ರಸ್ತೆ ಬದಿ ನಿಂತಿದ್ದವರಿಗೆ ಢಿಕ್ಕಿ ಹೊಡೆದು ಜೀವ ತೆಗೆಯುವುದು ಬಿಜೆಪಿ ನಾಯಕರ ಹೊಸ ಖಯಾಲಿಯಾದಂತಿದೆ. ಕೆಲವು ತಿಂಗಳ ಹಿಂದೆ ರಸ್ತೆ ಬದಿ ನಿಂತಿದ್ದವರಿಗೆ ಸಚಿವ ಸಿ ಟಿ ರವಿ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವುಕಂಡಿದ್ದರು. ಇದೀಗ ಸಚಿವ ಆರ್ ಅಶೋಕ್ ಪುತ್ರನ ಕಾರು ಡಿಕ್ಕಿ ಪ್ರಕರಣ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಮರಿಯಮ್ಮನ ಹಳ್ಳಿ ಬಳಿ ಸೋಮವಾರ ನಡೆದಿರುವ ಈ ಘಟನೆಯಲ್ಲಿ ಒಬ್ಬ ಅಮಾಯಕ ದಾರಿಹೋಕ ಹಾಗೂ ಕಾರಿನಲ್ಲಿದ್ದ ಮತ್ತೊಬ್ಬ ಸೇರಿ ಒಟ್ಟು ಇಬ್ಬರು ಸಾವನ್ನಪ್ಪಿದ್ದಾರೆ.
ಸಚಿವ ಅಶೋಕ್ ಅವರ ಪುತ್ರ ಶರತ್ ಕಾರು ಚಾಲನೆ ಮಾಡುತ್ತಿರುವಾಗಲೇ ಅಪಘಾತ ಸಂಭವಿಸಿದೆ. ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ರಸ್ತೆಯ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಕಾರು ಸುಮಾರು ನೂರು ಮೀಟರ್ ದೂರ ಆ ವ್ಯಕ್ತಿಯನ್ನು ಎಳೆದೊಯ್ದಿತ್ತು. ಹಾಗಾಗಿ ಮರಿಯಮ್ಮನ ಹಳ್ಳಿ ತಾಂಡಾದ ರವಿ ನಾಯ್ಕ(18) ಎಂಬ ಯುವಕ ದಾರುಣ ಸಾವು ಕಂಡಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಸಚಿನ್(27) ಎಂಬ ಮತ್ತೊಬ್ಬ ಯುವಕನೂ ಮೃತಪಟ್ಟಿದ್ಧಾನೆ. ಅಪಘಾತ ಸಂಭವಿಸಿದಾಗ ಸಚಿವರ ಪುತ್ರ ಶರತ್ ಸ್ವತಃ ಕಾರು ಓಡಿಸುತ್ತಿದ್ದ. ಕೆಎ 05, ಎಂಡಬ್ಲ್ಯೂ 357 ನೋಂದಣಿಯ ಬೆಂಜ್ ಕಾರಿನಲ್ಲಿ ಒಟ್ಟು ಐವರು ಯುವಕರಿದ್ದು, ಎಲ್ಲರೂ ಬೆಂಗಳೂರಿನವರಾಗಿದ್ದು, ಕಾರು ಬೆಂಗಳೂರಿನ ಕೆಂಗೇರಿಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ್ದಾಗಿದೆ ಎಂದು ವರದಿಗಳು ಹೇಳಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತ ಸಂಭವಿಸಿದಾಗ ಸಚಿವರ ಪುತ್ರ ಶರತ್ ಕಾರು ಓಡಿಸುತ್ತಿದ್ದ ಮತ್ತು ಪಾನಮತ್ತನಾಗಿದ್ದ. ಹೊಸಪೇಟೆ ಸಮೀಪದ ಕಿಷ್ಕಿಂಧೆ ರೆಸಾರ್ಟಿನಲ್ಲಿ ತಂಗಿದ್ದ ಐವರು ಗೆಳೆಯರು, ಅಲ್ಲಿ ಪಾರ್ಟಿ ಮಾಡಿ, ಬೆಂಗಳೂರಿಗೆ ಹೊರಟ್ಟಿದ್ದರು. ಅಮಲಿನಲ್ಲಿ ಕಾರು ಚಾಲನೆ ಮಾಡುತ್ತಿರುವಾಗ ಸೇತುವೆ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಗೂಡಂಗಡಿಯಲ್ಲಿ ಚಹಾ ಕುಡಿಯಲು ಬಂದಿದ್ದವರಿಗೆ ಢಿಕ್ಕಿಯಾಗಿದೆ. ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು ಕೂಡ ಸಚಿವರ ಪುತ್ರನೇ ಕಾರು ಚಲಾಯಿಸುತ್ತಿದ್ದ. ಆದರೆ ಆತ ಸಚಿವರ ಪುತ್ರ ಎಂಬುದು ಗೊತ್ತಾಗುತ್ತಿದ್ದಂತೆ ಹೊಸಪೇಟೆ ಪೊಲೀಸರು ಆತನನ್ನು ಬಚಾವು ಮಾಡಲು ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ಕಳಿಸಿ, ಎಫ್ ಐಆರ್ ನಲ್ಲಿ ಆತನ ಹೆಸರನ್ನು ಕೈಬಿಟ್ಟು ರಾಹುಲ್ ಎಂಬ ಮತ್ತೊಬ್ಬ ಯುವಕ ಕಾರು ಚಲಾಯಿಸುತ್ತಿದ್ದ ಎಂದು ಆತನನ್ನು ಎ 1 ಆರೋಪಿ ಎಂದು ತೋರಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಸಚಿವರು ತಮ್ಮ ಪ್ರಭಾವ ಬಳಸಿ ಮಗನನ್ನು ಪಾರು ಮಾಡಿರುವುದು ಮತ್ತು ಸಚಿವರ ಮಗನ ರಕ್ಷಣೆಗಾಗಿ ಹೊಸಪೇಟೆ ಪೊಲೀಸರು ನಿಜವಾದ ಆರೋಪಿಯನ್ನು ಬಿಟ್ಟು ಮತ್ತೊಬ್ಬನನ್ನು ಪ್ರಕರಣದಲ್ಲಿ ಸಿಲುಕಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ನಡುವೆ ಅಪಘಾತವಾದ ಕಾರಿನಲ್ಲಿ ಸಚಿವ ಅಶೋಕ್ ಅವರ ಪುತ್ರ ಶರತ್ ಇರಲೇ ಇಲ್ಲ ಎಂದು ಹೇಳಿರುವ ಬಳ್ಳಾರಿ ಎಸ್ಪಿ ಎಸ್ ಕೆ ಬಾಬಾ, ಪ್ರಕರಣದಲ್ಲಿ ನಮ್ಮ ಪೊಲೀಸರು ಯಾವುದೇ ರೀತಿಯಲ್ಲೂ ಕರ್ತವ್ಯ ಲೋಪ ಎಸಗಿಲ್ಲ ಎಂದಿದ್ದಾರೆ. ಕಾರನ್ನು ರಾಹುಲ್ ಎಂಬ ವ್ಯಕ್ತಿ ಚಲಾಯಿಸುತ್ತಿದ್ದ. ಆತನೊಂದಿಗೆ ಇತರ ನಾಲ್ವರು ಯುವಕರಿದ್ದರು. ಕಾರು ಯಾರಿಗೆ ಸೇರಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಮತ್ತೊಂದು ಕಡೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಆರ್ ಅಶೋಕ್, ಕಾರು ಅಪಘಾತಕ್ಕೆ ಸಂಬಂಧಿಸಿದ ದೂರಿನಲ್ಲಾಗಲೀ, ಅಥವಾ ಎಫ್ ಐಆರ್ ನಲ್ಲಾಗಲೀ ತಮ್ಮ ಪುತ್ರನ ಹೆಸರು ಇಲ್ಲ. ಕಾರಾಗಲೀ ಅಥವಾ ಕಾರು ಸೇರಿದ್ದೆನ್ನಲಾಗುತ್ತಿರುವ ಸಂಸ್ಥೆಯೊಂದಿಗಾಗಲೀ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಆದರೆ, ಪ್ರಕರಣದ ಕುರಿತು ವಿವಿಧ ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರತ್ಯಕ್ಷದರ್ಶಿಗಳು, ಅಪಘಾತದ ವೇಳೆ ಸ್ವತಃ ಸಚಿವರ ಪುತ್ರ ಶರತ್ ಕಾರು ಚಾಲನೆ ಮಾಡುತ್ತಿದ್ದರು ಎಂಬುದನ್ನು ಅವರ ಫೋಟೋ ನೋಡಿ ಖಚಿತಪಡಿಸಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಕೂಡ ‘ಪ್ರಜಾವಾಣಿ’ಗೆ ನೀಡಿರುವ ಹೇಳಿಕೆಯಲ್ಲಿ ಸಚಿವರ ಪುತ್ರ ಸ್ವತಃ ಕಾರು ಚಾಲನೆ ಮಾಡುತ್ತಿದ್ದ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಬಳ್ಳಾರಿ ಎಸ್ಪಿ ಅವರ ಹೇಳಿಕೆ ಮತ್ತು ಸ್ವತಃ ಸಚಿವ ಅಶೋಕ್ ಅವರ ಹೇಳಿಕೆಯಲ್ಲಿ ಹಲವು ಗೊಂದಲಗಳಿದ್ದು, ಅನುಮಾನಗಳಿಗೆ ಪುಷ್ಟಿನೀಡುತ್ತಿವೆ. ಮೊದಲನೆಯದಾಗಿ ಎಸ್ಪಿ ಸಚಿವರ ಪುತ್ರ ಕಾರಿನಲ್ಲಿ ಇರಲೇ ಇಲ್ಲ ಎಂದಿದ್ದಾರೆ. ಆದರೆ, ಅವರದೇ ಇಲಾಖೆಯ ಹೊಸಪೇಟೆಯಲ್ಲಿ ಕರ್ತವ್ಯನಿರತ ಅಧಿಕಾರಿಯೊಬ್ಬರು ಸಚಿವರ ಪುತ್ರನೇ ಕಾರು ಚಲಾಯಿಸುತ್ತಿದ್ದ ಎಂದಿದ್ದಾರೆ. ಜೊತೆಗೆ, ಕಾರು ಯಾರಿಗೆ ಸೇರಿದ್ದು ಎಂಬುದನ್ನು ಇನ್ನೂ ತನಿಖೆ ನಡೆಸುತ್ತಿರುವುದಾಗಿ ಎಸ್ಪಿ ಗುರುವಾರ ಹೇಳಿದ್ದಾರೆ. ಘಟನೆ ನಡೆದು ಮೂರು ದಿನಗಳು ಕಳೆದಿದ್ದರೂ ಪೊಲೀಸರಿಗೆ ವಾಹನ ಯಾರಿಗೆ ಸೇರಿದ್ದು ಎಂಬುದನ್ನು ಕಂಡುಹಿಡಿಯಲಾಗಿಲ್ಲ ಎಂಬುದನ್ನು ನಂಬುವುದು ಹೇಗೆ? ಏಕೆಂದರೆ, ಇವತ್ತಿನ ಸಾರಿಗೆ ಇಲಾಖೆಯ ಡಿಜಿಟಲೀಕರಣದಿಂದಾಗಿ ಕ್ಷಣಮಾತ್ರದಲ್ಲಿ ಯಾವುದೇ ವಾಹನದ ಸಂಪೂರ್ಣ ಮಾಹಿತಿ ಮೊಬೈಲ್ ನಲ್ಲಿಯೇ ಪಡೆಯುವುದು ಸಾಧ್ಯವಿರುವಾಗ, ಬಳ್ಳಾರಿ ಪೊಲೀಸರಿಗೆ ಕಾರಿನ ಮಾಲೀಕತ್ವ ಮಾಹಿತಿ ಪಡೆಯಲು ಮೂರು ದಿನ ಬೇಕೆಂಬುದನ್ನು ಹೇಗೆ ಅರ್ಥೈಸಬೇಕು?
ಮತ್ತೊಂದು ಕಡೆ ಸಚಿವ ಅಶೋಕ್ ಕೂಡ, ಕಾರಿನಲ್ಲಿ ತಮ್ಮ ಮಗ ಇರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿಲ್ಲ. ಬದಲಾಗಿ ದೂರಿನಲ್ಲಾಗಲೀ, ಎಫ್ ಐಆರ್ ನಲ್ಲಾಗಲೀ ಹೆಸರಿಲ್ಲ ಎಂಬ ತಾಂತ್ರಿಕ ಕಾರಣ ನೀಡಿದ್ಧಾರೆ. ಆದರೆ, ವಾಸ್ತವವಾಗಿ ಈ ಪ್ರಕರಣದಲ್ಲಿ ಪ್ರಮುಖವಾಗಿ ಇರುವ ಸಂಶಯವೇ ಸಚಿವರ ಮಗನನ್ನು ಪಾರು ಮಾಡಲು ಪೊಲೀಸರೇ ಸ್ವತಃ ಆತನನ್ನು ಘಟನೆ ಸ್ಥಳದಿಂದ ಉಪಾಯವಾಗಿ ಸಾಗಹಾಕಿ, ಎಫ್ ಐಆರ್ ನಲ್ಲಿ ಆತನ ಹೆಸರು ಕೈಬಿಟ್ಟಿದ್ಧಾರೆ ಎಂಬುದು. ಹಾಗಾಗಿ ಶಂಕೆಗೊಳಗಾಗಿರುವ ಎಫ್ ಐಆರ್ ನ್ನೇ ಸಾಕ್ಷ್ಯವಾಗಿಟ್ಟುಕೊಂಡು ಸಚಿವರು ತಮ್ಮ ಪುತ್ರ ಅಮಾಯಕ ಎನ್ನುತ್ತಿರುವುದು ಹಾಸ್ಯಾಸ್ಪದ.
ಅಲ್ಲದೆ, ಸಚಿವರ ಪುತ್ರ ಈಗ ಎಲ್ಲಿದ್ಧಾರೆ ಎಂಬ ಮಾಧ್ಯಮದವರ ಪ್ರಶ್ನೆಗೂ ಸಚಿವರು ಉತ್ತರ ಕೊಡದೆ ಜಾರಿಕೊಂಡಿದ್ಧಾರೆ ಮತ್ತು ಪೊಲೀಸರು ಆರೋಪಿ ನಂ.1 ಎಂದು ನಮೂದಿಸಿರುವ ರಾಹುಲ್ ನಿಮ್ಮ ಆಪ್ತರ ಮಗ ಎಂಬ ಮಾಹಿತಿ ಇದೆಯಲ್ಲ ಎಂಬ ಪ್ರಶ್ನೆಗೂ ಅವರು ಹಾರಿಕೆ ಉತ್ತರ ನೀಡಿದ್ಧಾರೆ. ಹೀಗೆ ಮಾಧ್ಯಮದ ಯಾವುದೇ ಪ್ರಶ್ನೆಗೂ ಸಚಿವರು ನೇರ ಉತ್ತರ ನೀಡದೇ, ಪ್ರಕರಣದ ವಿಚಾರಣೆ ಹಂತದಲ್ಲಿದೆ ಎಂಬ ಕಾರಣ ನೀಡಿ ನುಣುಚಿಕೊಂಡಿದ್ದಾರೆ. ಒಂದು ವೇಳೆ ತಮ್ಮ ಮಗನಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದಾಗಿದ್ದರೆ ಅದನ್ನೇ ನೇರವಾಗಿ ಹೇಳಬಹುದಿತ್ತಲ್ಲವೇ? ಅಷ್ಟಕ್ಕೂ ಅವರು ತಮ್ಮ ಮಗ ಕಾರಿನಲ್ಲಿರಲಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳಿಲ್ಲ. ಜೊತೆಗೆ ಆ ಘಟನೆ ನಡೆದ ವೇಳೆ ಮತ್ತು ಆ ಬಳಿಕ ಈವರೆಗೆ ತಮ್ಮ ಪುತ್ರ ಎಲ್ಲಿದ್ದ ಎಂಬುದನ್ನು ಹೇಳಲು ಹಿಂಜರಿದಿದ್ದು ಯಾಕೆ?
ಹೀಗೆ ಸಾಲು ಸಾಲು ಅನುಮಾನಗಳಿಗೆ ಸ್ವತಃ ಸಚಿವ ಅಶೋಕ್ ಮತ್ತು ಬಳ್ಳಾರಿ ಎಸ್ಪಿ ಬಾಬಾ ಅವರ ಹೇಳಿಕೆಗಳು ಎಡೆ ಮಾಡಿವೆ. ಆ ಹಿನ್ನೆಲೆಯಲ್ಲಿ ಇಡೀ ಪ್ರಕರಣ ಶಂಕಾಸ್ಪದವಾಗಿದ್ದು, ಸ್ವತಃ ಸಚಿವರ ಪುತ್ರ ಪಾನಮತ್ತನಾಗಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದಾನೆ ಎಂಬ ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸ್ ಅಧಿಕಾರಿಗಳ(ವೈಯಕ್ತಿಕ ಹೇಳಿಕೆ) ಹೇಳಿಕೆಗಳು ಸಚಿವರು ಮತ್ತು ಬಳ್ಳಾರಿ ಎಸ್ಪಿ ಪ್ರಕರಣವನ್ನು ತಿರುಚುತ್ತಿರುವ ಶಂಕೆ ಮೂಡಿಸಿವೆ. ಹಾಗಾಗಿ ಈ ಪ್ರಕರಣ ಕೂಡ ಮತ್ತೊಂದು ‘ಸಿ ಟಿ ರವಿ ಆಕ್ಸಿಡೆಂಟ್’ ಪ್ರಕರಣವಾಗುವ ಹಾದಿಯಲ್ಲಿದೆ.
ಒಂದು ಕಡೆ, ಶಾಲಾ ನಾಟಕದಲ್ಲಿ ಪ್ರಧಾನಿ ವಿರುದ್ಧ ಘೋಷಣೆ ಕೂಗಿದ ಬಡವರ ಮಕ್ಕಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ವೀರಾವೇಶ ಮೆರೆಯುತ್ತಿರುವ ಕರ್ನಾಟಕ ಪೊಲೀಸ್, ಮತ್ತೊಂದು ಕಡೆ ಅಧಿಕಾರಸ್ಥರ ಮಕ್ಕಳನ್ನು ನೈಜ ಅಪರಾಧದಿಂದ ಪಾರು ಮಾಡಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಇಡೀ ಪೊಲೀಸ್ ವ್ಯವಸ್ಥೆ ಆಡಳಿತಪಕ್ಷದ ಅಂಗರಕ್ಷಕ ಪಡೆಯಂತಾಗಿ ಹೋಗಿರುವಾಗ, ಸಚಿವರ ಮಗನ ಶೋಕಿಗೆ ಜೀವ ಬಿಟ್ಟ ಬಡವನಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಡಲಾದೀತೇ?