ದೇಶದ ಸೇನಾ ಇತಿಹಾಸದಲ್ಲೇ ಅತ್ಯಂತ ಭೀಕರ ಪುಲ್ವಾಮಾ ದಾಳಿ ನಡೆದು, ಸುಮಾರು ನಲವತ್ತು ಮಂದಿ ಸಿಆರ್ ಪಿಎಫ್ ಯೋಧರು ಆಘಾತಕಾರಿ ರೀತಿಯಲ್ಲಿ ಸಾವಿಗೀಡಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ಕಳೆದಿದೆ. ಒಂದು ವರ್ಷದ ಅವಧಿಯಲ್ಲಿ ಬದಲಾವಣೆಗಳು ಸಾಕಷ್ಟು ಆಗಿಹೋಗಿವೆ. ದಾಳಿಯ ಬಳಿಕ ಬಂದ ಲೋಕಸಭಾ ಚುನಾವಣೆಯಲ್ಲಿ ಆ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆಸಿದ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ವಿಷಯವನ್ನೇ ಮುಂದುಮಾಡಿ ದೇಶಭಕ್ತಿಯ ಅಲೆ ಎಬ್ಬಿಸಲಾಯಿತು. ಬಿಜೆಪಿ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. ಪ್ರಧಾನಿ ಮೋದಿಯವರು ಮತ್ತೆ ಗದ್ದುಗೆಗೇರಿದರು.
ಆದರೆ, ಜಮ್ಮುವಿನಿಂದ ಕಾಶ್ಮೀರದ ಶ್ರೀನಗರದತ್ತ ಸಾಗುತ್ತಿದ್ದ ಬರೋಬ್ಬರಿ 78 ಬಸ್ಸು ತುಂಬಿದ್ದ ಸುಮಾರು 2500 ಯೋಧರಿಗೆ ನೀಡಲಾಗಿದ್ದ ಭಾರೀ ಬೆಂಗಾವಲು ಪಡೆ ರಕ್ಷಣೆ, ಸಾರ್ವಜನಿಕ ಸಂಚಾರ ನಿಷೇಧಿತ ಹೆದ್ದಾರಿ, ಗುಪ್ತಚರ ಮಾಹಿತಿಯ ಹೊರತಾಗಿಯೂ ಬರೋಬ್ಬರಿ 80 ಕೆಜಿಯಷ್ಟು ಭಾರೀ ಪ್ರಮಾಣದ ಸ್ಫೋಟಕ ತುಂಬಿದ ಕಾರು ಸೇನಾ ವಾಹನಗಳ ನಡುವೆ ನುಸುಳಿದ್ದು ಹೇಗೆ? ಎಂಬ ಒಗಟಿಗೆ ಈಗಲೂ ಉತ್ತರ ಸಿಕ್ಕಿಲ್ಲ. ಘಟನೆಯ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಒಂದು ವರ್ಷದ ಅವಧಿಯಲ್ಲಿ ನಿರಂತರ ತನಿಖೆ ನಡೆಸಿದ್ದರೂ ಸ್ಫೋಟಕದ ಮೂಲದ ಬಗ್ಗೆಯಾಗಲೀ, ದಾಳಿಕೋರರಿಗೆ ನೆರವಾದ ವ್ಯಕ್ತಿಗಳ ಜಾಲದ ಬಗ್ಗೆಯಾಗಲೀ ಯಾವುದೇ ಸಾಕ್ಷ್ಯ ಸಂಗ್ರಹಿಸಲು ಸಫಲವಾಗಿಲ್ಲ!
ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ದಾಳಿಕೋರ ಆದಿಲ್ ಅಹಮದ್ ದರ್ ಕುರಿತು ಆತನ ಆ ಸಂಘಟನೆ ಬಿಡುಗಡೆ ಮಾಡಿದ ವೀಡಿಯೋ ತುಣುಕು ಮತ್ತು ಸ್ವತಃ ಆ ಉಗ್ರ ಸಂಘಟನೆಯೇ ದಾಳಿಯನ್ನು ತಾವೇ ನಡೆಸಿದ್ದು ಎಂಬ ಹೇಳಿಕೆ ಹೊರತುಪಡಿಸಿ ಘಟನೆಯ ಹಿಂದಿನ ರೂವಾರಿಗಳ ಬಗ್ಗೆ ಬೇರಾವುದೇ ಸಾಕ್ಷ್ಯ ಎನ್ ಐಎಗೆ ಲಭ್ಯವಾಗಿಲ್ಲ. ಅದೊಂದೇ ಸಾಕ್ಷ್ಯವನ್ನು ಇಟ್ಟುಕೊಂಡು ಎನ್ ಐಎ ದಾಳಿಯನ್ನು ಜೈಷ್ ಎ ಮೊಹಮ್ಮದ್ ಸಂಘಟನೆಯೇ ದಾಳಿ ನಡೆಸಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂಬುದನ್ನು ಸ್ವತಃ ಎನ್ ಐಎಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ಧಾರೆ ಎಂದು ‘ದಿ ಪ್ರಿಂಟ್’ ವರದಿ ಹೇಳಿದೆ.
ಎನ್ ಐಎ ಈವರೆಗೆ ಭೀಕರ ದಾಳಿಯ ಕುರಿತ ತನಿಖೆಯಲ್ಲಿ ಸಂಗ್ರಹಿಸಿರುವ ಮಹತ್ವದ ಮಾಹಿತಿ ಎಂದರೆ, ಅದು ಸ್ಫೋಟಕದಲ್ಲಿ ಬಳಕೆಯಾಗಿರುವ ರಾಸಾಯನಿಕಗಳ ಕುರಿತದ್ದು ಮಾತ್ರ. ಅಮೋನಿಯಂ ನೈಟ್ರೇಟ್, ನೈಟ್ರೋ-ಗ್ಲಿಸರಿನ್ ಮತ್ತು ಆರ್ ಡಿಎಕ್ಸ್ ಗಳನ್ನು ಸ್ಫೋಟಕದಲ್ಲಿ ಬಳಸಲಾಗಿದೆ ಎಂಬುದನ್ನು ಎನ್ ಐಎ ತನಿಖೆಯಿಂದ ಖಚಿತಪಡಿಸಿಕೊಳ್ಳಲಾಗಿದೆ. ಜೊತೆಗೆ ಬಳಕೆಯಾದ ಕಾರಿನ ಮಾದರಿ, ನೋಂದಣಿ ಸಂಖ್ಯೆ, ಅದರ ಹಿಂದಿನ ಮತ್ತು ದಾಳಿ ಸಂದರ್ಭದಲ್ಲಿನ ಮಾಲೀಕರ ಕುರಿತ ಮಾಹಿತಿಯನ್ನೂ ಕಲೆಹಾಕಿರುವುದಾಗಿ ಎನ್ ಐಎ ಹೇಳಿತ್ತು. ಆದರೆ, ದಾಳಿ ಸಂದರ್ಭದಲ್ಲಿನ ಕಾರಿನ ಮಾಲೀಕನ ಬಂಧನಕ್ಕೆ ಮುನ್ನ ಆತ ಕೂಡ ಜೈಷೆ ಉಗ್ರಗಾಮಿ ಸಂಘಟನೆ ಸೇರಿ ಎನ್ ಐಎ ಬೀಸಿದ್ದ ಬಲೆಯಿಂದ ಜಾರಿಕೊಂಡಿದ್ದಾನೆ.
ಅಲ್ಲದೆ, ದಾಳಿಕೋರ ದಾಳಿಯಲ್ಲೇ ಹತನಾಗಿದ್ದ ಮತ್ತು ಆತನಿಗೆ ತರಬೇತಿ ನೀಡಿ ಸಜ್ಜುಗೊಳಿಸಿದ್ದರು ಎನ್ನಲಾಗಿದ್ದ ಎಲ್ಲರೂ ಆ ಬಳಿಕದ ವಿವಿಧ ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದರಿಂದ ಘಟನೆಯ ಕುರಿತ ಯಾವುದೇ ಸಾಕ್ಷ್ಯವಾಗಲೀ, ಸಿಕ್ಕಿರುವ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಆಧಾರಗಳಾಗಲೀ ಸಿಕ್ಕಿಲ್ಲ. ಹಾಗಾಗಿ ಘಟನೆ ನಡೆದು ಒಂದು ವರ್ಷ ಕಳೆದರೂ ಎನ್ ಐಎ ಈವರೆಗೂ ಆ ದಾಳಿಯ ಕುರಿತು ಚಾರ್ಜ್ ಶೀಟ್ ಸಲ್ಲಿಸುವುದು ಕೂಡ ಸಾಧ್ಯವಾಗಿಲ್ಲ. ಹಾಗಾಗಿ ಒಂದು ರೀತಿಯಲ್ಲಿ ಇಡೀ ತನಿಖೆಯೇ ಅತಾರ್ಕಿತ ಅಂತ್ಯಕಂಡಂತಾಗಿದೆ.
ಜೊತೆಗೆ, ಗಣರಾಜ್ಯೋತ್ಸವದ ದಿನ ಭಯೋತ್ಪಾದನಾ ಕೃತ್ಯ ಎಸಗುವ ಸಂಚಿನ ಭಾಗವಾಗಿ ಕಳೆದ ಜನವರಿಯಲ್ಲಿ ಇಬ್ಬರು ಉಗ್ರಗಾಮಿಗಳನ್ನು ತನ್ನದೇ ಕಾರಿನಲ್ಲಿ ದೆಹಲಿಗೆ ಕರೆತರುತ್ತಿದ್ದ ಜಮ್ಮು-ಕಾಶ್ಮೀರ ಪೊಲೀಸ್ ಪಡೆಯ ಡಿವೈಎಸ್ಪಿ ದೇವಿಂದರ್ ಸಿಂಗ್ ಮತ್ತು ಪುಲ್ವಾಮಾ ದಾಳಿಯ ನಂಟಿನ ಕುರಿತೂ ಎನ್ ಐಎ ವಿಚಾರಣೆ ನಡೆಸಿದ್ದರೂ, ಈವರೆಗೆ ಆ ಕುರಿತ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಕಳೆದ ಜನವರಿ ಎರಡನೇ ವಾರ, ನವೀದ್ ಬಾಬು ಮತ್ತು ಆಸೀಫ್ ಅಹಮದ್ ಎಂಬ ಇಬ್ಬರು ಹಿಜ್ಬಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ವಾಟೆಂಟ್ ಉಗ್ರಗಾಮಿಗಳನ್ನು ದೆಹಲಿಗೆ ಕರೆತರುವಾಗ ದೇವಿಂದರ್ ಜಮ್ಮು-ಕಾಶ್ಮೀರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.
ಅದೇ ದೇವಿಂದರ್ ಸಿಂಗ್, ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯ ವಿಶೇಷಾಧಿಕಾರಿಯಾಗಿ ಪುಲ್ವಾಮಾ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ. ಹಾಗಾಗಿ ಹಿಜ್ಬುಲ್ ಮತ್ತಿತರ ಉಗ್ರಗಾಮಿ ಸಂಘಟನೆಗಳೊಂದಿಗಿನ ಆತನ ನಂಟಿನ ಹಿನ್ನೆಲೆಯಲ್ಲಿ ಪುಲ್ವಾಮಾ ದಾಳಿಯ ತನಿಖೆಯ ವ್ಯಾಪ್ತಿಗೆ ಆತನನ್ನೂ ಸೇರಿಸಬೇಕು ಎಂದು ವಾದ ಕೇಳಿಬಂದಿತ್ತು. ಜೊತೆಗೆ ಇದೇ ದೇವಿಂದರ್ ಸಿಂಗನನ್ನು 2019ರ ನವೆಂಬರಿನಲ್ಲಿ, ಆತ ಉಗ್ರರೊಂದಿಗೆ ಬಂಧನಕ್ಕೊಳಗಾಗುವ ಕೇವಲ ಎರಡು ತಿಂಗಳ ಹಿಂದೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಯುರೋಪ್ ಸಂಸದರ ನಿಯೋಗದ ಭದ್ರತಾ ಉಸ್ತುವಾರಿ ಅಧಿಕಾರಿಯಾಗಿಯೂ ನೇಮಕವಾಗಿದ್ದ. ಆಶ್ಚರ್ಯವೆಂದರೆ; ಈ ದೇವಿಂದರ್ ಸಿಂಗ್ ಒಬ್ಬ ಡಿವೈಎಸ್ಪಿ ಹುದ್ದೆಯ ಅಧಿಕಾರಿಯಾಗಿದ್ದರೂ ಅಂತಹ ಅಂತಾರಾಷ್ಟ್ರೀಯ ಮಹತ್ವದ ನಿಯೋಗದ ಭದ್ರತಾ ಹೊಣೆಗಾರಿಕೆ ವಹಿಸಿದ್ದು ಯಾಕೆ ಎಂಬುದು ಮತ್ತು ಅದಾಗಲೇ ಆತನ ವಿರುದ್ಧ ಭಯೋತ್ಪಾದಕರೊಂದಿಗಿನ ನಂಟಿನ ಆರೋಪಗಳಿದ್ದರೂ, ಆ ಎಲ್ಲಾ ಗಂಭೀರ ಆರೋಪಗಳನ್ನು ಬದಿಗೊತ್ತಿ ಆತನನ್ನು ಯಾಕೆ ನಿಯೋಜನೆ ಮಾಡಲಾಗಿತ್ತು ಮತ್ತು ಆತನ ಅಂತಹ ಪ್ರಭಾವದ ಹಿಂದೆ ಯಾರಿದ್ದಾರೆ ಎಂಬುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು.
2001ರ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಉಗ್ರರಿಗೆ ಕುಮ್ಮಕ್ಕು ನೀಡಿದ್ದೇ ಈ ದೇವಿಂದರ್ ಸಿಂಗ್ ಎಂಬ ಮಾಹಿತಿ ಕೂಡ ಸ್ವತಃ ದಾಳಿಯ ಆರೋಪದಡಿ ನೇಣಿಗೇರಿದ ಅಫ್ಜಲ್ ಗುರು ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಬಹಿರಂಗವಾಗಿತ್ತು. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ ಸಂಸತ್ ಭವನದ ದಾಳಿಯ ನೇತೃತ್ವ ವಹಿಸಿದ್ದ ಉಗ್ರ ಮಹಮದ್ ನನ್ನು ತನಗೆ ಪರಿಚಯಿಸಿ, ಆತನಿಗೆ ನೆರವಾಗುವಂತೆ ತನಗೆ ಬೆದರಿಕೆಯೊಡ್ಡಿದ್ದೇ ಅಂದು ಉಗ್ರ ನಿಗ್ರಹ ಪಡೆಯ ಅಧಿಕಾರಿಯಾಗಿದ್ದ ದೇವಿಂದರ್ ಸಿಂಗ್ ಎಂಬ ಮಾಹಿತಿಯನ್ನು ಅಫ್ಜಲ್ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದು, ಮಾಧ್ಯಮ ವರದಿಗಳಲ್ಲಿ ಬಹಿರಂಗವಾಗಿತ್ತು. ಆ ಮಾಹಿತಿ ತನಿಖಾ ಸಂಸ್ಥೆಗಳಿಗೂ ಇತ್ತು. ಆದರೆ, ಅಂದು ತನಿಖಾ ಸಂಸ್ಥೆಗಳು ಸಂಪೂರ್ಣವಾಗಿ ಆತನ ಕುರಿತ ಪ್ರಸ್ತಾಪವನ್ನು, ಮಾಹಿತಿಯನ್ನು ಬದಿಗೊತ್ತಿ ತನಿಖೆ ಮುಂದುವರಿಸಿದವು ಎಂಬ ಆರೋಪಗಳು ಕೇಳಿಬಂದಿದ್ದವು.
ಆ ಬಳಿಕ ಆತ ವೃತ್ತಿಯಲ್ಲಿ ಬಹುತೇಕ ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿಯಾಗಿಯೇ ಮುಂದುವರಿದಿದ್ದ. ಇದೀಗ 20 ವರ್ಷಗಳ ಬಳಿಕ ಮತ್ತೆ ಆತ ವಿದೇಶಿ ಸಂಸದರ ನಿಯೋಗದ ಭದ್ರತೆಯ ಉಸ್ತುವಾರಿ, ಪುಲ್ವಾಮಾದಲ್ಲಿ ಸೇನಾ ಪಡೆ ಯೋಧರ ಸಾಗಣೆ ವಾಹನಗಳ ಭದ್ರತಾ ಉಸ್ತುವಾರಿಯಂತಹ ಮಹತ್ವದ ಹೊಣೆಗಾರಿಕೆಗೆ ಮರಳಿದ್ದ. ಇಪ್ಪತ್ತು ವರ್ಷಗಳಷ್ಟು ಹಿಂದೆಯೇ ಆತನ ವಿರುದ್ಧ ಭಯೋತ್ಪಾದಕರೊಂದಿಗೆ ಕೈಜೋಡಿಸಿದ ಆರೋಪಗಳು ಕೇಳಿಬಂದಿದ್ದರೂ, ಆತನ ವಿರುದ್ಧ ಯಾವುದೇ ಗಂಭೀರ ತನಿಖೆಯನ್ನೂ ನಡೆಸದೆ, ಆತನಿಗೆ ಮತ್ತೆ ಗುರುತರ ಜವಾಬ್ದಾರಿಗಳನ್ನು ವಹಿಸುವ ಮೂಲಕ ಪ್ರಮೋಷನ್ ನೀಡಲಾಗಿತ್ತು! ಮತ್ತು ಇದೀಗ ವಿದೇಶಿ ಸಂಸದರ ನಿಯೋಗದಂತಹ ಉನ್ನತ ನಿಯೋಗದ ಭದ್ರತಾ ಹೊಣೆಗಾರಿಕೆಯನ್ನೂ ವಹಿಸಲಾಗಿತ್ತು!
ಕಾಕತಾಳೀಯವೆಂದರೆ; ಸಂಸತ್ ಭವನದ ಮೇಲೆ ದಾಳಿ ನಡೆದಾಗ ಮತ್ತು ಆತ ಮತ್ತೆ ಗುರುತರ ಹೊಣೆಗಾರಿಕೆಗೆ ಮರಳಿದಾಗ ಎರಡೂ ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಭಾರತೀಯ ಜನತಾ ಪಾರ್ಟಿ ಸರ್ಕಾರ! ಈಗಲೂ ಆತ ದೆಹಲಿಯ ಗಣರಾಜ್ಯೋತ್ಸವ ಸಮಾರಂಭದ ಮೇಲೆ ದಾಳಿ ನಡೆಸುವ ಸಂಚಿನ ಮೇಲೆ ತೆರಳುತ್ತಿದ್ದ ಇಬ್ಬರು ಉಗ್ರರನ್ನು ತನ್ನ ಸ್ವಂತ ಕಾರಿನಲ್ಲಿ ಸುರಕ್ಷಿತವಾಗಿ ಭದ್ರತಾ ಪಡೆಗಳ ಕಣ್ತಪ್ಪಿಸಿ ಕರೆದೊಯ್ಯುತ್ತಿರುವಾಗ ಅಚಾನಕ್ಕಾಗಿ ಸಿಕ್ಕಿಬಿದ್ದಿದ್ದರೂ, ಪುಲ್ವಮಾ ದಾಳಿ ಸಂದರ್ಭದಲ್ಲಿ ಆ ಭಾಗದಲ್ಲಿ ಆತ ನಿಯೋಜನೆಯಾಗಿದ್ದ ಎಂಬ ಮಾಹಿತಿಗಳಿದ್ದರೂ, ಎನ್ ಐಎ ಆತನ ವಿಚಾರಣೆ ನಡೆಸಿದ್ದರೂ, ಪುಲ್ವಾಮಾ ದಾಳಿಯ ಕುರಿತ ತನಿಖೆಯಲ್ಲಿ ಆತನ ಹೆಸರು ಈವರೆಗೆ ಪ್ರಸ್ತಾಪವಾಗಿಲ್ಲ ಎನ್ನಲಾಗುತ್ತಿದೆ!
ಈ ನಡುವೆ, ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ಹತ್ತಾರು ನೆರವು, ಪರಿಹಾರ ಘೋಷಿಸಿದ್ದ ಭಾರತೀಯ ಜನತಾ ಪಾರ್ಟಿ ಸರ್ಕಾರ, ಒಂದು ವರ್ಷ ಕಳೆದರೂ ಅಧಿಕೃತ ಸೇನಾ ಪರಿಹಾರ ಹೊರತುಪಡಿಸಿ ಇನ್ನಾವುದೇ ನೆರವು ನೀಡಿಲ್ಲ. ಯೋಧರ ಕುಟುಂಬಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಚುನಾವಣಾ ಲಾಭಕ್ಕಾಗಿ ಯೋಧರ ಬಲಿದಾನವನ್ನು, ಅವರ ಕುಟುಂಬಗಳನ್ನು ಬಳಸಿಕೊಂಡು ಬಿಜೆಪಿ ಕೂಡ ತಮ್ಮನ್ನು ಮರೆತಿದೆ ಎಂದು ಹಲವು ಹುತಾತ್ಮರ ಕುಟುಂಬಸ್ಥರು ಆರೋಪಿಸಿದ್ದಾರೆ. ಭರವಸೆ ನೀಡಿದ್ದ ವಿಶೇಷ ನೆರವು, ಸವಲತ್ತುಗಳಿರಲಿ, ಕನಿಷ್ಠ ಸೇನಾ ನಿಯಮದ ಪ್ರಕಾರ ನೀಡುವ ಸೌಲಭ್ಯ- ಸವಲತ್ತುಗಳನ್ನೂ ನೀಡಿಲ್ಲ. ತಮ್ಮನ್ನು ಸರ್ಕಾರ ಯೋಧರ ಕುಟುಂಬದವರು ಎಂಬಂತೆಯೂ ನೋಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ‘ದ ಕ್ವಿಂಟ್’ ವರದಿ ಈ ದಾರುಣ ಕಥೆಯನ್ನು ಬಿಚ್ಚಿಟ್ಟಿದ್ದು, ದೇಶಭಕ್ತಿ, ಸೇನೆ, ಯೋಧರ ತ್ಯಾಗ-ಬಲಿದಾನದ ಮಾತುಗಳನ್ನು ಆಡಿ, ಭಾವನಾತ್ಮಕ ದೇಶಪ್ರೇಮದ ಅಲೆ ಎಬ್ಬಿಸಿ ಚುನಾವಣೆ ಗೆಲ್ಲುವ ಬಿಜೆಪಿ ಮತ್ತು ಬಿಜೆಪಿ ಸರ್ಕಾರ ನೈಜವಾಗಿ ಯೋಧರ ಬಗ್ಗೆ ಹೊಂದಿರುವ ಕಾಳಜಿ ಎಷ್ಟು ಎಂಬುದಕ್ಕೆ ಪುಲ್ವಾಮಾ ಹುತಾತ್ಮರ ಕುಟುಂಬಗಳ ಕಣ್ಣೀರಿನ ಕಥೆಯೇ ಜ್ವಲಂತ ನಿದರ್ಶನ ಎಂದು ಬಣ್ಣಿಸಿದೆ.
ಒಟ್ಟಾರೆ, 44 ಮಂದಿ ಯೋಧರನ್ನು ಭೀಕರ ಸಾವಿಗೆ ಕಾರಣವಾದ ಹೀನಾಯ ಪುಲ್ವಾಮಾ ದಾಳಿ, ಆ ಬಳಿಕವೂ ದೇಶದ ಜನರಲ್ಲಿ ಹಲವು ಅನುಮಾನಗಳನ್ನು ಬಿಟ್ಟುಹೋಗಿದೆ. ಹುತಾತ್ಮರ ಕುಟುಂಬಗಳಿಗೆ ಆರದ ಗಾಯವನ್ನು ಉಳಿಸಿಹೋಗಿದೆ. ಆದರೆ, ಆ ಅನುಮಾನ ಮತ್ತು ಗಾಯಗಳಿಗೆ ಪರಿಹಾರ ಕೊಡಬೇಕಿದ್ದ ಸರ್ಕಾರ ಮಾತ್ರ ಜನರ ಪ್ರಶ್ನೆಗಳಿಗೂ, ಹುತಾತ್ಮರ ಕುಟುಂಬದವರ ಕಣ್ಣೀರಿಗೂ ಕುರುಡಾಗಿ ಕೂತಿದೆ!