ಒಂದು ಕಡೆ ದ್ವೇಷ ಮತ್ತು ಹಿಂಸೆಯನ್ನೇ ತನ್ನ ಹೆಗ್ಗಳಿಕೆ ಮಾಡಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರ ರಾಜಧಾನಿಗೆ ಕಾಲಿಡುತ್ತಿದ್ದರೆ, ಮತ್ತೊಂದು ಕಡೆ ಅದೇ ಹೊತ್ತಿಗೆ ದೆಹಲಿ ಹಿಂಸಾಚಾರದಲ್ಲಿ ಬೇಯತೊಡಗಿದೆ. ಇಡೀ ಈಶಾನ್ಯ ದೆಹಲಿ ಹೊತ್ತಿ ಉರಿಯುತ್ತಿದ್ದ, ಸಿಎಎ-ಎನ್ ಆರ್ ಸಿ ಪರ ಮತ್ತು ವಿರೋಧಿ ಬಣಗಳ ನಡುವಿನ ಸಂಘರ್ಷ ಮತ್ತೊಂದು ಗುಜರಾತ್ ನರಮೇಧವಾಗಿ ಬದಲಾಗುವ ಹಂತದಲ್ಲಿದೆ.
ಸಿಎಎ- ಎನ್ ಆರ್ ಸಿ ಪರ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ನೀಡಿದ ಪ್ರಚೋದನಕಾರಿಯಾಗಿ ಹೇಳಿಕೆಯ ಪರಿಣಾಮವಾಗಿ ಭಾನುವಾರದಿಂದಲೇ ಆರಂಭವಾಗಿದ್ದ ಸಿಎಎ ಪರ ಹೋರಾಟಗಾರರ ಹಿಂಸಾಚಾರ ಸೋಮವಾರ ಪರ ಮತ್ತು ವಿರೋಧಿಗಳ ನಡುವಿನ ನೇರ ಹಣಾಹಣಿಯಾಗಿ ಬದಲಾಗಿತ್ತು. ಈಶಾನ್ಯ ದೆಹಲಿಯ ಗೋಕುಲ್ ಪುರ, ಭಜನ್ ಪುರ, ಮೌಜ್ ಪುರ, ಜಫರ್ ಬಾದ್, ಬಾಬರ್ ಪುರ, ಜೊಹ್ರಿ ಎನ್ ಕ್ಲೇವ್, ಶಿವ ವಿಹಾರ್, ಕರದಮ್ ಪುರಿ, ಚಂಡೀಭಾಗ್, ದಯಾಳ್ ಪುರ ಮುಂತಾದ ಪ್ರದೇಶದಲ್ಲಿ ಸಂಜೆಯ ವೇಳೆಗೆ ವ್ಯಾಪಕ ಹಿಂಸಾಚಾರ ಕೋಮು ಸಂಘರ್ಷವಾಗಿ ಬದಲಾಗಿದೆ.
ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಮುಖ್ಯಪೇದೆ, ಓರ್ವ ನಾಗರಿಕ ಸಾವುಕಂಡಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ. ಇಡೀ ಪ್ರದೇಶದಲ್ಲಿ ಅಂಗಡಿಮುಂಗಟ್ಟು, ಮನೆಮಾರು, ಪೆಟ್ರೋಲ್ ಬಂಕ್, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರಮುಖವಾಗಿ ಸಿಎಎ ಪರ ಹೋರಾಟಗಾರರು ಪೆಟ್ರೋಲ್ ಬಾಂಬ್ ಎಸೆಯುವುದು, ಗನ್ ಹಿಡಿದು ಗುಂಪಿನ ಮೇಲೆ ದಾಳಿ ನಡೆಸುವುದು, ಪ್ರಾರ್ಥನಾ ಮಂದಿರಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುವುದು ಮುಂತಾದ ಕೃತ್ಯಗಳಲ್ಲಿ ಮುಳುಗಿದ್ದು, ಇಡೀ ಪ್ರದೇಶದಲ್ಲಿ ಕಾನೂನು- ಸುವ್ಯವಸ್ಥೆ ಎಂಬುದೇ ಇಲ್ಲದ ಅರಾಜಕ ಸ್ಥಿತಿ ನಿರ್ಮಾಣವಾಗಿದೆ.
ಸಂಘರ್ಷವನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಯಬೇಕಾದ ದೆಹಲಿ ಪೊಲೀಸರು ಎಂದಿನಂತೆ ಸಿಎಎ ವಿರೋಧಿ ಪ್ರತಿಭಟನಾಕಾರರ ವಿಷಯದಲ್ಲಿ ತಮ್ಮ ಮಲತಾಯಿ ಧೋರಣೆಯನ್ನು ಮುಂದುವರಿಸಿದ್ದು, ಸಿಎಎ ಪರ ಹೋರಾಟಗಾರರ ಅಟ್ಟಹಾಸಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ. ಗಲಭೆಯ ಚಿತ್ರಣ ನೀಡುವ ನೂರಾರು ವೀಡಿಯೋ ತುಣುಕುಗಳು ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಹುತೇಕ ವೀಡಿಯೋ ಮತ್ತು ಫೋಟೋಗಳಲ್ಲಿ ದೆಹಲಿ ಪೊಲೀಸರು ಹಿಂಸಾಚಾರಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವುದು ಮತ್ತು ಸ್ವತಃ ಕೆಲವು ಕಡೆ ಜನವಸತಿ ಕಟ್ಟಡಗಳ ಮೇಲೆ ಕಲ್ಲು ತೂರುತ್ತಿರುವ ದೃಶ್ಯಗಳಿವೆ. ಅಲ್ಲದೆ ಗಲಭೆಕೋರನೊಬ್ಬ ಗನ್ ಹಿಡಿದು ಪೊಲೀಸರು ಮತ್ತು ಪ್ರತಿಭಟನಾನಿರತರನ್ನು ಬೆದರಿಸುವ ಮತ್ತು ಸುಮಾರು ಎಂಟು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ವೀಡಿಯೋ ಕೂಡ ಹರಿದಾಡುತ್ತಿದೆ.
ಆದರೆ, ದೆಹಲಿ ಪೊಲೀಸರು ಆತನ ವಿರುದ್ಧ ಈ ಹಿಂದೆ ಜಾಮಿಯಾ- ಮಿಲಿಯಾ ಬಳಿ ಗುಂಡಿನ ದಾಳಿ ನಡೆಸಿದ್ದ ಯುವಕನ ವಿಷಯದಲ್ಲಿ ನಡೆದುಕೊಂಡ ರೀತಿಯಲ್ಲಿ ಪೊಲೀಸರು ಈತನ ವಿಷಯದಲ್ಲಿಯೂ ಸುಮ್ಮನೇ ಕೈಕಟ್ಟಿಕೊಂಡು ನಿಂತಿರುವುದು ಇಡೀ ಗಲಭೆ ಒಂದು ಪೂರ್ವಯೋಜಿತ ಮತ್ತು ಆಡಳಿತ ವ್ಯವಸ್ಥೆಯ ನಿರ್ದೇಶನದಂತೆಯೇ ನಡೆಯುತ್ತಿರುವ ಕೃತ್ಯ ಎಂಬುದಕ್ಕೆ ಬಲವಾದ ನಿದರ್ಶನವಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಇಡೀ ದೇಶದ ಮಾಧ್ಯಮಗಳು ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ಹಿಂದೆ ಬಿದ್ದಿರುವ ಹೊತ್ತಿನಲ್ಲಿಯೇ ರಾಜಧಾನಿಯಲ್ಲಿ ಈ ಗಲಭೆಗಳನ್ನು ಹುಟ್ಟುಹಾಕಿರುವ ಹಿಂದೆಯೂ ಮಾಧ್ಯಮಗಳ ಗಮನ ಬೇರೆಡೆ ಇರುವಾಗ ಹಿಂಸಾಚಾರ ನಡೆಸಿ ಅಲ್ಪಸಂಖ್ಯಾತ ಸಮುದಾಯ ಮತ್ತು ಲಿಬರಲ್ ಹಿಂದೂಗಳಲ್ಲಿ ಭೀತಿ ಹುಟ್ಟಿಸುವ ‘ಗುಜರಾತ್ ಮಾದರಿ’ ಕೆಲಸ ಮಾಡುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಅದರಲ್ಲೂ ಹಲವು ವೀಡಿಯೋಗಳಲ್ಲಿ ದಾಳಿಕೋರರು ಕೇಸರಿ ಬಟ್ಟೆ ಕಟ್ಟಿಕೊಂಡಿರುವುದು ಮತ್ತು ಜೈ ಶ್ರೀರಾಮ್ ಘೋಷಣೆ ಕೂಗುತ್ತಿರುವುದು ಕೂಡ ಸ್ಪಷ್ಟವಾಗಿದೆ. ಇಂತಹ ದೃಶ್ಯಾವಳಿಗಳು ಸಹಜವಾಗೇ ಮೇಲಿನ ಆರೋಪಗಳಿಗೆ ಪುಷ್ಟಿ ನೀಡುತ್ತಿದ್ದು, ಆಡಳಿತ ವ್ಯವಸ್ಥೆಯೇ ಪರೋಕ್ಷವಾಗಿ ಇಂತಹ ಹಿಂಸಾಚಾರದ ಮೂಲಕ ಸಿಎಎ- ಎನ್ ಆರ್ ಸಿ ವಿರೋಧಿಗಳನ್ನು ಹಿಂಸೆ ಮತ್ತು ಭೀತಿಯ ಮೂಲಕ ಹತ್ತಿಕ್ಕುವ ಯತ್ನ ನಡೆಸುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ಭೀಕರ ಹಿಂಸಾಚಾರ ರಾತ್ರಿ ಇಡೀ ಅಡೆತಡೆ ಇಲ್ಲದೆ ಮುಂದುವರಿಯುವ ಸಾಧ್ಯತೆ ಇದ್ದು, ರಾಜಧಾನಿಯ ಆ ಕೃತ್ಯಗಳು ಮುಂದಿನ ದಿನಗಳಲ್ಲಿ ದೇಶದ ವಿವಿಧೆಡೆಯೂ ಪ್ರತಿಧ್ವನಿಸುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು ಎಂಬ ಭೀತಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಪಕ್ಷಪಾತಿ ಧೋರಣೆ ಮತ್ತು ಅವರ ಮೇಲೆ ನೇರ ನಿಯಂತ್ರಣ ಹೊಂದಿರುವ ಗೃಹ ಸಚಿವ ಅಮಿತ್ ಶಾ ಅವರ ಜನವಿರೋಧಿ ಧೋರಣೆಯ ಬಗ್ಗೆಯೂ ವ್ಯಾಪಕ ಟೀಕೆ ಮತ್ತು ಆತಂಕ ವ್ಯಕ್ತವಾಗುತ್ತಿದೆ. ಬಹಳಷ್ಟು ಮಂದಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಕೂಡ.
ಹಾಗೆ ನೋಡಿದರೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದಿರುವ ಸಿಎಎ ಮತ್ತು ಎನ್ ಆರ್ ಸಿ ಕಾಯ್ದೆಯ ವಿರೋಧಿ ಹೋರಾಟಗಾರರ ವಿಷಯದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಆಣತಿ ಪಾಲಿಸುವ ದೆಹಲಿ ಪೊಲೀಸರು, ಆರಂಭದಿಂದಲೂ ಪಕ್ಷಪಾತಿ ಧೋರಣೆಯನ್ನೇ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಾಗಾಗಿ ದೆಹಲಿಯ ಈ ಗಲಭೆಯ ವಿಷಯದಲ್ಲಿ ಪೊಲೀಸರ ವರ್ತನೆ ಅಚ್ಚರಿಯದ್ದೇನಲ್ಲ.
ಏಕೆಂದರೆ, ಮೊದಲು ಸಿಎಎ ವಿರೋಧಿ ಜಾಮಿಯಾ-ಮಿಲಿಯಾ ಪ್ರತಿಭಟನಾನಿರತರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿಗೆ ದೆಹಲಿ ಪೊಲೀಸರೇ ಬೆಂಗಾವಲಾಗಿ ನಿಂತಿದ್ದರು. ಕೇವಲ ಒಂದು ತಿಂಗಳ ಹಿಂದೆ ನಡೆದ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ಏಕಾಏಕಿ ಪೊಲೀಸರ ಸಮ್ಮಿಖದಲ್ಲೇ ನಾಲ್ಕು ಮಾರು ದೂರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಆತ ಯಾವ ಗಡಿಬಿಡಿ ಇಲ್ಲದೆ, ಧಾವಂತವಾಗಲೀ, ಭಯವಾಗಲೀ ಇಲ್ಲದೆ ರಾಜಾರೋಷವಾಗಿ ಗುಂಡು ಹಾರಿಸಿದ್ದು ಟಿವಿ ಕ್ಯಾಮರಾಗಳಲ್ಲೀ ಸೆರೆಯಾಗಿತ್ತು. ಆತ ಹಾಗೆ ಗುಂಡು ಹಾರಿಸುತ್ತಿರುವಾಗ ದೆಹಲಿ ಪೊಲೀಸರು ಯಾವುದೋ ಭಾಷಣ ಆಲಿಸುತ್ತಿರುವವರಂತೆ ಕೈಕಟ್ಟಿಕೊಂಡು ನಿಂತಿದ್ದರು ಮತ್ತು ಪೊಲೀಸರ ಆ ದೊಡ್ಡ ಪಡೆಯಲ್ಲಿ ಪೇದೆಯಿಂದೆ ಕಮೀಷನರ್ ವರೆಗೆ ಎಲ್ಲಾ ಅಧಿಕಾರಿ- ಸಿಬ್ಬಂದಿಯೂ ಹಾಜರಿದ್ದರು!
ಆ ಬಳಿಕ ಮತ್ತೊಬ್ಬ ವ್ಯಕ್ತಿ ಶಾಹೀನ್ ಭಾಗ್ನ ಸಿಎಎ ವಿರೋಧಿ ಧರಣಿನಿರತರ ಮೇಲೆ ಮೇಲೆ ಗುಂಡಿನ ನಡೆಸಿದ್ದ. ಆಗಲೂ ಕೇಂದ್ರ ಸರ್ಕಾರದ ನೇರ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರು ಕೈಕಟ್ಟಿಕೊಂಡಿದ್ದರು. ಅದಾದ ಮೂರೇ ದಿನದಲ್ಲಿ ಮತ್ತೊಮ್ಮೆ ಇಬ್ಬರು ಬೈಕ್ ಸವಾರರು ಅದೇ ಜಾಮಿಯಾ ಮಿಲಿಯಾ ಬಳಿ ಗುಂಡಿನ ದಾಳಿ ನಡೆಸಿದ್ದರು. ಆಗಲೂ ಪೊಲೀಸರು ಯಾವುದೇ ದಿಟ್ಟ ಕ್ರಮ ಕೈಗೊಳ್ಳಲೇ ಇಲ್ಲ! ಯಾವ ರೀತಿಯಲ್ಲೂ ಭಯೋತ್ಪಾದನಾ ಕೃತ್ಯಕ್ಕೆ ಕಡಿಮೆ ಇರದ ಈ ಎಲ್ಲಾ ಪ್ರಕರಣಗಳಲ್ಲಿ ಪೊಲೀಸರು ಕೊಲೆ ಯತ್ನದಂತಹ ಸಾಮಾನ್ಯ ಪ್ರಕರಣ ದಾಖಲಿಸಿದ್ದರೇ ವಿನಃ, ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಕ್ರಮಕೈಗೊಂಡಿರಲಿಲ್ಲ ಮತ್ತು ಆ ಕೃತ್ಯ ಎಸಗಿದ ಬಹುತೇಕ ಎಲ್ಲರೂ ಹಿಂದೂ ಧರ್ಮದ ಮೇಲ್ಜಾತಿ- ಮೇಲ್ವರ್ಗಕ್ಕೆ ಸೇರಿದವರು ಎಂಬುದು ಕೂಡ ಗಮನಾರ್ಹ.
ಅಷ್ಟು ಸಾಲದು ಎಂಬಂತೆ, ಆ ಸರಣಿ ಗುಂಡಿನ ದಾಳಿ ಪ್ರಕರಣಗಾದ ಒಂದೇ ವಾರದಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಎಎಪಿ ಶಾಸಕನ ಮೇಲೆ ದಾಳಿ ನಡೆದಿತ್ತು. ಆ ದಾಳಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಎಂದು ಹೇಳಲಾಗಿದ್ದರೂ, ದೆಹಲಿಯಲ್ಲಿ ಕಂಡಕಂಡಲ್ಲಿ ಮನಸೋಇಚ್ಚೆ ದಾಳಿ ನಡೆಸುವಷ್ಟರಮಟ್ಟಿಗೆ ರಿವಾಲ್ವರುಗಳು ಕಂಡಕಂಡವರ ಕೈಗೆ ಎಟುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಇಡೀ ದೆಹಲಿ ಗಲಭೆಯ ಹಿಂದಿನ ಕೈಗಳು ಬೆಳಕಿಗೆ ಬರಬಹುದು. ಆ ಕಾರಣಕ್ಕೇ ದೆಹಲಿ ಪೊಲೀಸರು ಕನಿಷ್ಠ ಅಕ್ರಮ ಅಸ್ತ್ರ ಹೊಂದಿದ ಆರೋಪವನ್ನು ಕೂಡ ದಾಳಿಕೋರರ ಮೇಲೆ ಹಾಕಿಲ್ಲ ಮತ್ತು ಆ ಮೂಲಕ ದಾಳಿಕೋರರಿಗೆ ರಿವಾಲ್ವರ್ ಕೊಟ್ಟ ಕೈಗಳನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಒಟ್ಟಾರೆ ಒಂದು ಆಡಳಿತ ವ್ಯವಸ್ಥೆಯೇ ತನ್ನ ಜನವಿರೋಧಿ ಕಾಯ್ದೆಯ ವಿರುದ್ಧ ಸಿಡಿದೆದ್ದಿರುವ ಭಾರತೀಯರನ್ನು ಬಗ್ಗುಬಡಿಯಲು ಪೊಲೀಸ್ ಸೇರಿದಂತೆ ತನ್ನ ಎಲ್ಲಾ ಅಸ್ತ್ರಗಳನ್ನು ಬಳಸತೊಡಗಿದೆ. ಸಿಎಎ ವಿರೋಧಿಗಳ ವಿರುದ್ಧ ಜೈ ಶ್ರೀರಾಮ್ ಮತ್ತು ಭಾರತ್ ಮಾತಾಕಿ ಜೈ ಘೋಷಣೆಯ ಮೂಲಕ ಹೋರಾಟಗಳನ್ನು ಹಿಂಸೆಗೆ ತಿರುಗಿಸುವ ಮತ್ತು ಹಿಂಸೆಯಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವ ತಂತ್ರಗಾರಿಕೆಯ ಗುಜರಾತ್ ಮಾದರಿ ಜಾರಿಗೆ ಬಂದಿದೆ. ಅದೂ ರಾಜಧಾನಿ ದೆಹಲಿಯಿಂದಲೇ ಇದೀಗ ಜಾರಿಯಾಗಿದೆ!