ಸಿಎಎ ಮತ್ತುಎನ್ ಆರ್ ಸಿ ವಿರೋಧಿ ಪ್ರತಿಭಟನೆಗಳಿಂದ ಬೆಚ್ಚಿಬಿದ್ದಿರುವ ಬಿಜೆಪಿ ಮತ್ತು ಅದರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಒಂದು ಕಡೆ ಎನ್ ಆರ್ ಸಿ ಕುರಿತು ಸಮಜಾಯಿಷಿ ಕೊಡುವ ಮತ್ತು ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಮತ್ತೊಂದು ಕಡೆ ಪ್ರತಿಭಟನೆಯಿಂದ ಹೊರಗುಳಿಯುವಂತೆ ಜನರನ್ನು ಬೆದರಿಸುವ, ಭೀತಿ ಹುಟ್ಟಿಸುವ ಕೆಲಸಕ್ಕೂ ಮುಂದಾಗಿವೆ.
ಪ್ರಮುಖವಾಗಿ ಪ್ರಧಾನಿ ಮೋದಿಯವರು ಎನ್ ಆರ್ ಸಿ ವಿಷಯವನ್ನು ನಮ್ಮ ಸರ್ಕಾರ ಪ್ರಸ್ತಾಪ ಮಾಡಿಯೇ ಇಲ್ಲ ಎಂಬ ಹಸೀ ಸುಳ್ಳು ಹೇಳಿ ಜನರನ್ನು ಮರಳುಮಾಡುವ ಯತ್ನ ಮಾಡಿ ನಗೆಪಾಟಲಿಗೀಡಾದರು. ಮತ್ತೊಂದು ಕಡೆ ಸ್ವತಃ ಅಮಿತ್ ಶಾ ಎನ್ ಆರ್ ಸಿ ಜಾರಿಗೂ ಸಿಎಎ ಕಾಯ್ದೆಗೂ ಸಂಬಂಧವೇ ಇಲ್ಲ ಎಂಬ ಮತ್ತೊಂದು ಸುಳ್ಳು ಹೇಳಿದರು. ಸರ್ಕಾರವೇ ಹೊರಡಿಸಿದ ಗೆಜೆಟ್ ಅಧಿಸೂಚನೆ, ಸ್ವತಃ ಗೃಹ ಸಚಿವರೇ ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಗಳೇ ಈ ಸ್ಪಷ್ಟನೆಗಳು ಎಷ್ಟು ಹಸೀ ಸುಳ್ಳು ಎಂಬುದನ್ನು ಸಾಬೀತುಮಾಡಿದವು. ಸಹಜವಾಗೇ ದೇಶದ ಜನ ಆ ಮಾತುಗಳನ್ನು ನಂಬಲೇ ಇಲ್ಲ! ಪ್ರತಿಭಟನೆಗಳು ಮುಂದುವರಿದಿವೆ.
ಹಾಗಾಗಿ ಇದೀಗ ತಮ್ಮ ಸುಳ್ಳಿನ ಕಂತೆಗಳನ್ನು ನಂಬುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಮತ್ತು ತಮ್ಮ ಕೋಮುವಾದಿ ಅಜೆಂಡಾದ ಕಾನೂನು ಮತ್ತು ಎನ್ ಆರ್ ಸಿ ವಿರುದ್ಧ ಕೇವಲ ಮುಸ್ಲಿಮರಷ್ಟೇ ಅಲ್ಲದೆ ಬಹುಪಾಲು ಹಿಂದೂಗಳು ಬೀದಿಗಿಳಿದಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆ; ಪ್ರತಿಭಟನೆಗಳನ್ನು ಹತ್ತಿಕ್ಕುವ, ಜನ ಬೀದಿಗಿಳಿಯದಂತೆ ಬೆದರಿಸುವ ತಂತ್ರಕ್ಕೆ ಮೊರೆಹೋಗಿದ್ದಾರೆ. ಅದರ ಭಾಗವಾಗಿಯೇ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಎಂಬ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯಾಗಲೀ, ದೇಶದ ಸಂವಿಧಾನದ ಬಗ್ಗೆಯಾಗಲೀ ಕನಿಷ್ಠ ಗೌರವ ಕೂಡ ಇಲ್ಲದ ಸಿಎಂ, ಅಲ್ಲಿನ ಪ್ರತಿಭಟನಾಕಾರರ ಆಸ್ತಿಪಾಸ್ತಿ ಮುಟ್ಟುಗೋಲಿನಂತಹ ಕ್ರೂರ ನೀತಿಗೆ ಚಾಲನೆ ನೀಡಿದ್ದಾರೆ.
ಪ್ರತಿಭಟನೆಗೆ ಅವಕಾಶ ನಿರಾಕರಣೆ, ಪ್ರತಿಭಟನಾಕಾರರ ಮೇಲೆ ಅಪ್ರಚೋದಿತ ಲಾಠಿ ಪ್ರಹಾರ, ಜನರನ್ನು ಸಾಯಿಸುವ ಮೂಲಕ ಭೀತಿ ಹುಟ್ಟಿಸುವ ಉದ್ದೇಶದ ಗೋಲಿಬಾರ್, ಕಠಿಣ ಪೋಲೀಸ್ ಕೇಸು, ಬಂಧನ, ಇಂಟರ್ ನೆಟ್ ಸ್ಥಗಿತ, ಮಾಧ್ಯಮ ನಿರ್ಬಂಧ, ಮಾಧ್ಯಮಗಳಿಗೆ ಎಚ್ಚರಿಕೆ, ಮುಂತಾದ ಕ್ರಮಗಳ ಬಳಿಕ ಈಗ ಪ್ರತಿಭಟನಾಕಾರರ ಆಸ್ತಿಪಾಸ್ತಿ ಮುಟ್ಟುಗೋಲು ಎಂಬ ಹೊಸ ಅಸ್ತ್ರ ಝಳಪಿಸಲಾಗಿದೆ. ಈಗಾಗಲೇ ಸುಮಾರು 500 ಮಂದಿಯ ಪ್ರತಿಭಟನಾಕಾರರ ಆಸ್ತಿಪಾಸ್ತಿ ಮುಟ್ಟುಗೋಲಿಗೆ ಪಟ್ಟಿ ಮಾಡಿರುವ ಯೋಗಿ ಸರ್ಕಾರ, ಸುಮಾರು 70 ಮಂದಿಯ ಅಂಗಡಿ-ಮುಂಗಟ್ಟು ವಶಪಡಿಸಿಕೊಂಡಿದೆ. ಪ್ರತಿಭಟನೆ ವೇಳೆ ಆದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯನ್ನು ಈ ಮುಟ್ಟುಗೋಲು ಹಾಕಿಕೊಂಡ ಆಸ್ತಿ ಮಾರಾಟದಿಂದ ತುಂಬಿಕೊಳ್ಳುವುದಾಗಿ ಉತ್ತರಪ್ರದೇಶ ಸರ್ಕಾರ ಹೇಳಿದೆ.
ಈಗ ಕರ್ನಾಟಕದ ‘ಆಧುನಿಕ ಬಸವಣ್ಣ’ ಎಂಬ ಬಿರುದಾಂಕಿತ ಸಿಎಂ ಯಡಿಯೂರಪ್ಪ ಅವರ ಸರ್ಕಾರ ಕೂಡ, ಯೋಗಿ ಆದಿತ್ಯನಾಥರ ಈ ಕಲ್ಯಾಣ ಕ್ರಮವನ್ನು ಜಾರಿಗೆ ತರಲು ಹೊರಟಿದೆ. ಅವರ ಸರ್ಕಾರದ ಅತ್ಯಂತ ಸಭ್ಯ ಮತ್ತು ನಾಗರಿಕ ರೀತಿಯಲ್ಲೇ ರಾಜಕೀಯ ಹೋರಾಟಗಳನ್ನು ಮಾಡಿದ ಹೆಗ್ಗಳಿಕೆಯ ಕೆ ಎಸ್ ಈಶ್ವರಪ್ಪ, ಆರ್ ಅಶೋಕ್ ಮತ್ತು ಸಿ ಟಿ ರವಿ ಎಂಬ ಸಚಿವರು ಮತ್ತು ಎಂದೂ ಯಾವುದೇ ಪ್ರತಿಭಟನೆ, ಗಲಭೆ, ಗಲಾಟೆಗಳಲ್ಲಿ ಪಾಲ್ಗೊಂಡ ಇತಿಹಾಸವೇ ಇಲ್ಲದ ನಾಗರಿಕ ಸಭ್ಯತೆಯ ಮೇರು ಮಾದರಿಗಳಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರುಗಳು ಬಹಳ ಬಲವಾಗಿ ಯೋಗಿ ಮಾದರಿ ಅನುಸರಿಸುವಂತೆ ಯಡಿಯೂರಪ್ಪ ಅವರಿಗೆ ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಪ್ರತಿಭಟನೆಯಲ್ಲಿ ನೂರಾರು ಕೋಟಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಸಚಿವ ಅಶೋಕ್ ಹೇಳಿದ್ದರೆ, ಸಚಿವ ಸಿಟಿ ರವಿ ಅವರು, ‘ಆಸ್ತಿಪಾಸ್ತಿ ನಾಶ ಮಾಡಿರುವ ಪ್ರತಿಭಟನಾಕಾರರ ವಿರುದ್ಧ ಉತ್ತರಪ್ರದೇಶ ಮಾದರಿ ಅನುಸರಿಸುವಂತೆ ಸಿಎಂಗೆ ಸಲಹೆ ನೀಡುತ್ತೇನೆ’ ಎಂದಿದ್ದಾರೆ. ಅವರಿಗೆ ದನಿಗೂಡಿಸಿರುವ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ ಕೂಡ, “ಗೂಂಡಾಗಳನ್ನು ಬಿಡಲ್ಲ. ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಅದಕ್ಕೆ ಅವರನ್ನೇ ಹೊಣೆ ಮಾಡುತ್ತೇವೆ” ಎಂದಿದ್ದಾರೆ. ಸಂಸದೆ ಶೋಭಾ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಗಲಭೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ನಷ್ಟವನ್ನು ದಂಗೆಕೋರರಿಂದಲೇ ವಸೂಲಿ ಮಾಡಬೇಕು” ಎಂದಿದ್ದಾರೆ.
ಯಾವುದೇ ಪ್ರತಿಭಟನೆ ಹಿಂಸೆಗೆ ತಿರುಗಬಾರದು, ಪ್ರತಿಭಟನೆ- ಹರತಾಳ-ಬಂದ್ಗಳು ದೇಶದ ಸಾರ್ವಜನಿಕ ಆಸ್ತಿಪಾಸ್ತಿಗೆ, ಜನಸಾಮಾನ್ಯರ ಬದುಕಿಗೆ ಕಂಟಕವಾಗಬಾರದು ಎಂಬ ಕಾಳಜಿಯನ್ನು ಯಾರೂ ತಳ್ಳಿಹಾಕಲಾಗದು. ಆದರೆ, ಈ ನಾಯಕರ ಮಾತುಗಳಲ್ಲಿ ಇರುವುದು ಅಂತಹ ಕಾಳಜಿಯೇ ಆಗಿದ್ದರೆ, ಸ್ವತಃ ಅವರುಗಳು ತಮ್ಮ ರಾಜಕೀಯ ಜೀವನದುದ್ದಕ್ಕೂ ಮಾಡಿಕೊಂಡುಬಂದ ಹೋರಾಟ, ಪ್ರತಿಭಟನೆ, ಧರಣಿ, ರ್ಯಾಲಿ, ಜಾಥಾಗಳಲ್ಲಿ ಎಷ್ಟು ಸಭ್ಯವಾಗಿದ್ದರು? ಎಷ್ಟು ಶಾಂತಿಯಿಂದ ಇದ್ದರು? ಎಂಬ ಪ್ರಶ್ನೆ ಅವರ ಕಾಳಜಿಗೆ ಸಾಕ್ಷಿಯಾಗಿ ರಾಜ್ಯದ ಜನರ ಕಣ್ಣ ಮುಂದಿದೆ. ಹಿಂದುತ್ವದ ಹೆಸರಿನಲ್ಲಿ, ಅಯೋಧ್ಯೆಯ ಹೆಸರಿನಲ್ಲಿ, ಗೋ ರಕ್ಷಣೆಯ ಹೆಸರಿನಲ್ಲಿ ಈ ನಾಯಕರು ರಾಜ್ಯದ ಯಾವೆಲ್ಲಾ ಕಡೆ ಎಷ್ಟು ಬೆಂಕಿ ಹಚ್ಚದೆ, ಕಲ್ಲು ತೂರದೆ, ಹಿಂಸೆಗೆ ಪ್ರಚೋದನ ನೀಡದೆ ನಡೆದುಕೊಂಡಿದ್ದಾರೆ? ಅವರ ವಿರುದ್ಧ ಯಾವ ಯಾವ ಪೊಲೀಸ್ ಠಾಣೆಗಳಲ್ಲಿ ಯಾವೆಲ್ಲಾ ಪ್ರಕರಣಗಳು ದಾಖಲಾಗಿದ್ದವು ಮತ್ತು ಈಗಲೂ ಪ್ರಕರಣಗಳು ಜೀವಂತವಿವೆ? ಎಂಬ ಅಂಶಗಳನ್ನು ಗಮನಿಸಬೇಕಾಗುತ್ತದೆ.
ಅದರಲ್ಲೂ ಮುಖ್ಯವಾಗಿ ರಾಮಜನ್ಮಭೂಮಿ ವಿಷಯದಲ್ಲಿ ನಡೆದ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಯಾರು ದಂಡ ತೆತ್ತಿದ್ದಾರೆ? ಗೋಧ್ರಾ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಯಾರೆಲ್ಲಾ ಮನೆಮಠಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ತೀರಾ ಇತ್ತೀಚಿನ ಪರೇಶ್ ಮೇಸ್ತ ಪ್ರಕರಣದಲ್ಲಿ ಕರಾವಳಿಯುದ್ದಕ್ಕೂ ನಡೆದ ಹೋರಾಟ, ಬಂದ್ ವೇಳೆ ಆದ ಸಾರ್ವಜನಿ ಆಸ್ತಿಪಾಸ್ತಿ ನಷ್ಟಕ್ಕೆ ಅದರ ನೇತೃತ್ವ ವಹಿಸಿದ್ದ ಸಂಸದೆ ಶೋಭಾ ಅವರು ಎಷ್ಟು ದಂಡ ತೆತ್ತಿದ್ದಾರೆ? ಅವರ ಯಾವ ಆಸ್ತಿಪಾಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ? ದತ್ತಪೀಠ ಹೋರಾಟದ ಅವಧಿಯಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಾದ ಹೋರಾಟ- ಹಿಂಸಾಚಾರ, ಮಂಗಳೂರು ಮತ್ತು ಸುರತ್ಕಲ್ ಗಲಭೆಗಳಲ್ಲಿ ಆದ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಯಾವೆಲ್ಲಾ ನಾಯಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು? ಎಂಬ ಪ್ರಶ್ನೆಗಳಿಗೆ ಈ ನಾಯಕರು ಉತ್ತರ ಕೊಡಬೇಕಿದೆ. ಆ ಬಳಿಕ, ಅವರುಗಳು ಹಾಕಿಕೊಟ್ಟ ಅದೇ ಮಾದರಿಯನ್ನೇ ಈಗ ಸ್ವತಃ ತಮ್ಮ ಸರ್ಕಾರವೂ ಅನುಸರಿಸಿದಲ್ಲಿ ಯಾರೂ ತಕರಾರು ತೆಗೆಯಲಾರರು!
ಹಾಗೇ, ಮಂಗಳೂರು ಪ್ರತಿಭಟನೆಯ ವೇಳೆ ಸ್ವತಃ ಪೊಲೀಸರು ಮತ್ತು ಸಂಘಪರಿವಾರದ ಮಂದಿ ಪ್ರತಿಭಟನಾಕಾರರ ಮೇಲೆ ಕಲ್ಲು ತೂರುವುದು, ಅಂಗಡಿ ಮುಂಗಟ್ಟು, ವಾಹನಗಳಿಗೆ ಬೆಂಕಿ ಹಚ್ಚುವುದು, ಬಡಿದು ನಾಶ ಮಾಡುವುದು ಮುಂತಾದ ಕೃತ್ಯಗಳನ್ನು ನಡೆಸುತ್ತಿರುವ ಹಲವು ವೀಡೀಯೋಗಳು ಮತ್ತು ಫೋಟೋಗಳು ಕೂಡ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಆ ಹಿನ್ನೆಲೆಯಲ್ಲಿ ಒಂದು ವೇಳೆ, ಆ ವೀಡಿಯೋಗಳು ಮತ್ತು ಚಿತ್ರಗಳು ನಿಜವಾದಲ್ಲಿ; ಕಾನೂನು ರಕ್ಷಿಸಬೇಕಾದವರೇ ಕಾನೂನು ಮುರಿದು ಅಪರಾಧಿ ಕೃತ್ಯಗಳಲ್ಲಿ ತೊಡಗಿದ್ದರ ಬಗ್ಗೆ, ಪ್ರತಿಭಟನೆಯ ಜನರ ಹಕ್ಕನ್ನು ಜೀವ ಬೆದರಿಕೆಯ ಮೂಲಕ ಹತ್ತಿಕ್ಕಿದ ಬಗ್ಗೆ ಮತ್ತು ಮುಖ್ಯವಾಗಿ ಈ ಸಚಿವರುಗಳು ಅಪಾರ ಕಾಳಜಿ ಹೊಂದಿರುವ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಬಗ್ಗೆ ಯಾವ ಕ್ರಮಕೈಗೊಳ್ಳಲಾಗುತ್ತದೆ? ಪೊಲೀಸರ ವಿರುದ್ಧದ ಸಾಕ್ಷ್ಯಗಳನ್ನು ಮುಕ್ತ ಮನಸ್ಸಿನಿಂದ ಸರ್ಕಾರ ಸ್ವೀಕರಿಸುವುದೇ? ಅವರ ವಿರುದ್ಧವೂ ಆಸ್ತಿಪಾಸ್ತಿ ಮುಟ್ಟುಗೋಲಿನಂತಹ ಕ್ರಮಗಳನ್ನು ಜಾರಿಮಾಡುವುದೇ? ಎಂಬುದನ್ನೂ ಈ ನಾಯಕರು ಸ್ಪಷ್ಟಪಡಿಸಬೇಕಾಗಿದೆ.
ಒಂದು ಜನವಿರೋಧಿ ಕಾಯ್ದೆಯನ್ನು ದೇಶದ ಜನ ಸ್ವಯಂಪ್ರೇರಿತರಾಗಿ ವಿರೋಧಿಸುತ್ತಿರುವಾಗ, ಕೋಮುವಾದಿ, ಸರ್ವಾಧಿಕಾರಿ ಸರ್ಕಾರದ ವಿರುದ್ಧ ಯುವ ಜನತೆ ತಿರುಗಿಬಿದ್ದಿರುವಾಗ ಮತ್ತು ಮುಖ್ಯವಾಗಿ ಶಾಂತಿಯುತವಾಗಿಯೇ ಹೋರಾಟವನ್ನು ನಡೆಸುತ್ತಿರುವಾಗ, ಪ್ರತಿಭಟನೆಯನ್ನು, ಪ್ರತಿರೋಧವನ್ನು ಮತ್ತು ಜನರ ಪ್ರಶ್ನೆಗಳನ್ನು ಎದುರಿಸಲಾಗದ ಒಂದು ಸರ್ಕಾರ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರನ್ನು ಎದುರಿಸುವ ಬದಲು, ಬಲಪ್ರಯೋಗದ ಮೂಲಕ, ಪೊಲೀಸರ ಗೋಲಿಬಾರಿನ ಮೂಲಕ ಹೋರಾಟವನ್ನು ಬಗ್ಗುಬಡಿಯತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರದ ದಮನ ನೀತಿ ಚರ್ಚೆಯಾಗುತ್ತಿದೆ. ದೇಶದ ಪ್ರಜಾತಂತ್ರದ ಹೆಚ್ಚುಗಾರಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಥೇಟು ಜಿಡಿಪಿಯಂತೆಯೇ ಕುಸಿದುಬಿದ್ದಿದೆ. ಇಂತಹ ವಿಪರೀತದ ಪರಿಸ್ಥಿತಿಯಲ್ಲಿಯೂ ಜನರ ಪ್ರತಿಭಟನೆಯ ಹಕ್ಕನ್ನು ದಮನ ಮಾಡಲು, ಸಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಸರ್ಕಾರ ಅತ್ಯಂತ ಹೇಯ ಮತ್ತು ಕ್ರೂರ ಕ್ರಮಗಳಿಗೆ ಕೈಹಾಕುತ್ತದೆ ಎಂದಾದರೆ; ಅದು ಆಡಳಿತರೂಢ ಬಿಜೆಪಿಯ ಹುಟ್ಟಿನಿಂದಲೂ(1982ರಿಂದಲೂ) ಪೂರ್ವಾನ್ವಯವಾಗಿ ಜಾರಿಗೆ ಬರಲಿ. ಆಗ ಜನರಿಗೆ ಯಾರು ದೇಶದ ಆಸ್ತಿಪಾಸ್ತಿಗೆ ಹೆಚ್ಚು ಕಂಟಕವೊಡ್ಡಿದ್ದಾರೆ ಎಂಬ ಬಗ್ಗೆ ಮತ್ತು ದೇಶಭಕ್ತಿಯ ಮುಖವಾಡದ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಾದರೂ ಬರಬಹುದು! ಅಲ್ಲವೆ?