ದೇಶದ ಪ್ರಮುಖ ಅಂಬೇಡ್ಕರ್ ವಾದಿ ಚಿಂತಕ ಹಾಗೂ ಲೇಖಕ ಡಾ.ಆನಂದ್ ತೇಲ್ತುಂಬ್ಡೆಯವರನ್ನು ಈ ಹಿಂದಿನ ಮಹಾರಾಷ್ಟ್ರ ಬಿಜೆಪಿ ಸರ್ಕಾರವು ‘ಎಲ್ಗಾರ್ ಪರಿಷತ್’ ಪ್ರಕರಣದಲ್ಲಿ ಸಿಲುಕಿಸಿ ಇದೀಗ ಅವರನ್ನು ಜೈಲಿಗೆ ತಳ್ಳುವ ಸನ್ನಾಹದಲ್ಲಿರುವಂತೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುಟುಂಬ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಕುಟುಂಬದ ಸದಸ್ಯರೂ ಆಗಿರುವ ತೇಲ್ತುಂಬ್ಡೆಯವರ ಬದುಕು, ಸಾಧನೆ ಮತ್ತು ಅವರ ಮೇಲೆ ಹಾಕಿರುವ ಕೇಸಿನ ವಿಷಯದಲ್ಲಿ ಸರ್ಕಾರದ ದುರುದ್ದೇಶಗಳನ್ನು ಈ ಹೇಳಿಕೆ ಬಿಚ್ಚಿಟ್ಟಿದೆಯಲ್ಲದೇ ಡಾ.ತೇಲ್ತುಂಬ್ಡೆಯವರ ಪ್ರಾಣದ ಕುರಿತು ತಮಗಿರುವ ಆತಂಕ ಮತ್ತು ಕಾಳಜಿಗಳನ್ನು ಸಹ ಹೇಳಿಕೆ ಪ್ರತಿಬಿಂಬಿಸಿದೆ. ಈ ಹೇಳಿಕೆಯು ಡಾ.ಬಿ.ಆರ್,ಅಂಬೇಡ್ಕರ್ ಅವರ ಮೊಮ್ಮಗನೂ, ಮಾಜಿ ಸಂಸದರೂ ಆಗಿರುವ ಪ್ರಕಾಶ್ ಅಂಬೇಡ್ಕರ್ ಅವರೊಂದಿಗೆ ಇನ್ನೂ ಮೂವರು ಮೊಮ್ಮೊಕ್ಕಳಾದ ಭೀಮ್ರಾವ್ ಯಶವಂತರಾವ್ ಅಂಬೇಡ್ಕರ್, ಆನಂದ್ ರಾಜ್ ಯಶವಂತರಾವ್ ಅಂಬೇಡ್ಕರ್, ರಮಾ ಆನಂದ್ ತೇಲ್ತುಂಬ್ಡೆ ಅವರ ಜಂಟಿ ಹೇಳಿಕೆಯಾಗಿದೆ. ಡಾ.ಆನಂದ್ ತೇಲ್ತುಂಬ್ಡೆಯವರು ಅಂಬೇಡ್ಕರ್ ಅವರ ಐವರು ಮಕ್ಕಳಲ್ಲಿ ಬದುಕುಳಿದ ಒಬ್ಬನೇ ಮಗನಾಗಿದ್ದ ಯಶವಂತರಾವ್ ಅಂಬೇಡ್ಕರ್ ಅವರ ಅಳಿಯನಾಗಿದ್ದಾರೆ. ಈ ಜಂಟಿ ಹೇಳಿಕೆಯ ಪೂರ್ಣಪಾಠವನ್ನು ಟ್ರೂಥ್ ಇಂಡಿಯಾ ಕನ್ನಡದಲ್ಲಿ ಪ್ರಕಟಿಸುತ್ತಿದೆ.
ಪತ್ರಿಕಾ ಹೇಳಿಕೆ
ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುಟುಂಬದ ಸದಸ್ಯರಾಗಿರುವ ನಾವು 1983ರಿಂದಲೂ ನಮ್ಮ ಕುಟುಂಬದ ಭಾಗವಾಗಿರುವ ಡಾ.ಆನಂದ್ ತೇಲ್ತುಂಬ್ಡೆ ಅವರ ಮೇಲೆ ನಡೆಸಲಾಗುತ್ತಿರುವ ದಾಳಿಯ ಕುರಿತು ಬಹಳ ಆತಂಕಿರರಾಗಿದ್ದೇವೆ. 2018ರ ಆಗಸ್ಟ್ ತಿಂಗಳಿನಲ್ಲಿ ಪುಣೆ ಪೊಲೀಸರು ತೇಲ್ತುಂಬ್ಡೆ ಅವರನ್ನು ಕುಖ್ಯಾತ ‘ಎಲ್ಗಾರ್ ಪರಿಷತ್’ ಪ್ರಕರಣದಲ್ಲಿ ಸಿಲುಕಿಸಿದಾಗ ಆ ಪ್ರಕರಣವು ನ್ಯಾಯಾಲಯದ ಮೆಟ್ಟಿಲು ಹತ್ತಿದ ನಂತರವಾದರೂ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಬಹುದು, ನ್ಯಾಯಾಲಯವು ಪ್ರಕರಣವನ್ನು ರದ್ದುಪಡಿಸಬಹುದು ಎಂದು ಆಶಿಸಿದ್ದೆವು. ಕಳೆದೆರಡು ವರ್ಷಗಳಿಂದಲೂ ನಾವು ಇದೇ ವಿಶ್ವಾಸಲ್ಲಿದ್ದೆವು. ಆದರೆ ಇತ್ತೀಚೆಗೆ ಹೈಕೋರ್ಟು ಆನಂದ್ ತೇಲ್ತುಂಬ್ಡೆಯವರ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೇ ಕೇಂದ್ರ ಸರ್ಕಾರವು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಿದ ತರಾತುರಿಯನ್ನು ನೋಡಿದಾಗ ನಮಗೆ ಪ್ರಭುತ್ವದ ಉದ್ದೇಶವು ಸ್ಪಷ್ಟವಾಗಿ ಗೋಚರಿಸಿದೆ. ಅದು ತೇಲ್ತುಂಬ್ಡೆಯವರನ್ನು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಸಲು ಬಯಸಿರುವುದು ಸ್ಪಷ್ಟವಾಗಿದೆ. ಈಗ ಮುಂದಿನ ನಾಲ್ಕು ವಾರಗಳ ರಕ್ಷಣಾ ಅವಧಿಯಲ್ಲಿ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟು ಆಲಿಸಲಿರುವುದರಿಂದ ಕನಿಷ್ಟ ಪಕ್ಷ ಅಲ್ಲಾದರೂ ನ್ಯಾಯ ಸಿಗಬಹುದು ಎಂಬ ಕ್ಷೀಣ ಆಸೆಯೊಂದನ್ನು ನಾವು ಉಳಿಸಿಕೊಂಡಿದ್ದೇವೆ.
ನಾವಿಲ್ಲಿ ಸ್ಪಷ್ಟಪಡಿಸಲು ಬಯಸುತ್ತಿರುವ ವಿಷಯ ಏನೆಂದರೆ ಡಾ.ಆನಂದ್ ತೇಲ್ತುಂಬ್ಡೆ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕುಟುಂಬದ ಭಾಗವೇ ಆಗಿದ್ದು ಈ ಕಾರಣದಿಂದಲೇ ಬಿಜೆಪಿ ಸರ್ಕಾರವು ನಮ್ಮ ಕುಟುಂಬವನ್ನು ಎಟುಕಲು ಇರುವ ಸುಲಭದ ಗುರಿಯೆಂದು ತೇಲ್ತುಂಬ್ಡೆ ಅವರನ್ನು ಗುರಿಪಡಿಸಿದೆ. ಅಂತೆಯೇ ನಾವಿಲ್ಲಿ ಸ್ಪಷ್ಟಪಡಿಸಲು ಬಯಸುವ ಮತ್ತೊಂದು ಸಂಗತಿ ಏನೆಂದರೆ ಡಾ.ತೇಲ್ತುಂಬ್ಡೆ ಅವರು ಸೀದಾಸಾದಾ ವ್ಯಕ್ತಿತ್ವ ಹೊಂದಿರುವ ನೆಲಮೂಲದ ಚಿಂತಕರಾಗಿದ್ದು ಅವರ ಅಭಿಪ್ರಾಯಗಳು ಒಪ್ಪಿತ ಹಳೇ ವಿಚಾರಗಳಂತೆ ತೋರದೇ ಹೋಗಬಹುದಾದರೂ ಅವರು ಅಪ್ಪಟ ಅಂಬೇಡ್ಕರ್ ವಾದಿಯಾಗಿದ್ದು ಸಮಕಾಲೀನ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಜನತೆಗೆ ವಿವರಿಸಿ ಹೇಳಲು ಅವರಷ್ಟು ಶ್ರಮಿಸಿರುವ ಮತ್ತೊಬ್ಬರನ್ನು ಕಾಣುವುದು ಕಷ್ಟಸಾಧ್ಯ.
ಇಡೀ ಲೋಕಕ್ಕೇ ತಿಳಿದಿರುವಂತೆ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದ ಡಾ.ಆನಂದ್ ತೇಲ್ತುಂಬ್ಡೆಯವರು ಅಕಡೆಮಿಕ್ ಶಿಕ್ಷಣದಲ್ಲಿ ಅಗಾಧ ಸಾಧನೆ ತೋರಿ VNIT, IIM ಅಹಮದಾಬಾಧ್ ನಂತಹ ಪ್ರತಿಷ್ಠಿತಿ ಸಂಸ್ಥೆಗಳಲ್ಲಿ ಮಹತ್ಸಾಧನೆ ತೋರಿ, ಸೈಬರ್ನೆಟಿಕ್ಸ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಗಳಿಸಿಕೊಂಡಿದ್ದವರು. ಜಗತ್ತಿನಲ್ಲೇ ಅತ್ಯುತ್ತಮ ಶಿಕ್ಷಣ ಪಡೆದ ವ್ಯಕ್ತಿಗಳಲ್ಲಿ ಅವರೂ ಒಬ್ಬರಾಗಿದ್ದಾರೆ.

ಡಾ.ತೇಲ್ತುಂಬ್ಡೆಯವರು ತಮ್ಮ ದೋಷರಹಿತ ಮತ್ತು ನಿಷ್ಕಳಂಕಿತ ಕಾರ್ಪೊರೇಟ್ ವೃತ್ತಿಬದುಕಿನ ನಾಲ್ಕು ದಶಕಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಪೆಟ್ರೋನೆಟ್ ಇಂಡಿಯಾ ಲಿಮಿಟೆಡ್ ನಂತಹ ಖಾಸಗಿ ಕ್ಷೇತ್ರದಲ್ಲಿ ಸರ್ಕಾರದ ಉತ್ತೇಜನದಿಂದ ನಡೆಯುವ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಒ ಆಗಿ ಕೆಲಸ ನಿರ್ವಹಿಸಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಅವರು ಸೇವೆ ಸಲ್ಲಿಸಿದ ಪ್ರತಿಯೊಂದು ಹುದ್ದೆಯಲ್ಲಿಯೂ ಅದ್ಭುತ ಫಲಿತಾಂಶಗಳನ್ನು ಪಡೆದ ಕಾರಣದಿಂದ ಹಲವಾರು ಬಾರಿ ಸನ್ಮಾನ ಪುರಸ್ಕಾರಗಳನ್ನು ಪಡೆದವರು ಡಾ. ಆನಂದ್ ತೇಲ್ತುಂಬ್ಡೆ.
ಸಾಮಾಜಿಕವಾಗಿ ಸಂವೇದನಾಶೀಲ ವ್ಯಕ್ತಿಯಾಗಿ ಅವರು ಯಾವಾಗಲೂ ಮಾನವೀಯತೆಯ ಪರವಾಗಿ ನಿಲ್ಲುವಂತವರು. ಹೀಗೆಂದೇ ದೇಶದ ಪ್ರಮುಖ ಮಾನವ ಹಕ್ಕು ಕಾರ್ಯಕರ್ತರಲ್ಲಿ ಇವರ ಹೆಸರೂ ಮುಂಚೂಣಿಯಲ್ಲಿದೆ. ಅವರು ಮಹಾರಾಷ್ಟ್ರದ ಮಾನವ ಹಕ್ಕು ಸಂಘಟನೆಯಾದ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣಾ ಸಮಿತಿಯ (CPDR) ಸದಸ್ಯರೂ ಆಗಿ ಹಲವಾರು ವರ್ಷಗಳ ಕಾಲ ತೊಡಗಿಕೊಂಡು 2016ರಿಂದ ಅದರ ಪ್ರಧಾನ ಕಾರ್ಯದರ್ಶಿಯೂ ಆಗಿ ಆಯ್ಕೆಯಾಗಿದ್ದರು. ತಮ್ಮ ಸಾಮಾಜಿಕ ಬದುಕಿನ ಪ್ರಕ್ರಿಯೆಯಲ್ಲಿ ಅವರು ಬರೆದ ಅಸಂಖ್ಯ ಲೇಖನಗಳು ಪ್ರಕಟವಾಗಿದ್ದು ಎರಡು ಡಜನ್ಗೂ ಹೆಚ್ಚು ಮಹತ್ವದ ಪುಸ್ತಕಗಳು ಪ್ರಕಟಗೊಂಡಿವೆ. ಅವರ ಪ್ರತಿಯೊಂದು ಪುಸ್ತಕವೂ ಸಹ ಭಾರತದ ಬಹುತೇಕ ಎಲ್ಲಾ ಭಾಷೆಗಳಿಗೆ ಅನುವಾದಗೊಂಡಿರುತ್ತದೆ. ಕಳೆದೆರಡು ದಶಕಗಳಲ್ಲಿ ಅವರು ದೇಶದ ಬಹುಮುಖ್ಯ ಸಾರ್ವಜನಿಕ ಬುದ್ಧಿಜೀವಿಗಳಲ್ಲಿ (ಪಬ್ಲಿಕ್ ಇಂಟಲೆಕ್ಚುಅಲ್) ಒಬ್ಬರಾಗಿ ಹೊರಹೊಮ್ಮಿದ್ದಾರೆ. ಅವರ ಈ ಮಹತ್ಸಾಧನೆಯನ್ನು ಗುರುತಿಸಿಯೇ ಅನೇಕ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿವೆ.
ತಮ್ಮ ಕಾರ್ಪೊರೇಟ್ ವೃತ್ತಿಜೀವನದ ತರುವಾಯ ಅವರನ್ನು ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಯಾದ IIT ಖರಗಪುರವು ಬಿಸ್ನೆಸ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕರಾಗಿ ಆಹ್ವಾನಿಸಿತ್ತು. ಮಾತ್ರವಲ್ಲದೇ ಅವರು ತಾವು ಸ್ವತಃ ಉನ್ನತ ಶಿಕ್ಷಣ ಪಡೆದ IIT ಅಹ್ಮದಾಬಾದ್ ನಲ್ಲಿ ಸಹ ಗೌರವ/ಅತಿಥಿ ಉಪನ್ಯಾಸಕರಾಗಿ ಹಲವಾರು ವರ್ಷಗಳ ಕಾಲ ಬೋಧನೆ ನಡೆಸಿದ್ದಾರೆ. ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯು ಅವರನ್ನು ನೂತನ ಕೋರ್ಸೊಂದನ್ನು ಆರಂಭಿಸಲು ಆಹ್ವಾನಿಸಲಾಗಿ ಅದರಂತೆ 2018ರಲ್ಲಿ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಗ್ ಡೇಟಾ ಅನಾಲಿಟಿಕ್ಸ್ ಪ್ರೋಗ್ರಾಂ ಇನ್ ಮ್ಯಾನೇಜ್ಮೆಂಟ್ ಎಂಬ ಕೋರ್ಸನ್ನು ಡಾ.ತೇಲ್ತುಂಬ್ಡೆಯವರ ಉಸ್ತುವಾರಿಯಲ್ಲಿ ಪ್ರಾರಂಭಿಸಲಾಗಿದೆ. ಇದೆಲ್ಲವೂ ಸಹ ಅವರಿಗೆ ಈ ಮೊದಲಿನ ವೃತ್ತಿ ಬದುಕಿನ ಸಾಧನೆಗಳಿಗೆ ಸಂದಿದ್ದ ರೀತಿಯಲ್ಲಿಯೇ ಹಲವಾರು ಗೌರವ ಸನ್ಮಾನಗಳಿಗೆ ಭಾಜರಾಗುವಂತೆ ಮಾಡಿತ್ತು.
ಇಂತಹ ಒಬ್ಬ ವ್ಯಕ್ತಿಯನ್ನು ‘ಎಲ್ಗಾರ್ ಪರಿಷತ್’ ಸುಳ್ಳು ಕೇಸಿನಲ್ಲಿ ಸಿಲುಕಿಸಲಾಗಿದೆ. ಎಲ್ಗಾರ್ ಪರಿಷತ್ ನಡೆಸಿದ್ದ ಕಾರ್ಯಕ್ರಮದಲ್ಲಿ ಅಂದು ಅವರು ಭಾಗವಹಿಸಿಯೂ ಇರಲಿಲ್ಲ. ನಂತರ ಅಕ್ರಮವಾಗಿ ಅವರನ್ನು ಪೊಲೀಸರು ಬಂಧಿಸಿದಾಗ ದೇಶದಾದ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ವ್ಯಕ್ತವಾಯಿತು. ಅವರಿಂದ ವಶಪಡಿಸಿಕೊಂಡಿದ್ದ ಡಿಜಿಟಲ್ ಉಪಕರಣವನ್ನಾಧರಿಸಿ ಹಾಕಿದ್ದ ಸುಳ್ಳು ಕೇಸಿನಲ್ಲಿ ಯಾವುದೇ ಹುರುಳಿರಲಿಲ್ಲವಾದ್ದರಿಂದ ಈ ಪ್ರಕರಣವನ್ನು ಆರಂಭದಲ್ಲೇ ರದ್ದುಪಡಿಸಬೇಕಾಗಿತ್ತು. ಆದರೆ ವಿಚಾರಣೆಯ ಮೂಲಕವೇ ಪ್ರಕರಣವನ್ನು ಮುನ್ನಡೆಸಲು ಬಯಸಿದ್ದ ಸರ್ಕಾರ UAPAಯಂತಹ ಕರಾಳ ಕಾನೂನನ್ನೂ ಬಳಸಿಕೊಂಡು ಹಲವರಿಗೆ ಕನಿಷ್ಠ ನಿರೀಕ್ಷಣಾ ಜಾಮೀನಿಗೂ ಅವಕಾಶ ನಿರಾಕರಿಸಿ ವರ್ಷಗಳ ಕಾಲ ಜೈಲಿಗೆ ತಳ್ಳಿದೆ. ಈ ಪ್ರಕರಣವನ್ನು ಯಾವುದೇ ನೈತಿಕ ಪ್ರಜ್ಞೆಗೆ ಅವಕಾಶವೇ ಇಲ್ಲದ ರೀತಿಯಲ್ಲಿ ನಡೆಸಲಾಗುತ್ತಿದೆ.
ಈಗಾಗಲೇ ಈ ಪ್ರಕರಣದಲ್ಲಿ ಇತರರ ವಿಷಯದಲ್ಲಿ ಮಾಡಿರುವಂತೆ ಡಾ.ಆನಂದ್ ತೇಲ್ತುಂಬ್ಡೆಯವರನ್ನೂ ಬಂಧಿಸಿ ಸೆರೆಮನೆಗೆ ತಳ್ಳಿದರೆ ಅವರ ಪ್ರಾಣದ ಬಗ್ಗೆ ನಮಗೆ ತೀವ್ರ ಆತಂಕವಾಗಿದೆ. ಡಾ.ತೇಲ್ತುಂಬ್ಡೆಯವರ ಕುಟುಂಬ ಸದಸ್ಯರು ಅನುಭವಿಸಬೇಕಾದ ಯಾತನೆಯನ್ನು ನೆನೆದರೆ ತೀರಾ ಕಳವಳಕಾರಿ ಎನಿಸುತ್ತಿದೆ.
ಡಾ.ಆನಂದ್ ತೇಲ್ತುಂಬ್ಡೆಯವರ ಮೇಲಿನ ಈ ದಮನಕಾರಿ ದಾಳಿಯು ಅಂಬೇಡ್ಕರ್ ಅವರ ಕುಟುಂಬದ ಮೇಲಿನ ದಾಳಿಯೇ ಆಗಿರುವುದಲ್ಲೇ ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಧೀಮಂತ ಪರಂಪರೆಯನ್ನು ಅಪವಿತ್ರಗೊಳಿಸುವ ಪ್ರಯತ್ನವೇ ಆಗಿದೆ. ಇದನ್ನು ಅರಿತುಕೊಂಡು ದೇಶದ ಎಲ್ಲಾ ಅಂಬೇಡ್ಕರ್ ವಾದಿ ಜನತೆ ಈ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಬೇಕು ಎಂದು ಈ ಮೂಲಕ ಕರೆ ನೀಡುತ್ತಿದ್ದೇವೆ.
ವಂದನೆಗಳೊಂದಿಗೆ