ಮಧ್ಯಪ್ರದೇಶದ ಕಾಂಗ್ರೆಸ್ ವರ್ಚಸ್ವಿ ನಾಯಕ ಹಾಗೂ ರಾಹುಲ್ ಗಾಂಧಿ ಆಪ್ತ ವಲಯದ ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷ ತೊರೆಯುವುದರ ಜೊತೆಗೆ, ಅವರ ಬೆಂಬಲಿಗರಾದ 20ಕ್ಕೂ ಹೆಚ್ಚು ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ಸಿನ ಹಳೆಯ ತಲೆ ವರ್ಸಸ್ ಹೊಸರಕ್ತದ ಸಂಘರ್ಷಕ್ಕೆ ರಾಷ್ಟ್ರೀಯಮಟ್ಟದಲ್ಲಿ ಗಮನ ಸೆಳೆಯುವಂತಹ ಮೊದಲ ಬಲಿ ಬಿದ್ದಿದೆ. ಈ ಸಂಘರ್ಷದ ತತಕ್ಷಣದ ಅಡ್ಡಪರಿಣಾಮವಾಗಿ ಕರ್ನಾಟಕದ ಬಳಿಕದ ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗಿದೆ.
ಹಾಗೆ ನೋಡಿದರೆ, ಹೊರ ನೋಟಕ್ಕೆ ಕ್ಷಿಪ್ರ ರಾಜಕೀಯ ಬೆಳವಣಿಗೆಯಂತೆ ಕಂಡರೂ, ಕಾಂಗ್ರೆಸ್ಸಿನ ಅಂತರಂಗ ಬಲ್ಲವರಿಗೆ ಇದೇನು ಆಘಾತಕಾರಿ ಬೆಳವಣಿಗೆಯಲ್ಲ. ಏಕೆಂದರೆ, ಕಳೆದ ಎರಡು ವರ್ಷಗಳಿಂದಲೂ ನಿರ್ದಿಷ್ಟವಾಗಿ ಮಧ್ಯಪ್ರದೇಶದಲ್ಲಿ ಮತ್ತು ಒಟ್ಟಾರೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ಸಿನ ಎರಡನೇ ತಲೆಮಾರಿನ ನಾಯಕರು ಮತ್ತು ಹಳೆಯ ಹುಲಿಗಳ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಅದರಲ್ಲೂ ರಾಹುಲ್ ಮತ್ತು ಅವರೊಂದಿಗೆ ಆರಂಭದಲ್ಲಿ ಗುರುತಿಸಿಕೊಂಡಿದ್ದ ಆಪ್ತ ಬಳಗದ ಯುವ ನಾಯಕರ ನಡುವೆ ಹಿರಿಯ ತಲೆಗಳು ಮೂಗು ತೂರಿಸಲು ಆರಂಭಿಸಿದ ಬಳಿಕವಂತೂ ಪರಿಸ್ಥಿತಿ ಹದಗೆಡತೊಡಗಿತ್ತು. ಸಚಿನ್ ಪೈಲಟ್, ಮಿಲಿಂದ್ ದಿಯೋರಾ, ಶರ್ಮಿಷ್ಟಾ ಮುಖರ್ಜಿ, ಸಿಂಧಿಯಾ, ಕರ್ನಾಟಕದ ಕೃಷ್ಣೇ ಭೈರೇಗೌಡರಂಥಹ ಭರವಸೆಯ ಯುವ ನಾಯಕರು ಮತ್ತು ರಾಹುಲ್ ನಡುವೆ ನಿಧಾನಕ್ಕೆ ಒಂದು ಅಂತರ ಸೃಷ್ಟಿಯಾಗತೊಡಗಿತ್ತು. ಇದೀಗ ಮಧ್ಯಪ್ರದೇಶದಲ್ಲಿ ಬಿಚ್ಚಿಕೊಂಡಿರುವುದು ತೆರೆಮರೆಯ ಆ ಬೆಳವಣಿಗೆಯ ಮೊದಲ ಬಹಿರಂಗ ನೋಟ.
ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯ ಬಳಿಕವಂತೂ ರಾಹುಲ್ ಪಕ್ಷದ ಸಾರಥ್ಯ ತೊರೆದು ಭಾಗಶಃ ರಾಜಕೀಯ ವೈರಾಗ್ಯ ತಳೆದವರಂತೆ ಬದಿಗೆ ಸರಿದ ಬಳಿಕವಂತೂ ಸೋನಿಯಾ ಗಾಂಧಿಯವರ ಹಳೆಯ ಹುಲಿಗಳು ಮತ್ತೆ ಕೂದಲಿಗೆ ಬಣ್ಣ ಹಚ್ಚಿ ನಂ.10, ಜನಪಥ್ನಲ್ಲಿ ವಿಜೃಂಭಿಸತೊಡಗಿದಂತೆ ಹೊಸ ತಲೆಮಾರಿನ ನಾಯಕರ ಕನಸುಗಳು ಕರಗತೊಡಗಿದವು. ಪಕ್ಷದ ಸಾರಥ್ಯ ಬದಲಾದಾಗ ಸಹಜವಾಗೇ ಅಹ್ಮದ್ ಪಟೇಲ್, ಆಸ್ಕರ್ ಫರ್ನಾಂಡೀಸ್, ದಿಗ್ವಿಜಯ ಸಿಂಗ್ ಮತ್ತಿತರ ನಾಯಕರು ಹೈಕಮಾಂಡ್ ಸುತ್ತ ನೆರೆದು ಪಕ್ಷದ ಭವಿಷ್ಯದ ಸವಾಲುಗಳನ್ನು, ಸದ್ಯದ ನಿಷ್ಕ್ರಿಯತೆಯನ್ನು ನೀಗುವ ದಾರಿಗಳನ್ನು ಕಂಡುಕೊಳ್ಳುತ್ತಾರೆ ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿತ್ತು. ಆದರೆ, ಆದದ್ದು ಬೇರೆಯೇ ಎಂಬುದಕ್ಕೆ ಸದ್ಯಕ್ಕೆ ಮಧ್ಯಪ್ರದೇಶದ ಬೆಳವಣಿಗೆ ಕಣ್ಣು ಮುಂದಿದೆ.
ಹಾಗೆ ನೋಡಿದರೆ, ಜ್ಯೋತಿರಾಧಿತ್ಯ ಸಿಂಧಿಯಾ ಕಳೆದ ಒಂದೂ ಮುಕ್ಕಾಲು ವರ್ಷಗಳಿಂದ ಸಾಕಷ್ಟು ಸಂಯಮದಿಂದಲೇ ಎಲ್ಲವನ್ನೂ ಸಹಿಸಿಕೊಂಡಿದ್ದರು. ಈಗ ಅವರು ಬಿಜೆಪಿಯ ಕದ ತಟ್ಟಿದ್ದಾರೆ ಎಂದಾಕ್ಷಣ ಅವರ ವಿರುದ್ಧ ಆಪರೇಷನ್ ಕಮಲಕ್ಕೆ ಬಲಿಯಾದ ನಾಯಕ, ರಾಹುಲ್ ಆಪ್ತವಲಯದಲ್ಲಿದ್ದು ಪಕ್ಷದಿಂದ ಹೆಸರು- ಅನುಕೂಲ ಪಡೆದು ಇದೀಗ ಕೇಂದ್ರದ ಸಚಿವ ಸ್ಥಾನದ ಆಮಿಷಕ್ಕೆ ಬಲಿಯಾದರು ಎಂದು ಟೀಕಿಸುವುದು ಸುಲಭ. ಆದರೆ, ಕಳೆದ ಒಂದೂವರೆ- ಎರಡು ವರ್ಷದಲ್ಲಿ ಮಧ್ಯಪ್ರದೇಶದ ರಾಜಕಾರಣ ಮತ್ತು ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳನ್ನು ಬಲ್ಲವರು ಅಂತಹ ಸರಳ ತೀರ್ಮಾನಕ್ಕೆ ಬರಲಾರರು.
ಒಂದೂ ಮುಕ್ಕಾಲು ವರ್ಷದ ಹಿಂದೆ ವಿಧಾನಸಭಾ ಚುನಾವಣೆಗೆ ಮುನ್ನವೇ ಜ್ಯೋತಿರಾಧಿತ್ಯ ಅವರಿಗೆ ಸ್ವತಃ ರಾಹುಲ್ ಗಾಂಧಿಯವರೇ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದ ಸಾರಥ್ಯ ನಿಮ್ಮದೇ ಎಂದಿದ್ದರು. ಆದರೆ, ಬಹುಮತ ಬರುತ್ತಲೇ ಪಕ್ಷದ ಹಿರಿಯ ನಾಯಕ ಕಮಲ್ ಪಂಥ್ ಸಿಎಂ ಕುರ್ಚಿಯ ಮೇಲೆ ಟವೆಲ್ ಹಾಸಿದರು. ಹಲವು ಬಾರಿ ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿರುವ ಅವರು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿಜವಾಗಿಯೂ ಶ್ರಮಿಸಿದ ಸಿಂಧಿಯಾ ಅವರಿಗೆ ಅಧಿಕಾರ ನೀಡುವ ಕನಿಷ್ಠ ಔದಾರ್ಯ ತೋರಲಿಲ್ಲ. ಆ ಕ್ಷಣದಿಂದಲೇ ಇಬ್ಬರು ನಾಯಕರ ನಡುವೆ ಹಗ್ಗಜಗ್ಗಾಟ ಆರಂಭವಾಗಿತ್ತು. ಬಳಿಕ ಕನಿಷ್ಠ ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಸಾರಥ್ಯವಾದರೂ ಸಿಂಧಿಯಾಗೆ ಸಿಗಬಹುದು ಎಂಬ ನಿರೀಕ್ಷೆ ಅವರ ಬೆಂಬಲಿಗರದ್ದಾಗಿತ್ತು. ಆದರೆ, ಅಷ್ಟರಲ್ಲಿ ಆ ಭರವಸೆಯನ್ನೂ ನೀಡಿದ್ದ ರಾಹುಲ್ ಅವರೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬದಿಗೆ ಸರಿದರು. ಹಾಗಾಗಿ ಆ ನಿರೀಕ್ಷೆ ಕೂಡ ಈಡೇರಲಿಲ್ಲ. ಕೊನೆಗೆ ಕನಿಷ್ಠ ರಾಜ್ಯಸಭೆಯ ಚುನಾವಣೆಯಲ್ಲಾದರೂ ತಮಗೆ ಟಿಕೆಟ್ ಕೊಡಬಹುದು ಪಕ್ಷ ಎಂದೂ ನಿರೀಕ್ಷಿಸಿದರು. ಅದೂ ನನಸಾಗದು ಎನಿಸಿದಾಗ, ಇದೀಗ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎಂಬುದು ಅವರ ಆಪ್ತರ ವಿವರಣೆ.
ಮತ್ತೊಂದು ಮೂಲದ ಪ್ರಕಾರ, ಪ್ರಮುಖವಾಗಿ ಸಿಂಧಿಯಾ ಮತ್ತು ಹೈಕಮಾಂಡ್ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದ್ದೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್. ರಾಹುಲ್ ಎಐಸಿಸಿ ಅಧ್ಯಕ್ಷರಾಗಿದ್ದಾಗ ಪ್ರದೇಶ ಕಾಂಗ್ರೆಸ್ ಹೊಣೆಗಾರಿಕೆಯನ್ನು ಸಿಂಧಿಯಾಗೆ ವಹಿಸಲು ಆಸಕ್ತಿ ವಹಿಸಿದ್ದರೂ, ಅವರ ದಾರಿತಪ್ಪಿಸಿದ್ದು ಇದೇ ‘ದಿಗ್ಗಿ’ಯೇ. ಬಳಿಕ ಇದೀಗ ಸೋನಿಯಾ ಅವಧಿಯಲ್ಲಂತೂ ಸ್ವತಃ ದಿಗ್ಗಿಯೇ ಹೈಕಮಾಂಡ್ ರೀತಿಯಲ್ಲಿ ಮಧ್ಯಪ್ರದೇಶದ ವಿಷಯದಲ್ಲಿ ವರ್ತಿಸತೊಡಗಿದ್ದರು. ಕಮಲ್ ನಾಥ್ ಮತ್ತು ಸಿಂಧಿಯಾ ನಡುವಿನ ವೈಮಸ್ಯ ಶಮನ ಪ್ರಯತ್ನದ ಬದಲು ಇಬ್ಬರ ನಡುವೆ ಇನ್ನಷ್ಟು ಸಂಘರ್ಷ ಹುಟ್ಟುಹಾಕುವಂತಹ ನಡೆಯನ್ನೇ ಕಳೆದ ಒಂದೂಮುಕ್ಕಾಲು ವರ್ಷದಿಂದ ಅನುಸರಿಸಲಾಯಿತು. ರಾಜ್ಯಸಭೆ ಆಯ್ಕೆಯ ವಿಷಯದಲ್ಲಿಯೂ ದಿಗ್ಗಿಯೇ ಅಡ್ಡಗಾಲು ಹಾಕಿದರು. ಈ ವಿಷಯ ಗೊತ್ತಾದ ಬಳಿಕವೇ ಸಿಂಧಿಯಾ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಅವರು ಪಕ್ಷ ತೊರೆಯುವ ಸೂಚನೆ ಸಿಕ್ಕ ಮೇಲೆ ಕಾಂಗ್ರೆಸ್ ಹೈಕಮಾಂಡ್ ಅವರ ಮುಂದೆ ಈ ಮೊದಲು ಅವರಿಗೆ ತಪ್ಪಿಸಿದ್ದ ಸ್ಥಾನಮಾನಗಳ ಆಮಿಷ ಒಡ್ಡತೊಡಗಿತ್ತು. ಆದರೆ, ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು!
ಹಾಗೆ ನೋಡಿದರೆ ಕಾಂಗ್ರೆಸ್ ಹೈಕಮಾಂಡಿನ ಇಂತಹ ಆಮೆಗತಿಯ ಧೋರಣೆ ಮತ್ತು ರಾಜಕೀಯ ನಿರ್ಲಿಪ್ತತೆಗೆ ನಿದರ್ಶನ ಮಧ್ಯಪ್ರದೇಶದ ಈ ಬೆಳವಣಿಗೆಯೊಂದೇ ಅಲ್ಲ. ಕರ್ನಾಟಕದ ವಿಷಯದಲ್ಲಿಯೂ ಹೈಕಮಾಂಡ್ ವರಸೆ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಅಜೆಂಡಾದೊಂದಿಗೆ, ಜೆಡಿಎಸ್ ನೊಂದಿಗೆ ದಿಢೀರ್ ಮೈತ್ರಿಗೆ ಮುಂದಾದ ಹೈಕಮಾಂಡ್, ಸರ್ಕಾರ ರಚನೆಗೆ ತೋರಿದ ಆಸಕ್ತಿಯನ್ನು ಸರ್ಕಾರವನ್ನು ಉಳಿಸಿಕೊಂಡುಹೋಗುವಲ್ಲಿ ತೋರಲಿಲ್ಲ. ಸರ್ಕಾರದ ಮುಖ್ಯಸ್ಥರಾಗಿದ್ದ ಜೆಡಿಎಸ್ಸಿನ ಸಿಎಂ ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟದ ಸುಳಿವಿದ್ದರೂ ಅದನ್ನು ಶಮನ ಮಾಡುವ ಪ್ರಯತ್ನ ನಡೆಯಲಿಲ್ಲ. ಹಾಗಾಗಿ ಅಂತಿಮವಾಗಿ ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡು ಆಪರೇಷನ್ ಕಮಲ ಪ್ರಯೋಗಿಸಿ ಸರ್ಕಾರ ಉರುಳಿಸಿತು. ಮಧ್ಯಪ್ರದೇಶದಲ್ಲಿ ಕೂಡ ಇದೇ ಮಾದರಿಯೇ ಪುನರಾವರ್ತನೆಯಾಗುವುದು ಗಮನಾರ್ಹ.
ಜೊತೆಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರ ನೇಮಕದ ವಿಷಯದಲ್ಲಿ ಕೂಡ ಹೈಕಮಾಂಡ್ ಮೀನಾಮೇಷ ಎಣಿಸುತ್ತಾ ಬರೋಬ್ಬರಿ ಮೂರು ತಿಂಗಳು ಕಳೆದಿದೆ. ಆದರೂ ಈವರೆಗೆ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಸೂಕ್ತ ವ್ಯಕ್ತಿಯ ಹೆಸರನ್ನು ಅಂತಿಮಗೊಳಿಸಲಾಗದಷ್ಟು ಹೈಕಮಾಂಡ್ ಹೈರಾಣಾಗಿದೆ!
ವಾಸ್ತವವಾಗಿ ದೆಹಲಿಯ ನಂ.10 ಜನ್ಪಥ್ನಲ್ಲಿ ಸೋನಿಯಾ ಮತ್ತು ರಾಹುಲ್ ನಿಷ್ಠರ ನಡುವಿನ ಮುಸುಕಿನ ಗುದ್ದಾಟದ ಅಡ್ಡಪರಿಣಾಮಗಳೇ ಈ ಎಲ್ಲಾ ವಿಳಂಬ ಧೋರಣೆ, ನಿರ್ಲಿಪ್ತತೆ ಮತ್ತು ಸಮಸ್ಯೆ ತಾನೇ ತಾನಾಗಿ ಸರಿಹೋಗಲಿ ಎಂಬಂತಹ ಮನಸ್ಥಿತಿಗೆ ಕಾರಣ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಕರ್ನಾಟಕದಲ್ಲಿಯೂ ಸಮ್ಮಿಶ್ರ ಸರ್ಕಾರದ ಪತನದ ಹಿಂದೆ ಪಕ್ಷದ ಹಿರಿಯ ನಾಯಕರು ಮತ್ತು ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟವೂ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಮಧ್ಯಪ್ರದೇಶದಲ್ಲಿಯೂ ಅದೇ ಆಗಿದೆ. ಎರಡೂ ಕಡೆಯೂ ಸಮಸ್ಯೆಯನ್ನು ಗುರುತಿಸಿ ತತಕ್ಷಣಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಹೈಕಮಾಂಡಿನ ವೈಫಲ್ಯಕ್ಕೆ ಸರ್ಕಾರಗಳ ತಲೆದಂಡದ ಬೆಲೆ ತೆರಲಾಗಿದೆ.
ಇದೇ ವರಸೆ ಮುಂದುವರಿದಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಾಜಸ್ತಾನದಲ್ಲಿಯೂ ಇಂತಹದ್ದೇ ಬೆಲೆ ತೆರಬೇಕಾದರೂ ಅಚ್ಚರಿಯಿಲ್ಲ ಎಂಬುದು ಸ್ವತಃ ಕಾಂಗ್ರೆಸ್ ಪಡಸಾಲೆಯ ಗುಸುಗುಸು. ಅಲ್ಲಿಯೂ ಸಿಎಂ ಅಶೋಕ್ ಗೆಲ್ಹೋಟ್ ಮತ್ತು ಡಿಸಿಎಂ ಸಚಿವ್ ಪೈಲಟ್ ನಡುವೆ ಇರುವುದು ಕೂಡ ಅದೇ ಹಳೇ ಹುಲಿಗಳು ಮತ್ತು ಹೊಸರಕ್ತದ ನಡುವಿನ ಸಂಘರ್ಷವೇ. ಈಗಾಗಲೇ ಸಮರ್ಥ ನಾಯಕತ್ವ ಗೈರು ಹಾಜರಿಯಲ್ಲಿ ಬಳಲಿ ಬಸವಳಿದಿರುವ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷ ಪಟ್ಟದ ವಿಷಯದಲ್ಲಿಯೇ ಒಂದು ವರ್ಷವಾದರೂ ಇನ್ನೂ ಸೂಕ್ತ ನಿರ್ಧಾರ ಕೈಗೊಳ್ಳಲಾಗದೆ ಗೊಂದಲದಲ್ಲಿದೆ. ಇನ್ನು ರಾಜ್ಯ ಘಟಕಗಳು ಮತ್ತು ರಾಜ್ಯ ಸರ್ಕಾರಗಳ ವಿಷಯದಲ್ಲಿ ಕ್ಷಿಪ್ರ ಮತ್ತು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬಲ್ಲದೆ? ಸಾಧ್ಯವಿಲ್ಲ; ಎಂಬುದನ್ನು ಈಗಾಗಲೇ ಮಧ್ಯಪ್ರದೇಶ ಮತ್ತು ಕರ್ನಾಟಕದ ಬೆಳವಣಿಗೆಗಳು ಸಾರಿ ಹೇಳಿವೆ.
ಹಾಗಾಗಿ, ಸದ್ಯಕ್ಕೆ ತುರ್ತಾಗಿ ಆಗಬೇಕಿರುವುದು ಮಧ್ಯಪ್ರದೇಶ, ಅಥವಾ ಕರ್ನಾಟಕ ಅಥವಾ ರಾಜಸ್ತಾನದ ಪ್ರಾದೇಶಿಕ ಘಟಕಗಳ ಪುನರ್ ರಚನೆಯಲ್ಲ; ಬದಲಾಗಿ ಎಐಸಿಸಿ ಮಟ್ಟದಲ್ಲೇ ಪಕ್ಷದ ಸಂಪೂರ್ಣ ಪುನರ್ ರಚನೆಯ ಜರೂರು ಇದೆ. ಪಕ್ಷವನ್ನು ಕನಿಷ್ಟ ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಪ್ರಬಲ ಪ್ರತಿಸ್ಪರ್ಧಿ ಆಗುವಷ್ಟರಮಟ್ಟಿಗಾದರೂ ಬಲಪಡಿಸಲು ಎಐಸಿಸಿಯ ಪಟ್ಟಭದ್ರರನ್ನು ಬದಲಾಯಿಸಿ ಹೊಸ ಭರವಸೆಯ ಮುಖಗಳಿಗೆ, ಸಂಘಟನಾ ಚತುರ ಹೊಸ ಚಿಂತನೆಯ ಯುವಕರಿಗೆ ಅವಕಾಶ ನೀಡಬೇಕಿದೆ. ಅದಕ್ಕೆ ಹೈಕಮಾಂಡ್ ಹುದ್ದೆ ಗಾಂಧಿ ಕುಟುಂಬದಿಂದ ಸ್ಥಾನಪಲ್ಲಟವಾಗಬೇಕಿದೆ ಎಂಬ ಮಾತೂ ಕೇಳಿಬರತೊಡಗಿದೆ. ಅದು ಸದ್ಯದ ಸ್ಥಿತಿಯಲ್ಲಿ ಸಾಧ್ಯವೇ? ಹಾಗೊಂದು ವೇಳೆ ಅಂತಹದ್ದೊಂದು ಬದಲಾವಣೆ ಆರಂಭವಾದರೆ, ಕನಿಷ್ಠ ಪಕ್ಷ ತೊರೆದರೂ, ಅಂತಹ ಬದಲಾವಣೆಗೆ ಮುನ್ನುಡಿ ಬರೆದ ಹೆಗ್ಗಳಿಕೆ ಜೋತಿರಾಧಿತ್ಯ ಅವರದ್ದಾಗಲಿದೆ ಎಂಬುದು ವಿಪರ್ಯಾಸ!