ಎನ್ ಆರ್ ಸಿ ಮತ್ತು ಸಿಎಎ ವಿರೋಧಿ ಹೋರಾಟಗಳು ಮುಂದುವರಿದಿರುವ ನಡುವೆಯೇ ಕೇಂದ್ರ ಸರ್ಕಾರ ಎನ್ ಆರ್ ಐಸಿ ವೇಷದಲ್ಲಿ ಜನಗಣತಿಯ ಜೊತೆಗೇ ದೇಶವ್ಯಾಪಿ ಎನ್ ಆರ್ ಸಿ ಜಾರಿಗೆ ಮುಂದಾಗಿದೆ. ಯಾವುದೇ ಬಂಧನ ಕೇಂದ್ರಗಳನ್ನು ತೆರೆದಿಲ್ಲ ಎನ್ನುತ್ತಲೇ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಹತ್ತಾರು ಬಂಧನ ಕೇಂದ್ರಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ.
ಮತ್ತೊಂದು ಕಡೆ ದೇಶವ್ಯಾಪಿ ಪ್ರತಿರೋಧದಕ್ಕೆ ಪ್ರತಿಯಾಗಿ ಸ್ವತಃ ಪ್ರಧಾನಿ ಮೋದಿಯವರೇ ಟ್ವಿಟರ್ ಕ್ಯಾಂಪೇನ್ ಆರಂಭಿಸಿದ್ದರೆ, ಬಿಜೆಪಿ ಕೂಡ ಮನೆಮನೆ ಅಭಿಯಾನವನ್ನು ಆರಂಭಿಸಿದೆ. ಆ ಮೂಲಕ ಸಿಎಎ ಮತ್ತು ಎನ್ ಆರ್ ಸಿ ಕುರಿತ ಸರ್ಕಾರದ ನಿಲುವಿಗೆ ಜನಬೆಂಬಲ ಕ್ರೋಡೀಕರಿಸುವ ಶತಪ್ರಯತ್ನಕ್ಕೆ ಸ್ವತಃ ಪ್ರಧಾನಿ ಮತ್ತು ಬಿಜೆಪಿ ಪಕ್ಷ ಕೈಹಾಕಿವೆ. ಪ್ರಧಾನಿಯವರು, ಮುಖ್ಯವಾಗಿ ‘ಸಿಎಎ ಕಾಯ್ದೆ ನಿರಾಶ್ರಿತರಿಗೆ ದೇಶದ ಪೌರತ್ವ ನೀಡುವ ಸಂಬಂಧದ ಕಾಯ್ದೆಯೇ ವಿನಃ ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳುವ ಉದ್ದೇಶದಲ್ಲ. ಈ ಬಗ್ಗೆ ಹರಡಿರುವ ತಪ್ಪು ತಿಳಿವಳಿಕೆಯನ್ನು ತೊಲಗಿಸಲು ಎಲ್ಲರೂ #IndiaSupportsCAA ಬಳಸುವ ಮೂಲಕ ಕಾಯ್ದೆಯ ಪರ ದನಿ ಎತ್ತಿ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಈ ನಡುವೆ, ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿ ತನ್ನ ಹೊಸ ತಿದ್ದುಪಡಿ ಮತ್ತುದೇಶವ್ಯಾಪಿ ಎನ್ ಆರ್ ಸಿ ಜಾರಿಯ ತನ್ನ ನಿಲುವಿಗೆ ಬೆಂಬಲ ಕ್ರೋಡೀಕರಣಕ್ಕೆ ವ್ಯಾಪಕ ಹೆಜ್ಜೆಗಳನ್ನು ಇಟ್ಟಿರುವ ಹೊತ್ತಿಗೇ, ಸಿಎಎ- ಎನ್ ಆರ್ ಸಿ ವಿರೋಧಿ ಹೋರಾಟಗಳು ದಿನದಿಂದ ದಿನಕ್ಕೆ ಒಂದು ಸಮುದಾಯಕ್ಕೆ ಸೀಮಿತವಾಗುತ್ತಿರುವ ಆತಂಕ ಹೋರಾಟದ ವಲಯದಲ್ಲೇ ಎದ್ದಿದೆ. ಇಡೀ ಹೋರಾಟ ಬರಬರುತ್ತಾ ಕೇವಲ ಮುಸ್ಲಿಂ ಸಮುದಾಯದ ಹೋರಾಟವಾಗಿ ಬದಲಾಗುತ್ತಿದೆಯೇ? ಎಂಬ ಅನುಮಾನಗಳು ಕೂಡ ಹೆಚ್ಚುತ್ತಿದ್ದು, ಪ್ರತಿಭಟನೆ, ಧರಣಿಗಳಲ್ಲಿಬಹುತೇಕ ಒಂದು ಸಮುದಾಯದವರೇ ಕಾಣಿಸಿಕೊಳ್ಳುತ್ತಿರುವುದು ಇಂತಹ ಅನುಮಾನಗಳಿಗೆ ಎಡೆಮಾಡಿದೆ ಎಂಬ ಮಾತು ಸ್ವತಃ ಹೋರಾಟಗಾರರ ವಲಯದಲ್ಲಿಯೇ ಕೇಳಿಬರತೊಡಗಿದೆ.
ದೇಶವ್ಯಾಪಿ ಎನ್ ಆರ್ ಸಿ ಜಾರಿಯ ತನ್ನ ನಿಲುವಿನಿಂದ ಸರ್ಕಾರ ವಾಸ್ತವವಾಗಿ ಹಿಂದೆ ಸರಿಯದೇ ಇದ್ದರೂ, 2021ರ ಜನಗಣತಿಗೆ ಮುಂದಿನ ಏಪ್ರಿಲ್ ನಿಂದಲೇ ಚಾಲನೆ ನೀಡಲಿದ್ದು, ಆ ವೇಳೆ ಗಣತಿಕಾರರು ಮನೆಮನೆ ಸಮೀಕ್ಷೆ ನಡೆಸುವಾಗ ಜನಗಣತಿಯಷ್ಟೇ ಅಲ್ಲದೆ, ಎನ್ ಆರ್ ಸಿ ಮಾಹಿತಿಯನ್ನು ಕಲೆಹಾಕಲಿದ್ದಾರೆ. ಆದರೆ, ಎನ್ ಆರ್ ಸಿ ಎಂಬ ಹೆಸರು ಕೇವಲ ಅಸ್ಸಾಂಗೆ ಮಾತ್ರ ಸೀಮಿತವಾಗಿ ಬಳಸಲಾಗಿದ್ದು, ದೇಶವ್ಯಾಪಿ ಅದನ್ನು ಎನ್ ಆರ್ ಐಸಿ(ನ್ಯಾಷನಲ್ ರಿಜಿಸ್ಟರ್ ಆಫ್ ಇಂಡಿಯನ್ ಸಿಟಿಜನ್ಸ್) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಜನಗಣತಿ ವೇಳೆ ಮಾತ್ರ ಎನ್ ಆರ್ ಸಿ ಅಥವಾ ಎನ್ ಆರ್ ಐಸಿ ಎಂಬ ಹೆಸರುಗಳು ಬಳಕೆಯಾಗುವುದಿಲ್ಲ. ಬದಲಾಗಿ ಎನ್ ಪಿಆರ್ ಎಂಬ ಹೆಸರಿನಲ್ಲಿಯೇ ಮಾಹಿತಿ ಕಲೆಹಾಕಿ, ಸಂಗ್ರಹಿಸಿದ ಮಾಹಿತಿಯನ್ನು ಬಳಿಕ ಎನ್ ಆರ್ ಐಸಿ ಮಾಹಿತಿ ಕೋಶ ಎನ್ನಲಾಗುತ್ತದೆ. ಈ ವಿವರಗಳನ್ನು ಭಾರತ ಸರ್ಕಾರವೇ ಪ್ರಕಟಿಸಿರುವ ಗೆಜೆಟ್ ನಲ್ಲಿಯೇ ನೀಡಲಾಗಿದೆ. ಹಾಗೇ ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮ ಸಂಪೂರ್ಣ ವಿವರಗಳನ್ನು ದಾಖಲೆ ಸಹಿತ ನೀಡಬೇಕು ಎಂಬ ಸೂಚನೆಯನ್ನೂ ಅಧಿಸೂಚನೆ ಒಳಗೊಂಡಿದೆ.
ಅಲ್ಲದೆ, ಸ್ವತಃ ಗೃಹ ಸಚಿವ ಅಮಿತ್ ಅವರೇ ರಾಜ್ಯಸಭೆಯಲ್ಲಿ ಮತ್ತು ಸಂಸತ್ತಿನ ಹೊರಗೆ ಹಲವು ಸಭೆ- ಸಮಾರಂಭಗಳಲ್ಲಿ ಸ್ಪಷ್ಟವಾಗಿಯೇ, ಮೊದಲು ಸಿಎಎ ಕಾಯ್ದೆ ಜಾರಿಗೆ ಬರುತ್ತದೆ. ಅದರ ಪ್ರಕಾರ ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ಘಾನಿಸ್ತಾನದ ನಿರಾಶ್ರಿತ ಮುಸ್ಲಿಮೇತರರಿಗೆ ದೇಶದ ಪೌರತ್ವ ನೀಡುತ್ತೇವೆ. ಬಳಿಕ ದೇಶವ್ಯಾಪಿ ಎನ್ ಆರ್ ಸಿ ಜಾರಿ ಮಾಡಿ ಪ್ರತಿಯೊಬ್ಬ ಅಕ್ರಮ ವಲಸಿಗರನ್ನು ಹುಡುಕಿಹುಡುಕಿ ಹೊರಹಾಕುತ್ತೇವೆ ಎಂದಿದ್ದಾರೆ. ಎನ್ ಆರ್ ಸಿ ಬಗ್ಗೆ ಸರ್ಕಾರ ಚರ್ಚೆಯನ್ನೇ ಮಾಡಿಲ್ಲ, ದೇಶವ್ಯಾಪಿ ಎನ್ ಆರ್ ಸಿ ಜಾರಿ ಮಾಡುವ ಬಗ್ಗೆ ಯೋಚಿಸಿಲ್ಲ ಎಂಬ ಸಮಜಾಯಿಷಿಗಳನ್ನು ಪ್ರಧಾನಿ ಮೋದಿಯವರು ನೀಡಿದ್ದರೂ, ಸ್ವತಃ ಗೃಹ ಸಚಿವರು ಮಾತ್ರ ತಮ್ಮ ಹಿಂದಿನ ಹೇಳಿಕೆಗಳ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಅಲ್ಲದೆ, ದೇಶವ್ಯಾಪಿ ಎನ್ ಪಿಆರ್ ಹೆಸರಿನಲ್ಲಿ ಎನ್ ಆರ್ ಐಸಿ ಮಾಹಿತಿ ಕಲೆಹಾಕುವಾಗ ಯಾವುದೇ ಸಮುದಾಯಕ್ಕಾಗಲೀ, ವ್ಯಕ್ತಿಗಾಗಲೀ ವಿನಾಯ್ತಿ ನೀಡಲಾಗಿಲ್ಲ. ಜೊತೆಗೆ ಸರ್ಕಾರವೇ ಹೇಳಿಕೊಂಡಂತೆ ಎನ್ ಆರ್ ಐಸಿಯ ಮೊದಲ ಹೆಜ್ಜೆ ಸಿಎಎ ಹೇಗೋ, ಹಾಗೇ ಎನ್ ಪಿಆರ್ ಎಂಬುದು ಎನ್ ಆರ್ ಐಸಿಯ ಮೊದಲ ಹೆಜ್ಜೆ ಎಂಬುದನ್ನು ಕೂಡ ತಳ್ಳಿಹಾಕಲಾಗದು. ಹಾಗಾಗಿ ಎನ್ ಪಿಆರ್ ದಾಖಲಾತಿ ವೇಳೆ ಕೇವಲ ಮುಸ್ಲಿಮರು ಮಾತ್ರವಲ್ಲದೆ, ದೇಶದ 130 ಕೋಟಿ ಜನರೆಲ್ಲರೂ ದಾಖಲೆಸಹಿತ ನೋಂದಾಯಿಸಿಕೊಳ್ಳುವುದು ಅನಿವಾರ್ಯ. ಹಾಗಾಗಿ ಮಸ್ಲಿಮರು ಮಾತ್ರವಲ್ಲದೆ ಎಲ್ಲಾ ಭಾರತೀಯರು ಜನನ ಪ್ರಮಾಣಪತ್ರ, ತಂದೆ-ತಾಯಿ ಜನನ ಪ್ರಮಾಣ ಪತ್ರ ಮತ್ತು ಜನ್ಮಸ್ಥಳ ದಾಖಲೆ, ಭೂ ದಾಖಲೆ, ವಾಸ ದೃಡೀಕರಣ, ಮತದಾರರ ಪಟ್ಟಿ, ಆಧಾರ್ ಸೇರಿದಂತೆ ಹದಿನಾಲ್ಕಕ್ಕೂ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕಿದೆ. ಒಂದು ವೇಳೆ ದಾಖಲೆ/ ಸಾಕ್ಷ್ಯ ನೀಡದೇ ಇದಲ್ಲಿ ಅವರ ಪೌರತ್ವದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ನಮೂದಿಸಿ ದಾಖಲೆ ಸಲ್ಲಿಸಲಾಗುತ್ತದೆ. ಬಳಿಕ ಪರಿಶೀಲನೆ ವೇಳೆ ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ. ಆಗಲೂ ದಾಖಲೆ ಸಲ್ಲಿಸಲು ವಿಫಲವಾದಲ್ಲಿ ನ್ಯಾಯಾಲದಯಲ್ಲಿ ಪ್ರಕರಣ ದಾಖಲಾಗುತ್ತದೆ. ಅಲ್ಲಿಯೂ ಪೌರತ್ವ ಸಾಬೀತಾಗದೇ ಹೋದರೆ ಬಂಧನ ಕೇಂದ್ರದ ದಾರಿ ತೋರಿಸಲಾಗುತ್ತದೆ.
ಆದರೆ, ಈ ಬಲೆಯಿಂದ ತಪ್ಪಿಸಿಕೊಳ್ಳುವುದು ಮೇಲೆ ಹೇಳಿದ ಮೂರು ಮುಸ್ಲಿಂ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ವಲಸೆ ಬಂದಿರುವ ನಿರಾಶ್ರಿತರಿಗೆ ಮಾತ್ರ ಸಾಧ್ಯ. ಅವರಿಗೆ ಸಿಎಎ ಕಾಯ್ದೆಯ ಅಡಿ ಪೌರತ್ವ ನೀಡಲು ಅವಕಾಶವಿದೆ. ಆದರೆ, ಆ ಅವಕಾಶ ದೇಶದ ನಿವಾಸಿಗಳಾದ ಮುಸ್ಲಿಮರಿಗಾಗಲೀ, ಹಿಂದೂಗಳಿಗಾಗಲೀ ಇಲ್ಲ! ಇದು ಕಾಯ್ದೆಯ ಒಳಪೆಟ್ಟು.
ಆದರೆ ಎನ್ ಆರ್ ಸಿ- ಸಿಎಎ ವಿರೋಧಿ ಹೋರಾಟಗಳಲ್ಲಿ ಬಹುತೇಕ ಮಾತುಗಳು ಕಾಯ್ದೆ ದೇಶದ ಸಂವಿಧಾನದ ಧರ್ಮನಿರಪೇಕ್ಷತೆಯ ಆಶಯಕ್ಕೆ ವಿರುದ್ಧವಿದೆ. ದೇಶದ ಜಾತ್ಯತೀತ ವ್ಯವಸ್ಥೆಗೆ ವ್ಯತಿರಿಕ್ತವಾಗಿದೆ. ಕೋಮುವಾದಿ ಅಜೆಂಡಾದ ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಹಾದಿಯಲ್ಲಿದೆ, ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವ ಹುನ್ನಾರದಿಂದ ಕೂಡಿದೆ ಎಂಬ ವಿಷಯಗಳೇ ಪ್ರಮುಖವಾಗಿ ಕೇಳಿಬರುತ್ತಿವೆ. ದಾಖಲೆ/ ಸಾಕ್ಷ್ಯ ಒದಗಿಸುವಲ್ಲಿ ವಿಫಲವಾದರೆ ಮುಸ್ಲಿಮರಷ್ಟೇ ಹಿಂದೂಗಳು(ಪ್ರಮುಖವಾಗಿ 1971ಕ್ಕೆ ಹಿಂದಿನ ದಾಖಲೆ, ತಂದೆ ತಾಯಿಯರ ನಿಖರ ಜನ್ಮದಿನ-ಸ್ಥಳ ಮಾಹಿತಿ ಇಲ್ಲದೆ ಶೂದ್ರರು ಮತ್ತು ದಲಿತರು) ಕೂಡ ಬಂಧನ ಕೇಂದ್ರಗಳತ್ತ ಮುಖಮಾಡಬೇಕಾಗುತ್ತದೆ ಎಂಬ ವಿಷಯ ಚರ್ಚೆಗೇ ಬಂದಿಲ್ಲ. ಹಾಗಾಗಿ ಸಹಜವಾಗೀ ಹಿಂದುತ್ವವಾದಿ ಹಿಂದೂಗಳಂತೆಯೇ ಲಿಬರಲ್ ಹಿಂದೂಗಳು ಕೂಡ ಇಡೀ ಈ ವಿಷಯ ಮುಸ್ಲಿಮರಿಗೆ ಸಂಬಂಧಿಸಿದ್ದು ಎಂಬ ಧೋರಣೆಯಲ್ಲಿದ್ದಾರೆ.
ಹಾಗಾಗಿಯೇ ಬಹುಸಂಖ್ಯಾತ ಜನಸಾಮಾನ್ಯರು ಸಿಎಎ- ಎನ್ ಆರ್ ಸಿ ವಿಷಯದಲ್ಲಿ ತಮಗೂ ಅದಕ್ಕೂ ಸಂಬಂಧವಿಲ್ಲ. ಅದು ಮುಸ್ಲಿಮರ ಸಮಸ್ಯೆ ಎಂಬ ನಿರ್ಲಿಪ್ತ ಭಾವನೆ ಹೊಂದಿದ್ದಾರೆ. ಆದರೆ, ಬಿಜೆಪಿ ಈ ಸಂದರ್ಭವನ್ನು ಬಳಸಿಕೊಂಡು, ದಾಖಲೆಪತ್ರ ಇಲ್ಲದವರಿಗೆ ಸಿಎಎ ಕಾಯ್ದೆಯಡಿ ಪೌರತ್ವ ನೀಡಲಾಗುವುದು. ಅಂಥವರ ನೆರವಿಗಾಗಿಯೇ ಈ ಕಾಯ್ದೆ ತಿದ್ದುಪಡಿ ತರಲಾಗಿದೆ ಎಂಬ ವಾದ ಮಂಡಿಸುತ್ತಿದೆ. ಮನೆಮನೆ ಅಭಿಯಾನದಲ್ಲೇ ಅದು ಇದೇ ಹಸೀಸುಳ್ಳುಗಳನ್ನು ಬಿತ್ತಿಯೇ ಜನಬೆಂಬಲ ಪಡೆಯುವ ಪ್ರಯತ್ನವನ್ನು ಸಮರೋಪಾದಿಯಲ್ಲಿ ಆರಂಭಿಸಿದೆ. ಆದರೆ, ವಾಸ್ತವ ಬೇರೆಯೇ ಇದೆ ಮತ್ತು ಅದು ಭಯಾನಕವಾಗಿದೆ ಎಂಬ ಸತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಸಿಎಎ-ಎನ್ ಆರ್ ಸಿ ವಿರೋಧಿಗಳಿಂದ ಗಣನೀಯ ಪ್ರಯತ್ನ ಕಾಣುತ್ತಿಲ್ಲ. ಇದು ಬಿಜೆಪಿಗೆ ವರವಾಗಿದೆ. ಹಾಗಾಗಿ ಎನ್ ಆರ್ ಸಿ- ಸಿಎಎ ವಿಷಯವನ್ನು ಕೂಡ ತನ್ನ ಕೋಮು ಧ್ರುವೀಕರಣದ ರಾಜಕಾರಣದ ಅಸ್ತ್ರವಾಗಿ ಬಳಸಿಕೊಳ್ಳಲು ಅದು ಮುಂದಾಗಿದ್ದು, ಮನೆಮನೆ ಅಭಿಯಾನದಲ್ಲಿ ಮುಖ್ಯವಾಗಿ ಮುಸ್ಲಿಮರಿಗೆ ಜಗತ್ತಿನಾದ್ಯಂತ ದೇಶಗಳಿವೆ. ಆದರೆ, ಹಿಂದೂಗಳಿಗೆ ಇರುವುದು ಭಾರತವೊಂದೇ ಎಂಬುದನ್ನು ಮುಖ್ಯವಾಗಿ ಪ್ರಸ್ತಾಪಿಸಿ ಜನರ ಮನವೊಲಿಸಲಾಗುತ್ತಿದೆ. ಕಾಯ್ದೆಯ ಉದ್ದೇಶ- ವಿವರಗಳ ಮಾಹಿತಿ ಇರದ ಬಹುಸಂಖ್ಯಾತರು, ಅದನ್ನೇ ನಂಬಿಕೊಂಡು ದೇಶದಿಂದ ಮುಸ್ಲಿಮರನ್ನು ಹೊರಹಾಕಲು ಇದೊಂದು ಅವಕಾಶ ಎಂಬ ಭ್ರಮೆಯಲ್ಲಿಯೂ ತೇಲುತ್ತಿರುವ ಹಾಗಿದೆ.
ಹಾಗಾಗಿ; ಒಂದು ಕಡೆ, ಸಿಎಎ- ಎನ್ ಆರ್ ಸಿಯ ವಿವರಗಳನ್ನು ಜನರಿಗೆ ತಲುಪಿಸುವಲ್ಲಿ ಕಾಯ್ದೆ ವಿರೋಧಿಗಳು ವಿಫಲರಾಗಿದ್ದರೆ, ಮತ್ತೊಂದು ಕಡೆ, ಜನಸಾಮಾನ್ಯರ ಅಜ್ಞಾನವನ್ನೇ ಬಳಸಿಕೊಂಡು ಬಿಜೆಪಿ ಕಾಯ್ದೆಯ ಪರ ಜನಾಭಿಪ್ರಾಯ ಮೂಡಿಸುವಲ್ಲಿ ಅಭಿಯಾನ ಆರಂಭಿಸಿದೆ. ಸದ್ಯಕ್ಕೆ ಸಿಎಎ-ಎನ್ ಆರ್ ಸಿ ವಿವಾದ ಕೇವಲ ಹದಿನೈದು ದಿನದಲ್ಲೇ ಬಿಜೆಪಿಯ ಪರವಾಗಿ ವಾಲುತ್ತಿರುವ ಸೂಚನೆ ಸಿಕ್ಕುತ್ತಿದೆ. ಮುಖ್ಯವಾಗಿ ಮಾಧ್ಯಮ ನಿರ್ಬಂಧ ಹಾಗೂ ಇಂಟರ್ ನೆಟ್ ಸ್ಥಗಿತದಂತಹ ಕ್ರಮಗಳ ಮೂಲಕ ಮಾಹಿತಿ ಜನಸಾಮಾನ್ಯರಿಗೆ ತಲುಪುವುದನ್ನು ತಡೆದ ಬಿಜೆಪಿ, ಇದೀಗ ಆ ನಿರ್ವಾತವನ್ನು ತುಂಬುವ ಕಾರ್ಯಕ್ಕೆ ಸಮಾರೋಪಾದಿಯಲ್ಲಿ ಚಾಲನೆ ನೀಡಿದೆ!