ್ ಲಗೇಂಗೇ ಹರ್ ಬರಸ್ ಮೆಲೆ
ವತನ್ ಪರ್ ಮರ್ನೆವಾಲೋಂಕಾ ಯಹೀ ಬಾಕಿ ನಿಶಾನ್ ಹೋಗಾ
ಬಹೂತ್ ಹೀ ಜಲ್ದ್ ಟೂಟೇಗೀ ಗುಲಾಮಿ ಕಿ ಯೇ ಜಂಜೀರೇಂ
ಕಿಸಿ ದಿನ್ ದೇಖಾ ಆಜಾದ್ ಯೇ ಹಿಂದೂಸ್ತಾನ್ ಹೋಗಾ
(ಪ್ರತಿವರ್ಷವೂ ಹುತಾತ್ಮರ ಸಮಾಧಿಗಳ ಮೇಲೆ ಜಾತ್ರೆಗಳು ನಡೆಯಲಿವೆ. ದೇಶಕ್ಕಾಗಿ ಮಡಿದವರು ಗುರುತಾಗಿ ಕೊನೆಗೆ ಉಳಿಯುವುದು ಇದೊಂದೇ. ಆದರೆ ಗುಲಾಮಗಿರಿಯ ಸರಪಳಿಗಳು ಸಧ್ಯದಲ್ಲೇ ಮುರಿಯಲಿವೆ. ಒಂದಲ್ಲ ಒಂದು ದಿನ ಈ ಹಿಂದೂಸ್ತಾನ ಬಿಡುಗಡೆಗೊಳ್ಳಲಿದೆ)
ಹೀಗೆ ಹೇಳಿದವನೇ ತಾನೇ ನೇಣಿನ ಕುಣಿಕೆಯನ್ನು ತನ್ನ ಕೊರಳಿಗೆ ಹಾಕಿಕೊಂಡ. ಅಲ್ಲಿದ್ದವರೆಲ್ಲ ಖುದಾ ಹಫೀಜ್ ಎಂದು ಕೂಗಿದರು. ನೇಣು ಹಗ್ಗವನ್ನು ಸಿಬ್ಬಂದಿ ಎಳೆಯುತ್ತಿದ್ದಂತೆ ಕ್ಷಣದಲ್ಲಿ ಅಶ್ಫಾಖ್ ಉಲ್ಲಾಖಾನ್ ಹುತಾತ್ಮನಾದ.
ದೇಶದ ವಿಮೋಚನೆಗಾಗಿ ಹೀಗೆ ನೇಣಿಗೆ ನಗುತ್ತಲೇ ಕೊರಳೊಡ್ಡಿದ ಹುತಾತ್ಮ ಅಶ್ಪಾಖ್ಉಲ್ಲಾಖಾನ್ ಹುಟ್ಟಿದ್ದು 22, ಅಕ್ಟೋಬರ್ 1900ರಂದು. ಅದೇ ಶಹಜಹಾನ್ಪುರದಲ್ಲಿಯೇ ಈತನೂ ಶ್ರೀಮಂತ ಪಠಾಣ್ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ್ದ. ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೊಟ್ಟು ಶಾಲೆಯನ್ನು ಬಹಿಷ್ಕರಿಸಿ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯಲ್ಲಿ ಧುಮುಕಿದ್ದ. ಚೌರಿಚೌರಾದ ಘಟನೆ ಅಶ್ಫಾಖ್ನಲ್ಲಿ ಸಹ ಭ್ರಮನಿರಸನ ಉಂಟುಮಾಡಿತ್ತು.
ಅಶ್ಫಾಖ್ ಉಲ್ಲಾ ಖಾನ್ 8ನೇ ತರಗತಿಯಲ್ಲಿದ್ದ 9ನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ಪ್ರಸಿದ್ಧ ಕ್ರಾಂತಿಕಾರಿಯನ್ನು ಭೇಟಿಯಾಗಿದ್ದ. ಆ ಕ್ರಾಂತಿಕಾರಿ ಅಶ್ಫಾಖ್ನಲ್ಲಿ ದೇಶಕ್ಕಾಗಿ ಎಂತಹುತೇ ಹೋರಾಟಕ್ಕೂ ಸಿದ್ಧವಿರುವ ಮತ್ತೊಬ್ಬ ಕ್ರಾಂತಿಕಾರಿ ಮಿತ್ರನನ್ನು ಕಂಡುಕೊಂಡ. ನಂತರ ಅವರಿಬ್ಬರ ಸ್ನೇಹ ಗಟ್ಟಿಗೊಳ್ಳುತ್ತಾ ಹೋಯಿತು. ಎಷ್ಟೆಂದರೆ ಆ ಇಬ್ಬರೂ ಒಂದೇ ದಿನದಂದು ಗಲ್ಲಿಗೆ ಏರಿಸುವ ಮಟ್ಟಕ್ಕೆ! ಅಶ್ಪಾಖ್ ಉಲ್ಲಾಖಾನ್ನಲ್ಲಿ ಅಪಾರ ದೇಶಭಕ್ತಿಯನ್ನು ಕಂಡ ಆ ಮತ್ತೊಬ್ಬ ಕ್ರಾಂತಿಕಾರಿ ಬೇರೆ ಯಾರೂ ಅಲ್ಲ. ರಾಮ್ ಪ್ರಸಾದ್ ಬಿಸ್ಮಿಲ್!
ರಾಮ್ ಪ್ರಸಾದ್ ಬಿಸ್ಮಿಲ್ ಆರ್ಯಸಮಾಜದ ಒಬ್ಬ ಕಟ್ಟರ್ ಅನುಯಾಯಿ, ಅಶ್ಪಾಖ್ ಒಬ್ಬ ಧರ್ಮನಿಷ್ಠ ಮುಸ್ಲಿಂ. ಆದರೆ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜೊತೆಗೂಡಿದ ಇಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಇವರಿಬ್ಬರ ಸ್ನೇಹವನ್ನು ನೋಡಿ ಶಹಜಹಾನ್ ಪುರದ ನಾಗರಿಕತು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು. ಆ ಹೊತ್ತಿನಲ್ಲಿಯೂ ಬ್ರಿಟಿಷರ ಸಾಕುನಾಯಿಗಳಂತಿದ್ದ ಕೋಮುವಾದಿಗಳು ಹಿಂದೂ-ಮುಸ್ಲಿಮರನ್ನು ಒಡೆದು ಆಳಲು, ಧರ್ಮದ್ವೇಷದ ಕಿಚ್ಚು ಹೊತ್ತಿಸಲು ಪ್ರಯತ್ನ ಮಾಡುತ್ತಿದ್ದರು. ಆದರೆ ಅದಕ್ಕೆಲ್ಲಾ ಸೊಪ್ಪುಹಾಕದೇ ದೇಶದ ಸ್ವಾತಂತ್ರ್ಯ ಹೋರಾಟದ ಜಾತ್ಯತೀತ ಸ್ವರೂಪವನ್ನು ಕಾಪಿಟ್ಟವರು ರಾಮ ಮತ್ತು ಅಶ್ಫಾಖ್. ಅಶ್ಫಾಖ್ ಮತ್ತು ರಾಮ್ ಪ್ರಸಾದ್ ಇಬ್ಬರೂ ಸ್ವತಃ ಕವಿಗಳಾಗಿದ್ದರು. ಹಿಂದಿ ಮತ್ತು ಉರ್ದುಗಳಲ್ಲಿ ಕವಿತೆ ಶಾಯರಿಗಳನ್ನು ಸ್ವತಃ ರಚಿಸಿ ಹಾಡುತ್ತಿದ್ದರು. ಕ್ರಾಂತಿಕಾರಿ ಚಳವಳಿ ಕಟ್ಟಲು ಯುವ ಕ್ರಾಂತಿಕಾರಿಗಳು ನಡೆಸಿದ ಪ್ರಸಿದ್ಧ ಕಾಕೋರಿ ರೈಲು ದರೋಡೆಯಲ್ಲಿ ಅಶ್ಪಾಖ್ ಉಲ್ಲಾಖಾನ್ ಸಹ ಪ್ರಮುಖ ಪಾತ್ರ ವಹಿಸಿದ್ದ. ಇದೇ ಪ್ರಕರಣದಲ್ಲಿ ಪೊಲೀಸರು ಅಶ್ಪಾಖ್ ಮನೆಗೆ ದಾಳಿ ನಡೆಸಿದಾಗ ಅಶ್ಪಾಕ್ ಮನೆಯಿಂದ ಕಾಲ್ಕಿತ್ತಿದ್ದ. ಆದರೆ ಕೆಲ ದಿನಗಳ ನಂತರ ಸಿಕ್ಕುಬಿದ್ದು ಸಾಕಷ್ಟು ಚಿತ್ರಹಿಂಸೆ ಅನುಭವಿಸಿ ಜೈಲು ಸೇರಿದ. ಅಂತಿಮವಾಗಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಇಬ್ಬರಿಗೂ ಒಂದೇ ದಿನ ಗಲ್ಲು ಶಿಕ್ಷೆ ನಿಗದಿಯಾಯಿತು. ಅಶ್ಫಾಖ್ ಉಲ್ಲಾಖಾನನ ವಕೀಲರು ‘ಅಶ್ಫಾಖ್, ನಿನ್ನ ಕಡೆಯ ಆಸೆ ಏನು?” ಎಂದಾಗ, “ನನಗೆ ಅಂತಹ ಆಸೆ ಏನೂ ಇಲ್ಲ. ನಾನು ಗಲ್ಲಿಗೆ ಏರುವುದನ್ನು ನೀವು ಬಂದು ನೋಡಬೇಕು ಎಂಬುದು ನನ್ನ ಆಸೆ” ಎಂದಿದ್ದಕ್ಕೆ ವಕೀಲರ ಗದ್ಗದಿತರಾಗಿ, “ಇಲ್ಲಾ ಅಶ್ಫಾಕ್ ನಾನು ಅಷ್ಟು ಗಟ್ಟಿಗನಲ್ಲ. ನಿನ್ನ ಸಾವನ್ನು ಕಣ್ಣಾರೆ ನೋಡುವಷ್ಟು ಧೈರ್ಯ ನನಗಿಲ್ಲ. ಆದರೆ ನಾನು ನಿನ್ನ ಸಮಾಧಿಯನ್ನು ತಪ್ಪದೇ ಮತ್ತೆ ಮತ್ತೆ ಬಂದು ನೋಡುತ್ತೇನೆ” ಎಂದರು. ತಾನು ಗಲ್ಲುಗಂಬಕ್ಕೇರುವ ಮುನ್ನಾ ದಿನದಂದು ಅಶ್ಫಾಖ್ ಉಲ್ಲಾಖಾನ್ ತನ್ನ ಸ್ನೇಹಿತರಿಗೆ, “ನಾಳೆ ನಾನು ಮದುವೆಯಾಗ್ತಾ ಇದ್ದೀನಿ. ಮದುಮಗನಲ್ಲಿ ಏನಾದರೂ ಓರೆಕೋರೆಯಿದ್ದರೆ ಹೇಳ್ರಪ್ಪ” ಎಂದು ತಮಾಷೆ ಮಾಡಿಕೊಂಡಿದ್ದನ್ನು ಕಂಡು ಸ್ನೇಹಿತರಿಗೆಲ್ಲಾ ಆಘಾತವೇ ಆಗಿತ್ತು. ನಾಳೆ ಬೆಳಗಾದರೆ ಸಾಯುವುದು ಗೊತ್ತಿದ್ದರೂ ಅದನ್ನು ಹೀಗೆ ತಮಾಷೆ ಮಾಡುವುದನ್ನು ಅವರು ಊಹಿಸಿಕೊಳ್ಳುವುದೂ ಕಷ್ಟವಿತ್ತು. ಅಶ್ಫಾಖ್ ಗಲ್ಲುಗಂಬಕ್ಕೆ ಏರಲು ಹೋಗುವಾಗ ಹೊಸಬಟ್ಟೆ ಹಾಕಿಕೊಂಡು ಹೋಗಿದ್ದ!
ಒಂದೇ ದಿನ ಇಬ್ಬರೂ ಮಿತ್ರರ ಪ್ರಾಣಪಕ್ಷಿ ಹಾರಿಹೋಯಿತು. ಅಶ್ಫಾಕ್ ಉಲ್ಲಾಖಾನ್ ಫೈಜಾಬಾದ್ ಜೈಲಿನಲ್ಲಿ ಗಲ್ಲಿಗೇರಿಸಲ್ಪಟ್ಟರೆ ರಾಮ್ ಪ್ರಸಾದ್ ಬಿಸ್ಮಿಲ್ ಗೋರಖ್ಪುರ ಜೈಲಿನಲ್ಲಿ ಗಲ್ಲಿಗೇರಿಸಲ್ಪಟ್ಟ.
ಹೀಗೆ ಭಾರತದ ವಿಮೋಚನೆಗಾಗಿ ತಮ್ಮ ಬದುಕು ಪ್ರಾಣಗಳನ್ನು ಸಮರ್ಪಿಸಿದ ಸಾವಿರಾರು ಲಕ್ಷಾಂತರ ಹೋರಾಟಗಾರರ ತ್ಯಾಗ ಬಲಿದಾನಗಳು ಇಡೀ ದೇಶದಲ್ಲಿ ಕೋಟ್ಯಂತರ ಜನರ ಹೃದಯದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದವು. ಮುಂದೆ ಸ್ವಾತಂತ್ರ್ಯದ ಗಂಗೆಗೆ ಸಾವಿರಾರು ತೊರೆಗಳು ಸೇರಿಕೊಂಡು ಇಡೀ ದೇಶವೇ ಒಕ್ಕೊರಲಿನಿಂದ ಬ್ರಿಟಿಷರಿಗೆ “ಭಾರತ ಬಿಟ್ಟು ತೊಲಗಿ” ಎಂದು ಗದರಿಸಿತು. ಅಂತಿಮವಾಗಿ ಬ್ರಿಟಿಷರು ಕಾಲು ಕೀಳಲೇಬೇಕಾಯಿತು.
- ಹರ್ಷಕುಮಾರ್ ಕುಗ್ವೆ.