ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಜಿದ್ದಿಗೆ ಬಿದ್ದಂತೆ ಕಾಣುತ್ತಿದೆ. ಕಲ್ಕುಳಿ ವಿಠ್ಠಲ ಹೆಗ್ಗಡೆ ‘ನಕ್ಸಲ್ ಬೆಂಬಲಿಗ’ ಎಂದವರಿಗೆ ಕೆಲವು ವರ್ಷಗಳ ಹಿಂದೆ ನ್ಯಾಯಾಲಯವೇ ಛೀಮಾರಿ ಹಾಕಿದ್ದರೂ, ವಿಠಲ ಹೆಗ್ಗಡೆಯವರ ಮೇಲೆ ದುರುದ್ದೇಶದಿಂದ ಸುಳ್ಳು ಕೇಸುಗಳನ್ನು ಹಾಕಿದವರಿಗೆ ಉಚ್ಛ ನ್ಯಾಯಾಲಯವೇ ಛೀಮಾರಿ ಹಾಕಿ ಎಲ್ಲಾ ಸುಳ್ಳು ಪ್ರಕರಣಗಳು ಬಿದ್ದು ಹೋಗಿದ್ದರೂ, ಮಲೆನಾಡಿನಲ್ಲಿ ಸಂಘಪರಿವಾರದ ಹುನ್ನಾರಗಳಿಗೆ ಕಲ್ಕುಳಿ ವಿಠಲ ಹೆಗ್ಗಡೆ ದೊಡ್ಡ ತಡೆಯಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರ ತೇಜೋವಧೆ ಮಾಡಲಾಗುತ್ತಿದೆ. ತನ್ನ ಕೈಯಲ್ಲಿ ಅಧಿಕಾರ ಇರುವ ಮಾತ್ರಕ್ಕೆ ಪ್ರಜಾಪ್ರಭುತ್ವದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಈ ಆರ್ ಎಸ್ ಎಸ್ ಅಡಿಯಾಳು.
ಕಲ್ಕುಳಿ ವಿಠಲ ಹೆಗ್ಗಡೆಯವರ ಬಗ್ಗೆ ಸಂಘಪರಿವಾರ ಮಾಡುತ್ತಿರುವ ಆರೋಪಗಳು ಹುರುಳಿಲ್ಲದವು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಲವಾರು ದಶಕಗಳಿಂದ ಈ ಭಾಗದಲ್ಲಿ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಕೊಂಡು, ಪ್ರಜಾತಾಂತ್ರಿಕ ವಿಧಾನಗಳಲ್ಲೇ ಕುದುರೆಮುಖ ಗಣಿಗಾರಿಕೆ ವಿರುದ್ಧದ ತುಂಗಾ ಭದ್ರ ಉಳಿಸಿ ಮತ್ತು ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರ ವಿರುದ್ಧದ ಚಳವಳಿಯಾದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಅಹಿಂಸಾತ್ಮಕ ಜನಾಂದೋಲನಗಳ ಮುಂದಾಳ್ತನ ವಹಿಸಿಕೊಂಡು, ಜೊತೆಜೊತೆಯಲ್ಲಿ ಸಾಹಿತ್ಯ ಕೃಷಿಯನ್ನೂ ನಡೆಸಿ ‘ಮಂಗನ ಬ್ಯಾಟೆ’ಯಂತಹ ಮೌಲಿಕ, ಮಲೆನಾಡಿನ ಅದ್ಭುತ ಪರಿಸರ ಕಥನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕಲ್ಕುಳಿ ವಿಠಲ ಹೆಗ್ಗಡೆಯವರಿಗೆ ಸಹಜವಾಗಿಯೇ ಈ ಸಲದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶ ಲಭಿಸಿದೆ. ಇದು ಯಾರೋ ಶಿಫಾರಸು ಮಾಡಿಯೋ, ಒತ್ತಾಯ ಮಾಡಿಯೋ ಅಥವಾ ಓಲೈಸಲೋ ನೀಡಿರುವ ಅವಕಾಶವಲ್ಲ. ಶೃಂಗೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ತೀರಾ ಸಹಜವಾದ ಆಯ್ಕೆ ಕಲ್ಕುಳಿ ವಿಠಲ ಹೆಗ್ಗಡೆಯವರೇ ಆಗಿದ್ದ ಕಾರಣ ಜಿಲ್ಲಾ ಸಾಹಿತ್ಯ ಪರಿಷತ್ತು ಸರ್ವಾನುಮತದಿಂದಲೇ ಕಲ್ಕುಳಿಯವರನ್ನು ಆಯ್ಕೆ ಮಾಡಿದೆ.
ಇತ್ತೀಚೆಗೆ ರಾಷ್ಟ್ರಕವಿ ಕುವೆಂಪು ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸುವ ಅಭಿಯಾನ ನಡೆಸಿದ ಬ್ರಾಹ್ಮಣಶಾಹಿ ಪಟ್ಟಭದ್ರ ಹಿತಾಸಕ್ತಿಗಳೇ ಕಲ್ಕುಳಿ ವಿಠಲ ಹೆಗ್ಗಡೆಯವರ ಆಯ್ಕೆಯನ್ನೂ ವಿರೋಧಿಸುತ್ತಿವೆ. ತಮ್ಮ ಗುಲಾಮಗಿರಿ ಮಾಡುವುದಾದರೆ ಯಾರನ್ನೂ ಸಹಿಸಿಕೊಳ್ಳುವ ಸಂಘಪರಿವಾರದ ಈ ವೈದಿಕ ಮನಸ್ಸುಗಳು ಸ್ವಾಭಿಮಾನ ತೋರುವ ಯಾವುದೇ ಶೂದ್ರ-ದಲಿತರರ ಏಳಿಗೆ ಅಥವಾ ಸಾಧನೆಯನ್ನು ಸಹಿಸಿದ ಉದಾಹರಣೆ ಚರಿತ್ರೆಯಲ್ಲೇ ಇಲ್ಲ. ಈಗ ಸಿ ಟಿ ರವಿ ಎಂಬ ಶೂದ್ರನ ಹೆಗಲ ಮೇಲೆ ಕೋವಿ ಇಟ್ಟು ಕಲ್ಕುಳಿ ವಿಠಲ ಹೆಗ್ಗಡೆಯವರಿಗೆ ಗುರಿ ಇಟ್ಟಿರುವ ವೈದಿಕಶಾಹಿ ತನ್ನ ಎಂದಿನ ಕುತಂತ್ರವನ್ನೇ ಇಲ್ಲಿ ನಡೆಸುತ್ತಿದೆ.
ಯಾವುದೇ ಒಂದು ಜಿಲ್ಲೆಯಲ್ಲಿ ನಡೆಯುವ ಸಮ್ಮೇಳನದ ಸಂಪೂರ್ಣ ಜವಾಬ್ದಾರಿ ಆ ಜಿಲ್ಲೆಯ ಸಾಹಿತ್ಯ ಪರಿಷತ್ತಿಗೆ ಇರುತ್ತದೆ. ಆ ಜಿಲ್ಲೆಯ ಘಟಕ ಸರ್ವಾನುಮತದಿಂದ ತೀರ್ಮಾನಿಸಿದ ಮೇಲೆ ಅದನ್ನು ಸಾಕ್ಷಾತ್ ಮುಖ್ಯಮಂತ್ರಿ ಬಂದರೂ ಬದಲಿಸಲು ಸಾಧ್ಯವಿಲ್ಲ. ಇದು ಇಡೀ ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯ ಪ್ರಶ್ನೆ. ಯಾವುದೇ ಸರ್ಕಾರ ಸಮ್ಮೇಳನಕ್ಕೆ ಹಣ ನೀಡುವುದು ಆರು ಕೋಟಿ ಕನ್ನಡಿಗರ ತೆರಿಗೆ ಹಣವನ್ನೇ ಹೊರತು ಸರ್ಕಾರ ನಡೆಸುವವರ ಪಿತ್ರಾರ್ಜಿತ ಆಸ್ತಿಯಿಂದಲೊ ಅಥವಾ ಅವರು ಯಾವಾಗಲೋ ಎಲ್ಲೋ ಕೊಳ್ಳೆ ಹೊಡೆದ ಹಣವನ್ನೋ ಅಲ್ಲ. ಆದರೆ ಇಂದು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ವಿಷಯದಲ್ಲಿ ಕ್ಷುಲ್ಲಕ ಕಾರಣಗಳನ್ನು, ಹಸಿ ಹಸಿ ಸುಳ್ಳುಗಳನ್ನು ಮುಂದೆ ಮಾಡಿ ಸಮ್ಮೇಳನಕ್ಕೆ ಅಡ್ಡಿ ತರುತ್ತಿರುವಾಗ ರಾಜ್ಯ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಅವರು ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯನ್ನು ಕಾಪಾಡುತ್ತಿದ್ದಾರೋ ಅಥವಾ ಪ್ರಭುತ್ವದ ರಾಗಕ್ಕೆ ತಾಳ ಹಾಕುತ್ತಿದ್ದಾರೋ ಎಂದು ಇಡೀ ನಾಡು ಕೇಳುತ್ತಿದೆ.
ಈಗ ಯೋಚಿಸಿದರೆ 2006ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಚಂಪಾ (ಚಂದ್ರಶೇಖರ್ ಪಾಟೀಲ) ಕುರಿತು ಹೆಮ್ಮೆ ಮೂಡುತ್ತದೆ. ಆಗಲೂ ಇಂತದೇ ಸ್ಥಿತಿ ತಲೆದೋರಿತ್ತು. ಅದು ಶಿವಮೊಗ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿದ್ದ ಸಂದರ್ಭ. ಸಂಘಟನೆಯ ಹೊಣೆ ಹೊತ್ತಿದ್ದು ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಡಿ. ಮಂಜುನಾಥ್ ಅವರು. ಸಮ್ಮೇಳನದ ಗೋಷ್ಠಿಯೊಂದಕ್ಕೆ ಇದೇ ಕಲ್ಕುಳಿ ವಿಠಲ ಹೆಗ್ಗಡೆಯವರನ್ನು ಹಾಗೂ ಗೌರಿ ಲಂಕೇಶ್ ಅವರನ್ನುಆಹ್ವಾನಿಸಲಾಗಿತ್ತು. ಸಂಘಿಗಳದ್ದು ಆಗಲೂ ಇದೇ ವರಾತ. “ಅಯ್ಯೋ ನಕ್ಸಲರೂ.. ಇವರಿಗೆ ಅವಕಾಶ ಕೊಡಬೇಡೀ…” ಎಂದು ದೊಡ್ಡ ಹಾಹಾಕಾರವನ್ನೇ ಶುರು ಮಾಡಿದರು. ಮಾನ್ಯ ಯಡಿಯೂರಪ್ಪನವರು ಆಗ ಉಪ ಮುಖ್ಯಮಂತ್ರಿಯಾಗಿದ್ದರು. ಅವರ ಮೂಲಕ ಆರೆಸ್ಸೆಸ್, ಪರಿಷತ್ತಿನ ಅಧ್ಯಕ್ಷರಾಗಿದ್ದ ಚಂಪಾ ಅವರ ಮೇಲೆ ಸಾಕಷ್ಟು ಒತ್ತಡ ತಂದಿತು. ಆದರೆ ಆಗ ಚಂಪಾ ಎಂತಹ ಗಟ್ಟಿತನ ತೋರಿದರೆಂದರೆ ನೆನೆಸಿಕೊಂಡರೆ ನಿಜಕ್ಕೂ ಸಂತೋಷವಾಗುತ್ತದೆ. ಸ್ವಾಗತ ಸಮಿತಿಯ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ, ರಾಜ್ಯ ಪರಿಷತ್ತು ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ, ಇದರಲ್ಲಿ ಸರ್ಕಾರ ತಲೆತೂರಿಸುವ ಅಗತ್ಯವಿಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿಬಿಟ್ಟರು. ನಂತರ ಸಮ್ಮೇಳನ ಭವ್ಯವಾಗಿ ನಡೆಯಿತು.
ರೈತ ಮುಖಂಡ ಕೆ ಟಿ ಗಂಗಾಧರ್ ಹಾಜರಿದ್ದ ಗೋಷ್ಠಿಯಲ್ಲಿ ವಿಠಲ್ ಹೆಗ್ಗಡೆ ಮಾತು ಶುರುಮಾಡುತ್ತಿದ್ದಂತೆ ಸಂಘಿಗಳ ಗುಂಪುಗಳು, ಥೇಟ್ ಟೆರರಿಸ್ಟುಗಳು ದಾಳಿ ನಡೆಸುವಂತೆ ದಾಳಿ ನಡೆಸಿದವು. ಆದರೆ ಪೊಲೀಸರು ಈ ದಾಳಿಯನ್ನು ವಿಫಲಗೊಳಿಸಿದರು. ದಾಳಿ ನಡೆಸಲು ಬಂದವರೇ ಪೊಲೀಸ್ ಲಾಠಿಯಲ್ಲಿ ಗೂಸಾ ತಿಂದರು. ಆಗ ಶಿವಮೊಗ್ಗ ಎಸ್ಪಿಯಾಗಿದ್ದ ಅರುಣ್ ಚಕ್ರವರ್ತಿಯವರು ಸಾಹಿತ್ಯ ಪರಿಷತ್ತಿನ ಬೆನ್ನಿಗೆ ನಿಂತು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಇಡೀ ಸಮ್ಮೇಳನ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು.
ಸಮ್ಮೇಳನದಲ್ಲಿ ವೇದಿಕೆಗೆ ನುಗ್ಗಿ ಕಾರ್ಯಕ್ರಮ ಹಾಳುಗಡೆವಲು ಬಂದಿದ್ದ ಒಂದಷ್ಟು ಎಬಿವಿಪಿಯ ಹುಡುಗರು ಆಸ್ಪತ್ರೆಗೆ ದಾಖಲಾದಂತೆ ಮಾಡಿ ವಿದ್ಯಾರ್ಥಿಗಳಾಗಿದ್ದ ನಮ್ಮ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸಿದರು. “ನಕ್ಸಲರು ನಮ್ಮ ಮೇಲೆ ಕಲ್ಲಿನಿಂದ ಹೊಡೆದರು, ಖುರ್ಚಿಯಿಂದ ಹೊಡೆದರು, ಕಾಲು ಮುರಿದರು, ಕೈ ಮುರಿದರು” ಎಂದೆಲ್ಲಾ ಸುಳ್ಳು ಹೇಳಿಕೆ ನೀಡಿ ಕೋರ್ಟಿನಲ್ಲಿ ಸಾಕ್ಷಿಯನ್ನೂ ಹೇಳಿದ್ದರು. ಆದರೆ ಸಮ್ಮೇಳನದ ದಿನ ಏನಾಗಿತ್ತು ಎಂಬುದನ್ನು ಟೀವಿ ಚಾನಲ್ ಗಳ ಮೂಲಕ ಇಡೀ ರಾಜ್ಯವೇ ನೋಡಿದ್ದ ಕಾರಣ ಎಬಿವಿಪಿಯವರ ಸುಳ್ಳುಗಳು ನಡೆಯಲಿಲ್ಲ. ಶಿವಮೊಗ್ಗದ ನ್ಯಾಯಾಲಯದಲ್ಲಿ ಈ ಕೇಸುಗಳ ವಿಚಾರಣೆ 6 ವರ್ಷಗಳ ಕಾಲ ನಡೆದು 2012ರಲ್ಲಿ ಆ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿ ನಾವು ಆರೋಪಮುಕ್ತರಾದೆವು.
ಇದೀಗ ಸಿ ಟಿ ರವಿ ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಂಡು ಶೃಂಗೇರಿಯಲ್ಲಿ ಸಮ್ಮೇಳನದ ತಯಾರಿಗೆ ತಡೆಯೊಡ್ಡುತ್ತಾ, ಹಲವಾರು ರೀತಿಯಲ್ಲಿ ಕಿರುಕುಳ ಒಡ್ಡುತ್ತಿದ್ದಾರೆ. ಪೊಲೀಸರನ್ನು ತಮ್ಮ ಜೀತದವರಂತೆ ನಡೆಸಿಕೊಂಡು ಪೊಲೀಸ್ ಇಲಾಖೆಯ ಘನತೆಗೇ ಮಸಿ ಬಳಿಯುತ್ತಿದ್ದಾರೆ. ಆದರೆ ಚಿಕ್ಕಮಗಳೂರು ಜಿಲ್ಲಾ ಎಸ್ ಪಿ ಹರೀಶ್ ಪಾಂಡೆಯವರು ಈ ಹಿಂದೆ ಶಿವಮೊಗ್ಗದಲ್ಲಿ ಎಸ್ ಪಿ ಅರುಣ್ ಚಕ್ರವರ್ತಿ ತೋರಿದ್ದ ಪ್ರಭುದ್ಧತೆ ಧೈರ್ಯ ತೋರುತ್ತಾರೆಯೇ ಎಂಬ ಪ್ರಶ್ನೆ ಇದೆ. ಈಗ ನಮ್ಮೆದುರು ಚಂಪಾರಂತಹ ಗಟ್ಟಿತನದ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಶೋಕ್ ಕುಂದೂರು ಅವರು ಯಾವುದೇ ಒತ್ತಡಡಕ್ಕೆ ಮಣಿಯದೇ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ನಿಂತಿರುವುದು ಸಂತೋಷದ ಸಂಗತಿ. ಈ ಸಂದರ್ಭದಲ್ಲಿ ಅವರಿಗೆ ಕೋಟಿ ಕನ್ನಡಿಗರ ಅಭಿನಂದನೆ ಸಲ್ಲುತ್ತದೆ.
ನಾಳೆ ಶೃಂಗೇರಿ ಪಟ್ಟಣದಲ್ಲಿ ಚಿಕ್ಕಮಗಳೂರು ಜಿಲ್ಲೆ ಮತ್ತು ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಹಿರಿಯ ಸಾಹಿತಿ ಕುಂ ವೀರಭದ್ರಪ್ಪ, ಗಾಂಧೀವಾದಿ ಚಿಂತಕ ಪ್ರಸನ್ನ, ಹಿರಿಯ ಲೇಖಕರಾದ ರಹಮತ್ ತರೀಕೆರೆ, ಪ್ರೊ.ಶ್ರೀಕಂಠ ಕೂಡಿಗೆ, ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ, ಪ್ರೊ ರಾಜೇಂದ್ರ ಚೆನ್ನಿ ಮೊದಲಾದ ನಾಡಿನ ಹಲವಾರು ಗಣ್ಯ ಸಾಹಿತಿಗಳು ತಾವೂ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ನಾ.ಡಿಸೋಜಾರಂತಹ ಹಿರಿಯರು ಸರ್ಕಾರದ ಕ್ರಮವನ್ನು ಖಂಡಿಸಿ ತಾವೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ಬೆಂಬಲ ಘೋಷಿಸುವುದಾಗಿ ತಿಳಿಸಿದ್ದಾರೆ. ಪ್ರಸನ್ನಅವರು ಕೂಡ ಸಮ್ಮೇಳನಕ್ಕೆ ಅಡ್ಡಿಪಡಿಸುತ್ತಿರುವ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡು ಮಾಧ್ಯಮ ಹೇಳಿಕೆ ನೀಡಿದ್ದಾರೆ. ಬರಗೂರು ರಾಮಚಂದ್ರಪ್ಪ, ಚಂಪಾರವರು ಸಹ ತಮ್ಮ ನಿಲುವುಗಳನ್ನು ತಿಳಿಸಿದ್ದಾರೆ. ಶೃಂಗೇರಿಯ ಶಾಸಕರು ಸಹ ಸಮ್ಮೇಳನಕ್ಕೆ ಶುಭ ಹಾರೈಸಿದ್ದಾರೆ.
ನಾಳೆ ಯಾವುದೇ ಅಹಿತಕರ ಘಟನೆಯೂ ಆಗುವುದಿಲ್ಲ. ಶಾಂತಿ ಮತ್ತು ಶಿಸ್ತಿನಿಂದ ಎರಡು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಜರುಗುತ್ತದೆ. ಇದರಲ್ಲಿ ಯಾರಿಗೂ ಯಾವುದೇ ಗೊಂದಲ, ಅನುಮಾನ ಬೇಡ. ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಯಾವತ್ತೂ ಜನಪರ ಮತ್ತು ಜೀವಪರ ಹಾಗೂ ಶಾಂತಿ-ಸೌಹಾರ್ದತೆಯ ಪರವಾಗಿದೆ. ಈ ಪರಂಪರೆಯನ್ನು ಇದೇ ರೀತಿ ಉಳಿಸಿ ಬೆಳೆಸಿಕೊಂಡು ಹೋಗುವುದು ನಾಡಿನ ಪ್ರತಿಯೊಬ್ಬ ಜವಾಬ್ದಾರಿಯುತ ಕನ್ನಡಿಗನ ಹೊಣೆಯಾಗಿದೆ.
ಪ್ರೀತಿಯಿಂದ ಸಮ್ಮೇಳನ ನಡೆಸೋಣ ಬನ್ನಿ. ಕನ್ನಡದ ತೇರನು ಎಳೆಯೋಣ ಬನ್ನಿ.