ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ಎನ್ ಆರ್ ಸಿ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗಳು ಮುಂದುವರಿದಿವೆ. ಪ್ರತಿರೋಧದ ದನಿ ಗಟ್ಟಿಯಾಗುತ್ತಿರುವುದರ ಮುನ್ಸೂಚನೆ ಅರಿತ ಪ್ರಧಾನಿ ಮೋದಿ ‘ದೇಶವ್ಯಾಪಿ ಎನ್ ಆರ್ ಸಿ ವಿಷಯದಲ್ಲಿ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ. ದೇಶದ ನಾಗರಿಕರು ಭಯಪಡುವ ಅಗತ್ಯವಿಲ್ಲ. ಆ ಬಗ್ಗೆ ತಮ್ಮ ಸರ್ಕಾರ ಈವರೆಗೆ ಯಾವುದೇ ಚರ್ಚೆಯನ್ನು ಕೂಡ ಮಾಡಿಲ್ಲ. ಪ್ರತಿಪಕ್ಷಗಳು ಸುಳ್ಳಿನ ಕಂತೆ ಸೃಷ್ಟಿಸಿ ಜನರನ್ನು ದಾರಿತಪ್ಪಿಸಿವೆ’ ಎಂದಿದ್ದಾರೆ.
ಆದರೆ, ಸ್ವತಃ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಿಎಎ ಕಾಯ್ದೆಯ ಬಳಿಕ ದೇಶವ್ಯಾಪಿ ಎನ್ ಆರ್ ಸಿ ಜಾರಿ ಮಾಡುವ ಬಗ್ಗೆ ಮತ್ತೆ ಮತ್ತೆ ಸಾರ್ವಜನಿಕ ಸಭೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ, ಸಂದರ್ಶನಗಳಲ್ಲಿ, ಚುನಾವಣಾ ರ್ಯಾಲಿಗಳಲ್ಲಿ, ಅಷ್ಟೇ ಅಲ್ಲದೆ ಸಂಸತ್ತಿನಲ್ಲಿ ಕೂಡ ಖಡಾಖಂಡಿತವಾಗಿ ಹೇಳಿದ್ದಾರೆ. ಜಾರ್ಖಂಡ್ ಚುನಾವಣಾ ರ್ಯಾಲಿಯಲ್ಲಿ ಡಿಸೆಂಬರ್ 2ರಂದು ದೇಶವ್ಯಾಪಿ ಎನ್ ಆರ್ ಸಿ ಜಾರಿಗೆ 2024ರ ಡೆಡ್ಲೈನ್ ಕೂಡ ಘೋಷಿಸಿದರು. ಅದಕ್ಕೂ ಮುನ್ನ ಏಪ್ರಿಲ್ ನಲ್ಲಿಯೇ ಪಶ್ಚಿಮಬಂಗಾಳದ ಚುನಾವಣಾ ರ್ಯಾಲಿಯೊಂದರಲ್ಲಿ, ‘ಇಡೀ ದೇಶದಲ್ಲಿ ಎನ್ ಆರ್ ಸಿ ಜಾರಿ ಮಾಡೇ ಮಾಡುತ್ತೇವೆ., ದೇಶದೊಳಗಿನ ಪ್ರತಿಯೊಬ್ಬ ನುಸುಳುಕೋರರನ್ನೂ ಗುರುತಿಸಿಸುತ್ತೇವೆ. ಹಿಂದೂ, ಬೌದ್ಧ ಮತ್ತು ಸಿಖ್ಖರನ್ನು ಹೊರತುಪಡಿಸಿ ಉಳಿದ ನುಸುಳುಕೋರರನ್ನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತೇವೆ’ ಎಂದು ವೀರಾವೇಶದ ಭಾಷಣ ಮಾಡಿದ್ದರು.
ಅಮಿತ್ ಶಾ ಸರಣಿ ಹೇಳಿಕೆ, ಟ್ವೀಟ್ ಗಳ ಹೊರತಾಗಿಯೂ, ಸ್ವತಃ ರಾಜ್ಯಸಭೆಯಲ್ಲಿ ನೀಡಿದ ಅಧಿಕೃತ ಹೇಳಿಕೆಯ ಹೊರತಾಗಿಯೂ ಪ್ರಧಾನಿ ಮೋದಿಯವರು ತಮ್ಮ ಸರ್ಕಾರ ದೇಶವ್ಯಾಪಿ ಎನ್ ಆರ್ ಸಿ ಬಗ್ಗೆ ಮಾತೇ ಆಡಿಲ್ಲ ಎಂದಿರುವುದು ಅವರ ಸುಳ್ಳಿನ ಸರಮಾಲೆಗೆ ಮತ್ತೊಂದು ಆಘಾತಕಾರಿ ಸೇರ್ಪಡೆಯಾದಂತಾಗಿದೆ ಎಂಬ ಅಪಹಾಸ್ಯಕ್ಕೆ ಕಾರಣವಾಗಿದೆ.
ಈ ನಡುವೆ, 2021ರ ಜನಗಣತಿಯೊಂದಿಗೇ ಎನ್ ಪಿಆರ್ ದಾಖಲಾತಿ ಅಭಿಯಾನ ನಡೆಸಲು ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು, ಅದಕ್ಕಾಗಿ ಬರೋಬ್ಬರಿ 12,600 ಕೋಟಿ ರೂ. ಅನುದಾನ ನೀಡಲು ಕೂಡ ಒಪ್ಪಿಗೆ ಸೂಚಿಸಿದೆ. ಆ ಹಿನ್ನೆಲೆಯಲ್ಲಿ; ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ), ಭಾರತೀಯ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಐಸಿ), ಜನಸಂಖ್ಯಾ ನೋಂದಣಿ(ಪಿಆರ್), ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ಗಳ ಕುರಿತ ಗೊಂದಲಗಳೇನು? ಅವುಗಳ ನಡುವಿನ ವ್ಯತ್ಯಾಸವೇನು? ನಿಜಕ್ಕೂ ಎನ್ ಆರ್ ಸಿ ಮತ್ತು ಎನ್ ಪಿಆರ್ ಪ್ರಕ್ರಿಯೆ ದೇಶವ್ಯಾಪಿ ಈಗಾಗಲೇ ಚಾಲನೆ ಪಡೆದಿಲ್ಲವೇ? ಎಂಬ ಶಂಕೆಗಳು ಎಲ್ಲರನ್ನೂ ಕಾಡುತ್ತಿವೆ. ಸರ್ಕಾರದ ಚುಕ್ಕಾಣಿ ಹಿಡಿದವರ ವ್ಯತಿರಿಕ್ತ ಹೇಳಿಕೆಗಳು, ದಾರಿ ತಪ್ಪಿಸುವ ಮಾತುಗಳು ಮತ್ತು ಸರಣಿ ಸುಳ್ಳುಗಳ ಹಿನ್ನೆಲೆಯಲ್ಲಿ ಈ ಎಲ್ಲರದ ಕುರಿತ ವಾಸ್ತವಾಂಶಗಳನ್ನು ಜನರ ಮುಂದಿಡುವ ಪ್ರಯತ್ನ ಇಲ್ಲಿದೆ;
ಸರ್ಕಾರ ಮತ್ತು ಅಧಿಕಾರರೂಢರ ಹೇಳಿಕೆ ಮತ್ತು ವಾಸ್ತವಾಂಶಗಳನ್ನು, ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ, ಕಾನೂನು ಮತ್ತು ಕಾಯ್ದೆಗಳ ವಿವರಗಳೊಂದಿಗೆ ಮುಖಾಮುಖಿಯಾಗಿಸುವ ಒಂದು ಪ್ರಯತ್ನವನ್ನು ‘ಬ್ಯುಸಿನೆಸ್ ಟುಡೆ’ ದೈನಿಕ ಮಾಡಿದೆ. ಅದರ ಆಯ್ದಭಾಗವನ್ನು ‘ಸುಳ್ಳು ವರ್ಸಸ್ ವಾಸ್ತವಾಂಶ’ ಪಟ್ಟಿಯ ಮಾದರಿಯಲ್ಲಿ ನೀಡಲಾಗಿದೆ. ಜೊತೆಗೆ ಅಗತ್ಯ ದಾಖಲೆಗಳು ಮತ್ತು ವಿವರಗಳನ್ನೂ ಜೊತೆಗೆ ಸೇರಿಸಲಾಗಿದೆ. ಎನ್ ಆರ್ ಸಿ, ಸಿಎಎ, ಎನ್ ಪಿಆರ್, ಎನ್ ಆರ್ ಐಸಿ ಕುರಿತ ಹಲವು ಗೊಂದಲಗಳನ್ನು ನಿವಾರಿಸಲು ಇದು ನೆರವಾಗಲಿದೆ ಎಂಬ ಆಶಯ ನಮ್ಮದು.
ಸುಳ್ಳು: ರಾಷ್ಟ್ರವ್ಯಾಪಿ ಎನ್ ಆರ್ ಸಿಯನ್ನು ಇನ್ನೂ ಘೋಷಿಸಿಲ್ಲ.
ವಾಸ್ತವ: ಈಗಾಗಲೇ ಸರ್ಕಾರದ ಅಧಿಕೃತ ಗೆಜೆಟ್ ನಲ್ಲಿಯೇ ಆ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.
2019ರ ಜುಲೈ 31ರ ಗೆಜೆಟ್ ಅಧಿಸೂಚನೆಯ ಮೂಲಕ ಈಗಾಗಲೇ ರಾಷ್ಟ್ರವ್ಯಾಪಿ ಎನ್ ಆರ್ ಸಿ ತಯಾರಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಧಿಸೂಚನೆಯಲ್ಲಿ; “ಪೌರತ್ವ(ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ನಿಯಮಾವಳಿ, 2003ರ ನಿಯಮ 3ರ ಉಪ ನಿಯಮ (4)ದಡಿ ಜನಸಂಖ್ಯಾ ನೋಂದಣಿ(ಪಿಆರ್) ತಯಾರಿ ಮತ್ತು ಪರಿಷ್ಕರಣೆಗೆ ಈ ಮೂಲಕ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗೂ ಅಸ್ಸಾಂ ಹೊರತುಪಡಿಸಿ ದೇಶಾದ್ಯಂತ ಪಿಆರ್ ನೋಂದಣಿಗಾಗಿ ಮನೆಮನೆ ಸಮೀಕ್ಷೆ ನಡೆಸಿ ಸ್ಥಳೀಯ ನೋಂದಣಾಧಿಕಾರಿ(ಲೋಕಲ್ ರೆಜಿಸ್ಟ್ರಾರ್) ಕಾರ್ಯವ್ಯಾಪ್ತಿಯಲ್ಲಿ ನೆಲೆಸಿರುವ ವ್ಯಕ್ತಿಗಳ ಕುರಿತ ಸಂಪೂರ್ಣ ಮಾಹಿತಿ ಕಲೆಹಾಕಲು ನಿರ್ಧರಿಸಲಾಗಿದೆ. 2020ರ ಜೂನ್ 1ರಿಂದ ಸೆಪ್ಬೆಂಬರ್ 30ರ ನಡುವಿನ ಅವಧಿಯಲ್ಲಿ ಈ ನೋಂದಣಿ ಕಾರ್ಯ ದೇಶವ್ಯಾಪಿ ನಡೆಯಲಿದೆ” ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಗೆಜೆಟ್ನಲ್ಲಿ ಉಲ್ಲೇಖಿಸಿರುವ ಪೌರತ್ವ(ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ನಿಯಮಾವಳಿ, 2003ರ ನಿಯಮ 3, ಎನ್ ಆರ್ ಐಸಿ ಕುರಿತಾಗಿದ್ದು, ಅದರ ಉಪ ನಿಯಮ(4) ಎನ್ ಆರ್ ಐಸಿ ತಯಾರಿಯ ಕುರಿತಾಗಿದೆ. ಹಾಗಾಗಿ ಸಹಜವಾಗೇ ಈ ಅಧಿಸೂಚನೆ, ರಾಷ್ಟ್ರವ್ಯಾಪಿ ಎನ್ ಆರ್ ಸಿ ಕುರಿತ ಗೊಂದಲ, ತಪ್ಪು ಕಲ್ಪನೆಗಳನ್ನು ನಿವಾರಿಸಿ, ವಾಸ್ತವವಾಗಿ ಅಸ್ಸಾಂನಲ್ಲ ಬಳಸಲಾದ ‘ಎನ್ ಆರ್ ಸಿ’(ಅಸ್ಸಾಂ ಒಪ್ಪಂದ ಮತ್ತು ಸುಪ್ರೀಂಕೋರ್ಟ್ ಆದೇಶದ ಕಾರಣಕ್ಕೆ) ಎಂಬ ಹೆಸರಿನ ಬದಲಾಗಿ, ‘ಎನ್ ಆರ್ ಐಸಿ’ ಎಂಬ ಹೆಸರಿನಲ್ಲಿ ಜಾರಿಗೊಳಿಸಲಾಗಿದೆ.
ಸುಳ್ಳು: ಜನಸಂಖ್ಯಾ ನೋಂದಣಿ(ಪಿಆರ್) ಮತ್ತು ಎನ್ ಆರ್ ಐಸಿಗೆ ಪರಸ್ಪರ ಸಂಬಂಧವಿಲ್ಲ.
ವಾಸ್ತವ: ಅವೆರಡಕ್ಕೂ ಸಂಬಂಧವಿದೆ.
ಎನ್ ಆರ್ ಐಸಿ ತಯಾರಿಯ ನಿಟ್ಟಿನಲ್ಲಿ ಜನಸಂಖ್ಯಾ ನೋಂದಣಿ(ಪಿಆರ್) ಮೊದಲ ಹೆಜ್ಜೆ ಎಂದು ಗೆಜೆಟ್ ಅಧಿಸೂಚನೆಯಲ್ಲಿಯೇ ಹೇಳಲಾಗಿದೆ. 2003ರ ಪೌರತ್ವ ನಿಯಮಾವಳಿಯ ನಿಯಮ 3ರ ಉಪನಿಯಮ(5)ರ ಪ್ರಕಾರ, “ಭಾರತೀಯ ನಾಗರಿಕರ ಸ್ಥಳೀಯ ನೋಂದಣಿಯಲ್ಲಿ, ಜನಸಂಖ್ಯಾ ನೋಂದಣಿಯ ಆಧಾರದ ಮೇಲೆ ಪರಿಶೀಲನೆ ಮಾಡಿ ವ್ಯಕ್ತಿಗಳ ವಿವರಗಳನ್ನು ತುಂಬಬೇಕು”. ಅಂದರೆ ಪಿಆರ್ ಆಧಾರವಾಗಿಟ್ಟುಕೊಂಡೇ ಎನ್ ಆರ್ ಐಸಿ ಸಿದ್ಧಪಡಿಸಬೇಕು. ಎನ್ ಆರ್ ಐಸಿ ತಯಾರಿಯ ನಿಟ್ಟಿನಲ್ಲಿ ಪಿಆರ್ ಮೊದಲ ಹೆಜ್ಜೆ ಎನ್ನುತ್ತದೆ.
ಹಾಗಾದರೆ ಜನಸಂಖ್ಯಾ ನೋಂದಣಿ(ಪಿಆರ್) ಮತ್ತು ಎನ್ ಆರ್ ಐಸಿ ನಡುವಿನ ವ್ಯತ್ಯಾಸವೇನು?
ಪೌರತ್ವ ನಿಯಮಾವಳಿ 2003ರ ಪ್ರಕಾರ, ‘ಜನಸಂಖ್ಯಾ ನೋಂದಣಿ(ಪಿಆರ್) ಎಂದರೆ ಒಂದು ಗ್ರಾಮ ಅಥವಾ ಗ್ರಾಮೀಣ ಪ್ರದೇಶ ಅಥವಾ ಪಟ್ಟಣ, ವಾರ್ಡ್ ಅಥವಾ ನಗರ ಅಥವಾ ನಗರ ಪ್ರದೇಶದ ನಿಗದಿತ ಪ್ರದೇಶ(ನಾಗರಿಕ ನೋಂದಣಿ ರಿಜಿಸ್ಟ್ರಾರ್ ಜನರಲ್ ನಿಗದಿಪಡಿಸಿದ)ದಲ್ಲಿ ವಾಸಿಸುವ ವ್ಯಕ್ತಿಯ ಕುರಿತ ವಿವರ ಮಾಹಿತಿಯನ್ನು ಒಳಗೊಂಡ ದಾಖಲೆ’.
ಎನ್ಆರ್ ಐಸಿ ಎಂದರೆ; ‘ಭಾರತದಲ್ಲಿ ಮತ್ತು ದೇಶದ ಹೊರಗೆ ನೆಲೆಸಿರುವ ಭಾರತೀಯರ ಮಾಹಿತಿಯನ್ನು ಒಳಗೊಂಡಿರುವ ದಾಖಲೆ’. ಎನ್ಆರ್ ಐಸಿಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು; ಎ) ಭಾರತೀಯ ನಾಗರಿಕರ ರಾಜ್ಯ ದಾಖಲೆ, ಬಿ) ಭಾರತೀಯ ನಾಗರಿಕರ ಜಿಲ್ಲಾ ದಾಖಲೆ, ಸಿ) ಭಾರತೀಯ ನಾಗರಿಕರ ಉಪ ವಿಭಾಗ ದಾಖಲೆ ಮತ್ತು ಡಿ) ಭಾರತೀಯ ನಾಗರಿಕರ ಸ್ಥಳೀಯ ದಾಖಲೆ ಎಂದು ವಿಂಗಡಿಸಲಾಗಿದೆ. ಈ ದಾಖಲೆಗಳಲ್ಲಿ “ನಾಗರಿಕರ ನೋಂದಣಿಯ ರೆಜಿಸ್ಟ್ರಾರ್ ಜನರಲ್ ಅವರೊಂದಿಗೆ ಸಮಾಲೋಚನೆ ಮೂಲಕ ಭಾರತದ ಕೇಂದ್ರ ಸರ್ಕಾರ ಬಯಸುವ ಮಾಹಿತಿ ಅಡಕವಾಗಿರಬೇಕು(ನಿಯಮ 3) ” ಎಂಬುದು ಪೌರತ್ವ ನಿಯಮಾವಳಿ 2003ರ ಸ್ಪಷ್ಟ ನಿರ್ದೇಶನ.
ಜನಸಂಖ್ಯಾ ನೋಂದಣಿ(ಪಿಆರ್) ಎನ್ ಆರ್ ಐಸಿಯಾಗಿ ಪರಿವರ್ತನೆಯಾಗುವುದು ಹೇಗೆ?
ಪೌರತ್ವ ನಿಯಮಾವಣಿ-2003ರ ನಿಯಮ 4ರ ಉಪನಿಯಮ 3ರ ಪ್ರಕಾರ; ಭಾರತೀಯ ನಾಗರಿಕರ ಸ್ಥಳೀಯ ನೋಂದಣಿ ದಾಖಲೆ ಸಿದ್ಧಪಡಿಸಲು ಅಥವಾ ಹೆಸರು ಸೇರ್ಪಡೆಗೆ ಮುನ್ನ ಪ್ರತಿ ವ್ಯಕ್ತಿ ಮತ್ತು ಕುಟುಂಬದ ಕುರಿತು ಜನಸಂಖ್ಯಾ ನೋಂದಣಿ(ಪಿಆರ್)ನಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಪರಿಶೀಲನೆ ನಡೆಸಬೇಕು. ಆ ಕಾರ್ಯವನ್ನು ಸ್ಥಳೀಯ ನೋಂದಣಾಧಿಕಾರಿಯೇ ಖುದ್ದು ಮಾಡಬೇಕು. ನಾಗರಿಕ ನೋಂದಣಿಯ ರಿಜಿಸ್ಟ್ರಾರ್ ಜನರಲ್ ಸೂಚನೆಯಂತೆ, ಸ್ಥಳೀಯ ನೋಂದಣಾಧಿಕಾರಿಗೆ ನೆರವಾಗಲು ಒಬ್ಬರು ಅಥವಾ ಇಬ್ಬರು ಸಹಾಯಕರನ್ನು ನೇಮಕ ಮಾಡಬಹುದು.
ಅಂದರೆ, ತಳಮಟ್ಟದಲ್ಲಿ ಎನ್ ಆರ್ ಐಸಿ ತಯಾರಿಸುವ ಮುನ್ನ ಪಿಆರ್ ದಾಖಲೆಯನ್ನೇ ಆಧಾರವಾಗಿಟ್ಟುಕೊಳ್ಳಬೇಕು ಮತ್ತು ಅದಕ್ಕೂ ಮುನ್ನ ಆ ಸ್ಥಳೀಯ ಪಿಆರ್ ದಾಖಲೆಯನ್ನು ಖುದ್ದು ಸ್ಥಳೀಯ ನೋಂದಣಾಧಿಕಾರಿಯೇ ಪರಿಶೀಲನೆ ನಡೆಸಿ ಅಂತಿಮಗೊಳಿಸಿರಬೇಕು. ಅಂದರೆ, ಸ್ಥಳೀಯ ನೋಂದಣಾಧಿಕಾರಿ ಪರಿಶೀಲನೆ ನಡೆಸಿ ಅಂತಿಮಗೊಳಿಸಿದ ಬಳಿಕ ಪಿಆರ್ ಎಂಬುದು, ತಾನೇತಾನಾಗಿ ಎನ್ಆರ್ ಐಸಿಯಾಗಿ ಪರಿವರ್ತನೆಯಾಗಲಿದೆ!
‘ಅನುಮಾನಾಸ್ಪದ ಪೌರತ್ವ’ವನ್ನು ಗುರುತಿಸುವ ಮತ್ತು ಪರಿಶೀಲಿಸುವ ಕುರಿತ ಪ್ರಕ್ರಿಯೆ ಏನು?
ಪೌರತ್ವ ನಿಯಮಾವಳಿ 2003ರ ನಿಯಮ 4ರ ಉಪನಿಯಮ 4ರ ಪ್ರಕಾರ; “ಪರಿಷ್ಕರಣೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ‘ಯಾವುದೇ ವ್ಯಕ್ತಿಯ ಪೌರತ್ವ ಶಂಕಾಸ್ಪದ ಎಂದು ಕಂಡುಬಂದಲ್ಲಿ ಅಲ್ಲಿನ ಸಂಬಂಧಪಟ್ಟ ಸ್ಥಳೀಯ ನೋಂದಣಾಧಿಕಾರಿಯು, ಜನಸಂಖ್ಯಾ ನೋಂದಣಿ ದಾಖಲೆಯಲ್ಲಿ(ಪಿಆರ್) ಮುಂದಿನ ವಿಚಾರಣೆಗೆ ಸೂಚಿಸಿ ನಿಗದಿತ ಷರಾ ಬರೆಯಬೇಕು. ಹಾಗೂ ಅಂತಹ ಶಂಕಾಸ್ಪದ ಪೌರತ್ವ ಪ್ರಕರಣದಲ್ಲಿ, ಪರಿಶೀಲನೆ ಪ್ರಕ್ರಿಯೆ ಮುಕ್ತಾಯವಾದ ಕೂಡಲೇ ಆ ವ್ಯಕ್ತಿ ಅಥವಾ ಆತನ ಕುಟುಂಬದವರಿಗೆ ನಿಗದಿತ ಪ್ರೋಫಾರ್ಮದಲ್ಲಿ(ನಮೂನೆ) ಮಾಹಿತಿ ನೀಡಬೇಕು”.
ಅಂದರೆ; ಯಾವುದೇ ವ್ಯಕ್ತಿಯ ಪೌರತ್ವದ ಬಗ್ಗೆ ಅನುಮಾನ ಉಂಟಾದಲ್ಲಿ; ಅಥವಾ ಮಾಹಿತಿ ತಾಳೆಯಾಗದೇ ಹೋದಲ್ಲಿ ಅಂಥವರನ್ನು “ಶಂಕಾಸ್ಪದ ಪೌರರು” ಎಂದು ಪಿಆರ್ ದಾಖಲೆಯಲ್ಲಿ ಪರಿಗಣಿಸಲಾಗುತ್ತದೆ ಮತ್ತು ಆ ಬಗ್ಗೆ ಅವರಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಲಾಗುತ್ತದೆ.
ಆದರೆ, ಈ ಹಂತದಲ್ಲಿ ಇಡೀ ಈ ಪ್ರಕ್ರಿಯೆಯ ಅಪಾಯಕಾರಿ ಮಜಲು ತೆರೆದುಕೊಳ್ಳುತ್ತದೆ. ಹೀಗೆ ಒಬ್ಬ ವ್ಯಕ್ತಿಯನ್ನು ಅನುಮಾನಾಸ್ಪದ ಅಥವಾ ಶಂಕಾಸ್ಪದ ವ್ಯಕ್ತಿ ಎಂದು ನಿರ್ಧರಿಸುವಾಗ ಯಾವೆಲ್ಲಾಅಂಶಗಳನ್ನು ಪರಿಗಣಿಸಲಾಗುತ್ತದೆ ಮತ್ತು ಯಾವ ಮಾನದಂಡದ ಮೇಲೆ ಆತ ಅಥವಾ ಆಕೆಯ ಪೌರತ್ವವನ್ನು ಶಂಕಾಸ್ಪದ ಎಂದು ನಿರ್ಧರಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಮತ್ತು ಅಂಥವರಿಗೆ ನೀಡುವ ನಿಗದಿತ ನಮೂನೆಯಲ್ಲಿ ಏನೆಲ್ಲಾ ಅಂಶಗಳಿರುತ್ತವೆ ಎಂಬುದು ಕೂಡ ಈವರೆಗೆ ಸಾರ್ವಜನಿಕ ಮಾಹಿತಿ ವಲಯದಲ್ಲಿ ಲಭ್ಯವಿಲ್ಲ. ಆ ಹಿನ್ನೆಲೆಯಲ್ಲಿಯೇ ಕೊಲ್ಕತ್ತಾ ಹೈಕೋರ್ಟಿನಲ್ಲಿ ಈ ಎನ್ ಆರ್ ಐಸಿ ಮತ್ತು ಆ ಕುರಿತ ಗೆಜೆಟ್ ಅಧಿಸೂಚನೆ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.
ಸುಳ್ಳು: ಪಿಆರ್/ ಎನ್ ಪಿ ಆರ್ ಮತ್ತು ಎನ್ ಆರ್ ಐಸಿಗಳು 2021ರ ಜನಗಣತಿಯ ಭಾಗ.
ವಾಸ್ತವ: ಅಲ್ಲ; ಜನಗಣತಿ ಬೇರೆಯೇ.
ಎನ್ ಆರ್ ಐಸಿಯ ಪ್ರಕ್ರಿಯೆಯಲ್ಲಿ ಅಂತಿಮ ಹಂತವಾಗಿ ಉಪ ವಿಭಾಗ ಅಥವಾ ತಾಲೂಕು ಮಟ್ಟದಲ್ಲಿ ಭಾರತೀಯ ನಾಗರಿಕರ ಸ್ಥಳೀಯ ನೋಂದಣಿ ದಾಖಲೆಯ ಕರಡು ಪ್ರಕಟಿಸಿ, ಅದಕ್ಕೆ ಆಕ್ಷೇಪ ಅಥವಾ ತಿದ್ದುಪಡಿಗಳನ್ನು ಆಹ್ವಾನಿಸಲಾಗುತ್ತದೆ.
ಆದರೆ, ಜನಗಣತಿಯಲ್ಲಿ ಜನರ ಹೆಸರು, ವಿಳಾಸ ಮತ್ತಿತರ ವಿವರಗಳನ್ನು ಎಲ್ಲೂ ಪ್ರಕಟಿಸಲಾಗುವುದಿಲ್ಲ ಮತ್ತು ಬೇರಾವುದೇ ಉದ್ದೇಶಕ್ಕೆ ಬಳಸುವುದಿಲ್ಲ. ಅಲ್ಲದೆ ಜನಗಣತಿಯನ್ನು 1948ರ ಜನಗಣತಿ ಕಾಯ್ದೆಯ ಪ್ರಕಾರ ನಡೆಸಿದರೆ, ಪಿಆರ್. ಎನ್ ಪಿಆರ್ ಮತ್ತು ಎನ್ಆರ್ ಐಸಿಯನ್ನು ಪೌರತ್ವಕಾಯ್ದೆ-1955 ಮತ್ತು ಪೌರತ್ವ ತಿದ್ದುಪಡಿ ಕಾಯ್ದ- 2003ರ ಅಡಿ ನಡೆಸಲಾಗುತ್ತದೆ.
ಸುಳ್ಳು: ಪಿಆರ್/ ಎನ್ ಪಿಆರ್ ಮತ್ತು ಎನ್ ಆರ್ ಐಸಿಯನ್ನು ಯುಪಿಎ ಸರ್ಕಾರ ಆರಂಭಿಸಿತು.
ವಾಸ್ತವ: ವಾಜಪೇಯಿ ಸರ್ಕಾರದ ಅವಧಿಯಲ್ಲಿ ನಡೆದ 2003ರ ತಿದ್ದುಪಡಿ ಕಾಯ್ದೆಯ ಪ್ರಕಾರ ಆರಂಭವಾದವು.
2003ರಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಧಾನಿ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ, 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಪೌರತ್ವ ತಿದ್ದುಪಡಿ ಕಾಯ್ದೆ-2003ರನ್ನು ರಚಿಸಲಾಯಿತು. ಹಳೆಯ ಕಾಯ್ದೆಗೆ ‘ಅಕ್ರಮ ವಲಸಿಗ’ ಮತ್ತು ‘ಎನ್ ಆರ್ ಐಸಿ’ ಅಂಶಗಳನ್ನು ಹೊಸದಾಗಿ ಸೇರಿಸುವ ಮೂಲಕ ಆ ತಿದ್ದುಪಡಿ ತರಲಾಯಿತು.
2010-11ರಲ್ಲಿ ಎನ್ ಆರ್ ಐಸಿ ಪ್ರಕ್ರಿಯೆಯನ್ನು ಆರಂಭಿಸಲು ಪ್ರಯತ್ನಿಸಲಾಯಿತಾದರೂ, ಅಂದಿನ ಯುಪಿಎ ಸರ್ಕಾರ ಅಷ್ಟರಲ್ಲಿ ಆಧಾರ್ ಯೋಜನೆ ಕೈಗೆತ್ತಿಕೊಂಡಿದ್ದರಿಂದ ಆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. ಬಳಿಕ 2015ರಲ್ಲಿ ನರೇಂದ್ರ ಮೋದಿಯ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಎನ್ ಆರ್ ಐಸಿ ಪ್ರಕ್ರಿಯೆಗೆ ಚಾಲನೆ ನೀಡಿದರೂ, ಆಗಲೂ ಅದು ಪ್ರಗತಿ ಕಾಣಲಿಲ್ಲ.
ಈ ನಡುವೆ ಕುತೂಹಲಕಾರಿ ಸಂಗತಿ ಎಂದರೆ, 2003ರ ತಿದ್ದುಪಡಿಯ ಬಳಿಕ, ಈಗಲೂ ಕೂಡ ಪೌರತ್ವ ಕಾಯ್ದೆಯಲ್ಲಿ ಜನಸಂಖ್ಯಾ ನೋಂದಣಿ(ಪಿಆರ್) ಅಥವಾ ಎನ್ ಪಿಆರ್ ಬಗ್ಗೆ ಯಾವುದೇ ಪ್ರಸ್ತಾಪವೇ ಇಲ್ಲ! ಕಾಯ್ದೆಯಲ್ಲಿನ ಈ ಲೋಪವನ್ನೇ ಮುಂದಿಟ್ಟುಕೊಂಡೇ ಪಶ್ಚಿಮಬಂಗಾಳದ ನಾಗರಿಕ ಹಕ್ಕು ಸಂಘಟನೆಯ ರಂಜಿತ್ ಸುರ್ ಅವರು 2021ರ ಜನಗಣತಿಯ ವೇಷತೊಟ್ಟು ಹೇಗೆ ಎನ್ ಆರ್ ಐಸಿ ಸಂವಿಧಾನಬಾಹಿರವಾಗಿ ಜಾರಿಗೆ ತರಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಸುಳ್ಳು: ಎನ್ ಪಿಆರ್, ಎನ್ ಆರ್ ಸಿ ಮತ್ತು ಸಿಸಿಎ ನಡುವೆ ಯಾವುದೇ ಸಂಬಂಧವಿಲ್ಲ.
ವಾಸ್ತವ: ಅವಲ್ಲವೂ ಪರಸ್ಪರ ನಂಟು ಹೊಂದಿವೆ ಮತ್ತು ಮುಸ್ಲಿಮರನ್ನು ಪ್ರತ್ಯೇಕಿಸುವ ಸಾಮರ್ಥ್ಯ ಹೊಂದಿವೆ.
ಇದೀಗ ಭಾರೀ ಜನಾಕ್ರೋಶಕ್ಕೆ ಮಣಿದು ಗೃಹ ಸಚಿವ ಅಮಿತ್ ಶಾ ಅವರು, ಸಿಸಿಎ ಮತ್ತು ಎನ್ ಆರ್ ಸಿ ಪರಸ್ಪರ ನಂಟು ಕುರಿತ ತಮ್ಮ ಹೇಳಿಕೆಗಳ ವಿಷಯದಲ್ಲಿ ಇದೀಗ ಉಲ್ಟಾ ಹೊಡೆಯತೊಡಗಿದ್ದಾರೆ. ಆದರೆ, ಅವರೇ ಹಲವು ಬಾರಿ ಆ ಎರಡೂ ಒಂದಕ್ಕೊಂದು ಪೂರಕ ಎಂಬುದನ್ನು ಹೇಳಿದ್ದಾರೆ. ಅದರ ಹೊರತಾಗಿಯೂ 2003ರ ತಿದ್ದುಪಡಿ(ಸಿಎಎ 2003) ಮೂಲಕ ಹಳೆಯ ಪೌರತ್ವ ಕಾಯ್ದೆಯೆ ‘ಅಕ್ರಮ ವಲಸಿಗ’ ಮತ್ತು ‘ಎನ್ ಆರ್ ಐಸಿ’ ಎಂಬ ಅಂಶಗಳನ್ನು ಸೇರಿಸಿದ ಕ್ಷಣದಿಂದಲೇ ಸಿಎಎ ಮತ್ತು ಎನ್ ಆರ್ ಸಿ ಹಾಗೂ ಪಿಆರ್, ಎನ್ ಪಿಆರ್, ಎನ್ ಆರ್ ಸಿ ಮತ್ತು ಎನ್ ಆರ್ ಐಸಿಗಳ ನಡುವಿನ ಪರಸ್ಪರ ನಂಟು ಕೂಡ ಆರಂಭವಾಯಿತು.
ಜಿಲ್ಲಾಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಕಳಿಸಿರುವ ಸೂಚನೆಗಳಲ್ಲಿ ಒಳಗೊಂಡಿರುವ ಕೆಲವು ದಾಖಲೆಗಳು ಮತ್ತು ನಮೂನೆಗಳಲ್ಲಿ ಇರುವ ವಿವರಗಳು, ಎನ್ ಪಿಆರ್ 2020 ಸಮೀಕ್ಷೆಯ ವೇಳೆ ಜನರಿಂದ ಯಾವೆಲ್ಲಾ ಮಾಹಿತಿಯನ್ನು ಪಡೆಯಬೇಕು ಎಂಬುದನ್ನು ಹೇಳಿವೆ.
ಆ ಪೈಕಿ ಪುಟ ಸಂಖ್ಯೆ 2ರಲ್ಲಿ 3ನೇ ಕಾಲಂನಡಿ ಕೇಳಿರುವ ಮಾಹಿತಿ ಕುತೂಹಲಕಾರಿಯಾಗಿದೆ. ಅದೆಂದರೆ; “ನೋಂದಣಿ ಮಾಡಿಕೊಳ್ಳುವ ವ್ಯಕ್ತಿಯ ಜನ್ಮ ದಿನಾಂಕ ಮತ್ತು ಸ್ಥಳದ ಮಾಹಿತಿಯಲ್ಲದೆ, ಆತನ ತಂದೆ ಮತ್ತು ತಾಯಿಯ ಹುಟ್ಟಿದ ದಿನಾಂಕ ಮತ್ತುಸ್ಥಳದ ಮಾಹಿತಿಯನ್ನು ಕರಾರುವಾಕ್ಕಾಗಿ ನೀಡಬೇಕಿದೆ. ಅವರು ಭಾರತದಲ್ಲೇ ಹುಟ್ಟಿದ್ದರೆ, ಹುಟ್ಟಿದ ರಾಜ್ಯ ಮತ್ತು ಜಿಲ್ಲೆಯ ಹೆಸರು ನಮೂದು ಮಾಡಬೇಕು. ಇಲ್ಲವೇ ದೇಶದ ಹೊರಗಿ ಜನಿಸಿದ್ದರೆ ದೇಶದ ಹೆಸರು ಮಾತ್ರ ಬರೆದು ಜಿಲ್ಲೆಯ ಮಾಹಿತಿ ತುಂಬುವ ಜಾವನ್ನು ಖಾಲಿ ಬಿಡಬಹುದು”.
ಎನ್ ಪಿಆರ್ ಪ್ರಕ್ರಿಯೆ ದೇಶದಲ್ಲಿ ಈಗಾಗಲೇ ಆರಂಭವಾಗಿದ್ದು, 2019ರ ಜುಲೈ 31ರಂದು ಆ ಕುರಿತ ಗೆಜೆಟ್ ಅಧಿಸೂಚನೆ ಹೊರಬಿದ್ದ ಬಳಿಕ, ಅಕ್ಟೋಬರಿನಲ್ಲಿಯೇ ದೇಶದ 1200 ಹಳ್ಳಿಗಳು ಮತ್ತು 40 ನಗರ ಮತ್ತು ಪಟ್ಟಣಗಳಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಈಗಾಗಲೇ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಈ ನಡುವೆ ರಾಷ್ಟ್ರಮಟ್ಟದ ತರಬೇತುದಾರರ ತರಬೇತಿ ಕಾರ್ಯ ಕೂಡ ಆರಂಭವಾಗಿದೆ. 2020ರ ಏಪ್ರಿಲ್ 1ರಿಂದ ಅಂತಿಮವಾಗಿ ಎನ್ ಆರ್ ಐಸಿ/ ಎನ್ ಪಿಆರ್ ಮಾಹಿತಿ ಸಂಗ್ರಹ ಕಾರ್ಯ ಅಧಿಕೃತವಾಗಿ ದೇಶಾದ್ಯಂತ ಆರಂಭವಾಗಲಿದೆ. ಹಾಗಾಗಿ ಯಾರಾದರೂ ಎನ್ ಪಿಆರ್ ಅಥವಾ ಎನ್ ಆರ್ ಐಸಿ/ ಎನ್ ಆರ್ ಸಿ ಪ್ರಕ್ರಿಯೆ ದೇಶದಲ್ಲಿ ಜಾರಿಗೆ ಬಂದಿಲ್ಲ, ಆ ಬಗ್ಗೆ ಸರ್ಕಾರ ಮಾತನ್ನೇ ಆಡಿಲ್ಲ, ಚರ್ಚೆಯನ್ನೇ ಮಾಡಿಲ್ಲ ಎಂದರೆ ಅದು ಶುದ್ಧ ಹಸೀ ಸುಳ್ಳು. ಇಡೀ ಆ ಪ್ರಕ್ರಿಯೆ ಈಗಾಗಲೇ ಆರಂಭವಾಗಿ ಆರು ತಿಂಗಳು ಕಳೆದಿದೆ. ಮನೆಮನೆ ಸಮೀಕ್ಷೆ ಇನ್ನೇನೂ ಏಪ್ರಿಲ್ ನಿಂದ ಆರಂಭವಾಗಲಿದೆ.