ಶೃಂಗೇರಿಯಲ್ಲಿ ಸ್ವತಃ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ವಿರೋಧ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಸೇರಿದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಬಡಮೇಲು ಕೃತ್ಯಗಳ ಹೊರತಾಗಿಯೂ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೊದಲ ದಿನ ಯಶಸ್ವಿಯಾಗಿ ನಡೆಯಿತು. ಮೊದಲ ದಿನ ಯಶಸ್ಸು ಸಹಜವಾಗೇ ಸಮ್ಮೇಳನವನ್ನು ವೈಯಕ್ತಿಕ ಜಿದ್ದಿನ ಸಂಗತಿಯಾಗಿ ತೆಗೆದುಕೊಂಡಿರುವ ಸಂಸ್ಕೃತಿ ಸಚಿವರನ್ನು ವಿಚಲಿತಗೊಳಿಸಿತ್ತು. ಪರಿಣಾಮವಾಗಿ ಪೊಲೀಸರ ಮೂಲಕ ಪೆಟ್ರೋಲ್ ಬಾಂಬ್ ದಾಳಿ ಮತ್ತು ಕಾನೂನು ಉಲ್ಲಂಘನೆಯ ಪ್ರಕರಣದ ಭೀತಿ ಹುಟ್ಟಿಸಿ ಎರಡನೇ ದಿನದ ಗೋಷ್ಠಿ ಮತ್ತು ಸಮಾರೋಪಗಳನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ.
ಆದರೆ, ಮೊದಲ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಡಿನ ಉದ್ದಗಲದ ಹಿರಿಯ ಸಾಹಿತಿ- ಬರಹಗಾರರು, ಚಿಂತಕರು ಹಾಗೂ ಸ್ವತಃ ಸಮ್ಮೇಳನಾಧ್ಯಕ್ಷರು ತಮ್ಮ ಮಾತು ಮತ್ತು ಚಿಂತನೆಗಳ ಮೂಲಕ ಸಮ್ಮೇಳನದ ಮೂಲಕ ನೀಡಬೇಕಾದ ಸಂದೇಶವನ್ನು ನೀಡಿದರು. ಹಾಗೇ ಸರ್ಕಾರದ ನಯಾಪೈಸೆ ಅನುದಾನವಿಲ್ಲದೆಯೂ ನಾವು ಅತ್ಯುತ್ತಮ ಸಮ್ಮೇಳನವನ್ನು ಸಂಘಟಿಸಬಲ್ಲೆವು ಎಂಬುದನ್ನು ಜಿಲ್ಲಾ ಮತ್ತು ತಾಲೂಕು ಕಸಾಪ ಸಮಿತಿಗಳು ಹಾಗೂ ದೇಣಿಗೆ ನೀಡಿ ಮತ್ತು ಖುದ್ದು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ನಾಡಿನ ಮೂಲೆಮೂಲೆಯ ಕನ್ನಡ ಮನಸ್ಸುಗಳು ಸಂಸ್ಕೃತಿ ಸಚಿವರು ಮರೆತ ನಾಡು-ನುಡಿ-ಸಂಸ್ಕೃತಿಯ ಪಾಠವನ್ನು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿರೋಧಿಸಿ ಅನುದಾನ ಕೊಡುವುದಿಲ್ಲ ಎಂಬುದರಿಂದ ಆರಂಭವಾದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಂಸ್ಕೃತಿ ಸಚಿವರು, ಸಂಸ್ಕೃತಿ ವಿಹೀನ ವರಸೆಗಳು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸ್ಥಳೀಯ ಪುರಸಭೆ, ಶಿಕ್ಷಣ ಇಲಾಖೆ, ಖಾಸಗೀ ಮತ್ತು ಸರ್ಕಾರಿ ಸಾರಿಗೆ ವ್ಯವಸ್ಥೆಗಳನ್ನೆಲ್ಲಾ ಬಳಸಿಕೊಂಡು ಸಮ್ಮೇಳನವನ್ನು ಬುಡಮೇಲು ಮಾಡಲು ಇನ್ನಿಲ್ಲದ ಯತ್ನಗಳನ್ನು ನಡೆಸಿದರು. ಜಿಲ್ಲಾಡಳಿತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆದರೆ ಮಾತ್ರ ಸಮ್ಮೇಳನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿಸಲಾಯಿತು. ಬಳಿಕ ಪೊಲೀಸ್ ಇಲಾಖೆಯಿಂದ ಸಮ್ಮೇಳನ ಭದ್ರತೆಗೆ ಜಿಲ್ಲಾಡಳಿತದ ಅನುಮತಿ ಬೇಕು ಎಂಬ ಷರತ್ತಿನ ಮೇಲೆ ಭದ್ರತೆ ನೀಡಲು ನಿರಾಕರಿಸಲಾಯಿತು. ಸಮ್ಮೇಳನದ ಹಿಂದಿನ ದಿನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಮ್ಮೇಳನ ನಿಷೇಧಿಸಿದೆ. ಕಾನೂನು ಉಲ್ಲಂಘಿಸಿ ಸಮ್ಮೇಳನ ನಡೆಸಿದರೆ ಆಯೋಜಕರನ್ನು ಜೈಲಿಗೆ ಹಾಕುತ್ತೇವೆ ಎಂದು ಸ್ವತಃ ಎಸ್ಪಿ ಹೇಳಿದರು.
ಬಳಿಕ ಸ್ಥಳೀಯ ಪುರಸಭೆ ಮೂಲಕ ಸಮ್ಮೇಳನದ ವೇದಿಕೆ, ಮಂಟಪ, ಬ್ಯಾನರ್, ಕಟೌಟ್, ಬಂಟಿಂಗ್ಸ್ ಕಿತ್ತುಹಾಕಲಾಯಿತು. ಕುವೆಂಪು ಮತ್ತಿತರ ಹಿರಿಯರ ಹೆಸರಿನ ವೇದಿಕೆಗಳನ್ನು ಕಿತ್ತುಹಾಕಲಾಯಿತು. ಶಿಕ್ಷಣ ಇಲಾಖೆಯ ಮೂಲಕ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಒಒಡಿ ಸೌಲಭ್ಯವನ್ನು ರದ್ದುಪಡಿಸಲಾಯಿತು. ಶಾಲಾ ಮಕ್ಕಳು ಸಮ್ಮೇಳನದಲ್ಲಿ ಭಾಗವಹಿಸದಂತೆ ಕಟ್ಟೆಚ್ಚರ ರವಾನಿಸಲಾಯಿತು. ಶೃಂಗೇರಿಯ ನಗರದಲ್ಲಿ ತಮ್ಮ ಸಂಘಪರಿವಾರದ ಸಂಘಟನೆಗಳ ಮೂಲಕ ಬಂದ್ ಹೇರಿ, ಯಾವುದೇ ಸಾರಿಗೆ ವಾಹನಗಳು ಓಡಾಡದಂತೆ ನಿರ್ಬಂಧಿಸುವ ಮೂಲಕ ಅಕ್ಕಪಕ್ಕದ ಊರುಗಳ ಜನ ಸಮ್ಮೇಳನಕ್ಕೆ ಬಾರದಂತೆ ತಡೆಯಲಾಯಿತು. ಖಾಸಗೀ ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ಬೆದರಿಸುವ ಮೂಲಕ ಜನ ತಾವಾಗಿಯೇ ಸಮ್ಮೇಳನಕ್ಕೆ ಬರದಂತೆಯೂ ತಡೆಯಲಾಯಿತು. ಈ ಎಲ್ಲವೂ ಪೊಲೀಸರ ಆಣತಿಯ ಮೇಲೆಯೇ ನಡೆಯುವಂತೆ ನೋಡಿಕೊಳ್ಳಲಾಯಿತು.
ಅಷ್ಟಾಗಿಯೂ ಸುಮಾರು ಎರಡು ಸಾವಿರ ಜನ ಸಮ್ಮೇಳನದಲ್ಲಿ ಭಾಗವಹಿಸಿದರು. ಮೊದಲ ದಿನದ ಎಲ್ಲಾ ಕಾರ್ಯಕ್ರಮಗಳೂ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸೇರಿದಂತೆ; ಸುಸೂತ್ರವಾಗಿ ನಿಗದಿಯಂತೆ ನಡೆದವು. ಇದು ಸಂಸ್ಕೃತಿ ಸಚಿವರ ಪ್ರತಿಷ್ಠೆಗೆ ಪೆಟ್ಟು ನೀಡಿತು. ಹಾಗಾಗಿ ಕೂಡಲೇ ಹತ್ತಾರು ತಮ್ಮ ಚೇಲಾಗಳನ್ನು ಅಟ್ಟಿ ಕಾರ್ಯಕ್ರಮ ನಡೆಯುತ್ತಿದ್ದ ಆದಿ ಚುಂಚನಗಿರಿ ಸಮುದಾಯ ಭವನದ ಎದುರು ರಸ್ತೆಯಲ್ಲೇ ಕೂತು ಪ್ರತಿಭಟನೆ, ಘೋಷಣೆ ಕೂಗಿಸಿ ಸಮ್ಮೇಳನಕ್ಕೆ ನುಗ್ಗಿಸುವ ಯತ್ನವನ್ನೂ ಮಾಡಿದರು. ಜೊತೆಗೆ ಪೊಲೀಸರನ್ನು ಛೂ ಬಿಟ್ಟು, ಮೈಕ್ ಬಳಸದಂತೆ, ಕಾರ್ಯಕ್ರಮವನ್ನೇ ನಡೆಸದಂತೆ ತಡೆಯುವ ಯತ್ನ ಮಾಡಿದರು. ಆದರೆ, ಮಾಜಿ ಸಚಿವ ಕಿಮ್ಮೆನೆ ರತ್ನಾಕರ್, ಹಿರಿಯ ನಾಯಕ ವೈ ಎಸ್ ವಿ ದತ್ತ, ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡರು ಮತ್ತಿತರರು ಪೊಲೀಸರಿಗೆ ‘ಬುದ್ದಿವಾದ’ ಹೇಳಿ, ಕನ್ನಡದ ಕೆಲಸಕ್ಕೆ ಅಡ್ಡಿಪಡಿಸಿದರೆ ಹುಷಾರ್ ಎಂಬ ಸಂದೇಶ ನೀಡಿದ ಬಳಿಕ ಖಾಕಿಪಡೆ ಹಿಂದೆ ಸರಿಯಿತು.
ಆದರೆ, ಸಂಜೆಯ ಹೊತ್ತಿಗೆ ಸಚಿವರ ಕುತಂತ್ರಗಳು ಬಿರುಸುಗೊಂಡು, ಕನಿಷ್ಟ ಮಾರನೇ ದಿನದ ಕಾರ್ಯಕ್ರಮಗಳನ್ನಾದರೂ ತಡೆಯಲೇಬೇಕು ಎಂಬ ಹಠಕ್ಕೆ ಬಿದ್ದರು. ಈ ನಡುವೆ, ಮೊದಲ ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆದ ವರದಿ ತಲುಪುತ್ತಿದ್ದಂತೆ ಗೃಹ ಸಚಿವರಿಂದ ಚಿಕ್ಕಮಗಳೂರು ಎಸ್ಪಿಗೆ ಕರೆ ಮಾಡಿಸಿ, “ಹೇಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಬಿಟ್ಟಿರಿ, ಏನು ನಾಲಾಯಕ್ ಇದೀರಾ ನೀವು” ಎಂಬ ಧಮಕಿಯನ್ನೂ ಹಾಕಿಸಿದರು ಸಂಸ್ಕೃತಿ ಸಚಿವರು ಎನ್ನಲಾಗಿದೆ. ಸ್ವತಃ ಗೃಹ ಸಚಿವರೇ ಸಮ್ಮೇಳನ ನಿಲ್ಲಿಸಿ ಎಂದು ತಾಕೀತುಮಾಡಿದ ಬಳಿಕ ಮೊದಲೇ ತಾವು ತೊಟ್ಟದ್ದು ಸರ್ಕಾರದ ಖಾಕಿಯಲ್ಲ; ರಾಷ್ಟ್ರ ಲಾಂಛನವಲ್ಲ; ಬದಲಾಗಿ ಆರ್ ಎಸ್ ಎಸ್ ಚಡ್ಡಿ ಮತ್ತು ಲಾಂಛನಗಳು ಎಂಬಂತೆ ವರ್ತಿಸುತ್ತಿದ್ದ ಚಿಕ್ಕಮಗಳೂರು ಪೊಲೀಸರು, ಸಮ್ಮೇಳನ ತಡೆಯಲು ಅಂತಿಮವಾಗಿ ‘ಪೆಟ್ರೋಲ್ ಬಾಂಬ್; ಅಸ್ತ್ರ ಪ್ರಯೋಗಿಸಿದರು!
ಸಮ್ಮೇಳನದ ವಿರೋಧಿಗಳು ಸಾವಿರಾರು ಸಂಖ್ಯೆಯಲ್ಲಿ ಸಭೆಗೆ ನುಗ್ಗುವ ಯೋಜನೆ ಹಾಕಿದ್ದಾರೆ. ಪೆಟ್ರೋಲ್ ಬಾಂಬ್ ಕೂಡ ತಯಾರಿಸಿಟ್ಟುಕೊಂಡಿದ್ದಾರೆ. ಹಾಗಾಗಿ ಎರಡನೇ ದಿನದ ಸಮ್ಮೇಳನಕ್ಕೆ ಅವರು ನುಗ್ಗಿ ಹಿಂಸಾಚಾರ ನಡೆದರೆ ನಾವು ಸಮ್ಮೇಳನ ಆಯೋಜಕರ ಮೇಲೆ, ಕಾನೂನು ಉಲ್ಲಂಘನೆ ಮತ್ತು ಹಿಂಸೆಗೆ ಪ್ರಚೋದನೆಯ ಹಿನ್ನೆಲೆಯಲ್ಲಿ ಎರಡೆರಡು ಕೇಸು ಹಾಕುತ್ತೇವೆ. ಯಾವುದೇ ಭದ್ರತೆ ನೀಡುವುದಿಲ್ಲ ಎಂದು ಪೊಲೀಸರು ಮೂರನೇ ನೋಟೀಸ್ ನೀಡಿ ಬೆದರಿಸಿದರು. ಆ ಮೂಲಕ ಎರಡನೇ ದಿನದ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾದರು. ಆದರೆ, ಆ ಬಳಿಕ ಎದ್ದಿರುವ ಪ್ರಶ್ನೆಗಳಿಗೆ ಪೊಲೀಸರಿಂದ ಉತ್ತರಬೇಕಿದೆ ಎಂದು ಈಗ ನಾಡಿನ ಸಾಹಿತ್ಯಾಸಕ್ತರು, ನಾಡುನುಡಿ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.
ಮುಖ್ಯವಾಗಿ ಖಾಸಗಿ ಜಾಗದಲ್ಲಿ ನಡೆಯುತ್ತಿದ್ದ ಸಮ್ಮೇಳನಕ್ಕೆ ಪೊಲೀಸರು ಅಡ್ಡಿಪಡಿಸಲು ಕಾನೂನಿನಲ್ಲಿ ಅವಕಾಶ ಇದೆಯೇ? ಬಂದ್ ಕರೆಕೊಟ್ಟ ಸಂಘಟನೆಗಳು ನೋಂದಾಯಿತ ಸಂಘಟನೆಗಳೇ? ನೋಂದಾಯಿತ ಸಂಘಟನೆಗಳಲ್ಲದೇ ಹೋದರೆ ಪೊಲೀಸರು ಹೇಗೆ ಬಂದ್ ಗೆ ಬೆಂಬಲವಾಗಿ ಸಮ್ಮೇಳನವನ್ನು ತಡೆಯುವ ಯತ್ನ ಮಾಡಿದರು? ಯಾವ ವ್ಯಕ್ತಿ ಅಥವಾ ಸಂಘಟನೆಯ ಪ್ರತಿನಿಧಿ ಕೋರಿಕೆಯ ಮೇರೆಗೆ ಬಂದ್ ಗೆ ಜಿಲ್ಲಾ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು? ಯಾರ ಸೂಚನೆ ಮೇರೆಗೆ ಯಾವ ಕಾರಣಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿತ್ತು? ನಾಡುನುಡಿಯ ಸಮ್ಮೇಳನದ ಹೊತ್ತಲ್ಲಿ ಅದನ್ನು ತಾತ್ವಿಕವಾಗಿ ವಿರೋಧಿಸುವವರಿದ್ದರೆ ಅವರಿಗೆ ತಮ್ಮ ವಿರೋಧ ದಾಖಲಿಸಲು ಪ್ರಜಾಸತ್ತಾತ್ಮಕ ರೀತಿ ಇರುತ್ತದೆ. ಅದನ್ನು ಮೀರಿದರೆ ಪ್ರತಿಭಟಿಸುವವರ ಮೇಲೆ ಪೊಲೀಸರು ಮಲಾಜಿಲ್ಲದೆ ಕ್ರಮಕೈಗೊಳ್ಳಬೇಕು. ಆದರೆ, ಚಿಕ್ಕಮಗಳೂರು ಪೊಲೀಸರು ಪ್ರತಿಭಟನಾಕಾರರು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ದಿನವಿಡೀ ಸಮ್ಮೇಳನದ ವೇದಿಕೆಯ ಎದುರಲ್ಲೇ ಘೋಷಣೆಕೂಗುತ್ತಾ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದರೂ ಪೊಲೀಸರು ಅವರನ್ನು ಸ್ವಾತಂತ್ರ್ಯ ಹೋರಾಟಗಾರರಂತೆ ನಡೆಸಿಕೊಂಡಿದ್ದು ಯಾಕೆ? ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಧಮಕಿ ಹಾಕಿದರೂ ಪೊಲೀಸರು ಬಹಳ ಆದರದಿಂದ ಕಿಡಿಗೇಡಿಗಳನ್ನು ನಡೆಸಿಕೊಂಡಿದ್ದರ ಹಿಂದಿನ ಮರ್ಮವೇನು?
ಅಂತಿಮವಾಗಿ ಸಮ್ಮೇಳನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕ ಮೇಲೆ ಚಿಕ್ಕಮಗಳೂರು ಪೊಲೀಸರು ಕಳೆದ ಇಪ್ಪತ್ತುನಾಲ್ಕು ಗಂಟೆಯಲ್ಲಿ, ಆ ವಿಧ್ವಂಸಕ ಕೃತ್ಯ ಎಸಗಲು ಸಂಚು ಮಾಡಿದ್ದವರಲ್ಲಿ ಎಷ್ಟು ಮಂದಿಯನ್ನು ಬಂಧಿಸಿದ್ದಾರೆ? ಬಾಂಬ್ ದಾಳಿಯಂತಹ ಕೃತ್ಯಕ್ಕೆ ಸಂಚು ಮಾಡಿದ್ದ ಆ ‘ಭಯೋತ್ಪಾದಕ’ರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆ ಪ್ರಕಾರ ಪ್ರಕರಣದ ದಾಖಲಾಗಿದೆಯೇ? ಒಂದು ವೇಳೆ ಪೊಲೀಸರು ತಿಳಿಸಿದಂತೆ ಶನಿವಾರ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿದ್ದರೆ, ಸಾವಿರಾರು ಜನ ದಾಳಿ ನಡೆಸುವ ಪರಿಸ್ಥಿತಿ ಇದ್ದರೆ, ಆ ಸಂಚುಕೋರರ ಶೋಧ, ಬಂಧನದ ಬದಲಾಗಿ ಪೊಲೀಸರು ಬೆಳಗಿನ ಜಾವವೇ ಇಡೀ ಶೃಂಗೇರಿ ನಗರದಿಂದ ಕಾಲು ಕಿತ್ತದ್ದು ಏಕೆ? ಹಾಗೇ, ಪೆಟ್ರೋಲ್ ಬಾಂಬ್ ದಾಳಿ ನಡೆದಲ್ಲಿ, ಅದಕ್ಕೆ ದಾಳಿ ನಡೆಸಿದವರು ಹೊಣೆಯೇ ? ಅಥವಾ ಸಮ್ಮೇಳನ ನಡೆಸುವವರು ಹೊಣೆಯೇ? ಕನ್ನಡ ನಾಡುನುಡಿಯ ಹಬ್ಬದಂತಹ ಕಾರ್ಯಕ್ರಮ ನಡೆಸುವುದು ಭಯೋತ್ಪಾದನಾ ಚಟುವಟಿಕೆಯಾ? ಅಥವಾ ಬಾಂಬ್ ದಾಳಿ ನಡೆಸುವುದು ಭಯೋತ್ಪಾದನಾ ಚಟುವಟಿಕೆಯಾ?
ಹೀಗೆ ಹತ್ತಾರು ಪ್ರಶ್ನೆಗಳಿಗೆ ಚಿಕ್ಕಮಗಳೂರು ಪೊಲೀಸರಿಂದ ಉತ್ತರಬೇಕಿದೆ. ಇದೇ ಪ್ರಶ್ನೆಗಳನ್ನು ಇದೀಗ ನಾಡಿನ ಸಾಹಿತಿ- ಲೇಖಕರು, ಕನ್ನಡಪರ ಮನಸ್ಸುಗಳು ಕೇಳುತ್ತಿವೆ. ಹಾಗೇ ಕನ್ನಡ ನುಡಿಹಬ್ಬವನ್ನು ರದ್ದುಪಡಿಸಲು ಪೆಟ್ರೋಲ್ ಬಾಂಬ್ ಪ್ರಯೋಗದಂತಹ ಭಯೋತ್ಪಾದನಾ ಕೃತ್ಯಕ್ಕೆ ಕೈಹಾಕಿದ ಸಮಾಜಘಾತುಕ ಶಕ್ತಿಗಳಿಗೆ ಸಚಿವರು ಕುಮ್ಮಕ್ಕು ನೀಡಿದ್ದರೆ? ಸಚಿವರ ಕುಮ್ಮಕ್ಕು ಇಲ್ಲದೇ ಈ ಸಮಾಜಘಾತುಕರು ಇಂತಹ ದುಃಸ್ಸಾಹಸಕ್ಕೆ ಕೈಹಾಕಿದ್ದರೆ? ಎಂಬ ಪ್ರಶ್ನೆಗಳೂ ಇವೆ. ಆ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕಿದೆ ಎಂಬ ಒತ್ತಾಯ ಕೂಡ ಕೇಳಿಬಂದಿದೆ.
ಜೊತೆಗೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ನಗೆಪಾಟಲಿಗೀಡಾಗಿದೆ ಎಂಬುದಕ್ಕೂ ಈ ಸಮ್ಮೇಳನ ಒಂದು ನಿದರ್ಶನವಾಗಿದ್ದು, ಒಂದು ತಾಲೂಕು ಕೇಂದ್ರದಲ್ಲಿ ನಡೆಯುವ ಸಣ್ಣ ಕಾರ್ಯಕ್ರಮಕ್ಕೆ ಭದ್ರತೆ ನೀಡಲಾಗದ ರಾಜ್ಯ ಪೊಲೀಸ್ ಇಲಾಖೆ ಮತ್ತು ಸರ್ಕಾರ ರಾಜ್ಯದ ಜನರಿಗೆ ಯಾವ ಸುರಕ್ಷತೆ ನೀಡಬಲ್ಲದು ಎಂಬ ಪ್ರಶ್ನೆ ಎದುರಾಗಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರೂ ಇದೇ ಪ್ರಶ್ನೆಗಳನ್ನು ಕೇಳಿದ್ದಾರೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಲಿ ಎಂಬ ಒತ್ತಾಯ ಕೂಡ ಕೇಳಿಬಂದಿದೆ.