ಅಭಿವೃದ್ಧಿಯ ಸ್ವರ್ಗವನ್ನೆ ಇಳಿಸುತ್ತೇವೆ ಎಂದು ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ, ಬಿಜೆಪಿ ಅಧಿಕಾರದ ಗದ್ದುಗೆ ಏರಿ ಬರೋಬ್ಬರಿ ಎಂಟು ತಿಂಗಳು ಆಯಿತು.
ಈ ಎಂಟು ತಿಂಗಳಲ್ಲಿ ಸರ್ಕಾರದ ಸಾಧನೆ ಎಂದರೆ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಹೇರಿದ್ದು ಮತ್ತು ಅತೃಪ್ತರನ್ನು ಸಂತೃಪ್ತಗೊಳಿಸುವ ನಿತ್ಯ ಸರ್ಕಸ್ ಮಾಡಿದ್ದು ಹೊರತು ಇನ್ನೇನು ಕಾಣದು ಎಂಬುದನ್ನು ಪ್ರತಿಪಕ್ಷಗಳಷ್ಟೇ ಅಲ್ಲ; ಸ್ವತಃ ಆಡಳಿತ ಪಕ್ಷದ ಕೆಲವು ಶಾಸಕರೂ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಅದರಲ್ಲೂ ಮುಖ್ಯವಾಗಿ ಈ ಅಧಿಕಾರದ ಅವಕಾಶ ಬಳಸಿಕೊಂಡು ಒಂದಿಷ್ಟಾದರೂ ಜನರ ಕೆಲಸ ಮಾಡಿ ಮುಂದಿನ ರಾಜಕೀಯ ಭವಿಷ್ಯವನ್ನು ಗಟ್ಟಿಮಾಡಿಕೊಳ್ಳೋಣ ಎಂಬ ನಿರೀಕ್ಷೆಯಲ್ಲಿದ್ದ ಬಹುತೇಕ ಹೊಸ ಶಾಸಕರಂತೂ ತಮ್ಮದೇ ಸರ್ಕಾರದ ನಿತ್ಯದ ಸರ್ಕಸ್ ನೋಡಿ ರೋಸಿಹೋಗಿದ್ದಾರೆ.
ಈ ನಡುವೆ ಸಚಿವ ಸಂಪುಟ ವಿಸ್ತರಣೆಯಾಗಿ, ಮಾಜಿ ಅತೃಪ್ತ ಶಾಸಕರಾದ ‘ಮೆಕನೆಸ್ ಗೋಲ್ಡ್’ ತಂಡ ಸಚಿವ ಸ್ಥಾನ ಪಡೆದ ಬಳಿಕವಾದರೂ ಸರ್ಕಾರ ಸರಿದಾರಿಗೆ ಬರಬಹುದು ಎಂಬ ನಿರೀಕ್ಷೆ ಕೂಡ ಈಗ ಹುಸಿಯಾಗಿದ್ದು, ಬಜೆಟ್ ಅಧಿವೇಶನದ ಮೊದಲ ದಿನವೇ ಹಿರಿಯ ನಾಯಕರು ಪ್ರತ್ಯೇಕ ಸಭೆ ನಡೆಸಿ ಭಿನ್ನಮತದ ರಾಗ ತೆಗೆದಿದ್ದಾರೆ. ಆ ಮೂಲಕ ಅತೃಪ್ತರ ಹೊಸ ಬಣಕ್ಕೆ ಚಾಲನೆ ನೀಡಿದ್ದಾರೆ. ಹಾಗಾಗಿ ಸದ್ಯಕ್ಕೆ ಈ ಬಾರಿಯ ಯಡಿಯೂರಪ್ಪ ಸರ್ಕಾರ ಕೂಡ ಹತ್ತು ವರ್ಷದ ಹಿಂದಿನ ಮಾದರಿಯಲ್ಲೇ ಸಾಗುತ್ತಿದ್ದು, ತೃಪ್ತರು ವರ್ಸಸ್ ಅತೃಪ್ತರ ನಡುವಿನ ಹಗ್ಗಜಗ್ಗಾಟದಲ್ಲೇ ಈ ಅವಧಿಯನ್ನೂ ‘ಕರ್ ನಾಟಕ ಭಾಗ -2’ ಮಾಡುವ ಹಾದಿಯಲ್ಲಿದೆ.
2008ರಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೇರಿಸಿದ ಹೆಗ್ಗಳಿಕೆಯ ಮೇಲೆ ಸರ್ಕಾರ ರಚಿಸಿದ್ದ ಯಡಿಯೂರಪ್ಪ ಕನಿಷ್ಟ ಆರು ತಿಂಗಳು ಕೂಡ ಸುಸೂತ್ರವಾಗಿ ಆಡಳಿತ ನಡೆಸಿರಲಿಲ್ಲ. ಗಣಿ ಉದ್ಯಮಿಗಳ ನೆರವಿನಿಂದಲೇ(ಹಣ ಮತ್ತು ತೋಳ್ಬಲ) ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ, ಆರು ತಿಂಗಳಲ್ಲೇ ಅದೇ ಹಣ ಮತ್ತು ತೋಳ್ಬಲದ ಉಪಟಳಕ್ಕೆ ಈಡಾಗಿದ್ದರು. ಭಿನ್ನಮತ, ಬಂಡಾಯ, ಗುಂಪುಗಾರಿಕೆ, ಭ್ರಷ್ಟಾಚಾರ, ಗಣಿ ಸೇರಿದಂತೆ ಸಾಲುಸಾಲು ಹಗರಣಗಳ ನಡುವೆ ಇಡೀ ಬಿಜೆಪಿ ಸರ್ಕಾರ ವಿಧಾನಸೌಧದಿಂದ ರೆಸಾರ್ಟ್ ಮತ್ತು ಐಷಾರಾಮಿ ಹೋಟೆಲುಗಳಿಗೆ ಸ್ಥಳಾಂತರಗೊಂಡಿತ್ತು. ಹಾಗಾಗಿ ಇಡೀ ದೇಶದಲ್ಲಿ ಕರ್ನಾಟಕದ ರಾಜಕಾರಣವನ್ನು ‘ಕರ್ ನಾಟಕ’ ಎಂದೇ ಬಣ್ಣಿಸಲಾಗುತ್ತಿತ್ತು.
ಇದೀಗ ಆ ಇತಿಹಾಸ ಮತ್ತೆ ಮರುಕಳಿಸುತ್ತಿದ್ದು, ಮೊದಲ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಭಿನ್ನಮತ, ಗುಂಪುಗಾರಿಕೆ ತಲೆ ಎತ್ತಿದೆ. ಬಜೆಟ್ ಅಧಿವೇಶನದ ಮೊದಲ ದಿನ ಸಂಜೆಯೇ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವ ಜಗದೀಶ್ ಶೆಟ್ಟರ್ ಅವರ ಬೆಂಗಳೂರು ನಿವಾಸದಲ್ಲಿ ಸಚಿವ ಸ್ಥಾನ ವಂಚಿತ ಬಿಜೆಪಿಯ ಹಿರಿಯ ನಾಯಕರು ಭೋಜನಕೂಟ ನಡೆಸಿದ್ದು, ಆ ವೇಳೆ ಪ್ರಮುಖರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ರಾಜೂಗೌಡ, ಶಿವನಗೌಡ ನಾಯಕ, ಸಿ ಪಿ ಯೋಗೀಶ್ವರ್ ಸೇರಿದಂತೆ ಹಲವರು ತಮಗಾಗಿರುವ ಅನ್ಯಾಯದ ಬಗ್ಗೆ ಮತ್ತು ಮುಂದೆ ಸಚಿವ ಸಂಪುಟ ಪುನರ್ ರಚನೆ ವೇಳೆ ಸಚಿವ ಸ್ಥಾನಕ್ಕಾಗಿ ನಡೆಸಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಅದರಲ್ಲೂ ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿ ಅವರಂತೂ ತಮಗೆ ಈ ಬಾರಿ ಪುನರ್ ರಚನೆಯಲ್ಲಿ ಆಯಕಟ್ಟಿನ ಖಾತೆಗಳು ಸಿಗದೇ ಹೋದಲ್ಲಿ ತಮ್ಮ ದಾರಿ ತಾವು ನೋಡಿಕೊಳ್ಳುವುದು ಅನಿವಾರ್ಯವಾಗಲಿದೆ. ನಾಳೆ ಅಂತಹ ಸಂದರ್ಭ ಬಂದಾಗ ನಮ್ಮ ಭಾಗದ ಪಕ್ಷದ ಹಿರಿಯರಾಗಿ ನೀವು ನಮ್ಮನ್ನು ದೂಷಿಸಬೇಡಿ ಎಂದು ಶೆಟ್ಟರ್ ಗೆ ನೇರವಾಗಿಯೇ ಹೇಳಿದ್ದಾರೆ. ಅಲ್ಲದೆ, ಪಕ್ಷಕ್ಕಾಗಿ ದಶಕಗಳಿಂದ ಮಣ್ಣು ಹೊತ್ತಿರುವ ತಮ್ಮನ್ನು ಮೂಲೆಗುಂಪು ಮಾಡುವ ತಂತ್ರವಾಗಿಯೇ ಲಕ್ಷ್ಮಣ ಸವದಿಯನ್ನು ದೊಡ್ಡ ನಾಯಕನಂತೆ ಬಿಂಬಿಸಲಾಗುತ್ತಿದೆ. ಇದು ಬೆಳಗಾವಿಯ ತಮಗಷ್ಟೇ ಅಲ್ಲದೆ, ಪಕ್ಷದ ಇಡೀ ಉತ್ತರಕರ್ನಾಟಕ ಹಾಗೂ ಲಿಂಗಾಯತ ನಾಯಕರಿಗೂ ಬರೆ ಎಳೆಯುವ ಲೆಕ್ಕಾಚಾರ. ಇದನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಶೆಟ್ಟರ್ ಮುಂದೆ ತಮ್ಮ ಬೇಗುದಿ ಬಿಚ್ಚಿಟ್ಟಿದ್ಧಾರೆ ಎನ್ನಲಾಗಿದೆ.
ಈ ನಡುವೆ, ತಮ್ಮ ಸ್ಥಾನ-ಮಾನದ ಜೊತೆಗೆ ಪಕ್ಷದ ಭವಿಷ್ಯದ ಬಗ್ಗೆಯೂ ಹೊಸ ಅತೃಪ್ತರ ಈ ಪಡೆ ಚರ್ಚಿಸಿದ್ದು, ಪ್ರಮುಖವಾಗಿ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು ಸೂಪರ್ ಸಿಎಂ ಆಗಿ ಕೆಲಸ ಮಾಡುತ್ತಿರುವ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆಯಿಂದ ಹಿಡಿದು ಶಾಸಕರ ಕ್ಷೇತ್ರಗಳ ಕೆಲಸ ಕಾರ್ಯಗಳವರೆಗೆ, ಸಿಎಂ ಕಚೇರಿಯ ಪ್ರತಿಯೊಂದ ಹಂತದಲ್ಲೂ ವಿಜಯೇಂದ್ರ ಅವರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪ್ರತಿ ಕಡತವೂ ಅವರ ಅನುಮತಿ ಇಲ್ಲದೆ ಸರಿದಾಡುವುದಿಲ್ಲ ಎಂಬ ಪರಿಸ್ಥಿತಿ ಇದೆ. ಸರ್ಕಾರದಲ್ಲಿ ಯಾವ ಅಧಿಕಾರ ಅವರಿಗಿದೆ? ಪಕ್ಷದಲ್ಲಿ ಯಾವ ಹಿರಿತನ, ಪಕ್ಷಕ್ಕಾಗಿ ಯಾವ ದೊಡ್ಡ ಸಾಧನೆ ಮಾಡಿದ್ದಾರೆ? ಎಂದು ನಾವು- ನೀವು ಅವರ ಮುಂದೆ ಕೈಕಟ್ಟಿ ನಿಲ್ಲಬೇಕು? ಯಡಿಯೂರಪ್ಪ ಅವರ ಮೇಲಿನ ಗೌರವ ಬೇರೆ, ಅವರ ಮಗ ಎಂಬ ಒಂದೇ ಅರ್ಹತೆಗೆ ನಮ್ಮ ಮೇಲೆ ಸವಾರಿ ಮಾಡುವ ವಿಜಯೇಂದ್ರ ವಿಷಯ ಬೇರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹಾಗೆ ನೋಡಿದರೆ ಸೂಪರ್ ಸಿಎಂ ಬಗ್ಗೆ ಬಿಜೆಪಿಯಲ್ಲಿ ಹಿರಿಯ ನಾಯಕರ ಅಸಮಾಧಾನ ಭುಗಿಲೆದ್ದಿರುವುದು ಇದೇ ಮೊದಲೇನಲ್ಲ. ಕಾಂಗ್ರೆಸ್- ಜೆಡಿಎಸ್ ಸರ್ಕಾರಕ್ಕೆ ಆಪರೇಷನ್ ಮಾಡಿ ಯಡಿಯೂರಪ್ಪ ಸಿಎಂ ಕುರ್ಚಿಗೆ ಏರಿದ ವಾರದಿಂದಲೇ ವಿಜಯೇಂದ್ರ ಅವರ ವಿರುದ್ಧ ಹೈಕಮಾಂಡ್ ವರೆಗೆ ದೂರು ಹೋಗಿದ್ದವು. ಆ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿಯಲ್ಲಿ ಅವರ ಕುಟುಂಬದವರನ್ನು ಬಿಟ್ಟುಕೊಳ್ಳದಂತೆ ಹೈಕಮಾಂಡ್ ಕಟ್ಟಾಜ್ಞೆ ಮಾಡಿತ್ತು ಎನ್ನಲಾಗಿತ್ತು. ಆದರೆ, ಉಪ ಚುನಾವಣೆಯ ಬಳಿಕ ಸಿಎಂ ಸ್ಥಾನ ಭದ್ರವಾಗುತ್ತಲೇ ಮತ್ತೆ ವಿಜಯೇಂದ್ರ ಮುಂಚೂಣಿಗೆ ಬಂದಿದ್ದು, ಕಳೆದ ವಾರ ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಸಿಎಂ ಅವರ ದೆಹಲಿ ಭೇಟಿಯ ವೇಳೆ ಪಕ್ಷದ ಹೈಕಮಾಂಡ್ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೊತೆಗಿನ ಮಾತುಕತೆಯಲ್ಲಿ ಯಡಿಯೂರಪ್ಪ ಜೊತೆ ವಿಜಯೇಂದ್ರ ಮಾತ್ರ ಭಾಗವಹಿಸಿದ್ದರು. ಅದು ರಾಜ್ಯ ಬಿಜೆಪಿಯ ಹಿರಿಯ ನಾಯಕರ ಕಣ್ಣು ಕೆಂಪಗಾಗಿಸಿತ್ತು. ಬಳಿಕ, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಬಜೆಟ್ ಅಧಿವೇಶನದ ಹೊತ್ತಿಗೆ ಸಚಿವ ಸಂಪುಟ ಪುನರ್ ರಚನೆ ಮಾಡುವ ಬಗ್ಗೆ ಸ್ವತಃ ವಿಜಯೇಂದ್ರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆ ಮೂಲಕ ಇಡೀ ಸರ್ಕಾರದ ಪ್ರಮುಖ ನಿರ್ಧಾರಗಳನ್ನು, ಪಕ್ಷದ ಪ್ರಮುಖ ತೀರ್ಮಾನಗಳನ್ನು ತಾನು ನಿಯಂತ್ರಿಸುತ್ತಿದ್ಧೇನೆ ಎಂಬ ಸಂದೇಶವನ್ನು ವಿಜಯೇಂದ್ರ ನೇರವಾಗಿಯೇ ರವಾನಿಸಿದ್ದರು.
ಆ ಬೆಳವಣಿಗೆಗಳು ಯಡಿಯೂರಪ್ಪ ಬಳಿಕ ಪಕ್ಷದ ಚುಕ್ಕಾಣಿ ಅವರ ಪುತ್ರನ ಪಾಲಾಗಲಿದೆ ಎಂಬ ಸ್ಪಷ್ಟ ಸಂದೇಶವನ್ನಂತೂ ನೀಡಿತ್ತು. ಇದು ಸಹಜವಾಗೇ ಪಕ್ಷಕ್ಕಾಗಿ ದಶಕಗಳಿಂದ ದುಡಿದು ತಮ್ಮ ಅವಕಾಶಕ್ಕಾಗಿ ಕಾದಿರುವ ಹಿರಿಯ ನಾಯಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಪಕ್ಷಕ್ಕಾಗಿ ಯಡಿಯೂರಪ್ಪ ಹೆಗಲಿಗೆ ಹೆಗಲು ಕೊಟ್ಟು ದುಡಿದು, ಇಂದು ಪಕ್ಷ ಬೃಹತ್ ಶಕ್ತಿಯಾಗಿ ಬೆಳೆದು ನಿಂತಿರುವಾಗ, ಯಡಿಯೂರಪ್ಪ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿರುವಾಗ ಅವರ ಉತ್ತರಾಧಿಕಾರಿ ಸಹಜವಾಗೇ ಪಕ್ಷದ ಹಿರಿಯ ನಾಯಕರಿಗೆ ಸಿಗಬೇಕು. ಪಕ್ಷದ ಮತ್ತು ಸರ್ಕಾರದ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವಾಗ ತಮ್ಮನ್ನು ವಿಶ್ವಾಸಕ್ಕೆ ಪಡೆಯಬೇಕು ಮತ್ತು ಅಂತಹ ಮಹತ್ವದ ವಿಷಯಗಳನ್ನು ಘೋಷಿಸುವಾಗ ತಮ್ಮಲ್ಲೇ ಒಬ್ಬರು ಮಾಧ್ಯಮಗಳ ಮುಂದೆ ಹೋಗಬೇಕು. ಆದರೆ, ಪಕ್ಷದ ಅಂತಹ ಸತ್ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಇದೀಗ ಸಿಎಂ ಪುತ್ರ ಎಂಬ ಒಂದೇ ಅರ್ಹತೆಯ ಮೇಲೆ ವಿಜಯೇಂದ್ರ ಅವರಿಗೆ ಅಂತಹ ಅವಕಾಶಗಳನ್ನು ನೀಡುವ ಮೂಲಕ ತಮಗೆ ಅವಮಾನ ಮಾಡಲಾಗುತ್ತಿದೆ ಇದನ್ನು ಸಹಿಸಿಕೊಂಡಿರುವುದು ಹೇಗೆ ಸಾಧ್ಯ? ಇದು ಹೀಗೇ ಮುಂದುವರಿದರೆ ಯಡಿಯೂರಪ್ಪ ಸರ್ಕಾರಕ್ಕೆ ಮಾತ್ರವಲ್ಲ, ಪಕ್ಷಕ್ಕೂ ದೊಡ್ಡ ಹಾನಿಯಾಗುವುದು ಖಂಡಿತಾ.. ಎಂದು ಹಿರಿಯ ನಾಯಕರು ಜಗದೀಶ್ ಶೆಟ್ಟರ್ ಬಳಿ ತಮ್ಮಅತೃಪ್ತಿ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಕೂಡ ಹಿರಿಯ ನಾಯಕರ ನೋವಿಗೆ ಸ್ಪಂದಿಸಿದ್ದು ಸೂಕ್ತ ಸಂದರ್ಭದಲ್ಲಿ ಹೈಕಮಾಂಡಿಗೆ ಈ ಮಾಹಿತಿ ನೀಡೋಣ ಎಂದು ಸಮಾಧಾನಪಡಿಸಿದ್ದು, ಈ ವಾರಾಂತ್ಯದ ವೇಳೆಗೆ ಅತೃಪ್ತರ ಅಹವಾಲು ಹೈಕಮಾಂಡ್ ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಹಾಗಾಗಿ, ಸದ್ಯಕ್ಕೆ ಸಚಿವ ಸ್ಥಾನ ವಂಚಿತ ಹಿರಿಯ ನಾಯಕರಿಗೆ ತಮಗೆ ಅಧಿಕಾರ ಸಿಕ್ಕಿಲ್ಲ ಎಂಬುದಕ್ಕಿಂತಲೂ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ತಮ್ಮ ಹಿರಿತನಕ್ಕೆ ಮೂರು ಕಾಸಿನ ಬೆಲೆಯನ್ನೂ ನೀಡದೆ, ಸಿಎಂ ಪುತ್ರನ ಸೂಪರ್ ಸಿಎಂ ಗಿರಿಗೆ ಮಣೆ ಹಾಕಲಾಗುತ್ತಿದೆ ಎಂಬುದೇ ದೊಡ್ಡ ಚಿಂತೆಯಾಗಿದೆ. ಜೊತೆಗೆ ತಮ್ಮ ಭವಿಷ್ಯವನ್ನೂ ಮಂಕುಗೊಳಿಸುತ್ತಿರುವ ಸೂಪರ್ ಸಿಎಂ ಬಗ್ಗೆ ಆಕ್ರೋಶವೂ ಭುಗಿಲೆದ್ದಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ, ‘ಕರ್- ನಾಟಕ ಭಾಗ 2’ಕ್ಕೆ ವೇದಿಕೆ ಸಜ್ಜಾಗಿದ್ದು, ಕರುನಾಡಿನ ಜನ ಮತ್ತೊಮ್ಮೆ ದಶಕದ ಹಿಂದಿನ ಬಿಜೆಪಿ ಸರ್ಕಾರದ ಪ್ರಹಸನವನ್ನು ಕಣ್ತುಂಬಿಕೊಳ್ಳಲು ಸಿದ್ದರಾರಬೇಕಿದೆ!