ಉನ್ನಾವೋ, ಡಿ 20: BJP ಮಾಜಿ ಶಾಸಕ ಕುಲದೀಪ್ ಸೆಂಗರ್ ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ದೆಹಲಿಯ ವಿಶೇಷ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ 2017ರಲಲ್ಲಿ ಅತ್ಯಾಚಾರ ನಡೆಸಿದ ಆರೋಪದಲ್ಲಿ ವಿಚಾರಣೆಯ ನಂತರ ಕುಲದೀಪ್ ಸೆಂಗರ್ ‘ತಪ್ಪಿತಸ್ಥ” ಎಂದು ವಿಶೇಷ ನ್ಯಾಯಾಲಯವು ಸೋಮವಾರ ಘೋಷಿಸಿತ್ತು. ಅತ್ಯಾಚಾರಿ ಸೆಂಗರ್ ಗೆ ಜೀವಾವಧಿ ಜೈಲು ಶಿಕ್ಷೆಯ ಜೊತೆಗೆ ಆತನು 25 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಬೇಕು, ಇದರಲ್ಲಿ 10 ಲಕ್ಷ ರೂಪಾಯಿಗಳನ್ನು ಅತ್ಯಾಚಾರ ಸಂತ್ರಸ್ಥೆಗೂ, 15 ಲಕ್ಷ ರೂಪಾಯಿಗಳನ್ನು ಪ್ರಾಸೆಕ್ಯೂಶನ್ಗೂ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ಸಂದರ್ಭದಲ್ಲಿ ನ್ಯಾಯಾಲಯವು ಅತ್ಯಾಚಾರ ಸಂತ್ರಸ್ಥೆಯ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಅತ್ಯಾಚಾರಿ ಕುಲದೀಪ್ ಸೆಂಗರ್ ಯಾವುದೇ ರೀತಿ ಬೆದರಿಕೆ ಹಾಕುತ್ತಾನೆಯೇ ಎಂದು ಪ್ರತಿ ಮೂರು ತಿಂಗಳಿಗೊಮ್ಮೆ ಸಿಬಿಐ ವಿಚಾರಣೆ ನಡೆಸಬೇಕು ಎಂದೂ ತಿಳಿಸಿದೆ. ಸಂತ್ರಸ್ತೆಗೆ ಸೂಕ್ತ ರಕ್ಷಣೆ ನೀಡುವ ಹೊಣೆಯನ್ನೂ ಸಿಬಿಐಗೆ ವಹಿಸಿರುವ ನ್ಯಾಯಾಲಯ ಆಕೆ ಇಚ್ಛಿಸಿದಲ್ಲಿ ಆಕೆಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸಿ ಕುಟುಂಬದವರು ಇಚ್ಛಿಸಿದಲ್ಲಿ ಕುಟುಂಬದ ಗುತುರು ಚಹರೆಗಳನ್ನು ಬದಲಿಸಿ ಕೊಡಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.
ಸಂತ್ರಸ್ತೆಯನ್ನು 2017ರಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗರ್ ಬಳಿಗೆ ಅಪಹರಿಸಿಕೊಂಡು ಬಂದಿದ್ದ ಮತ್ತೊಬ್ಬ ಆರೋಪಿ ಶಶಿ ಸಿಂಗ್ ನನ್ನು ಸಾಕ್ಷಾಧಾರಗಳ ಕೊರತೆಯ ಕಾರಣದಿಂದ ನ್ಯಾಯಾಲಯ ಸೋಮವಾರ ಖುಲಾಸೆಗೊಳಿದೆ.