ಮಂಗಳೂರು ಗೋಲಿಬಾರ್ ಪ್ರಕರಣ ನಡೆದ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಆರಂಭದಲ್ಲಿ ಸಿಐಡಿ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ, ಬಳಿಕ ಘಟನೆಯ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿ ಕೈತೊಳೆದುಕೊಂಡಿದೆ. ಈ ನಡುವೆ, ಕೆಲವು ಸಂಘಟನೆಗಳು ನ್ಯಾಯಾಂಗ ತನಿಖೆಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಮೊರೆಹೋಗಿದ್ದು, ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಇಡೀ ಪ್ರಕರಣದಲ್ಲಿ ಮಂಗಳೂರು ಪೊಲೀಸರ ವಿರುದ್ಧವೇ ಪ್ರಮುಖವಾಗಿ ಆರೋಪ ಕೇಳಿಬಂದಿದ್ದು, ಅದರಲ್ಲೂ ಮಂಗಳೂರು ನಗರ ಪೊಲೀಸ್ ಕಮೀಷನರ್ ವಿರುದ್ಧವೇ ದೊಡ್ಡ ಮಟ್ಟದ ಆರೋಪಗಳು ಕೇಳಿಬಂದಿವೆ. ಪ್ರಮುಖವಾಗಿ ಪ್ರತಿಪಕ್ಷಗಳನ್ನು ಹೊರತುಪಡಿಸಿಯೂ ವಿವಿಧ ನಾಗರಿಕ ಸಂಘಟನೆಗಳು, ವಿವಿಧ ಸಾಮಾಜಿಕ ಮತ್ತು ಕಾನೂನು ಸಂಘಟನೆಗಳಿಂದಲೂ ಇಂತಹ ಗಂಭೀರ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಈಗ ಹೈಕೋರ್ಟ್ ಮೆಟ್ಟಿಲೇರಿರುವುದು ಕೂಡ ರಾಜಕೀಯೇತರ ವ್ಯಕ್ತಿಗಳೇ ಎಂಬುದು ಗಮನಾರ್ಹ.
ಈ ನಡುವೆ, ಪ್ರಕರಣದ ಕುರಿತು ಜನತಾ ನ್ಯಾಯಾಲಯ ಮತ್ತು ಸತ್ಯಶೋಧನೆ ನಡೆಸಿದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡರ ನೇತೃತ್ವದ ಸತ್ಯಶೋಧನಾ ಸಮಿತಿ ಕೂಡ ಗೋಲಿಬಾರ್ ಮತ್ತು ಅದರ ಆಚೀಚೆಯ ಹಿಂಸಾಚಾರಕ್ಕೆ ಪೊಲೀಸರ ದೌರ್ಜನ್ಯವೇ ಕಾರಣ. ಎರಡು ಜೀವಗಳನ್ನು ಬಲಿತೆಗೆದುಕೊಂಡ ಮತ್ತು ಅಪಾರ ನೋವು-ನಷ್ಟಕ್ಕೆ ಕಾರಣವಾದ ಘಟನೆಗೆ ನೇರವಾಗಿ ಪೊಲೀಸರೇ ಕಾರಣ. ಕಾನೂನು- ಕೈಪಿಡಿ ಎಲ್ಲವನ್ನೂ ಗಾಳಿಗೆ ತೂರಿ ಪೊಲೀಸರೇ ಹಿಂಸೆಗೆ ಇಳಿದು, ಗೋಲಿಬಾರ್ ಮಾಡಿ ಇಬ್ಬರನ್ನು ಕೊಂದಿದ್ದಾರೆ’ ಎಂದು ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ವಿವಿಧ ಮಾನನಹಕ್ಕು ಮತ್ತು ಸಂವಿಧಾನಪರ ಸಂಘಟನೆಗಳು ಜಂಟಿಯಾಗಿ ನ್ಯಾ. ವಿ ಗೋಪಾಲಗೌಡ, ಹಿರಿಯ ಪತ್ರಕರ್ತ ಸುಗರ ಶ್ರೀನಿವಾಸರಾಜು ಹಾಗೂ ಹಿರಿಯ ವಕೀಲ ಬಿ ಟಿ ವೆಂಕಟೇಶ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ, ಮಂಗಳೂರಿನಲ್ಲಿ ಗಲಭೆ ಮತ್ತು ಗೋಲಿಬಾರ್ ಕುರಿತು ಜನತಾ ನ್ಯಾಯಾಲಯ ಪ್ರಕ್ರಿಯೆ ನಡೆಸಿದ್ದವು. ಜನವರ ಮೊದಲ ವಾರ ನಡೆದ ಈ ವಿಚಾರಣೆಯ ವೇಳೆ ತಜ್ಞರ ತಂಡವು ಗೋಲಿಬಾರ್ ಮತ್ತು ಗಲಭೆ ನಡೆದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಘಟನೆಯ ಪ್ರತ್ಯಕ್ಷದರ್ಶಿಗಳು, ಸಂತ್ರಸ್ತರು ಹಾಗೂ ಗೋಲಿಬಾರ್ ನಲ್ಲಿ ಮೃತರಾದವವರ ಮನೆಮಂದಿಯನ್ನು ಮಾತನಾಡಿಸಿ ಘಟನೆಯ ಸತ್ಯಾಸತ್ಯತೆಯ ಕುರಿತ ಮಾಹಿತಿ ಸಂಗ್ರಹಿಸಿತ್ತು. ನಾಗರಿಕರು, ಪತ್ರಕರ್ತರು, ಹೋರಾಟಗಾರರು ಮತ್ತು ಸ್ವತಃ ಸಂತ್ರಸ್ತರು ತಮ್ಮ ಅನುಭವಗಳನ್ನು ವಿಚಾರಣೆಯ ವೇಳೆ ತಂಡದ ಮುಂದೆ ಬಿಚ್ಚಿಟ್ಟಿದ್ದರು.
ವಿಚಾರಣಾ ಪ್ರಕ್ರಿಯೆ ಮತ್ತು ತಂಡದ ಭೇಟಿಗೆ ಮಂಗಳೂರು ಪೊಲೀಸರು ಒಡ್ಡಿದ ಅಡ್ಡಿಆತಂಕಗಳ ನಡುವೆಯೂ ತಂಡ ಎರಡು ದಿನ ಮಂಗಳೂರಿನಲ್ಲಿ ಸತ್ಯ ಶೋಧನೆಯ ಪ್ರಯತ್ನ ನಡೆಸಿತ್ತು. ಅಂತಿಮವಾಗಿ ತಂಡಕ್ಕೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಗೂ ಅವಕಾಶ ನೀಡದೆ ಪೊಲೀಸರು, ತಾವು ಎಷ್ಟು ಪ್ರಜಾಪ್ರಭುತ್ವವಾದಿಗಳು ಎಂಬುದನ್ನು ಸಾಬೀತು ಮಾಡಿದ್ದರು. ಪೊಲೀಸರ ಆ ನಡವಳಿಕೆಗಳು ಸ್ವತಃ ಅವರ ಮೇಲಿನ ಆರೋಪ ಮತ್ತು ಅನುಮಾನಗಳನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು ಕೂಡ. ಬಳಿಕ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ ಮಂಗಳೂರು ಗೋಲಿಬಾರ್ ಮತ್ತು ಗಲಭೆ ಸಂಬಂಧಿತ ವೀಡಿಯೋಗಳು ಕೂಡ ಪೊಲೀಸರ ಪಾತ್ರದ ಕುರಿತ ಅನುಮಾನಗಳನ್ನು ಇನ್ನಷ್ಟು ನಿಚ್ಛಳಗೊಳಿಸಿದ್ದವು.
ಇದೀಗ ಸತ್ಯಶೋಧನಾ ಸಮಿತಿ ತನ್ನ 33 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಪೊಲೀಸರ ದುರುದ್ದೇಶದ ವರ್ತನೆಗಳೇ ಇಡೀ ಗಲಭೆ ಮತ್ತು ಜೀವಹಾನಿಗೆ ಕಾರಣ ಎಂದು ಸ್ಪಷ್ಟವಾಗಿ ಹೇಳಿದೆ. ಸಿಎಎ ವಿರೋಧಿ ಹೋರಾಟದ ಭಾಗವಾಗಿ ನಗರದಲ್ಲಿ ಪ್ರತಿಭಟನೆ ನಿಗದಿಯಾದಾಗ ಅದನ್ನು ಶಾಂತಿಯುತವಾಗಿ ನಡೆಸಲು ಸೂಕ್ತ ಬಂದೋಬಸ್ತ್ ಕಲ್ಪಿಸಬೇಕಾಗಿದ್ದ ಪೊಲೀಸರು, ತಮ್ಮ ಆ ಹೊಣೆಗಾರಿಕೆಯನ್ನು ಮರೆತು, ಅದಕ್ಕೆ ತದ್ವಿರುದ್ಧವಾಗಿ ಸ್ವತಃ ತಾವುಗಳೇ ಕೋಮುದ್ವೇಷದ ಹೇಳಿಕೆಗಳನ್ನು ನೀಡುವುದು, ಮತೀಯ ದ್ವೇಷದ ಮಾತುಗಳನ್ನು ಆಡಿರುವುದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ಗೊತ್ತಾಗಿದೆ. ಅಲ್ಲದೆ ಆ ಸಂಬಂಧಿತ ವೀಡಿಯೋ ಮತ್ತು ಆಡಿಯೋ ತುಣುಕುಗಳಲ್ಲಿಯೂ ಅದು ಸಾಬೀತಾಗಿದೆ. ಡಿ.18ರಂದು, ಗೋಲಿಬಾರ್ ಮುನ್ನಾ ದಿನ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರುವ ಅಗತ್ಯವೇ ಇರಲಿಲ್ಲ. ಆದರೂ ನಿಷೇಧಾಜ್ಞೆ ಹೇರಿದ ಪೊಲೀಸರು, ಆ ಬಗ್ಗೆ ಆ ಪ್ರದೇಶದ ಜನರಿಗೆ ಮಾಹಿತಿ ನೀಡುವಲ್ಲಿ ಕಾಳಜಿ ವಹಿಸಲಿಲ್ಲ. ಜೊತೆಗೆ ಪ್ರತಿಭಟನೆಗೆ ನೀಡಿದ ಅನುಮತಿಯನ್ನು ಹಿಂಪಡೆದ ಬಗ್ಗೆಯೂ ಸರಿಯಾದ ಮಾಹಿತಿ ತಲುಪಿಸಲಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದೆ ಅಲ್ಲಿ ಸಹಜವಾಗಿ ಓಡಾಡುತ್ತಿದ್ದ ನಾಗರಿಕರ ಮೇಲೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ಮತ್ತು ಗೋಲಿಬಾರ್ ಮಾಡಿದ್ದಾರೆ. ಗೋಲಿಬಾರ್ ಮತ್ತು ಲಾಠಿ ಚಾರ್ಜ್ ವಿಷಯದಲ್ಲಿ ಪೊಲೀಸ್ ಕೈಪಿಡಿ ಮತ್ತು ಕಾನೂನು ರೀತಿರಿವಾಜುಗಳನ್ನು ಗಾಳಿಗೆ ತೂರಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಗೋಲಿಬಾರ್ ಮತ್ತು ಲಾಠಿ ಚಾರ್ಜ್ ಮುನ್ನ ಸ್ಥಳದಲ್ಲಿದ್ದ ನಾಗರಿಕರಿಗೆ ಎಚ್ಚರಿಕೆ ನೀಡುವುದು ಕಡ್ಡಾಯ. ಆದರೆ ಪೊಲೀಸರು ಅಂತಹ ಯಾವುದೇ ಎಚ್ಚರಿಕೆ ನೀಡಿಲ್ಲ. ಅದಕ್ಕೆ ಪ್ರತಿಯಾಗಿ ಪೊಲೀಸರೇ ಪ್ರತಿಭಟನಾಕಾರರ ವಿರುದ್ಧ ಕೋಮುದ್ವೇಷದ ಭಾಷೆ ಬಳಸಿದ್ದಾರೆ. ನಿಂದನೀಯ ಮಾತುಗಳನ್ನು ಆಡಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರೇ ಕೆರಳಿಸಿದ್ದಾರೆ ಎಂದು ಜನತಾ ನ್ಯಾಯಾಲಯದಲ್ಲಿ ಹಾಜರಾಗಿ ಹೇಳಿಕೆ ನೀಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಂದರು ಠಾಣೆಗೆ ಮುತ್ತಿಗೆ ಹಾಕುವ ಮತ್ತು ಎಂ ಎಂ ಕಿಣಿ ರೈಫಲ್ಸ್ ಅಂಗಡಿಗೆ ನುಗ್ಗುವ ಯತ್ನಗಳ ಬಗ್ಗೆ ಪೊಲೀಸರು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದರೂ, ಆ ಕುರಿತ ಸಾಕ್ಷ್ಯಾಧಾರಗಳನ್ನು, ವೀಡಿಯೋ ತುಣುಕುಗಳನ್ನು ಹಾಜರುಪಡಿಸಲು ಪೊಲೀಸರು ವಿಫಲರಾಗಿದ್ದಾರೆ. ಪತ್ರಕರ್ತರ ಮೇಲೆಯೂ ಪೊಲೀಸರು ದೌರ್ಜನ್ಯ ನಡೆಸಿರುವ ಬಗ್ಗೆ ಸ್ವತಃ ಸಂತ್ರಸ್ತ ಪತ್ರಕರ್ತರೇ ಅಹವಾಲು ಸಲ್ಲಿಸಿದ್ದಾರೆ. ಒಟ್ಟಾರೆ, ಮಂಗಳೂರು ಪೊಲೀಸರು ನಾಗರಿಕರ ಮೇಲಷ್ಟೇ ಅಲ್ಲದೆ, ಮಾಧ್ಯಮಗಳ ಮೇಲೂ ದಬ್ಬಾಳಿಕೆ ನಡೆಸಿರುವ ಬಗ್ಗೆಯೂ ಸಾಕ್ಷ್ಯಧಾರ ಸಹಿತ ಆರೋಪಗಳು ದಾಖಲಾಗಿವೆ ಎಂದೂ ಸಮಿತಿ ಹೇಳಿದೆ.
ಹಾಗೆಯೇ ಆಸ್ಪತ್ರೆಯ ಒಳನುಗ್ಗಿ ಅಶ್ರುವಾಯು ಸಿಡಿಸಿದ ಪೊಲೀಸರ ಕ್ರಮ ಕೂಡ ಕಾನೂನುಬಾಹಿರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ. ಆಸ್ಪತ್ರೆಯ ಆವರಣದಲ್ಲಿ ಅಶ್ರುವಾಯು ಪ್ರಯೋಗಿಸಿದ ಬಗ್ಗೆ ಸ್ವತಃ ಹೈಲ್ಯಾಂಡ್ ಆಸ್ಪತ್ರೆ ಆಡಳಿತಾಧಿಕಾರಿಗಳೇ ಸಮಿತಿಯ ಮುಂದೆ ಅಹವಾಲು ಸಲ್ಲಿಸಿದ್ದಾರೆ. ಲಭ್ಯ ವೀಡಿಯೋ ತುಣುಕುಗಳಲ್ಲಿ ಕೂಡ ಪೊಲೀಸರು ಆಸ್ಪತ್ರೆಗೆ ನುಗ್ಗಿ ಅಶ್ರುವಾಯು ಪ್ರಯೋಗಿಸಿರುವುದು ಕಂಡುಬಂದಿದೆ. ಆದರೆ, ಅವರ ಆ ಕ್ರಮಕ್ಕೆ ಪ್ರೇರಣೆ ಏನು? ಅಂತಹ ಗಂಭೀರ ಪರಿಸ್ಥಿತಿ ಅಲ್ಲಿ ಏನಿತ್ತು? ಎಂಬ ಪ್ರಶ್ನೆಗಳಿಗೆ ವೀಡಿಯೋದಲ್ಲಿ ಸಾಕ್ಷ್ಯಗಳಿಲ್ಲ ಮತ್ತು ಪೊಲೀಸರು ಕೂಡ ತಮ್ಮ ಆ ಕ್ರಮಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದೂ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಒಟ್ಟಾರೆ ಮಂಗಳೂರು ಗಲಭೆ ಮತ್ತು ಗೋಲಿಬಾರ್ ಹಿಂದೆ ಸಂಪೂರ್ಣವಾಗಿ ಪೊಲೀಸರ ದಬ್ಬಾಳಿಕೆ ಮತ್ತು ಪ್ರಚೋದನಕಾರಿ ವರಸೆಗಳೇ ಕೆಲಸ ಮಾಡಿವೆ. ಎಲ್ಲಾ ಕಾನೂನು- ಕೈಪಿಡಿಯ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರು ಜನರ ಮೇಲೆ ದಬ್ಬಾಳಿಕೆ ಎಸಗಿದ್ದಾರೆ. ಅಮಾಯಕರ ಮೇಲೆ ಏಕಾಏಕಿ ಯಾವ ಎಚ್ಚರಿಕೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಗುಂಡು ಹಾರಿಸಿ ಇಬ್ಬರ ಹತ್ಯೆ ಮಾಡಲಾಗಿದೆ. ಇಡೀ ಘಟನೆ ಮತ್ತು ಎರಡು ಜೀವಬಲಿಗಳು ಸಂತ್ರಸ್ತರ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಆ ಕುಟುಂಬಗಳಿಗೆ ರಕ್ಷಣೆ ಮತ್ತು ಸೂಕ್ತ ಪರಿಹಾರ ನೀಡಬೇಕಿದೆ. ಆ ನಿಟ್ಟಿನಲ್ಲಿ ಘಟನೆಯ ಕುರಿತ ನ್ಯಾಯಾಂಗ ತನಿಖೆಯ ಜರೂರು ಇದೆ. ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆದಲ್ಲಿ ಮಾತ್ರ ಸತ್ಯಾಂಶಗಳು ಬೆಳಕಿಗೆ ಬರಲಿವೆ ಎಂದು ಸತ್ಯಶೋಧನಾ ಸಮಿತಿ ಮತ್ತು ಜನತಾ ನ್ಯಾಯಾಲಯ ತನ್ನ ಸ್ಪಷ್ಟ ಅಭಿಪ್ರಾಯ ಹೇಳಿದೆ.
ಅಂದರೆ, ಇಡೀ ಘಟನೆಗೆ ಮಂಗಳೂರು ಪೊಲೀಸರೇ ನೇರ ಕಾರಣ ಎಂದು ಸತ್ಯಶೋಧನಾ ಸಮಿತಿ ಕೂಡ ಹೇಳಿದೆ. ಇದೇ ಅಭಿಪ್ರಾಯವನ್ನು ಹಲವು ರಾಜಕೀಯೇತರ ಸಂಘಟನೆಗಳು, ವ್ಯಕ್ತಿಗಳೂ ಕೂಡ ಈ ಮೊದಲು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ವೀಡಿಯೋ ಸಾಕ್ಷ್ಯಗಳು ಕೂಡ ಈ ಅಭಿಪ್ರಾಯವನ್ನೇ ಪುಷ್ಟೀಕರಿಸುತ್ತಿದ್ದವು. ಸ್ವತಃ ಪೊಲೀಸ್ ಕಮೀಷನರ್ ವಿರುದ್ಧವೂ ಇಡೀ ಗೋಲಿಬಾರ್ ಮತ್ತು ಗಲಭೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದ, ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದ ಆರೋಪಗಳು ಕೇಳಿಬಂದಿವೆ. ಹಾಗಿರುವಾಗ, ಮಂಗಳೂರು ಪೊಲೀಸ್ ಮುಖ್ಯಸ್ಥರಾದ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿ, ಯಾವುದೇ ತನಿಖೆ ನಡೆಸಿದರೂ ಅದು ಸಹಜ ನ್ಯಾಯದ ರೀತಿಯಲ್ಲಿ ನಡೆಯಬಹುದೆ? ಯಾರ ಬಗ್ಗೆ ಪ್ರಮುಖವಾಗಿ ಆರೋಪಗಳು ಕೇಳಿಬಂದಿವೆಯೋ ಅವರನ್ನು ಅದೇ ಸ್ಥಳ- ಹುದ್ದೆಯಲ್ಲಿ ಮುಂದುವರಿಸಿ, ನ್ಯಾಯಾಂಗ ತನಿಖೆ ಇರಲಿ, ಮ್ಯಾಜಿಸ್ಟ್ರಿಯಲ್ ತನಿಖೆ ಇರಲಿ ಅಥವಾ ಸಿಒಡಿ ತನಿಖೆ ಇರಲಿ, ಯಾವುದೇ ತನಿಖೆಯನ್ನು ನಡೆಸುವುದು ಎಷ್ಟರಮಟ್ಟಿಗೆ ನ್ಯಾಯಸಮ್ಮತ? ಎಂಬ ಪ್ರಶ್ನೆಗಳೂ ಎದ್ದಿವೆ.
ಈ ನಡುವೆ, ಗೋಲಿಬಾರ್ ಘಟನೆ ಇನ್ನೂ ಹಸಿಯಾಗಿರುವಾಗಲೇ , ಅದೇ ಮಂಗಳೂರು ಕಮೀಷನರ್ ವ್ಯಾಪ್ತಿಯಲ್ಲೇ ವಿಮಾನ ನಿಲ್ದಾಣದ ಬಾಂಬ್ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿಯೂ ಕಮೀಷನರ್ ಅವರ ಹೇಳಿಕೆಗಳು ಮತ್ತು ತನಿಖಾ ವರಸೆ ಸಾಕಷ್ಟು ಟೀಕೆ ಮತ್ತು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಬಾಂಬ್ ಮತ್ತು ಬಾಂಬ್ ಇಟ್ಟ ಭಯೋತ್ಪಾದಕನ ಕುರಿತ ಮೊದಲ ದಿನದ ಅವರ ಹೇಳಿಕೆಗಳು, ಭಯೋತ್ಪಾದಕನ ಹೆಸರು ಮತ್ತು ಗುರುತು ಪತ್ತೆಯ ಬಳಿಕದ ಅವರ ಹೇಳಿಕೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುವ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಅಲ್ಲದೆ ವಿಮಾನ ನಿಲ್ದಾಣದ ಒಳಗಿನ ಎಸ್ಕಲೇಟರ್ ವರೆಗೆ ಭಯೋತ್ಪಾದಕ ಹೇಗೆ ಯಶಸ್ವಿಯಾಗಿ ಸ್ಫೋಟಕದೊಂದಿಗೆ ತಲುಪಿದ? ಅಷ್ಟರಮಟ್ಟಿಗೆ ಮಂಗಳೂರು ಪೊಲೀಸ್ ವ್ಯವಸ್ಥೆ ದುರ್ಬಲವಾಗಿದೆಯೇ? ರಕ್ಷಣೆಯ ವಿಷಯದಲ್ಲಿ ಪೊಲೀಸರ ನಿರ್ಲಕ್ಷ್ಯವಾ ಅಥವಾ ಇನ್ನಾವುದೇ ಕಾರಣಕ್ಕೆ ಆತ ಹಲವು ಸುತ್ತಿನ ಭದ್ರತೆ ಬೇಧಿಸಿ ಅಲ್ಲಿಗೆ ತಲುಪಲು ಸಾಧ್ಯವಾಯಿತೆ? ಈ ಲೋಪಗಳ ಹೊಣೆ ಯಾರು ಹೊರಬೇಕಿದೆ? ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.