ಫೈಜ್ ಅಹಮದ್ ಫೈಜ್ ಇಂದು ಇದ್ದಿದರೆ ಇಂದಿನ ನಿರಂಕುಶ ಪ್ರಭುತ್ವದ ಪರಾಕಾಷ್ಠೆಯ ಕರಾಳ ದಿನಗಳನ್ನು ಕಂಡು ಯಾಕಾದರೂ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು? ಬ್ರಿಟಿಷರ ಗುಲಾಮತನವೇ ಇದಕ್ಕಿಂತ ಉತ್ತಮವಿತ್ತು ಎಂದು ಕ್ರಾಂತಿ ಕವಿತೆಯನ್ನೇ ಬರೆದಿರುತ್ತಿದ್ದರೋ ಏನೋ !
1947 ರ ಆಗಸ್ಟ್ 14ರ ದಾಸ್ಯದ ಇರುಳು ಕಳೆದು ನಸುಕು ಹರಿಯುವ ಮುನ್ನವೇ ದೇಶಕ್ಕೆ ಸ್ವಾತಂತ್ರ್ಯದ ಅಮೃತದ ಜೊತೆಗೆ ವಿಭಜನೆಯ ವಿಷವೂ ಸಿಕ್ಕಿತು. “ಈ ಕಳಂಕಿತ ಬೆಳಗೇನೋ ಬಂತು, ಆದರೆ ಇರುಳು ಗಾಯಗೊಳಿಸಿದ ಬೆಳಗಿದು. ನಾವು ಎಂದಾದರೂ ಸಿಗಬಹುದೆಂದು ಹಂಬಲಿಸಿದ ಬೆಳಗಲ್ಲೋ ಗೆಳೆಯಾ ಇದು (ಯಹ್ ದಾಗ್ ದಾಗ್ ಉಜಾಲಾ,ಯೆಹ್ ಶಬ್ ಗಜೀದಾ ಸೆಹರ್! ಯೆಹ್ ವೊಹ್ ಸೆಹರ್ ನಹೀ ಜಿಸಕಾ ಆರಜೂ ಲೇಕರ್ ಚಲೇ ಥೆ ಯಾರ್ ಕಿ ಮಿಲ್ ಜಾಯೇಗಿ ಕಹೀಂ ನ ಕಹೀಂ )
– ದೇಶ ವಿಭಜನೆಯ ಸುಡುಗೆಂಡವನ್ನು ಒಡಲಲ್ಲಿಟ್ಟುಕೊಂಡು ‘ಸ್ವಾತಂತ್ರ್ಯದ ’ಬೆಳಗು’ ಹೇಗಿತ್ತು ಎಂದು ಪ್ರತಿಕ್ರಿಯಿಸಬಲ್ಲವನಾಗಿದ್ದರೆ ಅದು ಕವಿ ಮಾತ್ರ. ದೇಶ ವಿಭಜನೆಯಂತಹ ಯಾತನಾಮಯ ಬೆಳಗನ್ನು ಇಷ್ಟು ಪ್ರಖರವಾಗಿ, ನಿಖರವಾಗಿ ಬೇರೆ ಯಾರು ಬಣ್ಣಿಸಲು ಸಾಧ್ಯ? ಆ ಕವಿ ಹೃದಯದ ಗಾಯ ಎಷ್ಟು ಆಳವಾಗಿರಬೇಡ. ಸ್ವಾತಂತ್ರ್ಯವನ್ನು ಸಂಭ್ರಮಿಸಲಾರದ ದುಃಖ ಮತ್ತು ವಾಸ್ತವತೆಯನ್ನು ಅರಗಿಸಿಕೊಳ್ಳುವುದು ಆತನಿಗೆಷ್ಟು ಕಠಿಣವಾಗಿರಬೇಡ? ಒಂದಿರುಳು ಕಳೆಯುವುದರಲ್ಲಿಯೇ ತನ್ನ ನೆಲ ಹರಿದು ಹಂಚಿಹೋಗುವುದನ್ನು ಲಕ್ಷಾಂತರ ಜನ ನಿರ್ಗತಿಕರಾಗಿದ್ದನ್ನೂ, ಲಕ್ಷಾಂತರ ಜೀವ ಹತ್ಯೆಯಾಗಿ ಶವಗಳ ರಾಶಿರಾಶಿ ಕಣ್ಣೆದುರಲ್ಲೇ ಬೀಳುವಾಗ ಹೇಗೆ ಒಂದು ಸಂವೇದನಾಶೀಲ ಹೃದಯ ಸುಮ್ಮನಿದ್ದೀತು ಎಂಬುದನ್ನು ಸೂಕ್ಷ್ಮಹೃದಯಿಗಳು ಮಾತ್ರ ಅರ್ಥಮಾಡಿಕೊಳ್ಲಬಲ್ಲರು.
ತನ್ನ ಕಾಲದ ಆಗುಹೋಗುಗಳಿಗೆ ನಿರಂತರವಾಗಿ ಸ್ಪಂದಿಸಿದ ಕವಿ ಫಜ್ ಅಹಮದ್ ಫೈಜ್. ಇಂಥ ಸಂವೇದನಶೀಲ ಕವಿಯೊಬ್ಬನ “ಹಮ್ ದೇಖೇಂಗೆ, ಲಾಜಿಮ್ ಹೈ ಕೇ ಹಂ ದೇಖೇಂಗೆ, ನಾವು ನೋಡುತ್ತೇವೆ, ಖಂಡಿತ ನಾವೂ ನೋಡುತ್ತೇವೆ “ ಎಂದು ಪಾಕಿಸ್ತಾನದ ಕಟ್ಟರ್ ಸಂಪ್ರದಾಯದ ಮೂಲಭೂತವಾದಿ, ಸರ್ವಾಧಿಕಾರಿ ಜಿಯಾ ಉಲ್ ಹಖ್ ಅವರ ನಿರಂಕುಶ ಸರ್ಕಾರವನ್ನು ಖಂಡಿಸಿ ಬರೆದ ಕವಿತೆ ಇಂದು ಭಾರತದಲ್ಲಿ “ಹಿಂದೂ ವಿರೋಧಿ” ಕವಿತೆಯೆಂಬ ಕಳಂಕ ಹಚ್ಚಿಕೊಂಡು ಅದಕ್ಕಾಗಿ ದೇಶದ ಪ್ರಮುಖ ತಾಂತ್ರಿಕ ವಿಶ್ವವಿದ್ಯಾಲಯವೊಂದು (IIT Kanpur) ತನಿಖಾ ಸಮಿತಿಯೊಂದನ್ನು ರಚಿಸಲು ಹೊರಟಿದೆಯೆಂದರೆ ಅದಕ್ಕಿಂತ ಹಾಸ್ಯಸ್ಪದ, ಅವಿವೇಕತನ ಮತ್ತೊಂದಿಲ್ಲ.
ಫೈಜ್ 1911 ರಲ್ಲಿ ಸಿಯಾಲ್ಕೋಟ್ನಲ್ಲಿ ಜನಿಸಿದರು, ಸಾಹಿತ್ಯಿಕ ವಲಯಗಳಲ್ಲಿ ಚಿರಪರಿಚಿತವಾದ ಶೈಕ್ಷಣಿಕ ಕುಟುಂಬದಿಂದ ಬಂದವರು. ತಂದೆ ಸುಲ್ತಾನ್ ಮುಹಮ್ಮದ ಖಾನ್ ಬ್ರಿಟಿಷ ಸರ್ಕಾರದಲ್ಲಿ ಬ್ಯಾರಿಸ್ಟರ್ ಆಗಿ ಕೆಲಸಮಾಡುತ್ತಿದ್ದರು. ಅವರ ಮನೆ ಸದಾ ಕವಿಗಳು ಬರಹಗಾರರಿಂದ ತುಂಬಿರುತ್ತಿತ್ತು. ಅವರೆಲ್ಲ ಅಲ್ಲಿ ಸಾಕ್ಷರತಾ ಆಂದೋಲನದ ಸಭೆಗೆ ಸೇರುತ್ತಿದ್ದರು. ಬಾಲ್ಯದಿಂದಲ್ಲೇ ಫೈಜ್ ಶಾಸ್ತ್ರೀಯ ಪರ್ಷಿಯನ್ ಕವಿಗಳಾದ ರೂಮಿ ಮತ್ತು ಹಫೀಜ್ಗಳಲ್ಲಿ ತರಬೇತಿ ಪಡೆದರು. ತದನಂತರ ಇಂಗ್ಲಿಷ್, ಫ್ರೆಂಚ್ ಮತ್ತು ರಷ್ಯನ್ ಸಾಹಿತ್ಯವನ್ನು ಓದಲು ಕಲಿತರು. ಫೈಜ್ ಅವರ ಕಾವ್ಯರಚನೆಗಳು ಸಮಕಾಲೀನ ಬಿಕ್ಕಟ್ಟಿನ ಕ್ಷಣಗಳಿಗೆ ಸಂವಾದಿ ಪ್ರತಿಕ್ರಿಯೆಯೇ ಆಗಿವೆ. ಅವರ ಕಾವ್ಯವನ್ನು ಎರಡು ರೀತಿಯ ವಿಮರ್ಶಾತ್ಮಕ ಚೌಕಟ್ಟಿನಲ್ಲಿ ನೋಡಬಹುದು. ಮೊದಲನೇಯದಾಗಿ ಹೇಗೆ ಅಧಿಕಾರ ಕೇಂದ್ರಿತ ಪ್ರಭುತ್ವ ಹೇಗೆ ಸಮಾಜದ ಅತ್ಯಂತ ತಳವರ್ಗವನ್ನು ತುಳಿಯುತ್ತದೆ ಮತ್ತು ದೀನ ದಲಿತರ ಅಭ್ಯುದಯವನ್ನು ನಿರ್ಲಕ್ಷಿಸುತ್ತದೆ ಎಂದು ಸರ್ಕಾರದ ವೈಫಲ್ಯವನ್ನು ಬಿಂಬಿಸುವ ರಚನೆಗಳು ಮತ್ತು ಎರಡನೆಯದಾಗಿ ಹೇಗೆ ಫೈಜ್ ಕವಿತೆಗಳು ಕಾವ್ಯ ಪ್ರಾಕಾರಕ್ಕೆ ಒಂದು ಹೊಸ ಕ್ರಾಂತಿಯ ದಿಕ್ಕನ್ನು ತೆರೆದವೆಂದು ಹೇಳಬಹುದು. ಫೈಜ್ ಕವಿತೆ ನಜ್ಮ ಶಾಯರಿಗಳು ದೇಶವನ್ನು ಉಪಖಂಡಗಳನ್ನು ಸದಾ ಭೀತಿಯಲ್ಲಿ ಇಡುವ ರಾಜಕೀಯ ಪ್ರಭುತ್ವಗಳ ವಿರುದ್ಧ ಕಟುಟೀಕೆಗಳಿಂದ ಪ್ರತಿಭಟಿಸುವ ಹಾಗೂ ಕಲಮಿನ ಚಾಟಿಯೇಟಿನ ಮೂಲಕ ಓದುಗವರ್ಗವನ್ನು ಎಚ್ಚರಿಸಲು, ಪ್ರಚೋದಿಸಲು ಫೈಜ್ ಅನೇಕ ರೂಪಕ, ಪ್ರತಿಮೆಗಳನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಳ್ಳುತ್ತಾರೆ. ಬ್ರಿಟಷರು ನಮ್ಮನ್ನೇ ಒಡೆಯುತ್ತ ನಮ್ಮದೇ ಮರಳಿನಲ್ಲಿ ಗೆರೆ ಎಳೆದು ನಮ್ಮದೇ ದೇಶವನ್ನು ಇಬ್ಬಾಗಮಾಡಿದ್ದನ್ನು ಫೈಜ್ ಯಾವತ್ತೂ ಮರೆಯುವುದಿಲ್ಲ. ಅಂಥ ದೇಶಪ್ರೇಮಿ ಫೈಜ್ನನ್ನು ಪಾಕಿಸ್ತಾನವೇ ದೇಶದ್ರೋಹಿ ಎಂದು ಜರೆಯುತ್ತದೆ. ಅವರು ಪಾಕಿಸ್ತಾನದಲ್ಲಿ ಇದ್ದದ್ದೇ ಕಡಿಮೆ. 1947 ರ ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯಕ್ಕೆ ಕಾರಣವಾದ ದಶಕದಲ್ಲಿ ಕ್ರಾಂತಿಕಾರಿ ಶಕ್ತಿಯ ಚೆಲುವನ್ನು ಅಭಿವ್ಯಕ್ತಿಸಿದ ಅಸಂಖ್ಯ ಬರಹಗಾರರು ಮತ್ತು ಕವಿಗಳ ಗುಂಪೇ ಪ್ರಗತಿಪರ ಲೇಖಕರ ಸಂಘಟನೆ. ಫೈಜ್ ಪ್ರಗತಿಪರ ಚಳವಳಿಗೆ ಸೇರಿದವರು, ಈ ಗುಂಪಿನ ಬರಹಗಾರರು ಮತ್ತು ಚಿಂತಕರು ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ದುಃಖವನ್ನು ಹೋಗಲಾಡಿಸಬಹುದು ಎಂದು ನಂಬಿದ್ದರು. ಅವರು ಬರೆದ ಪ್ರತಿಯೊಂದು ಸಾಲು ಆ ಕಾಲದ ಸಮಸ್ಯೆಗಳಿಗೆ ಸಕ್ರಿಯ ಬದ್ಧತೆ ಮತ್ತು ಓದುಗರನ್ನು ಸಶಕ್ತಗೊಳಿಸುವ ಪ್ರಯತ್ನವಾಗಿತ್ತು. ಸೃಜನಶೀಲತೆಯೇ ಚಳವಳಿ ಆಗಿ ಹೋರಾಟದ ಸ್ವರೂಪವನ್ನು ಪಡೆದುಕೊಂಡಿತು; ಪ್ರಗತಿಪರರೆಲ್ಲ ಆ ಕಾಲದ ದಬ್ಬಾಳಿಕೆಯನ್ನು ಬಗ್ಗುಬಡಿದು ಬದುಕುವುದರಲ್ಲಿಯೇ ಸಾರ್ಥಕತೆಯನ್ನು ಮೆರೆಯುತ್ತಾರೆ. ಪ್ರಜಾಪ್ರಭುತ್ವದ ಸೋಲು, ಧರ್ಮಾಂಧತೆಯ ಅಮಲೇರುತ್ತಿರುವ ದುರಿತಕಾಲದಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಎತ್ತಿಹಿಡಿಯುವುದೇ ತಮ್ಮ ಆದ್ಯ ಕರ್ತವ್ಯವೆಂದು ನಂಬಿದ್ದರು. ಪ್ರಗತಿಪರ ಚಳವಳಿಯ ಸ್ರುಜನಶೀಲರ ದೊಡ್ಡ ಗುಂಪಿನಲ್ಲಿ ಫೈಜ್ ಅಹಮದ್ ಫೈಜ್, ಸರ್ ಸೈಯ್ಯದ್ ಜಹೀರ್, ಮುಲ್ಕ್ ರಾಜ್ ಆನಂದ, ಸಾದತ್ ಹಸನ್ ಮಾಂಟೋ, ಇಸ್ಮತ್ ಚುಗತಾಯಿ ಸಾಹಿರ್ ಲೂಧಿಯಾನ್ವಿ, ಫಹ್ಮಿದಾ ರಿಯಾಜ್ ಮುಂತಾದವರೆಲ್ಲ ಸಕ್ರಿಯರಾಗಿದ್ದರು. ಜಿಯಾ-ಉಲ್-ಹಕ್ ಉಗ್ರಗಾಮಿ ಆಳ್ವಿಕೆಯಲ್ಲಿ ಫಹಮಿದಾ ರಿಯಾಜ್ ಹೊರತರುತ್ತಿದ್ದ ’ಆವಾಜ್ “ ಉರ್ದು ಪತ್ರಿಕೆಯ ವಿರುದ್ಧ ಹದಿನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆಕೆ ಮತ್ತು ಅವಳ ಪತಿಯನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿತ್ತು. ಆಕೆಯೂ ಬಹುಕಾಲ ಗಡಿಪಾರಿನಲ್ಲೇ ಬದುಕಿ ಭಾರತಕ್ಕೆ ಓಡಿಬಂದಿದ್ದಳು. ಹೀಗೆ ಪ್ರಗತಿಪರರ ಚಳವಳಿ ಗಾಂಧಿವಾದ , ಮಾರ್ಕ್ಸವಾದ, ಸಮಾಜವಾದಿಗಳನ್ನು ಒಂದು ಸೂರಿನಲ್ಲಿ ತಂದು ಚಳವಳಿಗೆ ಜೀವ ತುಂಬಿತು. ಫೈಜ್ ಕೂಡ ಅಪ್ಪಟ ಮಾರ್ಕ್ಸವಾದಿ, ಕ್ರಾಂತಿಕಾರಿ ಕವಿಯಾಗಿದ್ದರು. ತನ್ನ ಕವಿತೆಗಳ ಮೂಲಕ, ಫೈಜ್ ಹೊಸದಾಗಿ ಜನ್ಮತಳೆದ ಪಾಕಿಸ್ತಾನದ ಜನರಿಗೆ ಧ್ವನಿ ಮಾತ್ರವಲ್ಲದೆ ತಮಗಾಗಿ ಪರ್ಯಾಯ ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಕೆಲಕಾಲ ಸೈನ್ಯದಲ್ಲಿನ ಸೇವೆಯನ್ನೂ ಫೈಜ್ ನಿರ್ವಹಿಸಿದ್ದರು. ಸೋವಿಯತ್ ಒಕ್ಕೂಟದ ನಾಜಿ ಆಕ್ರಮಣವು ಪ್ರಗತಿಪರರಿಗೆ ಭಾರತೀಯ ಸೈನ್ಯಕ್ಕೆ ಸೇರುವ ಮೂಲಕ ಆಘಾತ, ನಿರಾಶೆಮತ್ತು ಪ್ರತಿಭಟನೆಯ ಭಾವವನ್ನು ವ್ಯಕ್ತಪಡಿಸಲು ಅವಕಾಶ ನೀಡಿತು. ಹೀಗೆ ಫೈಜ್ ಫ್ಯಾಸಿಸಂ ವಿರುದ್ಧದ ಯುದ್ದ್ಧದಲ್ಲಿ ಸೇರಿಕೊಳ್ಳುತ್ತಾರೆ.
ಪಾಕಿಸ್ತಾನದಲ್ಲಿ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಫೈಜ್ 1951 ರಿಂದ 1955 ರ ವರೆಗೆ ಜೈಲು ಶಿಕ್ಷೆಯನ್ನನುಭಸುತ್ತಾರೆ. ಬಿಡುಗಡೆಯಾದ ನಂತರ ದೇಶಭ್ರಷ್ಟರಾಗಿ ಫೈಜ್ ಗಡಿಪಾರಾಗುತ್ತಾರೆ. ನಂತರದಲ್ಲಿ ಜುಲ್ಫಿಕಾರ್ ಭುಟ್ಟೊ ಅವರ ಪ್ರೀತಿಪಾತ್ರರಲ್ಲಿ ಫೈಜ್ ಒಬ್ಬರಾಗಿದ್ದರು. ಭುಟ್ಟೋ ಪಾಕಿಸ್ತಾನದ ವಿದೇಶ ಮಂತ್ರಿಗಳಾದಾಗ ಫೈಜ್ ಲಂಡನ್ನಿನಲ್ಲಿದ್ದರು. ಅಲ್ಲಿಂದ ಅವರನ್ನು ಪಾಕಿಸ್ತಾನಕ್ಕೆ ಬರಮಾಡಿಕೊಳ್ಲಲಾಯ್ತು. ಭುಟ್ಟೋರ ಅಪೇಕ್ಷೆಯಂತೆ ಫೈಜ್ ಕಲ್ಚರಲ್ ಅಡ್ವೈಸರ್ ಆದರು. 1977 ಹೊತ್ತಿಗೆ ಪಾಕಿಸ್ತಾನದ ರಾಜಕೀಯ ಸ್ಥಿತಿ ತೀರಾ ಹದಗೆಟ್ಟಿತು. ಇದರಿಂದ ಫೈಜ್ ಬಹಳ ನೋಯುತ್ತಾರೆ. ಜಿಯಾ ಉಲ್ ಹಕ್ ನೇತೃತ್ವದ ಮಿಲಿಟರಿ ದಂಗೆಯ ನಂತರ ಪದಚ್ಯುತಗೊಂಡ ಪ್ರಧಾನಮಂತ್ರಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ಕೊಂದು ಜಿಯಾ ಉಲ್ ಹಕ್ ಗದ್ದುಗೆ ಏರುತ್ತಾರೆ. ಸರ್ವಾಧಿಕಾರ ದೇಶವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿತಗೊಳಿಸುತ್ತದೆ. ಅವರಿಗೆ ಜಿಯಾ ಉಲ್ ಹಕ್ ಜಾರಿಗೊಳಿಸಿದ ಇಸ್ಲಾಂ ಮತಾಂಧತೆಯ ಅಧಿಕಾರಶಾಹಿ ಆಡಳಿತ ಸರಿಬರಲಿಲ್ಲ. ಫೈಜ್ ಜಿಯಾ ಉಲ್ ಹಕ್ ಅವರ ನೀತಿಯನ್ನು ವಿರೋಧಿಸಿ 1979 ರಲ್ಲಿ –“ ಹಂ ದೇಖೆಂಗೇ ಕವಿತೆ ಬರೆಯುತ್ತಾರೆ. ಅದು ಅಲ್ಲಿ ದೇಶದ್ರೋಹಿ ಕವಿತೆ, ಅವರು ದೇಶದ್ರೋಹಿಗಳಾಗಿ ಬಹುಕಾಲ ಗಡಿಪಾರಿನಲ್ಲೇ ಬದುಕು ಕಳೆಯಬೇಕಾಗುತ್ತದೆ. ಇದು ಕವಿತೆಯನ್ನು ಬರೆದ ಕಾಲದ ಹಿನ್ನೆಲೆ.
ಫೈಜ್ ಸದಾ ದಬ್ಬಾಳಿಕೆಗಾರರ ವಿರುದ್ಧ ಹೋರಾಡಿದರು ಸದಾಕಾಲ ತುಳಿತಕ್ಕೊಳಗಾದವರ ಪರವಾಗಿ ದನಿ ಎತ್ತಿದ ಅಪ್ಪಟ ದೇಶಪ್ರೇಮಿ. “ಹಂ ದೇಖೇಂಗೆ” ಕ್ರಾಂತಿಗೀತೆ ಆ ಕಾಲದ ಪ್ರಭುತ್ವದ ಸಿಂಹಾಸನವನ್ನೇ ಅಲ್ಲಾಡಿಸಿತ್ತು. “ಎಲ್ಲಾ ಕಿರೀಟಗಳನ್ನು ಎಸೆಯಲಾಗುವುದು, ಎಲ್ಲಾ ಸಿಂಹಾಸನಗಳನ್ನು ಉರುಳಿಸಲಾಗುವುದು, ದೇವನೊಬ್ಬನ ಹೇಸರೇ ಉಳಿಯುವುದು” ಎಂದ ಫೈಜ್ ಕಿಡಿಸಿಡಿಯುವ ಸಾಲುಗಳು ಎಷ್ಟು ಪ್ರಖರವಾಗಿರಬೇಡ. ಆಗ ಪಾಕಿಸ್ತಾನದಲ್ಲಿ ಮಹಿಳೆಯರು ಸೀರೆ ಧರಿಸುವುದನ್ನು ನಿಷೇಧಿಸುವ ಜಿಯಾ ಅವರ ಆದೇಶವನ್ನು ವಿರೋಧಿಸಿ 1985ರಲ್ಲಿ ಲಾಹೋರ್ ಕ್ರೀಡಾಂಗಣದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಾಕಿಸ್ತಾನಿ ಖ್ಯಾತ ಗಾಯಕಿ ಇಕ್ಬಾಲ್ ಬಾನೋ ಕಪ್ಪು ಸೀರೆಯುಟ್ಟು ಐವತ್ತು ಸಾವಿರ ಸಭಿಕರ ಮುಂದೆ ಫೈಜ್ ಅವರ “ಹಂ ದೇಖೆಂಗೆ” ನಜ್ಮ್ ಹಾಡುವ ಮೂಲಕ ಸುಗ್ರೀವಾಜ್ಞೆಯನ್ನು ವಿರೋಧಿಸಿದ್ದರು. ನೆರೆದ ಜನಸಾಗರ ಹುಚ್ಚೆದ್ದು “ ಇನ್ಕ್ವಿಲಾಬ್ ಜಿಂದಾಬಾದ್” ಜಯಕಾರ ಕೂಗಿ ಚಪ್ಪಾಳೆ ತಟ್ಟಿತಂತೆ. ಈ ಸಂದರ್ಭದಲ್ಲಿ ಜೀಎನ್ಯೂದಲ್ಲಿಯೇ ತನ್ನ ಕೊನೆಗಾಲದತನಕವೂ ಜೀವಿಸಿದ್ದ ಬಂಡಾಯ ಕವಿ ರಮಾಶಂಕರ್ ಯಾದವ್ (ವಿದ್ರೋಹಿ) ಅವರ “ನನ್ನ ಕವಿತೆ ಮತ್ತು ಲಾಠಿ” ನೆನಪಾಗುತ್ತಿದೆ. ವರ್ತಮಾನದ ಸಾಮಾಜಿಕ ರಾಜಕೀಯ ವ್ಯವಸ್ಥೆಯನ್ನು ಕವಿ, ಬರಹಗಾರ ತನ್ನ ಕವಿತೆ, ಸೃಜನಶೀಲತೆಯ ಮೂಲಕವೇ ಅಭಿವ್ಯಕ್ತಿಸುತ್ತಾನೆ. ಅದೇ ಅವನ ಲಾಠಿ, ಬಡಿಗೆ. ಬಲ !
ಇನ್ನು “ಹಂ ದೇಖೇಂಗೆ”” ಕವಿತೆಯಲ್ಲಿ ಉಲ್ಲೇಖವಾಗುವ “ಅನಲ್ ಹಕ್” ಪದ ಬಳಕೆಯನ್ನು ಹಿಡಿದು ಹಿಂದುತ್ವದ ಮೂಲಭೂತವಾದಿಗಳ ಗುಂಪಿನಲ್ಲಿ ಸಾಕಷ್ಟು ಗರ್ಮಾ ಗರಂ ಚರ್ಚೆಯಾಗುತ್ತಿದೆ. ’ಅನಲ್ ಹಕ್’ ಎಂಬುದು ಇಸ್ಲಾಮಿಯತ್ ವಿಚಾರವಲ್ಲ, ’ಅನಲ್ ಹಕ್’ ಅಂದರೆ ಅಹಂ ಬ್ರಹ್ಮಾಸ್ಮಿ. ಇದು ವೈದಿಕ ಚಿಂತನೆಯಲ್ಲಿ ಬರುವಂಥದ್ದು. ಸೂಫಿಯಾನಾ ವಿಚಾರದಲ್ಲಿ ಇದರ ಪ್ರಯೋಗವಿದೆ. ಇದನ್ನು ಸೂಫಿಗಳು ಕಟ್ಟರ್ ಮೂಲಭೂತವಾದಿಗಳ ವಿರೋಧವಾಗಿ ಕೂಗುತ್ತಿದ್ದರು.
ಹಿಂದೆ ದಿಲ್ಲಿಯಲ್ಲಿ ಸರಮದ್ ಎಂಬ ಫಕೀರ್ ಇದ್ದ. ಅವನು ’ಅನಲ್ ಹಕ್’ ಜಯಕಾರ ಮಾಡುತ್ತಿದ್ದ. ಇದೇ ಜಯಕಾರದ ಕಾರಣ ಔರಂಗಜೇಬ್ ಅವನ ರುಂಡವನ್ನೇ ಉರುಳಿಸಿ ಕೊಲ್ಲಲು ಆಜ್ಞೆ ಕೊಟ್ಟಿರುತ್ತಾನೆ. ಇದು ಇಸ್ಲಾಮಿನ ವಿರುದ್ಧದ ಜಯಕಾರ. ನೀನು “ನಾನು-ದೇವರು” ಬೇರೆ ಬೇರೆಯಲ್ಲ ಎನ್ನುತ್ತಿ? ಇಂದು “ಅನಲ್ಹಕ್”ನ್ನು ಪ್ರತಿಭಟಿಸುವವರೆಲ್ಲ ಔರಂಗಜೇಬನ ಪರವಾಗಿ ಮಾತಾಡುತ್ತಿದ್ದಾರೆಂದಾಯ್ತು “ಎಂದು ಉರ್ದು ಕವಿ ಜಾವೇದ್ ಅಖ್ತರ್ ಮಾಧ್ಯಮಗಳಿಗೆ ನೀಡಿದ ಒಂದು ಸಂದರ್ಶನದಲ್ಲಿ ಕಟುವಾಗಿ ಟೀಕಿಸಿದ್ದಾರೆ.

.ಪಾಕಿಸ್ತಾನದ ರಾಜಕೀಯ ವಾತಾವರಣವೆಷ್ಟು ಕೆಟ್ಟುಹೋಗಿತ್ತೆಂದರೆ ಅವರಿಗೆ ನಿರಂತರವಾದ ಬಂಧನದ ಬೆದರಿಕೆಯಿತ್ತು. ಇಂದು ಇದೇ ವಾತಾವರಣ ನಮ್ಮಲ್ಲೂ ಸೃಷ್ಟಿಯಾಗಿದೆ. ಅರ್ಬನ್ ನಕ್ಸಲ್ರೆಂದು ಬರಹಗಾರರ, ಚಿಂತಕರ, ಕವಿಗಳ, ಚಳವಳಿಗಾರರ, ವಿದ್ಯಾರ್ಥಿಗಳ ಬಾಯಿಮುಚ್ಚುವ ದಬ್ಬಾಳಿಕೆಯ ಸಂಕೋಲೆಗಳನ್ನು ಕಗ್ಗತ್ತಲಿನ ಈ ಕಾಲವೂ ಅನುಭವಿಸುತ್ತಿದೆ. ಇಷ್ಟಕ್ಕೂ ಬಿಡದೇ ಪ್ರಶ್ನಿಸಲು ಕಲಿಸುವ, ವೈಚಾರಿಕತೆಯನ್ನು ಬೋಧಿಸುವ ದೇಶದ ವಿದ್ಯಾಕೇಂದ್ರಗಳನ್ನೇ ಮುಚ್ಚುವ ಧರ್ಮಾಂಧ ಮನುವಾದಿ ಮನಸ್ಸುಗಳು ಶತಪ್ರಯತ್ನ ನಡೆಸಿವೆ.
‘ನಾವು ನೋಡುತ್ತೇವೆ’ ಇದು ಹಿಂದೂ ವಿರೋಧಿಯಲ್ಲಾ ಎಂದು ಉರ್ದು ಕವಿ ಲೇಖಕರಾದ ಜಾವೇದ್ ಅಖ್ತರ್, ಶ್ರೀ ಮುನವ್ವರ್ ರಾಣಾ, ಇತಿಹಾಸಕಾರರಾದ ಇರ್ಫಾನ್ ಹಬೀಬ್ ಪತ್ರಿಕಾ ಹೇಳಿಕೆ ನೀಡಿ ಸ್ಪಷ್ಟೀಕರಿಸಿದ್ಡಾರೆ. ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆಂದೋಲನಕಾರರು ಬಳಸಿದ ಕ್ರಾಂತಿಗೀತೆಗಳ ಬಗ್ಗೆ ಒಂದಿಲ್ಲಾ ಒಂದು ರಾಜಕೀಯ ಕುತಂತ್ರಿಗಳು ವಿವಾದವನ್ನು ಹುಟ್ಟುಹಾಕಿ ಹಾದಿತಪ್ಪಿಸುತ್ತಿರುವುದು ನಿಜಕ್ಕೂ ವಿಷಾದನೀಯವೇನಿಸುತ್ತಿದೆ. ಅದರಲ್ಲೂ ಐಐಟಿಯ ಅಧ್ಯಾಪಕರಂಥ ವಿದ್ಯಾವಂತರಾದವರೇ ಕವಿಯ ಬಗ್ಗೆ ವಿಚಾರಣೆ ನಡೆಸುವ ಸಮಿತಿ ರಚಿಸುತ್ತಿದ್ದೆಯೆಂದರೆ ಅದೆಷ್ಟು ಬೌದ್ಧಿಕ ದಾರಿದ್ರ್ಯದಲ್ಲಿ ಬಳಲುತ್ತಿರಬಹುದು ? ಟಿವಿಯಲ್ಲಿ ಇಷ್ಟೊಂದು ಚರ್ಚೆಗಳಾಗುವುದು, ಹಾಹಾಕಾರವುಂಟಾಗುವುದನ್ನು ಕಂಡರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಜನರು ಇಷ್ಟು ಮೂಢರೇ? ಅಸಂವೇದನಶೀಲರೇ? ಮತಿಭ್ರಮಣೆಯಾದವರೇ
ಚರ್ಚಿಸಲೇ ಬೇಕಾದ ಕುಸಿಯುತ್ತಿರುವ ದೇಶದ ಆರ್ಥಿಕ ನೀತಿ , ಉದ್ಯೋಗ, ಬಡತನ ನೂರಾರು ಸಂಗತಿಗಳು ದೇಶದ ತುಂಬ ತಬ್ಬಲಿಯಂತೆ ಬಾಯ್ಬಿಟ್ಟುಕೊಂಡು ನಿಂತಿವೆ, ನಿಮ್ಮ ಬಡಿಗೆ ಮತ್ತು ಬಂದೂಕಿನ ಗುಂಡುಗಳಿಗಿಂತ ನಮ್ಮ ದನಿ ಪ್ರಬಲವಾಗಿದೆ ಎನ್ನುವ ಯುವ ಸಮೂಹ ಶಕ್ತಿಯನ್ನು ನಿರ್ದೇಶಿಸುವ ದೂರದರ್ಶಿತ್ವವುಳ್ಳ ನಾಯಕತ್ವವೊಂದು ಮುನ್ನಡೆಸಬೇಕಾಗಿದೆ ಇಂದು. ಪೈಜ್ ಅಹಮದ್ ಫೈಜ್ನಂತಹ ದನಿಯಿಲ್ಲದವರ ದನಿಯಾಗುವ ತುರ್ತು ಅಗತ್ಯವಿದೆ ಇಂದು. ಬಹುಶಃ ಆ ಕಾಲ ಸನಿಹದಲ್ಲಿಯೇ ಬರಬಹುದು…
ರೇಣುಕಾ ನಿಡಗುಂದಿ
ಹಮ್ ದೇಖೇಂಗೆ ಗೀತೆ ಕೇಳಿ…