ಮಂಗಳೂರಿನ ಆದಿತ್ಯ ರಾವ್ ಬಳಿಕ ಮತ್ತೊಬ್ಬ ಮತ್ತೊಬ್ಬ ಭಯೋತ್ಪಾದಕ ಇಂದು ದೆಹಲಿಯಲ್ಲಿ ಸಿಎಎ-ಎನ್ ಆರ್ ಸಿ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ದೆಹಲಿ ಪೊಲೀಸರು ಕೂಡ ಮಂಗಳೂರು ಪೊಲೀಸರ ಮಾದರಿಯಲ್ಲೇ, ಆತ ನಡುಹಗಲೇ, ಟಿವಿ ಕ್ಯಾಮರಾಗಳ ಎದುರೇ ಪಿಸ್ತೂಲ್ ಝಳಪಿಸುತ್ತಾ ಗುಂಡು ಹಾರಿಸುತ್ತಿದ್ದರೆ, ಮೂಕಪ್ರೇಕ್ಷಕರಾಗಿ ಅಕ್ಷರಶಃ ಕೈಕಟ್ಟಿ ನಿಂತು ಪರೋಕ್ಷವಾಗಿ ಭಯೋತ್ಪಾದನಾ ಕೃತ್ಯಕ್ಕೆ ಬೆಂಬಲ ನೀಡಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಕಳೆದ ಒಂದೂವರೆ ತಿಂಗಳಿನಿಂದ ಸಿಎಎ-ಎನ್ ಆರ್ ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಜಾಮಿಯಾ ಮಿಲಿಯಾ ವಿವಿಯ ವಿದ್ಯಾರ್ಥಿಗಳು, ಪ್ರತಿಭಟನೆಯ ಭಾಗವಾಗಿ ಗುರುವಾರ ಶಾಂತಿಯುತ ಪಾದಯಾತ್ರೆ ಹಮ್ಮಿಕೊಂಡಿದ್ದರು. ಈ ವೇಳೆ ಭಾರೀ ಸಂಖ್ಯೆಯ ಪೊಲೀಸರು ಕೂಡ ನೆರೆದಿದ್ದರು. ವಿದ್ಯಾರ್ಥಿಗಳು ಪಾದಯಾತ್ರೆ ಆರಂಭಿಸಿದ ಕೆಲವೇ ಕ್ಷಣದಲ್ಲಿ ಆಗಂತುಕನೊಬ್ಬ ಪಿಸ್ತೂಲು ಹಿಡಿದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ. ಆ ವೇಳೆ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ರಾಮಭಕ್ತ ಗೋಪಾಲ್ ಶರ್ಮಾ ಎಂಬ ಆ ಉಗ್ರ ಏಕಾಏಕಿ ಈ ದಾಳಿ ನಡೆಸಿದ್ದೇನಲ್ಲ. ಆತ ಬೆಳಗ್ಗೆಯಿಂದಲೇ ತಾನು ಜಾಮಿಯಾ ಮಿಲಿಯಾ ಬಳಿ ಇರುವುದಾಗಿಯೂ, ಇವತ್ತು ಜಾಮಿಯಾ ಪ್ರತಿಭಟನಾಕಾರರಿಗೆ ಒಂದು ಗತಿ ಕಾಣಿಸುವುದಾಗಿಯೂ ಹೇಳಿ, ಹಲವು ಬಾರಿ ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ನೀಡಿರುವುದು ಪತ್ತೆಯಾಗಿದೆ. ಅಲ್ಲದೆ, ಆತ ಪಿಸ್ತೂಲು ಗುರಿ ಇಟ್ಟು ದೆಹಲಿ ಪೊಲೀಸ್ ಜಿಂದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾ ಗುಂಡು ಹಾರಿಸುತ್ತಿದ್ದಾಗ, ವಿದ್ಯಾರ್ಥಿಗಳು ಆತನನ್ನು ಹಿಡಿಯುವಂತೆ ಪೊಲೀಸರಿಗೆ ಗೋಗರೆದಿದ್ದಾರೆ. ಆದರೆ, ಅದೊಂದು ಬೀದಿ ನಾಟಕ ಎಂಬಷ್ಟೇ ನಿರುಮ್ಮಳವಾಗಿ ಕೈಕಟ್ಟಿಕೊಂಡು(ಅಕ್ಷರಶಃ ಕೈಕಟ್ಟಿಕೊಂಡು) ನಿಂತಿದ್ದ ದೆಹಲಿ ಪೊಲೀಸರು, ಆತನನ್ನು ಬಂಧಿಸುವ, ವಿದ್ಯಾರ್ಥಿಗಳ ರಕ್ಷಣೆ ನೀಡುವ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಬದಲಾಗಿ, ಗುಂಟೇಟಿನಿಂದ ಗಾಯಗೊಂಡ ವಿದ್ಯಾರ್ಥಿಗಳ ರಕ್ಷಣೆಗೆ ಧಾವಿಸಬೇಕಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಬೇಕಿದ್ದ ಪೊಲೀಸರು, ಗಾಯಾಳುಗಳನ್ನು ತಡೆದಿದ್ದಾರೆ, ಬ್ಯಾರಿಕೇಡುಗಳನ್ನು ತೆರವು ಮಾಡಿ ನೆರವಾಗುವ ಬದಲು, ಬ್ಯಾರಿಕೇಡ್ ಹತ್ತಿ ಆಚೆ ಬರುವಂತೆ ತಾಕೀತು ಮಾಡಿದ್ದಾರೆ.
ಪೊಲೀಸರ ಈ ವರ್ತನೆ, ಸಹಜವಾಗೇ ಅವರು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಲು ಬಂದಿಲ್ಲ, ಬದಲಾಗಿ ದಾಳಿಕೋರ ಉಗ್ರನಿಗೆ ನೆರವಾಗಲು ಬಂದಿದ್ದಾರೆ ಎಂಬ ಅರ್ಥ ನೀಡಿದೆ. ಅಲ್ಲದೆ, ಆತ ಸಾಮಾಜಿಕ ಜಾಲತಾಣಗಳಲ್ಲಿ ತಾನು ಇಂದು ಜಾಮಿಯಾ ಪ್ರತಿಭಟನಾಕಾರರಿಗೆ ಒಂದಿ ಗತಿ ಕಾಣಿಸುವೆ ಎಂದು ಜಗಜ್ಜಾಹೀರು ಮಾಡಿ, ಪಿಸ್ತೂಲುಸಹಿತ ವೀಡಿಯೋ ಲೈವ್ ನೀಡಿದ್ದರೂ, ಬಳಿಕ ತಮ್ಮ ಕಣ್ಣಮುಂದೆಯೂ ಪಿಸ್ತೂಲು ಝಳಪಿಸುತ್ತಾ ವಿದ್ಯಾರ್ಥಿಗಳ ಕಡೆ ನುಗ್ಗುತ್ತಿದ್ದರೂ ದೆಹಲಿ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದೇ ಕದಲದಂತೆ ನಿಂತು ನೋಡುತ್ತಿದ್ದರು. ಒಟ್ಟಾರೆ ಈ ಎಲ್ಲಾ ಪೊಲೀಸ್ ವರಸೆಗಳು, ದೆಹಲಿ ಪೊಲೀಸರು ಪ್ರಜಾಸತ್ತಾತ್ಮಕ ರೀತಿಯ ಹೋರಾಟಗಾರರ ಮೇಲೆ, ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ(ಜಾಮಿಯಾಮಿಲಿಯಾ ವಿವಿ ಹೋರಾಟ), ಗೂಂಡಾಗಳಂತೆ ಮನಸೋಇಚ್ಛೆ ಹಲ್ಲೆ ನಡೆಸುತ್ತಾರೆ(ಜೆಎನ್ ಯು ವಿವಿ ಹೋರಾಟ). ಆದರೆ, ಸಾರ್ವಜನಿಕರ ಎದುರೇ, ಹಾಡಹಗಲೇ ತಮ್ಮ ಕಣ್ಣೆದುರೇ ಗುಂಡಿನ ದಾಳಿ ನಡೆಸುತ್ತಿದ್ದರೂ, ಆತ ತಮಗೆ ಜಿಂದಾಬಾದ್ ಕೂಗುತ್ತಿದ್ದರೆ ಕೈಕಟ್ಟಿನಿಲ್ಲುತ್ತಾರೆ ಎಂಬುದು ಸಾಬೀತಾಗಿದೆ.
ಪ್ರಮುಖವಾಗಿ ದೆಹಲಿ ಪೊಲೀಸರ ಈ ಪರೋಕ್ಷ ಕುಮ್ಮಕ್ಕಿನ ಹಿಂದೆ ಯಾವ ಉದ್ದೇಶವಿದೆ. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಿಎಎ ಪ್ರತಿಭಟನಾಕಾರರನ್ನು ಉದ್ದೇಶಿಸಿ, ‘ಗೋಲಿ ಮಾರೋ ಸಾಲೋಂಕಾ.. ‘ ಎನ್ನುವ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕೂ, ಈಗ ಈ ರಾಮಭಕ್ತ ಗೋಪಾಲ್ ಪಿಸ್ತೂಲ್ ಹಿಡಿದು ಇವತ್ತು ಜಾಮಿಯಾ ಪ್ರತಿಭಟನಾಕಾರರಿಗೆ ಒಂದು ಗತಿ ಕಾಣಿಸುವೆ ಎಂದು ಗುಂಡಿನ ದಾಳಿ ನಡೆಸಿದ್ದಕ್ಕೂ, ಅದೆಲ್ಲಕ್ಕೂ ಬೆಂಬಲಿಗರಾಗಿ ದೆಹಲಿ ಪೊಲೀಸರು ಕೈಕಟ್ಟಿಕೊಂಡು ನಿಂತಿದ್ದಷ್ಟೇ ಅಲ್ಲದೆ, ಗುಂಡಿನ ದಾಳಿಯಲ್ಲಿ ಗಾಯಾಳುಗಳಾದ ವಿದ್ಯಾರ್ಥಿಗಳನ್ನೇ ದಂಡಿಸಿದ್ದಕ್ಕೂ ಸಂಬಂಧವಿದೆಯೇ? ಎಂಬುದು ಈಗ ದೇಶ ಕೇಳುತ್ತಿರುವ ಪ್ರಶ್ನೆ. ಠಾಕೂರ್ ಸೇರಿದಂತೆ ಆಡಳಿತ ಪಕ್ಷದ ಹಲವು ನಾಯಕರು ಸಿಎಎ ಪ್ರತಿಭಟನೆ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು. ರಾಜ್ಯದ ಬಿಜೆಪಿ ನಾಯಕ ಹಾಗೂ ಸಚಿವ ಸಿ ಟಿ ರವಿ ಕೂಡ ಬುಧವಾರಷ್ಟೆ ‘ಪ್ರತಿಭಟನಾಕಾರರಿಗೆ ಬಿರಿಯಾನಿ ಅಲ್ಲ; ಬುಲೆಟ್ ರುಚಿ ತೋರಿಸಬೇಕು’ ಎಂದು ಟ್ವೀಟ್ ಮಾಡಿದ್ದರು. ಹಾಗೆ ಹೇಳಿದ ಮಾರನೇ ದಿನವೇ ಠಾಕೂರ್ ಮತ್ತು ಸಿ ಟಿ ರವಿ ಅವರ ಆದೇಶ ಪಾಲನೆಯಾಗಿದೆ!
ಆದರೆ, ಪ್ರಜಾಸತ್ತಾತ್ಮಕ ರೀತಿಯ ಪ್ರತಿಭಟನೆಗಳ ಬಗ್ಗೆ ಇಂತಹ ಉಗ್ರಗಾಮಿ ಹೇಳಿಕೆಗಳನ್ನು ನೀಡುತ್ತಿರುವ ನಾಯಕರ ಬಗ್ಗೆ ಸರ್ಕಾರವಾಗಲೀ, ಸ್ವತಃ ಬಿಜೆಪಿಯಾಗಲೀ ಯಾವುದೇ ಕ್ರಮಕೈಗೊಂಡಿಲ್ಲ. ಆ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿದೆಯೇ ಎಂಬ ಪ್ರಶ್ನೆಗಳಿಗೆ ಇಂಬು ನೀಡಿದಂತಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ತಪ್ಪಿಸಿಕೊಂಡು, ಬಳಿಕ ಬೆಂಗಳೂರು ಐಜಿಪಿ ಕಚೇರಿಯಲ್ಲಿ ಶರಣಾಗಿದ್ದ ಆದಿತ್ಯ ರಾವ್ ಎಂಬ ಭಯೋತ್ಪಾದಕನ ವಿಷಯದಲ್ಲಿಯೂ ಮಂಗಳೂರು ಪೊಲೀಸರು ಬಹುತೇಕ ದೆಹಲಿ ಪೊಲೀಸರ ರೀತಿಯಲ್ಲೇ ನಡೆದುಕೊಂಡಿದ್ದರು. ಆತ ಸ್ಫೋಟಕದೊಂದಿಗೆ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದು ಹೇಗೆ, ಭದ್ರತಾ ವ್ಯವಸ್ಥೆಯ ಲೋಪದ ಹೊಣೆ ಯಾರದ್ದು ಎಂಬ ಪ್ರಶ್ನೆಗಳ ಜೊತೆಗೆ, ಬಾಂಬ್ ಇಟ್ಟವನ ಧರ್ಮ ಮತ್ತು ಹೆಸರು ಪತ್ತೆಗೆ ಮುಂಚಿನ ಪೊಲೀಸರ ಹೇಳಿಕೆಗಳಿಗೂ ಆತನ ಗುರುತು ಪತ್ತೆ ಬಳಿಕದ ಹೇಳಿಕೆಗಳಿಗೂ ಸಾಮ್ಯತೆಯೇ ಇರಲಿಲ್ಲ. ಅದು ಪೊಲೀಸರ ಪಕ್ಷಪಾತಿ ಧೋರಣೆಗೆ ಸಾಕ್ಷಿಯಾಗಿತ್ತು. ಅದಕ್ಕೆ ಪೂರಕವಾಗಿ ಬಾಂಬ್ ಇಟ್ಟವನ ಗುರುತು ಪತ್ತೆಗೆ ಮುಂಚೆ ಅತ್ಯುಗ್ರ ಹೇಳಿಕೆಗಳನ್ನು ನೀಡಿದ್ದ, ಸ್ವತಃ ಗೃಹ ಸಚಿವರು ಸೇರಿದಂತೆ ಹಲವು ಬಿಜೆಪಿ ನಾಯಕರು ಕೂಡ ಭಯೋತ್ಪಾದಕನ ಬಯೋಡೇಟಾ ಗೊತ್ತಾಗುತ್ತಿದ್ದಂತೆ ಆತನಿಗೆ ಮಾನಸಿಕ ಅಸ್ವಸ್ಥನ ಪಟ್ಟ ಕಟ್ಟಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಮಾಡಿದ್ದರು.
ಇದೀಗ ದೆಹಲಿಯ ಪೊಲೀಸರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲು ಭಯೋತ್ಪಾದಕನಿಗೆ ಕುಮ್ಮಕ್ಕು ನೀಡುತ್ತಿರುವಂತೆ ವರ್ತಿಸಿದ್ದಾರೆ. ಅವರ ನಿಷ್ಕ್ರಿಯತೆ ಮತ್ತು ಗುಂಡಿನ ದಾಳಿಗೊಳಗಾದ ಗಾಯಾಳು ವಿದ್ಯಾರ್ಥಿಗಳೊಂದಿಗೆ ಅಮಾನವೀಯವಾಗಿ, ತೀರಾ ಕ್ರೂರವಾಗಿ ನಡೆದುಕೊಂಡ ರೀತಿಗಳೇ ಅವರು ಯಾರ ಪರ ಎಂಬುದನ್ನು ಟಿವಿ ಕ್ಯಾಮರಾಗಳ ಮೂಲಕವೇ ಇಡೀ ದೇಶದ ಮೂಲೆಮೂಲೆಗೆ ತಲುಪಿಸಿವೆ. ಹಾಗಾಗಿ ಸರ್ಕಾರದ ಕುಮ್ಮಕ್ಕು ಇರದೇ ಅಥವಾ ನೇರವಾಗಿ ದೆಹಲಿ ಪೊಲೀಸರನ್ನು ನಿಯಂತ್ರಿಸುವ ಗೃಹ ಸಚಿವರ ಆಣತಿ ಪಾಲಿಸುವ ಹಿರಿಯ ಅಧಿಕಾರಿಗಳ ಸೂಚನೆ ಇರದೆ, ಪೊಲೀಸರು ಹೀಗೆ ತಮ್ಮ ಕಣ್ಣೆದುರೇ ಭಯೋತ್ಪಾದಕನೊಬ್ಬ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುತ್ತಿರುವುದನ್ನು ಕಾಮಿಡಿ ಶೋ ನಂತೆ ನೋಡಿಕೊಂಡು ನಿಲ್ಲುತ್ತಾರೆಯೇ? ಎಂಬುದು ಈಗ ಕೇಳಬೇಕಿರುವ ಪ್ರಶ್ನೆ.
ಆದರೆ, ಈಗಾಗಲೇ ಆಡಳಿತ ಪಕ್ಷ ಈತನಿಗೂ ಮಾನಸಿಕ ಅಸ್ವಸ್ಥನ ಪಟ್ಟ ಕಟ್ಟುವ ಪ್ರಾಪಗಾಂಡಾಕ್ಕೆ ಚಾಲನೆ ನೀಡಿದೆ. ಪ್ರಶ್ನೆಗಳನ್ನು ಹತ್ತಿಕ್ಕುವ ದಾರಿಗಳನ್ನು ಕಂಡುಕೊಳ್ಳುವುದು ಅವರಿಗೆ ಸುಲಭ ಕೂಡ. ದೇಶಭಕ್ತನ ಹಣೆಪಟ್ಟಿ ಕಟ್ಟಲು ಸಾಧ್ಯವಾಗದ ಇಂತಹ ಉಗ್ರಗಾಮಿ ಘಟನೆಗಳಲ್ಲಿ ತಮ್ಮ ಭಕ್ತರು ಹಾಡಹಗಲೇ ಸಿಕ್ಕಿಬಿದ್ದರೆ ಅವರಿಗೆ ಮಾನಸಿಕ ಅಸ್ವಸ್ಥನ ಪಟ್ಟ ಕಟ್ಟುವುದು ವಾಡಿಕೆ. ಹಾಗಾಗಿ ದೇಶದ ತುಂಬೆಲ್ಲಾ ಭಯ ಹುಟ್ಟಿಸುವ, ವೈಚಾರಿಕ ವಿರೋಧಿಗಳನ್ನು, ಸರ್ಕಾರ ಮತ್ತು ಸರ್ಕಾರ ನಡೆಸುತ್ತಿರುವವರ ತಪ್ಪು ಹೆಜ್ಜೆಗಳನ್ನು ಪ್ರಶ್ನಿಸುವ, ವಿರೋಧಿಸುವ ಜನರನ್ನು ಕೊಂದುಹಾಕುವ ಕೈಗಳಿಗೆ ದೇಶಭಕ್ತಿಯ ಕಂಕಣ ಕಟ್ಟಲಾಗುತ್ತದೆ. ಅಂತಿಮವಾಗಿ ಮಾನಸಿಕ ಅಸ್ವಸ್ಥ ಎಂಬ ಹಣೆಪಟ್ಟಿ ಕಟ್ಟಿ ಎಲ್ಲಾ ಭಯೋತ್ಪಾದಕ ಕೃತ್ಯಗಳನ್ನು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ದಫನ್ ಮಾಡಲಾಗುತ್ತದೆ. ಒಂದೇ ವಾರದಲ್ಲಿ ಇದೀಗ ಆ ನಿಟ್ಟಿನಲ್ಲಿ ದೆಹಲಿ ಘಟನೆ ಎರಡನೇ ಉದಾಹರಣೆ!