ಕೇಂದ್ರ ಬಜೆಟ್ ಪ್ರತಿ ಮುದ್ರಣಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲ್ವಾ ಹಂಚುವ ಮೂಲಕ ಚಾಲನೆ ನೀಡಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗಳಲ್ಲೇ ಕಾಣೆಯಾಗಿದ್ದ ವಿತ್ತ ಸಚಿವೆ, ಕನಿಷ್ಟ ಹಲ್ವಾ ಹಂಚಲಾದರೂ ಕಾಣಿಸಿಕೊಂಡಿದ್ದಾರೆ ಎಂಬುದು ಭಾರತೀಯರು ಸಮಾಧಾನಪಡಬೇಕಾದ ಸಂಗತಿಯೇ. ಆದರೆ ಅದೇ ಹೊತ್ತಿಗೆ, ದೇಶದ ಭವಿಷ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ನಮ್ಮನ್ನು ಬೆಚ್ಚಿಬೀಳಿಸುವ ಸಂಗತಿಗಳೂ ಹೊರಬಿದ್ದಿವೆ.
ದೇಶದ ಆರ್ಥಿಕತೆಯ ಮಾನ ನಿರ್ಧರಿಸುವ ಆ ಸಂಗತಿಗಳು ಪ್ರಮುಖವಾಗಿ ವಿಶ್ವಸಂಸ್ಥೆ, ಫೋರ್ಬ್ಸ್, ಆಕ್ಸ್ ಫಾಮ್ ನಂತಹ ಪ್ರತಿಷ್ಠಿತ ಸಂಗತಿಗಳಿಂದ ಬಹಿರಂಗವಾಗಿವೆ ಮತ್ತು ಸದ್ಯದಲ್ಲೇ ಎರಗಲಿರುವ ಅನಾಹುತದ ಮುನ್ಸೂಚನೆ ನೀಡಿವೆ ಎಂಬ ಕಾರಣಕ್ಕೆ ಅವುಗಳನ್ನು ನಿರ್ಲಕ್ಷಿಸುವಂತಿಲ್ಲ. ಮಬ್ಭಕ್ತರನ್ನು ಖುಷಿಪಡಿಸಲು, ವಿಶ್ವಗುರು ಭ್ರಮಾಧೀನರ ಅಮಲು ಉತ್ತೇಜಿಸಲು ಸರ್ಕಾರ ಮತ್ತು ಹಣಕಾಸು ಸಚಿವರು ಯಾವುದೇ ತಥಾಕಥಿತ ಅಂಕಿಅಂಶಗಳನ್ನು ನೀಡಿದರೂ, ಸರ್ಕಾರ ಯಾವುದೇ ತೇಪೆದಾರಿ ವರದಿಗಳನ್ನು ಬಿಡುಗಡೆ ಮಾಡಿದರೂ, ವಿಶ್ವಮಾನ್ಯ ಸಂಸ್ಥೆಗಳ ಕಾಳಜಿಯ ಎಚ್ಚರಿಕೆಯನ್ನು ತಳ್ಳಿಹಾಕಲಾಗದು.
ಒಂದು ಕಡೆ ದೇಶದ ಆರ್ಥಿಕತೆ ಪ್ರಪಾತಕ್ಕೆ ಬೀಳುತ್ತಿದೆ ಎಂದು ಸ್ವತಃ ಪ್ರಧಾನ ಮಂತ್ರಿಗಳ ಮಾಜಿ ಆರ್ಥಿಕ ಸಲಹೆಗಾರರು, ಆರ್ ಬಿ ಐ ಮಾಜಿ ಗವರ್ನರುಗಳು, ಮಾಜಿ ಹಣಕಾಸು ಸಚಿವರುಗಳು ಹೇಳುತ್ತಿದ್ದರೂ, ಸ್ವತಃ ಸರ್ಕಾರದ ಅಂಕಿಅಂಶಗಳೇ ಭೀತಿಯ ಚಿತ್ರಣ ನೀಡುತ್ತಿದ್ದರೂ, ಸೆಲೆಬ್ರಿಟಿಗಳ ಉಗುರು ಕೊಂಕಿದರೂ ಟ್ವೀಟ್ ಮಾಡುವ ಪ್ರಧಾನಿಗಳು ದೇಶದ ಪರಿಸ್ಥಿತಿಯ ಬಗ್ಗೆ ಚಕಾರವೆತ್ತುತ್ತಿಲ್ಲ. ಹಣಕಾಸು ಸಚಿವರು ಹಣಕಾಸು, ಆರ್ಥಿಕತೆ ಬಗ್ಗೆ ಮಾತನಾಡುವ ಬದಲು ಎನ್ ಆರ್ ಸಿ, ಕಾಯ್ದೆ-ಕಾನೂನಿನ ಬಗ್ಗೆ ಪ್ರವಚನ ನೀಡುತ್ತಿದ್ದಾರೆ. ಜ್ವಲಂತ ವಾಸ್ತವದಿಂದ ಜನರ ಗಮನ ಬೇರೆಡೆ ಸೆಳೆಯಲು ಬೇಕಾದ ಎಲ್ಲವನ್ನೂ ಸರ್ಕಾರ ಸ್ಟೇಜ್ ಮ್ಯಾನೇಜ್ ಮಾಡುತ್ತಿದೆ. ಅದರಲ್ಲಿ ಯಶಸ್ವಿಯೂ ಆಗುತ್ತಿದೆ.
ಆದರೆ, ಜಾಗತಿಕ ಸಂಸ್ಥೆಗಳು, ಸರ್ಕಾರದ ಒತ್ತಡ- ಆಮಿಷಗಳಿಗೆ ಜಗ್ಗದ ಆರ್ಥಿಕ ತಜ್ಞರು ಸತ್ಯವನ್ನು ನುಡಿಯುತ್ತಲೇ ಇದ್ದಾರೆ. ಇನ್ನೇನು ಬಜೆಟ್ ಮುಗಿದ ಒಂದೆರಡು ತಿಂಗಳಲ್ಲೇ ತಾವು ನುಡಿದ ಭವಿಷ್ಯ ನಿಜವಾಗಲಿದೆ. ದೇಶ ದೊಡ್ಡ ಗಂಡಾಂತರಕ್ಕೆ ಸಿಲುಕಲಿದೆ ಎಂಬುದು ಆ ಎಲ್ಲರ ಬಹುತೇಕ ಒಮ್ಮತದ ಅಭಿಪ್ರಾಯ.
ಪ್ರಮುಖವಾಗಿ ಬಜೆಟ್ ಕ್ಷಣಗಣನೆಯ ಹೊತ್ತಲ್ಲಿ ಹೊರಬಿದ್ದಿರುವ ಅಂತಹ ಆತಂಕಕಾರಿ ಸಂಗತಿಗಳಲ್ಲಿ; ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ್ದು ಹೆಚ್ಚು ಚಿಂತೆಗೀಡುಮಾಡುವಂತಹದ್ದು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯ ಪ್ರಕಾರ, ‘ಅಧಿಕೃತವಾಗಿ ಹೇಳಲಾಗಿರುವ ಸುಮಾರು 9.5 ಲಕ್ಷ ಕೋಟಿ ರೂಗಳಿಗಿಂತ ಅಧಿಕ ಮೊತ್ತದ ವಸೂಲಾಗದ ಸಾಲ(ಎನ್ ಪಿಎ) ಎಂಬ ಟೈಂಬಾಂಬ್ ಮೇಲೆ ಕೂತಿರುವ ನಮ್ಮ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್ 31ರ ಬಳಿಕ ಸ್ಫೋಟಗೊಳ್ಳುವ ಸಾಧ್ಯತೆ ಇದೆ’. ಪ್ರಮುಖವಾಗಿ ಕಾರ್ಪೊರೇಟ್ ಸಾಲ, ಮುದ್ರಾ ಲೋನ್ ಮತ್ತು ಕೃಷಿ ಸಾಲಗಳ ಬಾಕಿ ಪ್ರಮಾಣ ಬ್ಯಾಂಕಿಂಗ್ ವ್ಯವಸ್ಥೆಯಷ್ಟೇ ಅಲ್ಲ, ಇಡೀ ದೇಶದ ಆರ್ಥಿಕತೆಯೇ ಹೊರಲಾಗದ ಪ್ರಮಾಣದಲ್ಲಿದೆ. ಮಾರ್ಚ್ 31ರ ಬಳಿಕ ಬಾಕಿ ಇರುವ ಸಾಲವನ್ನು ವಸೂಲಾಗದ ಸಾಲದ ಲೆಕ್ಕಕ್ಕೆ ಸೇರಿಸಲಾಗುವುದರಿಂದ ಈಗಿರುವ ಎನ್ ಪಿಎ ಪ್ರಮಾಣದಲ್ಲಿ ಭಾರೀ ಏರಿಕೆಯಾಗಲಿದೆ. ಹಾಗಾಗಿ ಬ್ಯಾಂಕುಗಳು ದೊಡ್ಡ ಇಕ್ಕಟ್ಟಿಗೆ ಸಿಲುಕಲಿವೆ ಎಂಬುದು ವರದಿಯ ಸಾರಾಂಶ.
ಮುದ್ರಾ ಲೋನ್ ವಿಭಾಗದಲ್ಲಿ ಸುಮಾರು 2 ಲಕ್ಷ ಕೋಟಿ ಮೊತ್ತವನ್ನು ಮನ್ನಾ ಮಾಡಿದ ಬಳಿಕವೂ ಸುಮಾರು 17 ಸಾವಿರ ಕೋಟಿ ರೂ. ಎನ್ ಪಿಎ ಆಗಿದೆ. ಮುದ್ರಾ ಲೋನ್ ಬಾಕಿ ಬಗ್ಗೆ ಆರ್ ಬಿಐನ ಹಾಲಿ ಮತ್ತು ಮಾಜಿ ಗವರ್ನರುಗಳು ಹಲವು ಬಾರಿ ಬ್ಯಾಂಕುಗಳಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದರು. ಆದರೂ ರಾಜಕೀಯ ಒತ್ತಡ ಮತ್ತು ಪ್ರಧಾನಿ ಮೋದಿಯವರ ಹೆಚ್ಚುಗಾರಿಕೆಯ ಯೋಜನೆ ಎಂಬ ಪ್ರಭಾವ ಬ್ಯಾಂಕುಗಳನ್ನು ಮುದ್ರಾಗೆ ಮಣಿಯುವಂತೆ ಮಾಡಿವೆ. ಅಷ್ಟೊಂದು ದೊಡ್ಡ ಪ್ರಮಾಣದ ಸಾರ್ವಜನಿಕ ಹಣದ ನಿಜವಾದ ಫಲಾನುಭವಿಗಳು ಯಾರು? ಆ ಸಾಲದಿಂದ ಅವರು ಸೃಷ್ಟಿ ಮಾಡಿರುವ ಉದ್ಯಮ-ಉದ್ಯೋಗ ಎಷ್ಟು ಎಂಬ ವಿಷಯಗಳನ್ನು ಕೆದಕಿದರೆ ದೊಡ್ಡದೊಂದು ಹಗರಣವೇ ಬಯಲಾಗಲಿದೆ ಎಂಬ ಮಾತು ಬೇರೆ. ಆದರೆ, ಅದಕ್ಕೂ ಮುನ್ನ ಬಾಕಿ ಸಾಲವಾಗಿ ಅದು ತೆವಳುತ್ತಿರುವ ದೇಶದ ಆರ್ಥಿಕತೆಯನ್ನು ಮಲಗಿಸುವಷ್ಟರಮಟ್ಟಿಗೆ ಬೆಳೆದು ನಿಂತಿದೆ ಎಂಬುದು ದುರಂತ.
ಇನ್ನು ಕೃಷಿ ವಲಯದ ಸಾಲದಲ್ಲೂ ಎನ್ ಪಿಎ ಪ್ರಮಾಣ ಭಾರೀ ಏರಿಕೆ ಕಂಡಿದ್ದು, ಚುನಾವಣಾ ಹೊಸ್ತಿಲಲ್ಲಿ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ವಿವಿಧ ರಾಜ್ಯ ಸರ್ಕಾರಗಳು ಮಾಡಿದ ಕೃಷಿ ಸಾಲ ಮನ್ನಾ ಪರಿಣಾಮವಾಗಿ ಕೃಷಿ ಮತ್ತು ಸಂಬಂಧಿತ ವಲಯಕ್ಕೆ ನೀಡಿದ ಒಟ್ಟು 9.45 ಲಕ್ಷ ಕೋಟಿ ರೂ. ಸಾಲದಲ್ಲಿ, ಶೇ.11ರಷ್ಟು; ಅಂದರೆ 1.04 ಲಕ್ಷ ಕೋಟಿ ರೂ. ಎನ್ ಪಿಎ ಆಗಿ ಉಳಿದುಕೊಂಡಿದೆ. ಹಾಗೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನೀಡಿದ ಸಾಲದಲ್ಲಿ ಕೂಡ ದೊಡ್ಡ ಮೊತ್ತ ಎನ್ ಪಿಎ ಆಗಿದ್ದು, ಅವುಗಳ ಪತನದೊಂದಿಗೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಬುಡಮೇಲಾಗುವ ಸಂಭವವಿದೆ ಎಂದೂ ಹೇಳಲಾಗುತ್ತಿದೆ.
ಈ ನಡುವೆ, ವಿಶ್ವಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿರುವ ವರದಿ, ದೇಶದ ಕಾರ್ಪೊರೇಟ್ ಸಂಸ್ಥೆಗಳ ಬಾಕಿ ಸಾಲದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ದೇಶದ ಒಟ್ಟು ಜಿಡಿಪಿಯ ಶೇ.40ರಷ್ಟು(ಸುಮಾರು 70 ಲಕ್ಷ ಕೋಟಿ ರೂ!) ಇರುವ ಕಾರ್ಪೊರೇಟ್ ವಲಯದ ಬಾಕಿ ಮೊತ್ತ, ಆರ್ಥಿಕ ಬಿಕ್ಕಟ್ಟಿನ ಹೊತ್ತಲ್ಲಿ ಅಪಾಯಕಾರಿಯಾಗಿ ಪರಿಣಮಿಸಲಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, 70 ಲಕ್ಷ ಕೋಟಿಯಷ್ಟು ಬೃಹತ್ ಮೊತ್ತದ ಬಾಕಿ ಸಾಲದ ಪೈಕಿ ದೊಡ್ಡ ಪ್ರಮಾಣದ ಹಣ ಯಾವುದೇ ಉತ್ಪಾದನಾ ಹೂಡಿಕೆಗಾಗಲೀ ಅಥವಾ ಅಧಿಕ ಉತ್ಪಾದನಾ ವಲಯದಲ್ಲಾಗಲೀ ಹೂಡಿಕೆಯಾಗಿಲ್ಲ ಎಂಬ ಆತಂಕಕಾರಿ ಅಂಶವನ್ನೂ ಆ ವರದಿ ಉಲ್ಲೇಖಿಸಿದೆ. ಅಂದರೆ, ದೇಶದ ಒಟ್ಟು ಉತ್ಪಾದನೆಯ ಶೇ.40ರಷ್ಟು ಆರ್ಥಿಕ ಸಂಪನ್ಮೂಲ, ಕೆಲವೇ ಕೆಲವು ಮಂದಿ ಕಾರ್ಪೊರೇಟ್ ಕುಳಗಳ ಅನುತ್ಪಾದಕ ವೆಚ್ಚವಾಗಿ ಸೋರಿಕೆಯಾಗಿದೆ!
ಇದೇ ಅಂಶವನ್ನೇ ಮತ್ತೊಂದು ವರದಿಯೂ ಪ್ರಸ್ತಾಪಿಸಿದ್ದು, ದೇಶದ ಶೇ.1ರಷ್ಟು ಮಂದಿಯ ಕೈಯಲ್ಲಿ, ದೇಶದ ಒಟ್ಟಾರೆ ಬಜೆಟ್ಗಿಂತ ಅಧಿಕ ಸಂಪತ್ತು ಕ್ರೋಡೀಕರಣವಾಗಿದ್ದು, ಅದು ಅರ್ಥವ್ಯವಸ್ಥೆಯ ತಳಮಟ್ಟದ ಶೇ.70ರಷ್ಟು ಮಂದಿಯ ಬಳಿ ಇರುವ ಒಟ್ಟಾರೆ ಸಂಪತ್ತಿಗಿಂತ ನಾಲ್ಕು ಪಟ್ಟು ಅಧಿಕ ಎಂದು ಆಕ್ಸ್ ಫಾಮ್ ಸಮೀಕ್ಷೆ ಹೇಳಿದೆ. ದಾವೋಸ್ ನ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಇಇ) ಶೃಂಗದ ಹಿನ್ನೆಲೆಯಲ್ಲಿ ಈ ಸಮೀಕ್ಷೆ ವಿವರ ಬಿಡುಗಡೆ ಮಾಡಿದ್ದು, ದೇಶದ 63 ಮಂದಿ ಬಿಲಿಯನೇರ್ ಗಳ ಒಟ್ಟು ಸಂಪತ್ತು, ದೇಶದ ಬಜೆಟ್ ಗಿಂತ(24.5 ಲಕ್ಷ ಕೋಟಿ ರೂ) ಅಧಿಕ. ಜನಸಾಮಾನ್ಯರ ಹಿತಾಸಕ್ತಿಯನ್ನು ಬಲಿಕೊಟ್ಟು ದೇಶದ ಕೆಲವೇ ಕೆಲವು ಮಂದಿಯ ಜೇಬು ತುಂಬಿಸುತ್ತಿರುವ ಅರ್ಥವ್ಯವಸ್ಥೆ ಅಪಾಯಕಾರಿ ಎಂದಿದೆ.
ಇದು ದೇಶದ ಆಡಳಿತ ವ್ಯವಸ್ಥೆ ನಿಜಕ್ಕೂ ಯಾರ ಪರ ಕೆಲಸ ಮಾಡುತ್ತಿದೆ. ಯಾರ ಸ್ಥಿತಿಯನ್ನು ಉತ್ತಮಪಡಿಸಲು ದೇಶದ ಸಾರ್ವಜನಿಕ ತೆರಿಗೆ ಹಣ ವ್ಯಯ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳ ಬಾಕಿ ಸಾಲ ಮತ್ತು ಎನ್ ಪಿಎ ಕುರಿತ ವಿಶ್ವಸಂಸ್ಥೆಯ ಆತಂಕ ಮತ್ತು ಆಕ್ಸ್ ಫಾಮ್ ಬಹಿರಂಗಪಡಿಸಿರುವ ಈ ವರದಿಗಳನ್ನು ತಾಳೆ ಮಾಡಿದರೆ, ದೇಶದ ಆರ್ಥಿಕತೆ ಯಾರ ಜೇಬು ತುಂಬಿಸುತ್ತಿದೆ ಮತ್ತು ದೇಶದ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವ ಮೋದಿ ಮತ್ತು ಶಾ ಜೋಡಿ ನಿಜವಾಗಿಯೂ ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗದೇ ಇರದು.
ಈ ನಡುವೆ ಜಾಗತಿಕ ಮಾನ್ಯತೆಯ ಫೋರ್ಬ್ಸ್ ಕೂಡ, ಭಾರತದ ಆರ್ಥಿಕತೆ ಕುರಿತ ವಿಶ್ಲೇಷಣೆ ಬಿಡುಗಡೆ ಮಾಡಿದ್ದು, ಗ್ರಾಮೀಣ ಆರ್ಥಿಕತೆಯ ಬಿಕ್ಕಟ್ಟು, ಸರ್ಕಾರಿ ವೆಚ್ಚದ ಏರಿಕೆ, ಗ್ರಾಹಕ ಸರಕು ಖರೀದಿ ಕುಸಿತ, ಎನ್ ಪಿಎ ಭಾರ, ಹಣದುಬ್ಬರ ಏರಿಕೆಯಂತಹ ವಿಷಯಗಳು ದೇಶದ ಆರ್ಥಿಕತೆ ಸದ್ಯದ ಸ್ಥಿತಿಯಲ್ಲಿ ಏರುಗತಿ ಕಾಣದ ಎಂಬ ಸೂಚನೆ ನೀಡುತ್ತಿವೆ. ಆಹಾರ ಹಣದುಬ್ಬರವಂತೂ ದೊಡ್ಡ ಮಟ್ಟದಲ್ಲಿ ಆರ್ಥಿಕ ವೃದ್ಧಿಗೆ ಪೆಟ್ಟುಕೊಟ್ಟಿದೆ ಎಂದಿದೆ. ಅಂದರೆ, ಫೋರ್ಬ್ಸ್ ಸಮೀಕ್ಷೆ ಕೂಡ ಸದ್ಯ ಭವಿಷ್ಯದಲ್ಲಿ ದೇಶದ ಅರ್ಥವ್ಯವಸ್ಥೆ ವೃದ್ಧಿಯ ಹಳಿಗೆ ಬರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಈ ನಡುವೆ, ಜಿಡಿಪಿ ಬೆಳವಣಿಗೆ ದರ ಶೇ.5ಕ್ಕೆ ನಿಲ್ಲಬಹುದು ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಅದು ಕಳೆದ ಹನ್ನೊಂದು ವರ್ಷಗಳಲ್ಲೇ ಅತ್ಯಂತ ಕನಿಷ್ಟ ಮಟ್ಟದ ಬೆಳವಣಿಗೆ ದರ! ಬಿಜೆಪಿ ಹಿರಿಯ ನಾಯಕ ಹಾಗೂ ಅರ್ಥಶಾಸ್ತ್ರಜ್ಞ ಸುಬ್ರಮಣಿಯಂ ಸ್ವಾಮಿ ಪ್ರಕಾರ, ವಾಸ್ತವವಾಗಿ ಈ ದರ ಶೇ.2.5ರ ಆಸುಪಾಸಿನಲ್ಲಿರಲಿದೆ. ಇನ್ನು ಹಣದುಬ್ಬರ ಪ್ರಮಾಣ ಶೇ.7.35ಕ್ಕೆ ಎರಿದೆ. ಅದು ಕೂಡ ಕಳೆದ ಆರು ವರ್ಷಗಳಲ್ಲೇ ಅತ್ಯಧಿಕ ಹಣದುಬ್ಬರದ ದರ! ಇನ್ನು ದೇಶದ ನಿರುದ್ಯೋಗ ಪ್ರಮಾಣ ಶೇ.6.1ಕ್ಕೆ ಏರಿದೆ. ಅದಂತೂ ಬರೋಬ್ಬರಿ ನಲವತ್ತು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣ. ಸ್ವಾತಂತ್ರ್ಯ ಬಂದ ಆರಂಭದ ದಶಕಗಳ ಸಮಾನಕ್ಕೆ ದೇಶದ ನಿರುದ್ಯೋಗ ಪ್ರಮಾಣ ಏರಿದೆ. ಹೀಗೆ ದೇಶದ ಆರ್ಥಿಕ ವ್ಯವಸ್ಥೆಯ ಮಗ್ಗಲುಮುರಿದ ಶ್ರೇಯಸ್ಸು ಪೂರ್ಣವಾಗಿ ಸಲ್ಲಬೇಕಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಇತಿಹಾಸಪುರುಷನನ್ನಾಗಿ ಬಿಂಬಿಸಿಕೊಳ್ಳುವ ಪ್ರಯತ್ನದ ನೋಟು ರದ್ದತಿ ಮತ್ತು ಜಿಎಸ್ ಟಿ ಜಾರಿ ಕ್ರಮಗಳಿಗೇ ಎಂಬುದರಲ್ಲ ಯಾವ ಅನುಮಾನವೂ ಇಲ್ಲ. ಅದನ್ನು ಸ್ವತಃ ಮೋದಿಯವರ ಆರ್ಥಿಕ ಸಲಹೆಗಾರರು, ಅವರೇ ನೇಮಕ ಮಾಡಿದ್ದ ಆರ್ ಬಿಐ ಗವರ್ನರುಗಳೇ ಹೇಳಿದ್ದಾರೆ.
ಅಷ್ಟಾಗಿಯೂ, ಪ್ರಪಾತದಂಚಿನಲ್ಲಿ ನಿಂತಿರುವ ಜನರನ್ನು ಅಪಾಯದ ಲವಲೇಶವೂ ಅರಿಯದಂತಹ ಅಮಲಿನಲ್ಲಿ ತೇಲಿಸಲು ಎನ್ ಆರ್ ಸಿ ಇದೆ, ಸಿಎಎ ಇದೆ. ಅಲ್ಲಲ್ಲಿ ಬಾಂಬುಗಳು, ಭಯೋತ್ಪಾದಕರು ಸಿಕ್ಕಿಬೀಳುತ್ತಿದ್ಧಾರೆ. ಪಾಕಿಸ್ತಾನವಂತೂ ಸದಾ ಅಮಲಿನ ಪದಾರ್ಥವಾಗಿ ಲಭ್ಯವಿದೆ. ಹಾಗಾಗಿ ಇನ್ನು ಮುಂದಿನ ಮಾರ್ನಾಲ್ಕು ತಿಂಗಳು ಇವೆಲ್ಲವೂ ಇನ್ನಷ್ಟು ಬಿರುಸು ಪಡೆಯಲಿವೆ. ಅಮಲೇರಲಿದೆ!