ಸಾವಿತ್ರಿಬಾಯಿ ಫುಲೆ ಎಂಬ ಹೆಸರು ದೇಶದ ಸಮಸ್ತ ಮಹಿಳೆಯರ ಹಾಗೂ ದಮನಿತ ಸಮುದಾಯಗಳ ನರನಾಡಿಗಳಲ್ಲಿ ಸ್ಪೂರ್ತಿಯನ್ನೂ ಚೈತನ್ಯವನ್ನೂ ತುಂಬುವ ಹೆಸರು. ಹೆಣ್ಣುಮಕ್ಕಳಿಗಾಗಿ ದೇಶದಲ್ಲಿ ಮೊತ್ತಮೊದಲ ಶಾಲೆ ತೆರೆದು ಶೋಷಿತರ ಪ್ರಜ್ಞೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದು ಸಾವಿತ್ರಿಬಾಯಿ ಫುಲೆ. ದೇಶದ ಎಷ್ಟೋ ದಲಿತ, ಹಿಂದುಳಿದ ಸಮುದಾಯಗಳ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಇಂದಿಗೂ ಅತ್ಯಂತ ದುಸ್ತರವಾಗಿದೆ. ತೀರಾ ಇತ್ತೀಚೆಗಷ್ಟೇ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಸರ್ಕಾರಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒಂದಷ್ಟು ಉತ್ತೇಜನ ನೀಡುತ್ತಿವೆ. ಆದರೆ ಇಂದಿಗೆ 150 ವರ್ಷಗಳಿಗೆ ಮೊದಲೇ ಸ್ತ್ರೀಶಿಕ್ಷಣದ ಮಹತ್ವವನ್ನು ಅರಿತು ಅದಕ್ಕಾಗಿ ಸಾವಿತ್ರಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿಗಳು ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದರು ಎಂಬ ಸಂಗತಿಯನ್ನು ನೋಡಿದಾಗ ಅದರ ಮಹತ್ವ ನಮಗೆ ತಿಳಿಯುತ್ತದೆ. ಈ ಮಹಾನ್ ಚೇತನಗಳ ಬಗ್ಗೆ ಭಕ್ತಿಭಾವ ಮೂಡುತ್ತದೆ.
ಮಾಲಿ ಎಂಬ ಹಿಂದುಳಿದ ಸಮುದಾಯಕ್ಕೆ ಸೇರಿದ ಲಕ್ಷ್ಮಿ ಮತ್ತು ಖಾಂಡೋಜಿ ಪಾಟೀಲ್ ದಂಪತಿಗಳ ಹಿರಿಯ ಮಗಳಾಗಿ ಜನವರಿ 3, 1831ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಾಯ್ಗಾಂವ್ ಎಂಬ ಹಳ್ಳಿಯಲ್ಲಿ ಸಾವಿತ್ರಿಬಾಯಿ ಫುಲೆ ಜನಿಸಿದರು. ಅದು ಪುಣೆಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಊರು. ಆ ಕಾಲದಲ್ಲಿ ಜಾರಿಯಲ್ಲಿದ್ದ ಬಾಲ್ಯವಿವಾಹ ಪದ್ಧತಿಯಂತೆ ಸಾವಿತ್ರಿಬಾಯಿ ಫುಲೆ ಕೇವಲ 10 ವರ್ಷದ ಬಾಲಕಿಯಾಗಿದ್ದಾಗಲೇ ಆಕೆಯ ತಂದೆತಾಯಿ 13 ವರ್ಷದ ಬಾಲಕ ಜ್ಯೋತಿಬಾ ಫುಲೆಯೊಂದಿಗೆ ಮದುವೆ ಮಾಡಿ ಕಳಿಸಿದರು.
ಸ್ವಾತಂತ್ರ್ಯಪೂರ್ವದ ಭಾರತ ಇತಿಹಾಸದಲ್ಲಿ ಸಾಮಾಜಿಕ ಸಂರಚನೆ ವಿಕೃತವಾಗಿತ್ತು. ಸಮಾಜದಲ್ಲಿ ಎಲ್ಲಾ ಅವಕಾಶಗಳನ್ನು ಹೊಂದಿದ್ದ ಉನ್ನತ ಜಾತಿವರ್ಗಗಳು ದಲಿತ-ಶೂದ್ರ ಸಮುದಾಯಗಳಿಗೆ ಶಿಕ್ಷಣದ ಅವಕಾಶಗಳನ್ನು ವ್ಯವಸ್ಥಿತವಾಗಿ ವಂಚಿಸುತ್ತಿದ್ದರು. ಸತಾರಾ ನಗರದಿಂದ 40 ಕಿ.ಮೀ ದೂರದಲ್ಲಿರುವ ‘ಕಟಗುಣ’ ಎಂಬ ಹಳ್ಳಿಯಲ್ಲಿ ತಂದೆ ಗೋವಿಂದರಾವ್ ಫುಲೆ, ತಾಯಿ ಜಿಮಣಾಬಾಯಿ ಅವರ ಮಗನಾಗಿ ಜನಿಸಿದ್ದ ಜ್ಯೋತಿಬಾ ಫುಲೆ ಅವರ ಮುತ್ತಾತ ‘ಚೌಗುಲ’ ಆಗಿದ್ದರು. ಅಂದರೆ ಪೇಶ್ವೆಗಳ ಕಾಲದಲ್ಲಿ ಬ್ರಾಹ್ಮಣ ಕುಲಕರ್ಣಿ ಅವರಿಗೆ ಸಹಾಯಕರಾಗಿ ಕೆಲಸ ಮಾಡುವುದು. ಈ ಕೆಲಸದಲ್ಲಿ ವಿರಸವುಂಟಾಗಿ ಮುತ್ತಾತ ಕಟಗುಣ ಎಂಬ ಹಳ್ಳಿಯನ್ನು ಬಿಟ್ಟು ಪುಣೆಗೆ ಬಂದು ಸೇರಿದರು. ಇವರು ಸಹ ಹಿಂದುಳಿದ ವರ್ಗಕ್ಕೆ ಸೇರುವ ಮಾಲಿ(ಹೂ ಮಾರುವ) ಸಮುದಾಯಕ್ಕೆ ಸೇರಿದ್ದರು. ಇವರ ಜಾತಿಯ ವೃತ್ತಿ ಹೂ ಬೆಳೆಯುವ ಮತ್ತು ಮಾರುವ ಕಾಯಕದಲ್ಲಿನ ಪರಿಣಿತಿ ತಿಳಿದ ಪೇಶ್ವೆಗಳು ಇವರಿಗೆ ಅರಮನೆಗೆ ಹೂ ನೀಡುವ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಅದಕ್ಕಾಗಿ ಇವರಿಗೆ ಪುಣೆಯ ಪಾರ್ವತಿ ಬೆಟ್ಟದ ಬಳಿ 35 ಎಕರೆ ಜಮೀನನ್ನು ಕೊಡುಗೆಯಾಗಿ ನೀಡಿದ್ದರು. ಫುಲೆ 11 ವರ್ಷದವರಾಗಿದ್ದಾಗ ಶಾಲೆಗೆ ಹೋಗುತ್ತಿದ್ದರೂ ಬ್ರಾಹ್ಮಣ ಗುಮಾಸ್ತನೊಬ್ಬನ ಪಿತೂರಿಯಿಂದ ಶಾಲೆಯನ್ನು ಬಿಡುವಂತಾಯಿತು. ಆಗ ಶಾಲೆ ಬಿಟ್ಟ ಫುಲೆ ಹೂ ಮಾರುವ ಕುಲಕಸುಬನ್ನು ಮಾಡಿದರು. ಆದರೂ ಶಿಕ್ಷಣದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ. ಇವರ ಆಸಕ್ತಿಯನ್ನು ಕಂಡು ಗಪೂರ್ ಬೇಗ್ ಮುನ್ಷಿ ಎಂಬ ಶಿಕ್ಷಕ ಮತ್ತು ಲೆಗಿಟ್ ಎಂಬ ಕ್ರೈಸ್ತ ಪಾದ್ರಿ 1841ರಲ್ಲಿ ಜ್ಯೋತಿಬಾರನ್ನು ಮತ್ತೆ ಶಾಲೆಗೆ ಸೇರಿಸಿದರು. ಅಲ್ಲಿ ಅವರು ಏಳನೆಯ ತರಗತಿವರೆಗೂ ಶಾಲೆ ಕಲಿತರು.
ಜ್ಯೋತಿಬಾ ಫುಲೆ ತಮ್ಮ 13ನೆಯ ವಯಸ್ಸಿನಲ್ಲಿಯೇ ಸಾವಿತ್ರಿಬಾಯಿ ಫುಲೆಯವರನ್ನು ಮದುವೆಯಾದ ನಂತರ ಸಾವಿತ್ರಿಬಾಯಿ ಫುಲೆಯವರೂ ಸಹ ವಿದ್ಯಾಬ್ಯಾಸ ಪಡೆದುಕೊಳ್ಳಲು ಆಸಕ್ತಿ ವಹಿಸಿದರು. ಸರ್ಕಾರದ ದಾಖಲೆಗಳು ಹೇಳುವಂತೆ ಅವರಿಗೆ ಯಾವುದೇ ಶಾಲೆಯ ಶಿಕ್ಷಣ ಇರಲಿಲ್ಲವಾದರೂ ಸ್ವತಃ ತಮ್ಮ ಪತಿ ಜ್ಯೋತಿಬಾ ಫುಲೆಯವರಿಂದಲೇ ಪ್ರಾಥಮಿಕ ಹಂತದ ಶಿಕ್ಷಣ ಪಡೆದರು. ಮುಂದೆ ಇವರ ಮಿತ್ರರಾದ ಸಖಾರಾಮ್ ಯಶ್ವಂತ್ ಪರಾಂಜಪೆ ಮತ್ತು ಕೇಶವ ಶಿವರಾಮ ಭವಾಲ್ಕರ್ ಸಹಕಾರದೊಂದಿಗೆ ಹೆಚ್ಚಿನ ಶಿಕ್ಷಣ ಪಡೆದರು. ಶಿಕ್ಷಕರ ತರಬೇತಿಗೂ ಸೇರಿಕೊಂಡರು. ಅಮೆರಿಕದ ಮಿಷನರಿಯೊಂದು ನಡೆಸುತ್ತಿದ್ದ ಸಂಸ್ಥೆಯಲ್ಲಿ ಮತ್ತು ಪುಣೆಯ ನಾರ್ಮಲ್ ಶಾಲೆಯಲ್ಲಿ ಸಾವಿತ್ರಿಬಾಯಿ ತಮ್ಮ ತರಬೇತಿ ಪಡೆದರು. ಹೀಗೆ ಶಿಕ್ಷಣ ತರಬೇತಿ ಪಡೆದ ಸಾವಿತ್ರಿಬಾಯಿ ಪತಿ ಜ್ಯೋತಿಬಾ ಫುಲೆಯವರ ಸಹಕಾರದೊಂದಿಗೆ ತಾವೇ ಮುಂದೆ ನಿಂತು ಶಾಲೆಯೊಂದನ್ನು ತೆರೆದರು. ಈ ಮೂಲಕ ಭಾರತದ ಮೊತ್ತಮೊದಲ ಮಹಿಳಾ ಶಿಕ್ಷಕಿ ಹಾಗೂ ಮೊತ್ತಮೊದಲ ಮುಖ್ಯೋಪಾದ್ಯಾಯಿನಿ ಎನಿಸಿಕೊಂಡರು.
ಮಾತೆ ಸಾವಿತ್ರಿ ಅವರು ಶಿಕ್ಷಿತರಾದ ಮೇಲೆ ಮೊಟ್ಟ ಮೊದಲು 1848 ರಲ್ಲಿ ಪುಣೆಯಲ್ಲಿ ಹೆಣ್ಣು ಮಕ್ಕಳ ಸಲುವಾಗಿ ಮತ್ತು ಮಹಾರ್, ಮಾಂಗ್ ಮುಂತಾದ ಅತಿಶೂದ್ರರ ಸಲುವಾಗಿ ಶಾಲೆಯನ್ನು ತೆರೆದರು. 1 ನವಂಬರ್ 1858ರಲ್ಲಿ ಅನಾಥ ಬಾಲ ಬಾಲಿಕಾಶ್ರಮ ಸ್ಥಾಪಿಸಿದರು. ಇದನ್ನು ಗಮನಿಸಿದ ದೇಶದ ಮಹಾರಾಜರ ಪೈಕಿ. ಬರೋಡಾ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡ್ ಅವರು 1883ರಲ್ಲಿ ಅಸ್ಪೃಶ್ಯರಿಗಾಗಿಯೇ ಶಾಲೆ ತೆರೆದರು. ಆದರೆ ಅಸ್ಪೃಶ್ಯರ ಶಾಲೆಯಲ್ಲಿ ಕೆಲಸ ಮಾಡಲು ಹಿಂದೂ ಜನಾಂಗದ ಯಾವೊಬ್ಬ ಉಪಾಧ್ಯಯರು ಬರುತ್ತಿಲ್ಲವಾದ್ದರಿಂದ, ಬರೋಡಾ ರಾಜ್ಯವೂ ಮಕ್ಕಳ ಹಿತದೃಷ್ಟಿಯಿಂದ ಮುಸಲ್ಮಾನ ಉಪಾಧ್ಯಾಯರನ್ನು ನೇಮಿಸಿಕೊಂಡಿತು.
ಬರೋಡಾ ಮಹಾರಾಜರು ಮತ್ತು ಮಾತೆ ಸಾವಿತ್ರಿಬಾಯಿ ಫುಲೆ ಅವರು ಶಾಲೆ ಆರಂಭಿಸಿದಾಗ ಪ್ರಮುಖವಾಗಿ ಬೆನ್ನೆಲುಬಾಗಿ ನಿಂತವರು ಮುಸಲ್ಮಾನರು. ಜ್ಯೋತಿಬಾ ಫುಲೆ ಮತ್ತು ಮಾತೆ ಸಾವಿತ್ರಿ ಅವರು ಅಸ್ಪೃಶ್ಯರ ಶಿಕ್ಷಣ್ಕಾಗಿ ಹೋರಾಟ ನಡೆಸುವಾಗ ಅವರ ತಂದೆ ಮನೆಯಿಂದ ಹೊರಹಾಕಿದರು. ಅವರು ಮನೆಯಿಂದ ಹೊರಬಂದಾಗ, ಅಸ್ಪೃಶ್ಯರಿಗಾಗಿ ಶಾಲೆ ನಿರ್ಮಿಸಿದಾಗ ಸಹಾಯಕ್ಕಾಗಿ ನಿಂತವರು ಮುಸಲ್ಮಾನರು. ಅಂತಹ ಕಠಿಣ ಸನ್ನಿವೇಶದಲ್ಲಿ ಯಾವೊಬ್ಬ ಮೇಲ್ಜಾತಿ ಹಿಂದೂವು ಅವರ ನೆರವಿಗೆ ಬರಲಿಲ್ಲ. 1848-49ರಲ್ಲಿ ಫುಲೆ ಅವರು ಶೂದ್ರಾತಿ ಶೂದ್ರ ಹೆಣ್ಣು ಮಕ್ಕಳಿಗೆ ಶಾಲೆಯನ್ನು ತೆರೆಯುತ್ತ “ಈ ನಾಡಿನ ಶೋಷಿತ ತಳಸಮುದಾಯದ ಸೋದರ-ಸೋದರಿಯರನ್ನು ದುಖಃದ ಕತ್ತಲು ಆವರಿಸಿದೆ. ಅದನ್ನು ಹೋಗಲಾಡಿಸಲು ನನ್ನಲ್ಲಿ ಸ್ಪೂರ್ತಿ ಅಂಕುರವಾಗಿದೆ. ಇದನ್ನು ನಾನು ಗಂಭಿರವಾಗಿ ಯೋಚಿಸಿದಾಗ ಗಂಡು ಮಕ್ಕಳ ಶಾಲೆಗಿಂತ ಹೆಣ್ಣು ಮಕ್ಕಳ ಶಾಲೆ ನನ್ನನ್ನು ಬಹಳವಾಗಿ ಕಾಡಿದೆ. ಹಾಗಾಗಿ ನೀವೆಲ್ಲಾ ಸಹಕಾರ ನೀಡಿ ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ” ಎಂದು ಕೇಳಿಕೊಂಡರು. ಅನಂತರ ಸಾವಿತ್ರಿಬಾ ಫುಲೆ ಅವರು ಪಾಠ ಹೇಳಿಕೊಡಲು ಶಾಲೆಗೆಂದು ಹೊರಟರೆ ಹಾದಿಯಲ್ಲಿ ಇದೇ ಹಿಂದೂಗಳು ಸಗಣೆ ಎರಚುತ್ತಿದ್ದರು. ಶಾಲೆಗೆ ಹೋಗುವಾಗ ಬ್ಯಾಗಿನಲ್ಲಿ ಇನ್ನೊಂದು ಸೀರೆ ಹಾಕಿಕೊಂಡು ಹೋಗಿ, ಶಾಲೆಯಲ್ಲಿ ಬದಲಿಸಿ ಪಾಠ ಮಾಡುತ್ತಿದ್ದರು. ಆದರೆ ಕೊನೆಗೆ ಇದೇ ಬ್ರಾಹ್ಮಣ ಹೆಣ್ಣು ಮಕ್ಕಳ ಪರವಾಗಿ ನಿಂತವರು ಇದೇ ಮಾತೆ.
1851 ಜುಲೈ 3 ರಂದು ಫುಲೆ ದಂಪತಿಗಳು ತೆರೆದ ಶಾಲೆಯಲ್ಲಿ ಆರಂಭದಲ್ಲಿ ಕೇವರ 8 ಹುಡುಗಿಯರು ಕಲಿಯಲು ಸೇರಿಕೊಂಡರು. ಕೊನೆಗೆ 48 ಹುಡುಗಿಯರು ಬಂದು ಸೇರಿದರು. ಸಮಾಜದ ತಳ ಸಮುದಾಯಗಳಿಗೆ, ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದ ಕಾರಣಕ್ಕೆ ಫುಲೆ ದಂಪತಿಗಳು ಸ್ಥಿತಿವಂತ ಜಾತಿಗಳ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಆಗ ಮೇಲ್ಜಾತಿಗಳ ದರ್ಪ ಯಾವ ಮಟ್ಟಕ್ಕಿತ್ತೆಂದರೆ ಫುಲೆ ದಂಪತಿಗಳು ಆರಂಭಿಸಿದ ಶಾಲೆಗೆ ಯಾರೂ ಶಿಕ್ಷಕರಾಗಲು ಬರಲಿಲ್ಲ. ಹೀಗಾಗಿ ಸಾವಿತ್ರಿಬಾಯಿ ಫುಲೆಯವರೇ ಶಾಲೆಯ ಮುಖ್ಯಶಿಕ್ಷಕಿಯಾದರು. ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ ಮೇಲೆ ಕಲ್ಲು ತೂರುವ, ಅವರ ಮೇಲೆ ದೈಹಿಕ ಹಲ್ಲೆ ನಡೆಸುವ ಪ್ರಯತ್ನವೂ ಪಟ್ಟಭದ್ರರಿಂದ ನಡೆಯಿತು. ಆದರೆ ಫುಲೆ ದಂಪತಿಗಳ ಸಾಮಾಜಿಕ ಬದ್ಧತೆ ಹಾಗೂ ಶಿಕ್ಷಣದ ಬಗ್ಗೆ ಇದ್ದ ಕಾಳಜಿ ಅಪಾರವಾಗಿತ್ತು. ಎಲ್ಲಾ ಅಡೆತಡೆಗಳ ನಡುವೆಯೇ 1852ರ ಒಳಗೆ ಮತ್ತೆರಡು ಶಾಲೆಗಳನ್ನು ತೆರೆದರು. ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಇದ್ದ ಜ್ಯೋತಿಬಾ ಫುಲೆ ಅವರು ‘ಶಿಕ್ಷಣವಿಲ್ಲದೆ ಬುದ್ದಿ ನಾಶ. ಬುದ್ದಿ ಇಲ್ಲದೆ ನೈತಿಕತೆ ನಾಶ. ನೈತಿಕತೆ ಇಲ್ಲದೆ ಕ್ರಿಯಾಶೀಲತೆ ನಾಶ. ಕ್ರಿಯಾಶಿಲತೆ ಇಲ್ಲದೆ ಸಂಪತ್ತು ನಾಶ. ಸಂಪತ್ತಿಲ್ಲದೆ ಶೂದ್ರಾತಿ ಶೂದ್ರರು ಅವನತಿಗಿಳಿದರು’ ಎನ್ನುತ್ತಾ, ಶಿಕ್ಷಣವಿಲ್ಲದೆ ಇರುವುದೇ ಈ ಎಲ್ಲಾ ಬಗೆಯ ಅವನತಿಗೆ ಕಾರಣ ಎನ್ನುತ್ತಾರೆ. ಹಾಗಾಗಿಯೇ ಒಟ್ಟು ಸುಮಾರು 18 ಶಾಲೆಗಳನ್ನು ಈ ದಂಪತಿಗಳು ತೆರೆಯುತ್ತಾರೆ. ಹಾಗೂ 1876-77ರ ಹೊತಿಗೆ ಸುಮಾರು 50ಕ್ಕೂ ಹೆಚ್ಚು ಹಾಸ್ಟೆಲ್ಗಳನ್ನು ನಡೆಸುತ್ತಾರೆ.
ಫುಲೆ ದಂಪತಿಗಳು ಸ್ಥಾಪಿಸಿದ ಶಾಲೆಯಲ್ಲಿ ಓದಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ತಂದೆ ರಾಮ್ ಜಿ ಸಕ್ಪಾಲ್ ಅವರು 4ನೇ ತರಗತಿ ಪಾಸಾಗಿ ನಂತರವೇ ಮಿಲಿಟರಿ ಸೇರಿದ್ದು. ಅಂತೆಯೆ ಇದನ್ನು ತಿಳಿದಿದ್ದ ಫುಲೆ ಅವರು ಈ ದೇಶದ ಶೋಷಿತ ಸಮುದಾಯಗಳಿಗೆ ಶಿಕ್ಷಣ ಅತಿಮುಖ್ಯವೆಂದು 1882ರಲ್ಲಿ ಸರ್, ವಿಲಿಯಂ ಹಂಟರ್ ಅವರ ಅಧ್ಯಕ್ಷತೆಯಲ್ಲಿ ಭಾರತಕ್ಕೆ ಭೇಟಿ ನೀಡಿದ ಶಿಕ್ಷಣ ಆಯೋಗಕ್ಕೆ ಮನವಿ ಸಲ್ಲಿಸಿದರು. ಆ ಮನವಿಯಲ್ಲಿ ಪ್ರತಿ ಹಳ್ಳಿಯಲ್ಲಿಯೂ ಶೂದ್ರ ಮಕ್ಕಳಿಗೆ ಶಾಲೆ. ಬ್ರಾಹ್ಮಣರಲ್ಲದ ಶಿಕ್ಷಕರ ನೇಮಕ. ವಿದ್ಯಾರ್ಥಿ ವೇತನ ವಿದ್ಯಾರ್ಥಿ ನಿಲಯಗಳ ಸ್ಥಾಪನೆ. ವ್ಯವಸಾಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ. ಶಿಕ್ಷಣಕ್ಕಾಗಿ ಅಗತ್ಯ ಧನಸಹಾಯ. ಶೂದ್ರಾತಿ ಶೂದ್ರರು ಸಾರ್ವಜನಿಕ ಸೇವೆಯಲ್ಲಿ ಭಾಗವಹಿಸುವಿಕೆ. ಮುನಿಸಿಪಾಲಿಟಿಗಳ ಖಾಸಗಿ ಇಂಗ್ಲೀಷ್ ಶಾಲೆಗಳ ಅನುಧಾನ ಮುಂತಾದ ವಿಷಯಗಳು ಫುಲೆ ಅವರು ಹಂಟರ್ ಕಮಿಷನ್ಗೆ ನೀಡಿದ ಮನವಿಯಲ್ಲಿದ್ದವು. ನಿಜ ಹೇಳಬೇಕೆಂದರೆ ಫುಲೆ ದಂಪತಿಗಳು ಭಾರತದಲ್ಲಿ ಶಿಕ್ಷಣ ಕ್ರಾಂತಿ ನಡೆಸುವವರೆಗೂ ಈ ಭಾರತ ಕಗ್ಗತ್ತಲೆಯ ಯುಗವಾಗಿತ್ತು. ದಲಿತರಿಗೆ, ಶೂದ್ರರಿಗೆ ವಿದ್ಯೆ ನಿರಾಕರಣೆಯಿಂದ ದೇಶಕ್ಕೆ ನಂಜು ಬಡಿದಂತಾಗಿತ್ತು.
ಶೋಷಿತ ಸಮುದಾಯಗಳಿಗೆ ಶಿಕ್ಷಣ ಹಂಚುವುದರ ಜೊತೆಗೆ ಸಾಮಾಜಿಕ ಪರಿವರ್ತನೆಗಾಗಿ ‘ಸತ್ಯ ಶೋಧಕ ಸಮಾಜ’ ಎಂಬ ಸಂಸ್ಥೆಯನ್ನು 1873 ರಲ್ಲಿ ಸ್ಥಾಪಿಸಿದರು. ಇದರಲ್ಲಿ ‘ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸುವುದು. ಮೂರ್ತಿ ಪೂಜೆಗೆ ವಿರೋಧ. ಬ್ರಾಹ್ಮಣ ಪೌರೋಹಿತ್ಯವಿಲ್ಲದ ಮದುವೆ. ವಿಧುರ/ವಿಧವಾ ವಿವಾಹಕ್ಕೆ ಪ್ರೋತ್ಸಾಹ. ಬಾಲ್ಯವಿವಾಹಕ್ಕೆ ವಿರೋಧ. ವೇದಗಳ ಪಾರಮ್ಯವನ್ನು ಧಿಕ್ಕರಿಸುವುದು. ಸ್ತ್ರೀ ಪುರುಷರಿಗೆ ಸಮಾನ ಹಕ್ಕು’ ಮುಂತಾದ ಉದ್ದೇಶಗಳನ್ನು ಈ ಸಂಸ್ಥೆ ಹೊಂದಿತ್ತು. ಈ ಎಲ್ಲಾ ಹೋರಾಟದ ಹಿಂದೆ 1848ರಲ್ಲಿ ನಡೆದ ಒಂದು ಘಟನೆ ಅವರ ಜೀವನದ ದಿಕ್ಕನ್ನೆ ಬದಲಿಸಲು ಕಾರಣವಾಗಿದ್ದು. “ಒಬ್ಬ ಬ್ರಾಹ್ಮಣ ಮಿತ್ರನ ಮದುವೆ ಮೆರವಣಿಗೆಯಲ್ಲಿ ಶೂದ್ರರಾದ ಇವರು ಭಾಗವಹಿಸಿದ್ದಾರೆಂದು ಹಿರಿಯ ಬ್ರಾಹ್ಮಣರೆಲ್ಲಾ ಸೇರಿ ಇವರನ್ನು ಅಪಮಾನಿಸಿ ಮೆರವಣಿಗೆಯಿಂದ ಹೊರಕ್ಕೆ ತಳ್ಳಿದರು” ಈ ಘಟನೆಯ ಪರಿಣಾಮವಾಗಿ ಅವರು ಬಹುದೊಡ್ಡ ಕ್ರಾಂತಿಕಾರರಾದರು.
ಸತ್ಯ ಶೋಧಕ ಸಮಾಜದ ವತಿಯಿಂದ 28-09-1873 ರಲ್ಲಿ ಬ್ರಾಹ್ಮಣರಿಲ್ಲದ ವಿವಾಹ ನಡೆಸುತ್ತಾರೆ. ಮುಂಬಯಿ ಗಿರಣಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಜಾಗೃತಿ ಮೂಡಿಸುತ್ತಾರೆ. ತಮ್ಮ ಮನೆಯ ಬಳಕೆಗಿದ್ದ ಬಾವಿಯನ್ನೆ ಅಸ್ಪೃಶ್ಯರಿಗೆ ಬಳಕೆಗೆ ನೀಡುತ್ತಾರೆ. ಬ್ರಾಹ್ಮಣರ ವಿಧವೆಯರ ತಲೆ ಬೋಳಿಸದಿರುವಂತೆ ಕ್ಷೌರಿಕರಿಗೆ ತಿಳುವಳಿಕೆ ಮೂಡಿಸುತ್ತಾರೆ. ವಿಧವೆಯರಿಗೆ ಹುಟ್ಟಿದ ಮಕ್ಕಳಿಗೆ ಆಶ್ರಮ ಕಟ್ಟಿಸುತ್ತಾರೆ. ನಮಗೆ ಮಕ್ಕಳಾದರೆ ಅನಾಥ ಮಕ್ಕಳ ಮೇಲೆ ಪ್ರೀತಿ ಇಲ್ಲವಾಗುತ್ತದೆ ಎಂದು ಒಬ್ಬ ಬ್ರಾಹ್ಮಣ ವಿಧವೆಗೆ ಹುಟ್ಟಿದ ಮಗುವನ್ನೆ(ಯಶವಂತ) ಫುಲೆ ಅವರು ದತ್ತು ತೆಗೆದುಕೊಳ್ಳುತ್ತಾರೆ. ಇಂತಹ ಕಾರ್ಯಗಳು ಆ ಕಾಲಕ್ಕೆ ಬಹುದೊಡ್ಡ ಮಟ್ಟದ ಕ್ರಾಂತಿಯನ್ನೆ ಮಾಡುತ್ತವೆ. ಇವರ ಸೇವೆಗಳನ್ನು ಗುರುತಿಸಿ ಅಂದಿನ ಬ್ರಿಟೀಷ್ ಸರ್ಕಾರ 1888ರಲ್ಲಿ ಆರು ಸಾವಿರ ಜನರ ಸಮ್ಮುಖದಲ್ಲಿ ಮಹಾತ್ಮ ಎಂಬ ಬಿರುದು ನೀಡಿ ಗೌರವಿಸಿತು.
ಒಮ್ಮೆ ಜಸ್ಟಿಸ್ ರಾನಡೆ ಅವರು ಸತ್ಯ ಶೋಧಕ ಸಮಾಜಕ್ಕೆ ನಮ್ಮನ್ನು ಸೇರಿಸಿಕೊಳ್ಳಿ ಎಂದಾಗ ‘ಸಮಾನತವಾದದ ಚಿಂತನೆ ಇಲ್ಲದ. ಬದ್ಮಾಶಿ ಉದ್ದೇಶಗಳನ್ನು ಹೊಂದಿರುವ ಜನರಿಗೆ ಇಲ್ಲಿ ಅವಕಾಶವಿಲ್ಲ. ನೀವು ಪ್ರಗತಿಪರರಾಗಿದ್ದಲ್ಲಿ ನಿಮ್ಮ ಬ್ರಾಹ್ಮಣರ ಜನರ ನಡುವೆ ಕೆಲಸ ಮಾಡಿ ಅವರನ್ನು ಪ್ರಗತಿಪರರನ್ನಾಗಿ ಮಾಡಿ’ ಎಂದರು. ಹಾಗೆಯೇ ಜ್ಯೋತಿಬಾ ಫುಲೆ ಅವರು ತೃತೀಯ ರತ್ನ -1855, ಜಾತಿಬೇಧ ವಿವೇಕಸಾರ-1865, ಛತ್ರಪತಿ ಶಿವಾಜಿ ಅವರ ಪವಾಡ-1869 ಬ್ರಾಹ್ಮಣರ ಕುಯುಕ್ತಿ-1869, ದಾಸ್ಯ-1877, ಸತ್ಯ ಶೋಧಕ ಸಮಾಜ ರಿತ್ಯ ಮಂತ್ರಾದಿ ಸರ್ವ ಪ್ರಜಾವಿಧಿ-1887, ಸಾರ್ವಜನಿಕ ಸತ್ಯಧರ್ಮ ಮುಂತಾದ ಕೃತಿಗಳನ್ನು ರಚಿಸಿದ್ದರು.
ಭಾರತದ ಪ್ರಥಮ ಮುದ್ರಿತ ಕವನ ಸಂಕಲನ ಎನ್ನಲಾದ ‘ಕಾವ್ಯ ಫುಲೆ’ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ ಸಾವಿತ್ರಿ ಬಾಯಿ, ಕಾವ್ಯವನ್ನು ಜಾತಿ ಪದ್ಧತಿ ಹಾಗೂ ಮನುಧರ್ಮಶಾಸ್ತ್ರದ ವಿರುದ್ಧ ಅಸ್ತ್ರವಾಗಿ ಬಳಸಿದರು.ತಮ್ಮ ಮನೆಯ ಬಾವಿಯನ್ನು ದಲಿತರಿಗೂ ತೆರೆದರು.
1860 ರಲ್ಲಿ ವಿಧವೆಯರ ತಲೆ ಬೋಳಿಸುವುದನ್ನು ವಿರೋಧಿಸಲು ಕ್ಷೌರಿಕರನ್ನು ಸಂಘಟಿಸಿದರು. ದಲಿತ ಹುಡುಗಿ ಮತ್ತು ಬ್ರಾಹ್ಮಣ ಹುಡುಗನ ಪ್ರೇಮವಿವಾಹಕ್ಕೆ ಇಂಬಾಗಿ ನಿಂತರು. ವಿಧವಾವಿವಾಹ ಕುರಿತು ಎಲ್ಲೆಡೆ ಅರಿವು ಮೂಡಿಸಿದರು. ವೇಶ್ಯೆಯರ, ವಿಧವೆಯರ ಮಕ್ಕಳು ಅವರಲ್ಲಿ ಆಸರೆ ಪಡೆದರು. ಜೋತಿಬಾ ನಿರ್ಗಮನದ ನಂತರ ಸತ್ಯಶೋಧಕ ಸಮಾಜದ ಸಾಮಾಜಿಕ ಚಳವಳಿಯನ್ನೂ ಮುಂದುವರಿಸಿದ ಸಾವಿತ್ರಿ ಬಾಯಿ, ಪ್ಲೇಗಿಗೆ ತುತ್ತಾದ ರೋಗಿಗಳ ಆರೈಕೆ ಮಾಡುತ್ತಿರುವಾಗ ಪ್ಲೇಗಿನ ಸೋಂಕು ತಗುಲಿ 10 ಮಾರ್ಚ್ 1897 ರಂದು ತೀರಿಕೊಂಡರು.
ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ನಿಜಕ್ಕೂ ಆಚರಿಸಬೇಕಾಗಿರುವುದು ಮಾತೆ ಸಾವಿತ್ರಿಬಾಯಿ ಫುಲೆಯವರ ಹೆಸರಿನಲ್ಲಿ. ಆದರೆ ಈ ದೇಶದ ಮೇಲ್ಜಾತಿ ಮನಸುಗಳು ಅಷ್ಟು ವಿಶಾಲತೆ ತೋರುವುದು ಸಾಧ್ಯವೇ ಇಲ್ಲ. ಇನ್ನೂ ದುರಂತದ ಸಂಗತಿಯೆಂದರೆ ಭಾರತೀಯ ಸಮಾಜಕ್ಕೆ ಅದರಲ್ಲೂ ಮಹಿಳೆಯರ ಸಬಲೀಕರಣಕ್ಕೆಅಡಿಪಾಯ ಹಾಕಿದ್ದೇ ಫುಲೆ ದಂಪತಿಗಳು. ಆದರೆ ಸದಾ ವಿದೇಶದ ಹೋರಾಟಗಾರ. ಹೋರಾಟಗಾರ್ತಿಯರನ್ನೇ ಜಪ ಮಾಡುವ ಬೌದ್ಧಿಕ ವರ್ಗಕ್ಕೆ ನಮ್ಮ ನೆಲದ ಮೊದಲ ಸ್ತ್ರೀವಾದಿಗಳಾಗಿ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಕಾಣದೇ ಇದ್ದುದು ದುಃಖದ ಸಂಗತಿ. ಪ್ರಪಂಚಕ್ಕೆ ಮಾದರಿಯಾಗಿರುವ ಫುಲೆ ದಂಪತಿಗಳು ಎಲ್ಲರೆದೆಗೂ ದೀಪ ಹಚ್ಚಿದ್ದಾರೆ. ಇನ್ನು ಮುಂದಾದರು ನಾವು ಇವರನ್ನು ಮನೆ ಮನೆಗೆ ಕೊಂಡೊಯ್ಯಬೇಕಿದೆ. ಆ ಮೂಲಕ ಇವರನ್ನು ಭಾರತದ ಅಕ್ಷರದಾತರನ್ನು ಮಾತನಾಡಿಸಬೇಕಿದೆ..
ಎದೆಗೆ ಬಿದ್ದ ಅಕ್ಷರ,
ಭೂಮಿಗೆ ಬಿದ್ದ ಬೀಜ
ಇಂದೆಲ್ಲಾ ನಾಳೆ ಫಲ ಕೊಡುವುದು
ಎಂದು ದೇವನೂರ ಮಹಾದೇವ ಅವರ ನುಡಿಗಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಆದರೆ ನಿಜವಾಗಿಯೂ ಎದೆಗೆ ಅಕ್ಷರ ಬಿಳಲು ಕಾರಣರಾದವರನ್ನು ಮರೆತಯೇ ಬಿಡುತ್ತೆವೆ. ಅಂತಹ ಮಹಾನ್ ಕಾರ್ಯ ಮಾಡಿದವರನ್ನು ಚರಿತ್ರೆಯ ಪುಟಗಳಿಂದ ಮತ್ತೆ ನೊಡಬೇಕಿದೆ.