ಮಂಗಳೂರು ಗೋಲಿಬಾರ್ ಘಟನೆಯ ಕುರಿತ ಸತ್ಯಾಸತ್ಯತೆ ಹೊರಬರದಂತೆ ಮಂಗಳೂರು ಪೊಲೀಸರು ಎಷ್ಟೆಲ್ಲಾ ಹರಸಾಹಸ ಮಾಡುತ್ತಿದ್ದಾರೆ ಎಂಬುದಕ್ಕೆ ಸೋಮವಾರ ಮತ್ತು ಮಂಗಳವಾರ ಮಂಗಳೂರಿನಲ್ಲಿ ನಡೆದ ಜನತಾ ನ್ಯಾಯಾಲಯವನ್ನು ಅವರು ಅಸ್ತವ್ಯವಸ್ಥಗೊಳಿಸಿದ್ದು ಮತ್ತೊಂದು ತಾಜಾ ಉದಾಹರಣೆ.
ಸಿಎಎ ಮತ್ತು ಎನ್ ಆರ್ ಸಿ ವಿರೋಧಿಸಿ ಕಳೆದ ಡಿಸೆಂಬರ್ 19ರಂದು ದೇಶವ್ಯಾಪಿ ನಡೆದ ಪ್ರತಿಭಟನೆಯ ಭಾಗವಾಗಿ ಮಂಗಳೂರಿನಲ್ಲಿಯೂ ಪ್ರತಿಭಟನಾ ರ್ಯಾಲಿ ನಡೆದಿತ್ತು. ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಏಕಾಏಕಿ ಗೋಲಿಬಾರ್ ನಲ್ಲಿ ಇಬ್ಬರು ಅಮಾಯಕರು ಗುಂಡೇಟಿಗೆ ಬಲಿಯಾಗಿದ್ದರು. ಸ್ವತಃ ಸಿಎಂ ಯಡಿಯೂರಪ್ಪ ಅವರೇ ತಾವು ಗೋಲಿಬಾರ್ ನಡೆಸುವಂತೆ ಸೂಚಿಸಿರಲಿಲ್ಲ ಎಂಬ ಹೇಳಿಕೆ ನೀಡಿದ್ದು ಮತ್ತು ಯಾವುದೇ ಹಿಂಸಾಚಾರವಾಗಲೀ, ಪ್ರಚೋದನೆಯಾಗಲೀ ಇಲ್ಲದೆ, ಮಂಗಳೂರು ಪೊಲೀಸರು ಗೋಲಿಬಾರ್ ಗೆ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಯಾವ ಕ್ರಮಗಳನ್ನೂ ಕೈಗೊಳ್ಳದೆ ಏಕಾಏಕಿ ಎದೆಮಟ್ಟಕ್ಕೆ ಗುಂಡು ಹಾರಿಸಿ ಇಬ್ಬರನ್ನು ಸಾಯಿಸಿದ್ದು, ಕರಾವಳಿ ಪೊಲೀಸರ ಕೇಸರೀಕರಣ ಮತ್ತು ಮತಾಂಧತೆಯ ವಿಕಾರದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು.
ಪೊಲೀಸರ ಕ್ರಮದ ಬಗ್ಗೆ ಮೊದಲ ಪ್ರತಿಕ್ರಿಯೆಯಾಗಿ ಸ್ವತಃ ಸಿಎಂ ದಿಗ್ಭ್ರಮೆ ವ್ಯಕ್ತಪಡಿಸಿ, ಪೊಲೀಸ್ ಕಮೀಷನರ್ ಹರ್ಷ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ಅವರು ವರಸೆ ಬದಲಿಸಿದ್ದರು. ಅಲ್ಲದೆ, ಆ ಬಳಿಕ ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದಾಗಲೂ, ಪೊಲೀಸರ ಲೋಪವೇ ಎರಡು ಜೀವ ನಷ್ಟಕ್ಕೆ ಕಾರಣ ಎಂಬ ವಿಷಯ ಅವರಿಗೆ ಮನವರಿಕೆಯಾಗಿತ್ತು. ಆ ಹಿನ್ನಲೆಯಲ್ಲಿಯೇ ಅವರು, ಬೆಂಗಳೂರಿನಲ್ಲಿ ಸೇರಿದ ಅರ್ಧದಷ್ಟು ಜನ ಕೂಡ ಸೇರಿರಲಿಲ್ಲ. ಆದರೂ ನೀವು ಸಣ್ಣ ಗುಂಪನ್ನು ನಿಭಾಯಿಸಲು ವಿಫಲವಾದಿರಿ. ನಿಮ್ಮ ವೈಫಲ್ಯ ಮತ್ತು ಲೋಪಗಳಿಂದಲೇ ಇಷ್ಟೆಲ್ಲಾ ನಡೆಯಿತು ಎಂಬ ಮಾತುಗಳನ್ನು ಅವರು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿಯೇ ಹೇಳಿರುವುದು ವರದಿಯಾಗಿತ್ತು.
ಪ್ರಮುಖವಾಗಿ ಪ್ರತಿಭಟನೆಯ ದಿನ ಹರಿದಾಡಿದ ಪೊಲೀಸರೇ ಕಲ್ಲು ತೂರುವ, ಕೇಸರಿಶಾಲುಧಾರಿಗಳು ದೊಣ್ಣೆ, ಕಲ್ಲು ಹಿಡಿದು ಪ್ರತಿಭಟನೆಕಾರರ ಮೇಲೆ ದಾಳಿ ಮಾಡಲು ಪ್ರಚೋದಿಸುವ, ಗುಂಡು ಹಾರಿಸಿದರೂ ಯಾರೊಬ್ಬರೂ ಸತ್ತಿಲ್ಲವಲ್ಲ ಎಂದು ಹಿರಿಯ ಅಧಿಕಾರಿ ಕೆಳ ಸಿಬ್ಬಂದಿಗೆ ಬೈಯ್ಯುವ, ಎತ್ತರಕ್ಕೆ ಗುರಿಇಟ್ಟು ಗುಂಡು ಹಾರಿಸಿ ಎಂದು ಪುಸಲಾಯಿಸುವ ದೃಶ್ಯಾವಳಿಗಳು ಕೂಡ ಮಂಗಳೂರು ಪೊಲೀಸರ ಬಣ್ಣ ಬಯಲು ಮಾಡಿದ್ದವು. ಅಲ್ಲದೆ, ಗೋಲಿಬಾರ್ ಸಮರ್ಥಿಸಿಕೊಂಡು ಪೊಲೀಸರು ನಂತರ ಬಿಡುಗಡೆ ಮಾಡಿದ ವೀಡಿಯೋಗಳಲ್ಲಿ ಘಟನೆ ನಡೆದ ಬಂದರು ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಮಾತ್ರ ಬಹಿರಂಗಪಡಿಸದೇ ಇರುವ ನಡೆ ಕೂಡ ಪೊಲೀಸರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂಬ ಆರೋಪಗಳನ್ನು ಗಟ್ಟಿಗೊಳಿಸಿತ್ತು.
ಕೇವಲ ಪ್ರತಿಪಕ್ಷಗಳು ಮಾತ್ರವಲ್ಲದೆ, ಮಂಗಳೂರು ಮತ್ತು ರಾಜ್ಯದ ವಿವಿಧ ರಾಜಕೀಯೇತರ ಸಂಘಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು ಕೂಡ ಮಂಗಳೂರು ಗೋಲಿಬಾರ್ ಘಟನೆಯ ಸತ್ಯಾಸತ್ಯತೆಯ ಬಗ್ಗೆ, ಪೊಲೀಸರ ಕಟ್ಟುಕತೆಯ ಬಗ್ಗೆ ಮತ್ತು ಒಮ್ಮೆ ಮೃತರಿಗೆ ಪರಿಹಾರ ಘೋಷಿಸಿ ವಾರದ ಬಳಿಕ ದಿಢೀರ್ ಪರಿಹಾರ ಘೋಷಣೆ ಹೇಳಿಕೆ ವಾಪಸ್ ಪಡೆದ ರಾಜ್ಯ ಸರ್ಕಾರದ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಸರ್ಕಾರದ ಕ್ರಮ ಮತ್ತು ಮಂಗಳೂರು ಪೊಲೀಸರ ಹೇಳಿಕೆಗಳೇ ಅದು ಪೊಲೀಸರ ದುರುದ್ದೇಶಪೂರ್ವಕ ಕೃತ್ಯ ಎಂಬ ಗಾಢ ಅನುಮಾನಗಳನ್ನು ಹುಟ್ಟಿಸಿದೆ ಎಂಬ ಆರೋಪ ಕೇಳಿಬಂದಿದ್ದವು.
ಆ ಹಿನ್ನೆಲೆಯಲ್ಲಿ ಗೋಲಿಬಾರ್ ಸೇರಿದಂತೆ ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಕುರಿತ ಸತ್ಯಾಸತ್ಯತೆಯನ್ನು ದೇಶದ ಜನರ ಮುಂದಿಡುವ ಪ್ರಯತ್ನವಾಗಿ ಬೆಂಗಳೂರಿನ ‘ಲಿಸನಿಂಗ್ ಪೋಸ್ಟ್’ ಎಂಬ ಸಂಸ್ಥೆ ವಿವಿಧ ನಾಗರಿಕ ಹೋರಾಟ ಸಂಘಟನೆಗಳ ಸಹಕಾರದಲ್ಲಿ ಮಂಗಳೂರಿನಲ್ಲಿ ಜ.6ಮತ್ತು 7ರಂದು ಜನತಾ ನ್ಯಾಯಾಲಯ ಆಯೋಜಿಸಿತ್ತು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡರ ನೇತೃತ್ವದ ಸತ್ಯಶೋಧನಾ ಸಮಿತಿಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಬಿ ಟಿ ವೆಂಕಟೇಶ್ ಹಾಗೂ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು ಅವರೂ ಇದ್ದರು. ಮಂಗಳೂರು ಪೊಲೀಸರಿಗೂ ಮಾಹಿತಿ ನೀಡಿದ್ದ ಸಮಿತಿ, ಅವರೂ ಘಟನೆಯ ಕುರಿತ ತಮ್ಮ ಹೇಳಿಕೆಯನ್ನು ಜನತಾ ನ್ಯಾಯಾಲಯದಲ್ಲಿ ಮಂಡಿಸಬಹುದು ಎಂದೂ ಹೇಳಿತ್ತು.
ಮೊದಲ ದಿನ ನಗರದ ಖಾಸಗಿ ಹೋಟೆಲೊಂದರಲ್ಲಿ ಪೂರ್ವನಿಗದಿಯಂತೆ ಜನತಾ ನ್ಯಾಯಾಲಯದ ಅಹವಾಲು ಆರಂಭವಾದಾಗ, ಗೋಲಿಬಾರಿನಲ್ಲಿ ಸಾವು ಕಂಡ ನತದೃಷ್ಟ ಜಲೀಲ್ ಅವರ ಮಕ್ಕಳಾದ ಸಬೀಬ್(5ನೇ ತರಗತಿ), ಶೆಫಾಲಿ(9ನೇ ತರಗತಿ) ತಮ್ಮ ನೋವು ತೋಡಿಕೊಂಡರು. ಮತ್ತೊಬ್ಬ ನತದೃಷ್ಟ ನೌಶೀನ್ ಕುಟುಂಬದವರೂ ಅಹವಾಲು ಸಲ್ಲಿಸಿದರು. ಹಾಗೇ, ಪೊಲೀಸರು ಅಶ್ರುವಾಯು ಸಿಡಿಸಿದ ಆಸ್ಪತ್ರೆಯ ಆಡಳಿತ ಮಂಡಳಿಯವರು ಕೂಡ ರೋಗಿಗಳಿರುವ ಆಸ್ಪತ್ರೆಗೆ ನುಗ್ಗಿ ಪೊಲೀಸರು ನಡೆಸಿದ ಆ ಕೃತ್ಯದಿಂದ ರೋಗಿಗಳಿಗೆ ಏನೆಲ್ಲಾ ತೊಂದರೆಯಾಯ್ತು ಎಂಬುದನ್ನು ವಿವರಿಸಿದರು. ಅಲ್ಲದೆ, ಗೋಲಿಬಾರ್ ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದ ಕೆಲವು ಪತ್ರಕರ್ತರು ಕೂಡ ಹೇಗೆ ಪೊಲೀಸರು ತಮ್ಮ ಮೇಲೆಯೂ ದೌರ್ಜನ್ಯ ನಡೆಸಿದರು ಎಂಬುದನ್ನು ವಿವರಿಸಿದರು.
ಈ ಅಹವಾಲು ಸ್ವೀಕಾರದ ನಡುವೆಯೇ ಮುಫ್ತಿಯಲ್ಲಿದ್ದ ಪೊಲೀಸರು ಜನತಾ ನ್ಯಾಯಾಲಯ ನಿಲ್ಲಿಸುವಂತೆ ಆಯೋಜಕರು ಮತ್ತು ಹೋಟೆಲ್ ಆಡಳಿತದ ಮೇಲೆ ಒತ್ತಡ ಹೇರಿದರು. ಪೊಲೀಸ್ ಕಮೀಷನರ್ ಕಚೇರಿಯಿಂದ ಹೋಟೆಲ್ ಮಾಲೀಕರಿಗೆ ಒತ್ತಡದ ಕರೆಗಳು ಬಂದವು. ಕೂಡಲೇ ಅಲ್ಲಿಂದ ನಿವೃತ್ತ ನ್ಯಾಯಮೂರ್ತಿಗಳ ತಂಡವನ್ನು ಕಳಿಸುವಂತೆ ಅವರಿಗೆ ತಾಕೀತು ಮಾಡಲಾಯಿತು. ಆದರೆ, ನ್ಯಾಯಮೂರ್ತಿ ಗೋಪಾಲಗೌಡರು, ತಾವು ಮರದಡಿ ಕೂತಾದರೂ ಸರಿ, ಜನರ ಅಹವಾಲು ಕೇಳದೇ ಮಂಗಳೂರಿನಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ಮಣಿದ ಮಂಗಳೂರು ಪೊಲೀಸರು, ಸಂಜೆ 4ರವರೆಗೆ ಅಹವಾಲು ಸ್ವೀಕರಿಸಲು ಅವಕಾಶ ನೀಡಿದರು.
ಈ ನಡುವೆ ಸತ್ಯಶೋಧನಾ ಸಮಿತಿ ಘಟನೆ ನಡೆದ ಸ್ಥಳ, ವಿವಿಧ ಆಸ್ಪತ್ರೆ ಹಾಗೂ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿತ್ತು. ಮಾರನೇ ದಿನ ಮತ್ತೆ ಅಹವಾಲು ಸಭೆ ನಡೆಸಲು ಪೊಲೀಸರು ಅವಕಾಶ ನಿರಾಕರಿಸಿದರು. ಅಷ್ಟೇ ಅಲ್ಲ; ಪತ್ರಿಕಾಗೋಷ್ಠಿ ನಡೆಸಲು ಕೂಡ ಸಮಿತಿಗೆ ಅವಕಾಶ ನೀಡಲಿಲ್ಲ. ಹಲವು ಹೋಟೆಲುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲು ನಡೆಸಿದ ಸಮಿತಿಯ ಯತ್ನಗಳಿಗೆ ಪೊಲೀಸರು ಮತ್ತೆ ಮತ್ತೆ ಅಡ್ಡಿಪಡಿಸಿದರು. ಹೋಟೆಲ್ ಆಡಳಿತಮಂಡಳಿಗಳಿಗೆ ಬೆದರಿಸಿ ಅನುಮತಿ ನಿರಾಕರಿಸಿದರು. ಕೊನೆಗೆ ಸಮಿತಿ ಬೀದಿಯಲ್ಲೇ ನಿಂತು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತು.
ಒಬ್ಬ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮತ್ತೊಬ್ಬರು ಹೈಕೋರ್ಟ್ ಹಿರಿಯ ವಕೀಲರು ಮತ್ತು ಇನ್ನೊಬ್ಬರು ಹಿರಿಯ ಪತ್ರಕರ್ತರನ್ನು ಒಳಗೊಂಡ ಒಂದು ಘನತೆಯ ಸಮಿತಿಗೆ ಕನಿಷ್ಠ ಶಾಂತ ರೀತಿಯಲ್ಲಿ ಜನರನ್ನು ಭೇಟಿ ಮಾಡಿ, ನೊಂದವರ ಅಹವಾಲು ಸ್ವೀಕರಿಸಲು ಅವಕಾಶ ನೀಡಲಿಲ್ಲ. ಅದು ಸಾಲದು ಎಂಬಂತೆ ಕನಿಷ್ಠ ಮಾಧ್ಯಮದ ಮುಂದೆ ತಮ್ಮ ಭೇಟಿ, ಸಭೆಗಳ ಬಗ್ಗೆ ಮಾಹಿತಿ ನೀಡಲು ಕೂಡ ಅವಕಾಶ ನೀಡಲಿಲ್ಲ. ಹಾಗಾದರೆ, ಮಂಗಳೂರು ಪೊಲೀಸರಿಗೆ ನ್ಯಾಯಾಂಗದ ಬಗ್ಗೆ, ನಾಗರಿಕ ಹಕ್ಕುಗಳ ಬಗ್ಗೆ ಯಾವ ಮಟ್ಟಿಗಿನ ಗೌರವ ಇದೆ? ಎಂಬ ಪ್ರಶ್ನೆ ಏಳುವುದು ಸಹಜ.
ಸಮಿತಿಯಲ್ಲಿ ಒಬ್ಬರಾಗಿರುವ ಪತ್ರಕರ್ತ ಸುಗತ ಶ್ರೀನಿವಾಸ ರಾಜು ಅವರು ಕೂಡ, ಮಾಧ್ಯಮದ ಮುಂದೆ ಮಾತನಾಡುತ್ತಾ ಅದನ್ನೇ ಕೇಳಿದ್ದಾರೆ. “ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾದವರಿಗೂ ಕೂಡ ಒಂದು ಪತ್ರಿಕಾಗೋಷ್ಠಿ ನಡೆಸುವ ಸ್ವಾತಂತ್ರ್ಯ ಈ ದೇಶದಲ್ಲಿ ಇಲ್ಲ ಎಂದರೆ ಇನ್ನು ಜನಸಾಮಾನ್ಯರ ಸ್ಥಿತಿ ಹೇಗಿರಬಹುದು. ನಾವು ಯಾವುದೇ ರೀತಿಯಲ್ಲೂ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡಿಲ್ಲ. ನಮ್ಮ ಉದ್ದೇಶ ವಾಸ್ತವಾಂಶವನ್ನು ಅರಿಯವುದು, ಜನರ ಅಹವಾಲನ್ನು ಕೇಳಿಸಿಕೊಳ್ಳುವುದು. ಪೊಲೀಸರು ಒತ್ತಡಕ್ಕೆ ಒಳಗಾಗಿದ್ದಾರೆ. ನಾವು ಸಭೆ ನಡೆಸಿದ ಹೋಟೆಲ್ ಮಾಲೀಕರ ಮೇಲೂ ಒತ್ತಡ ಹೇರಿದ್ದಾರೆ. ಆದರೆ, ನಾವು ಸಾಕಷ್ಟು ಜನರನ್ನು ಭೇಟಿ ಮಾಡಿ, ಮಾತನಾಡಿದ್ದೇವೆ. ನಾವು ಕಂಡುಕೊಂಡದ್ದನ್ನು ಯಥಾವತ್ತಾಗಿ ಮಾಧ್ಯಮಗಳ ಮೂಲಕ ಜನರ ಮುಂದಿಡುತ್ತೇವೆ. ನಮಗೆ ಯಾವುದೇ ಪೂರ್ವಗ್ರಹವಾಗಲೀ, ಯಾರನ್ನೇ ಗುರಿಯಾಗಿಸಿಕೊಂಡ ದುರುದ್ದೇಶವಾಗಲೀ ಇಲ್ಲ.. “ ಎಂದಿದ್ದಾರೆ.
ಆದರೆ, ಏನೇ ಹೇಳಲಿ, ಮೂಲಭೂತವಾಗಿ ಮಂಗಳೂರು ಪೊಲೀಸರಿಗೆ ಭಯ ಇರುವುದೇ ಸತ್ಯದ ಬಗ್ಗೆ! ವಾಸ್ತವಾಂಶಗಳು ಹೊರಬಂದರೆ ತಮ್ಮ ಕೇಸರಿ ಮುಖವಾಡ ಕಳಚಿಬೀಳುತ್ತದೆ ಎಂಬ ಭಯ ಅವರಿಗಿದೆ. ಹಾಗಾಗಿಯೇ, ಘಟನೆ ನಡೆದ ದಿನದಿಂದ ಈವರೆಗೆ ಅವರು ಬಂದರು ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹೊರಬಿಟ್ಟಿಲ್ಲ, ಹಾಗೇ ಸ್ಥಳೀಯ ಮಾಧ್ಯಮಗಳನ್ನು ಬಾಯಿಮುಚ್ಚಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈಗ, ಇದೀಗ ಜನತಾ ನ್ಯಾಯಾಲಯದ ಹೆಸರಲ್ಲಿ ಸತ್ಯ ಹೊರಬಂದುಬಿಡಬಹುದು ಎಂಬ ಆತಂಕ ಕರಾವಳಿ ಪೊಲೀಸರನ್ನು ಪತ್ರಿಕಾಗೋಷ್ಠಿಗೇ ಅವಕಾಶ ನೀಡದಂತಹ ದುಸ್ಸಾಹಸದ ಕೃತ್ಯಗಳಿಗೆ ಎಳೆಸಿದೆ. ಆದರೆ, ಇಂತಹ ಬಲಪ್ರಯೋಗ, ದಬ್ಬಾಳಿಕೆಯ ಮೂಲಕ ಪೊಲೀಸರು ಸತ್ಯವನ್ನು ಎಷ್ಟು ದಿನ ಬಚ್ಚಿಡಬಲ್ಲರು? !