ಜೆಎನ್ ಯು ದಾಳಿ ದೇಶದ ಆಡಳಿತ ವ್ಯವಸ್ಥೆ ಎಷ್ಟು ರಾಜಾರೋಷವಾಗಿ ದಾಳಿಕೋರರಿಗೆ ಕುಮ್ಮಕ್ಕು ನೀಡುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನದಂತೆ ಕಾಣುತ್ತಿದೆ. ಒಂದು ಭಯೋತ್ಪಾದನಾ ಕೃತ್ಯಕ್ಕೆ ಸಮನಾದ ಭೀಕರ ದಾಳಿ ನಡೆಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಥಳಿಸಿ, ಇಡೀ ಕ್ಯಾಂಪಸ್ಸಿನಲ್ಲಿ ಭೀತಿ ಸೃಷ್ಟಿಸಿದ ಕೃತ್ಯ ನಡೆಸಿದವರ ಬದಲಾಗಿ, ದಾಳಿಗೊಳಗಾದ ವಿದ್ಯಾರ್ಥಿಗಳ ಮೇಲೆಯೇ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ!
ಒಂದು ಕಡೆ ದಾಳಿಗೊಳಗಾದ ವಿದ್ಯಾರ್ಥಿಗಳನ್ನೇ ಪೊಲೀಸರು ಹೀಗೆ ಬೇಟೆಯಾಡುತ್ತಿರುವಾಗ, ಮತ್ತೊಂದು ಕಡೆ ದಾಳಿ ನಡೆಸಿದ ಮುಸುಕುಧಾರಿಗಳು ಎಬಿವಿಪಿ ಸಂಘಟನೆಯವರೇ ಎಂಬುದನ್ನು ಎಬಿವಿಪಿ ಸಂಘಟನೆಯ ನಾಯಕಿಯೇ ಟಿವಿ ಡಿಬೇಟುಗಳಲ್ಲಿ ರಾಜಾರೋಷವಾಗಿ ಹೇಳಿಕೊಂಡಿದ್ದರೆ, ಮಗದೊಂದು ಕಡೆ ಹಿಂದೂ ರಕ್ಷಾ ದಳ ಎಂಬ ಸಂಘಟನೆಯ ನಾಯಕ ಟಿವಿ ಕ್ಯಾಮರಾಗಳ ಮುಂದೆ ಸಾರ್ವಜನಿಕವಾಗಿಯೇ ದಾಳಿಯನ್ನು ನಡೆಸಿದ್ದು ನಾವೇ ಎಂದು ಹೇಳಿಕೆ ನೀಡಿದ್ದಾನೆ ಮತ್ತು ದೆಹಲಿ ಪೊಲೀಸರು ಅವರೆಲ್ಲರಿಗೂ ರಕ್ಷಣೆ ನೀಡಿ, ಅವರ ದಾಳಿಗಳಿಗೆ ಪರೋಕ್ಷವಾಗಿ ತಮ್ಮ ಬೆಂಬಲವಿದೆ ಎಂಬ ಸಂದೇಶ ರವಾನಿಸುತ್ತಿದ್ದಾರೆ!
ಜೆಎನ್ ಯು ದಾಳಿಯ ಕುರಿತ ಟೈಮ್ಸ್ ನೌ ಸುದ್ದಿವಾಹಿನಿ ನಡೆಸಿಕೊಟ್ಟ ಡಿಬೇಟ್ ನಲ್ಲಿ ಭಾಗವಹಿಸಿದ್ದ ಎಬಿವಿಪಿ ದೆಹಲಿ ಜಂಟಿ ಕಾರ್ಯದರ್ಶಿ ಅನಿಮಾ ಸೋಂಕರ್, ‘ಲಾಠಿ, ದೊಣ್ಣೆ, ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು, ಮುಸುಕುಧಾರಿಗಳಾಗಿ ಹೋದವರು ನಮ್ಮ ಸಂಘಟನೆಯವರೇ. ದೆಹಲಿಯ ಹಲವು ವಾಟ್ಸಪ್ ಗುಂಪುಗಳಲ್ಲಿ ಯಾವುದೇ ಸಂದರ್ಭದಲ್ಲಿ ನಿಮ್ಮ ಮೇಲೆ ದಾಳಿ ನಡೆಯಬಹುದು. ಹಾಗಾಗಿ ನೀವೂ ಪ್ರತಿದಾಳಿ ನಡೆಸಲು ಸಜ್ಜಾಗಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡೇ ಹೊರಹೋಗಿ ಎಂದು ಎಚ್ಚರಿಕೆಯ ಸಂದೇಶಗಳು ಹರಿದಾಡುತ್ತಿದ್ದವು. ಹಾಗಾಗಿ ನಮ್ಮವರು ದೊಣ್ಣೆ, ರಾಡು, ಪೆಪ್ಪರ್ ಸ್ಪ್ರೇಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು’ ಎಂದು ಹೇಳಿದ್ದಾರೆ. ಚರ್ಚೆಯುದ್ದಕ್ಕೂ ಅವರು ತಮ್ಮ ಆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಕೂಡ!
ಆದರೆ, ದೆಹಲಿ ಪೊಲೀಸರು ಈವರೆಗೆ ಎಬಿವಿಪಿಯ ಯಾವುದೇ ವ್ಯಕ್ತಿಯ ಮೇಲಾಗಲೀ, ವಿದ್ಯಾರ್ಥಿ ನಾಯಕರ ಮೇಲಾಗಲೀ ಪ್ರಕರಣ ದಾಖಲಿಸಿಲ್ಲ. ಕನಿಷ್ಠ ಕರೆದು ವಿಚಾರಣೆ ನಡೆಸಿರುವ ಬಗ್ಗೆಯೂ ವರದಿಯಾಗಿಲ್ಲ. ಯಾರನ್ನೂ ಬಂಧಿಸಿಲ್ಲ!
ಹಾಗೇ ಹಿಂದೂ ರಕ್ಷಾ ದಳ ಎಂಬ ಸಂಘಟನೆಯ ಪಿಂಕಿ ಚೌಧುರಿ ಎಂಬ ವ್ಯಕ್ತಿ ಮಂಗಳವಾರ ಬೆಳಗ್ಗೆಯಿಂದಲೇ ಎಲ್ಲಾ ಮಾಧ್ಯಮಗಳಿಗೆ, ‘ತಾವೇ ಆ ದಾಳಿ ನಡೆಸಿದ್ದು’ ಎಂದು ರಾಜಾರೋಷವಾಗಿ ಹೇಳಿಕೆ ನೀಡುತ್ತಿದ್ದಾನೆ. ಸಾರ್ವಜನಿಕವಾಗಿಯೇ ಆತ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರೂ, ಮುಕ್ತವಾಗಿ ಓಡಾಡುತ್ತಿದ್ದರೂ ದೆಹಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಆತ ಹೇಳುವ, ಹಿಂದೂ ಧರ್ಮ ರಕ್ಷಣೆಗಾಗಿ, ಹಿಂದೂರಾಷ್ಟ್ರ ರಕ್ಷಣೆಗಾಗಿ ಈ ದಾಳಿ ನಡೆಸಿದ್ದೇವೆ ಎಂಬುದನ್ನು ದೆಹಲಿ ಪೊಲೀಸರೂ ಸಮರ್ಥಿಸುತ್ತಿದ್ದಾರೆ ಎಂಬಂತೆ ಪೊಲೀಸರ ವರ್ತನೆ ಇದೆ.
ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರಕ್ಕೆ ಜೆಎನ್ ಯು ವಿದ್ಯಾರ್ಥಿಗಳು ಅವಮಾನ ಮಾಡುತ್ತಿದ್ದಾರೆ. ಅವರೆಲ್ಲಾ ದೇಶದ್ರೋಹಿಗಳು. ಆ ವಿವಿ ದೇಶದ್ರೋಹಿಗಳ ಅಡ್ಡೆಯಂತಾಗಿದೆ. ಹಾಗಾಗಿ ಅವರಿಗೆ ಬುದ್ದಿಕಲಿಸಲು ನಾವು ದಾಳಿ ಮಾಡಿದ್ದೇವೆ. ಇದೊಂದೇ ಅಲ್ಲ; ಇನ್ನು ದೇಶಾದ್ಯಂತ ಯಾವುದೇ ಕಡೆ ಇಂತಹ ದೇಶ ವಿರೋಧಿ ಚಟುವಟಿಕೆ ನಡೆದರೂ ಅವರಿಗೆ ಇಂತಹದ್ದೇ ಗತಿ ಕಾದಿದೆ’ ಎಂದು ಪಿಂಕಿ ಚೌಧುರಿ ವೀರಾವೇಶದ ಮಾತುಗಳನ್ನಾಡಿದ್ದಾನೆ. ಆದರೆ, ದೆಹಲಿ ಪೊಲೀಸರು ಮಾತ್ರ ಆತನನ್ನು ಮಹಾನ್ ದೇಶಪ್ರೇಮಿ ಎಂಬಂತೆ ಮುಕ್ತವಾಗಿ ಓಡಾಡಿಕೊಂಡಿರಲು ಬಿಟ್ಟಿದ್ದಾರೆ.
ಘಟನೆ ನಡೆದು 48 ಗಂಟೆಗಳು ಉರುಳಿದರೂ ದಾಳಿಯ ಸಂಬಂಧ ಒಬ್ಬನೇ ಒಬ್ಬನನ್ನೂ ಬಂಧಿಸಲಾಗದ(ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ವೀಡಿಯೋ, ಚಾಟ್ ಸಾಕ್ಷ್ಯಗಳ ಹೊರತಾಗಿಯೂ) ದೆಹಲಿ ಪೊಲೀಸರು, ಇದೀಗ ಮಾರಣಾಂತಿಕ ಹಲ್ಲೆಗೊಳಗಾಗಿ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಜೆಎನ್ ಯು ವಿದ್ಯಾರ್ಥಿ ಸಂಘದ ನಾಯಕಿ ಆಯಿಶೆ ಘೋಷ್ ಮತ್ತು ಇತರ 19 ಮಂದಿಯ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.
ಭಾನುವಾರ ಸಂಜೆ 50ಕ್ಕೂ ಹೆಚ್ಚು ಮುಸುಕುಧಾರಿಗಳು ಮಾರಕಾಸ್ತ್ರಗಳೊಂದಿಗೆ ತಮ್ಮ ಕಣ್ಣೆದುರೇ ಕ್ಯಾಂಪಸ್ ಪ್ರವೇಶಿಸುವಾಗ, ಹಾಸ್ಟೆಲ್ ಮತ್ತು ಉಪನ್ಯಾಸಕರ ವಸತಿಗೃಹಗಳಿಗೆ ನುಗ್ಗಿ ಮಾರಕ ದಾಳಿ ನಡೆಸುವಾಗ ಮತ್ತು ದಾಳಿ ನಡೆಸಿ ಅದೇ ಮಾರಕಾಸ್ತ್ರಗಳನ್ನು ಝಳಪಿಸುತ್ತಾ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾ ಹೊರಹೋಗುವಾಗ ಮೂಕಪ್ರೇಕ್ಷಕರಾಗಿದ್ದ ದೆಹಲಿ ಪೊಲೀಸರು ಮತ್ತು ವಿವಿಯ ಭದ್ರತಾ ಸಿಬ್ಬಂದಿ, ದಾಳಿ ವೇಳೆ ರಕ್ಷಣೆ ನೀಡುವಂತೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಅವರ ಕುಟುಂಬದವರು ಗೋಗರೆದರೂ ಕದಲದೆ ದಾಳಿಗೆ ಕುಮ್ಮಕ್ಕು ನೀಡಿರುವುದು ವೀಡಿಯೋಸಹಿತ ಸಾಕ್ಷ್ಯವಾಗಿದೆ. ಪೊಲೀಸರ ಅಂತಹ ವರಸೆಯ ಮುಂದುವರಿಕೆಯಾಗಿಯೇ ಈಗ ದಾಳಿ ನಡೆಸಿದವರಿಗೆ ಭದ್ರತೆ ನೀಡಿ, ದಾಳಿಗೊಳಗಾದವರ ಮೇಲೆ ಪ್ರಕರಣ ದಾಖಲಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಈ ನಡುವೆ, ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಅಂಗಸಂಸ್ಥೆಗಳೇ ಇಂತಹ ಭೀಕರ ದಾಳಿಯ ಹಿಂದಿರುವುದರಿಂದ, ಆ ಸರ್ಕಾರದ ನೇರ ನಿಯಂತ್ರಣದಲ್ಲಿರುವ ದೆಹಲಿಯ ಪೊಲೀಸರಿಂದಾಗಲೀ, ಅಥವಾ ಕೇಂದ್ರ ಸರ್ಕಾರದಿಂದಾಗಲೀ ಯಾವುದೇ ನಿಷ್ಪಕ್ಷಪಾತ ತನಿಖೆಯಾಗಲೀ, ನ್ಯಾಯವನ್ನಾಗಲೀ ನಿರೀಕ್ಷಿಸಲಾಗದು ಎಂಬ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ಮಂದಿ ನೇರವಾಗಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ(ಸಿಜೆಐ) ಮೇಲ್ ಮತ್ತು ಚೇಂಜ್.ಆರ್ಗ್ ಮೂಲಕ ಮನವಿ ಸಲ್ಲಿಸಿ, ಸ್ವಯಂಪ್ರೇರಿತ ಪ್ರಕರಣದ ದಾಖಲಿಸಿಕೊಂಡು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕವೂ ಸರ್ವೋಚ್ಛ ನ್ಯಾಯಾಲಯದ ಗಮನ ಸೆಳೆಯಲಾಗಿತ್ತು. ಆದರೆ, ಆ ಪ್ರಯತ್ನಗಳಿಗೆ ಸುಪ್ರೀಂಕೋರ್ಟ್ ಸಿಜೆಐ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಕೂಡ ಅಂತಿಮವಾಗಿ ನ್ಯಾಯಾಂಗದ ಮೇಲೆ ಇರಿಸಿದ ನಂಬಿಕೆಯ ಬಗ್ಗೆಯೇ ಅನುಮಾನಗಳನ್ನು ಹುಟ್ಟಿಸಿದೆ!
ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುವಂತಹ ಜೆಎನ್ ಯು ಬೆಳವಣಿಗೆಯ ಬೆನ್ನಲ್ಲೇ ಇದೀಗ, ನ್ಯಾಯಾಂಗ ವ್ಯವಸ್ಥೆ ಕೂಡ ಸಕಾಲಿಕ ಸ್ಪಂದನೆ ನೀಡದೇ ಹೋಯಿತು ಎಂಬ ಸಂಗತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಿಗೆ ಆಘಾತ ತಂದಿದೆ. ಹಾಗಾದರೆ, ಅಂತಿಮವಾಗಿ ಜನಸಾಮಾನ್ಯರ ಪಾಲಿಗೆ ಇರುವ ಭರವಸೆ ಯಾವುದು? ಎಂಬ ಪ್ರಶ್ನೆ ಕೂಡ ಎದ್ದಿದೆ. ಸರ್ವಾಧಿಕಾರಿ, ಮತಾಂಧ ಮತ್ತು ಜನರ ಭಾವನೆ ಮತ್ತು ಆತಂಕಗಳಿಗೆ ಸೊಪ್ಪು ಹಾಕದ ಒಂದು ಆಡಳಿತದ ಕಪಿಮುಷ್ಟಿಯಲ್ಲಿ ಇಡೀ ದೇಶ ಸಿಲುಕಿಬಿಟ್ಟಿದೆಯೇ? ಎಂಬ ಆತಂಕಗಗಳು ಸುಳ್ಳಲ್ಲ ಎಂಬುದನ್ನು ಈ ಜೆಎನ್ ಯು ದಾಳಿ ಮತ್ತೊಮ್ಮೆ ಸಾರುತ್ತಿದೆ!