ಮಹಾರಾಷ್ಟ್ರದ ಪೂನಾದ ಮುಕ್ತಾ ಸಾಳ್ವೆ ಎಂಬ ದಲಿತ ಯುವತಿ 165 ವರ್ಷಗಳ ಹಿಂದೆ ತನ್ನ ಸಮುದಾಯದ ಸಂಕಟವನ್ನು ದಾಖಲಿಸಿದಳು. ದೇಶದ ಹಿಂದುಳಿದ-ದಲಿತ ವರ್ಗಗಳ ಮಹಾನ್ ಚೇತನಗಳಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ನಡೆಸುತ್ತಿದ್ದ ಶಾಲೆಯ ವಿದ್ಯಾರ್ಥಿನಿಯಾಗಿದ್ದವಳು ಈ ಮುಕ್ತಾ ಸಾಳ್ವೆ. ಆಗ ಆಕೆ ತಾನು ಹುಟ್ಟಿ ಬೆಳೆದ ಮಾಂಗ್ ಮತ್ತು ಅದರ ಸೋದರ ಸಮುದಾಯವಾದ ಮಹಾರ್ (ಕರ್ನಾಟಕದ ಮಾದಿಗ ಮತ್ತು ಹೊಲೆಯ ಸಮುದಾಯಗಳ ಸಂವಾದಿ ಜಾತಿಗಳು) ಜನರ ಬದುಕಿನ ಬವಣೆಗಳನ್ನು ವಿವರಿಸಿ ಮುಕ್ತಾ ಸಾಳ್ವೆ ಬರೆದ ಪ್ರಬಂಧವು ಆಗಿನ ಮರಾಠಿಯ ಪಾಕ್ಷಿಕ ಪತ್ರಿಕೆಯಾದ ‘ಜ್ಞಾನೋದಯ’ದಲ್ಲಿ ಪ್ರಕಟವಾಗಿತ್ತು. 15 ಫೆಬ್ರವರಿ 1855 ಮತ್ತು 1ನೇ ಮಾರ್ಚ್ 1855ರ ಎರಡು ಸಂಚಿಕೆಗಳಲ್ಲಿ ಎರಡು ಭಾಗಗಳಾಗಿ ಪ್ರಕಟವಾಗಿತ್ತು. ಈ ಪ್ರಬಂಧವನ್ನು ಕನ್ನಡದ ಓದುಗರಿಗಾಗಿ ಅನುವಾದಿಸಿದ್ದಾರೆ ಚಿಂತಕ – ಯೋಗೇಶ್ ಮಾಸ್ಟರ್. ಟ್ರುಥ್ ಇಂಡಿಯಾ ಇಲ್ಲಿ ಅದನ್ನು ಪ್ರಕಟಿಸುತ್ತಿದೆ.
ಮಾಂಗ್ ಮಹಾರಾಂಚ್ಯ ದುಃಖವಿಸಥಾ ಅಥವಾ ಹೊಲೆಮಾದಿಗರ ದುಃಖಗಾಥೆ
ದೇವರು ನನ್ನಂತಹ ಅಸ್ಪೃಶ್ಯ ಹುಡುಗಿಯೊಬ್ಬಳ ಹೃದಯದಲ್ಲಿ “ನಾವು ಪಶುಗಳಿಗಿಂತ ಹೀನವಾದವರು” ಎಂಬ ಭಾವವನ್ನೂ ಮತ್ತು ಅದರೊಂದಿಗೆ ನನ್ನವರಾದ ಮಹಾರ್ ಮತ್ತು ಮಾಂಗರ ನೋವು ಮತ್ತು ಸಂಕಟಗಳೊಡನೆ ಹೀಗೆ ತುಂಬಿರುವುದನ್ನು ತಿಳಿದು ಕುಸಿದು ಹೋಗುತ್ತೇನೆ.
ನನ್ನ ಹೃದಯದಲ್ಲಿ ಎಲ್ಲಾ ಜೀವಿಗಳ ಸೃಷ್ಟಿಕರ್ತನ ಹೆಸರನ್ನು ಸ್ಮರಿಸಿಕೊಳ್ಳುತ್ತಾ ಈಗ ಈ ಲೇಖನ ಬರೆಯಲು ನನಗಿರುವ ಧೈರ್ಯದ ಬಲವನ್ನು ಪಡೆದಿದ್ದೇನೆ.
ಸೃಷ್ಟಿಕರ್ತನೇ ಮಾಂಗ್ ಮತ್ತು ಮಹಾರರನ್ನು ಸೃಷ್ಟಿಸಿದ್ದು ಹಾಗೆಯೇ ಬ್ರಾಹ್ಮಣರನ್ನೂ ಕೂಡ ಸೃಷ್ಟಿಸಿದ್ದಾನೆ. ಹಾಗೆಯೇ ಅವನೇ ಇದನ್ನು ಬರೆಯಲೂ ನನಗೆ ಜ್ಞಾನವನ್ನು ತುಂಬಿದ್ದಾನೆ. ಅವನು ಈ ನನ್ನ ಕೆಲಸವು ಫಲಪ್ರದವಾಗುವಂತೆ ಹರಸುತ್ತಾನೆ.
ವೇದಗಳ ಆಧಾರದಲ್ಲಿ ನಮ್ಮನ್ನು ನಿರಾಕರಿಸುತ್ತಾ ದ್ವೇಷಿಸುತ್ತಾ ತಮ್ಮನ್ನು ತಾವು ಶ್ರೇಷ್ಟರೆಂದು ಕರೆದುಕೊಳ್ಳುವ ಈ ತಿಂಡಿ ಪೋತ ಬ್ರಾಹ್ಮಣರು ವೇದಗಳನ್ನು ತಮ್ಮದೆನ್ನುವರು. ಅವರದೇ ಸ್ವಾಯತ್ತೆಯಲ್ಲಿರುವವು ವೇದಗಳು. ಅಂದರೆ ಅವು ಖಂಡಿತವಾಗಿ ನಮಗಲ್ಲ. ನಾವು ಆ ಗ್ರಂಥವಿಲ್ಲದಿದ್ದೇವೆ. ನಮಗೆ ಆ ಧರ್ಮಗ್ರಂಥವಿಲ್ಲವೆನ್ನುವುದು ತೆರೆದ ಸತ್ಯ.
ನಮಗೆ ಗ್ರಂಥವೂ ಇಲ್ಲ, ಯಾವ ಧರ್ಮವೂ ಇಲ್ಲ. ವೇದಗಳು ಬ್ರಾಹ್ಮಣರದಾದಲ್ಲಿ ನಾವು ಅದರ ಅನುಸಾರ ನಡೆದುಕೊಳ್ಳುವ ಅಗತ್ಯವೂ ಇಲ್ಲ. ಬ್ರಾಹ್ಮಣರು ಹೇಳುವಂತೆ ವೇದಗಳನ್ನು ನೋಡುವುದರಿಂದಲೇ ನಮಗೆ ಪಾತಕವಾದಂತಹ ಪಾಪವು ಸುತ್ತಿಕೊಳ್ಳುವುದೆಂದರೆ ಅದನ್ನು ಅನುಸರಿಸುವುದು ಮೂರ್ಖತನದ ಪರಮಾವಧಿಯಲ್ಲವೇ. ಮುಸಲ್ಮಾನರು ಕುರಾನಿನ ಅನುಸಾರ ತಮ್ಮ ಜೀವನವನ್ನು ನಡೆಸುವರು. ಇಂಗ್ಲೀಷಿನವರು ಅವರ ಬೈಬಲ್ಲನ್ನು ಅನುಸರಿಸುವರು. ಬ್ರಾಹ್ಮಣರಿಗೆ ಅವರಿಗೇ ಆದ ಅವರ ವೇದಗಳಿವೆ. ಚೆನ್ನಾಗಿದೆಯೋ, ಚೆನ್ನಾಗಿಲ್ಲವೋ, ಆದರೆ ಅವರವರದೇ ಆದಂತಹ ಧರ್ಮಗಳು ಅವರಿಗೆ ಅನುಸರಿಸಲು ಇವೆ. ಅವರೆಲ್ಲರೂ ಯಾವ ಧರ್ಮವೂ ಇಲ್ಲದ ನಮಗಿಂತ ತಕ್ಕಮಟ್ಟಗಿನ ಸಂತೋಷದಿಂದಿದ್ದಾರೆ.
ಓ ದೇವರೇ. ನಮ್ಮ ಧರ್ಮ ಯಾವುದೆಂದು ದಯಮಾಡಿ ನಮಗೆ ಹೇಳು. ಓ ದೇವರೇ, ಅದರ ಅನುಸಾರ ನಾವು ನಮ್ಮ ಜೀವನವನ್ನು ನಡೆಸಲು ನಿನ್ನ ನಿಜವಾದ ಧರ್ಮವನ್ನು ನಮಗೆ ಬೋಧಿಸು. ಆ ನಿನ್ನ ಧರ್ಮದಿಂದ ಯಾರೋ ಒಬ್ಬರು ಸುಖವಾಗಿದ್ದು ಉಳಿದವರು ಕೀಳಾಗಿ ನರಳುವಂತಹದ್ದು ಈ ಭೂಮಿಯಿಂದಲೇ ತೊಲಗಿಬಿಡಲಿ, ಜೊತೆಗೆ ನಮ್ಮ ಮನಸ್ಸುಗಳಲ್ಲಿ ಧರ್ಮಶ್ರೇಷ್ಟತೆಯ ಬಗ್ಗೆ ಕೊಚ್ಚಿಕೊಳ್ಳುವುದು ಎಂದಿಗೂ ನುಸುಳದಿರಲಿ.
ಈ ಜನರು ಬಡವರಾದ ಮಾಂಗ್ ಮತ್ತು ಮಹಾರರಾಗಿರುವ ನಮ್ಮನ್ನು ನಮ್ಮದೇ ನೆಲದಿಂದ ಓಡಿಸಿ ತಮ್ಮ ದೊಡ್ಡದೊಡ್ಡ ಮಹಲುಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ. ಅವರು ಕೆಂಪು ಇಂಗಾಲ ಬೆರೆಸಿರುವ ಎಣ್ಣೆಯನ್ನು ಮಾಂಗ್ ಮತ್ತು ಮಹಾರರು ಕುಡಿಯುವಂತೆ ಮಾಡಿ, ತಮ್ಮ ಮಹಲುಗಳ ತಳಪಾಯಗಳಲ್ಲಿ ಆ ನಮ್ಮ ಜನರನ್ನು ಹೂಳುತ್ತಿದ್ದಾರೆ. ಹಾಗೆ ಮಾಡುತ್ತಾ ಈ ದೀನಜನರನ್ನು ಪೀಳಿಗೆಯಿಂದ ಪೀಳಿಗೆಗೆ ಅಳಿಸಿ ಹಾಕುತ್ತಿದ್ದಾರೆ.
ಈ ಬ್ರಾಹ್ಮಣರು ನಮ್ಮನ್ನು ಅದೆಷ್ಟು ಕಡೆಗಣಿಸುತ್ತಾರೆಂದರೆ ಹಸು ಮತ್ತು ಎಮ್ಮೆಗಳಿಗಿಂತ ಕೀಳಾಗಿ ಕಾಣುತ್ತಾರೆ. ಬಾಜಿ ರಾವ್ ಪೇಶ್ವೆಯ ಕಾಲದಲ್ಲಿ ನಮ್ಮನ್ನು ಕೋತಿಗಳಿಗಿಂತಲೂ ಕಡೆಯಾಗಿ ಕಂಡಿದ್ದರಲ್ಲವೇ?
ನೀವು ಮೊಂಡು ಕತ್ತೆಯೊಂದಕ್ಕೆ ಹೊಡೆಯಿರಿ. ಅದರ ಯಜಮಾನ ನಿಮಗೆ ತಿರುಗಿ ಬೀಳುತ್ತಾನೆ. ಆದರೆ ಮಾಂಗ್ ಮತ್ತು ಮಹಾರರಿಗೆ ಹೊಡೆಯುತ್ತಲೇ ಇರುವಂತಹ ರೂಢಿಯನ್ನು ವಿರೋಧಿಸಲು ಯಾರಿದ್ದಾರೆ? ಬಾಜೀರಾಯನ ಆಳ್ವಿಕೆಯಲ್ಲಿ ಯಾರಾದರೂ ಮಾಂಗ್ ಅಥವಾ ಮಹಾರನು ಅವರ ವ್ಯಾಯಾಮ ಶಾಲೆಯ ಮುಂದೆ ಹಾದೇನಾದರೂ ಹೋಗಿಬಿಟ್ಟರೆ ಅವನ ತಲೆ ಕಡಿದು ಕತ್ತಿಯನ್ನೇ ಬ್ಯಾಟನ್ನಾಗಿಸಿಕೊಂಡು, ಉರುಳಿದ ತಲೆಯನ್ನು ಚೆಂಡಾಗಿಸಿಕೊಂಡು “ಬ್ಯಾಟ್ – ಬಾಲ್” ಆಡುತ್ತಿದ್ದರು. ಅವರ ಬಾಗಿಲುಗಳ ಮುಂದೆಯೇ ಹಾದು ಹೋಗಲಾಗದಿರುವಂತಹ ಸಂದರ್ಭದಲ್ಲಿ ನಮಗೆ ವಿದ್ಯೆ ಪಡೆಯುವ, ಕಲಿಯಲು ಸ್ವಾತಂತ್ರವನ್ನು ಹೊಂದುವ ಪ್ರಶ್ನೆ ಎಲ್ಲಿ? ಒಂದು ವೇಳೆ ಹೇಗಾದರೂ ಮಾಂಗ್ ಮತ್ತು ಮಹಾರರು ಬರೆಯುವುದು ಓದುವುದನ್ನು ಕಲಿತುಬಿಟ್ಟರೆ, ಅದೇನಾದರೂ ಬಾಜಿರಾಯನಿಗೆ ತಿಳಿದರೆ, ಈ ವಿದ್ಯಾವಂತ ಮಾಂಗ್ ಅಥವಾ ಮಹಾರರು ಬ್ರಾಹ್ಮಣರ ನೌಕರಿಗಳನ್ನು ಕಿತ್ತುಕೊಂಡುಬಿಡುತ್ತಾರೇನೋ ಎನ್ನುವಂತೆ, “ವಿದ್ಯೆ ಪಡೆಯಲು ಅವರಿಗೆ ಅದೆಷ್ಟು ಧೈರ್ಯ? ಈ ಬ್ರಾಹ್ಮಣರು ಅವರ ಕಛೇರಿಯ ಕೆಲಸಗಳನ್ನು ಇವರಿಗೆ ಹಸ್ತಾಂತರಿಸಿ, ಕ್ಷೌರಿಕರ ಹಡಪವನ್ನು ಹೊತ್ತುಕೊಂಡು ಅಲೆಯುತ್ತಾ ವಿಧವೆಯರ ತಲೆಬೋಳಿಸಿಕೊಂಡು ಇರಬೇಕೆಂದು ನಿರೀಕ್ಷಿಸುತ್ತಾರೇನು?” ಎನ್ನುತ್ತಾ ಅವರನ್ನು ಶಿಕ್ಷಿಸುತ್ತಿದ್ದ.
ಆಮೇಲೆ ಇವರನ್ನು ಕಲಿಯುವುದರಿಂದ ಹೊರದೂಡಿ ತೃಪ್ತರಾದರೇನು? ಇಲ್ಲವೇ ಇಲ್ಲ. ಬಾಜಿರಾಯನು ಕಾಶಿಗೆ ಹೋದಾಗ ಅಲ್ಲಿ ನಾಚಿಗೆಟ್ಟ ಸಾವನ್ನು ಸತ್ತ. ಆದರೆ ಇಲ್ಲಿ ಮಹಾರರು, ಅವರೇನು ಮಾಂಗ್ಗಳಿಗಿಂತ ಕಡಿಮೆ ಅಸ್ಪೃಶ್ಯರೇನಲ್ಲ, ಆದರೂ ಅವರು ಮಾಂಗ್ಗಳ ಜೊತೆ ಸೇರುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಅವರು ಕೆಲವು ಬ್ರಾಹ್ಮಣರ ಚರ್ಯೆಗಳನ್ನು ಹೊಂದಿ, ತಾವು ಮಾಂಗ್ಗಳಿಗಿಂತ ಮೇಲ್ಮಟ್ಟದವರು ಎಂದು ತಿಳಿದುಕೊಂಡಿದ್ದರು. ಮಾಂಗರ ನೆರಳು ಸೋಕಿದರೆ ತಾವು ಕಲುಷಿತಗೊಳ್ಳುತ್ತೇವೆಂದುಕೊಳ್ಳುತ್ತಿದ್ದರು!
ಮಡಿಯುಟ್ಟು ತಮ್ಮ ಶ್ರೇಷ್ಟತೆಯನ್ನು ಗರ್ವದಿಂದ ಗರ್ಜಿಸುವ ಕಲ್ಲು ಹೃದಯದ ಬ್ರಾಹ್ಮಣರು, ಅಸ್ಪೃಶ್ಯತೆಯ ಲಾಂಛನವನ್ನು ಹೊತ್ತು ನರಳುತ್ತಿರುವ ನಮ್ಮ ಬಗ್ಗೆ ಎಂದಾದರೂ ಕರುಣೆಯ ಚಿಕ್ಕ ಚುಳುಕನ್ನು ಹೊಂದಿದ್ದಾರೆಯೇ? ನಾವು ಅಸ್ಪೃಶ್ಯರಾಗಿರುವ ಕಾರಣ ನಮಗ್ಯಾರೂ ನೌಕರಿ ಕೊಡುವುದಿಲ್ಲ. ನೌಕರಿ ಇಲ್ಲವೆಂದರೆ ಹಣವಿಲ್ಲ. ನಾವು ಕಿತ್ತುತಿನ್ನುವ ಬಡತನದಲ್ಲಿಯೇ ಬದುಕಬೇಕು.
ಓ ವಿದ್ವಾಂಸರಾಗಿರುವ ಪಂಡಿತರೇ, ನಿಮ್ಮ ಸ್ವಾರ್ಥ ಪೌರೋಹಿತ್ಯದ ತಂತ್ರವನ್ನು ಮಡಿಸಿಟ್ಟು ಮತ್ತು ನಿಮ್ಮ ಪೆÇಳ್ಳು ಜ್ಞಾನದ ಅಸಂಬದ್ಧ ಮಾತುಗಳನ್ನು ನಿಲ್ಲಿಸಿ ನಾನು ಹೇಳುವುದನ್ನು ಕೇಳಿ.
ನಮ್ಮ ಹೆಂಗಸರು ತಮ್ಮ ಮಕ್ಕಳನ್ನು ಹೆತ್ತಾಗ ಅವರ ತಲೆಯ ಮೇಲೆ ಸೂರೂ ಕೂಡಾ ಇರುವುದಿಲ್ಲ. ಅವರೆಷ್ಟು ಮಳೆ ಮತ್ತು ಶೀತದಿಂದ ನರಳುವರು. ದಯವಿಟ್ಟು ಅದನ್ನು ನಿಮ್ಮ ಅನುಭವವೆಂಬಂತೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅವರು ಹೆರುವಾಗ ಖಾಯಿಲೆಗಳಿಗೆ ತುತ್ತಾದರೆ ವೈದ್ಯರಿಗೆ ಕೊಡಲು ಹಣವನ್ನು ಅವರು ಎಲ್ಲಿಂದ ತರಬೇಕು? ನಿಮ್ಮಲ್ಲಿ ಯಾರಾದರೂ ಒಬ್ಬ ವೈದ್ಯರಿದ್ದಾರೆಯೇ, ಮಾನವೀಯ ದೃಷ್ಟಿಯಿಂದ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು?
ಬ್ರಾಹ್ಮಣರ ಮಕ್ಕಳು ಮಾಂಗ್ ಮತ್ತು ಮಹಾರರ ಮಕ್ಕಳಿಗೆ ಕಲ್ಲುಗಳನ್ನು ಎಸೆದು ಗಂಭೀರವಾದ ಗಾಯಗಳಾದರೂ ಎಂದಿಗೂ ಇವರು ದೂರು ನೀಡುವ ಧೈರ್ಯ ಮಾಡುವುದಿಲ್ಲ. ಏಕೆಂದರೆ ಅವರು ಬ್ರಾಹ್ಮಣರ ಮನೆಗಳಿಗೆ ಹೋಗಿ ಉಳಿದ ತಂಗಳು ಆಹಾರಕ್ಕಾಗಿ ಭಿಕ್ಷೆ ಬೇಡಬೇಕಲ್ಲಾ ಎಂದು ಸದ್ದು ಮಾಡದೆಯೇ ನರಳುತ್ತಾರೆ.
ಅಯ್ಯೋ ದೇವರೇ, ಎಂತಾ ಸಂಕಟವಿದು. ಈ ಅನ್ಯಾಯವನ್ನು ಕುರಿತು ಹೆಚ್ಚು ಬರೆಯ ಹೋದರೆ ದುಃಖ ಉಮ್ಮಳಿಸುತ್ತದೆ. ಏಕೆಂದರೆ ಅದು ಅಂತಾ ತುಳಿತ. ಕರುಣಾಮಯಿಯಾದ ದೇವರು ನಮಗೆ ಪರೋಪಕಾರಿಯಾದ ಬ್ರಿಟೀಶ್ ಸರಕಾರವನ್ನು ದಯಪಾಲಿಸಿದ್ದಾನೆ. ನೋಡೋಣ, ಈ ಸರಕಾರದಿಂದ ನಮ್ಮ ನೋವು ಎಷ್ಟರಮಟ್ಟಿಗೆ ತಗ್ಗುವುದೋ ಎಂದು.
ಈ ಮೊದಲು ಗೋಖಲೆ, ಆಪ್ಟೆ, ತ್ರಿಮ್ಕಾಜಿ, ಅಂಧಾಳ, ಪನ್ಸಾರ, ಕಾಳೆ, ಬೆಹ್ರೆ ಮುಂತಾದವರು (ಇವೆಲ್ಲವೂ ಬ್ರಾಹ್ಮಣರ ಕುಲನಾಮಗಳು) ತಮ್ಮ ಮನೆಗಳಲ್ಲಿ ಇಲಿಗಳನ್ನು ಕೊಂದು ತಮ್ಮ ಶೌರ್ಯವನ್ನು ಮೆರೆಯುತ್ತಿದ್ದವರು, ಬಸುರಿ ಹೆಂಗಸರನ್ನೂ ಬಿಡದಂತೆ ನಮ್ಮನ್ನೆಲ್ಲಾ ಹಿಂಸಿಸುತ್ತಿದ್ದರು. ಅದಕ್ಕೆ ಕಾರಣ, ಉದ್ದೇಶವೇನೂ ಇರುತ್ತಿರಲಿಲ್ಲ. ಅದು ಈಗ ನಿಂತಿದೆ. ಪೇಶ್ವೆಗಳ ಆಳ್ವಿಕೆಯ ಪುಣೆಯಲ್ಲಿ ಮಾಂಗ್ ಮತ್ತು ಮಹಾರರ ಹಿಂಸೆ ಮತ್ತು ಕಿರುಕುಳಗಳು ಸಾಮಾನ್ಯವಾಗಿದ್ದದ್ದು ಈಗ ನಿಂತಿದೆ. ಕೋಟೆ ಮತ್ತು ಬುರುಜುಗಳನ್ನು ಕಟ್ಟುವಾಗ ಅವುಗಳಿಗೆ ಕೊಡುತ್ತಿದ್ದ ನರಬಲಿ ಈಗ ನಿಂತಿದೆ. ಈಗ ನಮ್ಮನ್ನು ಜೀವಂತವಾಗಿ ಯಾರೂ ಹೂಳುತ್ತಿಲ್ಲ. ಈಗ ನಮ್ಮ ಜನಸಂಖ್ಯೆಯು ಬೆಳೆಯುತ್ತಿದೆ. ಈ ಮೊದಲು ಯಾರಾದರೂ ಮಹಾರ್ ಅಥವಾ ಮಾಂಗ್ ಒಳ್ಳೆಯ ಬಟ್ಟೆಯನ್ನು ತೊಟ್ಟರೆ, ಬ್ರಾಹ್ಮಣರು ಮಾತ್ರ ಅಂತಹ ಒಳ್ಳೆಯ ಬಟ್ಟೆಗಳನ್ನು ತೊಡಬೇಕೆಂದು ಹೇಳುತ್ತಿದ್ದರು. ಅಂತಹ ಒಳ್ಳೆಯ ಬಟ್ಟೆಗಳನ್ನು ನಾವು ತೊಟ್ಟಾಗ ಅವುಗಳನ್ನು ಕಳ್ಳತನ ಮಾಡಿದ್ದೇವೆಂದು ಆರೋಪಿಸುತ್ತಿದ್ದರು. ಅಸ್ಪೃಶ್ಯರು ತಮ್ಮ ಮೈಗೆ ಒಳ್ಳೆಯ ಬಟ್ಟೆಗಳನ್ನು ಸುತ್ತಿಕೊಂಡರೆ ಅವರ ಧರ್ಮವು ಅಪಾಯಕ್ಕೀಡಾಗಿಬಿಟ್ಟಿತೋ ಎಂಬಂತೆ ಅವರನ್ನು ಮರಕ್ಕೆ ಕಟ್ಟಿ ಹೊಡೆದು ಶಿಕ್ಷಿಸುತ್ತಿದ್ದರು. ಆದರೆ ಬ್ರಿಟೀಷರ ಆಡಳಿತದಲ್ಲಿ ಹಣವುಳ್ಳವರು ಯಾರಾದರೂ ಬಟ್ಟೆಗಳನ್ನು ಕೊಂಡು ತೊಟ್ಟುಕೊಳ್ಳಬಹುದು. ಇದಕ್ಕೆ ಮುಂಚೆ ಮೇಲ್ಜಾತಿಯ ಜನರ ವಿರುದ್ಧವಾಗಿ ಅಸ್ಪೃಶ್ಯರು ಏನೇ ತಪ್ಪು ಮಾಡಿದರೂ ಅವರ ತಲೆ ಕಡೆಯಲಾಗುತ್ತಿತ್ತು. ಈಗ ಅದು ನಿಂತಿದೆ. ಶೋಷಣೆ ಮಾಡುವಂತಹ ಮತ್ತು ಅತ್ಯಧಿಕವಾದ ತೆರಿಗೆಗಳು ಈಗ ನಿಂತಿವೆ. ಕೆಲವು ಸ್ಥಳಗಳಲ್ಲಿ ಅಸ್ಪೃಶ್ಯತೆಯ ಆಚರಣೆಯು ನಿಂತಿದೆ. ಬಯಲಿನಲ್ಲಿಯೇ ಕೊಲ್ಲುವುದು ನಿಂತಿದೆ. ಈಗ ನಾವು ಮಾರುಕಟ್ಟೆಗಳಿಗೂ ಹೋಗಬಹುದು.
ಬ್ರಿಟೀಷರ ನಿಷ್ಪಕ್ಷಪಾತ ಆಳ್ವಿಕೆಯಲ್ಲಿ ಎಷ್ಟೊಂದು ಬದಲಾವಣೆಗಳಾಗಿವೆ. ನಾನು ಇಲ್ಲಿ ಬರೆದಂತೆ, ಈ ಮೊದಲು ನಮ್ಮನ್ನು ಕೊಳಕಿನಂತೆ ಕಾಣುತ್ತಿದ್ದ ಬ್ರಾಹ್ಮಣರೇ ನಮ್ಮನ್ನು ಈಗ ಈ ಪೀಡೆ, ಹಿಂಸೆಗಳಿಂದ ಬಿಡುಗಡೆಗೊಳಿಸಲು ಯತ್ನಿಸುವುದು ನನಗೇ ಆಶ್ಚರ್ಯವಾಗುತ್ತಿದೆ. ಎಲ್ಲಾ ಬ್ರಾಹ್ಮಣರೂ ಹಾಗೇನೂ ಇಲ್ಲ. ಇನ್ನೂ ಸೈತಾನನ ಪ್ರಭಾವಕ್ಕೆ ಒಳಗಾಗಿರುವ ಬ್ರಾಹ್ಮಣರು ಮುಂಚಿನಂತೆಯೇ ದ್ವೇಷಿಸುವುದನ್ನು ಮುಂದುವರಿಸಿದ್ದಾರೆ. ನಮ್ಮನ್ನು ಕಿರುಕುಳಗಳಿಂದ ಮುಕ್ತಿಗೊಳಿಸಲು ಪ್ರಯತ್ನಿಸುವ ಬ್ರಾಹ್ಮಣರನ್ನು ಆ ಬ್ರಾಹ್ಮಣರು ಬಹಿಷ್ಕರಿಸುತ್ತಾರೆ. ಕೆಲವು ಮಹಾತ್ಮರು ಮಾಂಗ್ ಮತ್ತು ಮಹಾರರಿಗೆ ಶಾಲೆಗಳನ್ನು ತೆರೆದಿದ್ದಾರೆ. ಜೊತೆಗೆ, ಕರುಣಾಮಯಿ ಬ್ರಿಟಿಷ್ ಸರಕಾರವು ಆ ಶಾಲೆಗಳಿಗೆ ಬೆಂಬಲ ನೀಡುತ್ತಿವೆ.
ಓ ಮಾಂಗ್ ಮತ್ತು ಮಹಾರರೇ ನೀವು ದುರ್ಬಲವಾಗಿಯೂ ಮತ್ತು ಬಡವಾಗಿಯೂ ಇದ್ದೀರಿ. ಜ್ಞಾನದ ಔಷಧಿಯೊಂದೇ ನಿಮ್ಮನ್ನು ಗುಣಪಡಿಸಿ ಸ್ವಸ್ಥಗೊಳಿಸಬಲ್ಲದು. ಅದೇ ನಿಮ್ಮನ್ನು ಅಂಧಶ್ರದ್ಧೆ ಮತ್ತು ಕಂದಾಚಾರಗಳಿಂದ ಬಿಡುಗಡೆಗೊಳಿಸುವುದು. ನೀವು ಉದಾತ್ತರೂ ಮತ್ತು ಗುಣವಂತರೂ ಆಗುವಿರಿ. ಇದು ನಿಮ್ಮ ಶೋಷಣೆಗಳಿಗೆ ಅಂತ್ಯ ಹಾಡುವುದು. ನಿಮ್ಮನ್ನು ಪ್ರಾಣಿಗಳಂತೆ ಕಾಣುತ್ತಿದ್ದವರು ಇನ್ನು ಮುಂದೆ ನಿಮ್ಮನ್ನು ಹಾಗೆ ನಡೆಸಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಆದ್ದರಿಂದ ದಯವಿಟ್ಟು ಕಷ್ಟಪಟ್ಟು ಓದಿ. ವಿದ್ಯಾವಂತರಾಗಿ ಉತ್ತಮ ಮನುಷ್ಯರಾಗಿ. ಹಾಗಂತ ಇದನ್ನೇನೂ ನಾನು ಸಾಧಿಸಿ ತೋರಿಸಲಾಗುವುದಿಲ್ಲ. ಒಳ್ಳೆಯ ಶಿಕ್ಷಣವನ್ನು ಪಡೆದ ಕೆಲವರು ತಮ್ಮ ಕೆಟ್ಟ ಕೆಲಸಗಳಿಂದ ನಮ್ಮನ್ನು ಆಘಾತಗೊಳಿಸುವ ಉದಾಹರಣೆಗಳಿವೆ.
ಮೂಲ: ಮುಕ್ತಾ ಸಾಳ್ವೆ
ಕನ್ನಡಕ್ಕೆ- ಯೋಗೇಶ್ ಮಾಸ್ಟರ್
ಸೌಜನ್ಯ: ಫಾರ್ವರ್ಡ್ ಪ್ರೆಸ್