ದೆಹಲಿ ಚುನಾವಣೆಯ ಫಲಿತಾಂಶ ಕೇಂದ್ರದಲ್ಲಿ ಅಧಿಕಾರರೂಢ ಬಿಜೆಪಿ ಪಾಲಿಗೆ ಎಂತಹ ಆಘಾತ ನೀಡಿದೆ. ಎಂತಹ ಹತಾಶೆಗೆ ತಳ್ಳಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅಂತಹ ಚರ್ಚೆಗಳ ನಡುವೆಯೇ, ಆಮ್ ಆದ್ಮಿ ಪಕ್ಷದ ನೂತನ ಶಾಸಕ ನರೇಶ್ ಯಾದವ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಚುನಾವಣಾ ಸೋಲಿನ ಹತಾಶೆಯ ಆ ದಾಳಿಗೆ ಶಾಸಕರ ಬೆಂಬಲಿಗರೊಬ್ಬರು ಬಲಿಯಾಗಿದ್ದಾರೆ. ದೇವರ ಪೂಜೆ ಮುಗಿಸಿಕೊಂಡು ವಾಪಸ್ಸಾಗುತ್ತಿರುವಾಗ ತಡರಾತ್ರಿ ಈ ದಾಳಿ ನಡೆದಿದ್ದು, ಒಟ್ಟು ಏಳು ಸುತ್ತು ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲುಗಾಡಿಸುವ ಈ ದಾಳಿ, ಕೇವಲ ಆಕಸ್ಮಿಕವಲ್ಲ. ಅದೊಂದು ಯೋಜಿತ ಕೃತ್ಯ ಮತ್ತು ಅದರ ಹಿಂದೆ ದಿಲ್ಲಿಯ ಆಡಳಿತದ ಚುಕ್ಕಾಣಿ ಹಿಡಿದವರ ಹುಕುಂ ಕೆಲಸ ಮಾಡಿದೆ ಎಂಬುದನ್ನು ಅರಿಯಲು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ; ಇದೊಂದು ಬಿಡಿ ಘಟನೆಯಲ್ಲ ಎಂಬುದನ್ನು ಕಳೆದ 15 ದಿನಗಳಲ್ಲಿ ದೆಹಲಿಯಲ್ಲಿ ನಡೆದ ಸರಣಿ ಗುಂಡಿನ ದಾಳಿಗಳೇ ಹೇಳುತ್ತಿವೆ.
ಶಾಹೀನ್ ಭಾಗ್ ಮತ್ತು ದೆಹಲಿ ಆಪ್ ನಡುವಿನ ಸಂಬಂಧವನ್ನೇ ಪ್ರಮುಖವಾಗಿ ಉಲ್ಲೇಖಿಸುತ್ತಾ ‘ಗೋಲಿ ಮಾರೋ ಗದ್ದಾರೋಂಕೆ’ ಎಂಬುದನ್ನು ಘೋಷವಾಕ್ಯವಾಗಿಸಿಕೊಂಡು ಬಿಜೆಪಿ ದೆಹಲಿ ಚುನಾವಣಾ ಪ್ರಚಾರ ನಡೆಸಿತ್ತು. ಎರಡು ಅವಧಿಗೆ ಜನರ ಮುಖ್ಯಮಂತ್ರಿ ಎಂದು ಹೆಸರು ಮಾಡಿದ, ಮೂರನೇ ಅವಧಿಗೂ ಜನರ ಆಯ್ಕೆಯಾಗಿದ್ದ ಒಬ್ಬ ಜನನಾಯಕನನ್ನು ‘ಭಯೋತ್ಪಾದಕ’ ಎಂದು ಸ್ವತಃ ಗೃಹ ಸಚಿವರೇ ಕರೆಯುವ ಮೂಲಕ, ಹಿಂಸೆ, ದ್ವೇಷ, ಅಸೂಹೆ, ಸೇಡಿನ ಕೃತ್ಯಗಳಿಗೆ ಪ್ರಚೋದನೆ ನೀಡಿದ್ದರು. ಅಂತಹ ಪ್ರಚೋದನೆಗಳಿಂದಲೇ ಪ್ರಭಾವಿತರಾದಂತೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ, ಸಿಎಎ-ಎನ್ ಆರ್ ಸಿ ವಿರುದ್ಧ ನಿರಂತರ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಮೊದಲು ಜಾಮಿಯಾದ ಪ್ರತಿಭಟನಾನಿರತರ ಮೇಲೆ ದಾಳಿ ನಡೆಸಿದ ವ್ಯಕ್ತಿಗೆ ದೆಹಲಿ ಪೊಲೀಸರೇ ಬೆಂಗಾವಲಾಗಿ ನಿಂತಿದ್ದರು. ಬಳಿಕ ಮತ್ತೊಬ್ಬ ವ್ಯಕ್ತಿ ಶಾಹೀನ್ ಭಾಗ್ ಧರಣಿನಿರತರ ಮೇಲೆ ಮೇಲೆ ಗುಂಡಿನ ನಡೆಸಿದ್ದ. ಆಗಲೂ ಕೇಂದ್ರ ಸರ್ಕಾರದ ನೇರ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರು ಕೈಕಟ್ಟಿಕೊಂಡಿದ್ದರು. ಅದಾದ ಮೂರೇ ದಿನದಲ್ಲಿ ಮತ್ತೊಮ್ಮೆ ಇಬ್ಬರು ಬೈಕ್ ಸವಾರರು ಅದೇ ಜಾಮಿಯಾ ಮಿಲಿಯಾ ಬಳಿ ಗುಂಡಿನ ದಾಳಿ ನಡೆಸಿದ್ದರು.
ಕೇವಲ ಒಂದೇ ವಾರದಲ್ಲಿ ನಡೆದ ಸರಣಿ ಗುಂಡಿನ ದಾಳಿ ಘಟನೆಗಳ ಬಳಿಕ, ಇದೀಗ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಎಎಪಿ ಶಾಸಕನ ಮೇಲೆ ದಾಳಿ ನಡೆದಿದೆ. ಪಕ್ಷದ ಒಬ್ಬ ಕಾರ್ಯಕರ್ತ ಬಲಿಯಾಗಿದ್ದಾನೆ. ಶಾಹೀನ್ ಭಾಗ್ ಮತ್ತು ಜಾಮಿಯಾದ ಪ್ರತಿಭಟನಾನಿರತರ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿದ ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು ದಾಳಿಕೋರರ ವಿಷಯದಲ್ಲಿ ಮೃದು ಧೋರಣೆಯನ್ನೂ, ಪ್ರತಿಭಟನಾನಿರತರ ವಿರುದ್ಧ ಅಮಾನುಷ ವರ್ತನೆಯನ್ನೂ ತೋರಿದ್ದನ್ನು ದೇಶದ ಜನತೆ ಗಮನಿಸಿದ್ದಾರೆ. ಆ ಎಲ್ಲಾ ಪ್ರಕರಣಗಳು ಭಯೋತ್ಪಾದನಾ ಕೃತ್ಯಕ್ಕೆ ಸಮನಾಗಿದ್ದರೂ ಯಾರ ಮೇಲೆಯೂ ಅಂತಹ ಗಂಭೀರ ಪ್ರಕರಣ ದಾಖಲಿಸಿಲ್ಲ ಮತ್ತು ಆರೋಪಿಗಳ ಬಂಧನದ ವಿಷಯದಲ್ಲೂ ದೆಹಲಿ ಪೊಲೀಸರು ಯಾವುದೇ ಗಂಭೀರ ಪ್ರಯತ್ನ ಮಾಡಲಿಲ್ಲ ಎಂಬುದು ಕೂಡ ಗಮನಾರ್ಹ.
ಪರೋಕ್ಷವಾಗಿ ಆಳುವ ಸರ್ಕಾರದ ವಿರುದ್ಧದ ಪ್ರತಿಭಟನಾಕಾರರ ಮೇಲೆ, ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರ ಮೇಲಿನ ದಾಳಿಗಳಿಗೆ ದೆಹಲಿ ಪೊಲೀಸರು ನೀಡಿದ ಕುಮ್ಮಕ್ಕು ಇದೀಗ ಈ ಭೀಕರ ದಾಳಿಯಲ್ಲಿ ಫಲಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಜೊತೆಗೆ ಸ್ವತಃ ಗೃಹ ಸಚಿವರು ಸೇರಿದಂತೆ ಕೇಂದ್ರ ಸಂಪುಟ ಸಚಿವರು, ಸಿಎಂಗಳು ನಡೆಸಿದ ಹಿಂಸೆಯ ಕುಮ್ಮಕ್ಕಿನ ಅಭಿಯಾನ ಕೂಡ ಫಲಕೊಟ್ಟಿದೆ ಕೂಡ. ಅದರಲ್ಲೂ ಸ್ವತಃ ಗೃಹ ಸಚಿವರ ವರ್ಚಸ್ಸು ಪಣಕ್ಕಿಟ್ಟಿದ್ದ ಚುನಾವಣೆಯ ಹೀನಾಯ ಸೋಲು ಸಹಜವಾಗೇ ಬಿಜೆಪಿ ವಲಯದಲ್ಲಿ ತಡೆದುಕೊಳ್ಳಲಾಗದ ಹತಾಶೆ ಮೂಡಿಸಿದೆ. ಸ್ವತಃ ಗೃಹ ಸಚಿವರು ಮನೆಮನೆ ಭೇಟಿ ನೀಡಿ ಕರಪತ್ರ ಹಂಚಿ ಪ್ರಚಾರ ಮಾಡಿದ್ದಕ್ಕೂ ಫಲ ನೀಡದ ಸೋಲಿನಿಂದ ಆಗಿರುವ ಅವಮಾನದಿಂದ ಅವರ ಅಭಿಮಾನಿಗಳಲ್ಲಿ, ಪಕ್ಷದ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿರುತ್ತದೆ. ಜೊತೆಗೆ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಪರ್ವೇಶ್ ಶರ್ಮಾ, ಅನುರಾಗ್ ಠಾಕೂರ್ ಅವರಂತಹ ನಾಯಕರ ದ್ವೇಷದ ಪ್ರಚೋದನಾತ್ಮಕ ಭಾಷಣಗಳ ಹೊರತಾಗಿಯೂ, ಅವರುಗಳು ಪ್ರಚಾರ ಮಾಡಿದ, ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಬಿಜೆಪಿಯ ಒಬ್ಬನೇ ಒಬ್ಬ ಗೆದ್ದಿಲ್ಲ!
ಯೋಗಿ ಆದಿತ್ಯನಾಥ ಪ್ರಚಾರ ಮಾಡಿದ್ದ 12 ಕ್ಷೇತ್ರಗಳಲ್ಲಿ, ಹನ್ನೆರಡರಲ್ಲೂ ಬಿಜೆಪಿ ಸೋಲು ಕಂಡಿದೆ. ಹಾಗೆಯೇ ಸಂಸದ ಶರ್ಮಾ ಅವರ ವ್ಯಾಪ್ತಿಯ ಎಲ್ಲಾ ಹತ್ತು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳು ಸೋತು ಸುಣ್ಣವಾಗಿದ್ದಾರೆ. ಇಂತಹ ಅಪಮಾನಗಳ ನಡುವೆ, ಇದೀಗ ಗೆದ್ದ ಅಭ್ಯರ್ಥಿಗಳ ಮೇಲೆ ಗುಂಡಿನ ದಾಳಿಗಳು ಆರಂಭವಾಗಿವೆ.
ಒಟ್ಟಾರೆ ಜಾಮಿಯಾ-ಮಿಲಿಯಾ ಮತ್ತು ಶಾಹೀನ್ ಭಾಗ್ ನ ಸಿಎಎ-ಎನ್ ಆರ್ ಸಿ ಪ್ರತಿಭಟನೆಗಳ ಮೇಲಿನ ಸರಣಿ ಗುಂಡಿನ ದಾಳಿ, ಆ ಪ್ರತಿಭಟನಾಕಾರರಿಗೆ ಬಿರಿಯಾನಿ ನೀಡುತ್ತಿದ್ದಾರೆ, ಅವರಿಗೆ ಬೆಂಬಲ ನೀಡುವ ಕೇಜ್ರಿವಾಲ್ ಕೂಡ ಭಯೋತ್ಪಾದಕ ಎಂಬ ಹೇಳಿಕೆಗಳು, ಗೋಲಿಮಾರೋ ಗದ್ದಾರೋಂಕಾ ಎಂಬ ಕುಮ್ಮಕ್ಕುಗಳ ಹಿನ್ನೆಲೆಯಲ್ಲಿ ನೋಡಿದರೆ, ಮಂಗಳವಾರ ತಡರಾತ್ರಿ, ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಗೆದ್ದ ಪಕ್ಷದ ಶಾಸಕರ ಮೇಲೆ ನಡೆದ ಗುಂಡಿನ ದಾಳಿಯ ಹಿಂದಿನ ಪ್ರೇರಣೆ, ಸ್ಫೂರ್ತಿಗಳನ್ನು ಊಹಿಸುವುದು ಕಷ್ಟವೇನಲ್ಲ.
ಆದರೆ, ಇಷ್ಟಲ್ಲಾ ಸಾಂದರ್ಭಿಕ ಹಿನ್ನೆಲೆಯ ಹೊರತಾಗಿಯೂ ಗುಂಡಿನ ದಾಳಿ ನಡೆಸಿದವರು, ಜಾಮಿಯಾಮಿಲಿಯಾ ದಾಳಿಕೋರರಂತೆ ಕೇವಲ ಕೊಲೆ ಯತ್ನದ ಪ್ರಕರಣದಂತಹ ಸುಲಭ- ಸರಳ ಪ್ರಕರಣದಡಿ ಬಂಧಿತರಾಗಿ(ದೆಹಲಿ ಪೊಲೀಸರು ಅಷ್ಟು ಧೈರ್ಯ ಮಾಡಿದರೆ!) ಆರಾಮವಾಗಿ ಜಾಮೀನು ಪಡೆದು ಹೊರಬರಲಿದ್ದಾರೆ. ಅವರ ವಿರುದ್ಧ ಯಾವುದೇ ಗಂಭೀರ ಪ್ರಕರಣಗಳೂ ದಾಖಲಾಗಲಾರವು ಮತ್ತು ಶಿಕ್ಷೆಯಾಗುವಂತೆ ಪೊಲೀಸರು ನೋಡಿಕೊಳ್ಳಲಾರರು ಎಂಬುದಕ್ಕೆ ಈಗಾಗಲೇ ನಿದರ್ಶನಗಳ ಹಿನ್ನೆಲೆಯೂ ಇದೆ. ಹಾಗಾಗಿ ಮೋದಿಯವರ ನವಭಾರತದ ಕಲ್ಪನೆಗೆ ಇದು ಹೊಸ ಸೇರ್ಪಡೆ ಇರಬಹುದು ಎಂಬ ಮಾತು ಉತ್ಪ್ರೇಕ್ಷೆಯದೇನಲ್ಲ!