ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ಮೊದಲ ದಿನ ಪೂರೈಸಿದೆ. ಕನ್ನಡ-ಉರ್ದು-ದಖ್ಖನಿ ನೆಲದ ಸೊಗಡಿನ ಊಟೋಪಚಾರಗಳೇ ಈ ಬಾರಿಯ ಕನ್ನಡ ನುಡಿಜಾತ್ರೆಯ ಮೊದಲ ದಿನದ ವಿಶೇಷವಾಗಿತ್ತು. ಲಡ್ಡು, ಹೋಳಿಗೆ, ಜೋಳದರೊಟ್ಟಿ, ಬದನೆಕಾಯಿ ಎಣ್ಣೆಗಾಯಿ ಪಲ್ಯಗಳು ಸಮ್ಮೇಳನದ ಅತಿಥಿ-ಪ್ರತಿನಿಧಿಗಳನ್ನು ಸಂತೃಪ್ತಗೊಳಿಸಿದವು.
ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರ ಸರ್ವಾಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಆರಂಭವಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನದ ಅಧ್ಯಕ್ಷರ ಭಾಷಣಕ್ಕಿಂತ ತೊಗರಿಸೀಮೆಯ ಊಟದ ಸೊಗಡೇ ರಸವತ್ತಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು! ಯಾಕೆಂದರೆ ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಅದು ಕೇವಲ ಸಾಹಿತ್ಯ ಮತ್ತು ಭಾಷೆಗೆ ಸಂಬಂಧಿಸಿದ ಹಬ್ಬ ಎಂದು ಯಾರೂ ಈವರೆಗೆ ಗ್ರಹಿಸಿಲ್ಲ, ಬದಲಾಗಿ ಅದು ಕನ್ನಡ ನೆಲ-ಜಲ, ನುಡಿ-ನಾಡಿನ ಎಲ್ಲ ಸಂಗತಿಗಳ ಚಿಂತನಮಂಥನದ, ಸೊಗಸು-ಸಂಭ್ರಮದ ಉತ್ಸವ ಎಂಬುದೇ ಈವರೆಗಿನ ವಾಡಿಕೆಯ ಗ್ರಹಿಕೆ. ಆ ಅರ್ಥದಲ್ಲಿ ಈ ಹೊತ್ತಿನ ನಾಡಿನ ತಲ್ಲಣಗಳಿಗೆ, ಭಾಷೆ ಮತ್ತು ಸಂಸ್ಕೃತಿಗೆ ಒದಗಿಸುವ ಅಪಾಯಗಳಿಗೆ ನೇರ ಮುಖಾಮುಖಿಯಾಗದ, ಕನ್ನಡತನದ ಮೇಲೆ ಸವಾರಿ ಮಾಡುವವರಿಗೆ ಎಚ್ಚರಿಕೆಯ ಸಂದೇಶ ನೀಡದ ಅಧ್ಯಕ್ಷರ ಭಾಷೆ ನೀರಸವೇ.
ಸಮ್ಮೇಳನದ ಗೋಷ್ಠಿಯಲ್ಲಿ ದಿಟ್ಟ ಹೋರಾಟಗಾತಿ ಕೆ ನೀಲಾ ಅವರು ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ಸಮ್ಮೇಳನವನ್ನು ಹಾಳುಗೆಡವಲು ನಡೆಸಿದ ಯತ್ನಗಳನ್ನು, ಪೆಟ್ರೋಲ್ ಬಾಂಬ್ ಹಾಕುವ ಬೆದರಿಕೆಯನ್ನೂ ಪ್ರಸ್ತಾಪಿಸಿ ನೇರವಾಗಿ ಕಸಾಪ ಕೇಂದ್ರ ಅಧ್ಯಕ್ಷ ಮನು ಬಳಿಗಾರ್ ರಾಜೀನಾಮೆಗೆ ಆಗ್ರಹಿಸಿದ್ದು ಮತ್ತು ಡಾ ಪದ್ಮಿನಿ ನಾಗರಾಜ್ ಹಾಗೂ ಪ್ರೊ ಕಾಶಿನಾಥ್ ಅಂಬಲಗೆ ಅವರುಗಳು ತಮ್ಮ ಉಪನ್ಯಾಸದ ನಡುವೆ ಕ್ರಮವಾಗಿ ಶೃಂಗೇರಿ ಸಮ್ಮೇಳನಕ್ಕೆ ಸರ್ಕಾರದ ವಿರೋಧ ಹಾಗೂ ಸಿಎಎ-ಎನ್ ಆರ್ ಸಿ ಹೇರಿಕೆಯನ್ನು ಪ್ರಸ್ತಾಪಿಸಿ ತಮ್ಮ ವಿರೋಧವನ್ನು ದಾಖಲಿಸಿದರು. ಆದರೆ, ಬಹಳ ಜನಪ್ರಿಯ ಕವಿ ಎನಿಸಿಕೊಂಡಿರುವ ಎಚ್ಚೆಸ್ವಿ ಅವರು ಮಾತ್ರ ತಾವು ಈ ಮೊದಲೇ ಹೇಳಿದಂತೆ, ‘ಜನರ ಸಮಸ್ಯೆಗಳ ಬಗ್ಗೆ ನಾನು ಮಾತನಾಡುವುದಿಲ್ಲ, ನನ್ನ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ’ ಎಂಬ ತಮ್ಮ ನಿಲುವಿಗೇ ಬದ್ಧರಾದರು. ಕನ್ನಡ ಭಾಷೆ, ಕಲಿಕೆ, ಶಾಲಾ ಶಿಕ್ಷಣ, ಅನ್ನ ಕೊಡುವ ಭಾಷೆಯಾಗಿ ಕನ್ನಡ ಮುಂತಾದ ಈಗಾಗಲೇ ಚರ್ಚೆಯಾಗಿರುವ ವಿಷಯಗಳನ್ನೇ ತಮ್ಮ ಭಾಷಣದುದ್ದಕ್ಕೂ ಪ್ರಸ್ತಾಪಿಸಿ, ಸಮಕಾಲೀನ ಬದುಕಿನ ಬಿಕ್ಕಟ್ಟುಗಳಿಗೆ, ಕನ್ನಡತನ ಎದುರಿಸುತ್ತಿರುವ ಸವಾಲುಗಳಿಗೆ ಕಿವುಡಾದರು.
ಶೃಂಗೇರಿ ಸಮ್ಮೇಳನಕ್ಕೆ ಎಡಪಂಥೀಯ ವಿಚಾರಧಾರೆಯ ಸಾಹಿತಿ ಮತ್ತು ಹೋರಾಟಗಾರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾ ಸಮಿತಿಯ ಕ್ರಮವನ್ನು ವಿರೋಧಿಸಿ ಸಮ್ಮೇಳನಕ್ಕೆ ಖಜಾನೆಯ ಸಾರ್ವಜನಿಕ ತೆರಿಗೆ ಹಣವನ್ನು ಅನುದಾನವಾಗಿ ನೀಡದೇ ಸರ್ಕಾರ ನೀಚತನ ತೋರಿತು. ಅಷ್ಟು ಸಾಲದು ಎಂಬಂತೆ ಪೊಲೀಸರನ್ನು ಬಳಸಿಕೊಂಡು ಪ್ರತಿ ಕ್ಷಣಕ್ಷಣಕ್ಕೂ ಸಮ್ಮೇಳನ ತಡೆಯುವ ಏನೆಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ಬಳಿಕ ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವರ ಚೇಲಾಗಳು ‘ಸಮ್ಮೇಳನದ ಮೇಲೆ ಪೆಟ್ರೋಲ್ ಬಾಂಬ್ ಹಾಕಲು ತಯಾರಿ ಮಾಡಿಕೊಂಡಿದ್ದಾರೆ’ ಎಂದು ಸ್ವತಃ ಪೊಲೀಸರೇ ಲಿಖಿತ ಹೇಳಿಕೆ ನೀಡಿ ಸಮ್ಮೇಳನವನ್ನು ಮೊಟಕುಗೊಳಿಸಿದರು. ಅನಾಹುತ ನಡೆದಲ್ಲಿ ಪೆಟ್ರೋಲ್ ಬಾಂಬ್ ದಾಳಿಕೋರರ ಮೇಲೆ ಪ್ರಕರಣದ ದಾಖಲಿಸುವ ಬದಲು, ಸಮ್ಮೇಳನ ಆಯೋಜಕರ ಮೇಲೆಯೇ ಕೇಸು ಹಾಕುವುದಾಗಿ ಪೊಲೀಸರು ಲಿಖಿತ ನೋಟೀಸ್ ಮೂಲಕ ಬೆದರಿಸಿದರು.
ಆದರೆ ಕನ್ನಡ ನುಡಿಹಬ್ಬದ ಮೇಲೆ ಬಾಂಬು ಹಾಕುವ ಮಂದಿಯ ವಿರುದ್ಧವಾಗಲೀ, ಅವರಿಗೆ ಕುಮ್ಮಕ್ಕು ನೀಡಿದ ಸರ್ಕಾರದ ಬಗ್ಗೆಯಾಗಲೀ ಅಷ್ಟೊತ್ತಿಗಾಗಲೇ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಎಚ್ಚೆಸ್ವಿ ಅವರು ಮಾತನಾಡಲೇ ಇಲ್ಲ. ಆ ಬಳಿಕ ಮಾಧ್ಯಮ ಸಂದರ್ಶನದಲ್ಲಿ ಆ ಬಗ್ಗೆ ಪ್ರಸ್ತಾಪಿಸಿದಾಗಲೂ ತಾವು ‘ಮೌನ ಅನುಸಂಧಾನ ಮಾಡುವುದಾಗಿ’ ಹೇಳಿ ಜಾರಿಕೊಂಡಿದ್ದರು. ಇದೀಗ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲೂ ಕನ್ನಡ ನುಡಿ ಹಬ್ಬದ ವಿರುದ್ಧ ನಡೆದ ಭಯೋತ್ಪಾದಕ ಬೆದರಿಕೆಯ ಬಗ್ಗೆಯಾಗಲೀ ಅದಕ್ಕೆ ಪರೋಕ್ಷ ಬೆಂಬಲ ನೀಡಿದ ಕೇಂದ್ರ ಕಸಾಪ ಅಧ್ಯಕ್ಷರ ನಡೆಯ ಬಗ್ಗೆಯಾಗಲೀ ಮೆಲುದನಿಯಲ್ಲೂ ಅವರು ಪ್ರಸ್ತಾಪಿಸಲಿಲ್ಲ. ಕನಿಷ್ಠ ಕೆ ನೀಲಾ ಅವರಂಥವರು ವೇದಿಕೆಯಲ್ಲಿ ಪ್ರಸ್ತಾಪಿಸಿದಾಗಲೂ ಅದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ.
ಹಾಗೇ ಆನೆಗುಂದಿ ಉತ್ಸವದಲ್ಲಿ ಸಿಎಎ-ಎನ್ ಆರ್ ಸಿ ಪರ ಕವಿತೆ ವಾಚಿಸಿದ ಕವಿ ಸಿರಾಜ್ ಬಿಸರಹಳ್ಳಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ ಪೊಲೀಸರ ಕ್ರಮದ ಬಗ್ಗೆಯಾಗಲೀ, ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವುದು ಹೇಗೆ ದೇಶದ್ರೋಹವಾಗುತ್ತದೆ? ಎಂಬ ಬಗ್ಗೆಯಾಗಲೀ ಕನ್ನಡದ ಸಾಹಿತ್ಯದ ಸ್ವಾಯತ್ತತೆ, ಮತ್ತು ಅನನ್ಯತೆಯ ಪರ ವಕಾಲತು ವಹಿಸಬೇಕಾಗಿದ್ದ ಎಚ್ಚೆಸ್ವಿ ಅವರದ್ದು ‘ಮೌನ ಅನುಸಂಧಾನ’ವೇ ಆಗಿತ್ತು. ಅಲ್ಲದೆ, ಅದೇ ಕಲ್ಯಾಣ ಕರ್ನಾಟಕದ ಬೀದರಿನಲ್ಲಿ ಸಿಎಎ ಪರ ಘೋಷಣೆ ಕೂಗಿದ ಶಾಲಾ ಮಕ್ಕಳ ಪೋಷಕರು ಮತ್ತು ಶಿಕ್ಷಕಿಯರ ವಿರುದ್ಧ ದೇಶದ್ರೋಹದ ಪ್ರಕರಣ ಹಾಕಿ ಬಂಧಿಸಿ ಜೈಲಿಗೆ ಹಾಕಿರುವ ಸರ್ಕಾಕರದ ಸರ್ವಾಧಿಕಾರಿ ಧೋರಣೆಯ ಬಗ್ಗೆಯಾಗಲೀ, ಪ್ರಾಥಮಿಕ ಶಾಲೆ ಮಕ್ಕಳ ವಿರುದ್ಧ ಪೊಲೀಸರು ನಡೆಸುತ್ತಿರುವ ನಿರಂತರ ದೌರ್ಜನ್ಯದ ಬಗ್ಗೆಯಾಗಲೀ ಈ ‘ಮಕ್ಕಳ ಮೆಚ್ಚಿನ ಕವಿ’ಗಳು ಅಪ್ಪಿತಪ್ಪಿಯೂ ಪ್ರಸ್ತಾಪಿಸಲಿಲ್ಲ.
ಹಾಗೇ ಕನ್ನಡದ ಚಿಂತಕರು, ಸಾಹಿತಿ ಬರಹಗಾರರಿಗೆ ಮತಾಂಧ ಶಕ್ತಿಗಳ ಬೆದರಿಕೆ, ಕೊಲೆ, ಕೊಲೆ ಸಂಚಿನ ಬಗ್ಗೆಯಾಗಲೀ, ಕನ್ನಡತನದ ಹತ್ಯೆಯ ಪ್ರಯತ್ನಗಳಿಗೆ ಬಲಪಂಥೀಯ ಶಕ್ತಿಗಳು ನಡೆಸಿದ ಮತ್ತು ನಡೆಸುತ್ತಿರುವ ಯತ್ನಗಳ ಬಗ್ಗೆ ಬಿಜೆಪಿ ಸರ್ಕಾರದ ಮೌನದ ಬಗ್ಗೆ ಕೂಡ ಎಚ್ಚೆಸ್ವಿ ಮಾತನಾಡಲಿಲ್ಲ. ಪಂಪನಿಂದ ಚಂಪಾವರೆಗೆ ವ್ಯವಸ್ಥೆಯ ಲೋಪಗಳನ್ನು ಎತ್ತಿಹಿಡಿಯುವ, ಸರ್ವಾಧಿಕಾರಿ, ದಬ್ಬಾಳಿಕೆಯ ಪ್ರಭುತ್ವಗಳ ವಿರುದ್ಧ ಸದಾ ಗುಡುಗುತ್ತಾ, ಜನಸಾಮಾನ್ಯರ ದನಿಯಾಗಿ ಸಾಹಿತ್ಯವನ್ನು ಉಳಿಸಿಕೊಂಡು ಬಂದ ಹೆಗ್ಗಳಿಕೆ ಕನ್ನಡದ್ದು. ಅದು ಕನ್ನಡತನದೇ ಮೂಲ ಸ್ವರೂಪ ಕೂಡ. ಆದರೆ, ಸಮ್ಮೇಳನದ ಸರ್ವಾಧ್ಯಕ್ಷರು ಕನ್ನಡತನದ ಆ ಕೆಚ್ಚಿನ ಬಗ್ಗೆಯಾಗಲೀ, ಈಗ ಸರ್ಕಾರವೇ ಜೀವವಿರೋಧಿಯಾಗಿ, ಅಸಹಿಷ್ಣತೆಯ ದಾರಿ ಹಿಡಿದಿರವಾಗ, ಕನ್ನಡತನಕ್ಕೇ ಬೆದರಿಕೆ ಒಡ್ಡುತ್ತಿರುವಾಗ ಅಂತಹ ಕನ್ನಡತನದ ಕೆಚ್ಚು ಪ್ರದರ್ಶಿಸುವ ಜರೂರು ಇದೆ ಎಂಬುದು ಕವಿಗಳಿಗೆ ನೆನಪಾಗಲೇ ಇಲ್ಲ!
ಇನ್ನು ಕನ್ನಡ ಭಾಷೆ ಮತ್ತು ನಾಡಿನ ಸ್ವಾಯತ್ತತೆಯ ವಿಷಯದಲ್ಲೂ, ತೀರಾ ಹೇಳಲೇಬೇಕಾದ ಮಾತುಗಳನ್ನೂ ಅವರು ಹೇಳದೇ ಹೋದರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಪ್ರಯತ್ನಗಳ ಬಗ್ಗೆಯಾಗಲೀ, ಕನ್ನಡ ಧ್ವಜದ ವಿಷಯದಲ್ಲಿ ಈ ಸರ್ಕಾರದ ವಿರೋಧದ ಬಗ್ಗೆಯಾಗಲೀ ಅವರು ಚಕಾರವೆತ್ತಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಿಗೆ ಅನುದಾನ ಸ್ಥಗಿತದ ಬಗ್ಗೆ ಕೂಡ ಅವರು ಮಾತನಾಡಲಿಲ್ಲ. ಕಳಸಾ ಬಂಡೂರಿ ಯೋಜನೆ ಸೇರಿದಂತೆ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ನೆಲ-ಜಲದ ವಿಷಯಗಳನ್ನೂ ಅವರು ಪ್ರಸ್ತಾಪಿಸಲಿಲ್ಲ. ಬ್ಯಾಂಕಿಂಗ್, ರೈಲ್ವೆ ಮುಂತಾದ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ನೀಡಲು ಸತಾಯಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಮಾತನಾಡಲಿಲ್ಲ.
ಆ ಮೂಲಕ ಜನರ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ, ನಾನು ನನ್ನ ಬಗ್ಗೆ ಮಾತನಾಡುತ್ತೇನೆ ಎಂಬ ತಮ್ಮ ಮಾತಿಗೆ ಬದ್ಧರಾಗಿಯೇ ಉಳಿದರು. ಆದರೆ, ಕನ್ನಡದ ನೆಲ-ಜಲ, ಭಾಷೆ- ಸಾಹಿತ್ಯ, ಸಂಸ್ಕೃತಿಗಳ ಜೊತೆಗೆ ಕನ್ನಡ ನಾಡು ಮತ್ತು ಕನ್ನಡತನ ಎದುರಿಸುತ್ತಿರುವ ದಬ್ಬಾಳಿಕೆ, ಏಕ ಭಾಷೆ- ಏಕ ಸಂಸ್ಕೃತಿ ಹೇರಿಕೆಯ ಅಪಾಯ, ಸವಾಲು-ಬಿಕ್ಕಟ್ಟುಗಳ ಬಗ್ಗೆ ಮಾತನಾಡದೇ, ಕೇವಲ ಶಿಕ್ಷಣ ಮತ್ತು ಸಂವಹನದ ಬಗ್ಗೆ ಮಾತ್ರ ಪ್ರಸ್ತಾಪಿಸಿ(ಅದೂ ದಿಟ್ಟ ನಿಲುವು ಮತ್ತು ಖಡಾಖಂಡಿತ ಹೇಳಿಕೆಗಳಿಲ್ಲ!) ಆಳುವ ಮಂದಿಗೆ ಇರಿಸುಮುರಿಸು ತರದೇ ಜಾರಿಕೊಳ್ಳುವ ಇಂತಹ ಪರಿಗೆ ಜನರ ತೆರಿಗೆ ಹಣದಲ್ಲಿ ಅದ್ಧೂರಿ ಸಮ್ಮೇಳನ ಬೇಕೆ? ಎಂಬ ಪ್ರಶ್ನೆ ಕಾಡದೇ ಇರದು.
ಆದರೆ, ಈ ನೆಲದ ಜನರ ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸಲು ನಿರಾಕರಿಸುವ ಕವಿಗಳು, ಸಂಪರ್ಕ ಭಾಷೆಯಾಗಿ ಸಂಸ್ಕೃತ ಅಥವಾ ಪ್ರಾಕೃತ ಬರಲಿ ಎನ್ನುವ ಮೂಲಕ, ನಿಜವಾಗಿಯೂ ತಮ್ಮ ಒಲವು ಏನು ಎಂಬುದನ್ನೂ ಪರೋಕ್ಷವಾಗಿ ಹೇಳಿದ್ದಾರೆ! ಇಂಗ್ಲಿಷ್ ವಿರೋಧಿಸುವ ಭರದಲ್ಲಿ, ಇಂಗ್ಲಿಷ್ ಅನ್ನದ ಭಾಷೆಯಲ್ಲ ಎಂಬ ಅವರ ಹೇಳಿಕೆ ಪ್ರಾಯೋಗಿಕವಾಗಿ ಎಷ್ಟು ಸತ್ಯ ಎಂಬ ಚರ್ಚೆಯ ಜೊತೆಗೇ, ದೇಶದ ಸಂಪರ್ಕ ಭಾಷೆಯಾಗಿ ಈಗಾಗಲೇ ಸತ್ತ ಭಾಷೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮತ್ತು ತನ್ನೊಂದಿಗೆ ಮಡಿ-ಮೈಲಿಗೆಯ ಬೇಲಿ, ತಾರತಮ್ಯದ, ಶೋಷಣೆಯ ಬಳುವಳಿಯನ್ನೇ ಹೊತ್ತುಕೊಂಡಿರುವ ಸಂಸ್ಕೃತವನ್ನು ಬಳಸುವ ಬಗ್ಗೆ ಕರೆ ನೀಡಿರುವುದು ಕನ್ನಡವೇ ಶಕ್ತ, ಎಲ್ಲಾ ಜ್ಞಾನ, ಸಂವಹನದ ಭಾಷೆಯಾಗಿ ಕನ್ನಡವನ್ನೇ ಬಳಸಿ ಬಲಪಡಿಸುವ ಎಂಬ ಕನ್ನಡತನಕ್ಕೆ ವಿರುದ್ಧವಲ್ಲವೇ? ಎಂಬ ಚರ್ಚೆಗೂ ಕವಿ ಮಾತುಗಳು ಚಾಲನೆ ನೀಡಿವೆ.
ಅದರಲ್ಲೂ ಸಮ್ಮೇಳನದ ಉದ್ಘಾಟನೆ ವೇಳೆ ಕವಿಗಳು ತೊಟ್ಟಿದ್ದ ಕೇಸರಿ ಬಣ್ಣದ ದಿರಿಸು ಮತ್ತು ಅವರ ಈ ಸಂಸ್ಕೃತ ವ್ಯಾಮೋಹವನ್ನು ತಾಳೆ ಹಾಕಿದರೆ, ಅವರು ಯಾರನ್ನು ಮೆಚ್ಚಿಸುವ ಉಮೇದಿನಲ್ಲಿದ್ದಾರೆ. ಯಾರ ಬಿಕ್ಕಟ್ಟಿನ ಬಗ್ಗೆ ದನಿಯಾಗುತ್ತಿದ್ದಾರೆ ಎಂಬುದು ಅರ್ಥವಾಗದ ಸಂಗತಿಯೇನಲ್ಲ! ಹಾಗಾಗಿ, ಕನ್ನಡಿಗರ ಪಾಲಿಗೆ ಈ ಬಾರಿಯ ಸಮ್ಮೇಳನದ ಮೊದಲ ದಿನ ಕನ್ನಡತನದ ಪರ ದನಿ ಎತ್ತಿದ ಕೆ ನೀಲಾ ಅವರಂಥ ಬೆರಳೆಣಿಕೆ ಸಾಹಿತಿ-ಲೇಖಕರ ಮಾತು ಹೊರತುಪಡಿಸಿ, ಮೆಲುಕುಹಾಕಬಲ್ಲದ್ದು ತೊಗರಿ ನೆಲದ ಊಟದ ಸೊಗಡೇ!