ಒಂದು ಕಡೆ ದೇಶದ ಉದ್ದಗಲಕ್ಕೆ ಸಿಎಎ-ಎನ್ ಆರ್ ಸಿ ವಿರೋಧಿ ಹೋರಾಟಗಳು ಮುಂದುವರಿದಿರುವಾಗಲೇ ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಕಣದಲ್ಲಿಯೂ ಅದೇ ಪೌರತ್ವ ತಿದ್ದುಪಡಿ ಕಾಯ್ದೆಯೇ ಕಾವೇರಿಸಿದೆ. ಆಡಳಿತರೂಢ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವೆ ಅಭಿವೃದ್ಧಿಯ ಅಜೆಂಡಾದ ಮೇಲೆ ಆರಂಭವಾಗಿದ್ದ ಚುನಾವಣಾ ಪ್ರಚಾರ ವಾಕ್ಸಮರ, ಮತದಾನದ ದಿನ ಸಮೀಪಿಸುತ್ತಿದ್ದಂತೆ ಸಂಪೂರ್ಣ ಶಾಹೀನ್ ಭಾಗ್, ಜಾಮಿಯಾ ಮಿಲಿಯಾ ಹೋರಾಟಗಳ ಸುತ್ತಲೇ ಭುಗಿಲೆದ್ದಿದೆ.
ಆರಂಭದಲ್ಲಿ ಅಭಿವೃದ್ಧಿಯ ಅಜೆಂಡಾವನ್ನು ಮುಂದಿಟ್ಟುಕೊಂಟು, ಅರವಿಂದ ಕೇಜ್ರಿವಾಲ್ ಅವರ ಸರ್ಕಾರದ ವೈಫಲ್ಯಗಳನ್ನು ಪ್ರಮುಖವಾಗಿ ಚುನಾವಣಾ ವಿಷಯವಾಗಿಸಿಕೊಂಡು ಮತ ಬಾಚಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿ, ಬಳಿಕ ಏಕಾಏಕಿ ಸಿಎಎ ವಿರೋಧಿ ಹೋರಾಟಗಾರರಿಗೆ ಎಎಪಿ ಬೆಂಬಲವಾಗಿ ನಿಂತಿದೆ. ಶಾಹೀನ್ ಭಾಗ್ ಮತ್ತು ಜಾಮಿಯಾ ಧರಣಿನಿರತರಿಗೆ ಕೇಜ್ರಿವಾಲ್ ಬಿರಿಯಾನಿ ಕೊಡಿಸುತ್ತಿದ್ದಾರೆ ಎಂಬ ಹೇಳಿಕೆಗಳ ಮೂಲಕ ಚುನಾವಣೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ಮುಂದು ಮಾಡಿತು. ಅದರಲ್ಲೂ ಸಮೀಕ್ಷೆಗಳು ಎಎಪಿಯ ಬಹುಮತ ನಿಶ್ಚಿತ, ಬಿಜೆಪಿ ಬೆರಣಿಕೆ ಸ್ಥಾನಗಳಿಕೆಯ ಮೀರಲಾರದು ಎನ್ನುತ್ತಿದ್ದಂತೆಯೇ ಬಿಜೆಪಿಗೆ ತನ್ನ ಯಾವತ್ತಿನ ಕೋಮುವಾದ, ಪಾಕಿಸ್ತಾನ, ದೇಶಭಕ್ತಿ, ಸಿಎಎ, ಹಿಂದುತ್ವ ಮುಂತಾದ ಅಸ್ತ್ರಗಳನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಎನಿಸಿತು.
ಹಾಗಾಗಿ ಅನುರಾಗ್ ಠೂಕೂರ್, ಪ್ರಕಾಶ್ ಜಾವ್ಡೇಕರ್, ಪರ್ವೇಶ್ ವರ್ಮಾ, ಯೋಗಿ ಆದಿತ್ಯನಾಥ, ಸ್ವತಃ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಕೋಮುದ್ವೇಷದ, ಹಿಂಸೆಗೆ ಕುಮ್ಮಕ್ಕು ನೀಡುವ ಹೇಳಿಕೆಗಳನ್ನು ನೀಡುವ ಮೂಲಕ, ದೇಶ ಕಂಡ ಅತ್ಯಂತ ಕೀಳು ಮಟ್ಟದ ಚುನಾವಣಾ ಪ್ರಚಾರ ಎಂಬ ಕುಖ್ಯಾತಿಗೆ ದೆಹಲಿ ಚುನಾವಣೆಯನ್ನು ಸೇರಿಸಿದರು. ಆ ಪೈಕಿ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ತಮ್ಮ ದ್ವೇಷಕಾರುವ ಮಾತುಗಳಿಂದಾಗಿ ಚುನಾವಣಾ ಆಯೋಗದಿಂದ ಪ್ರಚಾರ ನಿಷೇಧಕ್ಕೂ ಒಳಗಾದರು.
ಸಿಎಎ ಪ್ರತಿಭಟನಾಕಾರರನ್ನು ಉದ್ದೇಶಿಸಿ, ‘ಗೋಲಿ ಮಾರೋ ಸಾಲೋಂಕಾ’ ಎಂದ ಬಿಜೆಪಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿರುದ್ಧ ಪೊಲೀಸ್ ದೂರು ದಾಖಲಾಗಿ, ಎಫ್ ಐಆರ್ ಆದರೂ, ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಅವರ ಹೇಳಿಕೆಯ ಬೆನ್ನಲ್ಲೇ ಜಾಮಿಯಾ ಮತ್ತು ಶಾಹೀನ್ ಭಾಗ್ ಪ್ರತಿಭಟನಾನಿರತರ ಮೇಲೆ ಇಬ್ಬರು ಹಿಂದೂ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಎರಡು ಪ್ರತ್ಯೇಕ ಘಟನೆಗಳೂ ನಡೆದವು. ಆಗಲೂ ದೆಹಲಿ ಪೊಲೀಸರು ಈ ಭಯೋತ್ಪಾದಕರ ವಿರುದ್ಧ ಭಯೋತ್ಪಾದನೆಯ ಪ್ರಕರಣಗಳನ್ನಾಗಲೀ, ಪೂರ್ವಯೋಜಿತ ಅಪರಾಧ ಕೃತ್ಯದ ಸಂಬಂಧಿತ ಪ್ರಕರಣವನ್ನಾಗಲೀ ದಾಖಲಿಸಿಲ್ಲ. ಬದಲಾಗಿ ಇಬ್ಬರು ವ್ಯಕ್ತಿಗಳ ನಡುವಿನ ಹೊಡೆದಾಟದಂತಹ ಸಾಮಾನ್ಯ ಪ್ರಕರಣ ದಾಖಲಿಸಿ, ಕೈತೊಳೆದುಕೊಂಡಿದ್ದಾರೆ. ಈ ಎರಡು ಗುಂಡಿನ ದಾಳಿ ಮತ್ತು ಆ ಪ್ರಕರಣಗಳಲ್ಲಿ ಪೊಲೀಸರ ವರಸೆಗಳು ಕೂಡ ಬಿಜೆಪಿ ದೆಹಲಿ ಚುನಾವಣೆಯನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬುದಕ್ಕೆ ನಿದರ್ಶನವಾದವು.
ಬಿಜೆಪಿಯ ದ್ವೇಷ ರಾಜಕಾರಣದ ಅಜೆಂಡಾ ಅಷ್ಟಕ್ಕೇ ನಿಲ್ಲಲಿಲ್ಲ. ಮತ್ತೊಬ್ಬ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಎದುರಾಳಿ ಎಎಪಿಯ ನಾಯಕ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನೇ ಭಯೋತ್ಪಾದಕ ಎಂದರು. ನೀವು ಭಯೋತ್ಪಾದಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಅದಕ್ಕೆ ನಮ್ಮ ಬಳಿ ಸಾವಿರಾರು ಸಾಕ್ಷ್ಯಗಳಿವೆ ಎಂದು ಬಹಿರಂಗ ಪತ್ರಿಕಾಗೋಷ್ಠಿಯಲ್ಲೇ ಹೇಳಿದರು. ಜನರಿಂದ ಆಯ್ಕೆಯಾದ ಒಂದು ಪಕ್ಷದ, ಒಂದು ಸರ್ಕಾರದ ನಾಯಕನಿಗೆ ಭಯೋತ್ಪಾದಕನ ಪಟ್ಟ ಕಟ್ಟಿದ ಬಿಜೆಪಿಯ ಕೇಂದ್ರ ಸಚಿವರ ಈ ಹೇಳಿಕೆ, ಬಿಜೆಪಿ ತನ್ನ ರಾಜಕೀಯ ವಿರೋಧಿಗಳ ಬಗ್ಗೆ ಯಾವ ಮಟ್ಟದ ಭಯ ಹೊಂದಿದೆ ಮತ್ತು ಎಂಥ ಅಸಹ್ಯಕರ ಭಾವನೆ ಹೊಂದಿದೆ ಎಂಬುದನ್ನು ಜಗಜ್ಜಾಹೀರು ಮಾಡಿತು. ದ್ವೇಷ ಮತ್ತು ಅಸಹನೆಯನ್ನೇ ಹಾಸಿಹೊದ್ದಿರುವ ಬಿಜೆಪಿಯ ಹೀನಾಯ ರಾಜಕೀಯ ದೇಶಾದ್ಯಂತ ತೀವ್ರ ಟೀಕೆಗೂ ಗುರಿಯಾಯಿತು. ಅಸಹ್ಯಕ್ಕೀಡಾಯಿತು.
ಕೋಮು ಮತ್ತು ಮತೀಯ ದ್ವೇಷದ ಮೇಲೆಯೇ ಚುನಾವಣೆಯನ್ನು ಗೆಲ್ಲುವ ಬಿಜೆಪಿಯ ಇಂತಹ ಪ್ರಯತ್ನಗಳ ಹೊರತಾಗಿಯೂ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಎಎಪಿ ತನ್ನ ಮುನ್ನಡೆ ಕಾಯ್ದುಕೊಂಡಿದ್ದು, ನಿಚ್ಳಳ ಬಹುಮತ ಪಡೆದು ಸರ್ಕಾರ ರಚಿಸುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಹಲವು ಸಮೀಕ್ಷೆಗಳು ಹೇಳಿವೆ.
ಒಟ್ಟು 70 ಸ್ಥಾನ ಬಲದ ದೆಹಲಿ ವಿಧಾನಸಭೆಗೆ 2015ರಲ್ಲಿ ನಡೆದ ಚುನಾವಣೆಯಲ್ಲಿ ಬರೋಬ್ಬರಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಬಹುಮತದೊಂದಿಗೆ ಎಎಪಿ ರಾಜ್ಯದ ಅಧಿಕಾರ ಹಿಡಿದಿತ್ತು. ಎನ್ ಡಿಎ ಮೂರು ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ಖಾತೆಯನ್ನೇ ತೆರೆದಿರಲಿಲ್ಲ. ಈ ಬಾರಿಯ ಸಮೀಕ್ಷೆಗಳ ಪ್ರಕಾರ, ಎಎಪಿ ಸ್ಥಾನ ಗಳಿಕೆಯಲ್ಲಿ ಕಳೆದ ಬಾರಿಗಿಂತ 7-10 ಸ್ಥಾನ ಕಡಿಮೆಯಾಗಬಹುದು. ಆದರೆ, ನಿಚ್ಛಳ ಬಹುಮತಕ್ಕೆ ಯಾವುದೇ ತೊಡಕಿಲ್ಲ ಎನ್ನಲಾಗುತ್ತಿದೆ. 1993ರಿಂದ ರಾಜಧಾನಿಯಲ್ಲಿ ಅಧಿಕಾರ ಗದ್ದುಗೆಯಿಂದ ದೂರವೇ ಉಳಿದಿರುವ ಬಿಜೆಪಿ, ಈ ಬಾರಿ ಹೆಚ್ಚೆಂದರೆ 10 ಸ್ಥಾನ ಗಳಿಸಬಹುದು. ಹಾಗಾಗಿ ಈ ಬಾರಿಯೂ ಪ್ರತಿಷ್ಠಿತ ದೆಹಲಿ ಗೆಲ್ಲುವ ಅಮಿತ್ ಶಾ ಮತ್ತು ಮೋದಿ ಕನಸು ನನಸಾಗಲಾರದು ಎಂದು ಸಮೀಕ್ಷೆಗಳು ಹೇಳುತ್ತಿವೆ.
ಜನವರಿ ಮೊದಲ ಮತ್ತು ಎರಡನೇ ವಾರದ ಹೊತ್ತಿಗೆ ಪ್ರಕಟವಾಗಿದ್ದ ಆರಂಭಿಕ ಸಮೀಕ್ಷೆಗಳಲ್ಲಿ ಬಹುತೇಕ ಎಎಪಿ 60ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿದ್ದು, ಬಿಜೆಪಿ ಅತಿ ಹೆಚ್ಚು ಎಂದರೆ 8 ಸ್ಥಾನ ಗಳಿಸಬಹುದು ಎನ್ನಲಾಗಿತ್ತು. ಜನವರಿ ಮೊದಲ ವಾರ ಪ್ರಕಟವಾಗಿದ್ದ ಎಬಿಪಿ ನ್ಯೂಸ್- ಸಿ ವೋಟರ್ ಸಮೀಕ್ಷೆ ಎಎಪಿಗೆ 59 ಸ್ಥಾನ, ಬಿಜೆಪಿಗೆ 8 ಮತ್ತು ಕಾಂಗ್ರೆಸ್ ಗೆ 3 ಸ್ಥಾನ ನೀಡಿತ್ತು. ಅದೇ ವೇಳೆ ಐಎಎನ್ ಎಸ್- ಸಿವೋಟರ್ ಸಮೀಕ್ಷೆ ಎಎಪಿಗೆ 54-64 ಸ್ಥಾನ, ಬಿಜೆಪಿಗೆ 3-13 ಮತ್ತು ಕಾಂಗ್ರೆಸ್ ಗೆ 0-06 ಸ್ಥಾನ ನೀಡಿತ್ತು. ಬಳಿಕ ಜನವರಿ ಕೊನೇ ವಾರ ಪ್ರಕಟವಾಗಿದ್ದ ನ್ಯೂಸ್ ಎಕ್ಸ್-ಪೋಲ್ ಸ್ಟ್ರಾಟ್ ಸಮೀಕ್ಷೆ ಎಎಪಿಗೆ 53-56, ಬಿಜೆಪಿಗೆ 12-15 ಹಾಗೂ ಕಾಂಗ್ರೆಸ್ಸಿಗೆ 2-4 ಸ್ಥಾನ ನೀಡಿತ್ತು. ಇದೀಗ ಮತದಾನಕ್ಕೆ ನಾಲ್ಕು ದಿನ ಇರುವಾಗ ಪ್ರಕಟವಾಗಿರುವ ಟೈಮ್ಸ್ ನೌ- ಇಪ್ ಸೋಸ್ ಸಮೀಕ್ಷೆ ಕೂಡ, ಎಎಪಿಗೆ 54-60, ಬಿಜೆಪಿಗೆ 10-14 ಮತ್ತು ಕಾಂಗ್ರೆಸ್ಸಿಗೆ 0-02 ಸ್ಥಾನಗಳನ್ನು ನೀಡಿದೆ. ಶೇಕಡವಾರು ಮತ ಗಳಿಕೆ ಪ್ರಮಾಣದಲ್ಲಿಯೂ ಎಎಪಿ ಶೇ.50ಕ್ಕಿಂತ ಮುಂದಿದ್ದು, ಬಿಜೆಪಿ ಹೆಚ್ಚು ಎಂದರೆ ಶೇ.34ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆಗಳ ಒಟ್ಟಾರೆ ಸಾರಾಂಶ.
ಈ ಲೆಕ್ಕಾಚಾರಗಳು, ಬಹುತೇಕ ಬಿಜೆಪಿ ಮತ್ತು ಮೋದಿಯವರ ಪರ ಇರುವ ಮಾಧ್ಯಮ ಸಂಸ್ಥೆಗಳೇ ನಡೆಸಿದ ಸಮೀಕ್ಷೆಗಳೇ ಹೇಳುತ್ತಿರುವುದು ಎಂಬುದು ಗಮನಾರ್ಹ. ಜೊತೆಗೆ ಸಿಎಎ ವಿರೋಧಿ ಅಲೆ ದೆಹಲಿಯಲ್ಲಿ ಜೋರಾಗಿರುವ ಹಿನ್ನೆಲೆಯಲ್ಲಿ ಕೂಡ ಈ ಬಾರಿಯ ಚುಣಾವಣೆಯನ್ನು ನೋಡಬೇಕಾಗಿದೆ. ಈ ಎರಡೂ ಅಂಶಗಳ ಹಿನ್ನೆಲೆಯಲ್ಲಿ ಸ್ಥಾನ ಗಳಿಕೆಯ ಲೆಕ್ಕಾಚಾರ ಇನ್ನಷ್ಟು ಬದಲಾಗಬಹುದು. ಎಎಪಿಯ ಗಳಿಕೆ ಇನ್ನಷ್ಟು ಹೆಚ್ಚಬಹುದು ಎಂಬ ಮಾತುಗಳೂ ಇವೆ. ಆದರೆ, ಸಿಎಎ ವಿರುದ್ಧದ ದೇಶವ್ಯಾಪಿ ಚಳವಳಿಗೆ ಒಂದು ಪ್ರತ್ಯುತ್ತರ ನೀಡುವ ಮತ್ತು ರಾಜಧಾನಿಯ ಅಧಿಕಾರ ಗದ್ದುಗೆ ಹಿಡಿಯಲೇಬೇಕಾದ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಬಿಜೆಪಿ ಪಾಲಿಗೆ ಇದು ಅತ್ಯಂತ ನಿರ್ಣಾಯಕ ಚುನಾವಣೆ. ಹಾಗಾಗಿ ಚುನಾವಣಾ ತಂತ್ರಗಾರಿಕೆ, ಕುತಂತ್ರ, ಇವಿಎಂ ಯಂತ್ರಗಳ ಆಟದಲ್ಲಿ ಪಳಗಿರುವ ಬಿಜೆಪಿ ನಾಯಕರು ಫಲಿತಾಂಶವನ್ನು ತಮ್ಮ ಪರ ವಾಲಿಸಿಕೊಳ್ಳಲು ಯಾವ ಅತಿಗೂ ಹೋಗಬಹುದು.
ಫೆ.8ರಂದು ನಡೆಯಲಿರುವ ಮತದಾನಕ್ಕೆ ಮುನ್ನ ಉಳಿದಿರುವ ಮೂರ್ನಾಲ್ಕು ದಿನದಲ್ಲಿ ರಾಜಧಾನಿಯ ಕಣದಲ್ಲಿ ಏನು ಬೇಕಾದರೂ ನಡೆಯಬಹುದು. ಚುನಾವಣೆಗಳನ್ನು ರಾಜಕೀಯ ವಾಗ್ವಾದ, ಪ್ರಣಾಳಿಕೆ, ಘೋಷಣೆಗಳ ಮೇಲೆ ಮಾಡುವ ಕಾಲವನ್ನು ಬದಿಗೆ ಸರಿಸಿ ಒಗೆದಿರುವ ಬಿಜೆಪಿ, ತನ್ನ ಕುಖ್ಯಾತಿಯ ತಂತ್ರಗಳನ್ನು ಬಳಸಿ ಯಾವ ಘಳಿಗೆಯಲ್ಲಿ ಮತದಾರರ ಮನಸ್ಸನ್ನು ತಿರುಗಿಸುವುದೋ ಎಂಬ ಕುತೂಹಲ ಎಲ್ಲರಿಗೂ ಇದೆ. ಹಾಗಾಗಿ ಈಗಾಗಲೇ ಶಾಹೀನ್ ಭಾಗ್ ವರ್ಸಸ್ ಬಿಜೆಪಿ ಎಂಬಂತಾಗಿರುವ ದೆಹಲಿ ವಿಧಾನಸಭಾ ಚುನಾವಣೆ, ಯಾವ ಕ್ಷಣ, ಯಾವ ತಿರುವು ಪಡೆಯುವುದು ಎಂಬುದನ್ನು ಊಹಿಸಲಾಗದು.