- ನೆನ್ನೆಯಿಂದಲೂ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಸುಳ್ಳನ್ನು ಪದೇ ಪದೇ ಹರಡಲಾಗುತ್ತಿದೆ. ಅದೆಂದರೆ ಇಂದು ಜಗತ್ತಿನಾದ್ಯಂತ ಹರಡಿಕೊಂಡಿರುವ ಸಾರ್ಸ್-ಕೊರೊನಾ ವೈರಸ್ ಕೇವಲ 12 ಗಂಟೆಗಳ ಕಾಲ ಜೀವಿಸಿರುತ್ತದೆ ನಂತರ ಸಾಯುತ್ತದೆ ಎಂಬುದಾಗಿದೆ. ಆದರೆ ಇದು ವಾಸ್ತವವಲ್ಲ.
- ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿರುವ ಪ್ರಕಾರ ಕೋವಿಡ್ -19 ಖಾಯಿಲೆಯನ್ನು ತರುವ ಕೊರೊನಾ ವೈರಸ್ -2 ಎಷ್ಟು ಸಮಯ ಜೀವಿಸಿರುತ್ತದೆ ಎಂದು ಖಚಿತವಾಗಿಲ್ಲ. ಆದರೆ ಅದು ಈ ಹಿಂದೆ ಕಾಣಿಸಿಕೊಂಡಿದ್ದ ಇತರೆ ಕೊರೊನಾ ವೈರಸ್ ಗಳಂತೆಯೇ ವರ್ತಿಸುತ್ತಿದೆ. “ಕೊರೊನಾ ವೈರಸ್ಗಳು ಬೇರೆ ಬೇರೆ ರೀತಿಯ ಮೇಲ್ಮೈಗಳ ಮೇಲೆ ಕೆಲವು ಗಂಟೆಗಳಿಂದ ಹಿಡಿದು ಕೆಲವು ದಿನಗಳವರೆಗೂ ಜೀವಿಸಿರುತ್ತದೆ. ಕೊರೊನಾ ವೈರಸ್ ಎಷ್ಟು ಕಾಲ ಜೀವಿಸುತ್ತದೆ ಎಂಬುದು ಅದು ಯಾವುದರ ಮೇಲಿರುತ್ತದೆ ಹಾಗೂ ಯಾವ ಉಷ್ಣತೆ ಮತ್ತು ಯಾವ ಬಗೆಯೆ ತೇವಾಂಶದಲ್ಲಿರುತ್ತದೆ ಎಂಬುದನ್ನು ಅವಲಂಬಿಸಿದೆ” ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
- ಅಮೆರಿಕದ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ (NIS)ನ ವೈರಾಣುತಜ್ಞರಾಗಿರುವ (Vilorlogist) ಡಾ.ನೀಲ್ತ್ಜೆ ವ್ಯಾನ್ ಡೋರ್ಮಾಲೆನ್ ಅವರು ಕೊರೋನಾ ವೈರಾಣುಗಳ ಕುರಿತು ಅಧ್ಯಯನ ನಡೆಸಿದ್ದು ಅದರ ವರದಿಯು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಮಾರ್ಚ್ 17ರಂದು ವರದಿಯಾಗಿದೆ. ಅದರಲ್ಲಿ ಹೇಳಲಾಗಿರುವ ಪ್ರಕಾರ ಕೊರೊನಾ ವೈರಸ್ ಗಾಳಿಯಲ್ಲಿ 3 ಗಂಟೆಗಳ ಕಾಲ ಇರಬಲ್ಲದು. ಹಾಗೆಯೇ ಅದು ಇತರೆ ವಸ್ತುಗಳ ಮೇಲೆ ಇನ್ನೂ ಹೆಚ್ಚು ಸಮಯ ಬದುಕಿರುತ್ತದೆ. ಕಾರ್ಡ್ ಬೋರ್ಡಿನ ಮೇಲೆ 24 ಗಂಟೆ ಕಾಲ ಬದುಕಿರುತ್ತದೆಯಾದರೆ ಪ್ಲಾಸ್ಟಿಕ್ ಮತ್ತು ಲೋಹದ ವಸ್ತುಗಳ ಮೇಲೆ 2 ರಿಂಧ 3 ದಿನಗಳ ಕಾಲ ಬದುಕಿರುತ್ತದೆ.
- ಜರ್ನಲ್ ಆಫ್ ಹಾಸ್ಪಿಟಲ್ ಇನ್ಫೆಕ್ಶನ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕೊರೊನಾ ವೈರಸ್ ಗಳು ಪ್ಲಾಸ್ಟಿಕ್, ಗಾಜು ಮತ್ತು ಲೋಹದ ಮೇಲೆ 9 ದಿನಗಳ ವರೆಗೂ ಜೀವಂತ ಇರಬಲ್ಲವು.
- ವಿಶ್ವ ಆರೋಗ್ಯ ಸಂಸ್ಥೆಯು, ನಿಮಗೆ ಯಾವುದೇ ಒಂದು ಮೇಲ್ಮೈ ಮೇಲೆ ವೈರಸ್ ಇರಬಹುದು ಎಂಬ ಅನುಮಾನವಿದ್ದರೆ ಅದನ್ನು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದೆ. “ನಿಮ್ಮ ಕೈಗಳನ್ನು ಆಲ್ಕೋಹಾಲ್ ಆಧರಿಸಿದ ಸ್ಯಾನಿಟೈಜರ್ ನಲ್ಲಿ ಇಲ್ಲವೇ ಸೋಪು ಮತ್ತು ನೀರಿನಿಂದ ತೊಳೆಯಿರಿ. ನಿಮ್ಮ ಕೈಯಿಂದ ಕಣ್ಣು, ಬಾಯಿ ಮತ್ತು ಮೂಗುಗಳನ್ನು ಮುಟ್ಟಿಕೊಳ್ಳದಿರಿ” ಎಂದು WHO ತಿಳಿಸಿದೆ. ಸೋಪು ಮತ್ತು ನೀರಿನಿಂದ ಕೈ ತೊಳೆದುಕೊಳ್ಳುವುದು ಸ್ಯಾನಿಟೈಜರ್ ಗಿಂತಲೂ ಹೆಚ್ಚು ಸುರಕ್ಷಿತ ಎಂದು ದಿ ಹಿಂದೂ ಪತ್ರಿಕೆಯ ಲೇಖನ ತಿಳಿಸಿದೆ.
ಈ ಎಲ್ಲಾ ಕಾರಣಗಳಿಂದ ಯಾರಾದರೂ ಕೊರೊನಾ ವೈರಸ್ ಕೇವಲ 12-14 ಗಂಟೆಗಳಲ್ಲಿ ಸಾಯುತ್ತದೆ ಎಂಬ ಸಂದೇಶವಿರುವ ಬರೆಹಗಳನ್ನು ಇಲ್ಲವೇ ವಿಡಿಯೋಗಳನ್ನು ನಿಮಗೆ ಸಾಮಾಜಿಕ ಮಾಧ್ಯಮದ ಮೂಲಕ ಕಳಿಸಿದರೆ ದಯವಿಟ್ಟು ಅದನ್ನು ನಂಬಿ ಮೋಸ ಹೋಗದಿರಿ. ಕೆಲವೊಮ್ಮೆ ಯಾವುದೋ ಉದ್ದೇಶಕ್ಕಾಗಿ ಸೃಷ್ಟಿಯಾಗುವ ಇಂತಹ ಸಂದೇಶಗಳು ಜನರಿಗೆ ತಪ್ಪು ಮಾಹಿತಿ ಹರಡಿ ಜನರು ಎಚ್ಚರತಪ್ಪುವಂತೆ ಮಾಡುತ್ತವೆ. ಯಾವುದೇ ಸಂಗತಿಯನ್ನು ನಿಖರವಾಗಿ ತಿಳಿದುಕೊಳ್ಳದೇ ಬೇರೆಯವರಿಗೆ ಹಂಚಿಕೊಳ್ಳದಿರಿ.