ಸಂಪುಟ ವಿಸ್ತರಣೆಯಾಗಲಿದೆ, ಇನ್ನೇನು ಸಚಿವರಾಗೇ ಬಿಟ್ಟೆವು ಎಂದು ಕಾಯುತ್ತಲೇ ಇರುವ ಸಚಿವ ಸ್ಥಾನ ಮತ್ತು ಆಮಿಷಕ್ಕಾಗಿ ಹಿಂದಿನ ಸರ್ಕಾರವನ್ನು ಕೆಡವಿ ಬಿಜೆಪಿಗೆ ಸೇರಿ, ಉಪಚುನಾವಣೆಯಲ್ಲಿ ಗೆದ್ದು ಬಂದವರು ಮತ್ತು ಸ್ವರ್ಗ ಧರೆಗಿಳಿಯುವ ಭಾರೀ ನಿರೀಕ್ಷೆಯಲ್ಲಿ ಅವರನ್ನು ಗೆಲ್ಲಿಸಿದ ಮತದಾರರ ತಾಳ್ಮೆ ಪರೀಕ್ಷೆ ಮುಂದುವರಿದಿದೆ. ಇದೀಗ ಬಿಜೆಪಿಯ ಆಂತರಿಕ ಬೆಳವಣಿಗೆಗಳು ಮತ್ತು 17 ಮಂದಿ ‘ಮೆಕೆನಸ್ ಗೋಲ್ಡ್’ ತಂಡದ ನಡುವಿನ ಹೊಸ ವಾಗ್ವಾದಗಳು ಆ ನಿರೀಕ್ಷೆ ಇನ್ನೇನು ಹತಾಶೆಯಾಗುವ ಹಾದಿಯಲ್ಲಿದೆ ಎನ್ನುತ್ತಿವೆ.
ಒಂದು ಕಡೆ ಅನರ್ಹರು, ಉಪಚುನಾವಣೆಯಲ್ಲಿ ಗೆದ್ದುಬಂದು ‘ಅರ್ಹ’ರಾಗಿ ಎರಡು ತಿಂಗಳು ಕಳೆಯುತ್ತಿದೆ. ಚುನಾವಣೆ ಗೆದ್ದ ಇಪ್ಪತ್ತನಾಲ್ಕು ತಾಸಲ್ಲೇ ಸಚಿವರನ್ನಾಗಿ ಮಾಡ್ತೀವಿ ಎಂದಿದ್ದ ಸಿಎಂ ಯಡಿಯೂರಪ್ಪ, ಸ್ವತಃ ಹೈಕಮಾಂಡ್ ಭೇಟಿ ಮಾಡಲು ಅಪಾಯಿಂಟ್ ಮೆಂಟ್ ಪಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಕನಿಷ್ಟ ಕಳೆದ ಒಂದು ತಿಂಗಳಿನಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಿರಂತರ ಪ್ರಯತ್ನ ನಡೆಸುತ್ತಿದ್ದರೂ, ಒಂದು ರಾಜ್ಯದ ಮುಖ್ಯಮಂತ್ರಿಯಾದ ಅವರಿಗೆ ಅದು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಯಡಿಯೂರಪ್ಪ ಅವರ ಪಟ್ಟಿಗೆ ಹೈಕಮಾಂಡ್ ಮತ್ತು ಆರ್ ಎಸ್ ಎಸ್ ನಾಯಕರು ಅಸ್ತು ಎನ್ನುವರೇ? ಎಂಬ ಪ್ರಶ್ನೆ ಸಹಜ.
ಈಗ ವಾಸ್ತವವಾಗಿ ಸ್ವತಃ ಯಡಿಯೂರಪ್ಪ ಅವರಿಗೂ, ಅತ್ತ ಹದಿನೇಳು ಮಂದಿ ‘ಮೆಕೆನಸ್ ಗೋಲ್ಡ್’ ತಂಡಕ್ಕೂ ಎದ್ದಿರುವ ಆತಂಕ ಕೂಡ ಇದೇ. ದಾವೋಸ್ ಸಮ್ಮೇಳನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಮಾಡುವ ಪ್ರಯತ್ನಕ್ಕೆ ಹೈಕಮಾಂಡ್ ತಣ್ಣೀರೆರೆಯಿತು. ಆ ಬಳಿಕ, ಅಲ್ಲಿಂದ ಬಂದವರೇ ಕೂಡಲೇ ಸಂಪುಟ ವಿಸ್ತರಣೆ ಮಾಡುವ ಯೋಚನೆಗೂ ಹಸಿರು ನಿಶಾನೆ ಸಿಗಲಿಲ್ಲ. ಇದೀಗ ತಿಂಗಳ ಅಂತ್ಯದ ಒಳಗೆ ಆ ಕೆಲಸ ಮುಗಿಸುವ ಅವರ ಯೋಚನೆಗೂ ವಿಘ್ನಗಳು ಎದುರಾಗಿದ್ದು, ಇನ್ನಷ್ಟು ಮುಂಡೂಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಮುಖ್ಯವಾಗಿ 17 ಮಂದಿಯ ಪೈಕಿ 11 ಮಂದಿ ಮತ್ತೆ ಆಯ್ಕೆಯಾಗಿರುವವರು ಮತ್ತು ಸೋಲು ಕಂಡ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಈ ಹಿಂದಿನ ಮಾತು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅದಕ್ಕಾಗಿ ಈಗಾಗಲೇ ಸಚಿವರಾಗಿರುವ ಕೆಲವರಿಗೆ ಹೊಸಬರಿಗಾಗಿ ಸ್ಥಾನ ತ್ಯಾಗ ಮಾಡುವಂತೆ ಮನವೊಲಿಸುವ ಸವಾಲು ಯಡಿಯೂರಪ್ಪ ಮುಂದಿತ್ತು. ಆದರೆ, ಈಗಿರುವವರನ್ನು ಕೈಬಿಡದಂತೆ ಸ್ಥಾನವಂಚಿತರಾಗುವ ಆತಂಕದಲ್ಲಿರುವವರು ಆರ್ ಎಸ್ ಎಸ್ ಮೂಲಕ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಇದೀಗ 13 ಮಂದಿಯ ಪೈಕಿ ಕೇವಲ ಆರು ಮಂದಿಗೆ ಮಾತ್ರ ಸಂಪುಟದಲ್ಲಿ ಸ್ಥಾನ, ಉಳಿದವರಿಗೆ ನಿಗಮಮಂಡಳಿಗೆ ಅವಕಾಶ ಎಂಬ ಹೊಸ ಸೂತ್ರ ಹೊರಬಿದ್ದಿದೆ.
ಪ್ರಮುಖವಾಗಿ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಈ ಸೂತ್ರ ಸಿದ್ಧಪಡಿಸಲಾಗಿದೆ. ಹೊಸಬರೊಂದಿಗೆ ಮೂರ್ನಾಲ್ಕು ಮಂದಿ ಮೂಲ ಬಿಜೆಪಿಯ ಹಿರಿಯರಿಗೂ ಸಂಪುಟದಲ್ಲಿ ಅವಕಾಶ ಕಲ್ಪಿಸುವುದು, ಮತ್ತು ಈಗಾಗಲೇ ಸಚಿವರಾಗಿರುವ ಬಿಜೆಪಿ ನಾಯಕರಲ್ಲಿ ಯಾರನ್ನೂ ಸಂಪುಟದಿಂದ ಕೈಬಿಡದೆ, ಖಾತೆಗಳ ಬದಲಾವಣೆಯಷ್ಟೇ ಮಾಡುವುದು ಎಂಬುದು ಬಿ ಎಲ್ ಸಂತೋಷ್ ಅವರ ಸೂತ್ರ. ಇನ್ನುಳಿದ ಐವರು ಹೊಸ ಶಾಸಕರು ಹಾಗೂ ಸೋತಿರುವ ಇಬ್ಬರಿಗೆ ಮುಂದಿನ ದಿನಗಳಲ್ಲಿ ವಿವಿಧ ಸ್ಥಾನಮಾನ ಕಲ್ಪಿಸುವುದು. ಸದ್ಯಕ್ಕೆ ಅವರನ್ನು ವಿಶ್ವಾಸಕ್ಕೆ ಪಡೆದು ಸಂಪುಟ ವಿಸ್ತರಣೆ ಸುಸೂತ್ರವಾಗಿ ಮಾಡಿಮುಗಿಸುವುದು ಎಂಬುದು ಬಿಜೆಪಿ ಹೈಕಮಾಂಡ್ ಆದೇಶ ಎಂದು ಸಂತೋಷ್ ತಿಳಿಸಿರುವುದಾಗಿ ಹೇಳಲಾಗಿದೆ.
ಹಾಗಾಗಿ ಸದ್ಯಕ್ಕೆ ಸಂಪುಟ ಸೇರುವ ‘ಅರ್ಹತೆ’ ಹನ್ನೊಂದು ಮಂದಿ ಹೊಸಬರ ಪೈಕಿ ಯಾರಿಗೆ ಸಿಗಲಿದೆ ಮತ್ತು ಸಂಪುಟದಿಂದ ವಂಚಿತರಾಗುವವರು ಮತ್ತು ಸೋತು ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಇಬ್ಬರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ, ಒಗ್ಗಟ್ಟಾಗಿದ್ದೇವೆ, ಒಂದಾಗಿದ್ದೇವೆ ಎನ್ನುತ್ತಲೇ ಇದ್ದ ‘ಮೆಕೆನಸ್ ಗೋಲ್ಡ್’ ತಂಡದ ಹದಿನೇಳು ಮಂದಿ ಮಾಜಿ ಅನರ್ಹರ ಪೈಕಿ ಹಲವರ ನಡುವೆ ಒಡಕು ತಲೆದೋರಿದೆ. ಸ್ವತಃ ಸೋಲುಂಡು ಸಚಿವ ಸ್ಥಾನ ವಂಚಿತರಾಗುವ ಆತಂಕದಲ್ಲಿರುವ ಎಚ್ ವಿಶ್ವನಾಥ್ ಮತ್ತು ಅದೇ ಗುಂಪಿನ ಎಸ್ ಟಿ ಸೋಮಶೇಖರ್ ನಡುವೆ ಹೇಳಿಕೆ- ಪ್ರತಿಹೇಳಿಕೆಯ ಸಮರ ಆರಂಭವಾಗಿದೆ. ವಿಶ್ವನಾಥ್, ನಾವೇನು ಭಿಕ್ಷೆ ಕೇಳುತ್ತಿಲ್ಲ. ಕೊಟ್ಟ ಮಾತು ಏನು ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿದೆ. ಆ ಮಾತು ಉಳಿಸಿಕೊಂಡರೆ ಸಾಕು, ಸೋತವರು ಎಂಬ ಕಾರಣಕ್ಕೆ ಯಾರೂ ಅವಕಾಶವಂಚಿತರಾಗಬಾರದು ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸೋಮಶೇಖರ್, ‘ಸೋತವರಿಗೆ ಸಚಿವ ಸ್ಥಾನ ಕೊಡಬೇಕೇ ಬೇಡವೇ ಎಂಬುದು ಮುಖ್ಯಮಂತ್ರಿಗೆ ಬಿಟ್ಟದ್ದು. ಇಂಥವರಿಗೇ ಸ್ಥಾನಮಾನ ನೀಡಿ ಎಂದು ತಾಕೀತು ಮಾಡಲಾಗದು. ಸೋತವರಿಗೆ ಚುನಾವಣೆಗೆ ನಿಲ್ಲಬೇಡಿ ಎಂದು ಯಡಿಯೂರಪ್ಪ ಮುಂಚೆಯೇ ಹೇಳಿದ್ದರು. ಅವರ ಮಾತು ಕೇಳದೆ ನಿಂತು ಸೋಲುಕಂಡಿದ್ದಾರೆ’ ಎಂದಿದ್ದಾರೆ.
ಆ ಮೂಲಕ ‘ಮೆಕೆನಸ್ ಗೋಲ್ಡ್’ ತಂಡದಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವವರು ಮತ್ತು ಸೋತವರು ಎಂಬ ಎರಡು ಬಣಗಳು ನಿಧಾನಕ್ಕೆ ತಲೆಎತ್ತಿವೆ. ಇನ್ನೇನು ಸಂಪುಟ ವಿಸ್ತರಣೆ ಘೋಷಣೆಯಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರ ಹೆಸರು ಬಹಿರಂಗವಾಗುತ್ತಲೇ ಈ ಬಣಗಳು ಯಾವ ಸ್ವರೂಪದಲ್ಲಿ ಸ್ಫೋಟಗೊಳ್ಳಬಹುದು ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ರಮೇಶ್ ಜಾರಕಿಹೊಳಿ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಡಿಸಿಎಂ ಸ್ಥಾನದ ಬೇಡಿಕೆ ಇಟ್ಟಿರುವ ಅವರಿಗೆ ಬಿ ಎಲ್ ಸಂತೋಷ್ ಅಡ್ಡಗಾಲಾಗಿದ್ದು, ಅವರನ್ನು ಡಿಸಿಎಂ ಮಾಡಲು ಈಗಾಗಲೇ ಡಿಸಿಎಂ ಸ್ಥಾನದಲ್ಲಿರುವ ತಮ್ಮ ಶಿಷ್ಯರನ್ನು ಆ ಸ್ಥಾನದಿಂದ ಕಿತ್ತುಹಾಕಲಾಗುತ್ತದೆ ಎಂಬ ಗ್ರಹಿಕೆಯಲ್ಲಿರುವ ಸಂತೋಷ್, ಯಡಿಯೂರಪ್ಪ ಭೇಟಿ ವೇಳೆ ಪ್ರಮುಖವಾಗಿ ಡಿಸಿಎಂ ಹುದ್ದೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಮತ್ತು ಮತ್ತೊಂದು ಹೊಸ ಡಿಸಿಎಂ ಸ್ಥಾನ ಬೇಡವೇ ಬೇಡ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಹಾಗಾಗಿ ಮೆಕನೆಸ್ ಗೋಲ್ಡ್ ತಂಡಕ್ಕೀಗ ಬಿ ಎಲ್ ಸಂತೋಷ್ ಮತ್ತು ಅವರ ಶಿಷ್ಯ ಬಳಗವೇ ದೊಡ್ಡ ಅಡ್ಡಿಯಾಗಿದ್ದು, ಯಡಿಯೂರಪ್ಪ ತಾವು ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಮತ್ತು ಆ ತಂಡದ ಬೆಂಬಲವಿಲ್ಲದೆ ಸರ್ಕಾರವನ್ನೂ ನಡೆಸಲಾಗದ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಆದರೆ, ಪ್ರಮುಖವಾಗಿ ಬಿಜೆಪಿ ಹೈಕಮಾಂಡ್ ಮತ್ತು ಹೈಕಮಾಂಡ್ ನ ನಿಕಟವರ್ತಿ ಬಿ ಎಲ್ ಸಂತೋಷ್ ಅವರಿಗೆ ಬೇಕಿರುವುದು ಕೂಡ ಯಡಿಯೂರಪ್ಪ ಅವರ ಈ ಅಸಹಾಯಕತೆಯೇ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು. ಅದಕ್ಕೆ ರಾಜ್ಯದ ತಮ್ಮ ಮತಬ್ಯಾಂಕ್ ಆಗಿರುವ ಲಿಂಗಾಯತರ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರ ಸಾರಥ್ಯ ಅನಿವಾರ್ಯ. ಹಾಗಾಗಿ ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿಯಲಿ. ಆದರೆ, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬಾರದು. ಸದಾ ಅನಿಶ್ಚಿತತೆ, ಆತಂಕದಲ್ಲೇ ಅವರನ್ನು ಇಟ್ಟು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ತಮ್ಮದೇ ಮೂಗುದಾರದಲ್ಲಿ ಅವರು ಸಾಗಬೇಕು ಎಂಬುದು ಹೈಕಮಾಂಡ್ ಲೆಕ್ಕಾಚಾರ. ಹಾಗಾಗಿಯೇ ಗೆದ್ದ ಹೊಸಬರೆಲ್ಲರಿಗೆ ಸ್ಥಾನಕೊಡಲು ಯಡಿಯೂರಪ್ಪ ಪ್ರಸ್ತಾಪಿಸಿದರೂ, ಅದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ. ಅದೇ ಹಗ್ಗಜಗ್ಗಾಟವೇ ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ. ಈಗಲೂ ಆರು ಮಂದಿಗೆ ಸ್ಥಾನ ಕೊಡುವುದು ಎಂದು ನಿರ್ಧಾರವಾಗಿದ್ದರೂ, ಆ ಆರು ಮಂದಿ ಯಾರು ಎಂಬುದು ಕೂಡ ಮತ್ತೆ ‘ಸಿಎಂ ಕೈಕಟ್ಟಿಹಾಕುವ ಸೂತ್ರ’ದ ಮೇಲೆಯೇ ನಿರ್ಧಾರವಾಗಲಿದೆ ಎಂಬುದು ಬಿಜೆಪಿ ಆಂತರಿಕ ಮೂಲಗಳ ಲೆಕ್ಕಾಚಾರ.
ಹಾಗಾಗಿ, ಸದ್ಯಕ್ಕಿದು ಹುಲಗೂರ ಸಂತಿ, ಗದ್ದಲ ಮುಂದುವರಿಯುವುದು ಖಾತ್ರಿ. ಚಿನ್ನದ ಬೇಟೆಗೆ ಹೊರಟು ದಿಕ್ಕಾಪಾಲಾಗಿ ಜೀವ ಕಳೆದುಕೊಳ್ಳುವ ’ಮೆಕೆನೆಸ್ ಗೋಲ್ಡ್’ ಸಿನಿಮಾದ ಪಾತ್ರಗಳಂತೆ ಅಧಿಕಾರ ಮತ್ತು ಆಮಿಷದ ಬೇಟೆಯಾಡುವ ಅಸೀಮ ದಾಹದ ಅನರ್ಹ ಕಂ ಅರ್ಹ ಹದಿನೇಳು ಮಂದಿಯ ಕಥೆ ಕೂಡ ಸದ್ಯಕ್ಕೆ ಮೆಕೆನೆಸ್ ಗೋಲ್ಡ್ ತಂಡಕ್ಕಿಂತ ಬೇರೇನಲ್ಲ ಎನಿಸುತ್ತಿದೆ!