ಸಾಹಿತ್ಯ ಮತ್ತು ಕಲೆಗಳು ಸಮಾಜವನ್ನು ಒಗ್ಗೂಡಿಸಬೇಕು. ಭಿನ್ನ-ಭೇದಗಳನ್ನು ಮೀರಿ ಜನರನ್ನು ಬೆಸೆಯಬೇಕು. ಆದರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮುಂದಿನ ವಾರ ನಡೆಯಬೇಕಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಜಾತಿಕಾರಣದ ಸುಳಿಗೆ ಸಿಕ್ಕು, ಸಾಹಿತ್ಯ-ಕಲೆಗಳ ಮೂಲ ಆಶಯಕ್ಕೇ ತದ್ವಿರುದ್ಧವಾಗಿ ವಿವಾದದ ಬಿರುಗಾಳಿ ಎಬ್ಬಿಸಿದೆ.
ಹದಿನಾರನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಶೃಂಗೇರಿಯಲ್ಲಿ ನಡೆಸಬೇಕು ಎಂಬ ನಿರ್ಣಯದ ಬೆನ್ನಲ್ಲೇ ಜಿಲ್ಲೆಯಲ್ಲಿ ಸಮ್ಮೇಳನದ ಸಾರಥ್ಯ ವಹಿಸುವ ಹಿರಿಯ ಸಾಹಿತಿಗಳ ಹೆಸರುಗಳನ್ನು ಪರಿಶೀಲಿಸಿ, ಸದ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿರುವ ಮತ್ತು ಜಿಲ್ಲೆಯೂ ಸೇರಿದಂತೆ ಮಲೆನಾಡಿನ ಹಲವು ಪರಿಸರ ಮತ್ತು ರೈತಪರ ಹೋರಾಟಗಳ ನೇತೃತ್ವ ವಹಿಸಿದ ಸಾಮಾಜಿಕ ಹಿನ್ನೆಲೆಯ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಈ ಆಯ್ಕೆಯ ವಿಷಯ ತಿಳಿಯುತ್ತಿದ್ದಂತೆ ಶೃಂಗೇರಿಯಲ್ಲಿಯೇ ವಿರೋಧ ಭುಗಿಲೆದ್ದಿದೆ.
ಭಜರಂಗದಳ, ಶ್ರೀರಾಮಸೇನೆಯಂತಹ ಸಂಘಟನೆಗಳ ಜೊತೆ ಬಿಜೆಪಿ ಮತ್ತು ಅದರ ಸಂಘಪರಿವಾರಗಳು ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಹೋರಾಟ ಸಮಿತಿ ಮತ್ತು ನಕ್ಸಲ್ ವಿರೋಧಿ ಹೋರಾಟ ಸಮಿತಿ ಹೆಸರಿನಲ್ಲಿ ಈ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಆರಂಭದಲ್ಲಿ ಸಮ್ಮೇಳನವನ್ನು ವಿರೋಧಿಸಿದ್ದ ಈ ವೇದಿಕೆಗಳು, ಇದೀಗ ಸಮ್ಮೇಳನ ಇರಲಿ, ಅಧ್ಯಕ್ಷರು ಬೇಡ ಎನ್ನುತ್ತಿವೆ. ಅದೇ ಘೋಷಣೆಯಡಿ ಶುಕ್ರವಾರ ಶೃಂಗೇರಿಯಲ್ಲಿ ಪ್ರತಿಭಟನಾ ಜಾಥಾವನ್ನು ಮಾಡಿರುವ ವೇದಿಕೆಗಳು, ಪ್ರಮುಖವಾಗಿ ನಕ್ಸಲ್ ನಂಟು ಹೊಂದಿರುವ ವಿಠಲ ಹೆಗ್ಡೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬಾರದು ಎಂದು ಆಗ್ರಹಿಸಿವೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಎಡಪಂಥೀಯ, ಜನಪರ ವಿಚಾರಧಾರೆಯ ವ್ಯಕ್ತಿಯೊಬ್ಬರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದನ್ನು ಸಹಿಸಲಾಗದು ಎಂಬುದು ವಿರೋಧಿಗಳ ವಾದ. ಅದರಲ್ಲೂ ಮುಖ್ಯವಾಗಿ ವಿಠಲ ಹೆಗ್ಡೆ ಅವರಿಗೆ ನಕ್ಸಲ್ ನಂಟಿತ್ತು ಎಂಬುದನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತಿರುವ ಸಂಘಟನೆಗಳು, ಅವರ ಸಾಹಿತ್ಯ ಕೃಷಿಯ ಬಗ್ಗೆಯಾಗಲೀ, ಅವರು ನಡೆಸಿದ ತುಂಗಾ ಮೂಲ ಉಳಿಸಿ ಸೇರಿದಂತೆ ಹಲವು ಪರಿಸರ ಮತ್ತು ಸಾಮಾಜಿಕ ಹೋರಾಟಗಳ ಬಗ್ಗೆಯಾಗಲೀ ಪ್ರಸ್ತಾಪಿಸುತ್ತಿಲ್ಲ. ಇದೀಗ ವಿರೋಧ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿಯವರು ಕೂಡ ಸಮ್ಮೇಳನವನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಶೃಂಗೇರಿಯ ಪೊಲೀಸರು ಕೂಡ ಸಂಘಪರಿವಾರದ ಪರವೇ ನಿಂತಿದ್ದು, ಸಮ್ಮೇಳನಕ್ಕೆ ಭದ್ರತೆ ಕೋರಿ ಕಸಾಪ ಸಮ್ಮೇಳನ ಸಮಿತಿ ಸಲ್ಲಿಸಿದ್ದ ಅರ್ಜಿಗೆ ಜಿಲ್ಲಾಡಳಿತದಿಂದ ಸಮ್ಮೇಳನಕ್ಕೆ ಅನುಮತಿ ಪಡೆದುಕೊಂಡಲ್ಲಿ ಮಾತ್ರ ಭದ್ರತೆ ನೀಡಲಾಗುವುದು, ಇಲ್ಲವಾದರಲ್ಲಿ ಭದ್ರತೆ ನೀಡುವುದಿಲ್ಲ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಹಿಂಬರಹ ನೀಡಿದ್ದಾರೆ. ಒಂದು ಅಧಿಕೃತ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ಪಡೆಯದೇ ಪೊಲೀಸ್ ಬಂದೋಬಸ್ತ್ ಮಾಡಲಾಗುದಿಲ್ಲ ಎಂಬ ಪೊಲೀಸರ ಧೋರಣೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಹುಕುಂ ಕೆಲಸ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಈ ನಡುವೆ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮನು ಬಳಿಗಾರ್ ಕೂಡ, ಎಂದಿನಂತೆ ತಮ್ಮ ಬಲಪಂಥೀಯ ನಿಲುವಿಗೆ ಅಂಟಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ಅವರಿಂದ ಪತ್ರ ನೀಡಿದರೆ ಮಾತ್ರ ಸಮ್ಮೇಳನಕ್ಕೆ ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದು ಪರಿಷತ್ ಜಿಲ್ಲಾ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದ್ದಾರೆ. ಸಮ್ಮೇಳನ ಅಧ್ಯಕ್ಷರ ಬದಲಾವಣೆಗಾಗಿ ಬಿಜೆಪಿ ಮತ್ತು ಅದರ ಪರಿವಾರಗಳು ನಡೆಸುತ್ತಿರುವ ಪ್ರತಿಭಟನೆ, ಹೇಳಿಕೆಗಳು ಫಲ ನೀಡುವ ಸೂಚನೆಗಳು ಕಾಣದೆ ಇರುವಾಗ, ಪರಿಷತ್ ಜಿಲ್ಲಾ ಘಟಕ ತನ್ನ ಆಯ್ಕೆಗೆ ಬದ್ಧವಾಗಿರುವುದಾಗಿ ಮತ್ತೆಮತ್ತೆ ಸ್ಪಷ್ಟಪಡಿಸುತ್ತಿರುವುದರಿಂದ ಹತಾಶಗೊಂಡಿರುವ ಅವರು, ಇದೀಗ ಕೇಂದ್ರ ಪರಿಷತ್ ಅಧ್ಯಕ್ಷರ ಮೂಲಕ ಅನುದಾನ ನೀಡುವುದಿಲ್ಲ ಎಂದು ಹೇಳಿಸುವ ತಂತ್ರ ಹೂಡಿದ್ದಾರೆ. ಆದರೆ, ಸಂಘಪರಿವಾರದ ಕೈಗೊಂಬೆಯಾಗಿ ನಡೆದುಕೊಳ್ಳುವ ಮೂಲಕ ಕೇಂದ್ರ ಪರಿಷತ್ ಅಧ್ಯಕ್ಷರು ಪರಿಷತ್ತಿನ ಘನತೆ-ಗೌರವಕ್ಕೆ ಚ್ಯತಿ ತಂದಿದ್ದಾರೆ. ಪರಿಷತ್ ಬಿಜೆಪಿ ಮತ್ತು ಅದರ ಪರಿವಾರದ ಅಂಗಸಂಸ್ಥೆಯಂತೆ ಭಾವಿಸಿದ್ದಾರೆ. ಪರಿಷತ್ ಬಲಪಂಥೀಯರ ಆಸ್ತಿಯಲ್ಲ. ಅದು ಈ ನಾಡಿನ ಸಮಸ್ತ ಕನ್ನಡಿಗರ ಆಸ್ತಿ. ಅಧ್ಯಕ್ಷರು ಆ ವಿವೇಕವನ್ನು ಕಳೆದುಕೊಂಡಿರುವುದು ದುರಾದೃಷ್ಟಕರ ಎಂಬುದು ಸಾಹಿತಿ-ಕಲಾವಿದರ ನೋವಿನ ನುಡಿ. ಆ ಬಗ್ಗೆ ಪ್ರತಿಕ್ರಿಯೆ ಕೇಳಲು ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಸಂಪರ್ಕಿಸುವ ನಮ್ಮ ಪ್ರಯತ್ನ ಫಲ ಕೊಡಲಿಲ್ಲ.
ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ವಿಷಯದಲ್ಲಿ ವಿವಾದ ಭುಗಿಲೇಳುತ್ತಲೇ, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆ ಕುರಿತ ವಾದ-ವಾಗ್ವಾದಗಳು ಗರಿಗೆದರಿದ್ದು, ಪ್ರಮುಖವಾಗಿ ಕನ್ನಡದ ಪ್ರಮುಖ ಬರಹಗಾರರು ವಿಠಲ ಹೆಗ್ಡೆ ಅವರ ಪರ ದನಿ ಎತ್ತಿದ್ದಾರೆ. ಅವರ ಸಾಹಿತ್ಯ ಮತ್ತು ಸಾಮಾಜಿಕ ಕೆಲಸಗಳ ಹಿನ್ನೆಲೆಯಲ್ಲಿ ಅವರೊಬ್ಬ ಅಪರೂಪದ ಕಾಳಜಿಯ ಲೇಖಕ, ‘ಮಂಗನಬ್ಯಾಟೆ’ಯಂತಹ ಕೃತಿಯ ಮೂಲಕ ಮಲೆನಾಡು ಪರಿಸರದ ಬದಲಾವಣೆಯನ್ನು, ಬದುಕಿನ ಸವಾಲುಗಳನ್ನು ಕಟ್ಟಿಕೊಟ್ಟವರು. ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಕೃತಿ ಮೂರು ಮುದ್ರಣ ಕಂಡು, ನಾಲ್ಕನೇ ಮುದ್ರಣಕ್ಕೆ ಅಣಿಯಾಗಿದೆ. ಅಂತಹ ಮಹತ್ವದ ಲೇಖಕರನ್ನು ಕೇವಲ ಸಿದ್ಧಾಂತದ ಕಾರಣಕ್ಕೆ ವಿರೋಧಿಸುವುದು ತರವಲ್ಲ. ಯಾವುದೇ ವಿರೋಧ ಬರಲಿ, ಒಬ್ಬ ನೈಜ ಲೇಖಕನನ್ನು ಹತ್ತಿಕ್ಕುವ ಕೋಮುವಾದಿ ಶಕ್ತಿಗಳ ವಿರುದ್ಧ ನಾವಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆ, ಡಾ. ರಹಮತ್ ತರೀಕೆರೆ, ಗಿರಿಧರ್ ಕಾರ್ಕಳ ಮುಂತಾದವರು ಕಲ್ಕುಳಿ ಅವರ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸ್ವತಃ ಕಲ್ಕುಳಿ ಅವರು ಕೂಡ, “ನನ್ನ ಆಯ್ಕೆಗೆ ವಿರೋಧಿಸುತ್ತಿರುವುದು ಒಂದು ಪೂರ್ವನಿಯೋಜಿತ ಕೃತ್ಯ. 2002ಕ್ಕೆ ಹಿಂದೆಯೂ ನನ್ನ ವಿರುದ್ಧ ಇಂತಹ ಸುಳ್ಳು ಆರೋಪಗಳನ್ನು ಮಾಡಿ, ಜನಪರವಾಗಿದ್ದ ನನ್ನ ದನಿ ಹತ್ತಿಕ್ಕುವ ಪ್ರಯತ್ನಗಳನ್ನು ಪಟ್ಟಭದ್ರರು ನಡೆಸಿದ್ದರು. ಆಗ ಅಧಿಕೃತ ಮಾಧ್ಯಮಗಳಲ್ಲಿ ನಕ್ಸಲ್ ನಂಟಿನ ಬಗ್ಗೆ ಪ್ರಸ್ತಾಪಿಸಿದ್ದ ನಾಲ್ವರು ಸಂಪಾದಕರು ಮತ್ತು ಪ್ರಕಾಶಕರಿಗೆ ನ್ಯಾಯಾಲಯದಲ್ಲಿ ಜೈಲು ಮತ್ತು ದಂಡ ಶಿಕ್ಷೆಯಾಗಿದೆ. ಅಲ್ಲದೆ ಇವರು ಮಾಡುತ್ತಿರುವ ಇತರ ಆರೋಪಗಳು ಕೂಡ ದುರುದ್ದೇಶದ ಸುಳ್ಳು ಆರೋಪಗಳು ಎಂಬುದು ನ್ಯಾಯಾಲಯದಲ್ಲೇ ಸಾಬೀತಾಗಿ ಎಲ್ಲಾ ಪ್ರಕರಣಗಳೂ ಬಿದ್ದುಹೋಗಿವೆ. ಅಂದು ನನ್ನ ವಿರುದ್ಧ ಪಿತೂರಿ ನಡೆಸಿದ ಜನಗಳೇ ಇಂದು ಈ ವಿರೋಧದ ಹಿಂದಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ, ಈ ಹಿಂದೆ 6ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಶೃಂಗೇರಿಯಲ್ಲಿ ನಡೆದಿತ್ತು. ಅದಾದ ಬಳಿಕ ಈಗ ನಡೆಯುತ್ತಿದೆ. ಆಗಲೂ ಬ್ರಾಹ್ಮಣೇತರರೊಬ್ಬರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆಗಲೂ ಒಂದು ಸಮುದಾಯ ಇಲ್ಲದೆ ನೆಪಗಳನ್ನು ಒಡ್ಡಿ ಸಮ್ಮೇಳನವನ್ನು ಬಹಿಷ್ಕರಿಸಿತ್ತು. ಈಗ ಕೂಡ ಅದೇ ಸಮುದಾಯ ನಕ್ಸಲ್ ನಂಟಿನ ನೆಪವೊಡ್ಡಿ ಬ್ರಾಹ್ಮಣೇತರ ಶೂದ್ರ ಸಮುದಾಯದ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿರುವುದಕ್ಕೆ ತನ್ನ ಅಸಹನೆಯನ್ನು ಈ ರೀತಿ ವ್ಯಕ್ತಪಡಿಸುತ್ತಿದೆ. ಹಾಗಾಗಿ ಇದೊಂದು ಸೈದ್ಧಾಂತಿಕ ಸಂಘರ್ಷವೆನ್ನುವುದಕ್ಕಿಂತ, ಜಾತಿಕಾರಣದ ಸಂಘರ್ಷ. ಜಾತಿ ಅಸಹನೆಯ ಮೂಲ. ಅದಕ್ಕೆ ಸಿದ್ಧಾಂತ, ನಕ್ಸಲ್ ಬೆಂಬಲಿಗರು ಎಂಬೆಲ್ಲಾ ನೆಪಗಳನ್ನು ಒಡ್ಡಲಾಗುತ್ತಿದೆ. ಇಂತಹ ಜಾತಿ ಅಸಹನೆ ಶೃಂಗೇರಿಯಲ್ಲಿ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ದಶಕದ ಹಿಂದೆ ಪ್ರೊ. ಕೆ ಪುಟ್ಟಯ್ಯ ಎಂಬ ಶೂದ್ರ ಸಮುದಾಯದವರು ಅಧ್ಯಕ್ಷರಾಗಿದ್ದಾಗ ಕೂಡ ಇಂತಹ ಅಸಹನೆಗೆ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗಿತ್ತು. ಈಗ ಆದಿವಾಸಿಗಳು, ದಲಿತರು ಮತ್ತು ಹಿಂದುಳಿದವರ ಪರ ಜೀವಮಾನವಿಡೀ ಹೋರಾಟ ಮಾಡಿಕೊಂಡುಬಂದ, ಮಲೆನಾಡಿನ ನೆಲೆಜಲದ ರಕ್ಷಣೆಗಾಗಿ ದಶಕಗಳ ಕಾಲ ದುಡಿದ, ಮತ್ತು ಇಡೀ ಮಲೆನಾಡಿನ ಪರಿಸರ-ಬದುಕಿನ ಸಿಂಹಾವಲೋಕನದ ಮಹತ್ವದ ಕೃತಿ ಕೊಟ್ಟಿರುವ ಕಲ್ಕುಳಿ ಅವರನ್ನು ಕೂಡ ಇಂತಹದ್ದೇ ಕಾರಣಕ್ಕೆ ವಿರೋಧಿಸಲಾಗುತ್ತಿದೆ ಎಂಬ ಮಾತುಗಳು ಸ್ವತಃ ಬಿಜೆಪಿಯ ಒಂದು ವಲಯದಲ್ಲೇ ಕೇಳಿಬರುತ್ತಿವೆ. ಇಂತಹ ಭಾವನೆಯ ಕಾರಣದಿಂದಾಗಿಯೇ ಶುಕ್ರವಾರ ಶೃಂಗೇರಿಯಲ್ಲಿ ನಡೆದ ಪ್ರತಿಭಟನೆಯಿಂದ ಬಿಜೆಪಿಯ ಒಂದು ಬಣ ಹೊರಗುಳಿದಿತ್ತು. ಹಾಗಾಗಿ ಆಯೋಜಕರು ಹೇಳಿಕೊಂಡ ಅರ್ಧದಷ್ಟು ಮಂದಿ ಕೂಡ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನಲಾಗುತ್ತಿದೆ.
ಈ ವಾದ, ಇಡೀ ಸಮ್ಮೇಳನದ ವಿರೋಧದ ಹಿಂದೆ ಭಜರಂಗದಳ, ಶ್ರೀರಾಮಸೇನೆಯಂತಹ ಸಂಘಟನೆಗಳ ನೇತೃತ್ವ ಇರುವ ಹಿನ್ನೆಲೆಯಲ್ಲಿ ಇನ್ನಷ್ಟು ಸಮಂಜಸ ಎನಿಸುತ್ತಿದ್ದು, ಶೃಂಗೇರಿಯಂತಹ ಊರಿನಲ್ಲಿ ಈಗಲೂ ಬೇರೂರಿರುವ ಜಾತಿ ಶ್ರೇಷ್ಠತೆ ಮತ್ತು ಜಾತಿ ವ್ಯಸನಕ್ಕೆ ಸಾಕ್ಷಿಯಾಗಿದೆ.
ದಶಕಗಳ ಬಳಿಕ ಶೃಂಗೇರಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೂ ಮತ್ತದೇ ಜಾತಿ ಅಸಹನೆ ಗ್ರಹಣ ಬಡಿದಿದೆ ಎಂಬುದು ನಿಜಕ್ಕೂ ದುರಾದೃಷ್ಟಕರ ಬೆಳವಣಿಗೆ. ಆದರೆ ಈ ಬಾರಿ ಇಂತಹ ಜಾತಿ ವ್ಯಸನಕೇಂದ್ರಿತ ವಿರೋಧಕ್ಕೆ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಪರೋಕ್ಷ ಕುಮ್ಮಕ್ಕು ನೀಡುತ್ತಿರುವುದು ಮಾತ್ರ ಆಘಾತಕಾರಿ. ಇದು ನಾಡಿನ ಎಲ್ಲಾ ಸಾಹಿತಿ-ಕಲಾವಿದರು, ಮಾನವೀಯತೆಯ ಪರ ಇರುವವರನ್ನು ಆತಂಕಕ್ಕೀಡು ಮಾಡುವ ಬೆಳವಣಿಗೆ. ಸಾಹಿತ್ಯ ಪರಿಷತ್ತಿನಂತಹ ಕನ್ನಡಿಗರ ಸಂಸ್ಥೆಯನ್ನು ಒಂದು ಸಿದ್ಧಾಂತದ, ಜಾತಿಯ ಮತ್ತು ಒಂದು ಪಕ್ಷದ ಸ್ವತ್ತಿನಂತೆ ಪರಿಗಣಿಸುತ್ತಿರುವ ಪರಿಷತ್ತಿನ ಅಧ್ಯಕ್ಷರ ವರಸೆ ನಿಜಕ್ಕೂ ಆಘಾತಕಾರಿ !