ನಾಳೆ ಅಂದರೆ ಫೆಬ್ರವರಿ 8 ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ ನಡೆದಿದ್ದು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೂ ಭಾರತೀಯ ಜನತಾ ಪಕ್ಷಕ್ಕೂ ತೀವ್ರ ಹಣಾಹಣಿ ಏರ್ಪಟ್ಟಿದೆ. ಈ ಚುನಾವಣೆಗಳ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಧಿನಾಯಕ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದ ಹಿಂದೂ ಪತ್ರಿಕೆಯ ಅಮಿತ್ ಬರುವಾ ಸಂದರ್ಶನ ನಡೆಸಿದ್ದಾರೆ. ಟ್ರೂಥ್ ಇಂಡಿಯಾ ಕನ್ನಡದ ಓದುಗರಿಗಾಗಿ ಅದನ್ನು ಕನ್ನಡೀಕರಿಸಿ ಇಲ್ಲಿ ಪ್ರಕಟಿಸಿದ್ದೇವೆ- ಸಂ
ಇದು ಆಮ್ ಆದ್ಮಿ ಪಕ್ಷದ (AAP) ದಾಖಲೆಯ ಆಡಳಿತದ ವರ್ಸಸ್ ಐಡೆಂಟಿಟಿ ಮತ್ತು ಧರ್ಮಗಳ ವಿಷಯಗಳನ್ನು ಆಧರಿಸಿದ ಚುನಾವಣೆಯೇ?
ಅರವಿಂದ್ ಕೇಜ್ರಿವಾಲ್: ದೇಶದಲ್ಲಿ ಕಳೆದ 70 ವರ್ಷಗಳಲ್ಲಿ ನಡೆದಿರುವ ಕೆಲಸ ಕಾರ್ಯಕ್ಕೆ ಹೋಲಿಸಿದರೆ AAP ಮಾಡಿರುವ ಕೆಲಸ ಅಮೋಘ. ಅವರು (ಇತರ ರಾಜಕೀಯ ಪಕ್ಷಗಳು ನಡೆಸಿರುವ ಸರ್ಕಾರಗಳು) ವಿದ್ಯುತ್, ನೀರು, ಶಾಲೆಗಳು ಮತ್ತು ಆಸ್ಪತ್ರೆಯ ವ್ಯವಸ್ಥೆಗಳನ್ನು ನಾಶ ಮಾಡಿಬಿಟ್ಟಿದ್ದಾರೆ. ಜನರೂ ಸಹ ಸರ್ಕಾರವೊಂದು ಒಳ್ಳೇ ಕೆಲಸ ಮಾಡಬಹುದು ಎಂಬ ಭರವಸೆಯನ್ನೇ ಕಳೆದುಕೊಂಡಿದ್ದರು. ನಾವು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸಗಳಿಗೆ ಅವರ (ಬಿಜೆಪಿ ಸೇರಿದಂತೆ ವಿರೋಧಪಕ್ಷಗಳು) ಬಳಿ ಉತ್ತರವಿಲ್ಲ. ನಮ್ಮ ಕೆಲಸದಲ್ಲಿ ಲೋಪ ಕಂಡುಹಿಡಿಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಬೂತಕನ್ನಡಿ ಹಿಡಿದು ಹುಡುಕುತ್ತಿದ್ದಾರೆ. ಆದರೂ ಅವರಿಗೆ ಸಿಕ್ಕಿರುವುದು ಏನೂ ಇಲ್ಲ. ಅವರಿಗೆ ಬೇರಾವುದೇ ಚರ್ಚೆ ಮಾಡಲಾಗುತ್ತಿಲ್ಲ. ಈಗ ನಮ್ಮ ನಾವು ಮಾಡಿದ ಸಾಧನೆಗಳಿಂದ ಅವರು ಜನರ ಗಮನವನ್ನು ಬೇರೆಡೆಗೆ ಗಮನ ಸೆಳೆಯಬೇಕಿದೆ. ಒಮ್ಮೊಮ್ಮೆ ಶಾಹೀನ್ ಬಾಗ್ ತರುತ್ತಾರೆ; ಮತ್ತೊಮ್ಮೆ ಹಿಂದು-ಮುಸ್ಲಿಮ್ ಎನ್ನುತ್ತಾರೆ.
ಈಗ ಕಳೆದ ಐದು ವರ್ಷಗಳಿಂದ ತಾವು ದೆಹಲಿಯ ಮುಖ್ಯಮಂತ್ರಿಯಾಗಿದ್ದೀರಿ. ಮತ್ತೊಮ್ಮೆ ಗೆದ್ದು ಅಧಿಕಾರಕ್ಕೆ ಬಂದರೆ ದೆಹಲಿಯ ಬಗೆಗಿನ ತಮ್ಮ ಕಣ್ಣೋಟವೇನು?
ಕೇಜ್ರಿವಾಲ್: ಕಳೆದ ಐದು ವರ್ಷಗಳ ನಮ್ಮ ಆಳ್ವಿಕೆಯು, ಉತ್ತಮ ಕೆಲಸ ನಡೆಯುತ್ತದೆ ಎಂಬ ಭರವಸೆಯನ್ನು ಇಡೀ ರಾಷ್ಟ್ರಕ್ಕೇ ಕೊಟ್ಟಿದೆ. ನಮ್ಮ ಕೈಯಿಂದ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿದೆ ಎಂದಾದರೆ ಇಷ್ಟು ವರ್ಷಗಳ ಕಾಲ ಉದ್ದೇಶಪೂರ್ವಕವಾಗಿಯೇ ಅವುಗಳನ್ನು ನಿಕೃಷ್ಟವಾಗಿ ಇರಿಸಲಾಗಿತ್ತು ಎಂದು ಅದರ ಅರ್ಥ. ಕಳೆದ 70 ವರ್ಷಗಳಿಂದಲೂ ನಮ್ಮನ್ನು ಬಡವರನ್ನಾಗಿಸಿ ಅನಕ್ಷರಸ್ಥರನ್ನಾಗಿಯೇ ಉಳಿಸಲಾಗಿತ್ತು. ಐದೇ ವರ್ಷಗಳಲ್ಲಿ ಇದನ್ನೆಲ್ಲಾ ಮಾಡಲು ಸಾಧ್ಯವಾಗಿದೆ ಎಂದರೆ ಇದೇ ಕೆಲಸವನ್ನು 70 ವರ್ಷಗಳಲ್ಲೂ ಸಹ ಮಾಡಬಹುದಾಗಿತ್ತು. AAP ಕಳೆದ ಐದು ವರ್ಷಗಳಲ್ಲಿ ನಡೆಸಿದ ಆಡಳಿತವು ದೇಶದಲ್ಲಿ ಈ ಭರವಸೆಯನ್ನು ಮೂಡಿಸಿರುವುದು ಒಂದು ಮಹತ್ತರ ವಿಷಯವೇ – ನಿಜ ಹೇಳಬೇಕೆಂದರೆ ಇದು ಒಂದು ಹೊಸ ಬಗೆಯ ರಾಜಕಾರಣವೇ ಆಗಿದೆ.
ಇತರ ಸರ್ಕಾರಗಳೂ ಸಹ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿವೆ. ಆದರೆ ಇದನ್ನು ಸಾಧಿಸಲು ತಮಗೆ ಸಾಧ್ಯವಾಗಿದ್ದು ಹೇಗೆ?
ಕೇಜ್ರಿವಾಲ್: ನಮ್ಮ ಉದ್ದೇಶದಲ್ಲಿ ನಾವು ಪ್ರಾಮಾಣಿಕರಾಗಿದ್ದಾಗ (ಸ್ವಚ್ಛವಾಗಿರುವುದು) ಮಾತ್ರ ಇದು ಸಾಧ್ಯ ಎನ್ನುವುದು. ನಮಗೂ ಇತರರಿಗೂ ನಡುವಿನ ವ್ಯತ್ಯಾಸ ಇದ್ದದ್ದೇ ನಮಗೂ ಅವರಿಗೂ ಉದ್ದೇಶಗಳೇನಾಗಿದ್ದವು ಎಂಬುದರಲ್ಲಿ. ಅಷ್ಟೇ. ನಾವು ಏನೇ ಕೆಲಸ ಮಾಡಿದರೂ ಹಣ ಮಾಡುವುದಕ್ಕಾಗಿಯೇ ಆದಾಗ ಸಮಸ್ಯೆಗಳನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ, ಇದಕ್ಕೆ ಬದಲಾಗಿ ನಮ್ಮ ಉದ್ದೇಶವೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡವುದು ಎಂದಾಗ ಆಗ ಆ ಸಮಸ್ಯೆ ಕಾಣುವುದೇ ಮತ್ತೊಂದು ರೀತಿ. ಹೀಗಾಗಿ ವ್ಯತ್ಯಾಸ ಇರುವುದೇ ಉದ್ದೇಶದಲ್ಲಿ.
ವಿದ್ಯುಚ್ಛಕ್ತಿ, ನೀರು, ಶಿಕ್ಷಣ ಮತ್ತು ಆರೋಗ್ಯ – ಇವು ನನ್ನ ಆಡಳಿತದ ನಾಲ್ಕು ಯಶಸ್ವಿ ಕ್ಷೇತ್ರಗಳು.
ವಿದ್ಯುಚ್ಛಕ್ತಿ ಬಿಲ್ ಗಳ ಮನ್ನಾ ಅಥವಾ ದೆಹಲಿಯಲ್ಲಿ ಸಾರ್ವಜನಿಕ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಕೊಡುಗೆಗಳನ್ನು ನೀಡಿದ್ದೀರಿ ಎಂಬ ಆಪಾದನೆ ತಮ್ಮ ಮೇಲಿದೆಯಲ್ಲಾ?
ಕೇಜ್ರಿವಾಲ್: ಅದರಲ್ಲಿ ನಮ್ಮ ತಪ್ಪೇನಿದೆ? ನಾನೇನಾದರೂ ಉಚಿತ ಕೊಡುಗೆಗಳನ್ನು ಕೊಟ್ಟು ನಿಮ್ಮ ತೆರಿಗೆಗಳನ್ನು ಹೆಚ್ಚಿಸುತ್ತಿದ್ದರೆ, ನಮ್ಮ ಬಜೆಟ್ ಏನಾದರೂ ಅಪಾಯದ ಅಂಚಿನಲ್ಲಿದ್ದಿದ್ದರೆ, ಅಥವಾ ಉಚಿತ ಸೌಲಭ್ಯಗಳನ್ನು ನೀಡಲು ನಾವೇನಾದರೂ ಸಾಲಗಳನ್ನು ಪಡೆದಿದ್ದರೆ, ಆಗ ಅದು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿತ್ತು. ನಮ್ಮ ಬಜೆಟ್ ಧನಾತ್ಮಕವಾಗಿದೆ. ನಾವು ತೆರಿಗೆಗಳನ್ನು ಶೇ.12ರಿಂದ ಶೇ.5ಕ್ಕೆ ಇಳಿಸಿದರೂ ಯಾವುದೇ ಸಾಲವನ್ನೂ ಪಡೆಯಲಿಲ್ಲ; ನಾವು ಮಾಡಿದ್ದೇನೆಂದರೆ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದೆವು. ಆದ್ದರಿಂದಲೇ ನಾವು ಹಣ ಉಳಿಸಲು ಸಾಧ್ಯವಾಯಿತು. ಈಗ ಜನರಿಗೆ ಸೌಲಭ್ಯ ಕೊಡಲು ಆ ಹಣವನ್ನು ನಾನು ಬಳಸಿದರೆ ಅದರಲ್ಲಿ ತೊಂದರೆ ಏನಿದೆ?
70 ವರ್ಷಗಳಲ್ಲಿ ಏನನ್ನೂ ಮಾಡಲಾಗಿಲ್ಲ ಎಂದು ತಾವು ಹೇಳುವಾಗ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಅವರು ಮಾಡಿದಂತಹ ಕೆಲಸಗಳನ್ನು ತಾವು ಉಪೇಕ್ಷಿಸುತ್ತಿದ್ದೀರಿ ಎನಿಸುವುದಿಲ್ಲವೇ? ಅವುಗಳಲ್ಲಿ ಮೆಟ್ರೊ ಕೂಡ ಸೇರುತ್ತದೆ.
ಕೇಜ್ರಿವಾಲ್ : ಶೀಲಾ ದೀಕ್ಷಿತ್ ಅವರು ಮೂಲಸೌಕರ್ಯಗಳನ್ನು ಖಂಡಿತವಾಗಿಯೂ ಅಭಿವೃದ್ಧಿಪಡಿಸಿದರು; ಅವರು ಬಸ್ ಗಳನ್ನು ಖರೀದಿಸಿದರು, ಮೆಟ್ರೊ ಮತ್ತು ಫ್ಲೈ ಓವರ್ ಗಳನ್ನು ನಿರ್ಮಾಣ ಮಾಡಿದರು. ಆದರೆ ಇವೆಲ್ಲವೂ ಕಾಮನ್ ವೆಲ್ತ್ ಗೇಮ್ಸ್ ಸಂದರ್ಭದಲ್ಲಿ, ಆ ಕೇವಲ ಎರಡು ಮೂರು ವರ್ಷಗಳ ಅವಧಿಯಲ್ಲಿ ಮಾಡಿದ ಕೆಲಸಗಳಾಗಿವೆ. ಹಾಗಾಗಿ ಅದೊಂದು ಅದ್ಭುತ ಅವಧಿಯಾಗಿದೆ.
ಬಿಜೆಪಿ ತನ್ನೆಲ್ಲಾ ದೊಡ್ಡ ದೊಡ್ಡ ತುಪಾಕಿಗಳನ್ನು ತಮ್ಮ ವಿರುದ್ಧ ಎಸೆದಿದೆ – ಪ್ರಧಾನ ಮಂತ್ರಿ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಹೀಗೇಕೆ ಎಂದು ತಮಗನಿಸುತ್ತದೆ?
ಕೇಜ್ರಿವಾಲ್: ಅವರೆಣಿಸಿದಂತೆ ಯಾವುದೊಂದೂ ಕೈಗೂಡಲಿಲ್ಲ. ಮೊದಲಿಗೆ, ಅಮಿತ್ ಶಾ ಎಲ್ಲಾ ಪಕ್ಷಗಳನ್ನೂ ನಮ್ಮ ವಿರುದ್ಧ ಒಟ್ಟುಗೂಡಿಸಿದರು. ಇದೇ ಮೊದಲ ಬಾರಿಗೆ ಬಿಜೆಪಿ, ಎಲ್ ಜೆಪಿ, ಜೆಡಿ(ಯು) ಮತ್ತು ಅಕಾಲಿ ದಳ ಇವೆಲ್ಲವೂ ಒಟ್ಟಾಗಿ ಸೇರಿಕೊಂಡು ಚುನಾವಣೆಯನ್ನು ಎದುರಿಸುತ್ತಿರುವುದು. ಅದು ಕೆಲಸ ಮಾಡಲಿಲ್ಲ. ಆನಂತರ ಅವರು 200 ಸಂಸದರನ್ನು ಕರೆ ತಂದರು. ಅದೂ ಕೆಲಸಕ್ಕೆ ಬರಲಿಲ್ಲ. ಇದಾದ ಮೇಲೆ 70 ಸಚಿವರು ಮತ್ತು 10 ಮುಖ್ಯಮಂತ್ರಿಗಳು ಬಂದರು. ಅದೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವರು ಅವಾಚ್ಯ ನಿಂದನೆಗಳನ್ನು ಆರಂಭಿಸಿದರು. ಆದರೆ ಯಾರೇ ಏನೇ ಮಾಡಿದರೂ ಕಾಯಕದ ರಾಜಕಾರಣ ಅತ್ಯಂತ ಪ್ರಭಾವಶಾಲಿ ಎಂದು ಇದು ತೋರಿಸುತ್ತದೆ.
ಹಾಗಾದರೆ ತಮ್ಮ ಕೆಲಸಕಾರ್ಯದ ಆಧಾರದ ಮೇಲೇ ಈ ಚುನಾವಣೆಯಲ್ಲಿ ತಮಗೆ ಗೆಲುವು ಸಾಧಿಸಲು ಸಾಧ್ಯ ಎಂದು ತಾವು ಹೇಳುತ್ತಿದ್ದೀರಾ?
ಕೇಜ್ರಿವಾಲ್.: ಜನ ಗಟ್ಟಿ ನಿಶ್ಚಯ ಮಾಡಿಕೊಂಡಿದ್ದಾರೆ ಎಂದು ನನಗನಿಸುತ್ತಿದೆ. ನಾವು ಕೈಗೊಂಡಿರುವ ಕೆಲಸ ಕಾರ್ಯಗಳನ್ನು ಜನ ಮೆಚ್ಚುತ್ತಿದ್ದಾರೆ.
ತಮ್ಮ ಸಾರ್ವಜನಿಕ ಸಭೆಗಳಲ್ಲಿ ತಾವು ‘ಇಂಕ್ವಿಲಾಬ್ ಜಿಂದಾಬಾದ್’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಒಟ್ಟಿಗೇ ಕೂಗುತ್ತೀರಿ. ಇದು ಭಾರತದ ರಾಜಕಾರಣದಲ್ಲಿ ಹೊಸ ವಿದ್ಯಮಾನವಾಗಿದೆ. ಇದರಿಂದ ತಾವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ?
ಅ.ಕೇ.: ನಮ್ಮ ಪಕ್ಷವು ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಉದಯಿಸಿದ್ದು. ಅದು ವ್ಯಾಪಕವಾಗಿ ಸ್ವೀಕೃತವಾದ ಒಂದು ರಾಷ್ಟ್ರವಾದಿ ಚಳವಳಿಯಾಗಿತ್ತು – ಎಡ, ಬಲ ಮತ್ತು ಮಧ್ಯಮಪಂಥೀಯರು, ಹೀಗೆ ಎಲ್ಲಾ ತರದ ಜನರೂ ಇದರ ಭಾಗವಾಗಿದ್ದರು. ದೇಶಭಕ್ತಿ ಎಂದರೇನೆಂದು ದೇಶವೇ ಈಗ ತೀರ್ಮಾನಿಸಬೇಕಿದೆ. ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ದೇಶಭಕ್ತಿಯೋ ಅಥವಾ ಜನರನ್ನು ಹಿಂದು- ಮುಸ್ಲಿಮ್-ಕ್ರೈಸ್ತ-ಸಿಖ್ ಎಂದು ವಿಭಜಿಸುವುದು ದೇಶಭಕ್ತಿಯೋ? ಜನರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ದೇಶಭಕ್ತಿಯೋ ಇಲ್ಲಾ ಕೇಜ್ರಿವಾಲ್ ಒಬ್ಬ ಟೆರರಿಸ್ಟ್ ಎಂದು ಕರೆಯುವುದು ದೇಶಭಕ್ತಿಯೋ? ರಸ್ತೆಗಳ ನಿರ್ಮಾಣ ಮಾಡುವುದು ದೇಶಭಕ್ತಿಯೋ ಅಥವಾ ಕೇಜ್ರಿವಾಲ್ ನನ್ನು ಅಸಭ್ಯವಾಗಿ ನಿಂದಿಸುವುದು ದೇಶಭಕ್ತಿಯೋ? ವಿದ್ಯುಚ್ಛಕ್ತಿಯನ್ನು ನೀಡುವುದು ದೇಶಭಕ್ತಿಯೋ ಅಥವಾ (ಜನರಿಗೆ) ‘ಗೋಲೀ ಮಾರೋ’ ಎನ್ನುವುದು ದೇಶಭಕ್ತಿಯೋ? ಜನರೇ ಅದನ್ನು ನಿರ್ಧರಿಸಬೇಕು.
‘ಕೇಂದ್ರದಲ್ಲಿ ಮೋದಿ’ ಮತ್ತು ‘ದೆಹಲಿಯಲ್ಲಿ ಕೇಜ್ರಿವಾಲ್’ ಎಂದು ಹೇಳುವ ಬಹಳ ಜನರಿದ್ದಾರೆ. ಮೋದಿ ಮತ್ತು ಕೇಜ್ರಿವಾಲ್ ಇಬ್ಬರನ್ನೂ ಬೆಂಬಲಿಸುವ ಒಂದೇ ಸಮೂಹವಿದೆ ಎಂಬುದು ಇದರ ಅರ್ಥವೇನು?
ಕೇಜ್ರಿವಾಲ್: ನಮ್ಮ ಬೆಂಬಲಿಗರ ಸಮೂಹದಲ್ಲಿ ಪ್ರತಿಯೊಬ್ಬರೂ ಇದ್ದಾರೆ. ನಾನು ನಿಮ್ಮ ಮಗುವಿಗೆ ವಿದ್ಯೆ ನೀಡುತ್ತೇನೆಂದು ಹೇಳುತ್ತೇನೆ. ‘ನನ್ನ ಮಗುವಿಗೆ ಶಿಕ್ಷಣ ನೀಡಬೇಡಿ’ಎಂದು ಹೇಳುವಂತವರು ಯಾರಾದರೂ ಇದ್ದಾರೇನು, ಹೇಳಿ ನೋಡೋಣ. ನಾನು ಕಾಂಗ್ರೆಸ್ಸಿಗನ ಮಗುವಿಗೂ ಬಿಜೆಪಿಯವನ ಮಗುವಿಗೂ ಶಿಕ್ಷಣ ನೀಡುತ್ತೇನೆ. ನಾನು ಹಿಂದೂ ಮಗುವಿಗೂ ವಿದ್ಯಾಭ್ಯಾಸ ಕಲ್ಪಿಸುತ್ತೇನೆ, ಮುಸ್ಲಿಮ್ ಮಗುವಿಗೂ ಕೊಡುತ್ತೇನೆ; ಎಲ್ಲರ ಮಕ್ಕಳಿಗೂ ಶಿಕ್ಷಣ ಒದಗಿಸುತ್ತೇನೆ. ನಾನು ಎಲ್ಲರಿಗೂ ಚಿಕಿತ್ಸೆ ಕೈಗೆಟುಕುವಂತೆ ಮಾಡುತ್ತೇನೆ. ಇದು ನಿಜವಾದ ದೇಶಭಕ್ತಿ. ಇದರ ಮೂಲಕವೇ 21ನೇ ಶತಮಾನದ ಭಾರತವು ಸೃಷ್ಟಿಯಾಗುತ್ತದೆ. ಆಗ ನಮ್ಮ ದೇಶವು ವಿಶ್ವದಲ್ಲೇ ಅತಿ ಮುಂದುವರೆದ ದೇಶವಾಗಬಹುದು. ನನಗಿದು ಮನದಟ್ಟಾಗಿದೆ. ನಮ್ಮ ಜನ ಸಾಕಷ್ಟು ಬುದ್ಧಿವಂತರು. ಸಮಸ್ಯೆ ಏನೆಂದರೆ ನಮ್ಮ ದೇಶದಲ್ಲಿನ ವ್ಯವಸ್ಥೆಗಳು ಚೆನ್ನಾಗಿಲ್ಲ. ನಮ್ಮ ರಾಜಕಾರಣ ಸರಿಯಿಲ್ಲ. ಅವುಗಳನ್ನು ಸರಿಪಡಿಸಬೇಕು. ಈ ವ್ಯವಸ್ಥೆಗಳನ್ನು ಬದಲಿಸುವ ಅಗತ್ಯವಿದೆ ಎಂದು ನಾನು ಹೇಳಿದರೆ ನನ್ನನ್ನು ಅರಾಜಕತಾವಾದಿ ಎಂದು ಕರೆದುಬಿಡುತ್ತಾರೆ.
ಸಿಎಎ-ಎನ್ ಆರ್ ಸಿ ವಿಷಯದ ಕುರಿತು ದೇಶವು ಇಬ್ಭಾಗವಾಗಿದೆ. ಅದರ ಸುತ್ತಲು ಜರುಗುತ್ತಿರುವ ರಾಜಕೀಯವನ್ನು ತಾವು ಹೇಗೆ ಗ್ರಹಿಸುವಿರಿ?
ಕೇಜ್ರಿವಾಲ್.: CAA-NRC ಮೂಲಕ 21ನೇ ಶತಮಾನದ ಭಾರತವನ್ನು ತಲುಪಲು ಸಾಧ್ಯವಿಲ್ಲ ಎಂದು ನಾನು ಪದೇಪದೇ ಹೇಳಿದ್ದೇನೆ. ಅಂತಹ ಭಾರತವನ್ನು ನಾವು ಕಾಣಲು ಸಾಧ್ಯವಾಗುವುದು ನಾವು ಕೈಗಾರಿಕೆಗಳನ್ನು ಹೊಂದಿದಾಗ, ಅಂಗಡಿ ಮುಂಗಟ್ಟುಗಳನ್ನು ತೆರೆದಾಗ, ಜನರಿಗೆ ಉದ್ಯೋಗಗಳು ದೊರಕಿದಾಗ, ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದೆ ಸಾಗಿದಾಗ, ನಾವು ಸಂಶೋಧನೆ ನಡೆಸಿದಾಗ, ಆಗ ಮಾತ್ರ 21ನೇ ಶತಮಾನದ ಭಾರತವು ನನಸಾಗುತ್ತದೆ.
ತಮ್ಮ ಮೊಹಲ್ಲಾ ಆರೋಗ್ಯ ಕೇಂದ್ರಗಳು ಮೆಚ್ಚುಗೆ ಗಳಿಸಿವೆ. ಇನ್ನೊಂದು ಅವಧಿಗೆ ಅವಕಾಶ ದೊರೆತರೆ ದೆಹಲಿಯ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳ ಸಮಸ್ಯೆಯನ್ನೂ ಬಗೆಹರಿಸುವಿರಾ?
ಕೇಜ್ರಿವಾಲ್: ನಮ್ಮ 35 ಆಸ್ಪತ್ರೆಗಳೂ ಸುಧಾರಿಸಿವೆ. ಈಗ ಜನದಟ್ಟಣೆ ಒಂದು ಸಮಸ್ಯೆಯಾಗಿದೆ. ಇದನ್ನೂ ಸರಿಪಡಿಸುತ್ತೇವೆ. ಅನೇಕ ಹೊಸ ಆಸ್ಪತ್ರೆಗಳನ್ನೂ ತೆರೆಯುವ ಹಾದಿಯಲ್ಲಿದ್ದೇವೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಅವು ಪ್ರಾರಂಭವಾಗಲಿವೆ.
ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸಲು ತಾವು ಸಮ-ಬೆಸ ಯೋಜನೆಯನ್ನು ಆರಂಭಿಸಿದಿರಿ. ಆದರೆ ಇನ್ನೂ ಗಾಳಿಯ ಗುಣಮಟ್ಟ ತೀರಾ ಭಯಂಕರವಾಗಿಯೇ ಇದೆ. ಇದನ್ನು ಸರಿಪಡಿಸಲು ತಮ್ಮ ಯೋಜನೆ ಏನು?
ಧೂಳಿನಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ನಾವು ವ್ಯಾಕ್ಯೂಮ್ ಕ್ಲೀನಿಂಗ್ ಮಾಡಲಿದ್ದೇವೆ ಮತ್ತು ಹೊಸ ಬಸ್ ಗಳನ್ನು ಸಂಚಾರಕ್ಕೆ ತಂದು ಸಾರಿಗೆ ಸೌಕರ್ಯಗಳನ್ನು ಸುಧಾರಿಸಲಿದ್ದೇವೆ. ಇದರಿಂದಾಗಿ ದ್ವಿಚಕ್ರ ವಾಹನ ಬಳಕೆ ಕಡಿಮೆಯಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆಯಾ ಕಾಲಘಟ್ಟದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಮೂಲಗಳ ಬಗ್ಗೆಯೂ ನಾವು ತಿಳಿಯುವ ಅಗತ್ಯವಿದೆ. ಅದರ ಅರಿವಿಲ್ಲದೆ ನಾನು ಒಬ್ಬ ಆಡಳಿತಗಾರನಾಗಿ ಕಾರ್ಯ ನಿರ್ವಹಿಸಲಾರೆ. ಏಪ್ರಿಲ್ 1ರಿಂದ ಒಂದು ಪೂರ್ಣಕಾಲದ ಲ್ಯಾಬ್ ಅನ್ನು ಪ್ರಾರಂಭಿಸಲಿದ್ದೇವೆ. ಆ ಸಮಯದಲ್ಲಿ ಮಾಲಿನ್ಯಕ್ಕೆ ಕಾರಣವೇನು ಎಂಬುದನ್ನು ಅಲ್ಲಿಂದ ನಾನು ತಿಳಿಯಲಿದ್ದೇನೆ. ಆಗ ಅಂತಹ ಚಟುವಟಿಕೆಯನ್ನು ನಾವು ಸ್ಥಗಿತಗೊಳಿಸಬಹುದು.
ದೆಹಲಿ ಸರ್ಕಾರವನ್ನು ಹೇಗೆ ನಡೆಸಬೇಕು ಎಂಬ ವಿಷಯದಲ್ಲಿ ತಾವು ಲೆಫ್ಟೆನೆಂಟ್ ಗವರ್ನರ್ ಮತ್ತು ಕೇಂದ್ರ ಸರ್ಕಾರದ ಜೊತೆ ಗಂಭೀರ ಸಂಘರ್ಷಕ್ಕಿಳಿದಿದ್ದಿರಿ. ಐದು ವರ್ಷಗಳು ಅಧಿಕಾರ ನಡೆಸಿದ ನಂತರ, ದೆಹಲಿಗೆ ಪರಿಪೂರ್ಣವಾಗಿ ರಾಜ್ಯದ ಸ್ಥಾನಮಾನ ಎಂದಾದರೂ ಸಿಗಬಹುದೆಂದು ತಾವು ಭಾವಿಸುತ್ತೀರಾ?
ಕೇಜ್ರಿವಾಲ್: ದೆಹಲಿಗೆ ಸಂಪೂರ್ಣವಾಗಿ ರಾಜ್ಯದ ಸ್ಥಾನಮಾನ ನೀಡುವ ಸಮಯ ಬಂದಿದೆ ಎಂಬುದು ನನ್ನ ಅಭಿಮತ. ಇದನ್ನು ಕೇಂದ್ರ ಸರ್ಕಾರವು ಅರಿತುಕೊಳ್ಳಬೇಕಿದೆ. ಎಲ್ಲರಿಗೋಸ್ಕರ ದೆಹಲಿಯನ್ನು ಪರಿಪೂರ್ಣವಾದ ರಾಜ್ಯವನ್ನಾಗಿಸಬೇಕು.
ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಕುಗ್ಗಿಸುವುದನ್ನು ತಾವು ಬೆಂಬಲಿಸಿದಿರಿ. ವಿರೋಧಪಕ್ಷವಾದ ಕಾಂಗ್ರೆಸ್ ಪಕ್ಷವು ಈಗ ತಾವು ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ಕೇಳುವುದನ್ನು ಇಬ್ಬಗೆಯ ನೀತಿ ಎಂದು ಕರೆಯುತ್ತದೆ.
ಹಾಗೇನೂ ಅನಿಸುವುದಿಲ್ಲ. ಆ ತೀರ್ಮಾನವು ದೇಶದ ಪರವಾಗಿತ್ತು ಎಂದು ಯೋಚಿಸಿ ಅದನ್ನು ಬೆಂಬಲಿಸಲು ತೀರ್ಮಾನಿಸಿದೆವು.
ಪ್ರಸಕ್ತ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಪ್ರತಿಸ್ಪರ್ಧಿಯೇ?
ಕಾಂಗ್ರೆಸ್ ಪಕ್ಷವು ಶೇ.2-3ರಷ್ಟು ಮತ ಗಳಿಕೆಗೆ ತೃಪ್ತಿಪಡುವ ಸಂಭವವನ್ನು ಸಮೀಕ್ಷೆಗಳು ಸೂಚಿಸುತ್ತಿವೆ. (2015ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಶೇ.9.8ರಷ್ಟು ಜನರ ಮತಗಳನ್ನು ಗಳಿಸಿತ್ತು.)