ಕನ್ನಡ ಭಾಷೆಗೆ ಇಂಗ್ಲಿಷಿನಿಂದ ದೊಡ್ಡ ಅಪಾಯ ಬಂದೊದಗಿದೆ ಎಂಬ ಕೂಗು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮೊನ್ನೆ ಮೊನ್ನೆ ನಡೆದ ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿಯೂ ಇಂಗ್ಲಿಷ್ ಭೂತದ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು. ಸ್ವತಃ ಸಮ್ಮೇಳನದ ಸರ್ವಾಧ್ಯಕ್ಷರು ಕೂಡ ಇಂಗ್ಲಿಷ್ ಅನ್ನದ ಭಾಷೆಯೇನಲ್ಲ; ಕನ್ನಡವೂ ಅನ್ನದ ಭಾಷೆಯೇ ಎಂಬ ದಾಟಿಯಲ್ಲಿ ಕನ್ನಡವನ್ನು ಸಮರ್ಥಿಸಿಕೊಂಡರು, ಇಂಗ್ಲಿಷ್ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯ ಮಂಡಿಸಿದ್ದರು. ಜೊತೆಗೆ, ದೇಶದ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬಳಕೆ ಅನಿವಾರ್ಯವಲ್ಲ; ಹಾಗೊಂದು ಸಂಪರ್ಕ ಭಾಷೆ ಬೇಕೆಂದರೆ, ಸನಾತನ ಸಂಸ್ಕೃತವೇ ನಮ್ಮ ಆಯ್ಕೆ ಎಂದೂ ಫರ್ಮಾನು ಹೊರಡಿಸಿದ್ದರು.
ಆದರೆ, ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ,..’ ಮುಂತಾದ ‘ಏಕ’ದ ಮಂತ್ರ ಪಠಿಸುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ; ಕನ್ನಡಕ್ಕೆ ಮತ್ತೆ ಮತ್ತೆ ಅಪಾಯ ಒಡ್ಡುತ್ತಿರುವುದು ಇಂಗ್ಲಿಷಿಗಿಂತ ಹಿಂದಿ ಭಾಷೆಯೇ ಎಂಬುದು ತಳ್ಳಿಹಾಕಲಾಗದ ವಾಸ್ತವ. ಈ ಮಾತಿಗೆ ಕಳೆದ ಐದಾರು ವರ್ಷಗಳಲ್ಲಿ ಹತ್ತಾರು ಹಿಂದಿ ಹೇರಿಕೆ ಪ್ರಯತ್ನಗಳು, ಸ್ವತಃ ಬಿಜೆಪಿ ನಾಯಕರು, ಸಚಿವರುಗಳು ಅಂತಹ ಪ್ರಯತ್ನಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವುದೇ ನಿದರ್ಶನ.
ಅದು ರೈಲ್ವೆ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ನಿರಾಕರಿಸಿದ ಪ್ರಕರಣಗಳಿರಬಹುದು, ಬೆಂಗಳೂರಿನ ನಮ್ಮ ಮೆಟ್ರೋನಲ್ಲಿ ಉದ್ದೇಶಪೂರ್ವಕವಾಗಿ ನಡೆದ ಹಿಂದಿ ಹೇರಿಕೆ ಇರಬಹುದು, ಬ್ಯಾಂಕ್ ಮತ್ತಿತರ ಕಡೆ ದೈನಂದಿನ ವ್ಯವಹಾರದಲ್ಲಿ ಹಿಂದಿ ಬಳಸುವಂತೆ ಗ್ರಾಹಕರಿಗೆ ಸೂಚನೆ ನೀಡಿದ ಪ್ರಕರಣಗಳಿರಬಹುದು, ಇದೀಗ ಕಳೆದ ವಾರ ಬಿಎಂಟಿಸಿಯಲ್ಲಿಯೂ ಹಿಂದಿ ಸೂಚನೆಗಳನ್ನು ಅಳವಡಿಸಿದ್ದಿರಬಹುದು. ಎಲ್ಲಾ ಸಂದರ್ಭದಲ್ಲಿಯೂ ಹಿಂದಿಯನ್ನು ಬಲವಂತವಾಗಿ ಕನ್ನಡಿಗರ ಮೇಲೆ ಹೇರುವ ಪ್ರಯತ್ನಗಳು ನಾಜೂಕಾಗಿ ನಡೆಯುತ್ತಲೇ ಇವೆ.
ಇನ್ನು ಕನ್ನಡ ನಾಡಗೀತೆ ವಿಷಯದಲ್ಲಿ, ನಾಡ ಧ್ವಜದ ವಿಷಯದಲ್ಲಿ ಕೂಡ ಬಿಜೆಪಿ ಸರ್ಕಾರ ಮತ್ತು ನಾಯಕರು ಕನ್ನಡ ವಿರೋಧಿ ಧೋರಣೆಯನ್ನು ಅನುಸರಿಸಿದ್ದನ್ನು ಕಂಡಿದ್ದೇವೆ. ನಾಡ ಧ್ವಜದ ವಿಷಯದಲ್ಲಿಯಂತೂ ಕೇಂದ್ರ ಬಿಜೆಪಿ ಸರ್ಕಾರ ಅನುಮತಿಯನ್ನೇ ನೀಡದೇ ಉದ್ಧಟತನ ತೋರಿತು. ಬಳಿಕ ಸಿ ಟಿ ರವಿಯಂತಹ ಆರ್ ಎಸ್ ಎಸ್ ಹಿನ್ನೆಲೆಯ ಸಚಿವರು ನಾಡಧ್ವಜದ ಅಗತ್ಯವೇ ಇಲ್ಲ ಎಂಬ ಮಾತುಗಳನ್ನಾಡಿದರು. ನಂತರ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಸಾಹಿತ್ಯ ಸಮ್ಮೇಳನದಲ್ಲಿಯೇ ಹಿಂದಿಯ ವಿರುದ್ಧ ಕನ್ನಡವನ್ನು ಎತ್ತಿಕಟ್ಟಿದರೆ ಹುಷಾರ್ ಎಂದು ಕನ್ನಡಪರರಿಗೆ ಬಹಿರಂಗ ಬೆದರಿಕೆ ಹಾಕಿದರು. ಆ ಮೂಲಕ ಸಂಪರ್ಕ ಭಾಷೆ ಸಂಸ್ಕೃತವೇ ಇರಲಿ ಎಂಬ ಸಮ್ಮೇಳನಾಧ್ಯಕ್ಷರು ಹಾಕಿದ್ದ ಪೀಠಿಕೆಗೆ ಸಿ ಟಿ ರವಿ ತಾರ್ಕಿಕ ಅಂತ್ಯ ಕಾಣಿಸಿದರು. ಸನಾತನ ಧರ್ಮದ ಜೊತೆ ಸನಾತನ ಭಾಷೆ ಮತ್ತು ಬಿಜೆಪಿಯ ಅಜೆಂಡಾ ಭಾಷೆ(ಹಿಂದಿ) ಹೇರಿಕೆಯನ್ನು ಅಧಿಕೃತವಾಗಿ ಕನ್ನಡ ಸಮ್ಮೇಳನದಲ್ಲೇ ಘೋಷಿಸಿದರು.
ಇದೀಗ ಬಿಜೆಪಿಯ ಮಾಜಿ ಹಿರಿಯ ನಾಯಕ ಹಾಗೂ ಹಾಲಿ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು, ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲೇ ಭಾಷಣ ಮಾಡಿ, ಅಂತಿಮವಾಗಿ ಕೇಂದ್ರದ ಬಿಜೆಪಿ ಸರ್ಕಾರದ ಭಾಷಾ ಅಜೆಂಡಾವನ್ನು ಅಧಿಕೃತಗೊಳಿಸಿದ್ದಾರೆ. ಶಾಸಕರಿಗೆ ನೀಡಿರುವ ಮುದ್ರಿತ ಪ್ರತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಬಳಸಿದ್ದರೂ, ಭಾಷಣವನ್ನು ಓದುವಾಗ ರಾಜ್ಯಪಾಲರು ಸಂಪೂರ್ಣವಾಗಿ ಹಿಂದಿಯಲ್ಲಿಯೇ ಓದಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಿ ಜೆಡಿಎಸ್ ನ ಡಾ ಅನ್ನದಾನಿವರು ಏಕಾಂಗಿಯಾಗಿ ಪ್ರಶ್ನಿಸಿದ್ದಾರೆ. ಅವರನ್ನು ಹೊರತುಪಡಿಸಿ ಇನ್ನಾವುದೇ ಪ್ರತಿಪಕ್ಷ ಸದಸ್ಯರೂ ಚಕಾರವೆತ್ತಿಲ್ಲ.
ಈ ಹಿಂದೆಯೂ ಕೂಡ ಈ ರಾಜ್ಯಪಾಲರು ಜಂಟಿ ಸದನವನ್ನುದ್ದೇಶಿಸಿ ಮಾತನಾಡುವಾಗ ಹಿಂದಿ ಬಳಕೆಗೆ ಮುಂದಾಗಿದ್ದರು. ಆಗ ದೊಡ್ಡ ಪ್ರಮಾಣದಲ್ಲಿ ಪ್ರತಿಪಕ್ಷಗಳು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ತಮ್ಮ ಭಾಷಣ ಮೊಟಕುಗೊಳಿಸಿ ತೆರಳಿದ್ದರು. ಆದರೆ, ಈ ಬಾರಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಸದನ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡು ಆರೋಪದ ಮೇಲೆ ಅಂತಹವರನ್ನು ಸದನದಿಂದ ಅಮಾನತು ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು. ಆ ಕಾರಣಕ್ಕೆ ಬಹುತೇಕ ಪ್ರತಿಪಕ್ಷ ಸದಸ್ಯರು ರಾಜ್ಯಪಾಲರ ಹಿಂದಿ ಹೇರಿಕೆಯ ಕ್ರಮವನ್ನು ಪ್ರಶ್ನಿಸುವ ಗೋಜಿಗೆ ಹೋಗಲೇ ಇಲ್ಲ ಎನ್ನಲಾಗುತ್ತಿದೆ.
ಆದರೆ, ಪ್ರತಿಪಕ್ಷದ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಹಿಂದಿ ಭಾಷಣವನ್ನು ವಿರೋಧಿಸಿದ್ದರೆ, ಸರ್ಕಾರ ಏನು ಮಾಡಲು ಸಾಧ್ಯವಿತ್ತು. ಪ್ರತಿಪಕ್ಷವೇ ಇಲ್ಲದೇ ಅಧಿವೇಶವನ್ನು ಎಷ್ಟು ದಿನ ಮುಂದುವರಿಸುತ್ತಿದ್ದರು? ಅಂತಹದ್ದೊಂದು ಒಗ್ಗಟ್ಟು ಪ್ರದರ್ಶಿಸಲು ಯಾಕೆ ಪ್ರತಿಪಕ್ಷಗಳು ಮುಂದಾಗಲಿಲ್ಲ? ಹಾಗೇ ರಾಜ್ಯದ ಬಿಜೆಪಿ ಶಾಸಕರುಗಳು ಬಿಜೆಪಿ ಚಿಹ್ನೆಯ ಬಲದಿಂದ ಆಯ್ಕೆಯಾಗಿದ್ದರೂ ಪಡೆದಿರುವುದು ಕನ್ನಡಿಗರ ಮತವಲ್ಲವೆ? ಹಾಗಾದರೆ ರಾಜ್ಯಪಾಲರ ನಿಲುವನ್ನು ಪ್ರಶ್ನಿಸುವಷ್ಟರಮಟ್ಟಿನ ಕನ್ನಡತನ ಕೂಡ ರಾಜ್ಯ ಬಿಜೆಪಿ ಶಾಸಕರಿಗೆ ಇಲ್ಲದೇ ಹೋಯಿತೆ? ಹಾಗಾದರೆ ಈ ಜನಪ್ರತಿನಿಧಿಗಳ ಅಂತಿಮ ನಿಷ್ಠೆ ಕನ್ನಡ ನಾಡು- ನುಡಿಯ ಪರವೇ ಅಥವಾ ಹಿಂದಿ ಭಾಷೆಯ ಪರವೇ ಎಂಬ ಪ್ರಶ್ನೆಗಳು ಈಗ ಎದ್ದಿವೆ.
ಜೊತೆಗೆ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ; ಇಡೀ ದಕ್ಷಿಣ ಭಾರತ ಮತ್ತು ಹಿಂದಿಯೇತರ ರಾಜ್ಯಗಳಲ್ಲಿತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಇನ್ನಿಲ್ಲದ ಆದ್ಯತೆ ನೀಡುವ ಬಿಜೆಪಿ ಮತ್ತು ಅದರ ನಾಯಕರು, ಕರ್ನಾಟಕದ ವಿಷಯದಲ್ಲಿ ಮಾತ್ರ ಯಾಕೆ ಹೀಗೆ ದಬ್ಬಾಳಿಕೆಯ ವರಸೆ ಪ್ರದರ್ಶಿಸುತ್ತಿದ್ದಾರೆ ಎಂಬುದನ್ನು ಕನ್ನಡಿಗರು ಪ್ರಶ್ನಿಸಿಕೊಳ್ಳಬೇಕಿದೆ. ತಮಿಳುನಾಡಿನಲ್ಲಿ ತಮಿಳು ಭಾಷೆ, ಆಂಧ್ರ- ತೆಲಂಗಾಣದಲ್ಲಿ ತೆಲುಗು, ಕೇರಳದಲ್ಲಿ ಮಲಯಾಳಂ ಬಳಸುವ ಬಿಜೆಪಿ ನೇಮಕ ಮಾಡಿರುವ ರಾಜ್ಯಪಾಲರು, ತೀರಾ ಅನಿವಾರ್ಯವೆನಿಸಿದರೆ ಅಲ್ಲೆಲ್ಲಾ ಇಂಗ್ಲಿಷ್ ಬಳಸುತ್ತಾರೆ. ಹಿಂದಿ ಭಾಷೆಯನ್ನು ಜಂಟಿ ಸದನದಂತಹ ಮಹತ್ವದ ಸಭೆಗಳಲ್ಲಿ ಬಳಸಿದ ನಿದರ್ಶನಗಳೇ ಬಹುತೇಕ ಇರಲಿಕ್ಕಿಲ್ಲ.
ಆದರೆ, ಕನ್ನಡಿಗರ ವಿಷಯದಲ್ಲಿ ಮಾತ್ರ ಈ ರಾಜ್ಯಪಾಲರು ಮತ್ತು ಅವರನ್ನು ನೇಮಕ ಮಾಡಿರುವ ಬಿಜೆಪಿ ಸರ್ಕಾರ ಹಾಗೂ ನಾಯಕರು ಮಾತ್ರ, ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಹೊಂದಿದ್ದಾರೆ. ಅಷ್ಟೇ ಅಲ್ಲ; ಕನ್ನಡಿಗರ ಆತಂಕ, ಆಕ್ಷೇಪಗಳು ಎದ್ದರೂ ಅವಕ್ಕೆ ಸೊಪ್ಪು ಹಾಕುವುದಿಲ್ಲ ಎಂಬ ದಬ್ಬಾಳಿಕೆಯ, ಸರ್ವಾಧಿಕಾರಿ ಧೋರಣೆಯನ್ನು ಮತ್ತೆ ಮತ್ತೆ ಪ್ರದರ್ಶಿಸುತ್ತಲೇ ಇದ್ದಾರೆ.
ಮತ್ತೊಂದು ಕಡೆ ಕನ್ನಡ ಸಿನಿಮಾಗಳಿಗೆ ಸಿನಿಮಾ ಮಂದಿರಗಳು ಸಿಗದ ಮಟ್ಟಿಗೆ ರಾಜ್ಯದಲ್ಲಿ ಹಿಂದಿ, ತಮಿಳು, ತೆಲುಗು ಸಿನಿಮಾಗಳ ಭರಾಟೆ ಜೋರಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಕನ್ನಡದ ಹೊಸ ನಟನಟಿಯರ ಭರವಸೆಯ ಸಿನಿಮಾಗಳು ತೆರೆಗೆ ಬಂದಿದ್ದರೂ ಶಿವಮೊಗ್ಗದಂತಹ ಮಲೆನಾಡು ಪ್ರದೇಶವೂ ಸೇರಿದಂತೆ ಹಲವು ಕಡೆ ಕನ್ನಡ ಸಿನಿಮಾಗಳ ಬದಲಿಗೆ ಎಲ್ಲಾ ಸಿನಿಮಾ ಮಂದಿರಗಳಲ್ಲಿ ಪರಭಾಷಾ ಸಿನಿಮಾಗಳೇ ತುಂಬಿಕೊಂಡಿವೆ ಎಂಬ ಮಾತುಗಳು ಕೇಳಿಬಂದಿವೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನೂ ಹುಟ್ಟುಹಾಕಿದೆ.
ಒಂದು ಕಡೆ ಸರ್ಕಾರವೇ ಅಧಿಕೃತವಾಗಿ ಕನ್ನಡ ಭಾಷೆಯನ್ನು ಬದಿಗೊತ್ತಿ ಹಿಂದಿಯನ್ನು ಹೇರುವ ಉದ್ಧಟತನ ಮೆರೆಯುತ್ತಿದೆ. ಮತ್ತೊಂದು ಕಡೆ ಉದ್ಯಮ ವಲಯದಲ್ಲಿ, ಮನರಂಜನೆ ವಲಯದಲ್ಲಿ ಕೂಡ ಕನ್ನಡವನ್ನು ಕಡೆಗಣಿಸಿ ಪರಭಾಷಾ ಸಿನಿಮಾಗಳನ್ನು ಮೆರೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ನಿಜಕ್ಕೂ ಕನ್ನಡಕ್ಕೆ ಅಪಾಯ ಇರುವುದು ಇಂಗ್ಲಿಷಿನಿಂದಲೇ ಅಥವಾ ಆಕ್ರಮಣಕಾರಿ ಹಿಂದಿ ಹೇರಿಕೆಯಿಂದಲೇ ಎಂಬುದು ಅರಿವಾಗದೇ ಇರದು. ಆದರೆ, ದಶಕಗಳ ಹಿಂದಿನ ಕೆಚ್ಚನ್ನು ಕಳೆದುಕೊಂಡು ಬಳಲಿ ಬಸವಳಿದಂತಾಗಿರುವ ಕನ್ನಡ ಸಂಘಟನೆಗಳು ಬಿಜೆಪಿಯ ಇಂತಹ ನಡೆಗಳ ಬಗ್ಗೆ ಮುಗುಮ್ಮಾಗಿ ಇರುವುದು ಮಾತ್ರ ಹಲವು ಅನುಮಾನಗಳನ್ನು ಹುಟ್ಟಿಸುತ್ತಿದೆ!