ಸಿಎಎ-ಎನ್ ಆರ್ ಸಿ ವಿರುದ್ಧ ಕವಿತೆ ವಾಚಿಸುವ ಮೂಲಕ ಬಿಜೆಪಿ ಸರ್ಕಾರದ ಪೊಲೀಸ್ ದಬ್ಬಾಳಿಕೆಗೆ ಗುರಿಯಾಗಿದ್ದ ಕವಿ ಸಿರಾಜ್ ಬಿಸರಳ್ಳಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಬುಧವಾರ ಸಂಜೆ ಅವರು ಬಿಡುಗಡೆಯಾಗಿದ್ದಾರೆ.
ಕಳೆದ ಜನವರಿ ಎರಡನೇ ವಾರ ನಡೆದ ಆನೆಗುಂದಿ ಉತ್ಸವದಲ್ಲಿ ಸಿರಾಜ್ ತಮ್ಮ ‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕವಿತೆ ವಾಚಿಸುವ ಮೂಲಕ ಸಿಎಎ-ಎನ್ ಆರ್ ಸಿ ವಿರುದ್ಧ ದೇಶವ್ಯಾಪ್ತಿ ಪ್ರತಿರೋಧಕ್ಕೆ ದನಿಯಾಗಿದ್ದರು. ಆದರೆ, ಬಿಜೆಪಿ ಮತ್ತು ಸಂಘಪರಿವಾರದ ಆಣತಿ ಮೇರೆಗೆ ಕೊಪ್ಪಳ ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ 505(2)ರ ಪ್ರಕಾರ ಎಫ್ ಐಆರ್ ದಾಖಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಸರ್ಕಾರ ಮತ್ತು ಪೊಲೀಸರ ಕ್ರಮವನ್ನು ವಿರೋಧಿಸಿ ಕಲಬುರಗಿಯ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಸಭೆ, ವೇದಿಕೆಗಳಲ್ಲಿ ಸಾಹಿತಿ- ಕಲಾವಿದರು ಪ್ರತಿರೋಧ ವ್ಯಕ್ತಪಡಿಸಿದ್ದರು. ಹಲವು ಪ್ರತಿಭಟನೆ- ಧರಣಿಗಳೂ ನಡೆದಿದ್ದವು.
ಇದೀಗ ಮಂಗಳವಾರ ಗಂಗಾವತಿ ನ್ಯಾಯಾಲಕ್ಕೆ ಹಾಜರಾಗಿದ್ದ ಕವಿ ಸಿರಾಜ್ ಮತ್ತು ಕವಿತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದ ರಾಜಭಕ್ಷಿ ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಆದರೆ, ಬುಧವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಇಬ್ಬರೂ ಬಿಡುಗಡೆಯಾಗಿದ್ದಾರೆ.
ಈ ನಡುವೆ, ವಿಧಾನಸಭೆಯಲ್ಲಿ ಸಿರಾಜ್ ಕವಿತೆ ಮಾರ್ದನಿಸಿದ್ದು, ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರ ಸ್ವಾಮಿ ಅವರು ಇಡೀ ಕವಿತೆಯನ್ನು ಸದನದಲ್ಲಿ ಓದಿ ಹೇಳಿ, ಇದರಲ್ಲಿ ಯಾವುದೇ ವ್ಯಕ್ತಿ ಅಥವಾ ಸರ್ಕಾರದ ವಿರುದ್ಧ ಅವಹೇಳನಕಾರಿ ಎನ್ನುವಂತಹದ್ದೇನಿದೆ? ಈ ಹಿಂದೆ ಹಿರಿಯ ಕವಿ ನಿಸಾರ್ ಅಹಮದ್ ಮತ್ತು ಗೋಪಾಲಕೃಷ್ಣ ಅಡಿಗ ಅವರು ರಾಜಕಾರಣಿಗಳ ವಿರುದ್ಧ ಅಧಿಕಾರಸ್ಥರ ವಿರುದ್ಧ ಕವಿತೆ ಬರೆದಿದ್ದರು. ಅವರನ್ನೂ ಬಂಧಿಸಿದ್ದರೆ? ಸಿಎಎ ವಿರುದ್ಧದ ಕವಿತೆ ಬರೆದರೆ ಇವರ ಮೇಲೆ ದೇಶದ್ರೋಹದ ಪ್ರಕರಣದ ದಾಖಲಿಸಿ ಜಾಮೀನಿಗೆ ಅಲೆಸುತ್ತೀರಿ. ಅಲ್ಲೆಲ್ಲೋ ಬೀದರಿನಲ್ಲಿ ಶಾಹೀನ್ ಶಾಲೆ ಮಕ್ಕಳು ನಾಟಕವಾಡಿದರೆ ಅವರ ತಾಯಿಯ ಮೇಲೆ ದೇಶದ್ರೋಹದ ಕೇಸು ಹಾಕಿ ಹದಿನೈದು ದಿನಗಟ್ಟಲೆ ಅವರನ್ನು ಜೈಲಿಗೆ ಹಾಕುತ್ತೀರಿ. ಪ್ರಶ್ನಿಸುವ, ಪ್ರತಿಭಟಿಸುವ ಜನರ ಹಕ್ಕನ್ನು ಕಿತ್ತುಕೊಳ್ಳುವುದಕ್ಕಾಗಿಯೇ ನಮಗೆ ನಮ್ಮ ಪೂರ್ವಿಕರು ಸ್ವಾತಂತ್ರ ತಂದುಕೊಟ್ಟಿದ್ದು, ನೀವು ಯಾರನ್ನೋ ಮೆಚ್ಚಿಸಲು ಸರ್ಕಾರ ನಡೆಸಬೇಡಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸಿರಾಜ್ ಪ್ರಕರಣ ಉಲ್ಲೇಖಿಸಿ, ಕವನ ಓದಿದ್ದಕ್ಕೆ ಕೊಪ್ಪಳದ ಸಿರಾಜ್ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸುತ್ತಾರೆ. ಹಾಗಾದರೆ ಪದ್ಯ ಓದೋದು ಅಪರಾಧವಾ ಎಂದು ಪ್ರಶ್ನಿಸಿದರು. ಜನರ ಪ್ರಶ್ನೆಗಳನ್ನು, ವಿರೋಧ- ಪ್ರತಿರೋಧವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲೇ ಎದುರಿಸುವ ನೈತಿಕತೆ ಕಳೆದುಕೊಂಡಿರುವ ಸರ್ಕಾರ ಹೀಗೆ ಪೊಲೀಸ್ ಬಲಪ್ರಯೋಗದ ಮೂಲಕ ಜನರನ್ನು ಹತ್ತಿಕ್ಕುತ್ತಿದೆ. ಇದನ್ನು ಪೊಲೀಸ್ ರಾಜ್ಯ ಎನ್ನದೆ ಇನ್ನೇನು ಹೇಳಲು ಸಾಧ್ಯ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜನವರಿ ಎರಡನೇ ವಾರದಿಂದ ಈವರೆಗೆ ಸುಮಾರು ಒಂದೂವರೆ ತಿಂಗಳ ಕಾಲ ಕೊಪ್ಪಳ ಮತ್ತು ಬೀದರಿನಲ್ಲಿ ದೇಶದ್ರೋಹದ ಕಾಯ್ದೆಯಡಿ ಬರದೇ ಇರುವ ಘಟನೆಗಳನ್ನು ಪೊಲೀಸರು ಆ ಕಾನೂನಿನಡಿ ದೂರು ದಾಖಲಿಸಿ ಸಿಎಎ ಪ್ರಶ್ನಿಸುವವರ ವಿರುದ್ಧ ದಮನ ನೀತಿ ಪ್ರಯೋಗಿಸಿದ್ದಾರೆ. ದೇಶದ ಪ್ರಧಾನಿಯನ್ನಾಗಲೀ ಅಥವಾ ಯಾವುದೇ ವ್ಯಕ್ತಿಯನ್ನಾಗಲೀ ಟೀಕಿಸುವುದು, ಬೈಯುವುದು ಅಥವಾ ವಿಮರ್ಶಿಸುವುದು ಯಾವುದೇ ರೀತಿಯಲ್ಲೂ ದೇಶದ್ರೋಹ ಆಗದು ಎಂಬ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಕಾನೂನನ್ನು ಪಾಲಿಸಬೇಕಾದ ಪೊಲೀಸರೇ ನ್ಯಾಯಾಂಗದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಖಾಕಿ ಪಡೆಯ ಈ ಕಾನೂನು ವಿರೋಧಿ ಕೃತ್ಯಗಳ ಹಿಂದೆ ಆಳುವ ಪಕ್ಷ ಮತ್ತು ಅದರ ಸಂಘಪರಿವಾರದ ಕುಮ್ಮಕ್ಕು ಇದೆ ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ, ಕನ್ನಡದ ಕವಿಯೊಬ್ಬರನ್ನು ಹೀಗೆ ದುರುದ್ದೇಶಪೂರ್ವಕವಾಗಿ ಪೊಲೀಸ್ ಬಲ ಪ್ರಯೋಗದ ಮೂಲಕ ಕಿರುಕುಳಕ್ಕೀಡು ಮಾಡಿರುವ ಬಗ್ಗೆಯಾಗಲೀ, ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ದೇಶದ ಬಗ್ಗೆ ಪ್ರಸ್ತಾಪಿಸದೆ, ಕೇವಲ ಸಿಎಎ ದಾಖಲೆ ಕೇಳುತ್ತಿರುವ ನೀನು ‘ನಿನ್ನ ದಾಖಲೆಯನ್ನು ಯಾವಾಗ ನೀಡುತ್ತೀ’ ಎಂದು ಪ್ರಶ್ನಿಸಿದ್ದನ್ನೇ ದೇಶದ್ರೋಹದ ಮಟ್ಟಿನ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ ಭಿನ್ನಮತದ ದನಿಯನ್ನು ಬಗ್ಗುಬಡಿಯಲು ಯತ್ನಿಸಿದ ಬಗ್ಗೆಯಾಗಲೀ, ದೇಶದ ಎಲ್ಲಾ ಸಾಹಿತಿ, ಕಲಾವಿದರು, ಪತ್ರಕರ್ತರು ಪ್ರಧಾನಿ ಮೋದಿ ಮತ್ತು ಅವರ ಪಕ್ಷ ಹಾಗೂ ಸಂಘಪರಿವಾರವನ್ನು ಹಾಡಿಹೊಗಳುವ ವಂಧಿ ಮಾಗಧರಾಗಬೇಕು ಎಂಬ ಧೋರಣೆಯನ್ನಾಗಲೀ ಪ್ರಶ್ನಿಸುವ ವಿಷಯದಲ್ಲಿ ಕನ್ನಡದ ಹಿರಿಯ ಸಾಹಿತಿಗಳ ಮೌನ ಮಾತ್ರ ನಾಚಿಕೆಗೇಡಿನ ಸಂಗತಿ!
ಕೆಲವೇ ಕೆಲವು ಮಂದಿ ಬೆರಳೆಣಿಕೆ ಸಾಹಿತಿಗಳನ್ನು ಹೊರತುಪಡಿಸಿ ಉಳಿದಂತೆ ಜ್ಞಾನಪೀಠ ಪುರಸ್ಕೃತರನ್ನೂ ಸೇರಿದಂತೆ ಹಿರಿಯ ಸಾಹಿತಿಗಳು, ಕವಿಗಳು ಜಾಣಮೌನಕ್ಕೆ ಶರಣಾಗಿರುವುದು, ಪ್ರಭುತ್ವದ ವಿರುದ್ಧದ ಬಂಡಾಯದ ದನಿಯಾಗಿ ಸಾಹಿತ್ಯವನ್ನು ಪ್ರಯೋಗಿಸಿದ ಆದಿಕವಿಗಳ ಪರಂಪರೆಯ ಕನ್ನಡಕ್ಕೆ ಮಾಡಿದ ಅವಮಾನ ಎಂದರೆ ಅತಿಶಯೋಕ್ತಿಯಾಗದು. ಈ ಹಿಂದೆ ಇಂದಿರಾಗಾಂಧಿ ಪ್ರಧಾನಿ ಅವಧಿಯಲ್ಲಿ ಜಾರಿಗೆ ತಂದಿದ್ದ ಕರಾಳ ತುರ್ತುಪರಿಸ್ಥಿತಿಯ ವೇಳೆ ವೀರಾವೇಶದ ಕವಿತೆ- ಕಥೆ- ಲೇಖನಗಳನ್ನು ಬರೆದು ಮಹಾನ್ ಕ್ರಾಂತಿಕಾರಿಗಳೆನಿಸಿಕೊಂಡಿದ್ದ ಕವಿ ಪುಂಗವರು ಕೂಡ ಈಗ ಅಧಿಕಾರಸ್ಥರಿಗೆ ಡೊಗ್ಗು ಸಲಾಮು ಹೊಡೆದುಕೊಂಡು ತುಟಿ ಹೊಲಿದುಕೊಂಡಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ.
ನೆಹರೂ ವಿರುದ್ಧ ಪುಂಖಾನುಪುಂಖವಾಗಿ ಕವಿತೆ ಬರೆದವರು, ‘ಏನಾ ಹೇಳಲವ್ವಾ ಭಾರತಿ’ ಎಂದು ಭಾರತವನ್ನೇ ವಿಡಂಬನೆ ಮಾಡಿದವರು ಕೂಡ ಪ್ರಭುತ್ವದ ಅಂತಃಪುರ ಸಖಿಯರಂತೆ ಮುಗ್ಗುಮ್ಮಾಗಿ ಇರುವುದು ಕೂಡ ಸದ್ಯದ ಹೇಯ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಕವಿ- ಸಾಹಿತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದಶಕಗಳ ಕಾಲ ಉದ್ದುದ್ದ ಭಾಷಣ ಮಾಡಿ ವಕಾಲತು ವಹಿಸುತ್ತಿದ್ದ ಬಹಳಷ್ಟು ಮಂದಿ ಇದೀಗ ನಡುಮರಿದ ವ್ಯಕ್ತಿಗಳಾಗಿ ಒಂದು ಸಣ್ಣ ಪ್ರತಿರೋಧವನ್ನೂ ತೋರದ ಮಟ್ಟಿಗೆ ಕುಸಿದು ಹೋಗಿರುವುದು ಕನ್ನಡದ ನೈತಿಕತೆ, ಸಾಕ್ಷಿಪ್ರಜ್ಞೆಗೆ ಒದಗಿರುವ ಅಪಾಯದ ಬಗ್ಗೆ ಆತಂಕ ಹುಟ್ಟಿಸುತ್ತಿದೆ.
ಈ ನಡುವೆಯೂ ಕೆಲವು ಯುವ ಸಾಹಿತಿ- ಪತ್ರಕರ್ತರು ಸರ್ಕಾರದ ದಮನನೀತಿ ಮತ್ತು ಪೊಲೀಸ್ ರಾಜ್ ವ್ಯವಸ್ಥೆಯ ವಿರುದ್ದ ತಮ್ಮ ಮಿತಿಯಲ್ಲಿ ಗಟ್ಟಿ ದನಿಯನ್ನೇ ಎತ್ತುತ್ತಿದ್ದಾರೆ ಎಂಬುದು ಒಂದು ಭರವಸೆ.