ರಾಜಧಾನಿ ದೆಹಲಿಯಲ್ಲಿ ಭುಗಿಲೆದ್ದಿದ್ದ ಜನಾಂಗೀಯ ಹತ್ಯಾಕಾಂಡದ ಬೆಂಕಿ ಸದ್ಯಕ್ಕೆ ಆರಿದೆ. ಆದರೆ, ಬೂದಿ ಮುಚ್ಚಿದ ಕೆಂಡಗಳು ಇನ್ನೂ ಬುಸುಗುಟ್ಟುತ್ತಲೇ ಇವೆ. ಸುಮಾರು 40 ಜೀವಗಳು ಸೇಡಿನ, ಅಸಹನೆಯ ಜ್ವಾಲೆಯಲ್ಲಿ ಬೆಂದುಹೋಗಿವೆ. ಮನೆ-ಮಠ, ಆಸ್ತಿ-ಪಾಸ್ತಿ ನಷ್ಟ ಬಹುಶಃ ಅಂದಾಜಿಗೆ ಸಿಗಲಾರದು. ನೊಂದವರು ಅನುಭವಿಸಿದ ಭೀತಿ ಮತ್ತು ಅಸಹಾಯಕತೆ ಜೀವಮಾನವಿಡೀ ಆರದ ಗಾಯವಾಗೇ ಉಳಿಯಲಿದೆ. ಲವಲವಿಕೆಯ ದೆಹಲಿಯ ಒಂದು ಭಾಗದ ಕೆನ್ನೆ ಮೇಲಿನ ಕಣ್ಣೀರು ಸದ್ಯ ಭವಿಷ್ಯದಲ್ಲಿ ಅಳಿಸಲಾರದು.
ಆದರೆ, ಇಷ್ಟೆಲ್ಲಾ ಜೀವಹಾನಿ, ಆಸ್ತಿಪಾಸ್ತಿ ನಷ್ಟ, ಭೀತಿಭಯದ ನೆರಳು, ಜೊತೆಗೆ ಯಾವ ಕಾನೂನು, ಕಾಯ್ದೆಗಳ ಹಂಗಿಲ್ಲದೆ, ಯಾರ ಭಯವಿಲ್ಲದೆ ಭಾರತದ ರಾಜಧಾನಿಯಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮನಸೋಇಚ್ಛೆ ಪೈಶಾಚಿಕ ದಾಳಿ ನಡೆಯಿತು ಎಂದು ಇತಿಹಾಸದಲ್ಲಿ ದಾಖಲಾಗಿಹೋದ ಕಳಂಕಕ್ಕೆ, ವಿಶ್ವಸಂಸ್ಥೆಯಂತಹ ಉನ್ನತ ಸಂಸ್ಥೆಯ ಛೀಮಾರಿಗೊಳಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತಹ ಹೀನಾಯ ಸ್ಥಿತಿಗೆ ಯಾರು ಹೊಣೆ? ರಾಜಧಾನಿಯನ್ನು, ದೇಶವನ್ನು ಈ ನಾಚಿಕೆಗೇಡಿನ ಮಟ್ಟಕ್ಕೆ ತಂದು ನಿಲ್ಲಿಸಿದ್ದು ಯಾರು? ಎಂಬ ಪ್ರಶ್ನೆಗಳಿಗೆ ಈಗಲಾದರೂ, ಸಾವಕಾಶವಾಗಿ ಉತ್ತರಕಂಡುಕೊಳ್ಳಲೇಬೇಕಿದೆ.
ಹೌದು, ದೆಹಲಿಯ ಗಲಭೆಗೆ ಕಾರಣವೇನು? ಎಂದು ಮೂಲ ಕೆದಕಿದರೆ, ಆ ಹುಡುಕಾಟ ನಮ್ಮನ್ನು ಸಿಎಎ-ಎನ್ ಆರ್ ಸಿ ಕಾಯ್ದೆ ಮತ್ತು ಅದನ್ನು ಇಡೀ ದೇಶದ ಜನರ ಜನಾಭಿಪ್ರಾಯಕ್ಕೆ ವಿರುದ್ಧವಾಗಿಯಾದರೂ ಸರಿ ಜಾರಿ ಮಾಡಿಯೇ ಮಾಡುತ್ತೇವೆ ಎಂಬ ಸರ್ವಾಧಿಕಾರಿ ದುರಹಂಕಾರ ಪ್ರದರ್ಶಿಸಿದ ಬಿಜೆಪಿ ಸರ್ಕಾರಕ್ಕೆ ಹೋಗಿ ನಿಲ್ಲುತ್ತದೆ. ಅದರಲ್ಲೂ ಮುಖ್ಯವಾಗಿ ಗೃಹ ಸಚಿವ ಅಮಿತ್ ಶಾ ಅವರ ಹಠಮಾರಿ ಧೋರಣೆ, ಯಾರೇನೇ ಹೇಳಿದರು ನಾನು ಅಂದುಕೊಂಡದ್ದನ್ನೇ ಮಾಡುವವ ಎಂಬ ಪ್ರಜಾಪ್ರಭುತ್ವ ವಿರೋಧಿ ಮನಸ್ಥತಿಯೇ ಅಂತಿಮವಾಗಿ ಸಿಎಎ-ಎನ್ ಆರ್ ಸಿ ವಿರುದ್ಧದ ಹೋರಾಟಕ್ಕೆ ಕಾರಣವಾಯಿತು. ಆ ಹೋರಾಟ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಹೋದಾಗ, ದೆಹಲಿ ಚುನಾವಣೆಯಲ್ಲಿ ಹೋರಾಟಗಾರರನ್ನು ಮತದಾರರ ಕಣ್ಣಲ್ಲಿ ಭಯೋತ್ಪಾದಕರಂತೆ ಚಿತ್ರಿಸಿ ಚುನಾವಣೆ ಗೆಲ್ಲುವ ಗುಜರಾತ್ ಮಾದರಿ ಪ್ರಯೋಗವಾಯಿತು. ಆದರೆ, ದೆಹಲಿಯ ಜನ ಗುಜರಾತಿಗಳಲ್ಲ ಎಂಬುದು ಫಲಿತಾಂಶ ಹೊರಬಿದ್ದ ಮೇಲೆ ಅರಿವಾಯಿತು.
ಆಗ ಜಾರಿಗೆ ಬಂದಿದ್ದೇ ಮತ್ತದೇ ಗುಜರಾತ್ ಮಾದರಿಯ ಸಾಮೂಹಿಕ ಹತ್ಯಾಕಾಂಡದ ತಂತ್ರಗಾರಿಕೆ. 2002ರ ಗುಜರಾತ್ ಮಾದರಿಯನ್ನೇ ಮುಂದಿಟ್ಟುಕೊಂಡು ‘ಜೈ ಶ್ರೀರಾಮ್ ಪಡೆ’ಗಳನ್ನು ಬಿಟ್ಟು ಮುಸ್ಲಿಂ ಜನವಸತಿ ಪ್ರದೇಶಗಳಿಗೆ ನುಗ್ಗಿಸಲಾಯಿತು. ಅದಕ್ಕಾಗಿ ಮಾಧ್ಯಮ ಗಮನ ಬೇರೆಡೆ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ದಿನಗಳನ್ನೇ ಆಯ್ಕೆಮಾಡಿಕೊಳ್ಳಲಾಯಿತು. ತಮ್ಮದೇ ನಾಯಕ ಕಪಿಲ್ ಮಿಶ್ರಾ ಪ್ರಚೋದನಕಾರಿ ಹೇಳಿಕೆಯ ಮೂಲಕ ದಾಳಿಗೆ ತತಕ್ಷಣಕ್ಕೆ ಕಡ್ಡಿಕೀರಲಾಯಿತು. ಇದು ಎಲ್ಲರೂ ಬಲ್ಲ ಸಂಗತಿ!
ಆದರೆ, ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಪ್ರಯೋಗವೇ ಈಗ ತಿರುಗುಬಾಣವಾದಂತಾಗಿದೆ ಎಂಬುದು ವಿಪರ್ಯಾಸ. ಕೇಂದ್ರ ಸರ್ಕಾರದಲ್ಲಿ ಏಕಾಏಕಿ ಗೃಹ ಸಚಿವರಾಗಿ ಸಂಪುಟಕ್ಕೆ ಕಾಲಿಟ್ಟಿದ್ದ ಅವರು, ಮುಸ್ಲಿಂ ವಿರೋಧಿ ಬಿಜೆಪಿ ಮತ್ತು ಸಂಘಪರಿವಾರದ ಅಜೆಂಡಾವನ್ನು ಜಾರಿಗೆ ತರುವುದೇ ಗೃಹಸಚಿವರಾಗಿ ತಮ್ಮ ಪರಮಧ್ಯೇಯ ಎಂಬಂತೆ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದರು. ಅಲ್ಲಿನ ಜನ ವಿರೋಧಿಸಬಹುದು ಎಂದು ಮಂಜಾಗ್ರತೆಯಾಗಿ ಇಡೀ ಕಣಿವೆರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಹೇರಿ, ಕರ್ಫ್ಯೂ ಜಾರಿಗೊಳಿಸಿ ರಾಜಕೀಯ ಮುಖಂಡರನ್ನು ಬಂಧನದಲ್ಲಿಟ್ಟು ತಾವೊಬ್ಬ ಉಕ್ಕಿನ ಮನುಷ್ಯ ಎಂಬಂತೆ ನಡೆದುಕೊಂಡರು. ಸಿಎಎ ಕಾಯ್ದೆಯ ವಿಷಯದಲ್ಲಿಯೂ ಸಂಸತ್ತಿನ ಒಳಹೊರಗೆ ತಾವು ಅಂದುಕೊಂಡದ್ದನ್ನು ಸಾಧಿಸದೇ ಇರಲಾರೆ, ಎಷ್ಟೇ ವಿರೋಧ ಬಂದರೂ ಜಾರಿಗೊಳಿಸದೇ ಬಿಡಲಾರೆ ಎಂಬ ಹಠಕ್ಕೆ ಬಿದ್ದು ಭರ್ಜರಿ ಆಡಳಿತಗಾರ ಎನಿಸಿಕೊಂಡಿದ್ದರು(ಕನಿಷ್ಠ ಭಕ್ತರ ಪಾಲಿಗೆಗಾದರೂ!). ಆ ಹಿನ್ನೆಲೆಯಲ್ಲಿಯೇ ಪ್ರಧಾನಿ ಮೋದಿಯವೇ ಶಾ ಎದುರು ಮಂಕುಬಡಿದಂತೆ ಕಾಣುತ್ತಿದ್ದರು ಮತ್ತು ಭವಿಷ್ಯದ ಪ್ರಧಾನಿ ಶಾ ಅವರೇ ಎಂದು ಬಿಜೆಪಿ ಮತ್ತು ಸಂಘದ ವಲಯದಲ್ಲಿ ಚರ್ಚೆ ಕೂಡ ಆರಂಭವಾಗಿತ್ತು.
ಆದರೆ, ದೆಹಲಿ ಗಲಭೆ ಈಗ ಅಂತಹ ಉಕ್ಕಿನ ಮನುಷ್ಯ ಅಮಿತ್ ಶಾ ಎಂಬ ಇಮೇಜನ್ನೇ ಕರಗಿಸಿ ಬೂದಿಮಾಡಿಬಿಟ್ಟಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ಕಾರಣಕ್ಕೆ ಜಾಗತಿಕ ಮಾಧ್ಯಮಗಳ ಕಣ್ಣು ದೆಹಲಿಯ ಮೇಲಿರುವಾಗಲೇ ಹೊತ್ತಿ ಉರಿದ ದೆಹಲಿ, ಖಂಡಿತವಾಗಿಯೂ ದೇಶದ ಒಳಹೊರಗೆ ಗೃಹ ಸಚಿವರ ಬಗ್ಗೆ ತೀರಾ ಹೀನಾಯ ಚಿತ್ರಣ ಕಟ್ಟಿಕೊಟ್ಟಿದೆ. ಪ್ರಭಾವಿ ಆಡಳಿತಗಾರನ ಸ್ಥಾನದಿಂದ ಅಮಿತ್ ಶಾ, ಕನಿಷ್ಠ ರಾಜಧಾನಿಯ ಒಂದು ಗಲಭೆಯನ್ನು ನಿಯಂತ್ರಿಸಲಾಗದ ದುರ್ಬಲ ಗೃಹ ಸಚಿವ ಎಂಬ ಹೀನಾಯ ಸ್ಥಿತಿಗೆ ಜಾರಿದ್ದಾರೆ. ಅದರಲ್ಲೂ, ಮೂರು ದಿನಗಳ ಕಾಲ ರಾಜಧಾನಿ ಹೊತ್ತಿ ಉರಿಯುತ್ತಿದ್ದರೂ ಕನಿಷ್ಠ ಮಾಧ್ಯಮಗಳ ಮುಂದೆಯೂ ಕಾಣಿಸಿಕೊಳ್ಳದೆ ಮೂರನೇ ದಿನ ಸಾರ್ವಜನಿಕವಾಗಿ ಮುಖ ತೋರಿಸಿದ ಗೃಹ ಸಚಿವರು ಎಷ್ಟು ಬಲಾಢ್ಯರು ಎಂಬ ಪ್ರಶ್ನೆಯನ್ನು ಬಡ ಬೋರೇಗೌಡನೂ ಕೇಳುವಂತಾಗಿದೆ.
ಜನರಿಂದ ಆಯ್ಕೆಯಾಗಿ ಬಂದು, ಅಧಿಕಾರ ಪಡೆದು ಜನರ ನಡುವೆ ಇರಬೇಕಾದ ಅಮಿತ್ ಶಾ, ಗಲಭೆಯ ಮೂರನೇ ದಿನ ಕೂಡ ತಮ್ಮ ಕಚೇರಿಯಿಂದ ಹೊರಬರಲಿಲ್ಲ. ಬದಲಾಗಿ ಕಚೇರಿಯಲ್ಲಿ ಕೂತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ದೆಹಲಿಯ ಬೀದಿಬೀದಿಗಳಲ್ಲಿ ಸುತ್ತಾಡಿ ಜನರಿಗೆ ಧೈರ್ಯ ತುಂಬಿದರು. ಜೊತೆಗೆ ‘ಆಗಿದ್ದು ಆಗಿ ಹೋಯಿತು, ಏನೋ ತಪ್ಪಾಗಿದೆ. ಅದನ್ನು ಮರೆತು ಮುಂದೆ ಹೋಗೋಣ’ ಎನ್ನುವ ಮಾತುಗಳ ಮೂಲಕ ಗೃಹ ಸಚಿವರ ಇಮೇಜಿಗೆ ಇನ್ನಷ್ಟು ಪೆಟ್ಟು ಕೊಟ್ಟರು ಧೋವಲ್! ಮೋದಿ ಆಪ್ತರಾಗಿ ಗುರುತಿಸಿಕೊಂಡಿರುವ ಧೋವಲ್ ಜನರ ನಡುವೆ ಬಂದಿರುವುದು ಕೂಡ, ಶಾ ಅವರ ಬಗ್ಗೆ ಮೋದಿ ಅಸಮಾಧಾನಗೊಂಡು ಇವರನ್ನು ಕಳಿಸಿದ್ದಾರೆ ಎಂಬ ಮಾತುಗಳಿಗೂ ಎಡೆಮಾಡಿಕೊಟ್ಟಿತು.
ಜೊತೆಗೆ ಗಲಭೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಮಾತನ್ನಾಡಿ ಕುಮ್ಮಕ್ಕು ನೀಡಿದ ಬಿಜೆಪಿ ನಾಯಕರ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್, ನೇರವಾಗಿ ಅಮಿತ್ ಶಾ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ್ದು ಕೂಡ ಅದಾಗಲೇ ಕಳಚಿಬಿದ್ದಿದ್ದ ಶಾ ಪ್ರತಿಷ್ಠೆಯನ್ನು ಇನ್ನಷ್ಟು ಮಣ್ಣುಪಾಲು ಮಾಡಿತು. ಆಗಲೂ ಮತ್ತೆ ಅದೇ ‘ಖೂಳ ಗುಜರಾತ್ ಮಾದರಿ’ಯನ್ನೇ ಅನುಸರಿಸಿದ ಶಾ, ರಾತ್ರೋರಾತ್ರಿ ಆ ನ್ಯಾಯಾಧೀಶರನ್ನೇ ವರ್ಗಾವಣೆ ಮಾಡಿ ತಪ್ಪನ್ನು ಮುಚ್ಚಿಕೊಳ್ಳಲು ನ್ಯಾಯಾಂಗವನ್ನೇ ದಮನ ಮಾಡುತ್ತಿದ್ದಾರೆ. ತೀರಾ ಅಸಹ್ಯಕರ ರಾಜಕೀಯ ವರಸೆ ಇದು ಎಂಬ ವ್ಯಾಪಕ ಟೀಕೆಗೆ ಈಡಾದರು.
ಹಾಗಾಗಿಯೇ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಈಗ ಅಮಿತ್ ಶಾ ರಾಜೀನಾಮೆಗೆ ಪಟ್ಟುಹಿಡಿದಿವೆ. ಕನಿಷ್ಠ ರಾಜಧಾನಿಯ ಒಂದು ಭಾಗದ ಗಲಭೆಯನ್ನು ನಿಯಂತ್ರಿಸಲಾಗದ, ದೆಹಲಿ ಪೊಲೀಸರನ್ನು ಹದ್ದುಬಸ್ತಿನಲ್ಲಿಡಲಾಗದ ವ್ಯಕ್ತಿ, ಇಡೀ ದೇಶದ ಕಾನೂನು- ಸುವ್ಯವಸ್ಥೆ, ಆಂತರಿಕ ಭದ್ರತೆಯನ್ನು ಹೇಗೆ ಕಾಯಬಲ್ಲ ಎಂಬುದು ಆ ಪ್ರತಿಪಕ್ಷಗಳ ಒಕ್ಕೊರಲ ಪ್ರಶ್ನೆ. ದುರಂತವೆಂದರೆ, ಒಂದು ಕಾಲದ ಬಿಜೆಪಿಯ ದಶಕಗಳ ಮಿತ್ರಪಕ್ಷ ಹಾಗೂ ಪ್ರಬಲ ಹಿಂದುತ್ವವಾದಿ ಶಿವಸೇನಾ ಕೂಡ ಇದೀಗ ಅಮಿತ್ ಶಾ ವಿರುದ್ಧ ಕಿಡಿಕಾರಿದೆ. “ರಾಜಧಾನಿ ಹೊತ್ತಿ ಉರಿಯುತ್ತಿರುವಾಗ ಮೂರು ದಿನಗಳ ಕಾಲ ಗೃಹ ಸಚಿವರು ಎಲ್ಲಿ ತಲೆಮರೆಸಿಕೊಂಡಿದ್ದರು” ಎಂದು ಶಿವಸೇನಾದ ಮುಖವಾಣಿ ಸಾಮ್ನಾ ನೇರವಾಗಿಯೇ ಕೇಳಿದೆ.
ಈ ನಡುವೆ, ಉರಿವ ಗಾಯದ ಮೇಲೆ ಉಪ್ಪು ಸುರಿದಂತೆ, ಅಮಿತ್ ಶಾ ಇಮೇಜಿಗೆ ಬಿಹಾರದಿಂದಲೂ ಒಂದು ಬಲವಾದ ಪೆಟ್ಟು ಬಿದ್ದಿದೆ. ಅಲ್ಲಿನ ಬಿಜೆಪಿ ನಾಯಕ ಮತ್ತು ಅಮಿತ್ ಶಾ ಶಿಷ್ಯ ಸುಶೀಲ್ ಮೋದಿಯವರು, ತಮ್ಮ ಗುರುವಿನ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಸಿಎಎ-ಎನ್ ಆರ್ ಸಿ ವಿರುದ್ಧದ ವಿಧಾನಸಭೆಯ ಸರ್ವಾನುಮತದ ನಿರ್ಣಯಕ್ಕೆ ದನಿಗೂಡಿಸಿದ್ದಾರೆ. ಹಾಗಾಗಿ, ತಮ್ಮದೇ ಸರ್ಕಾರವೇ(ಜೆಡಿಯು ಮೈತ್ರಿ ಸರ್ಕಾರ) ಈಗ ಕಾಯ್ದೆಯ ವಿರುದ್ಧ ತಿರುಗಿಬಿದ್ದಿದೆ! ಅಂದರೆ; ಅಮಿತ್ ಶಾ ಪ್ರತಿಷ್ಠೆ ಸಾರ್ವಜನಿಕರ ಕಣ್ಣಲ್ಲಿ ಮಾತ್ರವಲ್ಲ; ಪಕ್ಷದವರ ಕಣ್ಣಲ್ಲೂ ಮಣ್ಣುಪಾಲಾಗಿದೆ!
ಯಾರನ್ನೋ ಒರೆಸಿಹಾಕುವ ದುಷ್ಟತನದಲ್ಲಿ ಕೊನೆಗೆ ತಾನೇ ಇತಿಹಾಸದ ಕಸದಬುಟ್ಟಿಗೆ ಸೇರುವುದು ಎಂದರೆ ಬಹುಶಃ ಇದೇ ಇರಬಹುದು. ಅದರರ್ಥ ಶಾ ಪಾಲಿಗೆ ಎಲ್ಲವೂ ಮುಗಿದುಹೋಯಿತು ಎಂದೇನಲ್ಲ. ಆದರೆ, ದೆಹಲಿ ಘಟನೆಯ ಬಳಿಕ, ಗೃಹ ಸಚಿವರು ಅಂತಹ ಇಳಿಜಾರಿನ ಹಾದಿಯಲ್ಲಿ ಲಘುಬಗೆಯಲ್ಲಿ ಸಾಗುತ್ತಿರುವಂತಿದೆ ಎಂಬುದಂತೂ ವಾಸ್ತವ!