ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆಯ ಸಂಭ್ರಮ ಎಲ್ಲೆಡೆ ಜೋರಾಗಿದೆ. ಮಹಿಳೆಯನ್ನು ತಮ್ಮ ಸರಕು ಮಾರಾಟಕ್ಕೆ ಪ್ರಚೋದನೆಯ ವಸ್ತುವಾಗಿ ಬಳಸುವ ಬಹುರಾಷ್ಟ್ರೀಯ ಕಂಪನಿಗಳಿಂದ ಹಿಡಿದು, ಆಕೆಯ ಅರೆಬೆತ್ತಲೆ ಚಿತ್ರಗಳಿಂದಲೇ ತಮ್ಮ ಟಿಆರ್ಪಿ ಮತ್ತು ಪ್ರಸರಣ ವೃದ್ಧಿಸಿಕೊಳ್ಳುವ ಚಿಲ್ಲರೆತನದ ಮಾಧ್ಯಮಗಳವರೆಗೆ ಎಲ್ಲರೂ ಇಂದು ಮಹಿಳೆಯನ್ನು ಹಾಡಿಹೊಗಳಿದ್ದಾರೆ. ಬಹುತೇಕ ಮಹಿಳೆಯರು ಕೂಡ ತಮ್ಮ ಪಾಲಿನ ಈ ವಿಷವರ್ತುಲ ಸೃಷ್ಟಿಸಿದ ಲೋಲುಪತೆಯ ಬಿಂಬವನ್ನೇ ಮೆಚ್ಚಿಕೊಂಡು, ಸ್ತ್ರೀತನದ ಪರಮ ಮಾದರಿ ಎಂಬಂತೆ ಸಂಭ್ರಮಿಸಿದ್ದಾರೆ.
ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿವೆ. ಸ್ವತಃ ಸರ್ಕಾರಗಳೇ ಅತ್ಯಾಚಾರಿಗಳಿಗೆ ರಕ್ಷಣೆಗೆ ನಿಂತ ಉದಾಹರಣೆಗಳಿವೆ. ಅತ್ಯಾಚಾರಿ ಸಂಸದರು, ಶಾಸಕರುಗಳು ಸಂಸತ್- ವಿಧಾನಸಭೆಗಳಲ್ಲಿ ಠಳಾಯಿಸುತ್ತಿರುವಾಗ, ಅಂತಹ ಹೀನಾಯ ಕೃತ್ಯಗಳನ್ನು ಎಸಗಿದವರಿಗೆ ಶಿಕ್ಷೆಯಾಗುತ್ತದೆ ಎಂದು ನಿರೀಕ್ಷಿಸುವುದು ಹೇಗೆ? ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳು ಪ್ರಭಾವಿ ಶಾಸಕನ ವಿರುದ್ಧ ದೂರು ದಾಖಲಿಸಿದ್ದಕ್ಕೆ ಆಕೆಯ ಮೇಲೆ ದಾಳಿ ನಡೆಸಿದ್ದು, ಸಂತ್ರಸ್ಥೆಯ ತಂದೆಯನ್ನೇ ಕೊಂದು ಹಾಕಿದ್ದು, ಬೆದರಿಸಿದ್ದು, .. ಅಷ್ಟೆಲ್ಲಾ ಆಗಿಯೂ ಪೊಲೀಸರು ಸಂತ್ರಸ್ಥೆಯ ಮೇಲೆಯೇ ದಬ್ಬಾಳಿಕೆ ನಡೆಸಿದ್ದನ್ನು ‘ರಾಮರಾಜ್ಯ’ ಕಟ್ಟುವ ಪಣತೊಟ್ಟವರ ಆಡಳಿತದಲ್ಲೇ ಕಂಡಿದ್ದೇವೆ. ವಿಪರ್ಯಾಸವೆಂದರೆ, ಅಂತಹ ‘ರಾಮರಾಜ್ಯದ ಮಂದಿ’ಯ ಘನ ಕೃತ್ಯಗಳ ಬಗ್ಗೆ ತುಟಿಬಿಚ್ಚದ ಸಂವೇದನಾಶೀಲ ಲೇಖಕಿಯರು, ಕಲಾವಿದೆಯರು, ಜನನಾಯಕಿಯರು ಕೂಡ ಮಾರ್ಚ್ 8ರ ಇಂದು ಬಹಳ ಸಂಭ್ರಮದಿಂದಲೇ ಮಹಿಳಾ ದಿನದ ಶುಭಾಶಯ ಕೋರಿದ್ದಾರೆ!
ಸೋಗಲಾಡಿತನವೇ ಬದುಕಿನ ದೊಡ್ಡ ಮೌಲ್ಯವಾಗಿರುವ ಹೊತ್ತಲ್ಲಿ ಬಹುಶಃ ಇಂತಹದ್ದೆಲ್ಲ ಅನಿರೀಕ್ಷಿತವೇನಲ್ಲ. ಮಹಿಳಾ ಸಬಲೀಕರಣ, ಸಶಕ್ತೀಕರಣ, ಹೆಣ್ಣು ಮಗುವಿನ ಪೋಷಣೆ ಮುಂತಾದ ಮಹಿಳಾ ಸಂಕುಲದ ಕಲ್ಯಾಣ ಉದ್ದೇಶದ ಸರ್ಕಾರಿ ಯೋಜನೆ ಮತ್ತು ನೀತಿಗಳು ಕೂಡ ಇಂತಹ ವಿಪರ್ಯಾಸಗಳಿಗೆ ಹೊರತಲ್ಲ. ಅದರಲ್ಲೂ ಮುಖ್ಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದೆಂದು ಬಿಂಬಿಸಲಾಗಿರುವ ಮತ್ತು ಅದೇ ಕಾರಣಕ್ಕೆ ನೈಜ ಮಹಿಳಾಪರ ಹೋರಾಟಗಾರರು ಮತ್ತು ಕಾಳಜಿಯ ಜನರ ವ್ಯಂಗ್ಯ ಮತ್ತು ವಿಡಂಬನೆಗೆ ಗುರಿಯಾಗಿರುವ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯಂತೂ ಮಹಿಳೆಯರ ವಿಷಯದಲ್ಲಿ ಬಾಯುಪಚಾರದ ವರಸೆ ಹೇಗೆ ಸರ್ಕಾರಿ ವ್ಯವಸ್ಥೆಯಲ್ಲೂ ಅಧಿಕೃತವಾಗಿ ಮುಂದುವರಿದಿದೆ ಮತ್ತು ಸ್ವತಃ ಒಂದು ಯೋಜನೆಯ ಹೆಸರಲ್ಲಿ ಮಹಿಳಾ ಸಮುದಾಯವನ್ನೇ ವಂಚಿಸುತ್ತಿದೆ ಎಂಬುದಕ್ಕೆ ನಿದರ್ಶನ.
ದೇಶದ ಹೆಣ್ಣು ಮತ್ತು ಗಂಡಿನ ಲಿಂಗಾನುಪಾತ ವ್ಯತ್ಯಾಸ ಕಡಿಮೆ ಮಾಡುವ, ಹೆಣ್ಣು ಮಕ್ಕಳ ರಕ್ಷಣೆ, ಪೋಷಣೆ, ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಹೆಣ್ಣು ಭ್ರೂಣ ಹತ್ಯೆ, ಶಿಶು ಹತ್ಯೆಯಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಮಹತ್ತರ ಉದ್ದೇಶದಿಂದ 2015ರಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ ಯೋಜನೆ ಇದು. ಈವರೆಗೆ ಐದು ವರ್ಷದಲ್ಲಿ ಯೋಜನೆಯ ಸಾಧನೆ ಏನು ಎಂಬುದನ್ನು ಮಹಿಳಾದಿನ ಹಿನ್ನೆಲೆಯಲ್ಲಿ ನೋಡಿದರೆ, ಖಂಡಿತ ಈ ‘ಟೋಕನಿಸಂ’ ಎಂಬುದು ಎಷ್ಟರಮಟ್ಟಿಗೆ ಇವತ್ತಿನ ಆಡಳಿತದ ಹೆಗ್ಗುರುತಾಗಿದೆ ಎಂಬುದು ಮನವರಿಕೆಯಾಗದೇ ಇರದು.
ಆರಂಭದ ವರ್ಷದಿಂದ ಈವರೆಗೆ ಕೇಂದ್ರ ಸರ್ಕಾರ ಈ ಯೋಜನೆಗೆ ನೀಡಿರುವ ಅನುದಾನದಲ್ಲಿ ಅದರ ಉದ್ದೇಶಿತ ಚಟುವಟಿಕೆಗಳಿಗೆ; ಅಂದರೆ ಹೆಣ್ಣು ಮಗುವಿನ ರಕ್ಷಣೆ, ಪೋಷಣೆ ಮತ್ತು ಶಿಕ್ಷಣಕ್ಕೆ; ಹಂಚಿಕೆಯಾಗುವ ಬದಲು, ಕೇವಲ ಯೋಜನೆಯ ಕುರಿತ ಜಾಹೀರಾತು(ಹೆಣ್ಣುಮಕ್ಕಳ ಕುರಿತ ಜನಜಾಗೃತಿ ಉದ್ದೇಶಕ್ಕೂ ಅಲ್ಲ! ಪ್ರಚಾರಕ್ಕೆ ಶೇ.90ರಷ್ಟು ಹಣ ಬಳಸಲಾಗಿದೆ! ಅದರಲ್ಲೂ ಪ್ರಧಾನಿಯವರ ಭಾವಚಿತ್ರ ಹೊತ್ತ ಭಿತ್ತಿಫಲಕಗಳು ಮತ್ತು ಅವರ ವೀಡಿಯೋ ಹೇಳಿಕೆಗಳನ್ನು ಹೊತ್ತ ಜಾಹೀರಾತುಗಳಿಗೇ ಈ ಹಣ ಹರಿದುಹೋಗಿದೆ!
ಸ್ವತಃ ಮೋದಿಯವರ ಸರ್ಕಾರವೇ ಈ ಸಂಗತಿಯನ್ನು ರಾಜ್ಯಸಭೆಯಲ್ಲಿ ಬಹಿರಂಗಪಡಿಸಿದ್ದು, ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ಎತ್ತಿದ ಪ್ರಶ್ನೆಗೆ ಉತ್ತರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರು ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆಯಡಿ ವಾರ್ಷಿಕ ಘೋಷಣೆಯಾದ ಅನುದಾನ, ಆ ಪೈಕಿ ಬಿಡುಗಡೆಯಾದ ಮೊತ್ತ ಮತ್ತು ಅದರಲ್ಲಿ ಯಾವುದಕ್ಕೆ ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎಂಬ ವಿವರಗಳನ್ನು ನೀಡಿದ್ದಾರೆ. ಹಾಗಾಗಿ, ಇದು ಸರ್ಕಾರವೇ ಅಧಿಕೃತವಾಗಿ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದು ಪ್ರಧಾನಮಂತ್ರಿಗಳು ಮತ್ತು ಅವರ ಸರ್ಕಾರದ ಪ್ರಚಾರದ ವಸ್ತುವೇ ವಿನಃ ಯೋಜನೆಯಲ್ಲಿ ಹೇಳಿದಂತೆ ಹೆಣ್ಣುಮಕ್ಕಳ ಏಳಿಗೆಯ ಪ್ರಯತ್ನವೇನೂ ಅಲ್ಲ ಎಂದು ಹೇಳಿದಂತಾಗಿದೆ!
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, 2016-17ನೇ ಸಾಲಿನಲ್ಲಿ ಯೋಜನೆಗೆ ಒಟ್ಟು 43 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಆ ಪೈಕಿ ವಾಸ್ತವವಾಗಿ ಬಿಡುಗಡೆಯಾಗಿದ್ದು ಕೇವಲ 32.7 ಕೋಟಿ ಮಾತ್ರ. ಹಾಗೆ ಬಿಡುಗಡೆಯಾದ ಮೊತ್ತದಲ್ಲಿ ಬರೋಬ್ಬರಿ 29.79 ಕೋಟಿ ರೂ. ಜಾಹೀರಾತುಗಳಿಗೆ ವೆಚ್ಚವಾಗಿದೆ. ಬಿಡುಗಡೆಯಾದ ಹಣದಲ್ಲಿ ಶೇ.91.10ರಷ್ಟು ಮೊತ್ತ ಪ್ರಚಾರಕ್ಕೆ ವೆಚ್ಚವಾಗಿದೆ! ಅದೇ ರೀತಿ, 2017-18ರಲ್ಲಿ ಕೂಡ ಘೋಷಣೆಯಾಗಿದ್ದು 200 ಕೋಟಿ ರೂ.. ಆದರೆ, ಬಿಡುಗಡೆಯಾಗಿದ್ದು ಕೇವಲ 169.1 ಕೋಟಿ ಮಾತ್ರ. ಬಿಡುಗಡೆಯಾದ ಆ ಮೊತ್ತದಲ್ಲೂ 135.7 ಕೋಟಿ ಪ್ರಚಾರ ಜಾಹೀರಾತಿಗೆ ವೆಚ್ಚವಾಗಿದೆ. ಅಂದರೆ, ಶೇ.80.25ರಷ್ಟು ಅನುದಾನ ಪ್ರಚಾರಕ್ಕೆ ಹೋಗಿದೆ! 2019-20ರ ಚಿತ್ರಣ ಕೂಡ ಭಿನ್ನವಾಗೇನೂ ಇಲ್ಲ. ಆ ಸಾಲಿನಲ್ಲಿ ಬರೋಬ್ಬರಿ 280 ಕೋಟಿ ರೂ. ಘೋಷಣೆ ಮಾಡಿದ್ದರೂ, ಬಿಡುಗಡೆಯಾಗಿದ್ದು 244.92 ಕೋಟಿ ಮಾತ್ರ. ಆ ಪೈಕಿ 160.13 ಕೋಟಿ ರೂ. ಜಾಹೀರಾತಿಗೆ ವೆಚ್ಚವಾಗಿದೆ. ಅಂದರೆ ಬಿಡುಗಡೆಯಾದ ಒಟ್ಟು ಮೊತ್ತದಲ್ಲಿ ಶೇ.65.38ರಷ್ಟು ಹಣ ಪ್ರಚಾರಕ್ಕೆ ಹೋಗಿದೆ!
ಇದು ಅನುದಾನದ ಅದ್ವಾನದ ಕಥೆಯಾದರೆ; ಯೋಜನೆಯ ಚಟುವಟಿಕೆಗೆ ಉಳಿದ ಚಿಲ್ಲರೆ ಕಾಸಿನ ಸದ್ಬಳಕೆಯ ವಿಷಯದಲ್ಲಿಯೂ ಸರ್ಕಾರಗಳು ಗಂಭೀರವಾಗಿಲ್ಲ ಎಂಬುದನ್ನು 2017ರಲ್ಲೇ ಮಹಾ ಲೆಕ್ಕಪಾಲರ ವರದಿ(ಸಿಎಜಿ) ಖಚಿತಪಡಿಸಿತ್ತು ಮತ್ತು ಅಧಿಕಾರಶಾಹಿಯ ಅಸಡ್ಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಒಂದು ಕಡೆ ಪ್ರಧಾನಮಂತ್ರಿಗಳ ವೆಬ್ ತಾಣದಲ್ಲಿ ತಮ್ಮ ಮಹತ್ವಾಕಾಂಕ್ಷಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಲ್ಲಿ ಇಡೀ ದೇಶದಲ್ಲಿಯೇ ಪಂಜಾಬ್ ಮತ್ತು ಹರ್ಯಾಣ ಅದ್ಭುತ ಸಾಧನೆ ಮಾಡಿವೆ ಎಂದು ಕೊಂಡಾಡುವ ಮಾತುಗಳೊಂದಿಗೆ ಅಲ್ಲಿನ ಕೆಲವು ಯಶೋಗಾಥೆಗಳ ಚಿತ್ರಣ ನೀಡಲಾಗಿತ್ತು. ಆದರೆ, ಅದೇ ರಾಜ್ಯಗಳಲ್ಲಿ ಯೋಜನೆಯ ವೈಫಲ್ಯ ಮತ್ತು ಅಧಿಕಾರಶಾಹಿಯ ನಿರ್ಲಕ್ಷ್ಯದ ಬಗ್ಗೆ ಸಿಎಜಿ ವರದಿಯಲ್ಲಿ ಎಚ್ಚರಿಕೆಯ ಮಾತುಗಳನ್ನು ಆಡಲಾಗಿತ್ತು. ಅಷ್ಟರಮಟ್ಟಿಗೆ ಈ ಯೋಜನೆಯ ‘ಟೋಕನಿಸಂ’ ಸ್ವತಃ ಸರ್ಕಾರದ ವೇದಿಕೆಗಳಲ್ಲೇ ಜಗಜ್ಜಾಹೀರಾಗಿತ್ತು!
ಹೆಣ್ಣು ಮತ್ತು ಗಂಡಿನ ಲಿಂಗಾನುಪಾತ ವ್ಯತ್ಯಾಸ ಕಡಿಮೆಗೊಳಿಸುವ ಆದ್ಯತೆ ಹೊಂದಿದ್ದ ಯೋಜನೆ ಜಾರಿಯ ಬಳಿಕ ಆ ಎರಡೂ ರಾಜ್ಯಗಳಲ್ಲಿ ವ್ಯತ್ಯಾಸ ಕಡಿಮೆಯಾಗುವ ಬದಲು, ಇನ್ನಷ್ಟು ಹೆಚ್ಚಿದ ಆಘಾತಕಾರಿ ಅಂಶವನ್ನು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಯೋಜನೆ ಜಾರಿಗೆ ಮುನ್ನ ಹರ್ಯಾಣದಲ್ಲಿ ಹೆಣ್ಣು ಶಿಶು ಅನುಪಾತ 902/ 892ರಷ್ಟಿದ್ದದ್ದು, ಯೋಜನೆ ಜಾರಿಯ ಬಳಿಕ 902/881ಕ್ಕೆ ಕುಸಿತವಾಗಿದೆ ಎಂದು ಸಿಎಜಿ ವರದಿ ಹೇಳಿತ್ತು! ಪಂಜಾಬಿನಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಹೇಳಿದ್ದ ವರದಿ, ಬಿಡುಗಡೆಯಾದ ಹಣದಲ್ಲಿ ಸಿಂಹಪಾಲು ಜಾಹೀರಾತುಗಳಿಗೆ ವ್ಯಯವಾಗಿದ್ದರೆ, ಅಳಿದುಳಿದ ಬಿಡುಗಾಸಿನ ಮೊತ್ತವನ್ನು ಕೂಡ ಯೋಜನೆಯ ಉದ್ದೇಶಿತ ಚಟುವಟಿಕೆಗಳಿಗೆ ಬಳಸದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಇತರೆ ಯೋಜನೆ- ಕಾರ್ಯಕ್ರಮಗಳಿಗೆ ಪರಿವರ್ತಿಸಿರುವುದನ್ನು ಕೂಡ ಸಿಎಜಿ ಪತ್ತೆ ಮಾಡಿತ್ತು.
ಕೇವಲ ಸಿಎಜಿ ಮಾತ್ರವಲ್ಲದೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಕೂಡ 2016-17ರ ತನ್ನ ವರದಿಯಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಮೊದಲ ವರ್ಷದ ಒಟ್ಟು ಅನುದಾನ 43 ಕೋಟಿಯ ಪೈಕಿ ಯೋಜನೆಯ ಸದುದ್ದೇಶಕ್ಕೆ ಬಳಕೆಯಾಗಿರುವುದು ಕೇವಲ 5 ಕೋಟಿ ರೂ. ಮಾತ್ರ ಎಂದು ಸಮಿತಿ ತನ್ನ ವರದಿಯಲ್ಲಿ ಅಧಿಕೃತವಾಗಿ ಉಲ್ಲೇಖಿಸಿತ್ತು!
ಇಂತಹ ವಿಪರೀತದ ವಿಪರ್ಯಾಸಗಳ ನಡುವೆಯೂ ಬಹುತೇಕ ಮಹಿಳೆಯರು ಸರ್ಕಾರದ, ಆಳುವ ಪಕ್ಷ ಮತ್ತು ಮಂದಿಯ ಬಾಯುಪಚಾರದ ಬಡಿವಾರಗಳನ್ನೇ ಸಂಭ್ರಮಿಸುವ ಬೌದ್ಧಿಕ ಅಧೋಗತಿಗಿಳಿದಿದ್ದಾರೆ. ಸ್ವತಃ ಮಹಿಳಾ ಜನಪ್ರತಿನಿಧಿಗಳು ಕೂಡ ಇಂತಹ ನಾಚಿಕೆಗೇಡಿನ ನಡೆಗಳನ್ನು ಪ್ರಶ್ನಿಸುವ ಕನಿಷ್ಠ ಛಾತಿಯನ್ನೂ ತೋರುತ್ತಿಲ್ಲ ಎಂದಾದರೆ, ಇನ್ನೂ ಶತಮಾನಗಳ ಕಾಲ ಹೀಗೆ ಮಹಿಳಾ ದಿನಾಚರಣೆಯನ್ನು ಕೇವಲ ಶುಭಾಶಯ ವಿನಿಮಯದ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿಟ್ಟುಕೊಳ್ಳುವುದು ತಪ್ಪದು!