ಇಡೀ ದೇಶದ ಜನ ಕಾತರದಿಂದ ಕಾಯುತ್ತಿದ್ದ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ದೇಶದ ಬೆಚ್ಚಿಬೀಳಿಸುವ ಫಲಿತಾಂಶ ಬರಲಿದೆ. ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ ಎಂಬ ಬಿಜೆಪಿ ಅತಿರಥ ಮಹಾರಥರ ಹೇಳಿಕೆಗಳು ಬುಡಮೇಲಾಗಿದ್ದು, ಫಲಿತಾಂಶದಿಂದ ಸ್ವತಃ ಬಿಜೆಪಿಯೇ ಬೆಚ್ಚಿಬಿದ್ದಿದೆ!
70 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 60ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ(ಅಂತಿಮ ಫಲಿತಾಂಶ ಇನ್ನೂ ಘೋಷಣೆಯಾಗಬೇಕಿದೆ) ಎಎಪಿ, ಬಿಜೆಪಿಯ ದುರಹಂಕಾರಕ್ಕೆ ತಕ್ಕ ಗೂಸಾ ಕೊಟ್ಟಿದೆ. ಕಳೆದ ಬಾರಿಯ ಮೂರು ಸ್ಥಾನಗಳಿಂದ ಈ ಬಾರಿ ಆರಕ್ಕೇರಿರುವ ಬಿಜೆಪಿ, ಅರವಿಂದ್ ಕೇಜ್ರಿವಾಲ್ ಎಂಬ ಏಕ ವ್ಯಕ್ತಿಯ ವಿರುದ್ಧ ಪ್ರಧಾನಿ, ಗೃಹ ಸಚಿವರು, ಇಡೀ ಕೇಂದ್ರ ಸಚಿವ ಸಂಪುಟ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, 240ಕ್ಕೂ ಹೆಚ್ಚು ಸಂಸದರ ಮಾನ ಪಣಕ್ಕಿಟ್ಟು ಕೇವಲ ಮೂರು ಸ್ಥಾನ ಹೆಚ್ಚುವರಿಯಾಗಿ ಪಡೆದು ಹೀನಾಯ ಸೋಲು ಕಂಡಿದೆ.
ಸಿಎಎ-ಎನ್ ಆರ್ ಸಿ, ಶಾಹೀನ್ ಭಾಗ್, ಜಾಮಿಯಾ-ಮಿಲಿಯಾ ಹೋರಾಟ, ಪಾಕಿಸ್ತಾನ, ದೇಶದ್ರೋಹಿ, ಭಯೋತ್ಪಾದಕರು, ಮಂದಿರ, ಮಸೀದಿ ಎಂಬ ಸಂಗತಿಗಳ ಮೇಲೆಯೇ ಚುನಾವಣಾ ವಾಗ್ವಾದವನ್ನ ಕಟ್ಟಿ ಕೋಮು ವಿಭಜನೆಯ ಮೂಲಕ, ಕೋಮು ಧ್ರುವೀಕರಣದ ಮೂಲಕ ಅಧಿಕಾರ ಹಿಡಿಯವ ಬಿಜೆಪಿಯ ಸಿದ್ಧಸೂತ್ರಕ್ಕೆ ರಾಜಧಾನಿಯ ಜನ ಸೊಪ್ಪು ಹಾಕಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ. ಹಾಗೇ, ಶಾಲೆ, ಆಸ್ಪತ್ರೆ, ಶುದ್ಧ ನೀರು, ವಿದ್ಯುತ್, ಸಂಚಾರ ವ್ಯವಸ್ಥೆಯಂತಹ ಅಸಲೀ ನಿತ್ಯದ ಬದುಕಿಗೆ ಸಂಬಂಧಿಸಿದ ಅಭಿವೃದ್ಧಿ ಕಾಳಜಿಯನ್ನು ನಿಜ ದೇಶವಾಗಿ ದೇಶ ಕಟ್ಟುವ ಬಗೆ ಎಂಬುದನ್ನು ಮತದಾರರ ಅಭೂತಪೂರ್ವ ಜನಾದೇಶದೊಂದಿಗೆ ರುಜುವಾತು ಮಾಡಿದ್ದಾನೆ.
ದ್ವೇಷ, ಅಸಹನೆ, ಸುಳ್ಳು, ಪ್ರಚೋದನೆ, ಹಿಂಸೆಗೆ ಕುಮ್ಮಕ್ಕು ಮುಂತಾದ ವರಸೆಗಳ ಮೂಲಕ ದೇಶದ ಚುನಾವಣಾ ಇತಿಹಾಸದಲ್ಲೆ ಅತ್ಯಂತ ಹೀನಾಯ ಚುನಾವಣಾ ಪ್ರಚಾರ ಎಂಬ ಕುಖ್ಯಾತಿ ಪಾತ್ರವಾಗುವಂತೆ ಇಡೀ ಚುನಾವಣಾ ವಾಗ್ವಾದವನ್ನು ಬೆಳೆಸಿದ್ದ ಬಿಜೆಪಿ ನಾಯಕರಿಗೆ, ಅದರಲ್ಲೂ ಮುಖ್ಯವಾಗಿ ಸ್ವತಃ ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಅನುರಾಗ್ ಠಾಕೂರ್, ಸಂಸದ ಪರ್ವೆಶ್ ವರ್ಮಾ, ಮತದಾರ ಸರಿಯಾದ ತಿರುಗೇಟು ನೀಡಿದ್ದಾನೆ. ದ್ವೇಷ ಮತ್ತು ಕೋಮುವಾದ, ಹಿಂಸೆ ಮತ್ತು ಅಸಹನೆಯ ಮೂಲಕ ದೆಹಲಿಯ ಜನರನ್ನು ಧ್ರುವೀಕರಿಸಲಾಗದು ಎಂಬ ಸ್ಪಷ್ಟ ಸಂದೇಶವನ್ನು ಇವಿಎಂ ಬಟನ್ ಒತ್ತುವ ಮೂಲಕ ನೀಡಿದ್ದಾನೆ.
‘ಮತದಾನದ ದಿನ ಕಮಲದ ಗುರುತಿನ ಗುಂಡಿಯನ್ನು ನೀವು ಎಷ್ಟು ಬಲವಾಗಿ ಒತ್ತಬೇಕೆಂದರೆ, ಅಲ್ಲಿ ಒತ್ತಿದ ಗುಂಡಿನ ಹೊಡೆತಕ್ಕೆ ಫಲಿತಾಂಶದ ದಿನ ಶಾಹೀನ್ ಭಾಗ್(ಸಿಎಎ ವಿರೋಧಿ ಮಹಿಳಾ ಹೋರಾಟದ ಸ್ಥಳ) ಮಂದಿ ಹೇಳದೇ ಕೇಳದೇ ಕಾಲುಕೀಳಬೇಕು’ ಎಂದು ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದರು. ತಮ್ಮ ನಾಯಕರನ್ನೇ ಅನುಸರಿಸಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಶಾಹೀನ್ ಭಾಗ್ ಧರಣಿನಿರತರನ್ನು ಉದ್ದೇಶಿಸಿ, ‘ಗೋಲಿ ಮಾರೋ ಸಾಲೋಂಕಾ..’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಪ್ರಕಾಶ್ ಜಾವ್ಡೇಕರ್ ಮತ್ತು ಪರ್ವೇಶ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಧರಣಿನಿರತರು ಭಯೋತ್ಪಾದಕರು ಎಂದಿದ್ದರು. ಜೊತೆಗೆ, ಸ್ವತಃ ಸಿಎಂ ಅರವಿಂದ ಕೇಜ್ರಿವಾಲ್ ‘ಒಬ್ಬ ಭಯೋತ್ಪಾದಕ’ ಎಂದು ಹೇಳಿದ್ದರು.
ಇದೀಗ ದೆಹಲಿಯ ಜನ ಬಿಜೆಪಿ ನಾಯಕರ ಈ ದ್ವೇಷ- ಅಸಹನೆಯ ಅಸಹ್ಯಕರ ಚುನಾವಣಾ ಪ್ರಚಾರದ ವರಸೆಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಪೊರಕೆ ಹಿಡಿದು ಕಮಲವನ್ನು ಗುಡಿಸಿ ಬಿಸಾಕಿದ್ದಾರೆ. ಇದು ಪ್ರಜಾಪ್ರಭುತ್ವದ ಚೆಂದ. ಇದು ಅಸಲೀ ಭಾರತೀಯ ಸಂಸ್ಕೃತಿ, ಸಹಬಾಳ್ವೆ ಮತ್ತು ಸಹೋದರತೆಗೆ, ಅಸಲೀ ವಿಕಾಸ ಮತ್ತು ಅಸಲೀ ದೇಶಭಕ್ತಿಯ ವರಸೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸುತ್ತಿರುವ ಮಾತು.
ಬಿಜೆಪಿಯ ಪಾಕಿಸ್ತಾನ ವರ್ಸಸ್ ಭಾರತ, ತುಕಡೇ ತುಕಡೇ ಗ್ಯಾಂಗ್ ವರ್ಸಸ್ ದೇಶಭಕ್ತರು, ದೇಶದ್ರೋಹಿಗಳು ವರ್ಸಸ್ ದೇಶಪ್ರೇಮಿಗಳು, ಭಯೋತ್ಪಾದಕರು ವರ್ಸಸ್ ದೇಶಕಟ್ಟುವರರು, ನಾಗ್ಪುರ ವರ್ಸಸ್ ಶಾಹೀನ್ ಭಾಗ್ ಎಂಬಂತಹ ವಿಭಜನೆಯ ಪ್ರಚಾರಾಂದೋನದಲ್ಲಿ, ಅಂತಿಮವಾಗಿ ದೆಹಲಿ ಮತದಾರ ಎಎಪಿಯನ್ನು ಆಯ್ಕೆಮಾಡುವ ಮೂಲಕ ತಮಗೆ ಭಾರತ, ದೇಶಭಕ್ತರು, ದೇಶಪ್ರೇಮಿಗಳು, ದೇಶಕಟ್ಟುವವರು, ಶಾಹೀನ್ ಭಾಗ್ ಮಂದಿಯೇ ಮುಖ್ಯ ಎಂಬುದನ್ನು ಸಾರಿ ಹೇಳಿದ್ದಾರೆ. ಅದೇ ಹೊತ್ತಿಗೆ ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ತಮ್ಮ ಪಾಲಿಗೆ ಯಾರು ದೇಶದ ಹಿತ ಕಾಯುವವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂಬ ವಿಶ್ಲೇಷಣೆಗಳೂ ಹರಿದಾಡುತ್ತಿವೆ. ಅಂದರೆ; ಬಿಜೆಪಿ ತಾನೇ ತೋಡಿದ ಹಳ್ಳದಲ್ಲಿ ಈಗ ತಾನೇ ಬಿದ್ದಂತಾಗಿದೆ!
ಈ ನಡುವೆ, ಈ ಫಲಿತಾಂಶ ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಗೆ ನೀಡಿರುವ ಸಂದೇಶವೇನು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ದೇಶದ ಭವಿಷ್ಯದ ಚುನಾವಣೆಗಳ ಮೇಲೆ- ಮುಖ್ಯವಾಗಿ ಸದ್ಯದಲ್ಲೇ ಬರಲಿರುವ ಬಿಹಾರ ಚುನಾವಣೆ- ಈ ಫಲಿತಾಂಶ ಬೀರಬಹುದಾದ ಪರಿಣಾಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಬಿಜೆಪಿ ತನ್ನ ಕೋಮುವಾದ, ಮತೀಯ ವಿಭಜನೆ, ಪಾಕಿಸ್ತಾನ- ಭಯೋತ್ಪಾದನೆ, ದೇಶದ್ರೋಹ ಮತ್ತು ಮುಖ್ಯವಾಗಿ ಸಿಎಎ-ಎನ್ ಆರ್ ಸಿ ವಿಷಯವನ್ನು ಬಹಳ ಉಗ್ರವಾಗಿ ಪ್ರಯೋಗಿಸಿದ ಚುನಾವಣೆ ಇದಾಗಿತ್ತು. ಆದರೆ, ದೆಹಲಿಯ ಜನ ಬಿಜೆಪಿಯನ್ನು ತಿರಸ್ಕರಿಸುವ ಮೂಲಕ, ಅದರ ಉಗ್ರ ಹಿಂದುತ್ವಅಜೆಂಡಾದ ಎಲ್ಲಾ ಸಂಗತಿಗಳನ್ನು ಮೂಲೆಗುಂಪು ಮಾಡಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಗಳಲ್ಲಿ ಈ ವಿಷಯದಲ್ಲಿ ಬಿಜೆಪಿಯ ನಡೆ ಏನಾಗಲಿದೆ? ಎಂಬ ಕುತೂಹಲ ಸಹಜವಾಗೆ ಮೂಡಿದೆ. ಅದರಲ್ಲೂ ತಾನು ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಬಲ ಹೊಂದಿಲ್ಲದೆ, ನಿತೀಶ್ ಕುಮಾರ್ ಅವರ ಜೆಡಿಯುನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಹಾರದ ಚುನಾವಣೆಯಲ್ಲಿ ಈ ಫಲಿತಾಂಶ ಮೈತ್ರಿ ಮತ್ತು ಚುನಾವಣಾ ತಂತ್ರಗಾರಿಕೆಯ ಮೇಲೆ ಬೀರಬಹುದಾದ ಪರಿಣಾಮಗಳನ್ನು ಕಾದುನೋಡಬೇಕಿದೆ.
ಜೊತೆಗೆ, ಸಿಎಎ-ಎನ್ ಆರ್ ಸಿ ವಿಷಯವನ್ನೇ ಪ್ರಮುಖ ಚುಣಾವಣಾ ವಿಷಯವಾಗಿ ಬಿಜೆಪಿ ಬಿಂಬಿಸುವ ಮೂಲಕ ಸಿಎಎ-ಎನ್ ಆರ್ ಸಿ ವಿರೋಧಿಸುವವರ ಪರ ಧೋರಣೆ ಹೊಂದಿರುವ, ಅವರಿಗೆ ‘ಬಿರಿಯಾನಿ ನೀಡುವ’ ಕೇಜ್ರಿವಾಲ್ ‘ಒಬ್ಬ ಭಯೋತ್ಪಾದಕ’ ಎಂಬ ಕೀಳು ಪ್ರಚಾರವನ್ನೂ ಬಿಜೆಪಿ ಮಾಡಿತ್ತು. ಆದರೆ, ರಾಜಧಾನಿಯ ಮತದಾರ ಬಿಜೆಪಿಯ ಅಂತಹ ಅಸಹ್ಯಕರ ಪ್ರಚಾರದ ಮೂತಿಗೆ ತಿವಿದಿದ್ದಾನೆ. ಹಾಗಾಗಿ ಈಗ, ಈ ಫಲಿತಾಂಶದ ಬಳಿಕ ಸಿಎಎ-ಎನ್ ಆರ್ ಸಿ ವಿಷಯದಲ್ಲಿ ಬಿಜೆಪಿಯ ನಿಲುವು ಹಿಂದಿನಷ್ಟೇ ಬಿಗಿಯಾಗಿ ಮುಂದುವರಿಯಲಿದೆಯೇ? ಅಥವಾ ಮೊಂಡುತನದಿಂದ ಹಿಂದೆ ಸರಿಯುವುದೇ ? ಎಂಬ ಪ್ರಶ್ನೆಯೂ ಇದೆ.
ಆದರೆ, ಅದರ ಉಗ್ರ ಹಿಂದುತ್ವ, ವ್ಯಗ್ರ ರಾಷ್ಟ್ರೀಯತೆ, ಸುಳ್ಳು ಮತ್ತು ಪೊಳ್ಳಿನ ಪ್ರಚಾರದ ವಿಷಯದಲ್ಲಿ ಭವಿಷ್ಯದ ನಡೆ ಏನೇ ಇದ್ದರೂ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲೇ ನಡೆದ ದೆಹಲಿ ಚುನಾವಣೆಯ ಈ ಹೀನಾಯ ಸೋಲು, ಅವರ ವರ್ಚಸ್ಸು ಮತ್ತು ಪ್ರತಿಷ್ಠೆಗೆ ಬಲವಾದ ಪೆಟ್ಟು ಕೊಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಇಡೀ ಚುನಾವಣೆಯ ತಳಮಟ್ಟದ ಕಾರ್ಯಾಚರಣೆಯಿಂದ ಉನ್ನತಮಟ್ಟದ ಕಾರ್ಯತಂತ್ರದವರೆಗೆ ಎಲ್ಲವನ್ನೂ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಇದು ತಮ್ಮ ಪ್ರತಿಷ್ಠೆಯ ಪಣ ಎಂದೇ ಹೇಳಿಕೊಂಡಿದ್ದ ಅಮಿತ್ ಶಾ ಪಾಲಿಗೆ ಇದು ತೀವ್ರ ಮುಖಭಂಗ ಎನ್ನುವ ಮಾತು ಬಿಜೆಪಿಯ ಆಂತರಿಕ ವಲಯಗಳಲ್ಲೇ ಕೇಳತೊಡಗಿದೆ. ಹಾಗಾಗಿ ಕನಿಷ್ಠ ಪಕ್ಷದ ಆಂತರಿಕ ವಲಯದಲ್ಲಾದರೂ ಮೋದಿ- ಶಾ ಜೋಡಿಯ ಪ್ರಭಾವ ತಗ್ಗಲಿದೆ ಎಂಬ ಮಾತುಗಳಿವೆ.
ಇನ್ನು ಕಾಂಗ್ರೆಸ್ ಕಳೆದ ಬಾರಿಯಂತೆ ಈ ಬಾರಿಯೂ ಶೂನ್ಯ ಸಾಧನೆಗೆ ಜಾರಿದೆ. ಆ ಮೂಲಕ ಐದು ವರ್ಷಗಳ ಬಳಿಕವೂ ರಾಜಧಾನಿಯಲ್ಲಿ ಆ ಪಕ್ಷಕ್ಕೆ ಕನಿಷ್ಠ ಒಂದೆರಡು ಸ್ಥಾನ ಗಳಿಸುವಮಟ್ಟಿಗಿನ ಬಲವರ್ಧನೆ ಕೂಡ ಸಾಧ್ಯವಾಗಿಲ್ಲ. ಒಬ್ಬ ಸಮರ್ಥ ನಾಯಕನನ್ನು ತಯಾರು ಮಾಡುವ ಮಟ್ಟಿನ ಗಮನವನ್ನು ಕೂಡ ಹೈಕಮಾಂಡ್ ಈವರೆಗೆ ತೋರಿಲ್ಲ ಎಂಬುದನ್ನು ಫಲಿತಾಂಶ ತೋರಿಸಿಕೊಟ್ಟಿದೆ.
2013ಕ್ಕೆ ಮುನ್ನ ಸತತ ಒಂದೂವರೆ ದಶಕ ಕಾಲ ಅಧಿಕಾರ ನಡೆಸಿದ ರಾಜಧಾನಿಯಲ್ಲಿ, ಕನಿಷ್ಠ ನಾಲ್ಕು ಸ್ಥಾನ ಗೆಲ್ಲಾಗದ ಸ್ಥಿತಿಗೆ ಕುಸಿದಿರುವ ಕಾಂಗ್ರೆಸ್ ಈ ಬಾರಿ, ಕಣಕ್ಕಿಳಿದಿದ್ದ 66 ಕ್ಷೇತ್ರಗಳ(ನಾಲ್ಕು ಸ್ಥಾನ ಮಿತ್ರಪಕ್ಷ ಆರ್ ಜೆಡಿಗೆ ಬಿಟ್ಟುಕೊಟ್ಟಿತ್ತು) ಪೈಕಿ 63 ಕಡೆ ಠೇವಣಿ ಕಳೆದುಕೊಂಡಿದೆ ಎಂಬುದು ತೀರಾ ಅವಮಾನಕರ ಸಂಗತಿ. ಕನಿಷ್ಠ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲು ಒಂದು ಮುಖ ಕೂಡ ಇಲ್ಲದ ಹೀನಾಯ ಸ್ಥಿತಿ ಪಕ್ಷದ್ದಾಗಿದೆ. ಹಾಗಾಗಿ ಕನಿಷ್ಠ ಮುಂದಿನ ಐದು ವರ್ಷಗಳ ಬಳಿಕದ ಚುನಾವಣೆಗೆ ಈಗಿನಿಂದಲೇ ಒಬ್ಬ ನಾಯಕರನ್ನು ಗುರುತಿಸಿ ಬೆಳೆಸುವ ಕೆಲಸವಾಗಲಿ ಎಂಬುದು ಸ್ವತಃ ಹಿರಿಯ ನಾಯಕ ಅಭಿಷೇಕ್ ಮನು ಸಿಂಗ್ವಿ ಸೇರಿದಂತೆ ಹಲವು ಕಾಂಗ್ರೆಸ್ಸಿಗರ ವಾದ.
ಇಡೀ ಕೇಂದ್ರ ಸರ್ಕಾರವೇ ತಮ್ಮ ವಿರುದ್ಧ ತನ್ನೆಲ್ಲಾ ಆಡಳಿತ ಬಲ, ಹಣಬಲ, ಪೊಲೀಸ್ ಬಲ ಪ್ರಯೋಗಿಸಿಯೂ, ಟ್ರೋಲ್ ಸೇನೆಯ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ, ಬೆಂಕಿ ಕಾರುವ ಭಾಷಣಗಳ ಹೊರತಾಗಿಯೂ ಗೆದ್ದು ಬೀಗುತ್ತಿರುವ ಎಎಪಿಗೆ ಈ ಫಲಿತಾಂಶದ ಪಾಠವೇನು? ಪಕ್ಷದ ಆಂತರಿಕ ಕಚ್ಚಾಟ, ಶಾಸಕರ ಲೈಂಗಿಕ ಹಗರಣಗಳ ಹೊರತಾಗಿಯೂ ಸರ್ಕಾರಿ ಶಾಲೆ, ಆಸ್ಪತ್ರೆ ಸುಧಾರಣೆ, ಉಚಿತ ವಿದ್ಯುತ್, ಸಂಚಾರ ವ್ಯವಸ್ಥೆಗಳನ್ನು ನೋಡಿ ಜನ ಮತ ನೀಡಿದ್ದಾರೆ. ವಿಕಾಸದ ಬರಿ ಮಾತು ಮತ್ತು ಅಸಲೀ ವಿಕಾಸದ ನಡುವೆ ನೈಜ ವಿಕಾಸಕ್ಕೆ ಮತ ಹಾಕಿದ್ದಾರೆ. ಗೋಲಿ ಮಾರೋ ಸಾಲೋಂಕಾ ಎಂದವರ ಬುಲೆಟ್ ಮತ್ತು ಬ್ಯಾಲೆಟ್ ನಡುವೆ ಬ್ಯಾಲೆಟ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಜನರ ನಿರೀಕ್ಷೆ ಈ ಬಾರಿ ಇನ್ನಷ್ಟು ಹೆಚ್ಚಿದೆ. ಹಾಗಾಗಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳು, ಜನರ ನಿತ್ಯದ ಬದುಕಿನಲ್ಲಿ ಬದಲಾವಣೆ ತರುವ ಕಾರ್ಯಕ್ರಮಗಳು ಜಾರಿಗೆ ತರಬೇಕಾದ ಸವಾಲು ಎಎಪಿ ಮುಂದಿದೆ. ಜನರ ಭರವಸೆ ಹುಸಿಮಾಡದಂತೆ ಸ್ವಚ್ಛ ಮತ್ತು ದಕ್ಷ ಆಡಳಿತ ನೀಡುವ ಆ ಸವಾಲನ್ನು ಅರವಿಂದ ಕೇಜ್ರಿವಾಲ್ ಎಷ್ಟರಮಟ್ಟಿಗೆ ಕಾಯ್ದುಕೊಳ್ಳುತ್ತಾರೆ ಎಂಬುದು ಮುಂದಿನ ಐದು ವರ್ಷಗಳ ರಾಜಧಾನಿಯ ಬದುಕಿನ ಮೇಲೆ ಪರಿಣಾಮ ಬೀರಲಿದೆ.
ಒಟ್ಟಾರೆ, ದೇಶದ ಭವಿಷ್ಯದ ರಾಜಕಾರಣದ ದಿಕ್ಸೂಚಿಯಾಗಿ ದೆಹಲಿ ಚುನಾವಣಾ ಫಲಿತಾಂಶ ಕೆಲಸ ಮಾಡಲಿದೆಯೇ ಎಂಬ ಕುತೂಹಲವಂತೂ ಸದ್ಯಕ್ಕೆ ಮೂಡಿದೆ. ಆದರೆ, ಲೋಕಸಭಾ ಚುಣಾವಣೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮತದಾರನ ಆಯ್ಕೆಗಳು ಬೇರೆ ಎಂಬುದು ಹಲವು ಚುನಾವಣೆಗಳಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ. ಆ ಹಿನ್ನೆಲೆಯಲ್ಲಿ ರಾಜಧಾನಿಯ ಫಲಿತಾಂಶ ದೇಶದ ಮನಸ್ಥಿತಿಯ ಪ್ರತಿಫಲನ ಎನ್ನಲಾಗದು ಎಂಬ ಮಾತೂ ಇದೆ. ಅದೇನೇ ಇರಲಿ, ಸದ್ಯಕ್ಕೆ ರಾಜಧಾನಿಯ ಮತದಾರ ಬುಲೆಟ್ ಮತ್ತು ಬ್ಯಾಲೆಟ್ ಹಾಗೂ ತುಕಡೇ ತುಕಡೇ ರಾಜಕಾರಣ ಮತ್ತು ಅಸಲೀ ವಿಕಾಸ ರಾಜಕಾರಣದ ನಡುವೆ ತನ್ನ ಆಯ್ಕೆ ಯಾವುದು ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಆ ಸ್ಪಷ್ಟ ಸಂದೇಶ ಎಲ್ಲಿಯವರೆಗೆ ತಲುಪಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.