ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿರುವ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಶುಕ್ರವಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರತಿಪಕ್ಷ ಮುಖಂಡರ ಸರಣಿ ಬಂಧನಕ್ಕೆ ಚಾಲನೆ ನೀಡಿವೆ. ಮತ್ತೊಂದು ಕಡೆ, ಇಬ್ಬರು ಅಮಾಯಕರನ್ನು ಬಲಿತೆಗೆದುಕೊಂಡ ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ಯಾವುದೇ ತನಿಖೆ, ವಿಚಾರಣೆಗೆ ಸರ್ಕಾರ ಮುಂದಾಗಿಲ್ಲ.
ಈ ನಡುವೆ ಪ್ರತಿರೋಧ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುವ ತನ್ನ ವರಸೆಯನ್ನು ಮುಂದುವರಿಸಿರುವ ಸರ್ಕಾರ, ಶುಕ್ರವಾರವೇ ರಾಜ್ಯದ ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಮೊಬೈಲ್ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದೆ ಮತ್ತು ಚಾಮರಾಜನಗರದಲ್ಲಿ ಹೊಸದಾಗಿ ನಿಷೇಧಾಜ್ಞೆ ಜಾರಿಮಾಡಿದೆ. ಅಲ್ಲದೆ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡುವಂತೆ ಮತ್ತು ಸರ್ಕಾರಕ್ಕೆ ವ್ಯತಿರಿಕ್ತವಾದ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಪೋಸ್ಟ್ ಗಳನ್ನು ಶೇರ್ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದೆ.
ಅಲ್ಲದೆ, ಮಂಗಳೂರು ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಲು ಮತ್ತು ಪರಿಸ್ಥಿತಿ ಅವಲೋಕಿಸಲು ತೆರಳಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ನೇತೃತ್ವದ ಕಾಂಗ್ರೆಸ್ ನಿಯೋಗವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳೂರಿಗೆ ತೆರಳದಂತೆ ತಡೆಯಲು ಅವರ ವಿಮಾನಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನಿರಾಕರಿಸಲಾಗಿದೆ. ಆ ಮೂಲಕ ಪ್ರತಿಪಕ್ಷ ನಾಯಕರ ಸರಣಿ ಬಂಧನ ಹಾಗೂ ಅವರ ಚಲನವಲನವನ್ನು ನಿರ್ಬಂಧಿಸುವ ಮೂಲಕ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳಿಗೆ ಇಂಬು ನೀಡಲಾಗಿದೆ.
ಜೊತೆಗೆ ಮಂಗಳೂರು ಪೊಲೀಸರ ಬಗೆಗಿನ ದಶಕಗಳ ಕಾಲದ, ಸಂಪೂರ್ಣ ಕೇಸರೀಕರಣಗೊಂಡಿರುವ ಖಾಕಿ ಪಡೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದ್ದು, ಒಂದು ಕಡೆ ‘ಬಹುಸಂಖ್ಯಾತರು ರೊಚ್ಚಿಗೆದ್ದರೆ ಮತ್ತೊಂದು ಗೋಧ್ರಾ ಘಟನೆ ನಡೆಯಲಿದೆ’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಸಿ ಟಿ ರವಿಯವರಿಗೆ ರಕ್ಷಣೆ ನೀಡುವ, ನಿಷೇಧಾಜ್ಞೆಯ ನಡುವೆಯೂ ಬಿಜೆಪಿ ಮತ್ತು ಆರ್ ಎಸ್ ಎಸ್ ಸಭೆ-ಸಮಾರಂಭಗಳಿಗೆ, ನಾಯಕರ ಪತ್ರಿಕಾಗೋಷ್ಠಿಗಳಿಗೆ ಅವಕಾಶ ನೀಡುವ ಪೊಲೀಸರು, ಪ್ರತಿಪಕ್ಷಗಳು ಮತ್ತು ಶಾಂತಿಯುತ ಪ್ರತಿಭಟನಾನಿರತರ ಮೇಲೆ ಗಧಾ ಪ್ರಹಾರ ನಡೆಸುತ್ತಿರುವುದು, ನಿಜವಾಗಿಯೂ ಪೊಲೀಸರು ಸಂವಿಧಾನದ ರಕ್ಷಣೆಗೆ, ಕಾನೂನು ಸುವ್ಯವಸ್ಥೆಯ ರಕ್ಷಣೆಗೆ ಬದ್ಧರಾಗಿದ್ದಾರೆಯೇ? ಅಥವಾ ಆಳುವ ಮಂದಿಯ ಸೇವೆಗೆ ನಿಂತಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಈ ನಡೆ ತೀವ್ರ ಟೀಕೆ ಮತ್ತು ಕುಹಕಕ್ಕೆ ಒಳಗಾಗಿದೆ.
ಈ ನಡುವೆ, ಮಂಗಳೂರು ಘಟನೆಗಳಿಗೆ ಸಂಬಂಧಿಸಿದಂತೆ ಹಲವು ವೀಡಿಯೋ ತುಣುಕುಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಸ್ವತಃ ಕಲ್ಲು ತೂರುವುದು, ಆಸ್ಪತ್ರೆಯ ಒಳನುಗ್ಗಿ ಅಶ್ರುವಾಯು ಸಿಡಿಸಿರುವ ವೀಡಿಯೋಗಳು ವೈರಲ್ ಆಗಿವೆ. ಅಲ್ಲದೆ, ಮಂಗಳೂರು ಪೊಲೀಸ್ ಅಧಿಕಾರಿಯೊಬ್ಬರು, ಗೋಲಿಬಾರ್ ಗೆ ಕೆಲವೇ ಕ್ಷಣ ಮುನ್ನ, ಗಾಳಿಯಲ್ಲಿ ಗುಂಡು ಸಿಡಿಸಿದಾಗ ಜೊತೆಯಲ್ಲಿರುವ ಸಿಬ್ಬಂದಿಗೆ, ‘ಇಷ್ಟು ಗುಂಡು ಹಾರಿಸಿದರೂ ಒಬ್ಬರ ಹೆಣವೂ ಬಿದ್ದಿಲ್ಲವಲ್ಲ. ಇದು ಎಂಥದು’ ಎಂದು ಪ್ರತಿಭಟನೆಕಾರರ ಹತ್ಯೆಗೆ ಕುಮ್ಮಕ್ಕು ನೀಡುವ ವರಸೆಯಲ್ಲಿ ಮಾತನಾಡಿರುವ ವೀಡಿಯೋ ಕೂಡ ವೈರಲ್ ಆಗಿದೆ.
ಒಂದು ಕಡೆ ಬೆಂಗಳೂರಿನ ಗುರುವಾರದ ಪ್ರತಿಭಟನೆಯ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರೂ ಪೊಲೀಸರು, ರಾಮಚಂದ್ರ ಗುಹಾ ಮತ್ತಿತರ ಕೆಲವರನ್ನು ಬಂಧಿಸುವಾಗ ಎಲ್ಲೆಮೀರಿ ನಡೆದುಕೊಂಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿಯೇ, ಸೌಹಾರ್ದದಿಂದಲೇ ನಡೆದುಕೊಂಡಿದ್ದರೆ, ಮತ್ತೊಂದು ಕಡೆ ಮಂಗಳೂರು ಪೊಲೀಸರು ಮಾತ್ರ ಏಕೆ ಹೀಗೆ ಅತಿರೇಕದ ವರ್ತನೆ ತೋರಿದ್ದಾರೆ? ಇಡೀ ಕರಾವಳಿ ಪೊಲೀಸ್ ಸಿಬ್ಬಂದಿಯೇ ಭಜರಂಗದಳದ ಕಾರ್ಯಕರ್ತರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ದಶಕದ ಈಚೆಯ ನಿರಂತರ ಆರೋಪಗಳಿಗೆ ಈಗಿನ ವರ್ತನೆಗಳೂ ಸಮರ್ಥನೆ ನೀಡುತ್ತಿವೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.
ಈ ನಡುವೆ, ಮಂಗಳೂರು ಘಟನೆಯೂ ಸೇರಿದಂತೆ ಪೊಲೀಸರ ಅತಿರೇಕದ ವರ್ತನೆಗಳು ರಾಜ್ಯದಲ್ಲಿ ಪೊಲೀಸ್ ರಾಜ್ಯ ನಿರ್ಮಾಣವಾಗುತ್ತಿದೆಯೇ ಎಂಬ ಆತಂಕಕಾರಿ ಸ್ಥಿತಿ ನಿರ್ಮಾಣ ಮಾಡಿದ್ದರೂ, ರಾಜ್ಯ ಸರ್ಕಾರ ಗೋಲಿಬಾರ್ ಘಟನೆಯ ಬಗ್ಗೆ ಯಾವುದೇ ತನಿಖೆಯಾಗಲೀ, ವಿಚಾರಣೆಗಾಗಲೀ ಮುಂದಾಗಿಲ್ಲ ಎಂಬುದು ಪ್ರಜಾಪ್ರಭುತ್ವ ರೀತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆಯೇ ಎಂಬ ಅನುಮಾನಗಳನ್ನು ಗಟ್ಟಿಗೊಳಿಸಿದೆ.
ಅದೇ ಹಿನ್ನೆಲೆಯಲ್ಲಿಯೇ ಪ್ರತಿಪಕ್ಷಗಳು ಬಿಜೆಪಿ ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದು, ಮಂಗಳೂರಿನ ಇಬ್ಬರು ಅಮಾಯಕರು ಪೊಲೀಸ್ ಗುಂಡಿಗೆ ಬಲಿಯಾಗಲು ಯಡಿಯೂರಪ್ಪ ಅವರೇ ಕಾರಣ. ರಾಜ್ಯದಲ್ಲಿ ಬಿಜೆಪಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಏಕಾಏಕಿ ಗೋಲಿಬಾರ್ ನಡೆಸಿರುವುದು, ಈ ಸರ್ಕಾರದ ಹತ್ತು ವರ್ಷ ಹಿಂದಿನ ಹಾವೇರಿ ಗೋಲಿಬಾರ್ ಘಟನೆಯನ್ನು ನೆನಪಿಸಿದೆ. ಇದು ಸರ್ಕಾರವೇ ನಡೆಸಿದ ಕಗ್ಗೊಲೆ ಎಂದು ಟೀಕಿಸಿವೆ.
ರಾಜ್ಯ ಹೈಕೋರ್ಟ್ ಕೂಡ ಸರ್ಕಾರ ಪ್ರತಿಭಟನೆಗಳನ್ನು ನಿರ್ವಹಿಸಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗುರುವಾರದ ನಿಷೇಧಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ, ‘ಶಾಂತಿಯುತ ಪ್ರತಿಭಟನೆಗಳನ್ನು ನಿಷೇಧಾಜ್ಞೆ ಮೂಲಕ ಹತ್ತಿಕ್ಕುವುದು ಸರಿಯೇ?’ ಎಂದು ಪ್ರಶ್ನಿಸಿದೆ. ಅಲ್ಲದೆ, ‘ಪ್ರತಿಯೊಂದು ಪ್ರತಿಭಟನೆಯನ್ನೂ ನಿಷೇಧಾಜ್ಞೆ ಮೂಲಕ ತಡೆಯುತ್ತೀರಾ?’ ಎಂದೂ ಪ್ರಶ್ನಿಸಿದೆ. ಆ ಮೂಲಕ ಸರ್ಕಾರದ ದಮನ ನೀತಿಯ ಬಗ್ಗೆ ನ್ಯಾಯಾಂಗ ಕೂಡ ಸೂಚ್ಯವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ನಡುವೆ ಜನಾಕ್ರೋಶ ಮತ್ತಷ್ಟು ಭುಗಿಲೇಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಇದೀಗ ಸಿಎಎ ಮತ್ತು ಎನ್ಆರ್ ಸಿ ವಿಷಯದಲ್ಲಿ ಉಲ್ಟಾ ಹೊಡೆಯುತ್ತಿದ್ದು, ಸಿಎಎಗೂ ಎನ್ ಆರ್ ಸಿಗೂ ಸಂಬಂಧವಿಲ್ಲ. ದೇಶವ್ಯಾಪಿ ಸಿಎಎ ಜಾರಿಯೇ ವಿನಃ ಎನ್ ಆರ್ ಸಿ ಜಾರಿ ಮಾಡುವ ಯೋಚನೆ ಇಲ್ಲ ಎಂದು ಹೊಸ ರಾಗ ಹಾಡತೊಡಗಿದೆ. ಜೊತೆಗೆ, ಸಿಎಎ ಬಳಿಕ ಅದರ ಬೆನ್ನಲ್ಲೇ ಎನ್ ಆರ್ ಸಿ ಜಾರಿ ಮಾಡುವುದಾಗಿ ಹೇಳಿದ್ದ ತನ್ನ ಜನಪ್ರಿಯ ಟ್ವೀಟ್ ನ್ನು ಕೂಡ ಡಿಲೀಟ್ ಮಾಡಿದೆ. ಆದರೆ, ಸ್ವತಃ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸುಮಾರು ಐದಕ್ಕೂ ಹೆಚ್ಚು ಬಾರಿ ‘ಸಿಎಎ ಜಾರಿ ಮಾಡಿ, ನಂತರ ಎನ್ ಆರ್ ಸಿ ಜಾರಿಮಾಡುವ ಬಳಿಕ ದೇಶದ ಪ್ರತಿಯೊಬ್ಬ ಅಕ್ರಮ ವಲಸಿಗರನ್ನು ಹುಡುಕಿ ಹುಡುಕಿ ಹೊರಹಾಕುತ್ತೇವೆ’ ಎಂದು ಹೇಳಿರುವ ಟ್ವೀಟ್, ಹೇಳಿಕೆ ವೀಡಿಯೋ ಮತ್ತು ಸಂಸತ್ ಒಳಗಿನ ಹೇಳಿಕೆಗಳು ಈಗ ಚರ್ಚೆಗೆ ಗ್ರಾಸವಾಗಿವೆ.