ಯಡಿಯೂರಪ್ಪ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆದಿದೆ. ಬಹುಶಃ ಕರ್ನಾಟಕದ ರಾಜಕಾರಣದ ಅಪರೂಪದ ಕ್ಷಣಗಳಲ್ಲಿ ಒಂದಾಗಿ ದಾಖಲಾದ ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು, ಹಿರಿಯ ರಾಜಕಾರಣಿಗಳು ಪಕ್ಷಬೇಧ ಮರೆತು ಹಿರಿಯ ಜನನಾಯಕನಿಗೆ ಶುಭಾಶಯ ಕೋರಿದ್ಧಾರೆ.
78ನೇ ವರ್ಷಕ್ಕೆ ಕಾಲಿಟ್ಟ ಯಡಿಯೂರಪ್ಪ ಅವರಷ್ಟೇ ಅವರ ದ್ವಿತೀಯ ಪುತ್ರ ಬಿ ವೈ ವಿಜಯೇಂದ್ರ ಕೂಡ ಈ ಸಮಾರಂಭದ ಮೂಲಕ ಮಾಧ್ಯಮಗಳಲ್ಲಿ ಸಾಕಷ್ಟು ಮಿಂಚಿದ್ದಾರೆ. ಹಾಗೆ ನೋಡಿದರೆ, ಸಮಾರಂಭವಷ್ಟೇ ಅಲ್ಲ, ಸಮಾರಂಭದ ತಯಾರಿಗಳು, ಗಣ್ಯರ ಆಹ್ವಾನ ಸೇರಿದಂತೆ ಹಲವು ರೀತಿಯಲ್ಲಿ ವಿಜಯೇಂದ್ರ ಈ ಹುಟ್ಟುಹಬ್ಬದ ನೆಪದಲ್ಲಿ ಸುದ್ದಿಯಲ್ಲಿದ್ದರು. ಅದರ ಹಿಂದಿನ ವಾರದ ಅಸಂಖ್ಯ ಪ್ರಮಥರ ಸಮ್ಮೇಳನದ ವೇಳೆಯೂ ವಿಜಯೇಂದ್ರ ಸಾಕಷ್ಟು ಗಮನ ಸೆಳೆದಿದ್ದರು. ಕಾರ್ಯಕ್ರಮಕ್ಕೆ ಆಹ್ವಾನಿಸಲು ಮಾಜಿ ಸಿಎಂಗಳಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಅವರುಗಳನ್ನು ವಿಜಯೇಂದ್ರ ಖುದ್ದು ಭೇಟಿಯಾಗಿದ್ದರು. ಸಚಿವ ಸಂಪುಟ ವಿಸ್ತರಣೆಯ ಮುನ್ನಾ ದಿನ ಕೂಡ ವಿಜಯೇಂದ್ರ- ಸಿದ್ದರಾಮಯ್ಯ ಭೇಟಿ ವರದಿಗಳು ಕೇಳಿಬಂದಿದ್ದವು.
ಒಂದು ಕಡೆ ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ಮೂಲ ಬಿಜೆಪಿಗರು ಮತ್ತು ಸ್ವತಃ ಯಡಿಯೂರಪ್ಪ ಅವರನ್ನು ಯಾವ ಸಮೂಹದ ಪ್ರಶ್ನಾತೀತ ನಾಯಕರು ಎಂದು ಬಿಂಬಿಸಲಾಗುತ್ತಿದೆಯೋ ಅದೇ ಸಮೂಹದ, ತೀರಾ ಇತ್ತೀಚಿನವರೆಗೆ ಯಡಿಯೂರಪ್ಪ ಎಡಬಲದಲ್ಲೇ ಕಾಣಿಸಿಕೊಳ್ಳುತ್ತಿದ್ದ ನಾಯಕರೇ ಪರೋಕ್ಷೆ ಬಂಡಾಯ ಸಾರಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನವಂಚಿತರಾಗಿರುವ ಆ ನಾಯಕರ ಒಂದು ಗುಂಪು ನೇರ ದೆಹಲಿಯ ಹೈಕಮಾಂಡಿಗೆ ದೂರು ಕೂಡ ನೀಡಿದೆ. ಅದು ಸಾಲದು ಎಂಬಂತೆ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ತೊಡೆತಟ್ಟಿರುವ ಅದೇ ಬಣವೇ ದಿನಕ್ಕೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನೂ ಮುಂದುವರಿಸಿದೆ. ಮತ್ತೊಂದು ಕಡೆ, ಸಚಿವ ಸಂಪುಟದಲ್ಲಿ ಸ್ಥಾನವಂಚಿತ ಶಾಸಕರ ಮತ್ತೊಂದು ಪಡೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ರಿವರ್ಸ್ ಆಪರೇಷನ್ ಕಮಲಕ್ಕೆ ಪ್ರಯತ್ನ ನಡೆಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ 78ನೇ ಹುಟ್ಟುಹಬ್ಬ ಮತ್ತು ಅದಕ್ಕಾಗಿ ಪುತ್ರ ಬಿ ವೈ ವಿಜಯೇಂದ್ರ ನಡೆಸಿದ ಯತ್ನಗಳನ್ನು ನೋಡಿದರೆ, ಸಿಗುವ ಚಿತ್ರಣ ಬೇರೆಯೇ. 75ನೇ ವರ್ಷದ ಹುಟ್ಟುಹಬ್ಬವನ್ನೇ ಸಾರ್ವಜನಿಕವಾಗಿ ಆಚರಿಸದೇ ಇದ್ದ ಸಿಎಂ ಯಡಿಯೂರಪ್ಪ ಇದೀಗ 78ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದರ ಹಿಂದೆ ಏಕ ಕಾಲಕ್ಕೆ ಹಲವು ಹಕ್ಕಿಗಳನ್ನು ಉರುಳಿಸುವ ಚಾಣಾಕ್ಷ ನಡೆ ಎನ್ನಲಾಗುತ್ತಿದೆ.
ಆಹ್ವಾನಿಸುವ ನೆಪದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ವಿಜಯೇಂದ್ರ, ಯಡಿಯೂರಪ್ಪ ಸರ್ಕಾರ ಉರುಳಿಸುವ ತಂತ್ರದೊಂದಿಗೆ ಕುಮಾರಸ್ವಾಮಿಯವರ ಮೊರೆಹೋಗಿದ್ದ ಬಣಕ್ಕೆ ತಿರುಗೇಟು ನೀಡಿದ್ದಾರೆ. ಒಂದು ವೇಳೆ ನೀವು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸಿದರೆ, ಈ ನಾಯಕರು ನಿಮಗೆ ಸಾಥ್ ನೀಡಲಾರರು, ಅವರು ತಮ್ಮೊಂದಿಗೆ ವಿಶ್ವಾಸದಿಂದಿದ್ದಾರೆ ಎಂಬ ಸಂದೇಶ ಆ ಭೇಟಿಯ ಮೂಲಕ ರವಾನೆಯಾಗಿದೆ. ಮತ್ತೊಂದು ಕಡೆ ಪ್ರಮುಖರೊಂದಿಗೆ ನೇರ ಮಾತುಕತೆಯ ಮೂಲಕ ವಿಜಯೇಂದ್ರ ರಾಜ್ಯ ರಾಜಕಾರಣದ ಭವಿಷ್ಯದಲ್ಲಿ ಯಡಿಯೂರಪ್ಪ ವಾರಸುದಾರ ಎಂಬ ಸಂದೇಶವೂ ರವಾನೆಯಾಗಿದೆ.
ಇದು ರಾಜ್ಯದ ಮಟ್ಟಿಗೆ. ಇನ್ನು ಕೇಂದ್ರ ಬಿಜೆಪಿಯ ಮಟ್ಟಿಗೆ; ಅದರಲ್ಲೂ ಹೈಕಮಾಂಡ್ ಮಟ್ಟಿಗೆ ವಿಜಯೇಂದ್ರ ಅವರ ಈ ಪ್ರಯತ್ನಗಳು ಸಾಕಷ್ಟು ಮಹತ್ವದ ಸಂದೇಶವನ್ನೇ ನೀಡಿವೆ ಎನ್ನಲಾಗುತ್ತಿದ್ದು, ಯಡಿಯೂರಪ್ಪ ವಿರೋಧಿ ಬಣದ ‘ಸಹಿ ಸಂಗ್ರಹ ಅಭಿಯಾನ’ಕ್ಕೆ ಸೊಪ್ಪುಹಾಕಿ ಯಾವುದೇ ನಿರ್ಧಾರ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಪ್ರತಿಪಕ್ಷ ನಾಯಕರು ಕೂಡ ಗೌರವದಿಂದ ಕಾಣುವ, ವಿಶ್ವಾಸದಿಂದ ನಡೆದುಕೊಳ್ಳುವ ನಾಯಕರಿಗೆ ಇರುವ ಜನಪ್ರಿಯತೆ ಮತ್ತು ಪಕ್ಷಾತೀತ ಬೆಂಬಲವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂಬುದೇ ಆ ಸಂದೇಶ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.
ಅದರಲ್ಲೂ ಮುಖ್ಯವಾಗಿ ವಿಜಯೇಂದ್ರ ಅವರು ಸರ್ಕಾರ ಮತ್ತು ಸಿಎಂ ಕಚೇರಿಯಲ್ಲಿ ಹೊಂದಿರುವ ಪ್ರಭಾವ ಮತ್ತು ಅವರ ನಿಶಾನೆ ಇಲ್ಲದೆ ಸಿಎಂ ಕಚೇರಿಯಲ್ಲಿ ಯಾವುದೇ ಕಡತಗಳು ಕದಲುವುದಿಲ್ಲ ಎಂಬುದನ್ನೇ ಮುಖ್ಯವಾಗಿ ಇಟ್ಟುಕೊಂಡು ಯಡಿಯೂರಪ್ಪ ವಿರುದ್ಧ ಕತ್ತಿಮಸೆಯುತ್ತಿರುವ ಸ್ವಪಕ್ಷೀಯ ‘ಬಂಧು’ಗಳ ಪಾಲಿಗೆ ಈ ಸಂದೇಶ ದಿಕ್ಕೆಡಿಸಲಿದೆ ಎಂಬ ಮಾತುಗಳೂ ಇವೆ.
ಆದರೆ, ಇವೆಲ್ಲಾ ಸಾಮಾನ್ಯ ರಾಜಕೀಯ ಲೆಕ್ಕಾಚಾರಗಳು. ರಾಜಕೀಯ ಪಂಡಿತರ ಈ ಲೆಕ್ಕಾಚಾರಗಳನ್ನೆಲ್ಲಾ ಮೀರಿದ ಮತ್ತೊಂದು ಸ್ಫೋಟಕ ಮಾಹಿತಿ ಏನೆಂದರೆ; ಪಕ್ಷದೊಳಗಿನ ವಿರೋಧಿ ಬಣ ಕಟ್ಟರ್ ಸಂಘಪರಿವಾರದ ನಾಯಕ ಕುಮ್ಮಕ್ಕಿನಿಂದ ಯಡಿಯೂರಪ್ಪ ಅವರನ್ನು ಗಾದಿಯಿಂದ ಕೆಳಗಿಸಲು ಹವಣಿಸುತ್ತಿದೆ. ಒಂದು ವೇಳೆ ಅಂತಹ ಪರಿಸ್ಥಿತಿ ಉದ್ಭವವಾದಲ್ಲಿ, ಮತ್ತೊಮ್ಮೆ ಪರ್ಯಾಯ ರಾಜಕಾರಣದ ಪ್ರಯೋಗಕ್ಕೆ ಈಗಿನಿಂದಲೇ ತಾಲೀಮು ಆರಂಭವಾಗಿದೆ. ಖುದ್ದು ಯಡಿಯೂರಪ್ಪ ಅವರೇ ಮಗನ ಮೂಲಕ ಅಂತಹ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಒಂದು ಕಡೆ ಹೈಕಮಾಂಡ್ ಮೇಲೆ ವಿಶ್ವಾಸ ಇಡಲಾರದ ಸ್ಥಿತಿ, ಮತ್ತೊಂದು ಕಡೆ ಸ್ವತಃ ತಮ್ಮ ಬಲಗೈಬಂಟರಾಗಿದ್ದವರೇ ಈಗ ತಮ್ಮ ವಿರುದ್ಧ ಸಹಿಸಂಗ್ರಹ ಅಭಿಯಾನ ಆರಂಭಿಸಿರುವುದು ಮತ್ತು ದಿನ ಬೆಳಗಾದರೆ ಸರ್ಕಾರ ಮತ್ತು ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಹೇಳಿಕೆಗಳನ್ನು ನೀಡುವುದು ಮುಂತಾದ ನಡೆಗಳ ಗುರಿಯನ್ನು ಮತ್ತು ಅವುಗಳ ಹಿಂದಿನ ಸೂತ್ರಧಾರರ ಉದ್ದೇಶಗಳನ್ನು ಅರಿತಿರುವ ಯಡಿಯೂರಪ್ಪ ಭವಿಷ್ಯದ ಆಟಕ್ಕೆ ಈಗಲೇ ದಾಳ ಉರುಳಿಸಿದ್ದಾರೆ.
ಅತ್ತ ಕಡೆ ಕಾಂಗ್ರೆಸ್ಸಿನಲ್ಲಿಯೂ ಹೈಕಮಾಂಡ್ ಬದಲಾವಣೆಯ ಬಳಿಕ ತಮ್ಮ ಪ್ರಭಾವ ಕುಗ್ಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೂಡ ಸರಿಸುಮಾರು ಯಡಿಯೂರಪ್ಪ ಅವರ ಸ್ಥಿತಿಯನ್ನೇ ಎದುರಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ನೋಡಿದರೂ, ವಿಜಯೇಂದ್ರ ಅವರು ಸಿದ್ದರಾಮಯ್ಯ ಅವರನ್ನು ಮೇಲಿಂದ ಮೇಲೆ ಭೇಟಿ ಮಾಡುತ್ತಿರುವುದು ಕೇವಲ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಮಾತ್ರವೇ? ಎಂಬ ಅನುಮಾನಗಳು ಹುಟ್ಟದೇ ಇರವು. ಒಂದು ಕಡೆ ವಿವಿಧ ವಿವಾದಿತ ನಡೆಗಳಿಂದಾಗಿ ಮತ್ತು ಸಂಘಪರಿವಾರದ ಮಂದಿಯ ಲಂಗುಲಗಾಮಿಲ್ಲದ ನಡವಳಿಕೆಯಿಂದಾಗಿ ಬಿಜೆಪಿಯ ರಾಜಕೀಯ ಭವಿಷ್ಯ ಮಂಕಾಗತೊಡಗಿದೆ. ಮತ್ತೊಂದು ಕಡೆ ರಾಜ್ಯದಮಟ್ಟಿಗೆ ಸ್ವತಃ ಬಿಜೆಪಿ ಹೈಕಮಾಂಡೇ ಲಕ್ಷ್ಮಣ ಸವದಿಯಂಥವರನ್ನು ಏಕಾಏಕಿ ಡಿಸಿಎಂ ಸ್ಥಾನದಲ್ಲಿ ಕೂರಿಸುವ ಮೂಲಕ ಯಡಿಯೂರಪ್ಪ ಅವರಿಗೆ ಪರ್ಯಾಯ ಲಿಂಗಾಯತ ನಾಯಕತ್ವ ಕಟ್ಟುವ ತಂತ್ರಗಾರಿಕೆ ಜಾರಿಗೆ ತಂದಿದೆ.
ಹಾಗಾಗಿ ಸಂಘಪರಿವಾರದ ಕಟ್ಟರ್ ಹಿಂದುತ್ವವಾದಿ ರಾಜಕಾರಣಿಗಳಂತೆ ಭೂತಮುಖಿಯಾಗದೆ, ಭವಿಷ್ಯಮುಖಿಯಾಗಿರುವ ಯಡಿಯೂರಪ್ಪ, ನಾಳೆಯ ರಾಜಕಾರಣದ ದಾಳಗಳನ್ನು ಉರುಳಿಸತೊಡಗಿದ್ದಾರೆ ಎಂಬುದು ಬಿಜೆಪಿಯ ಆಪ್ತ ಮೂಲಗಳ ಲೆಕ್ಕಾಚಾರ!
ಆದರೆ, ಪರ್ಯಾಯ ರಾಜಕಾರಣದ ವಿಷಯದಲ್ಲಿ ಈಗಾಗಲೇ ಕೆಜೆಪಿ ಕಟ್ಟಿ ಕಹಿ ಅನುಭವ ಹೊಂದಿರುವ ಯಡಿಯೂರಪ್ಪ, ಅಷ್ಟು ಸಲೀಸಾಗಿ ಮತ್ತೆ ಅದೇ ದಾರಿ ತುಳಿಯಲಿದ್ದಾರೆಯೇ? ಎಂಬ ಪ್ರಶ್ನೆಯೂ ಇದೆ. ಆದರೆ, ಹತ್ತು ವರ್ಷದ ಹಿಂದಿನ ಪರಿಸ್ಥತಿ ಬೇರೆ, ಇಂದಿನ ಪರಿಸ್ಥಿತಿ ಬೇರೆ. ಬೆಂಗಳೂರಿನ ಅರ್ಕಾವತಿಯಲ್ಲಿ ಸಾಕಷ್ಟು ಕೊಳಚೆ ಹರಿದುಹೋಗಿದೆ. ಬಿಜೆಪಿ ಕೂಡ ಹತ್ತು ವರ್ಷಗಳ ಹಿಂದೆ ಜನರಲ್ಲಿ ಮೂಡಿಸಿದ್ದ ಭರವಸೆ ಕೂಡ ಕೊಳೆತು ನಾರತೊಡಗಿದೆ. ಕಾಂಗ್ರೆಸ್ ಕೂಡ ಇತಿಹಾಸ ಕಸಬುಟ್ಟಿಯ ಕಡೆ ಮುಖಮಾಡಿದಂತಹ ಹೀನಾಯ ಸ್ಥಿತಿಗೆ ತಲುಪಿದೆ. ಇಂತಹ ಹೊತ್ತಲ್ಲಿ ರಾಜ್ಯದಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಶಕ್ತಿಗೆ ಒಂದು ದೊಡ್ಡ ಅವಕಾಶವಿದೆ. ರಾಜಕೀಯ ನಿರ್ವಾತದ ಸ್ಥಿತಿ ಇನ್ನೇನು ನಿರ್ಮಾಣವಾಗುವ ಹಂತದಲ್ಲಿದೆ. ಹಾಗಾಗಿಯೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿ ಅಂತಹ ನಿರ್ವಾತ ಸ್ಥಿತಿಯನ್ನು ತುಂಬುವ ಯತ್ನ ಆರಂಭಿಸಿದ್ದಾರೆ. ಯಡಿಯೂರಪ್ಪ ಕೂಡ ಎಚ್ ಡಿಕೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿರುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು.
ಒಟ್ಟಾರೆ ಗಮನಿಸಿದರೆ, ಸದ್ಯ ರಾಜರಾಜಕಾರಣದಲ್ಲಿ ತೆರೆಮರೆಯಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಮತ್ತು ನಾಳೆಯ ಇನ್ನೇನೋ ಲೆಕ್ಕಾಚಾರದ ಮೇಲೆ ಹೊಸ ದಾಳಗಳು ಉರುಳುತ್ತಿವೆ. ಬಹುಶಃ ಇನ್ನು ಒಂದೆರಡು ತಿಂಗಳಲ್ಲಿ ಆ ಲೆಕ್ಕಾಚಾರಗಳು ಒಂದು ಸ್ಪಷ್ಟ ಚಿತ್ರಣವಾಗಿ ಮೂಡಬಹುದು!