ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಕನ್ನಡಿಗರ ಅಸಮಾಧಾನಕ್ಕೆ, ಭ್ರಮನಿರಸನಕ್ಕೆ ಗುರಿಯಾಗಿದ್ದಾರೆ. ಭಾರೀ ಭರವಸೆಯ ರೈತರ ಸಮಾವೇಶ, ಈಗಾಗಲೇ ಬಿಜೆಪಿ ಸರ್ಕಾರದ ಮುಂದಿರುವ ಬಿಕ್ಕಟ್ಟು- ಸವಾಲುಗಳನ್ನು ತಿಳಿಗೊಳಿಸುವ ಬದಲಾಗಿ, ಹಲವು ವಿವಾದಗಳಿಗೆ ಸಿಲುಕಿ ಇದೀಗ ಸ್ವತಃ ಮೋದಿ ಮತ್ತು ಬಿಜೆಪಿ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ತುಮಕೂರಿನ ರೈತರ ಸಮಾವೇಶದಲ್ಲಿರಾಜ್ಯದ ರೈತರ ಸಂಕಷ್ಟ, ಕೃಷಿ ಬಿಕ್ಕಟ್ಟು, ನೆರೆ ಹಾನಿ ಮತ್ತು ಪರಿಹಾರ, ನರೇಗಾ ಬಾಕಿ ಪಾವತಿ, ಗ್ರಾಮೀಣ ಆರ್ಥಿಕತೆಯ ಪತನ ಸೇರಿದಂತೆ ಯಾವುದೇ ಜ್ವಲಂತ ಸಮಸ್ಯೆಗಳ ಬಗ್ಗೆ ತುಟಿಬಿಚ್ಚದ ಪ್ರಧಾನಿ ವರಸೆ ಒಂದು ಕಡೆ ರೈತ ಸಮುದಾಯವನ್ನು ಕೆರಳಿಸಿದ್ದರೆ, ಮತ್ತೊಂದು ಕಡೆ ಸ್ವತಃ ಬಿಜೆಪಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಮತ್ತು ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ.
ಅಷ್ಟೇ ಅಲ್ಲದೆ, ಬಳಿಕ ಪ್ರಧಾನಿ ತಂಗಿದ್ದ ರಾಜಭವನಕ್ಕೂ ತೆರಳಿ ಸಿಎಂ ಯಡಿಯೂರಪ್ಪ ನೆರೆ ಹಾನಿ ನಷ್ಟ ಮತ್ತು ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ನೀಡಬೇಕು ಎಂದು ಲಿಖಿತ ಮನವಿ ಸಲ್ಲಿಸಿದರೂ ಅದಕ್ಕೂ ಅವರಿಂದ ಪೂರಕ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಬಿಜೆಪಿ ಪಾಳೆಯದಲ್ಲೇ ದೊಡ್ಡ ಮಟ್ಟದ ಅಸಮಾಧಾನ ಹುಟ್ಟಿಸಿದೆ.
ರಾಜ್ಯದಲ್ಲಿ ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಮಹಾ ಪ್ರವಾಹದಲ್ಲಿ ಸುಮಾರು ಮೂರು ಲಕ್ಷ ಮನೆಗಳು ಕೊಚ್ಚಿಹೋಗಿವೆ. ಸುಮಾರು 33 ಸಾವಿರ ಕೋಟಿ ರೂಗಳಷ್ಟು ಭಾರೀ ನಷ್ಟ ಸಂಭವಿಸಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ, ನೆರವು ಯಾಚಿಸಿ ಆರು ತಿಂಗಳು ಗತಿಸಿದರೂ ಕೇಂದ್ರ ಈವರೆಗೆ ನೀಡಿದ್ದು ಕೇವಲ 1200 ಕೋಟಿ ರೂ. ಮಾತ್ರ! ಅದೂ ಕೇವಲ ಒಂದು ತಿಂಗಳ ಅವಧಿಯಲ್ಲಿ ಸ್ವತಃ ಸಿಎಂ ಐದು ಬಾರಿ ದೆಹಲಿಗೆ ಹೋಗಿ ಪ್ರಧಾನಿ ಕಚೇರಿ ಮತ್ತು ಬಿಜೆಪಿ ಕಚೇರಿಯ ಕಂಬ ಸುತ್ತಿ ಬಂದ ಬಳಿಕ! ಇದೀಗ ಸ್ವತಃ ಸಿಎಂ ಸಾರ್ವಜನಿಕ ವೇದಿಕೆಯಲ್ಲೇ ನೆರವಿಗೆ ಬನ್ನಿ ಎಂದು ಗೋಗರೆದರು ಆ ಬಗ್ಗೆ ಕನಿಷ್ಠ ಮಿಡಿಯುವ ಮನಸ್ಸು ಮೋದಿಯವರಿಗೆ ಇಲ್ಲದೇ ಹೋಯಿತಲ್ಲ ಎಂಬುದು ರಾಜ್ಯದ ರೈತ ಸಮುದಾಯ ಮತ್ತು ಸ್ವತಃ ಬಿಜೆಪಿಗರ ಅಸಮಾಧಾನ.
ಜೊತೆಗೆ ಪ್ರತಿಪಕ್ಷಗಳು ಕೂಡ ಮೋದಿಯವರ ಈ ನಿರ್ಲಕ್ಷ್ಯವನ್ನೇ ಮುಂದಿಟ್ಟುಕೊಂಡು, 25 ಮಂದಿ ಸಂಸದರನ್ನು ಆರಿಸಿಕಳಿಸಲು ಮಾತ್ರ ಬಿಜೆಪಿ ಮತ್ತು ಮೋದಿಗೆ ಕನ್ನಡಿಗರು ಬೇಕು. ಕನ್ನಡಿಗರ ಯಾವ ಸಮಸ್ಯೆಯ ಬಗ್ಗೆಯೂ ಅವರಿಗೆ ಕಾಳಜಿ ಇಲ್ಲ. ಕರ್ನಾಟಕದ ಬಗೆಗಿನ ಮೋದಿ- ಶಾ ಉದಾಸೀನ ಮತ್ತು ನಿರ್ಲಕ್ಷ್ಯಕ್ಕೆ ಈ ರೈತ ಸಮಾವೇಶ ಮತ್ತೊಂದು ಉದಾಹರಣೆ. ಕರ್ನಾಟಕದ ರೈತರು ಮತ್ತು ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಮಾತಿಲ್ಲ, ಆದರೆ ಪಾಕಿಸ್ತಾನದ ಬಗ್ಗೆ ಮೂರು ಹೊತ್ತೂ ಭಜನೆ ಮಾಡುತ್ತಾರೆ. ಹಾಗಾದರೆ ಕನ್ನಡಿಗರು ಪಾಕಿಸ್ತಾನದ ಬಳಿ ಪರಿಹಾರ ಕೇಳಬೇಕೆ ಎಂದು ತೀವ್ರ ವಾಗ್ದಾಳಿ ನಡೆಸಿವೆ. ಇದು ಸಹಜವಾಗೇ ಬಿಜೆಪಿ ಮತ್ತು ಸಂಘಪರಿವಾರದ ಮಂದಿಗೆ ತೀವ್ರ ಮುಖಭಂಗದ ಪರಿಸ್ಥಿತಿಯನ್ನು ತಂದೊಡ್ಡಿದೆ.
ರೈತ ಸಮಾವೇಶ ಮತ್ತು ಸಿಎಂ ವೈಯಕ್ತಿಕ ಮನವಿ ಸಂದರ್ಭದಲ್ಲಿ ರಾಜಕೀಯ ಲಾಭನಷ್ಟದ ಪ್ರಶ್ನೆ ಇತ್ತು. ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸಿದ, ಸ್ಪಂದಿಸುವ ಹೆಚ್ಚುಗಾರಿಕೆಯ ಮೇಲೆ ನೆರೆ ಪರಿಹಾರ ಮತ್ತು ನೆರೇಗಾ ಬಾಕಿ ಬಿಡುಗಡೆ ವಿಷಯದಲ್ಲಿ ಇಷ್ಟು ದಿನ ಆದ ಉದಾಸೀನ ಮತ್ತು ವಿಳಂಬದ ಕುರಿತ ಜನಾಕ್ರೋಶವನ್ನು ಶಮನ ಮಾಡುವ ಅವಕಾಶವಿತ್ತು. ಆದರೆ, ಮೋದಿ ಅಲ್ಲಿ ರಾಜ್ಯದ ಸಮಸ್ಯೆಯ ಬಗ್ಗೆಯಾಗಲೀ, ರೈತರ ಬಗ್ಗೆಯಾಗಲೀ ಮಾತನಾಡಲೇ ಇಲ್ಲ! ಬದಲಾಗಿ ರಾಜಕೀಯ ಮಾತನಾಡಬಾರದ ಜಾಗದಲ್ಲಿ ಮಾತನಾಡಿದರು. ಮಾತನಾಡದವರ ಮುಂದೆ ಮಾತನಾಡಿದರು! ಆ ಮೂಲಕ ಮತ್ತೊಂದು ವಿವಾದಕ್ಕೆ, ಮುಜುಗರದ ಟೀಕೆಗಳಿಗೆ ಅವಕಾಶ ಮಾಡಿಕೊಟ್ಟು ಪಕ್ಷ ಮತ್ತು ತಮ್ಮ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟರು!
ಹೌದು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಅವರು ಚಿಕ್ಕ ಮಕ್ಕಳ ಮುಂದೆ ಕೀಳು ರಾಜಕೀಯದ ಮಾತುಗಳನ್ನು ಆಡಿಹೋದರು. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಬಗ್ಗೆ ತೀರಾ ಕೀಳು ರಾಜಕೀಯದ ಮಾತನಾಡಿದರು. ಪಾಕಿಸ್ತಾನದ ಕುರಿತು ಬಾಲಿಶಃ ಹೇಳಿಕೆಗಳನ್ನು ನೀಡಿದರು. ಸಿಎಎ ಮತ್ತು ಎನ್ ಆರ್ ಸಿ ವಿರೋಧಿಗಳನ್ನು ಕೇವಲ ಕಾಂಗ್ರೆಸ್ಸಿಗರು ಎಂದು ಇಡೀ ಹೋರಾಟವನ್ನು ಒಂದು ರಾಜಕೀಯ ಪಕ್ಷದ ಪಿತೂರಿ ಎಂಬಂತೆ ಬಿಂಬಿಸುವ ಯತ್ನವನ್ನು ಇಲ್ಲಿಯೂ ಮುಂದುವರಿಸಿದ ಪ್ರಧಾನಿಗಳು, ಅದಕ್ಕಾಗಿ ಆಯ್ಕೆಮಾಡಿಕೊಂಡ ಸ್ಥಳ ಮತ್ತು ಸಭಿಕರು(ಸಿದ್ದಗಂಗಾ ಮಠ ಮತ್ತು ಅಪ್ರಾಪ್ತ ವಿದ್ಯಾರ್ಥಿಗಳು) ಮಾತ್ರ ಪ್ರಧಾನಿಗಳ ಲೋಕಜ್ಞಾನದ ಬಗೆಗಿನ ಅನುಮಾನ(ನೋಟು ರದ್ದತಿ ಅವಾಂತರ ಜಗಜ್ಜಾಹೀರು ಮಾಡಿದ ಸಂಗತಿ!)ಗಳನ್ನು ಇನ್ನಷ್ಟು ಗಟ್ಟಿಗೊಳಿಸದೇ ಇರಲಿಲ್ಲ.
ಅದರಲ್ಲೂ ನಡೆದಾಡುವ ದೇವರೆಂದೇ ಹೆಸರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕರ್ಮಭೂಮಿಯಲ್ಲಿ, ಅವರ ಗದ್ದುಗೆಯ ಬಳಿ, ಮಠದ ಒಳಗೆ, ಮಠದ ಮಕ್ಕಳ ಮುಂದೆ ಪ್ರಧಾನಿ ಕೀಳು ರಾಜಕೀಯ ಮಾತನಾಡಿದ್ದು ಸಹಜವಾಗೇ ಇಡೀ ಕರ್ನಾಟಕದಾದ್ಯಂತ ಜನರ ಆಕ್ರೋಶಕ್ಕೆ, ಖಂಡನೆಗೆ ಗುರಿಯಾಗಿದೆ. ಜೀವಮಾನವಿಡೀ ರಾಜಕೀಯ, ಜಾತಿ-ಮತ-ಪಂಥ, ಕೋಮುಗಳನ್ನು ಮೀರಿ ಕೋಟ್ಯಂತರ ಮಕ್ಕಳ ಬೆಳಕಾದ ಮಠದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮತ್ತು ಮೋದಿಯವರಿಗೆ ಅವಕಾಶ ಮಾಡಿಕೊಟ್ಟ ಮಠದ ವ್ಯವಸ್ಥೆಯ ಬಗ್ಗೆಯೂ ಜನಸಾಮಾನ್ಯರಲ್ಲಿ ಅಸಮಾಧಾನ ಎದ್ದಿದೆ.
ಸಾಮಾಜಿಕ ಜಾಲತಾಣಗಳಲ್ಲಂತೂ ಮೋದಿ ಭೇಟಿಯ ದಿನ ‘ಗೋ ಬ್ಯಾಕ್ ಮೋದಿ’ ಹ್ಯಾಷ್ ಟ್ಯಾಗ್ ದೇಶದ ಟಾಪ್ ಟ್ರೆಂಡ್ ಸೃಷ್ಟಿಸಿದಂತೆಯೇ, ಮಠದಲ್ಲಿ ಎಳೆಯ ಮಕ್ಕಳ ಮುಂದೆ ರಾಜಕೀಯ ಮಾಡಿದ ಪ್ರಧಾನಿ ನಡೆಯ ಬಗ್ಗೆಯೂ ಮಾರನೇ ದಿನ ವ್ಯಾಪಕ ಟೀಕೆಗಳು ಕೇಳಿಬಂದಿವೆ.
ಕುಗ್ಗುತ್ತಿರುವ ಜನಪ್ರಿಯತೆ, ಸಿಎಎ ಮತ್ತು ಎನ್ ಆರ್ ಸಿ ವಿಷಯದಲ್ಲಿ ಸರ್ಕಾರ ಮತ್ತು ಬಿಜೆಪಿಯ ವಿರುದ್ಧ ಪ್ರಬಲವಾಗುತ್ತಿರುವ ಪ್ರತಿರೋಧ, ಕೃಷಿ ಬಿಕ್ಕಟ್ಟು, ಆರ್ಥಿಕ ಹಿಂಜರಿತ, ಬೆಲೆ ಏರಿಕೆಯಂತಹ ವಿಷಯಗಳಲ್ಲಿ ಸರ್ಕಾರದ ನಾಚಿಕೆಗೇಡಿನ ಸಾಧನೆ, ಅಭಿವೃದ್ಧಿ ರಾಜಕಾರಣದ ಮಾತನಾಡುತ್ತಲೇ ದೇಶದ ರಾಜಕಾರಣವನ್ನು ಕೇವಲ ಪಾಕಿಸ್ತಾನ ಮತ್ತು ಒಂದು ಸಮುದಾಯದ ದ್ವೇಷದ ಮಟ್ಟಕ್ಕೆ ಇಳಿಸಿದ ಕುಖ್ಯಾತಿಗಳು ಪಕ್ಷ ಮತ್ತು ಸರ್ಕಾರದ ವರ್ಚಸ್ಸನ್ನು ದೇಶದ ಒಳಹೊರಗೆ ಮಣ್ಣುಪಾಲು ಮಾಡಿವೆ ಎಂಬ ಹಿನ್ನೆಲೆಯಲ್ಲೇ, ವರ್ಚಸ್ಸು ವೃದ್ಧಿಯ ಸರ್ಕಸ್ ಆಗಿ ಮೋದಿಯವರ ಈ ರಾಜ್ಯಭೇಟಿ ನಿಗದಿಯಾಗಿತ್ತು.
ಆದರೆ, ಈಗ ಆಗಿರುವುದು ಇರುವ ವರ್ಚಸ್ಸನ್ನೂ ಹರಾಜು ಮಾಡುವ ಬೆಳವಣಿಗೆ! ಈ ಡ್ಯಾಮೇಜ್ ಕಂಟ್ರೋಲಿಗಾಗಿ ಮತ್ತೇನು ಸರ್ಕಸ್ಸು ಮಾಡುವರು ಮೋದಿ ಎಂಬುದು ಸದ್ಯದ ಕರ್ನಾಟಕದ ಭೇಟಿಯ ಎರಡನೇ ದಿನದ ಕುತೂಹಲ!