ರಾಜಧಾನಿ ದೆಹಲಿಯಲ್ಲಿ ಸತತ ಮೂರನೇ ದಿನವೂ ಹಿಂಸಾಚಾರ ಮುಂದುವರಿದಿದ್ದು, ಘರ್ಷಣೆಯಲ್ಲಿ ಬಲಿಯಾದವರ ಸಂಖ್ಯೆ ಒಂಭತ್ತಕ್ಕೆ ಏರಿದೆ. ನೂರಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದು, ಘಟನೆಯ ವರದಿ ಮಾಡಲು ಪ್ರಕ್ಷುಬ್ಧ ಪ್ರದೇಶಕ್ಕೆ ತೆರಳಿದ್ದ ಐದಕ್ಕೂ ಹೆಚ್ಚು ಮಂದಿ ಪತ್ರಕರ್ತರ ಮೇಲೆ ದಾಳಿ ನಡೆದಿದೆ.
ದಾಳಿಗೊಳಗಾದ ಐವರು ಪತ್ರಕರ್ತರ ಪೈಕಿ ಒಬ್ಬರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಪ್ರಕರಣಗಳಲ್ಲೂ ಪತ್ರಕರ್ತರ ಐಡಿ ಕಾರ್ಡುಗಳನ್ನು ನೋಡಿ, ಹೆಸರು ತಿಳಿದುಕೊಂಡು ಅವರ ಧರ್ಮ ಮತ್ತು ಪ್ರತಿನಿಧಿಸುವ ಸುದ್ದಿ ಸಂಸ್ಥೆಗಳ ಆಧಾರದ ಮೇಲೆ ದಾಳಿ ನಡೆದಿದ್ದು, ಹಿಂದೂ ಎಂಬ ಕಾರಣಕ್ಕೆ ತಾವು ದಾಳಿಯಿಂದ ಬಚಾವಾದೆವು ಎಂದು ಹಲವು ಮಂದಿ ವರದಿಗಾರರು ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಈ ನಡುವೆ, ಸೋಮವಾರದ ಹಿಂಸಾಚಾರದ ವೇಳೆ ದಾಳಿಗೊಳಗಾಗಿ ಮೃತಪಟ್ಟಿದ್ದ ಪೊಲೀಸ್ ಮುಖ್ಯಪೇದೆ ರತನ್ ಲಾಲ್ ಸಾವಿಗೆ ಈ ಮೊದಲು ತಿಳಿದಂತೆ ಕಲ್ಲೇಟು ಕಾರಣವಲ್ಲ; ಬದಲಾಗಿ ಅವರು ಗುಂಡೇಟಿನಿಂದ ಸಾವು ಕಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಕಳೆದ ಒಂದು ತಿಂಗಳಿನಿಂದ ಯಾವ ಕಡಿವಾಣವಿಲ್ಲದೆ ನಡೆಯುತ್ತಿದ್ದ ದೆಹಲಿಯ ಗುಂಡಿನ ದಾಳಿಯ ಹೊಸ ಅಟ್ಟಹಾಸಕ್ಕೆ ಪೊಲೀಸರೇ ಮೊದಲ ಬಲಿಯಾದಂತಾಗಿದೆ.
ಮಂಗಳವಾರ ವರದಿಗಾರರ ಮೇಲೆಯೂ ಗುಂಡಿನ ದಾಳಿ ನಡೆದಿದೆ. ತೀವ್ರ ಗಲಭೆಗ್ರಸ್ಥ ಪ್ರದೇಶವಾಗಿರುವ ಈಶಾನ್ಯ ದೆಹಲಿಯ ಮೌಜ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜೆಕೆ 24 ಸುದ್ದಿವಾಹಿನಿಯ ಆಕಾಶ್ ಎಂಬುವರೇ ಗುಂಡಿನ ದಾಳಿಗೊಳಗಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿವೆ. ಇದೇ ವೇಳೆ, ಪ್ರಮುಖ ರಾಷ್ಟ್ರೀಯ ಸುದ್ದಿವಾಹಿನಿ ಎನ್ ಡಿಟಿವಿಯ ಮೂವರು ಪತ್ರಕರ್ತರ ಮೇಲೆ ಲೈವ್ ಸುದ್ದಿ ವೇಳೆಯೇ ದಾಳಿ ನಡೆದಿದೆ. ಅರವಿಂದ್ ಗುಣಶೇಖರ್, ಸೌರಭ್ ಶುಕ್ಲಾ, ಮರಿಯಮ್ ಅಲವಿ ದಾಳಿಗೊಳಗಾದ ಪತ್ರಕರ್ತರು.
ಟೌಮ್ಸ್ ನೌನ ಪರ್ವಿಣಾ ಪುರಕಾಯಸ್ತಾ, ನ್ಯೂಸ್ ಎಕ್ಸ್ನ ಶ್ರೇಯಾ ಚಟರ್ಜಿ, ರಾಯಿಟರ್ಸ್ ನ ಡ್ಯಾನಿಶ್ ಸಿದ್ಧಿಕಿ, ಸಿಎನ್ಎನ್ ನ್ಯೂಸ್ 18ನ ರಂಜನ್, ರಿಪಬ್ಲಿಕ್ ಟಿವಿಯ ಶಾಂತಶ್ರೀ ಸರ್ಕಾರ್ ಮತ್ತಿತರು ದಾಳಿಗೊಳಗಾಗಿದ್ದು, ತಮ್ಮ ಆಘಾತಕಾರಿ ಅನುಭವಗಳನ್ನು ಟ್ವಿಟರ್ ಮತ್ತಿತರ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಿಎಎ ಪರ ರಸ್ತೆಗಿಳಿದಿರುವ ಗುಂಪುಗಳು ಹೆಲ್ಮೆಟ್ ಧರಿಸಿ, ಮತ್ತೆ ಕೆಲವೊಮ್ಮೆ ಖುಲ್ಲಂಖುಲ್ಲಾ ಪತ್ರಕರ್ತರ ಮೇಲೆ ದಾಳಿ ನಡೆಸುತ್ತಿವೆ. ‘ಇದು ಹಿಂದೂಗಳ ಹೋರಾಟ, ಈ ಹೋರಾಟಕ್ಕೆ ನೀವು ಬೆಂಬಲ ನೀಡಬೇಕು. ಹಾಗಾಗಿ ಏನನ್ನೂ ರೆಕಾರ್ಡ್ ಮಾಡಬೇಡಿ. ಮಾಡಿದರೆ ನೀವು ಜೀವಂತ ವಾಪಸು ಹೋಗುವುದಿಲ್ಲ’ ಎಂದು ತಮಗೆ ಬೆದರಿಸಿದರು ಎಂದು ಹಲವರು ಹೇಳಿಕೊಂಡಿದ್ಧಾರೆ. ಅಲ್ಲದೆ, ತಮ್ಮ ಮೊಬೈಲುಗಳನ್ನು ಕಸಿದುಕೊಂಡು ವೀಡಿಯೋ ಮತ್ತು ಫೋಟೋಗಳನ್ನು ಅಳಿಸಿಹಾಕಿದ್ದಾರೆ ಎಂದೂ ಕೆಲವು ಪತ್ರಕರ್ತರು ಹೇಳಿದ್ದಾರೆ. ಜೈ ಶ್ರಿರಾಮ್ ಘೋಷಣೆಯೊಂದಿಗೆ ಗುಂಪುಗಳು ತಮ್ಮತ್ತ ಲಾಠಿ ಹಿಡಿದು ದಾಳಿ ನಡೆಸಿದವು ಎಂದೂ ವರದಿಗಾರರು ಉಲ್ಲೇಖಿಸಿದ್ದಾರೆ.
ಅಧಿಕಾರದ ಸ್ಥಾನದಲ್ಲಿ ಕೂತವರು ಮತ್ತು ಅವರ ಪಕ್ಷ, ದೆಹಲಿ ಪೊಲೀಸರ ಪರೋಕ್ಷ ಮತ್ತು ಪ್ರತ್ಯಕ್ಷ ಬೆಂಬಲವವನ್ನು ಪಡೆದಿರುವ ಗಲಭೆಕೋರರಿಗೆ, ದೊಡ್ಡ ಅಡ್ಡಿಯಾಗಿರುವುದು ಸಂಪೂರ್ಣ ತಮ್ಮ ಕೈವಶವಾಗದೇ ಉಳಿದಿರುವ ಮಾಧ್ಯಮಗಳು. ಹಾಗಾಗಿ, ಇದೀಗ ಮಾಧ್ಯಮಗಳನ್ನು ಬಲಪ್ರಯೋಗದ ಮೂಲಕ, ದಾಳಿಯ ಮೂಲಕ ಬೆದರಿಸಿ ದೂರವಿಡುವ ಪ್ರಯತ್ನಗಳು ಆರಂಭಗೊಂಡಿವೆ. ವಿಶೇಷವೆಂದರೆ, ಸಂಪೂರ್ಣ ಹಿಂದುತ್ವವಾದಿ ಬಲಪಂಥೀಯ ವಕ್ತಾರರಂತೆ ವರ್ತಿಸುತ್ತಿರುವ ಕೆಲವು ಮಾಧ್ಯಮಗಳ ವರದಿಗಾರರು ಕೂಡ ವ್ಯಕ್ತಿಗತವಾಗಿ ಜೈ ಶ್ರೀರಾಮ್ ಘೋಷಣೆ ಕೂಗುವ ಈ ಉದ್ರಿಕ್ತ ಗುಂಪುಗಳ ದಾಳಿಗೆ ಒಳಗಾಗಿದ್ದಾರೆ ಎಂಬುದು.
ಈ ನಡುವೆ, ಈಶಾನ್ಯ ದೆಹಲಿಯ ಗೂಕುಲ್ ಪುರಿ, ಖಜೂರಿ ಖಾಸ್, ಚಂಡೀಭಾಗ್, ಮೌಜ್ ಪುರಿ ಸೇರಿದಂತೆ ಹಲವು ಪ್ರದೇಶದಲ್ಲಿ ಮಂಗಳವಾರ ಕೂಡ ಮತ್ತೆ ಮತ್ತೆ ಗಲಭೆ ಮರುಕಳಿಸುತ್ತಿದ್ದು, ಧರ್ಮಾಧಾರಿತವಾಗಿ ಅಂಗಡಿ-ಮಂಗಟ್ಟು, ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿಕೋರರು ದಾಳಿ ಮುಂದುವರಿಸಿದ್ದಾರೆ. ಆದರೆ, ದಾಳಿ ತಡೆಯಬೇಕಾದ ಪೊಲೀಸರು ಬಹುತೇಕ ಉದ್ವಿಗ್ನ ಪ್ರದೇಶಗಳಿಂದ ದೂರವೇ ಉಳಿದಿದ್ದಾರೆ ಎಂದು ಸ್ವತಃ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಸಿಎಂ ಅವರ ಆ ಹೇಳಿಕೆಗೆ ಪ್ರತಿಯಾಗಿ, ಗಲಭೆ ನಿಯಂತ್ರಿಸಲು ಅಗತ್ಯ ಪ್ರಮಾಣದ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ. ನಾವು ಅಸಹಾಯಕರು ಎಂದು ದೆಹಲಿ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ ಸಂದರ್ಭದಲ್ಲಿ, ಅವರ ಭೇಟಿಗೆ ಹಿಂದಿನ ದಿನ(ಭಾನುವಾರ)ದಿಂದಲೇ ಈಶಾನ್ಯ ದೆಹಲಿಯಲ್ಲಿ ಸಂಘರ್ಷ, ಹಿಂಸಾಚಾರದ ಘಟನೆಗಳು ನಡೆದಿದ್ದರೂ, ದೆಹಲಿ ಪೊಲೀಸರು ಹೆಚ್ಚಿನ ಭದ್ರತೆಯ ತಯಾರಿ ಮಾಡಿಕೊಂಡಿರಲಿಲ್ಲ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಇದೀಗ ದೆಹಲಿ ಪೊಲೀಸರ ಈ ದೂರಿನ ಬಳಿಕ ದೆಹಲಿ ಪೊಲೀಸ್ ವ್ಯವಸ್ಥೆಯ ನೇರ ನಿಯಂತ್ರಣ ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹೆಚ್ಚುವರಿಯಾಗಿ ಒಂದು ಸಾವಿರ ಪೊಲೀಸರ ನಿಯೋಜನೆಗೆ ಸೂಚನೆ ನೀಡಿದ್ದು, ಅರೆಸೇನಾ ಪಡೆಯನ್ನು ಕೂಡ ನಿಯೋಜಿಸಲಾಗಿದೆ ಎಂದು ವರದಿಗಳು ಹೇಳಿವೆ. ಆದರೆ ದೆಹಲಿ ಪೊಲೀಸರು ಇಷ್ಟು ಹಿಂಸಾಚಾರದ ಹೊರತಾಗಿಯೂ ಕನಿಷ್ಠ ನಿಷೇಧಾಜ್ಞೆಯನ್ನು ಕೂಡ ಜಾರಿ ಮಾಡಿರಲಿಲ್ಲ ಮತ್ತು ಗಲಭೆಗ್ರಸ್ಥ ಪ್ರದೇಶಕ್ಕೆ ಹೊರಗಿನವರು ಪ್ರವೇಶಿಸದಂತೆ ನಿರ್ಬಂಧಕ ಕ್ರಮಕೈಗೊಂಡಿಲ್ಲ ಎಂಬುದು ಗಮನಾರ್ಹ. ದೆಹಲಿ ಸಿಎಂ ಈ ವಿಷಯವನ್ನೂ ಕೂಡ ಪ್ರಸ್ತಾಪಿಸಿದ್ದು, ಗಲಭೆಗ್ರಸ್ಥ ಪ್ರದೇಶಕ್ಕೆ ಹೊರಗಿನ ಸಮಾಜಘಾತುಕ ಶಕ್ತಿಗಳು ನುಸುಳದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯ ವೇಳೆಗೆ ಕೆಲವು ಕಡೆ ನಿಷೇಧಾಜ್ಞೆ ಹೇರಲಾಗಿದೆ.
ಈ ನಡುವೆ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಹೇಳಿಕೆಯೊಂದನ್ನು ನೀಡಿದ್ದು, ತಮ್ಮದೇ ಪಕ್ಷದ ಕಪಿಲ್ ಮಿಶ್ರಾ ಅವರ ಪ್ರಚೋನದಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಕಪಿಲ್ ಮಿಶ್ರಾ ಅವರ ಹೇಳಿಕೆಯೇ ದೆಹಲಿಯ ಗಲಭೆಗೆ ಕಾರಣ. ಅವರೂ ಸೇರಿದಂತೆ ದೆಹಲಿ ಜನರ ನೆಮ್ಮದಿ ಕಸಿಯುವಂತಹ ಪ್ರಚೋದನಕಾರಿ ಹೇಳಿಕೆ ನೀಡುವ ಯಾವುದೇ ವ್ಯಕ್ತಿಯ ವಿಷಯದಲ್ಲಿ ಪೊಲೀಸರ ಮೃಧು ಧೋರಣೆ ಸಲ್ಲದು. ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ. ಆದರೆ, ಅದೇ ವೇಳೆ ಕಪಿಲ್ ಮಿಶ್ರಾರನ್ನು ಸಮರ್ಥಿಸುವ #HarHinduKapilMishra ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಎರಡನೇ ಅತಿಹೆಚ್ಚು ಜನಪ್ರಿಯ ಟ್ರೆಂಡ್ ಆಗಿದ್ದು, ನೈಜ ಹಿಂದೂವೆಂದರೆ ಕಪಿಲ್ ಮಿಶ್ರಾ ಎಂಬ ಘೋಷಣೆ ಮೊಳಗುತ್ತಿದೆ! ಇದರಲ್ಲಿ ಬಿಜೆಪಿ ಟ್ರೋಲ್ ಆರ್ಮಿಯ ಕೈವಾಡವಿಲ್ಲದೇ ಇಲ್ಲ!
ಈ ನಡುವೆ, ಇಡೀ ರಾಜಧಾನಿಯ ಗಲಭೆಗೆ ಕುಮ್ಮಕ್ಕು ನೀಡಿರುವ ಕಪಿಲ್ ಮಿಶ್ರಾ ಪ್ರಚೋದನಕಾರಿ ಹೇಳಿಕೆಯ ಬಗ್ಗೆ ದೆಹಲಿ ಸಿಎಂ ಆಗಲೀ, ಗೃಹ ಸಚಿವ ಅಮಿತ್ ಶಾ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೆಹಲಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿಯೂ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮದ ಯಾವ ಮಾತುಗಳೂ ಗೃಹ ಸಚಿವರ ಬಾಯಿಂದ ಹೊರಬಿದ್ದಿಲ್ಲ!