ಒಂದು ಕಡೆ; ಭಾರೀ ಪ್ರತಿರೋಧ, ಪ್ರತಿಭಟನೆಗಳ ನಡುವೆಯೂ, ಯಾವುದಕ್ಕೂ ಜಗ್ಗದೆ ಕೇಂದ್ರ ಬಿಜೆಪಿ ಸರ್ಕಾರ ದೇಶವ್ಯಾಪಿ ಎನ್ ಆರ್ ಸಿ/ಸಿಎಎ ಜಾರಿಗೆ ಅಧಿಕೃತ ಆದೇಶ ಹೊರಡಿಸಿದೆ. ಎನ್ ಪಿಆರ್ ಸಮೀಕ್ಷೆಯ ವೇಳೆ ಮಾಹಿತಿ ಕೊಡದೇ ಇದ್ದವರಿಗೆ ದಂಡ ಹಾಕುವುದಾಗಿಯೂ, ಪ್ರತಿಭಟನಾಕಾರರನ್ನು ಜೈಲಿಗಟ್ಟುವುದಾಗಿಯೂ ಕೇಂದ್ರ ಗೃಹ ಸಚಿವರು ಗುಡುಗಿದ್ದಾರೆ. ಆಡಳಿತ ಪಕ್ಷದ ಇಂತಹ ಸರ್ವಾಧಿಕಾರಿ, ದುರಹಂಕಾರಿ ನಡೆಯ ವಿರುದ್ಧ ಜನಪರ ದನಿ ಎತ್ತಬೇಕಾಗಿದ್ದ ಕಾಂಗ್ರೆಸ್, ಒಂದು ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರ ನೇಮಕದ ವಿಷಯದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾರದಷ್ಟು ದುರ್ಬಲವಾಗಿ ಹೋಗಿದೆ!
ಇದು ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ. ಒಂದು ಭಾರೀ ಬಹುಮತದ ಆಡಳಿತ ಪಕ್ಷ ಒಂದು ಕೋಮುವಾದಿ ಸಿದ್ಧಾಂತದ ಮೇಲೆ ಇಡೀ ದೇಶದ ಚರಿತ್ರೆಯನ್ನು, ಆಡಳಿತವನ್ನು, ಸಂವಿಧಾನವನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಾ, ಜಾತ್ಯತೀತ ರಾಷ್ಟ್ರವನ್ನು ಕೋಮು ಆಧಾರಿತ ಸಮಾಜವನ್ನಾಗಿ ಬದಲಾಯಿಸುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿರುವಾಗ, ಜನಸಾಮಾನ್ಯರ ವಿರೋಧ, ಪ್ರತಿರೋಧಕ್ಕೆ ಸಂಸತ್ತಿನ ಒಳಹೊರಗೆ ದನಿಯಾಗಬೇಕಿದ್ದ ಪ್ರತಿಪಕ್ಷ ಅತ್ಯಂತ ಬಲಹೀನಗೊಂಡು, ಮೂಕಪ್ರೇಕ್ಷಕನಾಗಿ ನಿಂತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿ ತಿಂಗಳು ಉರುಳಿದೆ. ಆದರೂ ಈವರೆಗೆ ಆ ಸ್ಥಾನಕ್ಕೆ ಮತ್ತೊಬ್ಬ ಸಮರ್ಥರನ್ನು ನೇಮಕ ಮಾಡುವುದು ಕಾಂಗ್ರೆಸ್ ಹೈಕಮಾಂಡಿಗೆ ಸಾಧ್ಯವಾಗಿಲ್ಲ. ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಪಾಲಿಗೆ ಕರ್ನಾಟಕದ ಪಕ್ಷದ ಘಟಕಕ್ಕೆ ಯಾರನ್ನು ನೇಮಕ ಮಾಡುವುದು ಎಂಬುದೇ ದೊಡ್ಡ ರಾಷ್ಟ್ರೀಯ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ದಿನಕ್ಕೊಂದು ಹೆಸರು ಕೇಳಿಬರುವುದು, ಮಾರನೇ ದಿನ ಆ ಹೆಸರು ಬದಿಗೆ ಸರಿದು ಹೊಸ ಹೆಸರು ಮುಂಚೂಣಿಗೆ ಬರುವುದು ನಡದೇ ಇದೆ. ಪಕ್ಷದ ಸ್ಥಳೀಯ ನಾಯಕರ ನಡುವೆ ಎರಡು ಗುಂಪುಗಳಾಗಿದ್ದು, ಒಂದೊಂದು ಬಣವೂ ತನ್ನದೇ ಆದ ಹಿಡಿತ ಉಳಿಸಿಕೊಳ್ಳಲು ಜಿದ್ದಿಗೆ ಬಿದ್ದಂತೆ ತನ್ನವರನ್ನೇ ಪಕ್ಷದ ಅಧ್ಯಕ್ಷ ಗಾದಿಗೆ ಕೂರಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷದ ಮೇಲಿನ ತಮ್ಮ ಹಿಡಿತ ಕೈತಪ್ಪದಂತೆ ನೋಡಿಕೊಳ್ಳಬೇಕಾದ ತುರ್ತು ದೇಶ ಮತ್ತು ರಾಜ್ಯದ ಇನ್ನೆಲ್ಲಾ ಸಮಸ್ಯೆಗಳಿಗಿಂತ ಮುಖ್ಯವಾಗಿದೆ. ಈ ಹಿಂದೆ ತಮ್ಮ ಆಪ್ತರಾಗಿದ್ದ ದಿನೇಶ್ ಗುಂಡೂರಾವ್ ಅವರಿಂದ ತೆರವಾದ ಸ್ಥಾನಕ್ಕೆ ಮತ್ತೆ ತಮ್ಮವರೇ ಆದ ಎಂ ಬಿ ಪಾಟೀಲ್ ಅವರನ್ನು ಕೂರಿಸಬೇಕು. ಆ ಮೂಲಕ ಪಕ್ಷದ ಮೇಲಿನ ಒಂದು ದಶಕದ ತಮ್ಮ ಹಿಡಿತವನ್ನು ಮುಂದುವರಿಸಬೇಕು ಎಂಬ ಲೆಕ್ಕಾಚಾರ ಅವರದ್ದು. ಅದಕ್ಕೆ ಪ್ರತಿಯಾಗಿ ಅವರ ವಿರೋಧಿ ಬಣ, ಮೂಲ ಕಾಂಗ್ರೆಸ್ಸಿಗರ ಹೆಸರಿನಲ್ಲಿ ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದು, ಸಿದ್ದರಾಮಯ್ಯ ಪಕ್ಷದ ವಿಷಯದಲ್ಲಿ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಹಾಗಾಗಿ ಮುಂದೆಯೂ ಅವರಿಂದ ಬದಿಗೆ ಸರಿಯುವ ಪರಿಸ್ಥಿತಿ ಬರಬಾರದು ಎಂಬ ನಿಲುವಿನಲ್ಲಿ ಪರಸ್ಪರ ಕೈಜೋಡಿಸಿರುವ ಎಚ್ ಕೆ ಪಾಟೀಲ್, ಕೆ ಎಚ್ ಮುನಿಯಪ್ಪ, ಡಾ ಜಿ ಪರಮೇಶ್ವರ್ ಮತ್ತಿತರ ಹಿರಿಯ ನಾಯಕರು, ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್ ಪರ ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ.
ಈ ಲಾಬಿಗಳ ನಡುವೆಯೇ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ ಎಂಬ ವರದಿಗಳಿವೆ. ಆದರೆ, ಪಕ್ಷದ ಹೈಕಮಾಂಡ್ ನಿರ್ಧಾರ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಪ್ರಾದೇಶೀಕತೆ ಮತ್ತು ಜಾತಿ ಆಧಾರದ ಮೇಲೆ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಆಯ್ಕೆ ನಡೆಯಬೇಕು. ರಾಜ್ಯದಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರೂ, ಇದೀಗ ಆ ಸಮುದಾಯದ ಒಳಗೇ ಬಿಜೆಪಿಯ ಆಡಳಿತ ವೈಫಲ್ಯಗಳ ಬಗ್ಗೆ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ಅವರ ಆ ಅಸಮಾಧಾನವನ್ನು ಕಾಂಗ್ರೆಸ್ ಪರ ಬೆಂಬಲವಾಗಿ ಪರಿವರ್ತಿಸಲು ಅವರಿಗೂ ಪಕ್ಷದಲ್ಲಿ ಮಾನ್ಯತೆ ಇದೆ ಎಂಬುದನ್ನು ಖಾತ್ರಿಪಡಿಸಬೇಕಿದೆ. ಆ ವಿಶ್ವಾಸ ಹುಟ್ಟಿಸುವ ಯತ್ನವಾಗಿ ಎಂ ಬಿ ಪಾಟೀಲರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬ ಹೊಸ ಲೆಕ್ಕಾಚಾರವನ್ನು ಮುಂದಿಟ್ಟಿದ್ಧಾರೆ. ಜೊತೆಗೆ, ಒಂದು ವೇಳೆ ಡಿ ಕೆ ಶಿ ಅವರ ಹೆಸರನ್ನೇ ಅಂತಿಮಗೊಳಿಸುವುದೇ ಆದರೆ, ಈಗಿರುವ ಕಾರ್ಯಾಧ್ಯಕ್ಷ ಹುದ್ದೆಯೊಂದಿಗೆ, ಹೆಚ್ಚುವರಿಯಾಗಿ ಇನ್ನೂ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆಗಳನ್ನು ರಚಿಸಿ, ಅವುಗಳಿಗೆ ಜಾತಿ ಮತ್ತು ಪ್ರಾದೇಶಿಕ ಆದ್ಯತೆ ಮೇರೆಗೆ ನೇಮಕ ಮಾಡಬೇಕು ಎಂದು ತಮ್ಮ ಆಪ್ತರ ಹೆಸರುಗಳನ್ನು ನೀಡಿದ್ದಾರೆ. ಆ ಮೂಲಕ ಒಂದು ವೇಳೆ ಅಧ್ಯಕ್ಷ ಗಾದಿ ಕೈತಪ್ಪಿದರೂ ಕಾರ್ಯಾಧ್ಯಕ್ಷ ಸ್ಥಾನಗಳ ಮೂಲಕ ಪಕ್ಷದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ಆದರೆ, ಸಿದ್ದರಾಮಯ್ಯ ತಂತ್ರವನ್ನು ಅರಿತಿರುವ ಖರ್ಗೆ ಮತ್ತಿತರ ಮೂಲ ಕಾಂಗ್ರೆಸ್ಸಿಗರು, ಈಗಿರುವ ಕಾರ್ಯಾಧ್ಯಕ್ಷರು ಕಲ್ಯಾಣ ಕರ್ನಾಟಕ ಭಾಗದವರೇ. ಇನ್ನು ಅಧ್ಯಕ್ಷರು ದಕ್ಷಿಣ ಕರ್ನಾಟಕ ಭಾಗದವರಾದರಲ್ಲಿ, ಮುಂಬೈ ಕರ್ನಾಟಕ ಭಾಗದವರಿಗೆ ಮತ್ತೊಂದು ಕಾರ್ಯಾಧ್ಯಕ್ಷ ಸ್ಥಾನ ನೀಡಿದರೆ ಸಾಕು. ಅಲ್ಲಿಗೆ ಒಬ್ಬ ಅಧ್ಯಕ್ಷರ ಜೊತೆ ಇಬ್ಬರು ಕಾರ್ಯಾಧ್ಯಕ್ಷರು ಪಕ್ಷದ ಕೆಲಸ ಮಾಡಿಕೊಂಡು ಹೋಗಲಿ. ಅದು ಬಿಟ್ಟು, ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದು ಪಕ್ಷದ ಒಳಗೆ ಹಲವು ಶಕ್ತಿಕೇಂದ್ರಗಳನ್ನು ಸೃಷ್ಟಿಸಿ, ಅನಗತ್ಯ ಗೊಂದಲ, ಒಡಕು, ಗುಂಪುಗಾರಿಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ವಾದ ಮುಂದಿಟ್ಟಿದ್ದಾರೆ. ಜೊತೆಗೆ, ಸತೀಶ್ ಜಾರಕಿಹೊಳಿ ಮೂಲಕವೂ ಹೈಕಮಾಂಡ್ ಮುಂದೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವೂ ಆಕಾಂಕ್ಷಿ ಎಂಬ ಅರ್ಜಿ ಗುಜರಾಯಿಸುವ ಮೂಲಕ ಮತ್ತೊಂದು ತಂತ್ರವೂ ತೆರೆಮರೆಯಲ್ಲಿ ಚಿಗಿತುಕೊಂಡಿದೆ ಎಂದು ದೆಹಲಿ ಮೂಲಗಳು ಹೇಳಿವೆ.
ಹಾಗಾಗಿ ಹಲವು ವಾದ, ತಂತ್ರಗಳ ಮುಂದೆ ಪಕ್ಷದ ಹೈಕಮಾಂಡ್ ಗೊಂದಲಕ್ಕೀಡಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕೂಡ ದೆಹಲಿಯಲ್ಲಿ ಇಲ್ಲ. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಪರೋಕ್ಷ ಸಮರವಾಗಿ ಮಾರ್ಪಟ್ಟಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಸೋನಿಯಾ ಗಾಂಧಿಯವರಿಗೆ ದೃಢ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಪಕ್ಷದ ಬಲವರ್ಧನೆ ಮತ್ತು ಸಂಘಟನೆಯ ವಿಷಯದಲ್ಲಿ ಜಾತಿವಾರು ಪ್ರಭಾವ, ಪ್ರಾಬಲ್ಯ, ಹಣ ಮತ್ತು ಜನಬಲದ ವಿಷಯದಲ್ಲಿ ಡಿ ಕೆ ಶಿವಕುಮಾರ್ ಆಯ್ಕೆ ಸರಿ ಎನಿಸಿದರೂ, ಅವರ ವಿರುದ್ಧದ ಐಟಿ- ಇಡಿ ಪ್ರಕರಣಗಳು, ರಾಜ್ಯದ ಪ್ರಭಾವಿ ಸಮುದಾಯವಾದ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡುವ ವಿಷಯಗಳು ಅಡ್ಡಗಾಲಾಗುತ್ತಿವೆ. ಅದೇ ವಿಷಯಗಳನ್ನೇ ಮುಂದಿಟ್ಟು ಸಿದ್ದರಾಮಯ್ಯ ತಮ್ಮ ಆಪ್ತ ಎಂ ಬಿ ಪಾಟೀಲ್ ಪರ ವಕಾಲತ್ತು ವಹಿಸಿದ್ದಾರೆ. ಆದರೆ, ಎಂ ಬಿ ಪಾಟೀಲರಿಗೆ ಡಿ ಕೆ ಶಿಯಷ್ಟು ಪ್ರಭಾವವಾಗಲೀ, ಹಣಬಲವಾಗಲೀ ಇಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಪರ ವಕಾಲತು ವಹಿಸಿದ ಹಿನ್ನೆಲೆಯಲ್ಲಿ ಲಿಂಗಾಯತರಲ್ಲಿಯೂ ಎಲ್ಲರೂ ಪಾಟೀಲರನ್ನು ತಮ್ಮ ನಾಯಕ ಎಂದು ಒಪ್ಪುವ ಸ್ಥಿತಿ ಇಲ್ಲ. ಆದರೆ, ಅವರ ವೈಯಕ್ತಿಕ ಹೆಚ್ಚುಗಾರಿಕೆ ಅಥವಾ ನಕಾರಾತ್ಮಕ ಅಂಶಗಳನ್ನೇ ಇಟ್ಟುಕೊಂಡು ತೀರ್ಮಾನ ಕೈಗೊಳ್ಳುವಂತಿಲ್ಲ. ಏಕೆಂದರೆ, ಅವರು ಸಿದ್ದರಾಮಯ್ಯ ಅವರ ಆಯ್ಕೆ. ಅವರನ್ನು ಬದಿಗೆ ಸರಿಸಿದರೆ ಸಿದ್ದರಾಮಯ್ಯ, ಆ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮುಂದೆ ಪಕ್ಷದ ಬಿಕ್ಕಟ್ಟಿಗೆ ನಾಂದಿ ಹಾಡಬಹುದು ಎಂಬ ಆತಂಕ ಹೈಕಮಾಂಡಿಗೆ.
ಹಾಗಾಗಿ ಸದ್ಯಕ್ಕೆ ಕೆಪಿಸಿಸಿ ಆಯ್ಕೆಗೆ ಕಾರ್ಯಾಧ್ಯಕ್ಷರ ನೇಮಕದ ಕೊಕ್ಕೆ ಬಿದ್ದಿದೆ. ಈ ವಿಷಯದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ಪಟ್ಟು ಬಿಡುತ್ತಿಲ್ಲ. ಒಟ್ಟಾರೆ, ಕಳೆದ ಹತ್ತು ದಿನಗಳಿಂದ ಮುಂದುವರಿಯುತ್ತಲೇ ಇರುವ ಕೆಪಿಸಿಸಿ ಅಧ್ಯಕ್ಷರ ನೇಮಕದ ಹಾವು ಏಣಿಯಾಟ, ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗುತ್ತಿದೆ.
ರಾಜ್ಯ ಮತ್ತು ದೇಶದ ಜನತೆ ಎನ್ ಆರ್ ಸಿ- ಎನ್ ಪಿಆರ್ ಉರುಳಿನ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವಾಗ, ವಿದ್ಯಾರ್ಥಿ, ಯುವಜನರು, ಕೂಲಿಕಾರ್ಮಿಕರು, ಸಾಮಾಜಿಕ ಹೋರಾಟಗಾರರು ಜೀವ ಒತ್ತೆ ಇಟ್ಟು ಸರ್ವಾಧಿಕಾರಿ ಆಡಳಿತವೊಂದರ ವಿರುದ್ಧ, ದುಷ್ಟ ಪೊಲೀಸ್ ಪಡೆಯ ಅಟ್ಟಹಾಸದ ವಿರುದ್ಧ ಎದೆಸೆಟೆಸಿ ನಿಂತಿರುವಾಗ, ಜನಾಕ್ರೋಶದ ಮುಖವಾಗಬೇಕಿದ್ದ ಕಾಂಗ್ರೆಸ್, ಯಕಶ್ಚಿತ್ ಒಂದು ರಾಜ್ಯ ಘಟಕದ ಅಧ್ಯಕ್ಷ ಗಾದಿಯ ವಿಷಯದಲ್ಲಿ ತಿಂಗಳಾನುಗಟ್ಟಲೆ ಹಗ್ಗಜಗ್ಗಾಟದಲ್ಲಿ ತೊಡಗಿದೆ. ಬಹುಶಃ, ಕಾಂಗ್ರೆಸ್ಸಿನ ಸದ್ಯದ ಸ್ಥಿತಿಯನ್ನು ನೋಡಿದರೆ, ‘ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚಿನ್ನಾಟ’ ಎಂಬ ಗಾದೆ ನೆನಪಾಗದೇ ಇರದು!