ಬಹುತೇಕ ನರೇಂದ್ರ ಮೋದಿಯವರು ಪ್ರಧಾನಿಯಾಗಿ 2014ರಲ್ಲಿ ಮೊದಲ ಬಾರಿ ಅಧಿಕಾರ ಸ್ವೀಕರಿಸುತ್ತಲೇ ಆರಂಭವಾಗಿರುವ ದೇಶದ ಪ್ರಜಾಪ್ರಭುತ್ವವಾದಿ ಮತ್ತು ವೈಚಾರಿಕ ಚಿಂತನಾ ಚಾವಡಿ ಎಂದೇ ಹೆಸರಾದ ಜವಾಹರ ನೆಹರು ವಿಶ್ವವಿದ್ಯಾಲಯದ ಮೇಲಿನ ದಾಳಿಗಳು ಭಾನುವಾರ ರಾತ್ರಿ ಒಂದು ಹಂತದ ಕ್ಲೈಮಾಕ್ಸ್ ತಲುಪಿದವು.
ಎಡಪಂಥೀಯ ಚಿಂತನೆಗಳ ಪ್ರಭಾವದ ವಿವಿಯನ್ನು ಸರ್ವನಾಶ ಮಾಡುವ ಬಲಪಂಥೀಯ ಸರ್ಕಾರ ಮತ್ತು ಅದರ ಸಹ ಸಂಘಟನೆಗಳ ನಿರಂತರ ಪ್ರಯತ್ನದ ಅಂತಿಮಘಟ್ಟವಾಗಿ ಭಾನುವಾರ, ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮತ್ತು ಅದರ ಮಾತೃಸಂಘಟನೆ ಆರ್ ಎಸ್ ಎಸ್ ಗೆ ಸೇರಿದ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಮಾರಕಾಸ್ತ್ರಗಳೊಂದಿಗೆ ವಿವಿಯೊಳನುಗ್ಗಿ, ಹಾಸ್ಟೆಲ್ ಮತ್ತು ವಸತಿಗೃಹಗಳ ಮೇಲೆ ದಾಳಿ ನಡೆಸಿ, ವಿದ್ಯಾರ್ಥಿ ಸಂಘಟನೆಯ ನಾಯಕಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಈ ಭೀಕರ ದಾಳಿ ಯಾವುದೇ ಭಯೋತ್ಪಾದಕ ದಾಳಿಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲ. ದಾಳಿಯ ಸ್ವರೂಪ ನೋಡಿದರೆ, ಗೂಂಡಾಗಳಿಗೆ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿ ಸಂಘಟನೆಯ ಪ್ರಮುಖರ ಹತ್ಯೆ ನಡೆಸುವುದು ಮತ್ತು ಆ ಮೂಲಕ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿರುವವರಲ್ಲಿ ಭಯ-ಭೀತಿ ಹುಟ್ಟಿಸುವುದೇ ಉದ್ದೇಶ ಎಂಬುದು ಮೇಲ್ನೋಟಕ್ಕೇ ಕಾಣುತ್ತಿದೆ. ಹಾಗಾಗಿಯೇ ಈ ದಾಳಿಯನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಹಲವರು ಭಯೋತ್ಪಾದಕ ದಾಳಿ ಎಂದು ಕರೆದಿರುವುದು. ಹೌದು, ಇದೊಂದು ಭಯೋತ್ಪಾದಕ ದಾಳಿ ಎಂಬುದನ್ನು ಒಪ್ಪಲೇಬೇಕು ಮತ್ತು ಅಂತಹ ಭಯೋತ್ಪಾದಕ ಕೃತ್ಯ ಎಸಗಿದರವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರನ್ನು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಕಾನೂನಿನ ಕಟಕಟೆಗೆ ಎಳೆಯಲೇಬೇಕು. ಅಲ್ಲವೆ?
ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತೀವ್ರಗಾಯಗೊಂಡು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಈ ಭೀಕರ ದಾಳಿಯನ್ನು ನಡೆಸಿದ್ದು, ಬಿಜೆಪಿಯ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಎಂಬುದಕ್ಕೆ ಹಲವು ಸಾಕ್ಷ್ಯಗಳು ಈಗಾಗಲೇ ಮಾಧ್ಯಮಗಳಿಗೆ ಸಿಕ್ಕಿವೆ. ದಾಳಿಗೆ ಕೆಲವೇ ಕ್ಷಣಗಳ ಮುನ್ನ ಬಿಜೆಪಿ, ಆರ್ ಎಸ್ ಎಸ್ ಮತ್ತು ಸ್ವತಃ ಎಬಿವಿಪಿ ದೆಹಲಿಯ ಪ್ರಮುಖ ವಿದ್ಯಾರ್ಥಿ ನಾಯಕರೇ ಅಡ್ಮಿನ್ ಗಳಾಗಿರುವ ಹಲವು ವಾಟ್ಸಪ್ ಗುಂಪುಗಳಲ್ಲಿ ದಾಳಿಯ ಬಗ್ಗೆ ಚರ್ಚಿಸಿರುವುದರ ಸ್ಕ್ರೀನ್ ಶಾಟ್ ಗಳು ಮಾಧ್ಯಮಗಳ ಕೈಸೇರಿವೆ. ಅಲ್ಲಿ ದಾಳಿಯ ಬಗ್ಗೆ, ಎಡಪಂಥೀಯ ಸಂಘಟನೆಗಳ ವಿದ್ಯಾರ್ಥಿ ಮುಖಂಡರಿಗೆ ಥಳಿಸುವ ಬಗ್ಗೆ ಪ್ರಸ್ತಾಪ ಮಾಡಿರುವ ಹಲವರ ಮೊಬೈಲ್ ಸಂಖ್ಯೆಗಳನ್ನು ಟ್ರೂ ಕಾಲರ್ ಮೂಲಕ ಪರಿಶೀಲಿಸಿದಾಗ ಆ ಸಂಖ್ಯೆಗಳು ಎಬಿವಿಪಿ ಮತ್ತು ಬಿಜೆಪಿಯ ಕೆಲವರಿಗೆ ಸೇರಿದ್ದಾಗಿವೆ ಎಂದು ‘ದಿ ಸ್ಕ್ರೋಲ್’ನಂತಹ ವೆಬ್ ಮೀಡಿಯಾ ಕೂಡ ಹೇಳಿದೆ.
ಅಲ್ಲದೆ, ದಾಳಿ ವೇಳೆಯ ಸಿಸಿಟಿವಿ ಫೂಟೇಜ್ ಮತ್ತು ಕೆಲವು ಮೊಬೈಲ್ ವೀಡಿಯೋಗಳಲ್ಲಿ ದೊಣ್ಣೆ, ಕಬ್ಬಿಣದ ರಾಡು, ಪೊಲೀಸರ ಲಾಠಿ ಹಿಡಿದುಕೊಂಡಿರುವ ದೆಹಲಿ ವಿವಿ ಮತ್ತು ಸ್ವತಃ ಜೆಎನ್ ಯು ವಿವಿಯ ವಿವಿಧ ಎಬಿವಿಪಿ ಮುಖಂಡರು ಇದ್ದಾರೆ ಎಂದು ಗುರುತಿಸಲಾಗಿದೆ. ಜೊತೆಗೆ ಸ್ವತಃ ಗೃಹ ಸಚಿವ ಅಮಿತ್ ಶಾ ಅವರು ‘ದೆಹಲಿಯ ತುಕಡೇ ತುಕಡೇ ಗ್ಯಾಂಗಿಗೆ ತಕ್ಕ ಪಾಠ ಕಲಿಸಬೇಕಿದೆ’ ಎಂದು ಕಳೆದ ವಾರ ನೀಡಿದ್ದ ಹೇಳಿಕೆಗೂ, ಈ ದಾಳಿಗಳಿಗೂ ನೇರ ಸಂಬಂಧವಿದೆ. ಗೃಹ ಸಚಿವರ ಕುಮ್ಮಕ್ಕಿನಿಂದಲೇ ಈ ದಾಳಿ ನಡೆದಿದೆ ಎಂದೂ ವಿದ್ಯಾರ್ಥಿ ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಗೃಹ ಸಚಿವರ ಹೇಳಿಕೆಯ ಬೆನ್ನಲ್ಲೇ ಇಂತಹದ್ದೊಂದು ದಾಳಿ ನಡೆದಿರುವುದು ಮತ್ತು ಜೆಎನ್ ಯು ವಿದ್ಯಾರ್ಥಿಗಳನ್ನು ಬಿಜೆಪಿ ಮತ್ತು ಅದರ ಪರಿವಾರಗಳು ತುಕಡೇ ತುಕಡೇ ಗ್ಯಾಂಗ್ ಎಂದು ವರ್ಷಗಳಿಂದಲೂ ಕರೆಯುತ್ತಿರುವ ಹಿನ್ನೆಲೆಯಲ್ಲಿ ಇಂತಹ ಆರೋಪಗಳನ್ನು ಕೂಡ ತಳ್ಳಿಹಾಕಲಾಗದು.
ಹಾಗೇ, ಪ್ರಮುಖವಾಗಿ 50ಕ್ಕೂ ಹೆಚ್ಚು ಗೂಂಡಾಗಳು ವಿವಿಯ ಕ್ಯಾಂಪಸ್ಸಿನ ಪೊಲೀಸ್ ಭದ್ರತೆ ಮತ್ತು ವಿವಿಯ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಬೇಧಿಸಿ ಹೇಗೆ ಒಳನುಸುಳಿದರು? ಐಡಿ ಮತ್ತು ಸಂಪರ್ಕ ಖಚಿತಪಡಿಸಿಕೊಳ್ಳದೇ ಯಾವುದೇ ವ್ಯಕ್ತಿಯನ್ನು ಒಳಬಿಡದ ಕಟ್ಟಿನಿಟ್ಟಿನ ವ್ಯವಸ್ಥೆ ಇರುವಾಗ ಈ ಗೂಂಡಾಗಳು ಮಾರಕಾಸ್ತ್ರ ಸಹಿತರಾಗಿ ಒಳಹೋಗಿದ್ದು ಹೇಗೆ? ಪೊಲೀಸರು, ವಿವಿ ಭದ್ರತಾ ಸಿಬ್ಬಂದಿಯ ಸಹಕಾರ, ಬೆಂಬಲವಿಲ್ಲದೆ ಅವರು ಒಳಹೋಗಲು ಸಾಧ್ಯವಿತ್ತೆ? ಅಂತಹದ್ದೊಂದು ದೊಡ್ಡ ಗುಂಪಿನ ಉದ್ದೇಶ ಗೊತ್ತಿದ್ದೂ ಭದ್ರತಾ ಸಿಬ್ಬಂದಿ ಅವರನ್ನು ಒಳಬಿಟ್ಟಿದ್ದರೆ, ಅದರ ಹಿಂದೆ ವಿವಿಯ ಆಡಳಿತ ಮಂಡಳಿ ಹಾಗೂ ದೆಹಲಿ ಪೊಲೀಸರ ಮೇಲೆ ನೇರ ನಿಯಂತ್ರಣವಿರುವ ಕೇಂದ್ರ ಸರ್ಕಾರದ ಪ್ರಮುಖರ ಕುಮ್ಮಕ್ಕು ಇಲ್ಲದೇ ಆ ದುಃಸ್ಸಾಹಸ ನಡೆಯಲು ಹೇಗೆ ಸಾಧ್ಯ?
ಅಲ್ಲದೆ, ಗೂಂಡಾಗಳು ಹಾಸ್ಟೆಲ್ಗಳಿಗೆ ನುಗ್ಗಿ, ಉಪನ್ಯಾಸಕರ ವಸತಿಗೃಹಗಳಿಗೆ ನುಗ್ಗಿ ದಾಳಿ ನಡೆಸುತ್ತಿದ್ದರೂ, ರಸ್ತೆಯಲ್ಲಿ ನಿಂತಿದ್ದ ವಾಹನಗಳನ್ನು ಪುಡಿಗಟ್ಟುತ್ತಿದ್ದರೂ, ಸ್ವತಃ ವಿದ್ಯಾರ್ಥಿಗಳು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಭಾನುವಾರ ಬೆಳಗ್ಗೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತದ್ದು ಯಾಕೆ? ಹಲವು ಗಂಟೆಗಳ ಕಾಲ ನಡೆದ ದಾಳಿಯ ವೇಳೆ ವಿದ್ಯಾರ್ಥಿ ಮತ್ತು ಉಪನ್ಯಾಸಕರು ನೆರವಿಗಾಗಿ, ರಕ್ಷಣೆಗಾಗಿ ವಿವಿ ಆಡಳಿತ ಮತ್ತು ದೆಹಲಿ ಪೊಲೀಸರಿಗೆ ದೂರವಾಣಿ ಕರೆ ಮಾಡಿದರೂ ಯಾರೂ ಯಾಕೆ ಸ್ಪಂದಿಸಲಿಲ್ಲ? ಮೇಲಿನ ಯಾವ ಆದೇಶ, ಯಾವ ಸೂಚನೆ ವಿವಿ ಆಡಳಿತ ಮತ್ತು ದೆಹಲಿ ಪೊಲೀಸರನ್ನು ನಿಷ್ಕ್ರಿಯಗೊಳಿಸಿತ್ತು?
ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಆದರೆ, ಅದಕ್ಕೆ ಮುನ್ನವೇ ಈ ಪ್ರಶ್ನೆಗಳು ಮತ್ತು ಹಲ್ಲೆಗೊಳಗಾಗಿರುವ ವಿದ್ಯಾರ್ಥಿಗಳು ನೀಡುತ್ತಿರುವ ವಿವರಗಳು ಖಂಡಿತವಾಗಿಯೂ ಇಡೀ ಈ ದಾಳಿ ಒಂದು ವ್ಯವಸ್ಥಿತ ಸಂಚು ಮತ್ತು ಆ ಸಂಚಿನ ಹಿಂದೆ ದಿಲ್ಲಿಯ ಅಧಿಕಾರದ ಪಡಸಾಲೆಯ ಕರಿನೆರಳಿದೆ ಎಂಬುದನ್ನು ಹೇಳದೇ ಇಲ್ಲ.
ಹಾಗೇ ಸಿಎಎ ವಿರುದ್ಧ ದೇಶವ್ಯಾಪಿ ಪ್ರಬಲವಾಗುತ್ತಿರುವ ಜನದನಿಯನ್ನು ದಿಕ್ಕುತಪ್ಪಿಸುವ ಯತ್ನವಾಗಿಯೂ ಈ ದಾಳಿ ನಡೆಸಿರಬಹುದು. ಆಳುವ ಮಂದಿಯೇ ತಮ್ಮ ವಿರುದ್ಧದ ಜನಾಕ್ರೋಶವನ್ನು ಹಾದಿ ತಪ್ಪಿಸುವ ತಂತ್ರಗಾರಿಕೆಯ ಭಾಗವಾಗಿ ಈ ಗೂಂಡಾಗಳನ್ನು ಕಳಿಸಿ ಇದನ್ನು ನಡೆಸಿರಬಹುದು. ಏಕೆಂದರೆ, ವಿವಿಯ ಶುಲ್ಕ ಹೆಚ್ಚಳ ವಿರೋಧಿಸಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸುತ್ತಿರುವ ಜೆಎನ್ ಯು ವಿದ್ಯಾರ್ಥಿಗಳು ಸಿಎಎ ಮತ್ತು ಎನ್ ಆರ್ ಸಿ ವಿರುದ್ಧದ ಹೋರಾಟದಲ್ಲಿ ರಾಜಧಾನಿಯಲ್ಲಿ ದೊಡ್ಡ ದನಿಯಾಗಿದ್ದರು. ಆ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ನಡೆಸುವ ಮೂಲಕ ಸಿಎಎ ವಿರುದ್ಧದ ದೇಶವ್ಯಾಪಿ ಹೋರಾಟವನ್ನು ದಿಕ್ಕುತಪ್ಪಿಸುವ ‘ಚಾಣಕ್ಯ’ ತಂತ್ರ ಇದಾಗಿರಬಹುದು ಎಂಬ ಗಂಭೀರ ಅನುಮಾನಗಳೂ ವ್ಯಕ್ತವಾಗುತ್ತಿವೆ.
ಈ ನಡುವೆ, ಘಟನೆಯ ಕುರಿತು ತನಿಖೆ ನಡೆಸಲು ಗೃಹ ಸಚಿವ ಅಮಿತ್ ಶಾ ಆದೇಶಿಸಿರುವುದು, ತೋಳಕ್ಕೇ ಕುರಿ ಎಣಿಸಲು ಹೇಳಿದಂತಿದೆ. ದೇಶದ ಅತ್ಯುನ್ನತ ವಿವಿಯ ಮೇಲೆ ನಡೆದ ಇಂತಹ ಬರ್ಬರ ದಾಳಿಯ ಬಗ್ಗೆ ಪ್ರಧಾನಿ ಮೋದಿ ಈವರೆಗೆ ತುಟಿಬಿಚ್ಚಿಲ್ಲ ಎಂಬುದು ಕೂಡ ಈ ದಾಳಿಯ ವಿಷಯದಲ್ಲಿ ಸರ್ಕಾರ ಯಾವ ನಿಲುವು ಹೊಂದಿದೆ ಎಂಬುದಕ್ಕೆ ಸಾಕ್ಷಿ. ಹಾಗೆ ನೋಡಿದರೆ, ಈ ದಾಳಿಯ ಹಿನ್ನೆಲೆಯಲ್ಲಿ ತತಕ್ಷಣಕ್ಕೇ ದೆಹಲಿ ಪೊಲೀಸ್ ಮುಖ್ಯಸ್ಥರ ತಲೆದಂಡವಾಗಬೇಕಿತ್ತು. ವಿವಿಯ ಉಪಕುಲಪತಿ ಕೂಡಲೇ ರಾಜೀನಾಮೆ ನೀಡಬೇಕಿತ್ತು. ಅದೆರಡನ್ನೂ ಕೇಂದ್ರದ ಸರ್ಕಾರ ಖಾತ್ರಿಪಡಿಸಬೇಕಿತ್ತು. ದಾಳಿಗೆ ಪರೋಕ್ಷ ಕುಮ್ಮಕ್ಕು ನೀಡಿದ ಆ ಇಬ್ಬರನ್ನು ಹೊರಗಿಟ್ಟು ಘಟನೆಯ ಬಗ್ಗೆ ತನಿಖೆ ನಡೆಸಿದ್ದಲ್ಲಿ ಮಾತ್ರ ಅದು ನಿಷ್ಪಕ್ಷಪಾತ ತನಿಖೆಯಾಗಬಹುದಿತ್ತು. ಆದರೆ, ಸರ್ಕಾರಕ್ಕೆ ಅಂತಹ ತನಿಖೆ ಬೇಕಾಗಿಲ್ಲ. ತನ್ನ ಭಕ್ತರನ್ನು ಹೊರತುಪಡಿಸಿದ ಕೆಲವರು ಮತ್ತು ಅಂತಾರಾಷ್ಟ್ರೀಯ ಸಮುದಾಯದ ಕಣ್ಣೊರೆಸಲು ಒಂದು ತನಿಖೆಗೆ ಆದೇಶಿಸಲಾಗಿದೆ.
ಜನಾಭಿಪ್ರಾಯವನ್ನು ಹತ್ತಿಕ್ಕುವ, ಪ್ರತಿರೋಧವನ್ನು ಬಗ್ಗುಬಡಿಯುವ ಸರ್ವಾಧಿಕಾರಿ ಆಡಳಿತವೊಂದು ಮಾತ್ರ ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯ. ಈಗ ಸರ್ಕಾರದ ನಡೆ ಕೂಡ ಅಂತಹದ್ದೇ. ಹಾಗಾಗಿ ವಿದ್ಯಾರ್ಥಿ ಸಮುದಾಯವಷ್ಟೇ ಅಲ್ಲ, ದೇಶಾದ್ಯಂತ ನಾಗರಿಕರು ಕೂಡ ಜೆಎನ್ ಯು ಘಟನೆ ಖಂಡಿಸಿ, ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿ ಬೀದಿಗಿಳಿದಿದ್ದಾರೆ. ಬಿಜೆಪಿ ಮಾತ್ರ ಯಥಾ ಪ್ರಕಾರ ದಾಳಿ ನಡೆಸಿದ್ದು ಎಡಪಂಥೀಯ ಮತ್ತು ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಗಳು ಎಂದು ತಿಪ್ಪೆಸಾರಿಸುವ ಪ್ರಯತ್ನ ಮಾಡಿದೆ. ಆದರೆ, ಬಿಜೆಪಿ ಪಾಲಿಗೆ ನಾಚಿಕೆಗೇಡಿನ ಸಂಗತಿ ಏನೆಂದರೆ, ಬಿಜೆಪಿಯ ಮುಖವಾಣಿಯಂತಿರುವ ರಿಪಬ್ಲಿಕ್ ಟಿವಿಯಂತಹ ವಾಹಿನಿ ನಡೆಸಿದ ಅಭಿಪ್ರಾಯ ಸಂಗ್ರಹ ‘ಪೋಲಿಂಗ್’ನಲ್ಲಿ ಶೇ.86ರಷ್ಟು ಮಂದಿ ಎಬಿವಿಪಿಯೇ ಈ ದಾಳಿಯ ಹಿಂದಿದೆ ಎಂದಿದ್ದಾರೆ! ಜೆಎನ್ ಯು ಮೇಲಿನ ಭಯೋತ್ಪಾದಕ ಕೃತ್ಯ ದೇಶದ ಜನರನ್ನು ಬೆಚ್ಚಿಬೀಳಿಸಿದೆ. ಆಳುವ ಮಂದಿಯೇ ಭಯೋತ್ಪಾದನೆಗೆ ಇಳಿದಿದ್ದಾರೆ ಎಂಬ ಸತ್ಯ ನುಡಿಯುತ್ತಿದ್ದಾರೆ!!