ದೆಹಲಿ ಗಲಭೆಗೆ ಕುಮ್ಮಕ್ಕು ನೀಡಿದ ಗಂಭೀರ ಆರೋಪ ಬಿಜೆಪಿ ನಾಯಕರ ಮೇಲಿದೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ಮೇಲಿದೆ. ಹರ್ಷ್ ಮಂದರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿಯೂ ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ ಮತ್ತು ಆದಿತ್ಯ ಮಿಶ್ರಾ ಜೊತೆಗೆ ಮುಖ್ಯವಾಗಿ ಅನುರಾಗ್ ಠಾಕೂರ್ ಅವರ ಗೋಲಿ ‘ಮಾರೋ ಗದ್ಧರೋಂಕಾ..’ ಘೋಷಣೆಯ ಪ್ರಸ್ತಾಪವೂ ಇದೆ.
ಅನುರಾಗ್ ಠಾಕೂರ್ ಅವರ ಆ ಘೋಷಣೆ ಇದೀಗ ದೆಹಲಿಯ ಗಲ್ಲಿಗಳಿಂದ ದೇಶದ ಮೂಲೆಮೂಲೆಯ ಹಳ್ಳಿಗಳ ಗಲ್ಲಿಗಳಲ್ಲೂ ಪ್ರತಿಧ್ವನಿಸತೊಡಗಿದೆ. ಸ್ವತಃ ದೇಶದ ಕಾನೂನು ಮತ್ತು ಸುವ್ಯವಸ್ಥೆಯ, ಎಲ್ಲ ನಾಗರಿಕರ ಜೀವದ ಸುರಕ್ಷತೆಯ ಹೊಣೆ ಹೊತ್ತಿರುವ ಗೃಹ ಸಚಿವ ಅಮಿತ್ ಶಾ ಕೂಡ ಕೊಲ್ಕತ್ತಾದ ಸಿಎಎ ಪರ ರ್ಯಾಲಿಯಲ್ಲಿ ಠಾಕೂರರ ಮಾದರಿಯನ್ನೇ ಅನುಸರಿಸಿ, ಗೋಲಿ ಮಾರೋ ಘೋಷಣೆ ಮೊಳಗಿಸಿದ್ದಾರೆ.
ಆ ಮೂಲಕ, ಸಿಎಎ- ಎನ್ ಆರ್ ಸಿ ವಿಷಯದಲ್ಲಿ ತನ್ನ ನಿಲುವಿಗೆ ಬದ್ದವಾಗಿರಲು ಮತ್ತು ಅದನ್ನು ಪ್ರಬಲ ಜನವಿರೋಧದ ನಡುವೆಯೂ ಜಾರಿ ಮಾಡಲು ಪಣತೊಟ್ಟಿರುವ ಇಡೀ ಬಿಜೆಪಿ ಸರ್ಕಾರವೇ ‘ಗೋಲಿ ಮಾರೋ’ ವರಸೆಗೆ ಜಾರಿದೆ ಎಂಬುದನ್ನು ಗೃಹ ಸಚಿವರು ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ಆದರೆ, ಈ ನಡುವೆ ‘ಗೋಲಿ ಮಾರೋ’ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಖಭಂಗವಾಗತೊಡಗಿದ್ದು, ಹಲವು ಹಲವು ದೇಶಗಳು ಮತ್ತು ಹಲವು ಅಂತಾರಾಷ್ಟ್ರೀಯ ವೇದಿಕೆಗಳ ಬಳಿಕ ಇದೀಗ ಸ್ವತಃ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಆಯುಕ್ತರು(ಒಎಚ್ ಸಿಎಚ್ ಆರ್) ಕೂಡ ಸಿಎಎ ವಿಷಯದಲ್ಲಿಮಧ್ಯಪ್ರವೇಶಿಸಿದ್ದಾರೆ.
ಸಿಎಎಯ ಸಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯೊಂದರ ಪ್ರಕರಣದಲ್ಲಿ ತನ್ನನ್ನು ವಾದಿಯಾಗಿ ಪರಿಗಣಿಸುವಂತೆ ಕೋರಿ ಒಎಚ್ ಸಿಎಚ್ ಆರ್ ಮಿಷೆಲ್ ಬ್ಯಾಸೆಲೆಟ್ ಜೆರಿಯಾ ಅವರು ಸು್ಪರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಧರ್ಮಾಧಾರಿತವಾಗಿ ನಿರಾಶ್ರಿತರಿಗೆ ಪೌರತ್ವ ನೀಡಿಕೆಯಲ್ಲಿ ತಾರತಮ್ಯ ಎಸಗುವುದು ಅಂತಾರಾಷ್ಟ್ರೀಯ ಒಪ್ಪಂದಗಳ ಉಲ್ಲಂಘಟನೆಯಾಗುತ್ತದೆ ಮತ್ತು ಮೂಲಭೂತವಾಗಿ ಅದು ಸಮಾನತೆ ಮತ್ತು ಸಹಬಾಳ್ವೆಯ ಮಾನವ ಮೂಲ ಭೂತ ಹಕ್ಕಿನ ಉಲ್ಲಂಘನೆ ಕೂಡ. ಆ ಕಾರಣದಿಂದ ಪ್ರಕರಣದಲ್ಲಿ ತನಗೂ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿರುವುದಾಗಿ ವರದಿಯಾಗಿದೆ.
ಸಹಜವಾಗಿಯೇ ಈ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಮಸಿ ಬಳಿದಂತಾಗಿದ್ದು, ನೆಹರೂ ಕಾಲದಿಂದ ಭಾರತ ಜಾಗತಿಕ ಮಟ್ಟದಲ್ಲಿ ಕಾಯ್ದುಕೊಂಡುಬಂದಿದ್ದ ಉದಾರವಾದಿ, ಧರ್ಮನಿರಪೇಕ್ಷ ಪ್ರಜಾತಂತ್ರ ಗಣರಾಜ್ಯ ಮತ್ತು ಯಾವುದೇ ಧರ್ಮ, ಪ್ರದೇಶ, ವರ್ಣ, ಜಾತಿಯ ಆಧಾರದ ಮೇಲೆ ತಾರತಮ್ಯ ಎಸಗದೆ ಎಲ್ಲರನ್ನೂ ಸಮಾನವಾಗಿ ಕಾಣುವ ದೇಶ ಎಂಬ ಕನಿಷ್ಠ ಸಂವಿಧಾನಿಕ ಆಶಯ ಕೂಡ ಮಣ್ಣುಪಾಲಾಗಿದೆ.
ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂಬ ಭಾರೀ ಹಗಲುಗನಸಿನ ಘೋಷಣೆಯ ಮೂಲಕ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರು, ಪ್ರಧಾನಿಯಾಗಿ ತಮ್ಮ ಎರಡನೇ ಅವಧಿಯಲ್ಲಿ ತೆಗೆದುಕೊಂಡ ಒಂದೆರಡು ಪ್ರಮುಖ ನಿರ್ಧಾರಗಳೂ ಕೇವಲ ಆಂತರಿಕವಾಗಿ ಮಾತ್ರವಲ್ಲ; ಜಾಗತಿಕ ಮಟ್ಟದಲ್ಲೂ ದೇಶದ ವರ್ಚಸ್ಸಿಗೆ, ಹೆಗ್ಗಳಿಕೆಗೆ ಕಳಂಕ ತಂದಿವೆ ಎಂಬ ಟೀಕೆಗಳಲ್ಲಿ ಹುರುಳಿಲ್ಲದೇ ಇಲ್ಲ ಎಂಬುದನ್ನು ವಿಶ್ವಸಂಸ್ಥೆಯ ಈ ಮಧ್ಯಪ್ರವೇಶಿಸುವಿಕೆ ಸಾಬೀತು ಮಾಡಿದೆ. ಅದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿ ಅಲ್ಲಿ ಆರು ತಿಂಗಳ ಕಾಲ ಕರ್ಫ್ಯೂ ಹೇರಿ, ಅಲ್ಲಿನ ಜನನಾಯಕರನ್ನು ಜೈಲಿಗೆ ಹಾಕಿದ ಕ್ರಮವಿರಬಹುದು, ಇಂಟರ್ ನೆಟ್ ಸ್ಥಗಿತಗೊಳಿಸಿದ ರೀತಿ ಇರಬಹುದು, ಭಾರೀ ಜನ ವಿರೋಧದ ನಡುವೆಯೂ ಕೋಮು ರಾಜಕಾರಣದ ತಮ್ಮ ಹಿಂದುತ್ವವಾದಿ ಅಜೆಂಡಾದ ಭಾಗವಾಗಿ ಸಿಎಎ ಮಸೂದೆ ಮಂಡಿಸಿ, ಅದನ್ನು ಜಾರಿಗೊಳಿಸಿದ ವರಸೆ ಇರಬಹುದು, ಆ ವೇಳೆ ವ್ಯಕ್ತವಾದ ಪ್ರತಿಭಟನೆ ಹತ್ತಿಕ್ಕಲು ಪೊಲೀಸ್ ಬಲಪ್ರಯೋಗ, ಇಂಟರ್ ನೆಟ್ ಸ್ಥಗಿತ, ದೆಹಲಿ ಜನಾಂಗೀಯ ಹತ್ಯಾಕಾಂಡದವರೆಗೆ ಪ್ರತಿ ವಿಷಯದಲ್ಲಿಯೂ ದೇಶದ ಬಗೆಗಿನ ಅಂತಾರಾಷ್ಟ್ರೀಯ ಸಮುದಾಯದ ಗ್ರಹಿಕೆ ಮತ್ತು ಧೋರಣೆಯನ್ನು ಮುಕ್ಕಾಗಿಸಿವೆ.
ಕಾಶ್ಮೀರದಲ್ಲಿ ಸಂಪೂರ್ಣ ಜನಜೀವನವನ್ನೇ ಕಟ್ಟಿಹಾಕಿದ ಸರ್ಕಾರದ ದಮನ ನೀತಿ, ಅಂತಾರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯ ಮೂರು ತಿಂಗಳ ಬಳಿಕ ಅಂತಾರಾಷ್ಟ್ರೀಯ ಸಂಸದರ ನಿಯೋಗ ಕೊಂಡೊಯ್ದು ಅಲ್ಲಿನ ಪರಿಸ್ಥಿತಿ ವಿವರಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆ ವಿಷಯ ಇನ್ನೇನು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನದಿಂದ ಮರೆಯಾಯಿತು ಎಂಬಷ್ಟರಲ್ಲಿ; ಸಿಎಎ ವಿವಾದ ಶುರುವಾಯಿತು.
ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ವೇಳೆಯೇ ಸಿಎಎ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಸ್ವತಃ ಪ್ರಧಾನಿ ಮೋದಿಯವರ ಪಕ್ಷದ ಮುಖಂಡರೇ ಕುಮ್ಮಕ್ಕು ನೀಡಿ ಚಾಲನೆ ನೀಡಿದ ಭೀಕರ ಹಿಂಸಾಚಾರ ಅಂತಿಮವಾಗಿ ದೆಹಲಿ ಕಂಡ ಜನಾಂಗೀಯ ಹತ್ಯಾಕಾಂಡಗಳ ಸಾಲಿಗೆ ಸೇರಿತು. 1984ರ ಸಿಖ್ ಹತ್ಯಾಕಾಂಡದ ಬಳಿಕದ ಆಡಳಿತರೂಢದ ಕುಮ್ಮಕ್ಕಿನ ಭೀಕರ ಜನಾಂಗೀಯ ಹತ್ಯೆಯಾಗಿ ದೆಹಲಿ ಹಿಂಸಾಚಾರ ಇತಿಹಾಸ ಸೇರಿತು. ಸಹಜವಾಗೇ ಆ ಇಡೀ ಘಟನಾವಳಿಗಳು ಟ್ರಂಪ್ ಪ್ರವಾಸದ ಕಾರಣಕ್ಕೆ ದೆಹಲಿಯತ್ತ ಕಣ್ಣು ನೆಟ್ಟಿದ್ದ ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಜಗತ್ತಿನ ಮೂಲೆಮೂಲೆಗೆ ರಾಚಿತು.
ಸಿಎಎ ವಿರೋಧಿಗಳನ್ನು ಬಗ್ಗುಬಡಿಯಲು, ಅವರ ಸದ್ದಡಗಿಸಲು ನಡೆಸಿದ ಈ ‘ಗುಜರಾತ್ ಮಾದರಿ’ ಪ್ರಯೋಗ ಈಗ ಮೋದಿ ಸರ್ಕಾರಕ್ಕೆ ತಿರುಗುಬಾಣವಾಗುವ ಲಕ್ಷಣಗಳ ಕಾಣಿಸುತ್ತಿದ್ದು, ಸುಪ್ರೀಂಕೋರ್ಟ್ ಪ್ರಕರಣದಲ್ಲಿ ವಿಶ್ವಸಂಸ್ಥೆಯನ್ನು ವಾದಿಯಾಗಿ ಪರಿಗಣಿಸಿದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಛೀಮಾರಿಗೆ ಒಳಗಾಗಬೇಕಾಗಬಹುದು. ವಿಪರ್ಯಾಸವೆಂದರೆ; ಸಿಎಎಯಂತಹ ಸಂವಿಧಾನವಿರೋಧಿ ಕಾನೂನನ್ನು ಪ್ರಶ್ನಿಸುತ್ತಿರುವ ಭಾರತೀಯರ ಮೇಲೆ ಪ್ರಯೋಗಿಸಲಾಗುತ್ತಿರುವ ದೇಶದ್ರೋಹದ ಅಸ್ತ್ರವನ್ನು ವಿಶ್ವಸಂಸ್ಥೆಯ ಮೇಲೆ ಪ್ರಯೋಗಿಸಲಾಗದು! ಹಾಗಾಗಿ ಮೋದಿ ಆಡಳಿತ ಮತ್ತು ಮುಖ್ಯವಾಗಿ ಗೃಹ ಸಚಿವರು ಈ ವಿಷಯದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸುಪ್ರೀಂಕೋರ್ಟ್ ಪ್ರಕ್ರಿಯೆಗಿಂತ ಕುತೂಹಲ ಹುಟ್ಟಿಸಿದೆ.
ಈಗಾಗಲೇ ಭಾರತ ಸರ್ಕಾರ, ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಮುಖ್ಯಸ್ಥರ ಅರ್ಜಿಯ ಬಗ್ಗೆ ಆಕ್ಷೇಪವೆತ್ತಿದ್ದು, ಇದು ಭಾರತದ ಆಂತರಿಕ ವಿಷಯ. ಈ ವಿಷಯದಲ್ಲಿ ವಿಶ್ವಸಂಸ್ಥೆಯೂ ಸೇರಿದಂತೆ ಯಾವುದೇ ಬಾಹ್ಯ ಶಕ್ತಿಗಳಿಗೆ ಮೂಗು ತೂರಿಸಲು ಅವಕಾಶವಿಲ್ಲ ಎಂದು ಹೇಳಿದೆ. ಆದರೆ, ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಪ್ರಸ್ತಾಪಿಸಿರುವ ವಿಶ್ವಸಂಸ್ಥೆ, ಭಾರತವನ್ನು ಹೊರತುಪಡಿಸಿ ಇತರ ರಾಷ್ಟ್ರಗಳ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಕುರಿತ ಕಾಯ್ದೆಯಲ್ಲಿ ಧರ್ಮವನ್ನು ಆಧಾರವಾಗಿ ಪರಿಗಣಿಸಿರುವುದು ಖಂಡಿತವಾಗಿಯೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ ಎಂದಿದೆ. ಆ ಹಿನ್ನೆಲೆಯಲ್ಲಿ ಇದೀಗ ಇಡೀ ಸಿಎಎ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ತೆರೆದುಕೊಂಡಂತಾಗಿದೆ.
ಈ ನಡುವೆ, ಆರ್ಥಿಕ ವೈಫಲ್ಯಗಳನ್ನು ಮರೆಮಾಚಲು, ದಿವಾಳಿ ಏಳುತ್ತಿರುವ ದೇಶದ ಆರ್ಥಿಕ ಸ್ಥಿತಿಗತಿಯ ವಾಸ್ತವಾಂಶಗಳನ್ನು ಜನರಿಂದ ಮರೆಮಾಚಿ ಗಮನ ಬೇರೆಡೆ ಸೆಳೆಯಲು ಸಿಎಎ ಜಾರಿಗೆ ತರಲಾಗಿದೆ ಎಂಬ ಮಾತುಗಳೂ ಇದ್ದವು. ಇದೀಗ ಅಲ್ಲೂ ಮೋದಿ ಸರ್ಕಾರಕ್ಕೆ ನೆಮ್ಮದಿ ಕಾಣಿಸುತ್ತಿಲ್ಲ. ‘ತಾಲಿನಾಮಿಕ್ಸ್’ ಎಂಬ ಬಣ್ಣದ ಮಾತುಗಳ ಹೊರತಾಗಿಯೂ ದೇಶದ ಆರ್ಥಿಕ ವೃದ್ಧಿ ದರ ಪ್ರಪಾತಮುಖಿಯಾಗಿದ್ದು, ಜಿಡಿಪಿ ಬೆಳವಣಿಗೆ ದರ ಶೇ.4.7ಕ್ಕೆ ಕುಸಿದಿದೆ. ನಿರುದ್ಯೋಗ ಪ್ರಮಾಣ ಶೇ.7.78ಕ್ಕೆ ಏರಿಕೆ ಕಂಡಿದೆ. ಬ್ಯಾಂಕುಗಳ ಎನ್ ಪಿಎ ಪ್ರಮಾಣ ಸುಮಾರು 10 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಕಾರ್ಪೊರೇಟ್ ವಲಯದ ಬಾಕಿ ಸಾಲದ ಪ್ರಮಾಣ ಇನ್ನು ಮೂರೇ ತಿಂಗಳಲ್ಲಿ ಹತ್ತು ಲಕ್ಷ ಕೋಟಿ ರೂ. ಆಗಲಿದೆ ಎಂದು ವರದಿಗಳು ಹೇಳಿವೆ! ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವರಿಗೆ ‘ಗೋಲಿ ಮಾರೋ..’ ಅಭಿಯಾನವೇ ಪೂರ್ಣಾವಧಿ ಖಾತ್ರಿಯಾಗುವ ಸಾಧ್ಯತೆ ಹೆಚ್ಚಿದೆ!