ಉಪ ಚುನಾವಣೆ ಫಲಿತಾಂಶ ಹೊರಬಿದ್ದು, ಗೆದ್ದವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳು ಉರುಳಿದೆ. ಅಸಲೀ ಅತೃಪ್ತರ ವಲಯದಿಂದ ಮತ್ತೆ ಅತೃಪ್ತಿ ಹೊಗೆಯಾಡತೊಡಗಿದೆ. ಈ ಹಿಂದೆ ಇಂತಹದ್ದೇ ಹೊಗೆ, ಬೆಂಕಿಯಾಗಿ ಭುಗಿಲೆದ್ದು ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನೇ ಆಹುತಿ ತೆಗೆದುಕೊಂಡಿತ್ತು. ಆ ಬೆಂಕಿಯಲ್ಲಿ ತುಪ್ಪ ಕಾಯಿಸಿಕೊಂಡು, ಅಧಿಕಾರದ ಗದ್ದುಗೆಗೇರಿದ ಸಿಎಂ ಯಡಿಯೂರಪ್ಪ ಅವರನ್ನು ಇದೀಗ ಅದೇ ಹಳೆಯ ಹೊಗೆ ಮತ್ತೆ ಬೆಚ್ಚಿಬೀಳಿಸತೊಡಗಿದೆ!
ಸರ್ಕಾರ ರಚಿಸಿದ ಮಾರನೇ ದಿನವೇ ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹದಿನೇಳು ಮಂದಿ ಅತೃಪ್ತ ಶಾಸಕರಿಗೆ ಭರವಸೆ ನೀಡಿದ್ದು, ಯಡಿಯೂರಪ್ಪ ಅವರಿಗೆ ಸ್ಪೀಕರ್ ಅವರ ವಜಾ ಆದೇಶವೇ ಆರಂಭಿಕ ವಿಘ್ನವಾಗಿ ಕಾಡಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕ ಮೇಲೆ, ‘ಅತೃಪ್ತರು ಚುನಾವಣೆ ಗೆದ್ದು ಬರುತ್ತಲೇ ಅವರನ್ನು ಮಂತ್ರಿ ಮಾಡುತ್ತೇನೆ’ ಎಂದಿದ್ದರು. ಹದಿನೈದು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 11 ಮಂದಿ ಅತೃಪ್ತರು ಜಯಗಳಿಸಿದ್ದರು. ಎ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಪರಾಭವಗೊಂಡಿದ್ದರು.
ಆದರೆ, ಸತೃಪ್ತ ಶಾಸಕರು ಮರು ಆಯ್ಕೆಯಾಗಿ ಮತ್ತೆ ಬಿಜೆಪಿಯ ಅಧಿಕೃತ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿ ತಿಂಗಳು ಕಳೆದರೂ ಅವರಿಗೆ ಇನ್ನೂ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಅವಕಾಶ ಒದಗಿಬಂದಿಲ್ಲ. ಈವರೆಗೆ ಒಂದಿಲ್ಲೊಂದು ನೆಪಗಳನ್ನು ಹೇಳಿಕೊಂಡೇ ಸಚಿವ ಸ್ಥಾನ ಕೊಡುವ ಭರವಸೆಯನ್ನು ಭರವಸೆಯಾಗಿಯೇ ಉಳಿಸಿಕೊಂಡುಬರಲಾಗಿತ್ತು. ಆದರೆ, ಇದೀಗ ತಿಂಗಳು ಕಳೆದರೂ ತಮಗೆ ರಾಜೀನಾಮೆಗೆ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂಬುದು ಹೊಸ ಶಾಸಕರನ್ನು ಮತ್ತೊಮ್ಮೆ ಅತೃಪ್ತಿಗೆ ತಳ್ಳಿದೆ.
ಸಿಎಂ ಯಡಿಯೂರಪ್ಪ ಅವರು ವಿಶ್ವ ವಾಣಿಜ್ಯ ಸಮಾವೇಶದಲ್ಲಿ ಭಾಗವಹಿಸಲು ಈ ವಾರಾಂತ್ಯಕ್ಕೆ ದಾವೋಸ್ ಪ್ರಯಾಣ ಬೆಳೆಸುತ್ತಿರುವ ಹಿನ್ನೆಲೆಯಲ್ಲಿ, ಅಷ್ಟರಲ್ಲಿ ಸಂಪುಟ ವಿಸ್ತರಣೆಗೆ ಪಟ್ಟುಹಿಡಿಯಬೇಕು. ಇಲ್ಲದೇ ಹೋದರೆ ಇನ್ನಷ್ಟು ದಿನ ಹೀಗೆ ಬಕಪಕ್ಷಿಗಳಂತೆ ಹುದ್ದೆಗೆ ಕಾಯುವುದು ತಪ್ಪುವುದಿಲ್ಲ ಎಂಬುದು ನೂತನ ಶಾಸಕರ ಅತೃಪ್ತಿ ಭುಗಿಲೇಳಲು ಇರುವ ಒಂದು ಕಾರಣ. ಅಲ್ಲದೆ, ಈ ನಡುವೆ, ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪ ನಡುವಿನ ಸಂಬಂಧ ಮತ್ತೊಮ್ಮೆ ಹಳಸಿದ್ದು, ಯಡಿಯೂರಪ್ಪ ಮನಸ್ಸಿನಲ್ಲಿ ಅತೃಪ್ತರಿಗೆ ತಾವು ಭರವಸೆ ನೀಡಿದಂತೆ ಆಯಕಟ್ಟಿನ ಸ್ಥಾನಗಳನ್ನು ನೀಡಬೇಕು ಎಂಬ ಭಾವನೆ ಇದ್ದರೂ, ಅವರ ಪಟ್ಟಿಗೆ ಸೈ ಎನ್ನುವ ಪರಿಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ. ಹಾಗಾಗಿ ಅತೃಪ್ತರ ಪೈಕಿ ಕೆಲವೇ ಕೆಲವು ಮಂದಿ ಮಾತ್ರ ಸಚಿವ ಸ್ಥಾನ ಪಡೆಯಬಹುದು. ಉಳಿದವರು ನಿಗಮಮಂಡಳಿಗಳಿಗೇ ಸಮಾಧಾನಪಟ್ಟುಕೊಳ್ಳಬೇಕಾಗಬಹುದು ಎಂಬ ದೆಹಲಿಯ ಸುದ್ದಿ ಕೂಡ ಅತೃಪ್ತರನ್ನು ಮತ್ತೊಮ್ಮೆ ಅತೃಪ್ತಿಯ ಕೂಪಕ್ಕೆ ತಳ್ಳಿದೆ.
ಅದರಲ್ಲೂ ಕಳೆದ ಹದಿನೈದು ದಿನಗಳಿಂದ ಪಕ್ಷದ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಸಿಎಂ ಯಡಿಯೂರಪ್ಪ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಹೈಕಮಾಂಡ್ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆಗೆ ಅನುಮೋದನೆ ಪಡೆದು, ಮತ್ತೊಮ್ಮೆ ಅತೃಪ್ತರ ಅತೃಪ್ತಿ ಸ್ಫೋಟಗೊಳ್ಳುವ ಮುನ್ನ ಅವರನ್ನೆಲ್ಲಾ ತೃಪ್ತಿಪಡಿಸಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ಅವರದ್ದು. ಆದರೆ, ಹೈಕಮಾಂಡ್ ಯಡಿಯೂರಪ್ಪ ಭೇಟಿಗೆ ಅವಕಾಶವನ್ನೇ ಕೊಡುತ್ತಿಲ್ಲ. ಸೋಮವಾರ ಕೂಡ ಯಡಿಯೂರಪ್ಪ ದೆಹಲಿಗೆ ವಿಮಾನ ಕಾಯ್ದರಿಸಿ ಸಜ್ಜಾಗಿದ್ದರೂ. ಆದರೆ, ದೆಹಲಿಯ ಕಡೆಯಿಂದ ಹಸಿರು ನಿಶಾನೆ ಬರಲೇ ಇಲ್ಲ. ಮಾರನೇ ದಿನ ಮಂಗಳವಾರವೂ ಅವರು ದೆಹಲಿಯಿಂದ ಕರೆ ಬರಬಹುದು ಎಂಬ ನಿರೀಕ್ಷೆಯಲ್ಲೇ ಕಾದರು. ಆಗಲೂ ಯಾವ ಸೂಚನೆ ಬರಲಿಲ್ಲ. ಹೈಕಮಾಂಡ್ ಭೇಟಿ ಮತ್ತು ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲೇ ದಾವೋಸ್ ಭೇಟಿಯನ್ನೇ ರದ್ದುಮಾಡುವ ತೀರ್ಮಾನ ಕೂಡ ಕೈಗೊಂಡಿದ್ದರು. ಆದರೆ, ಹೈಕಮಾಂಡ್ ನಿಂದ ಯಾವುದೇ ಸೂಚನೆ ಬರದ ಹಿನ್ನೆಲೆಯಲ್ಲಿ ಕೊನೆಗೆ ಅಂತಿಮವಾಗಿ ದೋವೋಸ್ಗೆ ಹೋಗಲು ಸಿಎಂ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿರುವುದು ವರದಿಯಾಗಿದೆ. ಅಂದರೆ, ಸದ್ಯಕ್ಕೆ ದೋವೋಸ್ ನಿಂದ ವಾಪಸು ಬರುವರೆಗೆ ಅತೃಪ್ತರ ಅತೃಪ್ತಿಗೆ ಶಮನವಿಲ್ಲ! ಅಂದರೆ ಬಹುತೇಕ ಈ ತಿಂಗಳ ಅಂತ್ಯದವರೆಗೆ ನೂತನ ಶಾಸಕರಿಗೆ ಸಚಿವಭಾಗ್ಯವಿಲ್ಲ!
ಈ ನಡುವೆ ಇದೇ ಜ.17ರಂದು ಸಿಎಎ ರ್ಯಾಲಿಗಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಅಮಿತ್ ಶಾ ಅವರೊಂದಿಗೆ ಇಲ್ಲಿಯೇ ಮಾತುಕತೆ ನಡೆಸಿ ಸಚಿವರ ಪಟ್ಟಿ ಅಂತಿಮಗೊಳಿಸಲಾಗುವುದು. ಅದಾದ ಮರುದಿನವೇ ಸಚಿವ ಸಂಪುಟ ವಿಸ್ತರಣೆ ಮಾಡಿ, ಬಳಿಕ ಸಿಎಂ ದಾವೋಸ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಇದೆ. ಆದರೆ, ಆ ಬಗ್ಗೆ ಸ್ವತಃ ಸಿಎಂ ಆಪ್ತ ವಲಯದಲ್ಲೇ ಅನುಮಾನವಿದೆ.
ಈ ನಡುವೆ ಅತೃಪ್ತರ ಬಣದ ಪ್ರಮುಖರಾದ ಎ ಎಚ್ ವಿಶ್ವನಾಥ್ ಅವರು, ‘ನಾವು ಇನ್ನೂ ಕಾಯುವುದು ಸಾಧ್ಯವಿಲ್ಲ. ಈಗಾಗಲೇ ತಿಂಗಳು ಕಳೆದಿದೆ. ನಮ್ಮ ರಾಜೀನಾಮೆಯಿಂದಲೇ ಹಿಂದಿನ ಸರ್ಕಾರ ಬಿದ್ದುಹೋಗಿ, ಈ ಸರ್ಕಾರ ಬಂದಿದೆ. ಯಡಿಯೂರಪ್ಪ ಸರ್ಕಾರ ರಚನೆಗೆ ನಾವು ಮಾಡಿದ ತ್ಯಾಗಕ್ಕೆ ತಕ್ಕ ಪ್ರತಿಫಲ ಬೇಕು. ಈಗಲೂ ಬಿಜೆಪಿ ನಾಯಕರು ನಮ್ಮ ತ್ಯಾಗಕ್ಕೆ ಬೆಲೆ ಕೊಡದೇ ಹೋದರೆ, ನಮ್ಮ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ. ನಾವೆಲ್ಲಾ 17 ಮಂದಿ ಈಗಲೂ ಒಗ್ಗಟ್ಟಿನಿಂದಲೇ ಇದ್ದೇವೆ. ಒಂದು ವೇಳೆ ನಮಗೆ ಕೊಟ್ಟ ಮಾತಿನಂತೆ ಸ್ಥಾನಮಾನ ನೀಡದೇ ಹೋದರೆ ಏನಾಗುತ್ತದೆ ಎಂಬುದನ್ನು ಕಾದುನೋಡಿ’ ಎಂಬ ಎಚ್ಚರಿಕೆ ನೀಡಿದ್ದಾರೆ.
ಅತೃಪ್ತ ಶಾಸಕರು ಅಧಿಕಾರ ಮತ್ತು ಹಣದ ಮೇಲೆ ಕಣ್ಣಿಟ್ಟೇ ಹಿಂದಿನ ಸರ್ಕಾರವನ್ನು ಕೆಡವಿ, ತಮ್ಮ ಪಕ್ಷಕ್ಕೆ ಬೆಂಬಲವಾಗಿ ನಿಂತು ಸರ್ಕಾರ ರಚನೆಗೆ ಕಾರಣರಾಗಿದ್ದಾರೆ ಎಂಬುದು ಬಿಜೆಪಿ ಹೈಕಮಾಂಡಿಗೆ ಗೊತ್ತಿಲ್ಲದೇ ಇರುವ ಸಂಗತಿಯೇನಲ್ಲ. ಆದರೂ ಯಾಕೆ ಸಚಿವ ಸಂಪುಟ ವಿಸ್ತರಣೆಗೆ ಸತಾಯಿಸುತ್ತಿದ್ದಾರೆ ಎಂದರೆ; ಅದಕ್ಕೆ ಉತ್ತರ ಸರಳವಿಲ್ಲ. ಉಪಚುನಾವಣೆಯ ಫಲಿತಾಂಶ ಬಂದಾಗ ಹೈಕಮಾಂಡ್ ಗೆ ಯಡಿಯೂರಪ್ಪ ಮೇಲೆ ತಾತ್ಕಾಲಿಕವಾಗಿ ಉಕ್ಕಿದ ಪ್ರೀತಿ, ಈಗ ಬತ್ತಿಹೋಗಿದೆ. ಆಡಳಿತ ವೈಖರಿ, ಪಕ್ಷ ಅಧಿಕಾರದಲ್ಲಿರುವ ಇತರ ರಾಜ್ಯಗಳ ಸಿಎಂಗಳಂತೆ ಎಲ್ಲದಕ್ಕೂ ತಮ್ಮ ಆಣತಿಗೆ ಕಾಯದೇ, ಸ್ವತಃ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಸಿಎಂ ಬಿಎಸ್ ವೈ ವೈಖರಿ, ಬಿಎಸ್ ವೈ ವಿರುದ್ಧ ಸ್ವತಃ ಬಿಜೆಪಿಯ ಬಿ ಎಲ್ ಸಂತೋಷ್ ನೇತೃತ್ವದ ಪ್ರಬಲ ಬಣ ನೀಡುತ್ತಿರುವ ದೂರುಗಳು, ಹೀಗೆ ಹಲವು ಕಾರಣಗಳಿಂದಾಗಿ ಹೈಕಮಾಂಡ್ ಮುನಿಸಿಕೊಂಡಿದೆ.
ಅದರಲ್ಲೂ ಸಂಪುಟ ವಿಸ್ತರಣೆಗಾಗಿ ಯಡಿಯೂರಪ್ಪ ಸಿದ್ಧಪಡಿಸಿಕೊಂಡಿರುವ ಪಟ್ಟಿಯ ಬಗ್ಗೆ ಹೈಕಮಾಂಡ್ಗೆ ಅಸಮಾಧಾನವಿದೆ. ಹೊಸ ಶಾಸಕರು ಮತ್ತು ತಮ್ಮ ಬಣದ ಪ್ರಮುಖರಿಗೆ ಆಯಕಟ್ಟಿನ ಸ್ಥಾನ ಕೊಡುವ ಮೂಲಕ ಸಂತೋಷ್ ಬಣದವರನ್ನು ಮೂಲೆಗುಂಪು ಮಾಡುವ ಲೆಕ್ಕಾಚಾರ ಬಿಎಸ್ ವೈ ಅವರದ್ದಾದರೆ, ಅದಕ್ಕೆ ಪ್ರತಿಯಾಗಿ ಸಂತೋಷ್ ಬಣ ಆಯಕಟ್ಟಿನ ಖಾತೆಗಳನ್ನು ತಾನು ಉಳಿಸಿಕೊಂಡು, ಸರ್ಕಾರ ಮತ್ತು ಪಕ್ಷದ ಮೇಲಿನ ತನ್ನ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆಯ ವೇಳೆಯೇ ಬಿಎಸ್ ವೈ ಅವರನ್ನು ಕಟ್ಟಿಹಾಕುವ ತಂತ್ರ ಅವರದ್ದು. ಮತ್ತೊಂದು ಕಡೆ ಹೈಕಮಾಂಡ್ ಕೂಡ, ಯಡಿಯೂರಪ್ಪ ಅವರ ಮೂಗುದಾರವನ್ನು ಬಿಗಿಗೊಳಿಸಲು ಇದೇ ಸಂಪುಟ ವಿಸ್ತರಣೆಯ ಸಂದರ್ಭವನ್ನೇ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆ ಹಿನ್ನೆಲೆಯಲ್ಲಿಯೇ ಈ ವಿಳಂಬ ಎನ್ನಲಾಗುತ್ತಿದೆ.
ಹಾಗಾಗಿ ಯಡಿಯೂರಪ್ಪ ಅವರ ಮುಂದಿರುವುದು ಈಗ ಸರಳ ಸವಾಲಲ್ಲ. ಒಂದು ಕಡೆ ವೈಯಕ್ತಿಕ ಅಧಿಕಾರ ಮತ್ತು ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಗ್ಗದ ಮೇಲಿನ ನಡಿಗೆ ಸಾಧಿಸಬೇಕಿದೆ. ಮತ್ತೊಂದು ಕಡೆ ತಮ್ಮ ಕುರ್ಚಿಗೆ ಕಾಲುಗಳಾಗಿರುವ ಅತೃಪ್ತರನ್ನು ತೃಪ್ತಿಗೊಳಿಸಬೇಕಿದೆ, ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ. ಸಂಪುಟದಲ್ಲಿ ಜಾತಿ- ಜನಾಂಗ- ಪ್ರಾದೇಶಿಕ ಸಮತೋಲನವನ್ನೂ ಸಾಧಿಸಬೇಕಿದೆ. ಅದೇ ಹೊತ್ತಿಗೆ ವಿರೋಧಿ ಪಾಳೆಯವನ್ನು ಬಲಹೀನಗೊಳಿಸಿ, ಕುರ್ಚಿಗೆ ಕೈ ಹಾಕದಂತೆ ತಡೆಯಬೇಕಿದೆ. ಅದರಲ್ಲೂ ಮುಖ್ಯವಾಗಿ ಬಿ ಎಲ್ ಸಂತೋಷ್ ಬಣದ ಈಶ್ವರಪ್ಪ, ಸಿ ಟಿ ರವಿ, ಅಶ್ವಥನಾರಾಯಣ, ಲಕ್ಷಣ ಸವದಿ ಮುಂತಾದವರನ್ನು ಜಾಣ್ಮೆಯಿಂದ ಬದಿಗೆ ಸರಿಸಬೇಕಿದೆ. ಜೊತೆಗೆ ವಾಲ್ಮೀಕಿ ಸಮಾಜ, ಪಂಚಮಸಾಲಿ ಸಮಾಜ ಸೇರಿದಂತೆ ಬಂಡಾಯ ಸಾರಿರುವ ಸಮುದಾಯಗಳ ಹಿರಿಯ ನಾಯಕರಿಗೆ ಸೂಕ್ತಸ್ಥಾನಮಾನ ನೀಡಿ ಅವರ ಆಕ್ರೋಶವನ್ನೂ ಶಮನಗೊಳಿಸಬೇಕಿದೆ. ಇಲ್ಲದೇ ಹೋದರೆ ಬರಲಿರುವ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷಕ್ಕೆ ತಿರುಗುಬಾಣವಾಗಲಿದೆ.
ಹಾಗಾಗಿ, ಮೇಲ್ನೋಟಕ್ಕೆ ಇದು ಎಂಟು-ಹತ್ತು ಶಾಸಕರನ್ನು ಸಚಿವ ಸ್ಥಾನಕ್ಕೇರಿಸುವ ಒಂದು ಮಾಮೂಲಿ ಸಂಪುಟ ವಿಸ್ತರಣೆ ಎನಿಸಿದರೂ, ವಾಸ್ತವವಾಗಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಎದುರಿಸಬೇಕಾಗಿರುವ ಅತ್ಯಂತ ಕಠಿಣ ಸವಾಲು ಇದು. ಹಾಗೇ ಅವರ ವಿರೋಧಿ ಬಣಕ್ಕೂ ಇದು ನಿರ್ಣಾಯಕ ಘಟ್ಟ. ಅಲ್ಲದೆ, ಯಡಿಯೂರಪ್ಪ ಅವರ ಲಗಾಮು ಹಿಡಿದಿರುವ ಹೈಕಮಾಂಡಿಗೂ ಇದು ಕೈಜಾರದಂತೆ ಎಚ್ಚರಿಕೆ ವಹಿಸಲೇಬೇಕಾದ ಅವಕಾಶ!