ಇಡೀ ರಾಜ್ಯದ ತುಂಬಾ ಕರೋನ ವೈರಸ್ ಭೀತಿ ಹಬ್ಬಿದೆ. ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮೂಲಕ ಜನಜಂಗುಳಿ ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ರೈಲು, ಸರ್ಕಾರಿ ಬಸ್ಸು, ವಿಮಾನ ಸೇವೆಗಳನ್ನು ಕಡಿತಗೊಳಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಖಾಸಗೀ ಕಚೇರಿ-ಶಾಲಾ ಕಾಲೇಜುಗಳು ಬಾಗಿಲು ಹಾಕಿರುವುದರಿಂದ ಬಹುತೇಕ ಜನಜೀವನ ಅಸ್ತವ್ಯಸ್ಥವಾಗಿದೆ. ರೋಗ ಹರಡುವುದನ್ನು ನಿಯಂತ್ರಿಸಲು ಸರ್ಕಾರಗಳು ಹರಸಾಹಸ ಮಾಡುತ್ತಿವೆ.
ಈ ನಡುವೆ, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿ ಪ್ರತಿ ಬೇಸಿಗೆಯ ಆತಂಕಕಾರಿ ಅತಿಥಿ ಮಂಗನಕಾಯಿಲೆ(ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್ ಡಿ) ಕೂಡ ಮರಣಮೃದಂಗ ಬಾರಿಸತೊಡಗಿದೆ. ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿ 23 ಜನರನ್ನು ಬಲಿತೆಗೆದುಕೊಂಡಿದ್ದ ಅಪಾಯಕಾರಿ ಸಾಂಕ್ರಾಮಿಕ ರೋಗ, ಈ ಬಾರಿಯೂ ಅದೇ ಪ್ರದೇಶದಲ್ಲಿ ಉಲ್ಬಣಗೊಂಡಿದೆ. ಕಳೆದ ವರ್ಷ ಸುಮಾರು 18 ಮಂದಿ ಸಾವು ಕಂಡಿದ್ದ ಸಾಗರ ತಾಲೂಕಿನ ಅರಳಗೋಡು ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ಈ ಬಾರಿಯೂ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಈವರೆಗೆ ಕಳೆದ ಎರಡು ತಿಂಗಳಲ್ಲಿ ಕೆಎಫ್ ಡಿ ರೋಗಲಕ್ಷಣದಿಂದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದ ನಾಲ್ವರು ಸಾವು ಕಂಡಿದ್ಧಾರೆ. ತೀರ್ಥಹಳ್ಳಿ ಭಾಗದಲ್ಲಿಯೂ ಈ ಬಾರಿ ರೋಗ ವ್ಯಾಪಿಸಿದ್ದು, ತಾಲೂಕಿನ ಮಂಡಗದ್ದೆ ವ್ಯಾಪ್ತಿಯಲ್ಲಿ ಒಬ್ಬರು ಸಾವು ಕಂಡಿದ್ದಾರೆ.
ಆದರೆ, ಎಂದಿನಂತೆ ಜಿಲ್ಲಾಡಳಿತ ರೋಗದ ತೀವ್ರತೆಯ ವಿಷಯದಲ್ಲಿ ವಾಸ್ತವಾಂಶಗಳನ್ನು ಜನರ ಮುಂದಿಡುವ ಬದಲು, ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುವ, ವ್ಯಾಕ್ಸಿನ್ ಹಾಕಿರುವ ಪ್ರಮಾಣವನ್ನು ಹೆಚ್ಚು ತೋರಿಸುವ ಸರ್ಕಸ್ಸು ನಡೆಸಿದೆ. ವಾಸ್ತವವಾಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಐದು ಮಂದಿ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದರೂ, ಜಿಲ್ಲಾಡಳಿತದ ಅಧಿಕೃತ ಮಾಹಿತಿ ಪ್ರಕಾರ ಒಬ್ಬರು ಮಾತ್ರ ಕೆಎಫ್ ಡಿಯಿಂದ ಸಾವು ಕಂಡಿದ್ದು, ಉಳಿದವರ ಸಾವಿಗೆ ಬೇರೆ ಬೇರೆ ಕಾರಣಗಳಿವೆ ಎನ್ನಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ 100 ಮಂದಿಗೆ ಸೋಂಕು ಇರುವುದು ಧೃಡಪಟ್ಟಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಆದರೆ, ಜಿಲ್ಲಾಡಳಿತದ ಇಂತಹ ಹೇಳಿಕೆಗಳು, ಮಲೆನಾಡಿನ ಜನರ ಜೀವಕ್ಕೆ ಸರ್ಕಾರ ಎಷ್ಟು ಬೆಲೆ ಕೊಡುತ್ತಿದೆ ಎಂಬುದಕ್ಕೆ ಸಾಕ್ಷಿ. ಕಳೆದ ಒಂದು ವಾರದಿಂದ ಅರಳಗೋಡು, ಮುಪ್ಪಾನೆ, ಕಾನೂರು ಭಾಗದಲ್ಲಿ ರೋಗ ಉಲ್ಬಣಗೊಂಡಿದೆ. ಕಳೆದ ವರ್ಷದ ಮಾಡಿದ್ದ ಕನಿಷ್ಟ ಆರೋಗ್ಯ ವ್ಯವಸ್ಥೆಯನ್ನೂ ಈ ಬಾರಿ ಮಾಡಲಾಗಿಲ್ಲ. ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಗಲು ವೇಳೆ ಇರುವ ಒಬ್ಬ ವೈದ್ಯರು ರಾತ್ರಿ ಇರುವುದಿಲ್ಲ. ಜೊತೆಗೆ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕೂಡ ಮೂರ್ನಾಲ್ಕು ದಿನಗಳಿಂದ ಈಚೆಗೆ ನೀಡಲಾಗಿದೆ. ಈ ಮೊದಲು ಅದೂ ಇರಲಿಲ್ಲ. ಇನ್ನು ದೂರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಬಾಕಿ ಉಳಿಸಿಕೊಂಡು ಸರ್ಕಾರದ ಲೋಪದಿಂದಾಗಿ ಈ ಬಾರಿ ಆ ಆಸ್ಪತ್ರೆಯಲ್ಲಿ ರೋಗಿಗಳು ಹಣ ಕಟ್ಟದೇ ಚಿಕಿತ್ಸೆ ನೀಡುತ್ತಿರಲಿಲ್ಲ. ಆ ಬಗ್ಗೆ ಶಾಸಕರು ಸದನದಲ್ಲಿ ಗಮನ ಸೆಳೆದ ಬಳಿಕ ಇದೀಗ ನಾಲ್ಕು ದಿನದಿಂದ ಸರಿಪಡಿಸಲಾಗಿದೆ. ಇಂತಹ ಲೋಪಗಳನ್ನು ಮುಚ್ಚಿಕೊಳ್ಳಲು ಜಿಲ್ಲಾಡಳಿತ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ. ಜೊತೆಗೆ ಸತ್ತವರಿಗೆ ಪರಿಹಾರ ನೀಡಬೇಕೆಂಬ ಕಾರಣಕ್ಕೂ ವಾಸ್ತವಾಂಶಗಳನ್ನು ಮುಚ್ಚಿಟ್ಟು ಜನರಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ಅರಳಗೋಡು ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಕಾಂತ್ ನೇರ ಆರೋಪ ಮಾಡಿದ್ದಾರೆ.
ಈ ನಡುವೆ, ಮಂಗನ ಕಾಯಿಲೆಯ ವ್ಯಾಕ್ಸಿನ್ ವಿಷಯದಲ್ಲಂತೂ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ದಶಕಗಳ ಇತಿಹಾಸವೇ ಇದೆ. ಕಾಯಿಲೆಯಿಂದ ಮೃತ ಪಟ್ಟವರ ವಾಸ್ತವಾಂಶಗಳನ್ನು ಮುಚ್ಚಿಡಲು ತೋರುತ್ತಿರುವ ಆಸಕ್ತಿಯ ಒಂದು ಭಾಗ ಆಸಕ್ತಿಯನ್ನು ವ್ಯಾಕ್ಸಿನ್ ಏಕೆ ಪರಿಣಾಮಕಾರಿಯಾಗಿಲ್ಲ ಎಂಬ ಬಗ್ಗೆ ತೋರಿದ್ದರೆ, ಬಹುಶಃ ಮಲೆನಾಡಿನ ಹಲವು ಜೀವಹಾನಿ ತಡೆಯುವುದು ಸಾಧ್ಯವಿತ್ತು. ಆದರೆ, ಐವತ್ತು ವರ್ಷ ಹಿಂದಿನ ವ್ಯಾಕ್ಸಿನನ್ನೇ ಈಗಲೂ ಬಳಸಲಾಗುತ್ತಿದೆ. ಐದು ದಶಕದಲ್ಲಿ ವೈರಾಣು ಬೆಳೆಸಿಕೊಂಡಿರುವ ವ್ಯಾಕ್ಸಿನ್ ನಿರೋಧಕ ಶಕ್ತಿಯನ್ನಾಗಲೀ, ಪ್ರಾಕೃತಿಕವಾಗಿ ಅದರಲ್ಲಿ ಆಗಿರುವ ಬದಲಾವಣೆಗಳನ್ನಾಗಲೀ ಗಣನೆಗೆ ತೆಗೆದುಕೊಳ್ಳದೆ, ಓಬಿರಾಯನ ಕಾಲದ ವ್ಯಾಕ್ಸಿನನ್ನೆ ಈಗಲೂ ಬಳಸಲಾಗುತ್ತಿದೆ. ಮುಖ್ಯವಾಗಿ ರೋಗಕ್ಕೆ ಕಿಲ್ ವ್ಯಾಕ್ಸಿನ್ ಬಳಸಲಾಗುತ್ತಿದೆ. ಹಾಗಾಗಿ ಕನಿಷ್ಠ ಸೋಂಕು ನಿರೋಧಕ ಶಕ್ತಿ ಬೇಕೆಂದರೂ ಜನರು ಮೂರು ತಿಂಗಳ ಅಂತರದಲ್ಲಿ ಮೂರು ವ್ಯಾಕ್ಸಿನ್ ಪಡೆಯಬೇಕಿದೆ. ಆದರೆ, ಹೀಗೆ ಪ್ರತಿ ವರ್ಷವೂ ವ್ಯಾಕ್ಸಿನ್ ಪಡೆದವರಿಗೂ ರೋಗ ಬಂದಿರುವ ಮತ್ತು ಆ ಪೈಕಿ ಕೆಲವು ಸಾವು ಕಂಡಿರುವ ಪ್ರಕರಣಗಳೂ ಅರಳುಗೋಡು ವ್ಯಾಪ್ತಿಯಲ್ಲಿವೆ.
ಹೀಗಿದ್ದರೂ, ಇಂತಹ ವಾಸ್ತವಾಂಶಗಳ ಬಗ್ಗೆಯಾಗಲೀ, ವ್ಯಾಕ್ಸಿವ್ ಶಕ್ತಿಹೀನತೆಯ ಬಗ್ಗೆಯಾಗಲೀ, ವೈರಾಣು ಹರಡುವ ಉಣುಗುಗಳ ಬಗ್ಗೆಯಾಗಲೀ ವೈಜ್ಞಾನಿಕ ಅಧ್ಯಯನ ನಡೆಸಲು ಜಿಲ್ಲಾಡಳಿತ ಮತ್ತು ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಕಳೆದ 60 ವರ್ಷಗಳಿಂದ ಮಲೆನಾಡು ಮತ್ತು ಕರಾವಳಿ ಭಾಗದ ಐದಾರು ಜಿಲ್ಲೆಗಳಲ್ಲಿ ಈ ರೋಗದ ವೈರಾಣು ಜನರ ಜೀವ ಹಿಂಡುತಿದ್ದರೂ ಈ ಬಗ್ಗೆ ಒಂದು ಶಾಶ್ವತ ಕಣ್ಗಾವಲು ವ್ಯವಸ್ಥೆಗೆ ಬೇಕಾದ ಪರಿಣತರ ತಂಡ ರಚನೆಯಾಗಲೀ, ಪ್ರತ್ಯೇಕ ರೋಗ ನಿಗಾ ಘಟಕವನ್ನಾಗಲೀ ವ್ಯವಸ್ಥೆ ಮಾಡಿಲ್ಲ. ರೋಗ ಕಾರಕ ವೈರಾಣು ಅಧ್ಯಯನ ಮತ್ತು ವ್ಯಾಕ್ಸಿನ್ ಪತ್ತೆಯ ನಿಟ್ಟಿನಲ್ಲಿ ಕಳೆದ ವರ್ಷದ ಬಜೆಟ್ ನಲ್ಲಿ ಐದು ಕೋಟಿ ರೂ. ಅನುದಾನ ಘೋಷಣೆಯಾಗಿದ್ದರೂ ವಿಶೇಷ ಲ್ಯಾಬ್ ಆರಂಭಕ್ಕೆ ಕೂಡ ಜಿಲ್ಲಾಡಳಿತ ತ್ವರಿತ ಕ್ರಮಕೈಗೊಂಡಿಲ್ಲ.
ಪ್ರತಿವರ್ಷ ಅಕ್ಟೋಬರಿನಿಂದ ಮೇ-ಜೂನ್ ವರೆಗೆ ಮಲೆನಾಡಿನ ಕಾಡಂಚಿನ ಹಳ್ಳಿಗರ ಜೀವ ಹಿಂಡುವ ಮತ್ತು ಹತ್ತಾರು ಜೀವ ಬಲಿ ತೆಗೆದುಕೊಳ್ಳುವ ಈ ವಾರ್ಷಿಕ ಸೋಂಕನ್ನು ನಿಯಂತ್ರಿಸುವ ಮತ್ತು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ನಿರಂತರ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಈಗಾಗಲೇ ಮಲೆನಾಡಿನಲ್ಲೂ ನೂರಾರು ಮಂದಿ ಜೀವ ತೆತ್ತಿದ್ದಾರೆ. ಈಗಲೂ ಸುಧಾರಿತ ಆರೋಗ್ಯ ಸಂಶೋಧನೆಗಳು, ರೋಗ ಅಧ್ಯಯನ ವ್ಯವಸ್ಥೆಯ ನಡುವೆಯೂ ಕೆಎಫ್ ಡಿಯ ಕುರಿತ ಯಾವುದೇ ಸಂಶೋಧನೆ ನಡೆದಿಲ್ಲ ಮತ್ತು ಪೋಲಿಯೋ ಲೈವ್ ವ್ಯಾಕ್ಸಿನ್ ಕಂಡುಹಿಡಿಯುವ ಪ್ರಯತ್ನ ಕೂಡ ನಡೆದಿಲ್ಲ. ಇನ್ನು ರೋಗಕ್ಕೆ ಔಷಧಿ ಕಂಡುಹಿಡಿಯುವ ಮಾತು ದೂರವೇ ಉಳಿಯಿತು ಎಂಬ ಆಕ್ರೋಶ ಮಲೆನಾಡಿಗರದ್ದು.
ಆದರೆ, ಆರು ತಿಂಗಳಿಗೋ, ವರ್ಷಕ್ಕೋ ವರ್ಗಾವಣೆಯಾಗಿ ಹೋಗುವ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಈ ರೋಗದ ತಲೆಬುಡ ಅರ್ಥವಾಗುವ ಮುನ್ನವೇ ಅವರು ಇಲ್ಲಿಂದ ಎತ್ತಂಗಡಿಯಾಗುತ್ತಾರೆ. ಮತ್ತೊಬ್ಬರು ಬರುವ ಹೊತ್ತಿಗೆ ಮಳೆಗಾಲ ಶುರುವಾದರೆ ರೋಗವೇ ಸದ್ದಡಗುತ್ತದೆ. ಹಾಗಾಗಿ, ಜಿಲ್ಲಾಡಳಿತವಾಗಲೀ, ಜಿಲ್ಲಾ ಆರೋಗ್ಯಾಧಿಕಾರಿಯಾಗಲೀ ಈ ರೋಗದ ವಿಷಯದಲ್ಲಿ ನಿರಂತರ ನಿಗಾ ಇಡುವುದು, ವ್ಯಾಕ್ಸಿಲ್ ಅಭಿವೃದ್ಧಿ, ಔಷಧ ಸಂಶೋಧನೆ, ರೋಗಿಗಳು ಮತ್ತು ರೋಗ ಪ್ರದೇಶದ ಅಧ್ಯಯನ ಮತ್ತು ಅಗತ್ಯ ವಿಶೇಷ ಲ್ಯಾಬ್ ಸ್ಥಾಪನೆಯಂತಹ ವಿಷಯಗಳಲ್ಲಿ ನಿರಂತರವಾಗಿ ಗಮನ ಹರಿಸಲು ಸಾಧ್ಯವಿಲ್ಲ. ಸದ್ಯದ ವ್ಯವಸ್ಥೆಯಲ್ಲಿ ಜಿಲ್ಲೆಯಾದ್ಯಂತ ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ವ್ಯಾಕ್ಸಿನೇಷನ್ ಮಾಡಿಸುವುದನ್ನು ಕೂಡ ಈ ಅಧಿಕಾರಿಗಳಿಂದ ಖಾತ್ರಿಪಡಿಸುವುದು ಸಾಧ್ಯವಾಗುತ್ತಿಲ್ಲ.
ಪರಿಸ್ಥಿತಿ ಹೀಗಿರುವಾಗ “ಕೆಎಫ್ ಡಿ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿಯೇ ಪ್ರತ್ಯೇಕವಾಗಿ ಒಂದು ಟಾಸ್ಕ್ ಫೋರ್ಸ್ ರಚನೆಯಾಗಬೇಕಿದೆ. ಅದು ನಿರಂತರವಾಗಿ ರೋಗ ನಿರ್ವಹಣೆಯ ತಾತ್ಕಾಲಿಕ ಕ್ರಮದ ಜೊತೆ ನಿರ್ಮೂಲನೆಯ ಶಾಶ್ವತ ಕ್ರಮದ ಬಗ್ಗೆ ವರ್ಷವಿಡೀ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಸರ್ಕಾರ ವಿಶೇಷ ಪರಿಣಿತರನ್ನು ಒಳಗೊಂಡ ಒಂದು ಟಾಸ್ಕ್ ಫೋರ್ಸ್ ರಚನೆ ಮಾಡಬೇಕು ಮತ್ತು ಅದಕ್ಕಾಗಿ ಜಿಲ್ಲೆಯಲ್ಲಿ ಒಂದು ಶಾಶ್ವತ ಕಚೇರಿಯ ವ್ಯವಸ್ಥೆಯನ್ನೂ ಮಾಡಬೇಕು. ಅದರ ಮೂಲಕವೇ ವ್ಯಾಕ್ಸಿನೇಷನಿಂದ ಔಷಧ ಸಂಶೋಧನೆಯವರೆಗಿನ ರೋಗ ಸಂಬಂಧಿ ಎಲ್ಲಾ ಕೆಲಸಗಳ ಕಣ್ಗಾವಲು ವ್ಯವಸ್ಥೆಯಾಗಬೇಕು” ಎನ್ನುತ್ತಾರೆ ಕೆಎಫ್ ಡಿ ಜನಜಾಗೃತಿ ಒಕ್ಕೂಟದ ಕೆ ಪಿ ಶ್ರೀಪಾಲ್!
ಹೌದು, ಕೆಎಫ್ ಡಿ ಟಾಸ್ಕ್ ಫೋರ್ಸ್ ನಂತಹ ಶಾಶ್ವತ ವ್ಯವಸ್ಥೆಗಳು ಆಗದೇ ಹೋದರೆ, ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಅಥವಾ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾವು ಮತ್ತು ನೋವಿನ ಕುರಿತ ವಾಸ್ತವಾಂಶಗಳನ್ನು ಮುಚ್ಚಿಡುವ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಗಳ ಸರ್ಕಸ್ ಮುಂದುವರಿಯುತ್ತಲೇ ಇರುತ್ತದೆ. ಪ್ರತಿ ವರ್ಷ ಹತ್ತಾರು ಮಂದಿ ಜೀವ ಕಳೆದುಕೊಳ್ಳುವುದು, ನೂರಾರು ಮಂದಿ ಸಂಕಟಪಡುವುದು ನಿರಂತರವಾಗುತ್ತದೆ. ಸರ್ಕಾರಗಳು ಇನ್ನಾದರೂ ಈ ಅಪಾಯಕಾರಿ ಪಿಡುಗಿಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ.