ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಎಂಬಾತ ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಶಸ್ತ್ರಾಸ್ತ್ರ ಸಹಿತ ದೆಹಲಿಗೆ ಕರೆದೊಯ್ಯುತ್ತಿರುವಾಗ ಸಿಕ್ಕಿಬಿದ್ದಿರುವುದು ಇದೀಗ ಇಪ್ಪತ್ತು ವರ್ಷ ಹಿಂದಿನ ಸಂಸತ್ ಭವನದ ಮೇಲಿನ ಭಯೋತ್ಪಾದನಾ ದಾಳಿ ಸೇರಿದಂತೆ ಹಲವು ಪ್ರಕರಣಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಹಿರಿಯ ಡಿವೈಎಸ್ ಪಿ ಆಗಿರುವ ಈತ, ಹಲವು ವರ್ಷಗಳಿಂದ ಉಗ್ರರಿಗೆ ನೆರವಾಗುತ್ತಿದ್ದ, ಅವರ ವಸತಿ, ಪ್ರಯಾಣ, ಸರಕುಸರಂಜಾಮು ಸಾಗಣೆಯಂತಹ ವಿಷಯದಲ್ಲಿ ಎಲ್ಲಾ ಬಗೆಯ ನೆರವು ನೀಡುತ್ತಿದ್ದ. ಅದರಲ್ಲೂ ರಾಜ್ಯದ ಉಗ್ರ ನಿಗ್ರಹ ವಿಶೇಷ ತನಿಖಾ ತಂಡ(ಎಸ್ ಐಟಿ)ದ ಪ್ರಮುಖ ಅಧಿಕಾರಿಯಾಗಿದ್ದ ಆತ, ಉಗ್ರ ನಿಗ್ರಹದ ಬದಲು, ಉಗ್ರರ ಪಾಲಿನ ದೊಡ್ಡ ಬೆಂಬಲ ವ್ಯವಸ್ಥೆಯಾಗಿ ಕಣಿವೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶ ಈಗ ಬೆಳಕಿಗೆ ಬಂದಿದೆ.
ದೇವಿಂದರನನ್ನು ಜಮ್ಮು-ಕಾಶ್ಮೀರ ಪೊಲೀಸರು, ಕುಖ್ಯಾತ ಉಗ್ರ ನವೀದ್ ಬಾಬಾ ಮತ್ತು ಆತನ ಸಹಚರ ಅಲ್ತಾಫ್ ನೊಂದಿಗೆ ಕಾರಿನಲ್ಲಿ ಶ್ರೀನಗರದಿಂದ ದೆಹಲಿಯತ್ತ ತನ್ನದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಜಮ್ಮುವಿನ ಸಮೀಪ ಬಂದಿಸಿದ್ದಾರೆ. ನವೀದ್ ಮತ್ತು ಅಲ್ತಾಫ್ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮ್ಯಾಂಡರ್ ಆಗಿದ್ದವರು. ಗಣರಾಜ್ಯೋತ್ಸವದ ವೇಳೆ ದಾಳಿ ನಡೆಸುವ ಉದ್ದೇಶದಿಂದಲೇ ಈ ಇಬ್ಬರು ಉಗ್ರರು ದೆಹಲಿಯತ್ತ ಹೊರಟ್ಟಿದ್ದರು. ಅವರಿಗೆ ಈ ಪೊಲೀಸ್ ಮಹಾಶಯ ನೆರವಾಗುತ್ತಿದ್ದು, ಅವರನ್ನು ದೆಹಲಿಗೆ ತನ್ನದೇ ಕಾರಿನಲ್ಲಿ ಕರೆತರುತ್ತಿದ್ದ ಎಂಬುದು ಈತನನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಾಥಮಿಕ ಮಾಹಿತಿ. ಸುಮಾರು 12 ಲಕ್ಷ ರೂಪಾಯಿ ಆಮಿಷಕ್ಕೆ ಒಳಗಾಗಿ ತಾನು ಈ ಕೆಲಸ ಮಾಡಿರುವುದಾಗಿ ಆತ ಹೇಳಿದ್ದಾನೆ ಎಂದು ವರದಿಯಾಗಿದೆ.
ಆದರೆ, ದೇವಿಂದರ್ ಸಿಂಗ್ ವಿರುದ್ಧ ಈ ಹಿಂದೆಯೂ ಕೂಡ ಉಗ್ರರ ನಂಟಿನ ಬಗ್ಗೆ ಆರೋಪಗಳು ಕೇಳಿಬಂದಿದ್ದವು. 2001ರಲ್ಲಿ ನಡೆದ ಸಂಸತ್ ದಾಳಿ ಪ್ರಕರಣದಲ್ಲಿ ಗಲ್ಲಿಗೇರಿದ ಅಫ್ಜಲ್ ಗುರು ಮೊದಲ ಬಾರಿಗೆ ಈ ದೇವಿಂದರ್ ಸಿಂಗ್ ಮತ್ತು ಉಗ್ರರ ನಂಟಿನ ಬಗ್ಗೆ ಪ್ರಸ್ತಾಪಿಸಿದ್ದ. 2004ರಲ್ಲಿ ತನ್ನ ವಕೀಲರಿಗೆ ಬರೆದಿದ್ದ ಪತ್ರದಲ್ಲಿ ಅಫ್ಜಲ್, ದೇವಿಂದರ್ ಸಿಂಗ್ ಬಗ್ಗೆ ಹೇಳುತ್ತಾ, ‘2001ರಲ್ಲಿ ಸಂಸತ್ ಭವನದ ಮೇಲಿನ ದಾಳಿಗೆ ಮುನ್ನ ತನ್ನನ್ನು ಬಂಧಿಸಿದ್ದ ಈ ಸಿಂಗ್, ತನಗೆ ಚಿತ್ರಹಿಂಸೆ ನೀಡಿದ್ದ. ಹತ್ತು ಲಕ್ಷ ರೂಪಾಯಿ ಲಂಚ ನೀಡಿದರೆ ಬಿಡುಗಡೆ ಮಾಡುವುದಾಗಿ ಹೇಳಿದ್ದ. ಆದರೆ, ತಾನು ತನ್ನ ಪತ್ನಿಯ ಒಡೆವೆ ಮಾರಾಟ ಮಾಡಿ 8 ಲಕ್ಷ ರೂಪಾಯಿ ಮತ್ತು ತನ್ನ ಸ್ಕೂಟರ್ ಕೊಟ್ಟಿದ್ದೆ’ ಎಂದು ಈತನ ಭ್ರಷ್ಟತೆಯ ಬಗ್ಗೆ ವಿವರಿಸಿದ್ದ. ಅಲ್ಲದೆ, ಸಂಸತ್ ಭವನದ ಮೇಲೆ ದಾಳಿ ನಡೆಸಿದ ಮಹಮ್ಮದ್ ಎಂಬಾತನನ್ನು ಪರಿಚಯಿಸಿ, ಆತನಿಗೆ ದೆಹಲಿಯಲ್ಲಿ ಉಳಿದುಕೊಳ್ಳಲು ಮನೆ ಕೊಡಿಸಬೇಕು, ಓಡಾಟಕ್ಕೆ ಕಾರು ಕೊಡಿಸಬೇಕು. ಅದೆಲ್ಲಕ್ಕೆ ನೀನೇ ಆತನಿಗೆ ಸಹಾಯ ಮಾಡಬೇಕು ಎಂದು ಆದೇಶಿಸಿದ್ದ. ಆತನಿಗೆ ದೆಹಲಿಯಲ್ಲಿ ಮನೆ ಹುಡುಕಿಕೊಟ್ಟಿದ್ದೇ ಅಲ್ಲದೆ, ಅಲ್ಲಿ ಓಡಾಡಲು ಕಾರನ್ನೂ ಕೊಡಿಸಿದ್ದೆ. ದೇವಿಂದರ್ ಕಳಿಸಿದ್ದ ಆ ವ್ಯಕ್ತಿಗೆ ಕಾಶ್ಮೀರಿ ಭಾಷೆ ಬರುತ್ತಿರಲಿಲ್ಲ. ಹಾಗಾಗಿ ಆತ ಕಾಶ್ಮೀರಿಯಲ್ಲ ಎಂಬ ಅನುಮಾನ ನನಗಿತ್ತು. ಆದರೆ, ಸಂಸತ್ ಭವನದ ಮೇಲಿನ ದಾಳಿ ಪ್ರಕರಣದಲ್ಲಿ ಆತ ಬಂಧನವಾದಾಗ, ದೇವಿಂದರ್ ಸಿಂಗ್ ಹಕೀಕತ್ತು ಅರ್ಥವಾಗಿತ್ತು’ ಎಂದು ಅಫ್ಜಲ್ ಪತ್ರದಲ್ಲಿ ಹೇಳಿದ್ದ.
ಆದರೆ, ಆಗ ಸಂಸತ್ ದಾಳಿ ಪ್ರಕರಣದ ವಿಚಾರಣೆ ನಡೆಸುವಾಗ ಆತನ ಪತ್ರವನ್ನು ಆಧಾರವಾಗಿಟ್ಟುಕೊಂಡು, ದೇವಿಂದರ್ ಸಿಂಗ್ ಬಗ್ಗೆ ಯಾವುದೇ ತನಿಖೆಯನ್ನೂ ನಡೆಸಿರಲಿಲ್ಲ. ಬದಲಾಗಿ, 2002ರಲ್ಲಿ ಆತನನ್ನು ಉಗ್ರಗಾಮಿಗಳನ್ನು ಮಟ್ಟಹಾಕಲು ಜಮ್ಮುಕಾಶ್ಮೀರ ಪೊಲೀಸ್ ಇಲಾಖೆ ರಚಿಸಿದ ವಿಶೇಷ ಕಾರ್ಯಾಚರಣೆ ಉಗ್ರ ನಿಗ್ರಹ ಪಡೆಗೆ ನೇಮಕ ಮಾಡಲಾಯಿತು. ಅಲ್ಲಿಂದ ಆತ ನಿರಂತರವಾಗಿ ಉಗ್ರ ನಿಗ್ರಹ ಪಡೆಯಲ್ಲೇ ಸೇವೆಯಲ್ಲಿದ್ದ ಮತ್ತು ಪುಲ್ವಾಮಾ ದಾಳಿಯ ಸಂದರ್ಭದಲ್ಲಿಯೂ ಭದ್ರತಾ ಹೊಣೆಗಾರಿಕೆಯನ್ನು ಕೂಡ ಈ ‘ಭಯೋತ್ಪಾದಕರ ದೋಸ್ತಿ’ ಅಧಿಕಾರಿಯೇ ವಹಿಸಿಕೊಂಡಿದ್ದ! ಅಲ್ಲದೆ, 2018ರಲ್ಲಿ ಈತನ ಸಾಹವನ್ನು ಮೆಚ್ಚಿ ಭಾರತ ಸರ್ಕಾರ, ಶೌರ್ಯ ಪ್ರಶಸ್ತಿಯನ್ನೂ ನೀಡಿ, ಪದಕ ನೀಡಿ ಗೌರವಿಸಿತ್ತು!! ಇದೀಗ ಈ ಪ್ರಕರಣದಲ್ಲಿ ಆತ ಸಿಕ್ಕಿಬಿದ್ದ ನಾಲ್ಕೈದು ದಿನಗಳ ಬಳಿಕ ಕೇಂದ್ರ ಗೃಹ ಇಲಾಖೆ ಪದಕ ವಾಪಸ್ ಪಡೆದಿರುವುದಾಗಿ ಗುರುವಾರ ಹೇಳಿದೆ!
ಭಾನುವಾರ ದೇವಿಂದರ್ ಸಿಂಗ್ ಬಂಧನದ ವಿಷಯ ಅಧಿಕೃತವಾಗಿ ಜಮ್ಮುಕಾಶ್ಮೀರ ಪೊಲೀಸರು ಪ್ರಕಟಿಸಿದ ಬಳಿಕ ಈವರೆಗೆ ಸಿಂಗ್ ಮನೆ ಮತ್ತು ಕಚೇರಿಗಳನ್ನು ತಪಾಸಣೆ ನಡೆಸಲಾಗಿದೆ. ಅಲ್ಲಿಯೂ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂಬ ವಿಷಯ ಹೊರತುಪಡಿಸಿ ಮತ್ತೆ ಯಾವುದೇ ಮಹತ್ವದ ವಿಷಯಗಳು ಹೊರಬಿದ್ದಿಲ್ಲ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಹಿಸಿಕೊಳ್ಳಬೇಕು ಎಂದು ಜಮ್ಮುಕಾಶ್ಮೀರ ಪೊಲೀಸರು ಹೇಳಿದ್ದಾರೆ. ಎನ್ ಐಎ ಕೂಡ ಒಂದು ಸುತ್ತಿನ ವಿಚಾರಣೆ ನಡೆಸಿದೆ ಎಂಬ ವರದಿಗಳಿವೆ. ಆದರೆ, ಪ್ರಮುಖವಾಗಿ ಕಳೆದ ಎರಡು ದಶಕದ ಈತನ ಉಗ್ರರ ನಂಟು, ಸಂಸತ್ ದಾಳಿಯಲ್ಲಿ ಈತನ ಪಾತ್ರ, ಪುಲ್ವಾಮಾ ದಾಳಿಯಲ್ಲಿ ಈತನೇ ಭದ್ರತಾ ಹೊಣೆಗಾರಿಕೆ ವಹಿಸಿಕೊಂಡಿರುವಾಗಲೇ ಭೀಕರ ದಾಳಿ ನಡೆದು 40 ಮಂದಿ ಯೋಧರು ಹತರಾಗಿದ್ದರ ಹಿಂದೆ ಈತನ ಕೈವಾಡ ಏನಿದೆ? ಎಂಬ ದಿಕ್ಕಿನಲ್ಲಿ ತನಿಖೆ ನಡೆಯುವುದೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮುಖ್ಯವಾಗಿ ಒಬ್ಬ ಪೊಲೀಸ್ ಅಧಿಕಾರಿಯಾಗಿ, ಭಯೋತ್ಪಾದನಾ ನಿಗ್ರಹದ ಹೊಣೆ ಹೊತ್ತು, ಈ ಅಧಿಕಾರಿ, ಭಯೋತ್ಪಾದಕರೊಂದಿಗೇ ಕೈಜೋಡಿಸಿದ್ದಾನೆ ಎಂದರೆ, ಆತನೇ ಹೇಳಿಕೊಂಡಂತೆ ಅದು ಕೇವಲ 12 ಲಕ್ಷ ರೂಪಾಯಿಗಳ ವಿಷಯವಷ್ಟೇ ಆಗಿರಲು ಸಾಧ್ಯವಿಲ್ಲ. ಹಾಗೆ ನೋಡಿದರೆ, ಆತ ಕರೆದೊಯ್ಯುತ್ತಿದ್ದ ನವೀದ್ ಬಾಬಾನ ತಲೆಗೆ ಜಮ್ಮುಕಾಶ್ಮೀರ ಪೊಲೀಸರೇ ಬರೋಬ್ಬರಿ 20 ಲಕ್ಷ ಘೋಷಿಸಿದ್ದರು. ಹಾಗಿರುವಾಗ 20 ಲಕ್ಷದ ಬದಲು, 12 ಲಕ್ಷಕ್ಕೆ ಆ ಕೃತ್ಯ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆತನ ಹಿಂದೆ ದೊಡ್ಡದೊಡ್ಡವರ ಕೈವಾಡವಿರಬಹುದು. ದೊಡ್ಡವರ ಆಣತಿಯಂತೆ ಆತ ಕೆಲಸ ಮಾಡುತ್ತಿದ್ದಿರಬಹುದು. ಅದರಲ್ಲೂ ಪುಲ್ಮಾಮಾ ದಾಳಿ ನಡೆದ ಸಂದರ್ಭ ಮತ್ತು ನಡೆದ ರೀತಿಯ ಬಗ್ಗೆ ಎದ್ದಿದ್ದ ಅನುಮಾನಗಳ ಹಿನ್ನೆಲೆಯಲ್ಲಿ ಸಿಂಗ್ ಕೇವಲ ಒಂದು ಅಸ್ತ್ರವಾಗಿರಬಹುದು. ಆ ಅಸ್ತ್ರವನ್ನು ಪ್ರಯೋಗಿಸುವ ಕೈಗಳು ಬೇರೆಲ್ಲೋ ದೂರದಲ್ಲಿರಬಹುದು ಎಂಬ ಅನುಮಾನಗಳು ಈಗ ಗಟ್ಟಿಯಾಗತೊಡಗಿವೆ.
ಅದರಲ್ಲೂ ಬಿಗಿಭದ್ರತೆಯ ನಡುವೆ, ಹೆದ್ದಾರಿಯಲ್ಲಿ ನಾಗರಿಕ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ ಬಳಿಕ, ಹೆಲಿಕಾಪ್ಟರ್ ಕಣ್ಗಾವಲಿನಲ್ಲಿ ಸಂಚರಿಸುತ್ತಿದ್ದ ಸೇನಾ ಪಡೆಗಳ ಮೇಲೆ ಏಕಾಏಕಿ ಅನ್ಯ ವಾಹನವನ್ನು ದಾಳಿ ನಡೆಸಿರುವುದು ವ್ಯವಸ್ಥೆಯ ಒಳಗೇ ಯಾರೋ ಶಾಮೀಲಾಗಿರಬಹುದು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇಂತಹ ದಾಳಿ ರಾಜಕೀಯ ಲಾಭದ ಉದ್ದೇಶ ಹೊಂದಿರಬಹುದು ಎಂಬ ಅನುಮಾನಗಳನ್ನು ಕೇವಲ ಪ್ರತಿಪಕ್ಷಗಳಷ್ಟೇ ಅಲ್ಲದೆ, ಸೇನಾ ನಿವೃತ್ತ ಅಧಿಕಾರಿಗಳು ಮತ್ತು ಮಿಲಿಟರಿ ಪರಿಣತರು ಕೂಡ ವ್ಯಕ್ತಪಡಿಸಿದ್ದರು. ಅಷ್ಟಾಗಿಯೂ ಸರ್ಕಾರ ಆ ಘಟನೆಯ ಕುರಿತು ಎನ್ ಐಎ ಯಂತಹ ಉನ್ನತ ತನಿಖಾ ಸಂಸ್ಥೆಯ ಮೂಲಕ ತನಿಖೆಗೆ ಮುಂದಾಗಿಲ್ಲ. ಆ ಹಿನ್ನೆಲೆಯಲ್ಲಿ ಪುಲ್ವಾಮಾ ಘಟನೆಗೆ ಕೂಡ ಈಗ ಚರ್ಚೆಗೆ ಬಂದಿದ್ದು, ದೇವಿಂದರ್ ಹಿಂದೆ ಇರಬಹುದಾದ ಪ್ರಭಾವಿಗಳ ಕುರಿತ ಪ್ರಶ್ನೆಗಳೂ ಎದ್ದಿವೆ.
ಜೊತೆಗೆ, 2001ರ ಸಂಸತ್ ದಾಳಿ ಪ್ರಕರಣದಲ್ಲಿ ಕೂಡ ತನಿಖೆ ನಿಜವಾದ ದಿಕ್ಕಿನಲ್ಲಿ ಸಾಗಿತ್ತೆ? ಬಂಧಿತ ಉಗ್ರರ ಜೊತೆಗೆ ಕೈಜೋಡಿಸಿದ್ದ ಆರೋಪ ಎದುರಿಸಿದ್ದ ಈ ಅಧಿಕಾರಿಯನ್ನು ಕೇಂದ್ರೀಕರಿಸಿ ಯಾಕೆ ತನಿಖೆ ನಡೆಯಲೇ ಇಲ್ಲ? ಆಗ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದಿದ್ದರೆ, ಗಲ್ಲಿಗೇರಿದ ವ್ಯಕ್ತಿಗಳೊಂದಿಗೆ ಈತನಿಗೂ ತಕ್ಕ ಶಿಕ್ಷೆಯಾಗಬೇಕಿತ್ತಲ್ಲವೆ? ಆತನನ್ನು ಆಗ ತನಿಖೆಯಿಂದ ಹೊರಗಿಟ್ಟ ಪರಿಣಾಮವೇ ದೇಶ ಪುಲ್ವಾಮಾ ದಾಳಿಯಲ್ಲಿ 40 ಮಂದಿ ವೀರಯೋಧರನ್ನು ಕಳೆದುಕೊಳ್ಳಬೇಕಾಯಿತೆ? ಎಂಬ ಪ್ರಶ್ನೆಗಳೂ ಇವೆ.
ಅಲ್ಲದೆ, ಇದೀಗ ದೆಹಲಿ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಲ್ಲಿ ಮತ್ತೆ ಈತ ಉಗ್ರರನ್ನು ಕರೆತಂದು ದೆಹಲಿಯಲ್ಲಿ ದಾಳಿಗೆ ಅವರಿಗೆ ನೆರವಾಗುತ್ತಿದ್ದ ಎಂಬುದು ಕೂಡ, ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಭಯೋತ್ಪಾದನೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಕಠಿಣ ಹೋರಾಟಕ್ಕೆ ತೊಡೆ ತಟ್ಟಿರುವ ಭಾರತದಲ್ಲಿ, ಉನ್ನತ ಮಟ್ಟದ ಅಧಿಕಾರಿಗಳೇ ಭಯೋತ್ಪಾದಕರೊಂದಿಗೆ ಕೈಜೋಡಿಸಿದ್ದಾರೆ ಎಂಬ ಸಂಗತಿ ಜಾಗತಿಕ ಮಟ್ಟದಲ್ಲಿ ಹುಟ್ಟಿಸಲಿರುವ ಪ್ರಶ್ನೆಗಳು ಕೂಡ ಭೀಕರವಾಗಿರಲಿವೆ. ಪ್ರತಿ ಬಾರಿ ನಿರ್ಣಾಯಕ ಚುನಾವಣೆಗಳು ಸಮೀಪಿಸುತ್ತಿರುವಾಗೆಲ್ಲಾ ಈತ ಹೀಗೆ ಭಯೋತ್ಪಾದನಾ ದಾಳಿಗಳನ್ನು ಏರ್ಪಾಡು ಮಾಡುತ್ತಿದ್ದನೇ? ಈತನ ಈ ಉಗ್ರರ ನಂಟಿನ ಹಿಂದಿನ ಸೂತ್ರಧಾರರು ಚುನಾವಣಾ ಲಾಭ ಪಡೆಯುವ ಮಂದಿಯೇ? ಅಥವಾ ಬಾಹ್ಯ ಶಕ್ತಿಗಳು ಈತನ ಮೂಲಕ ಚುನಾವಣಾ ಹೊಸ್ತಿಲಲ್ಲಿ ಭೀತಿ ಸೃಷ್ಟಿಸಲು ಈ ದಾಳಿಗಳನ್ನು ಆಯೋಜಿಸುತ್ತಿದ್ದವೇ? ಎಂಬ ಆತಂಕಕಾರಿ ಪ್ರಶ್ನೆಗಳೂ ಎದ್ದಿವೆ.
ಆದರೆ, ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಮುಂದೆ ದೊಡ್ಡ ಸವಾಲು ಎಂದರೆ; ಈ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದನ್ನು ದೇಶದ ಜನರ ಮುಂದಿಡುವುದು. ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯೇ ಚುನಾವಣಾ ಹೊಸ್ತಿಲಲ್ಲಿ ದೆಹಲಿಯಲ್ಲಿ ದಾಳಿ ನಡೆಸಲು ಉಗ್ರರನ್ನು ಕರೆತರುತ್ತಿದ್ದ. ಅದೇ ಅಧಿಕಾರಿ ಈ ಹಿಂದೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ನಡೆದ ಭೀಕರ ಪುಲ್ವಾಮಾ ದಾಳಿಯ ವೇಳೆ ಭದ್ರತಾ ವ್ಯವಸ್ಥೆಯ ಹೊಣೆ ವಹಿಸಿಕೊಂಡಿದ್ದ. ಅದೇ ಅಧಿಕಾರಿ 2001ರ ಸಂಸತ್ ದಾಳಿಕೋರರೊಂದಿಗೆ ನಂಟು ಹೊಂದಿದ್ದ. ಈ ಎಲ್ಲಾ ಘಟನೆಗಳೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗಲೇ ನಡೆದಿವೆ ಮತ್ತು ಬಿಜೆಪಿ ಭಯೋತ್ಪಾದನೆ ವಿಷಯದಲ್ಲಿ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡು ವೀರಾವೇಶದ ಮಾತನಾಡುತ್ತದೆ. ಆದರೆ, ದೇವಿಂದರ್ ಸಿಂಗ್ ವಿಷಯದಲ್ಲಿ ಮಾತ್ರ, ಬಿಜೆಪಿಯಾಗಲೀ, ಅದರ ಟ್ರೋಲ್ ಪಡೆಯಾಗಲೀ ಬಹುತೇಕ ಮೌನಕ್ಕೆ ಶರಣಾಗಿದೆ. ಹಾಗಾಗಿ, ಈಗ ಅಜಿತ್ ಧೋವಲ್ ಅವರು, ಬಹಳ ನಿಷ್ಪಕ್ಷಪಾತ ಮತ್ತು ದಿಟ್ಟ ತನಿಖೆಯ ಮೂಲಕ ದೇವಿಂದರ್ ಸಿಂಗ್ ಹಿನ್ನೆಲೆ, ಸಂಸತ್ ದಾಳಿ ಮತ್ತು ಪುಲ್ವಾಮಾ ದಾಳಿಯಲ್ಲಿ ಆತನ ಪಾತ್ರ ಮತ್ತು ಆತನ ಹಿಂದೆ ಇರಬಹುದಾದ ಕಾಣದ ಕೈಗಳ ಕೈವಾಡದ ಕುರಿತೂ ದೇಶದ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಜನರ ಅನುಮಾನಗಳು ನಿಜವಲ್ಲ ಎಂಬುದನ್ನು ಸಾಬೀತುಮಾಡಲಾದರೂ, ಅವರು ಈ ನಿಟ್ಟಿನಲ್ಲಿ ಸತ್ಯ ಶೋಧಿಸಬೇಕಿದೆ ಮತ್ತು ಆದಷ್ಟು ಶೀಘ್ರದಲ್ಲೇ ತಮ್ಮ ಶೋಧದ ಫಲ ಏನು ಎಂಬುದನ್ನು ಜನರ ಮುಂದಿಡಬೇಕಿದೆ.
ಇಲ್ಲದೇ ಹೋದರೆ, ಈಗಾಗಲೇ ಆರ್ಥಿಕತೆ, ದೇಶದ ಸಾಮಾಜಿಕ ಸಾಮರಸ್ಯ ಮುಂತಾದ ವಿಷಯಗಳಲ್ಲಿ ಕುಸಿದುಬಿದ್ದಿರುವ ಆಳುವ ಮಂದಿಯ ಮೇಲಿನ ಜನಸಾಮಾನ್ಯರ ನಂಬಿಕೆ, ಭದ್ರತೆ ಮತ್ತು ಸುರಕ್ಷತೆಯ ವಿಷಯದಲ್ಲೂ ಮಣ್ಣುಪಾಲಾಗಬಹುದು. ಹಾಗಾದಲ್ಲಿ ಕಳೆದುಕೊಂಡ ಆ ನಂಬಿಕೆ- ವಿಶ್ವಾಸಕ್ಕೆ ದೇಶ ತೆರಬೇಕಾದ ಬೆಲೆ ಅಪಾರ!