ದೇಶದಾದ್ಯಂತ NPR ನಡೆಸಲು ವಿರೋಧ ವ್ಯಕ್ತವಾಗಿದ್ದರೂ ಸಹ ಕೇಂದ್ರ ಸರ್ಕಾರ ಬರುವ ಏಪ್ರಿಲ್ 1 ರಿಂದ ಜನಗಣತಿ-2021ರ ಮೊದಲ ಹಂತವಾದ ಮನೆಗಣತಿ ಮತ್ತು NPR ನಡೆಸಲು ತಯಾರಿ ನಡೆಸಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ತಂದೊಡ್ಡುತ್ತಿರುವ ಕೊರೊನಾವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯ ಜನಗಣತಿ-NPR ಈ ಸಂದರ್ಭದಲ್ಲಿ ನಡೆಸದಂತೆ ಕೇಳಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರವು ಉದ್ದೇಶಿತ ಗಣತಿ ಕಾರ್ಯವನ್ನು ಮುಂದೂಡಲಿದೆ ಎಂದು ಮೂಲಗಳು ತಿಳಿಸಿವೆ.
ದ ಹಿಂದೂ ಪತ್ರಿಕೆಯಲ್ಲಿ ಎರಡು ಕಡೆಯಿಂದ ಬಲ್ಲ ಸರ್ಕಾರಿ ಮೂಲಗಳು ತಿಳಿಸಿರುವ ಪ್ರಕಾರ ಜನಗಣತಿ ಮತ್ತು NPRಗಳು ಈ ಹಿಂದೆ ನಿಗದಿ ಪಡಿಸಿದಂತೆ ನಡೆಯುವುದಿಲ್ಲ. ಆರೋಗ್ಯ ಸಚಿವಾಲಯವು ದೇಶದಾದ್ಯಂತ ಜನರು “ಪ್ರತ್ಯೇಕತೆ” ಆಚರಿಸಿಕೊಳ್ಳಬೇಕು, ಜನಸಂಪರ್ಕ ಮಿತಿಗೊಳಿಸಿಕೊಳ್ಳಬೇಕು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಕುರಿತು ಸಧ್ಯದಲ್ಲೇ ಸರ್ಕಾರಿ ಘೋಷಣೆ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಈ ತೀರ್ಮಾನದಿಂದ ದೇಶದಾದ್ಯಂತ ಗಣತಿದಾರರಾಗಿ ಮನೆಮನೆಗೆ ತೆರಳಬೇಕಿದ್ದ ಶಿಕ್ಷಕವೃಂದ ನಿಟ್ಟುಸಿರುವ ಬಿಡಲಿರುವುದಂತೂ ಸತ್ಯ. ಇಲ್ಲವಾದರೆ ಕೊರೋನಾ ಹರಡುತ್ತಿರುವ ದಿನಗಳಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅವರು ಜನಗಣತಿ/NPR ನಡೆಸಬೇಕಾಗಿತ್ತು. ಕರ್ನಾಟಕದಲ್ಲಿ ಏಪ್ರಿಲ್ 15ರಿಂದ ಮೇ 29ರ ವರೆಗೆ ಮನೆಗಣತಿ ಮತ್ತು NPR ನಡೆಸಲು ಈಗಾಗಲೇ ಎರಡು ಹಂತದ ತರಬೇತಿಗಳೂ ಪೂರ್ಣಗೊಂಡಿದ್ದು ಕೊನೆಯ ಹಂತರ ತರಬೇತಿ ಬಾಕಿಯಿತ್ತು.
ಇದಕ್ಕೂ ಮುನ್ನ ಒಡಿಶಾ ಮತ್ತು ದೆಹಲಿ ಸರ್ಕಾರಗಳು ಉದ್ದೇಶಿತ ಜನಗಣತಿ ಮತ್ತು NPRಗಳನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದವು.
ಜನಗಣತಿ ಆಯುಕ್ತರಾದ ವಿವೇಕ್ ಜೋಶಿ ಅವರಿಗೆ ದೆಹಲಿ ಸರ್ಕಾರವು ಮಾರ್ಚ್ 18ರಂದು ಬರೆದಿದ್ದ ಪತ್ರದಲ್ಲಿ “ರಾಜಧಾನಿ ದೆಹಲಿಯಲ್ಲಿ “ತೀವ್ರ ನಿಗಾ” ಘೋಷಿಸಲಾಗಿದ್ದು ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಲಾಗಿತ್ತು. “ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕಾಗಿರುವುದರಿಂದ ಕೋವಿಡ್-19 ಹರಡಲು ದಾರಿಯಾಗುತ್ತದೆ” ಎಂಬ ಎಚ್ಚರಿಕೆಯನ್ನು ಸಹ ದೆಹಲಿ ಸರ್ಕಾರ ನೀಡಿತ್ತು. ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದ ಪತ್ರದಲ್ಲಿ ಕ್ಷೇತ್ರ ಗಣತಿದಾರರು ಅತ್ಯಂತ ತೊಂದರೆಗೆ ಸಿಲುಕಲಿದ್ದಾರೆ ಎಂದು ತಿಳಿಸಿ ಜನಗಣತಿ-NPRಗಳನ್ನು ಮುಂದೂಡುವಂತೆ ಕೋರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶವ್ಯಾಪಿ NRC ನಡೆಸುವ ಯಾವುದೇ ಉದ್ದೇಶ ತಮ್ಮ ಸರ್ಕಾರದ ಮುಂದೆ ಇಲ್ಲ ಎಂದಿದ್ದರು. ಆದರೆ ಮೂರು ದಿನಗಳ ಹಿಂದೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ “NRCಯನ್ನು ದೇಶವ್ಯಾಪಿಯಾಗಿ ನಡೆಸುವ ಸಿದ್ಧತೆಗಳ ಅತ್ಯವಿದೆ” ಎಂದು ತಿಳಿಸಿದೆ. NPR ಗಣತಿಯು NRCಗೆ ಬೇಕಾದ ಡೇಟಾಬೇಸ್ ಒದಗಿಸುತ್ತದೆ. ಅಸ್ಸಾಂ ರಾಜ್ಯದಲ್ಲಿ ನಡೆಸಿರುವ NRC ಪೌರತ್ವ ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಲಕ್ಷಾಂತರ ಅಸ್ಸಾಮಿನ ಮೂಲನಿವಾಸಿಗಳನ್ನು ಸಂಕಷ್ಟದಲ್ಲಿ ಸಿಲುಕಿಸಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ NRCಗೆ ವಿರೋಧ ವ್ಯಕ್ತವಾಗಿತ್ತು. NRC ಉದ್ದೇಶದಿಂದ ನಡೆಸುವ NPRನ್ನು ಸಹ ರದ್ದು ಮಾಡಬೇಕು ಎಂದು ಜನರು ಆಗ್ರಹ ಪಡಿಸುತ್ತಿದ್ದಾರೆ.