ಪೌರತ್ವ ತಿದ್ದುಪಡಿ ಕಾಯ್ದೆಯ ವಿಷಯದಲ್ಲಿ ಬಿಜೆಪಿ ಮತ್ತು ಅದರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿಭಟನೆ, ಪ್ರತಿರೋಧವನ್ನು ಹತ್ತಿಕ್ಕುವ ಸರ್ವಾಧಿಕಾರಿ ವರಸೆ ಮುಂದುವರಿದಿರುವಾಗಲೇ, ಆ ಕಾಯ್ದೆಯನ್ನು ವಿರೋಧಿಸುತ್ತಿರುವ ದೇಶದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ ಸಿಪಿಐನ ಬೆಂಗಳೂರು ಕಚೇರಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ.
ಮಂಗಳವಾರ ತಡರಾತ್ರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಘಾಟೆ ಭವನಕ್ಕೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದ್ದು, ಅಷ್ಟರಲ್ಲಿ ಕಚೇರಿಯ ಕಾವಲು ಸಿಬ್ಬಂದಿ ಎಚ್ಚರಗೊಂಡು ಧಾವಿಸಿದ್ದರಿಂದ ಬಾಗಿಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಆ ಮುನ್ನ ಕಚೇರಿಯ ಆವರಣದಲ್ಲಿ ನಿಂತಿದ್ದ ದ್ವಿಚಕ್ರವಾಹನಗಳಿಗೆ ಬೆಂಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಆದರೆ, ಈ ಘಟನೆಯ ಸಂದರ್ಭ ಮತ್ತು ಹಿನ್ನೆಲೆಯನ್ನು ಗಮನಿಸಿದರೆ; ಇದೊಂದು ಮಾಮೂಲಿ ಸಿದ್ಧಾಂತ ಸಂಘರ್ಷದ ಘಟನೆ ಎನಿಸುವುದಿಲ್ಲ. ಪಕ್ಕದ ಕೇರಳದಲ್ಲಿ ಭಿನ್ನ ಸಿದ್ಧಾಂತಗಳ ರಾಜಕೀಯ ಪಕ್ಷಗಳ ನಡುವೆ ಇಂತಹ ಸಂಘರ್ಷಗಳು, ಹಿಂಸಾಚಾರ, ಗಲಭೆಗಳು ಸಾಮಾನ್ಯ. ಆದರೆ, ಕರ್ನಾಟಕದ ಮಟ್ಟಿಗೆ ಇದು ಹೊಸತು. ಅದರಲ್ಲೂ ಪೌರತ್ವ ತಿದ್ದುಪಡಿಯಂತಹ ಜನವಿರೋಧಿ ಕಾಯ್ದೆಯನ್ನು ಆಳುವ ಪಕ್ಷ ಹಠಕ್ಕೆ ಬಿದ್ದು ಜಾರಿ ಮಾಡುತ್ತಿರುವುದು, ದೇಶದ ಸಂವಿಧಾನದ ಮೂಲ ಆಶಯವನ್ನೇ ಗಾಳಿಗೆ ತೂರಿ, ಮನುವಾದಿ ಸಿದ್ಧಾಂತದ ತನ್ನ ಕೋಮುವಾದಿ ಅಜೆಂಡಾವನ್ನು ಕಾಯ್ದೆಯ ಮೂಲಕ ದೇಶದ ಜನರ ಆಶಯಕ್ಕೆ ವಿರುದ್ಧವಾಗಿ ಹೇರುತ್ತಿರುವುದನ್ನು ಪ್ರಶ್ನಿಸಿ ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿರುವಾಗ, ಅಂತಹ ಹೋರಾಟದ ಪ್ರಮುಖ ಪಾಲುದಾರ ಪಕ್ಷವೊಂದರ ಕಚೇರಿಗೆ ಬೆಂಕಿ ಹಚ್ಚುವ ಯತ್ನ ನಡೆದಿದೆ ಎಂದರೆ ಅದು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಲುಪಿರುವ ಅಧೋಗತಿ ಮತ್ತು ದೇಶದ ಚುಕ್ಕಾಣಿ ಹಿಡಿದ ಶಕ್ತಿಗಳ ಸರ್ವಾಧಿಕಾರಿ ಧೋರಣೆಯ ಬಗ್ಗೆಕನ್ನಡಿಯಾಗದೇ ಇರದು.
ಹಾಗೇ, ಒಂದು ಕಾಯ್ದೆಯನ್ನು ವಿರೋಧಿಸಿದ, ಒಂದು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲುವ ಪೊಲೀಸರ ವರ್ತನೆಯಂತೆಯೇ, ಒಂದು ಪಕ್ಷದ ಕಚೇರಿಗೆ ಬೆಂಕಿ ಹಚ್ಚುವುದು ಕೂಡ ಅಸಹನೆಯ, ದಬ್ಬಾಳಿಕೆಯ ಮತ್ತು ಸರ್ವಾಧಿಕಾರಿ ಠೇಂಕಾರದ ವರ್ತನೆಯಲ್ಲದೆ ಬೇರಲ್ಲ. ಅದರಲ್ಲೂ ಬೆಂಗಳೂರು ಮತ್ತು ಮಂಗಳೂರಿನ ಪ್ರತಿಭಟನೆಗಳ ವೇಳೆ ಕಳೆದ ವಾರ, ಸಿಪಿಐ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದರು. ಎಡಪಕ್ಷಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಎಲ್ಲಾ ಭೇದ ಮರೆತು ಸಂವಿಧಾನದ ಪರ ದನಿ ಎತ್ತಿದ್ದರು. ಯುವಜನರ ಆಕ್ರೋಶಕ್ಕೆ ದನಿಯಾಗಿದ್ದರು. ಆ ಹಿನ್ನೆಲೆಯಲ್ಲಿ ನೋಡಿದರೆ, ಈ ಬೆಂಕಿ ಘಟನೆ ಎಷ್ಟು ಹತಾಶೆಯ ಹೀನಾಯ ಕೃತ್ಯ ಎಂಬುದು ಮನವರಿಕೆಯಾಗದೇ ಇರದು.
ಸಿಪಿಐ ರಾಜ್ಯ ಮುಖಂಡರು ಕೂಡ ಇದೇ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಪೌರತ್ವತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಎದುರಿಸಲಾಗದ ಶಕ್ತಿಗಳು ಇಂತಹ ಹೀನ ಕೃತ್ಯಗಳ ಮೂಲಕ ಭಿನ್ನ ದನಿಗಳನ್ನು ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆ. ಆದರೆ, ಇಂತಹ ಕೃತ್ಯಗಳಿಗೆ ನಾವು ಜಗ್ಗುವುದಿಲ್ಲ ಎಂದು ಸಿಪಿಐ ನಾಯಕರು ಹೇಳಿದ್ದಾರೆ.
ಹೌದು, ಪ್ರತಿಪಕ್ಷಗಳ ಕಚೇರಿಗೆ ಬೆಂಕಿ ಹಚ್ಚುವುದು, ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸುವುದು, ಪ್ರತಿಭಟನಾಕಾರರಿಗೆ ವೈಯಕ್ತಿಕ ಬೆದರಿಕೆ ಹಾಕುವುದು, ಅವರ ಮೇಲೆ ಬೇಹುಗಾರಿಕೆ ನಡೆಸುವುದು, ಇಂಟರ್ ನೆಟ್ ಸ್ಥಗಿತಗೊಳಿಸುವುದು, ನಿಷೇಧಾಜ್ಞೆ ಹೇರುವುದು ಸೇರಿದಂತೆ ಯಾವೆಲ್ಲಾ ಕುತಂತ್ರ ಮತ್ತು ದಬ್ಬಾಳಿಕೆಯ ಕ್ರಮಗಳನ್ನು ಅನುಸರಿಸಿದರೂ ಕಳೆದ ಹದಿನೈದು ದಿನಗಳಲ್ಲಿ ದೇಶವ್ಯಾಪಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಹೇಗೆ ಹಬ್ಬಿದೆ ಎಂಬುದು ನಮ್ಮ ಕಣ್ಣ ಮುಂದಿದೆ. ಜನರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುವ ಆಳುವ ಸರ್ಕಾರಗಳ ಕ್ರಮಕ್ಕೆ ಜನ ತಮ್ಮ ಜೀವ ಪಣಕ್ಕಿಟ್ಟು ಪ್ರತ್ಯುತ್ತರ ಕೊಡುತಿದ್ದಾರೆ.
ಆದರೆ, ಇಂತಹ ಹೋರಾಟದ ಸಂದರ್ಭದಲ್ಲಿ; ಶಾಂತಿಯುತ ಹೋರಾಟದಲ್ಲಿ ಭಾಗಿಯಾದ ಪ್ರಮುಖರು, ಮತ್ತು ಸಂಘಟನೆ ಮತ್ತು ರಾಜಕೀಯ ಪಕ್ಷಗಳ ಕಚೇರಿಗಳಿಗೆ ಅಪಾಯ ಎದುರಾಗಬಹುದು ಎಂಬ ಸಣ್ಣ ಮುಂಜಾಗ್ರತೆಯನ್ನೂ ಬೆಂಗಳೂರು ಪೊಲೀಸರು ವಹಿಸಲಿಲ್ಲ ಏಕೆ ಎಂಬ ಪ್ರಶ್ನೆ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಅದರಲ್ಲೂ, ಎನ್ ಆರ್ ಸಿ ಮತ್ತು ಸಿಎಎ ಕಾಯ್ದೆಯ ವಿರೋಧಿ ಹೋರಾಟ ಬೆಂಗಳೂರಿನಲ್ಲಿ ಭುಗಿಲೇಳುವ ಮುನ್ನಾ ದಿನ ಬೆಂಗಳೂರು ಪೊಲೀಸ್ ಆಯುಕ್ತರು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ನೋಡಿದರೆ ಬೇರೆಯದೇ ಪ್ರಶ್ನೆಗಳು ಮತ್ತಷ್ಟು ಎದ್ದುಕೂರುತ್ತವೆ. ‘ಸಿಎಎ ವಿರುದ್ಧ ಹೋರಾಟಕ್ಕೆ ಬೆಂಗಳೂರಿನಲ್ಲಿ ಜಾಗವಿಲ್ಲ. ಕಾಯ್ದೆ ವಿರೋಧಿಸುವವರನ್ನು ಜೈಲಿಗೆ ಹಾಕುತ್ತೇವೆ’ ಎಂಬ ಆಯುಕ್ತರ ಸಂವಿಧಾನಿಕ ಹಕ್ಕಿನ ಉಲ್ಲಂಘನೆಯ ಹೇಳಿಕೆ ಇದೀಗ ಮತ್ತೊಂದು ಆಯಾಮದ ಚರ್ಚೆಗೆ ಚಾಲನೆ ನೀಡಿದೆ.
ಅಲ್ಲದೆ, ಸಿಎಂ ಬಿಎಸ್ ಯಡಿಯೂರಪ್ಪ ಅವರು ಗ್ರಹಣ ದೋಷ ಪರಿಹಾರಕ್ಕಾಗಿ ಕೇರಳಕ್ಕೆ ಪೂಜೆಗೆ ಹೋದಾಗ, ಅಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಕಾರ್ಯಕರ್ತರು ಅವರಿಗೆ ಮುತ್ತಿಗೆ ಹಾಕಿ, ಮಂಗಳೂರು ಘಟನೆ ಹಿನ್ನೆಲೆಯಲ್ಲಿ ‘ಗೋ ಬ್ಯಾಕ್ ಯಡಿಯೂರಪ್ಪ’ ಎಂಬ ಘೋಷಣೆ ಕೂಗಿದ್ದರು. ಅದು ಸಿಎಂ ಅವರಿಗೆ ಸಾಕಷ್ಟು ಇರಿಸುಮುರಿಸು ತಂದಿತ್ತು. ಅತ್ತ ಆ ಪ್ರತಿಭಟನೆ ನಡೆಯುತ್ತಿರುವ ಹೊತ್ತಿಗೇ ಇಲ್ಲಿ ಬೆಂಗಳೂರಿನಲ್ಲಿ ಎಡಪಕ್ಷವೊಂದರ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಇದು ಕೂಡ ಕೇವಲ ಕಾಕತಾಳೀಯವೇನಲ್ಲ ಎಂಬುದು ಪಕ್ಷದ ಹಲವರ ಅನಿಸಿಕೆ.
ಹಾಗೇ ಸಿಎಎ ವಿರೋಧಿ ಹೋರಾಟದ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಸಚಿವರು ಮತ್ತು ಪ್ರಮುಖ ನಾಯಕರ ಹೇಳಿಕೆಗಳು ಕೂಡ ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡಿರುವ ಸಾಧ್ಯತೆ ಇಲ್ಲದೇ ಇಲ್ಲ. ‘ಬಹುಸಂಖ್ಯಾತರು ತಿರುಗಿಬಿದ್ದರೆ ಗೋಧ್ರಾ ದಂತಹ ಘಟನೆ ಮರುಕಳಿಸುತ್ತವೆ’ ಎಂಬ ಎಚ್ಚರಿಕೆ ನೀಡಿದ್ದ ರಾಜ್ಯ ಪ್ರವಾಸೋದ್ಯಮ ಸಚಿವರ ಹೇಳಿಕೆ ಕೂಡ ಪ್ರಚೋದನಕಾರಿಯಾಗಿತ್ತು ಮತ್ತು ಆ ಬಳಿಕ ಕೂಡ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಅಧಿಕಾರ ಸ್ಥಾನದಲ್ಲಿರುವವರ ಇಂತಹ ಪ್ರಚೋದನಕಾರಿ ಹೇಳಿಕೆಗಳು ಪಕ್ಷದ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ನೀಡುವ ಕುಮ್ಮಕ್ಕು ಕೂಡ ದೊಡ್ಡದು. ಆ ಹಿನ್ನೆಲೆಯಲ್ಲಿಯೂ ಈ ಘಟನೆಯನ್ನು ನೋಡಬೇಕಿದೆ.
ಹಾಗಾಗಿ, ಸಿಪಿಐ ಕಚೇರಿಗೆ ಬೆಂಕಿ ಪ್ರಕರಣ ಇದೀಗ ಸಾಕಷ್ಟು ಆಯಾಯದ ಶಂಕೆಗಳಿಗೆ, ಚರ್ಚೆಗಳಿಗೆ ಎಡೆಮಾಡಿದ್ದು, ಮುಖ್ಯವಾಗಿ ದೇಶದಲ್ಲಿ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಅವಕಾಶವೇ ಮುಗಿದುಹೋಯಿತೆ ಎಂಬ ಆತಂಕವನ್ನೂ ಸೃಷ್ಟಿಸಿದೆ. ಬೆಂಗಳೂರು ಪೊಲೀಸರ ನಿರ್ಲಕ್ಷ್ಯ, ಸ್ವತಃ ಪೊಲೀಸ್ ಕಮೀಷನರ್ ಅವರ ಹೇಳಿಕೆ, ಸಿಎಂ ಕೇರಳ ಭೇಟಿಯ ಘಟನೆಗಳು ಮತ್ತು ಅದೇ ಹೊತ್ತಿಗೆ ಇಲ್ಲಿ ಅವರ ಆಡಳಿತದಡಿ ಈ ಘಟನೆ ನಡೆದಿರುವುದು, ಮತ್ತು ರಾಷ್ಟ್ರವ್ಯಾಪಿ ಸಿಎಎ-ಎನ್ ಆರ್ ಸಿ ವಿರೋಧಿ ಹೋರಾಟಗಳನ್ನು ಹತ್ತಿಕ್ಕಲು ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವರಸೆಗಳೆಲ್ಲದರ ಹಿನ್ನೆಲೆಯಲ್ಲಿ ಈ ಘಟನೆಯ ಕುರಿತ ತನಿಖೆ ನಡೆಯಬೇಕಿದೆ ಎಂಬ ಬೇಡಿಕೆಯನ್ನು ತಳ್ಳಿಹಾಕಲಾಗದು.
ಸ್ವತಃ ಸಿಪಿಐ ಅಷ್ಟೇ ಅಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಕೂಡ ಇದೇ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಈ ಘಟನೆ ಕೇವಲ ಎರಡು ಪಕ್ಷಗಳ ನಡುವಿನ ಸಂಘರ್ಷದ ಸಂಗತಿಯಲ್ಲ; ಇದರ ಹಿಂದೆ ದೊಡ್ಡ ವ್ಯೂಹ ಕೆಲಸ ಮಾಡಿದೆ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.
ಆ ಹಿನ್ನೆಲೆಯಲ್ಲಿ ಘಟನೆಯ ಕುರಿತು ಪೊಲೀಸರು ಎಲ್ಲ ಆಯಾಯದಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕಿದೆ ಮತ್ತು ಆ ಮೂಲಕ ದೇಶದ ಪ್ರಜಾಪ್ರಭುತ್ವ ಮತ್ತು ಪೊಲೀಸ್ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕಾಯ್ದುಕೊಳ್ಳಬೇಕಿದೆ. ಅಂತಹ ನಿಷ್ಪಕ್ಷಪಾತ ತನಿಖೆಯನ್ನು ಸಿಎಎ ವಿರೋಧಿ ಹೋರಾಟಗಳ ವಿಷಯದಲ್ಲಿ ರಾಜಕೀಯ ನಿಲುವು ತಳೆದಿದ್ದ ಬೆಂಗಳೂರು ಪೊಲೀಸ್ ಕಮೀಷನರ್ ಅವರಿಂದ ನಿರೀಕ್ಷಿಸಬಹುದೆ? ಎಂಬುದು ಈಗಿರುವ ಪ್ರಶ್ನೆ!