ಒಂದು ಕಡೆ ಬೀದಿಬೀದಿಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಹೋರಾಟ ಭುಗಿಲೆದ್ದಿದ್ದರೆ, ದೇಶದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮಾತ್ರ ಆಂತರಿಕ ಕ್ಷೋಭೆಯಲ್ಲೇ ಬಸವಳಿಯುತ್ತಿದೆ. ಆಳುವ ಸರ್ಕಾರ ಒಂದು ಜನವಿರೋಧಿ ಕಾಯ್ದೆಯನ್ನು ಜನರ ವಿರೋಧದ ಹೊರತಾಗಿಯೂ ಬಲವಂತದಿಂದ ಹೇರುತ್ತಿರುವುದನ್ನು ಪ್ರಶ್ನಿಸಿ ರಾಷ್ಟ್ರವ್ಯಾಪಿ ಹೋರಾಟದ ನೇತೃತ್ವ ವಹಿಸಿಬೇಕಾಗಿದ್ದ ಪಕ್ಷ, ಕನಿಷ್ಠ ತನ್ನದೇ ನಾಯಕತ್ವದ ಬಗ್ಗೆ ಸಕಾಲಿಕ ತೀರ್ಮಾನ ಕೈಗೊಳ್ಳಲಾಗದಷ್ಟು ಬಲಹೀನವಾಗಿದೆ.
ರಾಜ್ಯದಲ್ಲಂತೂ ಆಡಳಿತ ಪಕ್ಷದ ಅಂಧಾ ದರ್ಬಾರ್ ಮತ್ತು ಪೊಲೀಸ್ ರಾಜ್ ನೀತಿಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟದ ಅಗತ್ಯವಿದ್ದಾಗ್ಯೂ, ಮಂಗಳೂರಿನ ಗೋಲಿಬಾರ್ ವಿಷಯದಲ್ಲಾಗಲೀ, ಬೆಂಗಳೂರು ಸೇರಿದಂತೆ ಸಿಎಎ ವಿರೋಧಿ ಹೋರಾಟಗಾರರ ಮೇಲಿನ ಪೊಲೀಸ್ ದಬ್ಬಾಳಿಕೆ, ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ ಘಟನೆ, ಪತ್ರಕರ್ತರ ಮೇಲಿನ ಪೊಲೀಸ್ ದೌರ್ಜನ್ಯ,… ಹೀಗೆ ಸಾಲುಸಾಲು ವಿಷಯಗಳಲ್ಲಿ ಕಾಂಗ್ರೆಸ್ ನಾಯಕತ್ವ ಪ್ರಬಲವಾಗಿ ದನಿ ಎತ್ತಲೇ ಇಲ್ಲ. ಅದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಪತ್ರಿಕಾಹೇಳಿಕೆ, ಭಾಷಣಗಳನ್ನು ಹೊರತುಪಡಿಸಿ ಕಾಂಗ್ರೆಸ್ ಒಂದು ಪ್ರಬಲ ಪ್ರತಿಪಕ್ಷವಾಗಿ ಬೀದಿಗಿಳಿಯಲೇ ಇಲ್ಲ.
ಬದಲಾಗಿ, ಈಗ ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆಯ ಮೇಲಾಟ ಆರಂಭವಾಗಿದೆ. ಹಾಗೆ ನೋಡಿದರೆ ಕಾಂಗ್ರೆಸ್ಸಿನ ನಾಯಕತ್ವ ಬದಲಾವಣೆಯ ತೆರೆಮರೆಯಾಟ ಹೊಸದೇನಲ್ಲ. ಎರಡು ವರ್ಷದ ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶದಿಂದಲೇ ಒಂದು ಬಣ ಭಜನೆ ಶುರುಮಾಡಿತ್ತು. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಅದು ಇನ್ನಷ್ಟು ಜೋರಾಗಿತ್ತು. ಇದೀಗ ಉಪ ಚುನಾವಣೆಯ ಫಲಿತಾಂಶದ ಬಳಿಕ ತಾರಕಕ್ಕೇರಿದೆ. ಸಿದ್ದರಾಮಯ್ಯ ವಿರುದ್ಧದ ಹತ್ತು ಹತ್ತನ್ನೆರಡು ವರ್ಷದ ದನಿ ಅದು. ಅವರು ಕಾಂಗ್ರೆಸ್ಸಿಗೆ ಸೇರಿದ ಕ್ಷಣದಿಂದಲೇ ಅವರ ವಿರೋಧಿ ಬಣವೊಂದು ಅವರನ್ನು ಮೂಲೆಗುಂಪು ಮಾಡಲು, ಸಾಧ್ಯವಾದರೆ ಹೊರಹಾಕಲು ಇನ್ನಿಲ್ಲದ ಯತ್ನಗಳು ಮಾಡುತ್ತಲೇ ಇದೆ ಎಂಬುದು ಗುಟ್ಟೇನೂ ಅಲ್ಲ. ಆದರೆ, ಇದೀಗ ಸತತ ಎರಡು ಲೋಕಸಭಾ ಚುನಾವಣೆಯ ಸೋಲು, ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆಯ ಹಿನ್ನಡೆಗಳ ಬಳಿಕ ಆ ಗುಂಪಿನ ಬಲವರ್ಧನೆಯಾಗಿದೆ. ಹಾಗಾಗಿ ಸಿದ್ದರಾಮಯ್ಯ ವಿರೋಧಿ ದನಿ ತಾರಕ ಭಜನೆಯಾಗಿದೆ ಮತ್ತು ನಾಯಕತ್ವ ಬದಲಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಅದರಲ್ಲೂ ಉಪಚುನಾವಣಾ ಫಲಿತಾಂಶದ ನೈತಿಕ ಹೊಣೆಹೊತ್ತು ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಪ್ರತಿಪಕ್ಷ ನಾಯಕನ ಸ್ಥಾನ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಗಳಿಗೆ ಮತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳಿಗೆ ಪೈಪೋಟಿ ಆರಂಭವಾಗಿದೆ. ಆದರೆ, ಆ ರಾಜೀನಾಮೆಗಳನ್ನು ಹೈಕಮಾಂಡ್ ಸ್ವೀಕರಿಸಿಲ್ಲ. ಅಲ್ಲದೆ, ತತಕ್ಷಣಕ್ಕೆ ಪ್ರತಿಪಕ್ಷ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವ ಯೋಚನೆ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು ಕಳೆದ ವಾರ ಮಧುಸೂಧನ್ ಮಿಸ್ತ್ರಿ ನೇತೃತ್ವದ ಎಐಸಿಸಿ ತಂದ ಬೆಂಗಳೂರಿಗೆ ಬಂದು ಶಾಸಕರು ಮತ್ತು ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸಿ ವಾಪಸ್ಸಾಗಿದೆ.
ಆ ವೇಳೆಯೇ ಸಿದ್ದರಾಮಯ್ಯ ವಿರುದ್ಧ ಪಕ್ಷದ ಮೂಲ ಕಾಂಗ್ರೆಸ್ ಬಣದ ನಾಯಕರು ಬಹಳಷ್ಟು ದೂರು ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೆ ಎಚ್ ಮುನಿಯಪ್ಪ ಅವರಂತೂ ನೇರವಾಗಿ ಸಿದ್ದರಾಮಯ್ಯ ವಿರುದ್ಧ ದೂರಿನ ಸುರಿಮಳೆಗರೆದಿದ್ದಾರೆ. ಅಷ್ಟೇ ಅಲ್ಲದೆ, ದೆಹಲಿಗೆ ಹೋಗಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನೂ ಭೇಟಿಯಾಗಿ ಮುನಿಯಪ್ಪ, ಸಿದ್ದರಾಮಯ್ಯ ಅವರಿಂದಾಗಿಯೇ ಪಕ್ಷಕ್ಕೆ ರಾಜ್ಯದಲ್ಲಿ ಈ ಸ್ಥಿತಿ ಬಂದಿದೆ ಎಂದೂ ವಿವರಿಸಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಡಾ ಜಿ ಪರಮೇಶ್ವರ್, ಎಚ್ ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ ಬಿ ಕೋಳಿವಾಡ, ವೀರಪ್ಪ ಮೊಯ್ಲಿ, ಬಿ ಎಲ್ ಶಂಕರ್ ಮತ್ತಿತರು ಕೂಡ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಗೆ ತಮ್ಮ ಅಸಮಾಧಾನ, ಆಕ್ಷೇಪಗಳನ್ನು ಸಲ್ಲಿಸಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಈ ಬಾರಿ ಪಕ್ಷದ ತಮ್ಮ ವಿರೋಧಿ ಬಣದ ವಿರುದ್ಧ ಮೇಲುಗೈ ಸಾಧಿಸುವುದು ಕಷ್ಟ ಎಂಬ ಮಾತುಗಳೂ ಕೇಳಿಬರುತ್ತಿವೆ. ಜೊತೆಗೆ, ಇದೀಗ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಕೂಡ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದು, ‘ಕಾಂಗ್ರೆಸ್ ಪಕ್ಷದ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ತತ್ವದ ಬದಲಿಗೆ ತಮ್ಮದೇ ಅಹಿಂದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಹೋದರು. ಹಾಗಾಗಿ ಪಕ್ಷ ಇಂದು ಈ ಸ್ಥಿತಿಗೆ ತಲುಪಿದೆ. ಪಕ್ಷದ ಇಂದಿನ ಹಿನ್ನಡೆಗೆ ಸಿದ್ದರಾಮಯ್ಯ ಅವರೇ ನೇರ ಹೊಣೆ’ ಎಂದು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.
ಒಟ್ಟಾರೆ, ದಿನದಿಂದ ದಿನಕ್ಕೆ ಸಿದ್ದರಾಮಯ್ಯ ವಿರೋಧಿ ದನಿಗಳು ಹೆಚ್ಚಾಗುತ್ತಿದ್ದು, ಪ್ರಬಲವಾಗಿಯೂ ಕೇಳಿಸತೊಡಗಿವೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಡಾ ಜಿ ಪರಮೇಶ್ವರ್ ಅವರನ್ನು ಕೂರಿಸುವ ಪ್ರಯತ್ನ ಮತ್ತೊಂದು ಕಡೆ ಬಿರುಸುಗೊಂಡಿದ್ದು, ಸಿದ್ದು ವಿರೋಧಿ ಬಣ ಆ ನಿಟ್ಟಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಸಾಕಷ್ಟು ಲಾಬಿ ಮಾಡಿದೆ. ಹಾಗೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಪ್ರಬಲ ಒಕ್ಕಲಿಗ ನಾಯಕ ಡಿ ಕೆ ಶಿವಕುಮಾರ್ ಅವರನ್ನು ಕೂರಿಸುವ ಮೂಲಕ ಸಿದ್ದರಾಮಯ್ಯಗೆ ಪರ್ಯಾಯ ನಾಯಕತ್ವ ಕಟ್ಟುವ ನಿಟ್ಟಿನಲ್ಲೂ ಸಿದ್ದು ವಿರೋಧಿ ಬಣ ಪ್ರಯತ್ನ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಜೊತೆಗೆ ಎಂ ಬಿ ಪಾಟೀಲ್, ಎಚ್ ಕೆ ಪಾಟೀಲ್, ಬಿ ಕೆ ಹರಿಪ್ರಸಾದ್ ಅವರ ಹೆಸರುಗಳೂ ಕೇಳಿಬರುತ್ತಿದ್ದರೂ, ರಾಜ್ಯದಲ್ಲಿ ಲಿಂಗಾಯತರು ಬಿಜೆಪಿಯೊಂದಿಗೆ ಬಹುತೇಕ ಗುರುತಿಸಿಕೊಂಡಿರುವ ಹೊತ್ತಲ್ಲಿ, ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರಿಗೆ ರಾಜಕೀಯ ವೇದಿಕೆಯಾಗಿದ್ದ ಜೆಡಿಎಸ್ ತೀರಾ ಬಲಹೀನವಾಗಿದೆ. ಆ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್ ಒಕ್ಕಲಿಗರಿಗೆ ವೇದಿಕೆ ಎಂಬ ಭಾವನೆ ಬಲಪಡಿಸುವ ಮೂಲಕ ಪಕ್ಷ ಬಲವರ್ಧನೆಗೆ ಶಿವಕುಮಾರ್ ಆಯ್ಕೆಯೇ ಸೂಕ್ತ ಎಂಬುದು ಹಿರಿಯ ನಾಯಕರ ವಾದ ಎನ್ನಲಾಗಿದೆ.
ಆದರೆ, ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಜಟ್ಟಿಯ ವರಸೆಗೆ ಇಳಿದಿರುವ ಸಿದ್ದರಾಮಯ್ಯ, ಹಿರಿಯ ನಾಯಕರ ಎಲ್ಲಾ ತಂತ್ರಗಳಿಗೂ ತಮ್ಮದೇ ಪ್ರತಿತಂತ್ರ ಹೆಣೆದಿದ್ದು, ತಮ್ಮ ರಾಜೀನಾಮೆ ಅಂಗೀಕಾರ ಮಾಡದಂತೆ ಹೈಕಮಾಂಡ್ ಮೇಲೆ ಪರೋಕ್ಷ ಒತ್ತಡ ಹೇರತೊಡಗಿದ್ದಾರೆ. ಅದರ ಭಾಗವಾಗಿಯೇ ಈಗಾಗಲೇ ಕೆಪಿಸಿಸಿ ಯುವ ನಾಯಕರ ನಿಯೋಗ ಹೈಕಮಾಂಡ್ ಭೇಟಿ ಮಾಡಿ, ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷ ನಾಯಕರನ್ನಾಗಿ ಮತ್ತು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರಿಸಬೇಕು. ಕೆಪಿಸಿಸಿಗೆ ಡಿಕೆಶಿ ಅವರನ್ನೇ ನೇಮಕ ಮಾಡಲಿ ಎಂಬ ಹೊಸ ಅಹವಾಲನ್ನು ಮುಂದಿಟ್ಟಿದೆ. ಶಾಸಕ ಕೃಷ್ಣ ಭೈರೇಗೌಡ, ರಿಜ್ವಾನ್ ಅರ್ಷಾದ್, ಅಜಯ್ ಸಿಂಗ್ ಮತ್ತಿತರರು ನಿಯೋಗದಲ್ಲಿ ಇದ್ದರು. ಒಟ್ಟಾರೆ ರಾಜ್ಯ ಕಾಂಗ್ರೆಸ್ ಮುಂದಿನ ಸವಾಲು ಮತ್ತು ಬಿಕ್ಕಟ್ಟುಗಳನ್ನು ವಿವರಿಸಿ, ಸದ್ಯದ ಸ್ಥಿತಿಯಲ್ಲಿ ಬಿಜೆಪಿಯನ್ನು ಸದನದ ಒಳಹೊರಗೆ ಎದುರಿಸುವ ಛಾತಿ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ. ಹಾಗಾಗಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಬೇಕು. ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲೂ ಶಕ್ತರಿರುವ ಡಿ ಕೆ ಶಿ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಬೇಕು ಎಂದು ನಿಯೋಗ ಕೋರಿದೆ ಎನ್ನಲಾಗಿದೆ.
ಯುವ ನಾಯಕರ ನಿಯೋಗದ ದೆಹಲಿ ಭೇಟಿಯ ಬೆನ್ನಲ್ಲೇ ಪ್ರತಿದಾಳ ಉರುಳಿಸುವ ಯತ್ನವಾಗಿ ಬಿ ಕೆ ಹರಿಪ್ರಸಾದ್, ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿಗೆ ಇಳಿದಿದ್ದಾರೆ. ಆ ಮೂಲಕ ಕಾಂಗ್ರೆಸ್ಸಿನ ಎಲ್ಲಾ ವೈಫಲ್ಯಗಳನ್ನೂ ಮಾಜಿ ಮುಖ್ಯಮಂತ್ರಿಯ ತಲೆಗೆ ಕಟ್ಟಿ, ಅವರನ್ನು ಬದಿಗೆ ಸರಿಸುವ ವಿರೋಧಿ ಬಣದ ಕಾರ್ಯಸೂಚಿಯನ್ನು ಜಾರಿಗೊಳಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಕೂಡ ಕೈಕಟ್ಟಿಕೊಂಡು ಕುಳಿತಿಲ್ಲ. ಒಂದು ವೇಳೆ ಪ್ರತಿಪಕ್ಷ ನಾಯಕನ ಸ್ಥಾನ ತಮ್ಮ ಕೈತಪ್ಪುವುದು ದಿಟವಾದರೆ, ತಮ್ಮ ಬದಲಿಗೆ ಆ ಸ್ಥಾನಕ್ಕೆ ತಮ್ಮ ಆಪ್ತರಾದ ಮತ್ತು ಅರ್ಹತೆ ಮತ್ತು ಅನುಭವದ ಆಧಾರದಲ್ಲಿ ತಳ್ಳಿಹಾಕಲಾಗದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರನ್ನು ಸೂಚಿಸಲಿದ್ದಾರೆ. ಅಲ್ಲದೆ, ಕೆಪಿಸಸಿ ಅಧ್ಯಕ್ಷ ಸ್ಥಾನಕ್ಕೂ ತಮ್ಮದೇ ಆಯ್ಕೆಯನ್ನು ಮುಂದುಮಾಡುವ ತಂತ್ರ ಹೊಂದಿದ್ದು, ಲಿಂಗಾಯತ ಸಮುದಾಯದ ಎಂ ಬಿ ಪಾಟೀಲ್ ಅವರ ಹೆಸರನ್ನು ಸೂಚಿಸುವ ಮೂಲಕ ಏಕಕಾಲಕ್ಕೆ ಬಿಜೆಪಿಗೂ ಮತ್ತು ಪಕ್ಷದ ತಮ್ಮ ವಿರೋಧಿ ಬಣಕ್ಕೂ ಪ್ರತಿದಾಳ ಉರುಳಿಸುವ ಲೆಕ್ಕಾಚಾರ ಅವರದ್ದು ಎನ್ನಲಾಗುತ್ತಿದೆ.
ಒಟ್ಟಾರೆ, ಸದ್ಯಕ್ಕೆ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಆಂತರಿಕ ತಿಕ್ಕಾಟ ಬಿರುಸುಗೊಂಡಿದ್ದು, ಸಿದ್ದರಾಮಯ್ಯ ಬಣ ವರ್ಸಸ್ ಹಳೆಯ ಕಾಂಗ್ರೆಸ್ ನಾಯಕರ ಬಣಗಳ ನಡುವೆ ಸಮರ ತಾರಕಕ್ಕೇರಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಸರಿಸಮನಾಗಿ ನಿಲ್ಲಬಲ್ಲ, ರಾಜ್ಯಾದ್ಯಂತ ಜನಬೆಂಬಲ ಮತ್ತು ರಾಜಕೀಯ ವರ್ಚಸ್ಸು ಹೊಂದಿರುವ ಮುಖಗಳು ಹೈಕಮಾಂಡಿಗೆ ಸದ್ಯಕ್ಕೆ ಗೋಚರಿಸುತ್ತಿಲ್ಲ. ಹಾಗಾಗಿ ಸದ್ಯಕ್ಕೆ ಈ ಅಂತಃಕಲಹವನ್ನು ತಹಬದಿಗೆ ತಂದು, ಕೇವಲ ಕೆಪಿಸಿಸಿ ಅಧ್ಯಕ್ಷರನ್ನಷ್ಟೇ ಬದಲಾಯಿಸುವ ನಿಟ್ಟಿನಲ್ಲಿ ಹೈಕಮಾಂಡ್ ಯೋಚಿಸುತ್ತಿದೆ. ಹಾಗಾಗಿ, ಅಂತಿಮವಾಗಿ ಈ ಬಾರಿಯೂ ಸಿದ್ದು ತಂತ್ರಗಾರಿಕೆಯೇ ಮೇಲುಗೈ ಪಡೆಯಲಿದೆ ಎಂಬ ಮಾತುಗಳೂ ಪಕ್ಷದ ವಲಯದಲ್ಲೇ ಕೇಳಿಬರುತ್ತಿವೆ.
ಅದೇನೇ ಇರಲಿ; ಈ ವಿಷಯದಲ್ಲಿ ಎಷ್ಟು ತ್ವರಿತವಾಗಿ ಮತ್ತು ದಿಟ್ಟತನದಿಂದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಪ್ರಾಬಲ್ಯವಷ್ಟೇ ಅಲ್ಲದೆ, ರಾಜ್ಯ ರಾಜಕಾರಣದ ದಿಕ್ಕು ಬದಲಾವಣೆ ಕೂಡ ನಿರ್ಧಾರವಾಗಲಿದೆ.