ಸಿಎಎ-ಎನ್ ಆರ್ ಸಿ ವಿಷಯದಲ್ಲಿ ಕೇಂದ್ರ ಸರ್ಕಾರ ಜನರಿಂದ ಏನನ್ನೋ ಮುಚ್ಚಿಡುತ್ತಿದೆ ಎಂಬ ಅಭಿಪ್ರಾಯ ದಿನದಿಂದ ದಿನಕ್ಕೆ ಮತ್ತಷ್ಟು ಧೃಡವಾಗುತ್ತಲೇ ಇದೆ.
ಕಾಯ್ದೆ ಮತ್ತು ಅದರ ಜಾರಿಯ ಕುರಿತು ಗೃಹ ಸಚಿವರು ಒಂದು ಹೇಳಿಕೆ, ಪ್ರಧಾನಿ ಮತ್ತೊಂದು ಹೇಳಿಕೆ ನೀಡುವುದು, ಸಂಸತ್ತಿನ ಒಳಗೊಂದು ಹೇಳಿಕೆ, ಹೊರಗೊಂದು ಹೇಳಿಕೆ ಕೊಡುವುದು, ಮಾಧ್ಯಮಗಳ ಮುಂದೊಂದು ವರಸೆ, ಬಿಜೆಪಿ ಸಭೆ- ಸಮಾವೇಶಗಳಲ್ಲಿ ಮತ್ತೊಂದು ವರಸೆ,.. ಹೀಗೆ ವೈರುಧ್ಯಗಳ ಬಳಿಕ ಇದೀಗ ಮತ್ತೊಂದು ಹಂತಕ್ಕೆ ಈ ವಿಪರ್ಯಾಸ ಮುಂದುವರಿದಿದೆ.
ಸಿಎಎ ಕಾಯ್ದೆ ವಿಷಯದಲ್ಲಿ ತನಗೂ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ಮುಖ್ಯಸ್ಥರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ‘ಆ ಕಾಯ್ದೆ ಭಾರತದ ಆಂತರಿಕ ವಿಷಯ. ದೇಶದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಅಧಿಕಾರ ಯಾವುದೇ ವಿದೇಶಿ ವ್ಯಕ್ತಿ- ವ್ಯವಸ್ಥೆಗಳಿಗೆ ಇಲ್ಲ’ ಎಂದಿದ್ದ ಕೇಂದ್ರ ಸರ್ಕಾರ, ಆ ಪ್ರತಿಕ್ರಿಯೆಗೆ ಕೇವಲ ಒಂದೇ ಒಂದು ದಿನ ಮುನ್ನ, ‘ಕಾಯ್ದೆ ವಿದೇಶಿ ಪ್ರಜೆಗಳಿಗೆ ಪೌರತ್ವ ನೀಡಲು ಸಂಬಂಧಿಸಿದೆ ಮತ್ತು ಆ ಕಾರಣದಿಂದ ಕಾಯ್ದೆಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದು ವಿದೇಶಗಳೊಂದಿಗಿನ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮಬೀರಲಿದೆ’ ಎಂದು ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವುದು ಬೆಳಕಿಗೆ ಬಂದಿದೆ!
ಪ್ರಮುಖ ಜಾಲತಾಣ ಮಾಧ್ಯಮ ‘ಹಫಿಂಗ್ಟನ್ ಪೋಸ್ಟ್’ ವರದಿಗಾರರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ನೀಡಿರುವ ಪ್ರತಿಕ್ರಿಯೆಯಲ್ಲಿ ಈ ವಿರೋಧಭಾಸದ ಸಂಗತಿ ಬಯಲಾಗಿದೆ.
ಸಿಎಎ ಕಾಯ್ದೆ ಕರಡು ತಯಾರಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಕಡತದ ಪ್ರತಿ ಕೋರಿ ವರದಿಗಾರರು ಗೃಹ ಸಚಿವಾಲಯಕ್ಕೆ ಮಾಹಿತಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರು ಕೋರಿದ್ದ ಮಾಹಿತಿಯನ್ನು ನೀಡಲು ನಿರಾಕರಿಸಿರುವ ಗೃಹ ಸಚಿವಾಲಯದ ನಿರ್ದೇಶಕ ಹುದ್ದೆಗೆ ಸಮಾನ ಸ್ಥಾನದಲ್ಲಿರುವ ಮತ್ತು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ(ಸಿಪಿಐಒ)ಯಾಗಿರುವ ಬಿ ಸಿ ಜೋಷಿ ಎಂಬುವವರು, ಕೋರಿರುವ ಕಡತಗಳು ವಿದೇಶಿ ಪ್ರಜೆಗಳಿಗೆ ಪೌರತ್ವ ನೀಡುವ ಸರ್ಕಾರದ ನೀತಿಗೆ ಸಂಬಂಧಪಟ್ಟಿವೆ. ಮತ್ತು ಅಂತಹ ಮಾಹಿತಿಯನ್ನು ಬಹಿರಂಗಪಡಿಸುವುದು ವಿದೇಶಗಳೊಂದಿಗಿನ ಭಾರತದ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.
ಆದರೆ, ಆ ಪ್ರತಿಕ್ರಿಯೆ ನೀಡಿದ ಮಾರನೇ ದಿನವೇ, ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ಮುಖ್ಯಸ್ಥರು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸುತ್ತಾ, ಕೇಂದ್ರ ಸರ್ಕಾರದ ವಿದೇಶಾಂಗ ಖಾತೆಯ ವಕ್ತಾರ ರವೀಶ್ ಕುಮಾರ್ ಅವರು, ‘ಸಿಎಎ ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯ. ಹಾಗಾಗಿ ಆ ವಿಷಯದಲ್ಲಿ ಯಾವುದೇ ವಿದೇಶಿಯರಿಗೆ ಪ್ರಶ್ನಿಸುವ ಅವಕಾಶ ಇರುವುದಿಲ್ಲ’ ಎಂದು ಸರ್ಕಾರದ ನಿಲುವು ವ್ಯಕ್ತಪಡಿಸಿದ್ದಾರೆ.
ಆ ಹಿನ್ನೆಲೆಯಲ್ಲಿ, ಸಂಪೂರ್ಣ ದೇಶದ ಆಂತರಿಕ ವಿಷಯವಾಗಿರುವ ಸಿಎಎ ಕುರಿತ ಕಡತದ ಮಾಹಿತಿಯನ್ನು ನೀಡುವುದರಿಂದ ಹೇಗೆ ವಿದೇಶಗಳೊಂದಿಗಿನ ದೇಶದ ಸಂಬಂಧಕ್ಕೆ ಧಕ್ಕೆ ಬರುತ್ತದೆ ತಾವು ಸ್ಪಷ್ಟನೆ ಕೋರಿದ್ದು, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಂದ ಈವರೆಗೆ ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ ಎಂದು ‘ಹಫಿಂಗ್ಟನ್’ ವರದಿಗಾರರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆ, ಆ ವರದಿಗಾರರು ಮಾಜಿ ಕೇಂದ್ರ ಮಾಹಿತಿ ಆಯುಕ್ತರಾಗಿ ನಿವೃತ್ತರಾಗಿರುವ ಮತ್ತು ಐಬಿ(ಗುಪ್ತದಳ)ಯಲ್ಲಿ ವಿಶೇಷ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಯಶೋವರ್ಧನ್ ಆಜಾದ್ ಅವರನ್ನು ಮಾತನಾಡಿಸಿದ್ದು, ಅವರು, ‘ಕೋರಿರುವ ಮಾಹಿತಿಯನ್ನು ಯಾವುದೇ ತಕರಾರು ಇಲ್ಲದೆ ನೀಡಬಹುದಾಗಿತ್ತು. ಜೊತೆಗೆ ಮಾಹಿತಿ ನಿರಾಕರಿಸಲು ನೀಡಿರುವ ಕಾರಣ ಕೂಡ ತಪ್ಪಾಗಿದೆ’ ಎಂದಿದ್ದಾರೆ. ‘ಗೃಹ ಸಚಿವಾಲಯದಂತಹ ಮಹತ್ವದ ಖಾತೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಮೂಲ ಅಂಶಗಳ ಬಗ್ಗೆಯೇ ಮಾಹಿತಿ ಇಲ್ಲದ ಅಧಿಕಾರಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನಾಗಿ ನೇಮಿಸಿರುವುದು ಅಚ್ಚರಿಯ ಸಂಗತಿ. ಈ ಕಾಯ್ದೆ ಮೂಲಭೂತವಾಗಿ ಭಾರತದಲ್ಲಿ ಈಗಾಗಲೇ ನೆಲೆಸಿರುವ ವಿದೇಶಿ ಮೂಲದ ಪ್ರಜೆಗಳಿಗೆ ಸಂಬಂಧಿಸಿದ್ದೇ ವಿನಃ ವಿದೇಶಿ ಸರ್ಕಾರಗಳಿಗೆ ಸಂಬಂಧಿಸಿದ್ದಲ್ಲ. ಹಾಗಾಗಿ ಅದರ ಮಾಹಿತಿ ಬಹಿರಂಗಕ್ಕೂ ವಿದೇಶಗಳೊಂದಿಗಿನ ಭಾರತದ ಸಂಬಂಧಕ್ಕೂ ಯಾವುದೇ ನಂಟಿಲ್ಲ’ ಎಂದೂ ಅವರು ಸ್ಪಷ್ಟಿಪಡಿಸಿದ್ಧಾರೆ.
ಹಾಗೊಂದು ವೇಳೆ, ಅಂತಹ ಸೂಕ್ಷ್ಮ ಮಾಹಿತಿ ಏನಾದರೂ ಇದ್ದಲ್ಲಿ, ಆ ಭಾಗವನ್ನು ಹೊರತುಪಡಿಸಿ ಉಳಿದಂತೆ ಇರುವ ಮಾಹಿತಿಯನ್ನು ನೀಡಲು ಕೂಡ ಅವಕಾಶವಿದೆ. ಆದರೆ, ಸಚಿವಾಲಯದ ಅಧಿಕಾರಿಗಳು ಸಾರಾಸಗಟಾಗಿ ಮಾಹಿತಿ ನೀಡಲಾಗುವುದೇ ಇಲ್ಲ ಎಂದು ತಿರಸ್ಕರಿಸಿರುವುದು ವಿಚಿತ್ರ ಎಂದೂ ಅಜಾದ್ ಅಭಿಪ್ರಾಯಪಟ್ಟಿದ್ಧಾರೆ.
ಹಾಗೆ ನೋಡಿದರೆ, ಸಿಎಎಗೆ ಸಂಬಂಧಿಸಿದಂತೆ ಈವರೆಗೆ ನೂರಾರು ಮಾಹಿತಿ ಹಕ್ಕು ಅರ್ಜಿಗಳು ಕೇಂದ್ರ ಸರ್ಕಾರದ ಮುಂದೆ ಸಲ್ಲಿಕೆಯಾಗಿವೆ. ಆದರೆ, ಯಾವುದೇ ಅರ್ಜಿಗೂ ಕೋರಿದ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿಲ್ಲ ಮತ್ತು ಬಹಳಷ್ಟು ಪ್ರಕರಣಗಳಲ್ಲಿ ಸಾರಾಸಗಟಾಗಿ ಮಾಹಿತಿ ನೀಡಲಾಗದು ಎಂದು ತಿರಸ್ಕರಿಸಲಾಗಿದೆ. ಆದರೆ, ವಾಸ್ತವವಾಗಿ ಸಂಸತ್ತಿನಲ್ಲಿ ಮಸೂದೆ ಮಂಡನೆಯಾದ ಬಳಿಕ ಒಂದು ವಾರದಲ್ಲಿ ಆ ಮಸೂದೆಗೆ ಸಂಬಂಧಿಸಿದ ಸಂಪುಟದ ಅಭಿಪ್ರಾಯ ಮತ್ತು ಹಿಂಬರಹ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ದೊರೆಯುವಂತೆ ಪ್ರಕಟಿಸಬೇಕಾಗುತ್ತದೆ. ಆದರೆ, ಸಿಎಎಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ನೋಟ್ ಸೇರಿದಂತೆ ಬಹುತೇಕ ಸಂಗತಿಗಳನ್ನು ಈಗಲೂ ರಹಸ್ಯವಾಗಿ ಇಡಲಾಗಿದೆ ಎಂದು ಹೇಳಲಾಗಿದೆ.
ಒಂದು ಕಡೆ, ವಿಶ್ವಸಂಸ್ಥೆ ಮತ್ತು ಹಲವು ವಿದೇಶಿ ಸಂಘಸಂಸ್ಥೆಗಳನ್ನೊಳಗೊಂಡ ವೇದಿಕೆಗಳು, ಸಂಸತ್ತುಗಳು ಮತ್ತು ವಿದೇಶಿ ಸರ್ಕಾರಗಳು ಸಿಎಎ ವಿಷಯದಲ್ಲಿ ಭಾರತ ಸರ್ಕಾರದ ನಿಲುವಿನ ಬಗ್ಗೆ ಆಕ್ಷೇಪ ಮತ್ತು ಆತಂಕ ವ್ಯಕ್ತಪಡಿಸಿವೆ. ಆ ಎಲ್ಲಾ ಸಂದರ್ಭಗಳಲ್ಲಿಯೂ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರ್ಕಾರ, ಅದು ಸಂಪೂರ್ಣ ಭಾರತದ ಆಂತರಿಕ ವಿಷಯ ಎಂಬ ಪ್ರತಿಕ್ರಿಯೆಯನ್ನೇ ನೀಡುತ್ತಾ ಬಂದಿದೆ. ಆ ಮೂಲಕ ನಮ್ಮ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಅಧಿಕಾರ ನಿಮಗೆ ಇಲ್ಲ ಎಂಬ ಸಂದೇಶವನ್ನು ಇತರ ಅಂತಾರಾಷ್ಟ್ರೀಯ ಸಮುದಾಯಕ್ಕೆ ರವಾನಿಸುತ್ತಲೇ ಇದೆ. ಆದರೆ, ಅದೇ ಹೊತ್ತಿಗೆ, ಆಂತರಿಕವಾಗಿ ಜನರಿಗೆ ಸಂಬಂಧಿಸಿದ, ಜನರ ಪೌರತ್ವಕ್ಕೆ ಸಂಬಂಧಿಸಿದ ಮತ್ತು ಆ ಕಾರಣಕ್ಕಾಗಿ ಪ್ರತಿ ವಿವರವೂ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರಲೇಬೇಕಾದ ಕಾಯ್ದೆಯ ಕುರಿತ ಮಾಹಿತಿ ಕೋರಿಕೆಗೆ ಮಾತ್ರ, ವ್ಯತಿರಿಕ್ತ ಪ್ರತಿಕ್ರಿಯೆ ನೀಡುತ್ತಿದೆ. ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಇದು ಆಂತರಿಕ ವಿಷಯ ಎನ್ನುವ ಸರ್ಕಾರ, ಆಂತರಿಕವಾಗಿ ತನ್ನದೇ ಪ್ರಜೆಗಳಿಗೆ ಅದು ವಿದೇಶಿ ಸಂಬಂಧಕ್ಕೆ ಸಂಬಂಧಿಸಿದ್ದು, ಮಾಹಿತಿ ಬಹಿರಂಗಪಡಿಸುವುದು ದೇಶದ ವಿದೇಶಾಂಗ ಸಂಬಂಧಕ್ಕೆ ಪೆಟ್ಟು ಕೊಡಲಿದೆ ಎನ್ನುತ್ತಿದೆ.
ಇದು ಸಿಎಎ ಕಾಯ್ದೆಯ ಕರಡು ಸ್ಥಿತಿಯಿಂದ ಈವರೆಗೆ ಪ್ರಧಾನಿ ಮೋದಿಯವರ ಸರ್ಕಾರ ತೋರುತ್ತಿರುವ ಪರಸ್ಪರ ವಿರೋಧಭಾಸದ ಹೇಳಿಕೆ ಮತ್ತು ನಡವಳಿಕೆಗಳ ವಿಪರ್ಯಾಸ ಸರಣಿಗೆ ಮತ್ತೊಂದು ಸೇರ್ಪಡೆ. ಅಂದರೆ; ಸಿಎಎ ವಿಷಯದಲ್ಲಿ ಸರ್ಕಾರ ಪಾರದರ್ಶಕವಾಗಿಲ್ಲ. ಅದು ಏಕ ಕಾಲಕ್ಕೆ ತನ್ನ ಪ್ರಜೆಗಳನ್ನೂ ಮತ್ತು ಅಂತಾರಾಷ್ಟ್ರೀಯ ಸಮುದಾಯವನ್ನೂ ವಂಚಿಸುತ್ತಿದೆ. ವಾಸ್ತವಾಂಶಗಳನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದೆ ಅಥವಾ ಬಹಿರಂಗಪಡಿಸಲಾಗದಂತಹ ಗುಪ್ತ ಕಾರ್ಯಸೂಚಿ ಆ ಕಾಯ್ದೆಯ ಹಿಂದಿದೆ ಎಂಬುದಕ್ಕೆ ಸರ್ಕಾರದ ಈ ಎಡಬಿಡಂಗಿ ನಡವಳಿಕೆಯೇ ನಿದರ್ಶನ.
ಒಂದು ಕಡೆ ಸಿಎಎ ವಿರೋಧಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟುವ, ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿಗೆ ಕುಮ್ಮಕ್ಕು ನೀಡುವ, ಕಾಯ್ದೆ ವಿರೋಧಿಸಿದ ಕಾರಣಕ್ಕೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಂಡುಕೇಳರಿಯದ ಪ್ರಮಾಣದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಸರ್ಕಾರ, ಮತ್ತೊಂದು ಕಡೆ ಅಧಿಕೃತವಾಗಿ ಕಾನೂನು ರೀತ್ಯಾ ಮಾಹಿತಿ ಕೇಳುವ ಮಾಧ್ಯಮಗಳನ್ನೂ ದಾರಿತಪ್ಪಿಸುತ್ತಿದೆ!