- ವಿಶ್ವವಿದ್ಯಾಲಯಗಳಲ್ಲಿನ ಪ್ರತಿಕ್ರಿಯೆಗಳ ಬಗ್ಗೆ ಮೊದಲು ಚರ್ಚಿಸೋಣ. ನೀವು ಅನೇಕ ವಿಶ್ವವಿದ್ಯಾಲಯಗಳಲ್ಲಿ, ಅದರಲ್ಲೂ ವಿಶೇಷವಾಗಿ, ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ಕಾರ್ಯನಿರ್ವಹಿಸಿದ್ದೀರಿ. ಅಲ್ಲಿ ವಿದ್ಯಾರ್ಥಿಗಳ ಎದೆಗಾರಿಕೆಯನ್ನು ನೋಡಿದ್ದೇವೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಮೇಲಿನ ಭೀಕರ ಹಿಂಸಾಚಾರ ಮತ್ತು ಪ್ರತಿರೋಧದ ದಮನವನ್ನೂ ಕಂಡಿದ್ದೇವೆ. ಕ್ಯಾಂಪಸ್ನಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ಹೊಸದಾಗಿ ಹೇರಲಾಗುತ್ತಿರುವ ನಿಷೇಧದ ಬಗ್ಗೆ ಮತ್ತು ವಿವಿಗಳು ಹೇಗಿರಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯವೇನು?
ರೋಮಿಲಾ ಥಾಪರ್: ಈಗ ಪ್ರಭುತ್ವ ಮತ್ತು ಪ್ರಜೆಯ ನಡುವೆ ಹೊಸ ರೀತಿಯ ನಂಟಿನ ಚಿಂತನೆ ಬಂದಿದೆ. ಈ ಹೊಸ ಸಂಬಂಧದಲ್ಲಿ ಕೆಲವು ಸಂಸ್ಥೆಗಳು ಅಗತ್ಯವಾಗಿವೆ ಮತ್ತು ಅವು ಅಸ್ತಿತ್ವಕ್ಕೆ ಬರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಸಂಸ್ಥೆಗಳ ಪೈಕಿ ವಿಶ್ವವಿದ್ಯಾಲಯಗಳು ಅತ್ಯಂತ ಪ್ರಾಥಮಿಕವಾದವು. ಹಿಂದೆ ಇದ್ದ ವಿವಿಧ ಮಾದರಿಗಳ ಕಲಿಕೆಯ ಮತ್ತು ಶೈಕ್ಷಣಿಕ ಕೇಂದ್ರಗಳಿಗಿಂತ ಈ ವಿಶ್ವವಿದ್ಯಾಲಯಗಳು ತೀರಾ ಭಿನ್ನವಾಗಿವೆ ಎಂಬುದನ್ನು ನಾವು ತಿಳಿಯಬೇಕು. ಆದರೆ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಿಲ್ಲ! ಹಿಂದೆಲ್ಲಾ ಗುರುಕುಲಗಳು, ಮಠಗಳು, ಮದರಸಾಗಳು, ಇತ್ಯಾದಿಗಳಿದ್ದವು. ಅಲ್ಲಿ ಕಲಿಕೆ ಎಂದರೆ ಕೆಲವು ನಿರ್ದಿಷ್ಟ ಗ್ರಂಥಗಳನ್ನು ಪರಿಚಯಿಸುವುದು, ಅವುಗಳನ್ನು ಓದುವುದು, ಪಠಿಸುವುದು, ಅವುಗಳ ವಿಚಾರಗಳನ್ನು ತಿಳಿದುಕೊಳ್ಳುವುದೇ ಆಗಿತ್ತು. ಆ ಸಂಸ್ಥೆಗಳಲ್ಲಿ ತಾತ್ವಿಕ ಚರ್ಚೆಗಳು ನಡೆಯುತ್ತಿದ್ದುದು ತೀರಾ ಕಡಿಮೆ. ಆ ಸಂಸ್ಥೆಗಳ ಮತ್ತು ಈ ವಿವಿಗಳ ನಡುವಿನ ಮೂಲಭೂತ ವ್ಯತ್ಯಾಸವೇನೆಂದರೆ ವಿವಿ ಮಾತ್ರವೇ ಸಂಪೂರ್ಣವಾಗಿ ಮುಕ್ತ ಚಿಂತನೆಗೆ ಅವಕಾಶ ಕೊಡುವ ಸಂಸ್ಥೆಯಾಗಿದೆ. ಅಲ್ಲಿ ಮುಕ್ತ ಚಿಂತನೆ ಇರಲೇಬೇಕು. ಇಲ್ಲವಾದರೆ ಅದು ವಿವಿ ಆಗುವುದಿಲ್ಲ. ವಿವಿಯ ಕೆಲಸವಾದರೂ ಏನು? ಚಿಂತನೆ ಮಾಡುವುದನ್ನು ಕಲಿಸುವುದು ಮತ್ತು ಚಿಂತನೆಯ ಜೊತೆಗೆ ಜನರು ಪ್ರಶ್ನೆ ಮಾಡುವುದನ್ನು ಹೇಳಿಕೊಡುವುದು. ಎಲ್ಲರಿಗೂ ಗೊತ್ತಿರುವಂತೆ ಜ್ಞಾನದ ಬೆಳವಣಿಗೆಯಾಗಬೇಕಾದರೆ ಹಾಲಿ ಅಸ್ತಿತ್ವದಲ್ಲಿರುವ ಜ್ಞಾನದ ಬಗ್ಗೆ ಜನ ಪ್ರಶ್ನಿಸುವಂತಾಗಬೇಕು, ಅದಕ್ಕೆ ಸವಾಲೊಡ್ಡುವಂತಾಗಬೇಕು. ಆಗಷ್ಟೇ ಹೊಸ ಜ್ಞಾನವು ಉದಯಿಸುತ್ತದೆ.
ಪ್ರಶ್ನೆಯನ್ನೇ ಮಾಡಬೇಡಿ, ನಾವು ಬೋಧಿಸುವುದನ್ನೇ ನೀವು ಕಲಿಯಬೇಕು ಎಂದು ಹೇಳುವ ಒಂದು ವ್ಯವಸ್ಥೆ ಇದ್ದರೆ ಆಗ ಅದು ಇಡೀ ವಿಶ್ವವಿದ್ಯಾಲಯದ ವ್ಯವಸ್ಥೆಯನ್ನೇ ನಾಶಮಾಡಿದಂತೆ! ವಿವಿಯ ವ್ಯವಸ್ಥೆಯು ಜ್ಞಾನಕ್ಕೆ ಸವಾಲೆಸೆಯಬೇಕು, ಪ್ರಶ್ನೆಗಳನ್ನು ಕೇಳಬೇಕು. ಬಹಳಷ್ಟು ಸಮಾಜಗಳಲ್ಲಿ ಯುವ ಮನಸ್ಸುಗಳು ವಿಶ್ವವಿದ್ಯಾಲಯಗಳಲ್ಲಿರುವ ಅವಧಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ ಎಂಬುದು ನಿಜ. ಆನಂತರ ಅವರು ನೌಕರಿಯೋ, ಮತ್ತೊಂದೋ ಸೇರುತ್ತಾರೆ. ಆದರೆ ಕೆಲವೇ ಕೆಲವು ಮಂದಿಗೆ ಮಾತ್ರ ಪ್ರಶ್ನೆಗಳನ್ನು ಕೇಳುವ, ಕೇಳುತ್ತಲೇ ಇರುವ ಮತ್ತು ಜ್ಞಾನವನ್ನು ಬೆಳೆಸುವ ಅವಕಾಶ ಸಿಗುತ್ತದೆ. ಇದು ಕೇವಲ ಸಮಾಜದ ಒಂದು ಸಣ್ಣ ವಿಭಾಗವಾಗಿರುತ್ತದೆ. ಹೀಗಿದ್ದಾಗ್ಯೂ ಪ್ರಶ್ನೆಗಳನ್ನು ಕೇಳುವ ಅನುಭವ ಮತ್ತು ಪ್ರಶ್ನೆಗಳನ್ನು ಕೇಳಲು ಕಲಿಯುವುದು ಬಹಳ ಮುಖ್ಯವಾಗುತ್ತದೆ.
ನಾವು ಯಾವುದೋ ಹಳೆಯ ಪ್ರಶ್ನೆಯನ್ನು ಕೇಳಿದರೆ ಪ್ರಯೋಜನವಿಲ್ಲ. ಮಾಹಿತಿ, ಜ್ಞಾನ ಸಂಬಂಧಗಳ ಪುರಾವೆ, ಇತ್ಯಾದಿಗಳನ್ನು ಸೂಚ್ಯವಾಗಿ ಹೆಕ್ಕಿ ತೆಗೆಯುವಂತಹ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಯಾವುದೇ ವೃತ್ತಿಯಲ್ಲಾಗಲಿ ಪ್ರಶ್ನೆ ಕೇಳುವುದು ಬಹಳ ಮಹತ್ವಪೂರ್ಣವಾದ ವಿಷಯ. ಶಾಲಾ ಶಿಕ್ಷಕರು, ವೈದ್ಯರು, ವಕೀಲರು, ಇಂಜಿನಿಯರ್ ಅಥವಾ ಕಂಪ್ಯೂಟರ್ ತಜ್ಞರು, ಯಾರಿಗೇ ಆಗಲಿ ಪ್ರಶ್ನೆ ಕೇಳುವ ಸಾಮರ್ಥ್ಯ ಪ್ರಾಥಮಿಕವಾದುದು. ಇನ್ನು ಪ್ರಶ್ನೆ ಕೇಳುವುದು ಹೇಗೆ ಎನ್ನುವುದನ್ನು ಕಲಿಸುವುದಕ್ಕಾಗಿಯೇ ಇರುವ ಸಂಸ್ಥೆಯಲ್ಲಿ ಆ ಮೂಲಭೂತ ಅಂಶವನ್ನೇ ನಾಶಮಾಡಲು ಹೊರಟರೆ, ನಾವು ಆ ಸಂಸ್ಥೆಯನ್ನೇ ಧ್ವಂಸಮಾಡಿದಂತೆ! ಅಷ್ಟೇ ಅಲ್ಲ, ನಮ್ಮ ಮುಂದಿನ ತಲೆಮಾರಿನ ಬೌದ್ಧಿಕ ಸಾಮರ್ಥ್ಯವನ್ನೇ ನಾಶಪಡಿಸಿದಂತೆ.
- ವ್ಯಾಸಂಗ ಮಾಡುವುದು ವಿದ್ಯಾರ್ಥಿಗಳ ಕರ್ತವ್ಯ. ಅವರು ತಮ್ಮ ‘ಪಠ್ಯಪುಸ್ತಕ’ಗಳನ್ನು ಓದಬೇಕು, ಮಾಹಿತಿ ಮತ್ತು ಉತ್ತರಗಳನ್ನು ತಮ್ಮ ಬೋಧಕರಿಂದ ಪಡೆದುಕೊಳ್ಳಬೇಕು ಎಂದು ಜನ ಹೇಳುತ್ತಾರೆ. ಕ್ಯಾಂಪಸ್ ಹೊರಗಿನ ತಮ್ಮ ಸುತ್ತಲಿನ ಜಗತ್ತಿನ ಬಗೆಗಿನ ಪ್ರಶ್ನೆಗಳನ್ನು, ಅಂದರೆ ವಿಶಾಲವಾದ ರಾಜಕೀಯ ಪ್ರಶ್ನೆಗಳನ್ನು ಎತ್ತದೆ ಕ್ಯಾಂಪಸ್ ಒಳಗೇ ನೀವು ಹೇಳಿದಂತೆ ಅವರು ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲವೇ?
ರೊಮಿಲಾ ಥಾಪರ್: ಹೌದು, ವ್ಯಾಪಕವಾಗಿ ಅದನ್ನು ರಾಜಕೀಯ ಪ್ರಶ್ನೆಗಳು ಎಂದೇ ಹೇಳಬಹುದು. ಮತ್ತು ಸಾಮಾನ್ಯವಾಗಿ ಅದನ್ನು ಎಡಪಂಥೀಯ ರಾಜಕೀಯಕ್ಕೇ, ರಾಜಕೀಯ ಪಕ್ಷಗಳಿಗೇ ಇಲ್ಲಿ ಜೋಡಿಸಲಾಗುತ್ತದೆ. ರಾಜಕೀಯ ಎಂದರೆ ಅದರ ವಿಶಾಲ ಅರ್ಥದಲ್ಲಿ ನಾವು ಜೀವಿಸುತ್ತಿರುವ ಜಗತ್ತು, ಅಂದರೆ ನಮ್ಮ ಸುತ್ತಲಿನ ಜಗತ್ತಿನ ಕುರಿತ ಚಿಂತನೆಯೇ ಆಗಿರುತ್ತದೆ. ಹೌದು, ನಾವು ಬದುಕು ನಡೆಸುತ್ತಿರುವ ಜಗತ್ತಿನ ಎಲ್ಲದರ ಬಗ್ಗೆಯೂ ಪ್ರಶ್ನಿಸುವ ಪ್ರಜ್ಞೆಯ ಬಗ್ಗೆಯೇ ನಾನು ಮಾತನಾಡುತ್ತಿರುವುದು. ಅದು ಅತ್ಯಗತ್ಯವಾಗಿದೆ. ಅಷ್ಟೇ ಅಲ್ಲ, ನಾವು ಓದುತ್ತಿರುವ ಪಠ್ಯಗಳ, ಪುಸ್ತಕಗಳ ಬಗ್ಗೆ ಪ್ರಶ್ನೆ ಕೇಳಬೇಕಾಗಿದೆ. 1968ರಲ್ಲಿ ಜಗತ್ತಿನಾದ್ಯಂತ ಒಂದೇ ಸಮ ವಿದ್ಯಾರ್ಥಿಗಳು ಪ್ರತಿಭಟಿಸಿದ್ದನ್ನು ನಾವು ಮರೆಯುವಂತಿಲ್ಲ. ತಾವು ಏನು ಓದಬೇಕಿತ್ತೋ ಅದಾಗುತ್ತಿಲ್ಲವೆಂದು ಮತ್ತು ಹಲವು ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್ಗಳನ್ನೂ ಪಠ್ಯಕ್ರಮಗಳನ್ನೂ ಬದಲಿಸಬೇಕೆಂಬ ಕೂಗು ವಿದ್ಯಾರ್ಥಿಗಳಿಂದ ಕೇಳಿಬಂದಿತು. ಕಲಿಸುವವರ ಮತ್ತು ಕಲಿಯುವವರ ನಡುವೆ ಅಂತಹ ಸಂವಾದಗಳು ಪ್ರಧಾನ ಪಾತ್ರ ವಹಿಸುತ್ತವೆ. ಇದೇ ಜೆಎನ್ಯು ಉದ್ದೇಶವೂ ಆಗಿತ್ತು. ಉಪನ್ಯಾಸದ ಮಧ್ಯೆ ಯಾವುದೇ ವಿದ್ಯಾರ್ಥಿಯೂ ಉಪನ್ಯಾಸಕರನ್ನು ತಡೆದು ತನಗೆ ಬೋಧನೆ ಅರ್ಥವಾಗುತ್ತಿಲ್ಲವೆಂದೂ ಅಥವಾ ಅವರು ಹೇಳುತ್ತಿರುವ ವಿಷಯಕ್ಕೆ ತನ್ನ ಸಹಮತ ಇಲ್ಲವೆಂದೂ ಹೇಳಬಹುದಿತ್ತು. ಆನಂತರ ವಿಷಯದ ಬಗ್ಗೆ ಚರ್ಚೆ ನಡೆದು, ಅದನ್ನು ಬೋಧಿಸುವವರು ಮತ್ತು ಉಪನ್ಯಾಸ ಕೇಳುತ್ತಿರುವವರು, ಇಬ್ಬರಿಗೂ ಒಂದು ಬಗೆಯ ಸ್ಪಷ್ಟತೆ ಸಿಗುತ್ತಿತ್ತು. ಒಂದು ಸದುದ್ದೇಶ ಇಟ್ಟುಕೊಂಡು ಪ್ರಶ್ನೆ ಎತ್ತುವುದು ಇಲ್ಲವೇ ವಿಷಯವನ್ನು ಈಗಾಗಲೇ ತಿಳಿದಿರುವುದಕ್ಕಿಂತ ಹೆಚ್ಚು ಗ್ರಹಿಸಲು ಕೇಳುವ ಪ್ರಶ್ನೆಗಳು ಜಗತ್ತಿನಲ್ಲಿ ಮಹತ್ವಪೂರ್ಣವಾಗುತ್ತವೆ. ನಿಮಗೆ ಏನನ್ನು ಕಲಿಸಲಾಗುತ್ತಿದೆ, ಹೇಗೆ ಕಲಿಸಲಾಗುತ್ತದೆ ಎಂದು ಮತ್ತು ನಿಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಪ್ರಶ್ನಿಸುತ್ತೀರೆಂದಾದರೆ ಆಗ ನಿಮ್ಮನ್ನು ಆಳುತ್ತಿರುವ ವ್ಯವಸ್ಥೆಯನ್ನೂ ನೀವು ಪ್ರಶ್ನಿಸುತ್ತಿದ್ದೀರಿ ಎಂದೇ ಅರ್ಥ. ಅಲ್ಲಿಯೇ ಸಮಸ್ಯೆ ಉದ್ಭವಿಸುವುದು. ನೀವು ಆಳುವ ವ್ಯವಸ್ಥೆಯನ್ನು ಪ್ರಶ್ನಿಸುವಾಗ ನಿಮ್ಮನ್ನು ಆಳುತ್ತಿರುವವರು ಆತಂಕಕ್ಕೊಳಗಾಗುತ್ತಾರೆ ಮತ್ತು ನಿಮ್ಮನ್ನು ಬಾಯಿಮುಚ್ಚಿಸಲು ಹವಣಿಸುತ್ತಾರೆ.
- ಆದರೆ ಈ ಪ್ರಶ್ನೆಗಳನ್ನು ಕೇಳುವಾಗ ಕೆಲವು ವಿಚಾರಗಳಿಗೆ ಬದ್ಧರಾಗಬೇಕಾಗುತ್ತದೆ. ಹಾಗಾಗಿ ನೀವೆತ್ತುವ ಪ್ರಶ್ನೆಗಳೇನಾದರೂ ಎಲ್ಲರಿಗೂ ಉಚಿತ ಶಿಕ್ಷಣ ಸಿಗಬೇಕೆಂಬ ಆಲೋಚನೆಯನ್ನು ಕೊಟ್ಟರೆ, ವಿದ್ಯಾರ್ಥಿಗಳು ಇದು ವೈವಿಧ್ಯಮಯ ದೇಶ, ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ದೊರಕಬೇಕು, ಆದ್ದರಿಂದಲೇ ಸಾರ್ವಜನಿಕ ಶಿಕ್ಷಣದ ಬಗ್ಗೆ ಒತ್ತು ನೀಡುತ್ತ ಅಲ್ಲಿ ಶುಲ್ಕ ಕಡಿತಗೊಳಿಸಿರೆಂದು ಹೇಳುತ್ತಲೇ ಆ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಹಾಗಾಗಿಯೇ ನಾವು ಮಾತನಾಡುತ್ತ ರಾಜಕೀಯ ಎಂಬ ಪದಬಳಕೆ ಮಾಡಿದೆವು. ನಮ್ಮ ಸುತ್ತಲೆಲ್ಲಾ ವಿವಿಧ ಸೋಗುಗಳನ್ನು ತೊಟ್ಟು ಜಾತಿ ರಾರಾಜಿಸುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಎತ್ತುತ್ತಿರುವ ಪ್ರಶ್ನೆಗಳ ಬಗ್ಗೆ ಎಲ್ಲರೂ ಸಹಮತ ಸೂಚಿಸುತ್ತಿಲ್ಲ ಎಂದು ನನಗನಿಸುತ್ತಿದೆ, ಅದರಲ್ಲೂ ವಿದ್ಯಾರ್ಥಿಗಳ ಕೂಗು ಏಕಧ್ವನಿಯಲ್ಲಿ ಕೇಳಿಬರುತ್ತಿಲ್ಲ ಎನಿಸುತ್ತಿದೆ. ಏನಂತೀರಿ?
ರೊಮಿಲಾ ಥಾಪರ್: ಇಲ್ಲ, ಖಂಡಿತಾ ಇಲ್ಲ. ಮತ್ತೆ ಇಲ್ಲಿ ವೈವಿಧ್ಯತೆ ಅತಿ ಮುಖ್ಯವಾಗುತ್ತದೆ. ನಾನು ಇದನ್ನು ಒಪ್ಪುತ್ತಿಲ್ಲ ಎಂದು ಹೇಳಿದರೆ ನೀವು ಪ್ರಶ್ನಿಸಬಹುದು. ಆಗ ಮುಂದಿನ ವ್ಯಕ್ತಿ ತನ್ನ ಅಭಿಪ್ರಾಯವನ್ನು ಹೇಳಿದಾಗ ನೀವು ಮೊದಲ ಅಭಿಪ್ರಾಯವನ್ನು ಪ್ರಶ್ನಿಸಲು ಆರಂಭಿಸುತ್ತೀರಿ. ಇದು ಕಾಲಾನುಕಾಲದಿಂದಲೂ ನಡೆದುಕೊಂಡು ಬಂದಿರುವ ಕ್ರಮವಾಗಿದೆ. ಇದನ್ನೇ ನಾನು ಯಾವಾಗಲೂ ಹೇಳುತ್ತಾ ಬಂದಿರುವುದು. ಭಾರತೀಯ ದರ್ಶನಶಾಸ್ತ್ರದ ಮೂಲ ಕ್ರಮಕ್ಕೂ ಸಾಕ್ರೆಟಿಸ್ ಅನುಸರಿಸಿದ ವಿಧಿವಿಧಾನಕ್ಕೂ ಸಾಮ್ಯತೆಯಿದೆ. ಅದೇನೆಂದರೆ ಮೊದಲು ನಿಮ್ಮ ಎದುರಾಳಿಯ ಅಭಿಪ್ರಾಯವನ್ನು ಮುಂದಿಡಿ, ನಂತರ ನಿಮ್ಮ ಅನಿಸಿಕೆಯನ್ನು ಮಂಡಿಸಿ, ಆನಂತರ ಅವೆರಡರ ನಡುವೆ ವಿವಾದಾಸ್ಪದ ಅಂಶಗಳನ್ನು ಸೂಚಿಸಿ ಅದಕ್ಕೇನಾದರೂ ಪರಿಹಾರೋಪಾಯ ಇದೆಯೇ ಎಂದು ತಿಳಿಸುವುದು. ಇದನ್ನು ಪೂರ್ವಪಕ್ಷ-ಪ್ರತಿಪಕ್ಷ ಸಿದ್ಧಾಂತ ಎನ್ನಲಾಗುತ್ತದೆ. ತತ್ವಶಾಸ್ತ್ರದ ಅಧ್ಯಯನ ಮಾಡುವ ಯಾರೇ ಆಗಲೀ ಚರ್ಚೆ, ವಾದ-ಸಂವಾದ ಮತ್ತು ಪರಿಹಾರ ಕಂಡುಹಿಡಿಯುವ ಈ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಈ ಮಧ್ಯೆ ಚರ್ಚೆಗಳು ಮುಕ್ತವಾಗಿ ನಡೆಯುತ್ತಲೇ ಇರುತ್ತವೆ.
- ಪ್ರಶ್ನಿಸುವುದು, ಚರ್ಚಿಸುವುದು, ಇವುಗಳು ವಿವಿಗಳ ಒಳಗಿನ ಶಿಕ್ಷಣ ಪ್ರಕ್ರಿಯೆಯಲ್ಲಿ ನಡೆಯಬೇಕಾದುದು ಎಂದು ನೀವು ಹೇಳುತ್ತಿದ್ದೀರಿ…
ರೊಮಿಲಾ ಥಾಪರ್: ಹೌದು, ಖಂಡಿತವಾಗಿ…
- ಈಗ ಕ್ಯಾಂಪಸ್ಗಳಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಮಾತನಾಡುವುದಾದರೆ, ಸಿಎಎ–ಎನ್ಪಿಆರ್–ಎನ್ಆರ್ಸಿಗಳ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಬೀದಿಗಳ ಮೇಲೆ ಕಂಡ ಪೊಲೀಸರ ಬಗ್ಗೆ ಮಾತ್ರವಲ್ಲದೆ, ಕ್ಯಾಂಪಸ್ಗಳಲ್ಲಿದ್ದ ಪೊಲೀಸರ ಬಗ್ಗೆಯೂ ಚರ್ಚಿಸಬೇಕಾಗುತ್ತದೆ. ಅವರು ಕೆಲವೊಮ್ಮೆ ಬರಬೇಕಾದ ಸಮಯದಲ್ಲಿ ಬರಲಿಲ್ಲ, ಇನ್ನು ಕೆಲವು ಸಲ ಬರಬಾರದ ಸಂದರ್ಭಗಳಲ್ಲಿ ಕಾಣಿಸಿಕೊಂಡರು, ಕೆಲವೊಮ್ಮೆ ಸುಮ್ಮನಿದ್ದರು. ಜೆಎನ್ಯುನಲ್ಲಿ ನಿಮಗಿರುವ ಅನುಭವದ ಪ್ರಕಾರ ಹೇಳುವುದಾದರೆ, ಕ್ಯಾಂಪಸ್ಗಳೊಳಗೆ ಪೊಲೀಸರ ಉಪಸ್ಥಿತಿಗೆ ಸಂಬಂಧಿಸಿದಂತೆ ಯಾವ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ನಿಮಗೆ ಅನಿಸುತ್ತದೆ?
ರೊಮಿಲಾ ಥಾಪರ್: ನಾನು ಹೇಳುತ್ತಾ ಬಂದಿರುವುದಿಷ್ಟೇ, ಜನರು ಪರಸ್ಪರ ಸಂವಾದ ಮಾಡುವಂತಹ ಪರಿಸ್ಥಿತಿ ಇದ್ದರೆ, ನಿಜಕ್ಕೂ ಕ್ಯಾಂಪಸ್ ಒಳಗೆ ಪೊಲೀಸರ ಅಗತ್ಯ ಇಲ್ಲವೇ ಇಲ್ಲ. ಉದಾಹರಣೆಗೆ ಜೆಎನ್ಯು ಪ್ರಾರಂಭವಾದ ಮೊದಲ ಹತ್ತು ವರ್ಷಗಳಲ್ಲಿ ಯಾವಾಗ ನೋಡಿದರೂ ಘೇರಾವ್ಗಳೇ!. ಆಗ ನನಗೂ ಭಯವಾಗುತ್ತಿತ್ತು. ಆದರೆ ಅದರಲ್ಲಿ ಬಹಳಷ್ಟು ಸಂತೋಷಪಟ್ಟೆ. ಏಕೆಂದರೆ ಅವು ಬೋಧನಾಸಭೆಗಳಾಗಿ ಮಾರ್ಪಟ್ಟವು! ಅದರ ಪರಿಣಾಮವಾಗಿ ಬಿಡುವಿಲ್ಲದಂತೆ ಚರ್ಚೆಗಳು ನಡೆಯುತ್ತಿದ್ದವು.
- ನಿಮ್ಮ ಮಾತುಗಳನ್ನು ಆಲಿಸುತ್ತಿರುವವರೆಲ್ಲರೂ ಎಚ್ಚರದಿಂದ ಕೇಳುತ್ತಿದ್ದಾರೆ ಎಂದು ಆಶಿಸುತ್ತೇನೆ!
ರೊಮಿಲಾ ಥಾಪರ್: (ನಗುತ್ತ) ಹೌದು. ಒಮ್ಮೆ ಸಂದರ್ಭ ತೀರಾ ಬಿಗಡಾಯಿಸಿದಾಗ ಪೊಲೀಸರಿಗೆ ಕರೆ ಕಳುಹಿಸಬೇಕಾಯಿತು. ಆಗಲೂ ಸಹ ವಿಶ್ವವಿದ್ಯಾಲಯಗಳು ಚರ್ಚೆ, ಸಂವಾದ ಮತ್ತು ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ನಾನು ಯೋಚಿಸುತ್ತಿದ್ದೆ. ಹಾಗೇನಾದರೂ ಅಭದ್ರತೆ ಉಂಟಾಗಿ ರಕ್ಷಣೆಯ ಅಗತ್ಯವಿದ್ದದ್ದೇ ಆದಲ್ಲಿ ಅದು ಅದೇ ಸಮುದಾಯದ ಒಳಗಿನಿಂದ ಬರಬೇಕು. ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಸಮುದಾಯವು ಪ್ರಧಾನ ಪಾತ್ರ ವಹಿಸುತ್ತದೆ. ವಿಶ್ವವಿದ್ಯಾಲಯವು ತನ್ನನ್ನು ತಾನು ಒಂದು ಸಮುದಾಯವೆಂದೇ ಆಲೋಚಿಸಬೇಕು. ಇಲ್ಲವಾದರೆ ಪೊಲೀಸರಿಗೆ ಆಗಾಗ ಕರೆ ಮಾಡಿ, “ದಯವಿಟ್ಟು ಸ್ವಲ್ಪ ಇಲ್ಲಿ ಬನ್ನಿ” ಎಂದೂ, ಸಮಸ್ಯೆ ಸೃಷ್ಟಿಸುತ್ತಿರುವವರನ್ನು ಝಾಡಿಸಿರೆಂದು ಕೇಳಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದು ಯಾವುದೇ ಒಂದು ವಿಶ್ವವಿದ್ಯಾಲಯವನ್ನು ನಡೆಸುವ ವಿಧಾನವಲ್ಲ. ನಮಗೆ ಗಲಭೆಕೋರ ಗುಂಪುಗಳು ಒಳಬರುವುದು ಇಷ್ಟವಿಲ್ಲ, ಪೊಲೀಸರು ಬಂದು ಕೂರುವುದೂ ಬೇಕಾಗಿಲ್ಲ.
- ಈ ಸಮುದಾಯವನ್ನು ಅಥವಾ ಸಮುದಾಯ ಎಂಬ ಚಿಂತನೆಯನ್ನು ನಾಶಪಡಿಸುತ್ತಿರುವುದಾದರೂ ಯಾರು?
ರೊಮಿಲಾ ಥಾಪರ್: ಈಗ ವಿಶ್ವವಿದ್ಯಾಲಯಗಳನ್ನು ನಡೆಸುತ್ತಿರುವವರೇ ಇದಕ್ಕೆ ಭಾಗಶಃ ಕಾರಣರಾಗಿದ್ದಾರೆ. ಅವರಿಗೆ ವಿಶ್ವವಿದ್ಯಾಲಯ ಎಂದರೇನೆಂಬುದೇ ಗೊತ್ತಿಲ್ಲ. ಅವರು ಅದನ್ನು ಯಾವುದೋ ಹಳೆಯ ಸಂಸ್ಥೆಯ ತರಹ ನೋಡುತ್ತಿದ್ದಾರೆ. ಅದರ ಜೊತೆಯಲ್ಲಿ ಗುರುಕುಲ ಅಥವಾ ಮದರಸಾಗಳ ರೀತಿಯಲ್ಲೋ ನಡೆದುಕೊಳ್ಳುತ್ತಿದ್ದಾರೆ. ‘ಏನು ಕಲಿಸಬೇಕೆಂಬುದು ನಮಗೆ ಗೊತ್ತಿದೆ, ಅದನ್ನೇ ನಾವು ಹೇಳಿಕೊಡುತ್ತೇವೆ, ವಿದ್ಯಾರ್ಥಿಗಳು ತಗ್ಗಿಬಗ್ಗಿ ನಡೆಯಬೇಕು’ ಎಂಬುದು ಅವರ ಆಲೋಚನೆ. ಆದರೆ ಅದು ಬೋಧನೆಯಲ್ಲ, ಅದು ಶಿಕ್ಷಣವಲ್ಲ, ಯಾರೂ ತಲೆ ಬಾಗಿಸಬೇಕಿಲ್ಲ. ವಿಚಾರಗಳ ವಿನಿಮಯವಾಗಬೇಕು, ಜ್ಞಾನ ಎಂಬುದು ವಿನಿಮಯದ ಪ್ರಕ್ರಿಯೆ ಮತ್ತು ಈ ಪ್ರಕ್ರಿಯೆಯಿಂದ ಜ್ಞಾನವು ಮತ್ತಷ್ಟು ವೃದ್ಧಿಯಾಗುತ್ತದೆ ಎಂಬ ಗ್ರಹಿಕೆ ಇವತ್ತು ಮರೆಯಾಗಿದೆ. ಮತ್ತೊಂದು ವಿಷಯವೇನೆಂದರೆ ನಮ್ಮ ವಿಶ್ವವಿದ್ಯಾಲಯಗಳನ್ನು ನಡೆಸುವವರಿಗೆ ಇರಬೇಕಾದ ಕಾಳಜಿಗಿಂತ ಬದುಕಿನ ರಾಜಕೀಯ ಸಂಕುಚಿತತೆಯ ಕಡೆಗೆ ಹೆಚ್ಚು ಒಲವು ತೋರುವ ಜನರು ನಮ್ಮ ಸಂಸ್ಥೆಗಳೊಳಗೆ, ನುಸುಳಿದ್ದಾರೆ. ಜನರ ಗುಣಮಟ್ಟವೂ ಬದಲಾಗಿದೆ ಎಂದು ನನಗನಿಸುತ್ತಿದೆ. ಇದೂ ಕೂಡ ಬದಲಾವಣೆಗೆ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ನನಗೆ ಬಹಳ ಬೇಸರವಾಗಿದೆ, ಏಕೆಂದರೆ ಈಗ ಬಹುತೇಕ ವಿಶ್ವವಿದ್ಯಾಲಯಗಳು ತಮ್ಮ ಸ್ಥಾನಮಾನವನ್ನು ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಅವುಗಳು ಕೇವಲ ವ್ಯಾವಹಾರಿಕ ಬೋಧನಾ ಕೇಂದ್ರಗಳಾಗಿಬಿಡುತ್ತವೆ, ಅಷ್ಟೇ!
- ಬಹುಶಃ ನಾವು ಈ ರಾಜಕೀಯ ಸಂಕುಚಿತತೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕೋ ಏನೋ! ಏಕೆಂದರೆ ಬಹು ಮುಖ್ಯವಾದ ರಾಜಕೀಯ ದೃಷ್ಟಿಕೋನವನ್ನು ಕಸದಬುಟ್ಟಿಗೆ ಎಸೆಯುವಂತಹ ಮತ್ತು ಅದರಲ್ಲಿ ವಿಶ್ವವಿದ್ಯಾಲಯಗಳು ಪಾಲ್ಗೊಳ್ಳುವಂತಹದ್ದಲ್ಲ ಎಂದು ಹೇಳುವುದನ್ನು ಕೇಳುತ್ತಿದ್ದೇವೆ.
ರೊಮಿಲಾ ಥಾಪರ್: ಯಾವುದೇ ವಿಶ್ವವಿದ್ಯಾಲಯವು ರಾಜಕೀಯ ಸಂಕುಚಿತತೆಯ ಬಗ್ಗೆ ತಿಳಿಯುವ ಅಗತ್ಯವಿದೆ. ಹೌದು, ಎಲ್ಲಾ ಮಟ್ಟಗಳಲ್ಲೂ ವಿಶ್ವವಿದ್ಯಾಲಯಗಳು ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ವಿಶ್ವವಿದ್ಯಾಲಯವು ಸಮಾಜದಲ್ಲಿನ ಒಂದು ಸಂಸ್ಥೆಯೇ ಆಗಿದೆ. ಅಲ್ಲದೆ ಅವುಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನೂ ಅರಿತುಕೊಳ್ಳಬೇಕಿದೆ. ಆದ್ದರಿಂದ ಖಚಿತವಾಗಿ ಒಂದು ನಿರ್ದಿಷ್ಟ ಪ್ರಮಾಣದ ರಾಜಕೀಯ ಸಂಕುಚಿತತೆ ಇದ್ದು, ಇಲ್ಲಿ ಅನಕ್ಷರಸ್ಥರ ಒಳ್ಳೆಯತನ ಎದ್ದು ಕಾಣುತ್ತಿದೆ ಎಂದು ಸೂಕ್ಷ್ಮವಾಗಿ ಹೇಳಬಹುದು. ಇನ್ನೊಂದು ಮಟ್ಟದ ರಾಜಕೀಯವಿದೆ, ಅದು ಇದಕ್ಕಿಂತ ಹೆಚ್ಚು ಚಿಂತನಾಶೀಲವಾಗಿದೆ. ನಾವು ಎಂತಹ ಸಮಾಜವಾಗಿದ್ದೇವೆ, ನಾವು ಎಂತಹ ಸಮಾಜವನ್ನು ಕಟ್ಟಬೇಕೆಂದಿದ್ದೇವೆ, ಇದು ಏನಾದರೂ ಸಕಾರಾತ್ಮಕ ಪರಿಣಾಮಗಳನ್ನು ಬೀರಲಿದೆಯೇ, ಇದು ನಮ್ಮ ಜ್ಞಾನದ ಅನ್ವೇಷಣೆಯಲ್ಲಿ ಏನಾದರೂ ನೆರವಾಗುತ್ತದೆಯೇ ಇಲ್ಲವೇ ಎಂದು ಯೋಚಿಸುತ್ತದೆ. ಇವು ರಾಜಕೀಯದ ಮಟ್ಟಗಳಾಗಿವೆ.